ಪಾಯಸದೂಟದ ಗ(ಘ)ಮ್ಮತ್ತು

To prevent automated spam submissions leave this field empty.

ಮಮ್ಮಿ, ಪಾಯಸ ತಿನ್ನಬೇಕೆನಿಸಿದೆ ಹೇಗೆ ಮಾಡೋದು ಹೇಳು ಎಂದು ಅಮ್ಮನಿಗೆ ಫೋನಾಯಿಸಿದೆ. ಅವರು ಹೆಸರುಬೇಳೆ ಬೇಯಲು ಹಾಕು ಕಾಯಿ ರುಬ್ಬಿಕೋ ಎಂದು ಹೇಳುವ ಹೊತ್ತಿಗೆ ಸರಿ ಗಸಗಸೆ ಇಲ್ಲದೇನೇ ಪಾಯಸ ಮಾಡ್ಬೋದಾ ಎಂದೆ. ಯಾಕೆ ಎಂದ ಅಮ್ಮನಿಗೆ ದುಬೈನಲ್ಲಿ ಗಸಗಸೆಯನ್ನು ಮಾದಕವಸ್ತುವೆಂದು ಪರಿಗಣಿಸಿ ಅದರ ಮಾರಾಟದ ಮೇಲೆ ಹಾಗೂ ಭಾರತದಿಂದ ತರುವುದಕ್ಕೆ ನಿಷೇಧ ಹೇರಿರುವುದನ್ನು ತಿಳಿಸಿದೆ. ಈ ವಿಷಯವನ್ನು ಮೊದಲು ಕೇಳಿದಾಗ ನಾನು ಹೇಗೆ ಆಶ್ಚರ್ಯ ಪಟ್ಟಿದ್ದೆನೋ ಹಾಗೆಯೇ ಅಮ್ಮ ಕೂಡ ಅಚ್ಚರಿಗೊಂಡು ಹಾಗೇನೇ ಮಾಡು ಏನಾಗಲ್ಲ ಎಂದರು. ಸರಿ ಪಾಯಸವನ್ನೇನೋ ಮಾಡಿದ್ದಾಯ್ತು. ಆದರೆ ಸಿಹಿ ಕಡಿಮೆಯಾಗಿ ಮತ್ತೆ ಬೆಲ್ಲ ಹಾಕಿ ಬೇಯಿಸಿ ನೋಡಿದರೆ ಪಾಯಸ ಹೋಗಿ ಹಲ್ವಾ ಆಗಿತ್ತು. ಸರಿ ಇನ್ನೇನೂ ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನುವ ಹಾಗೆ ಪರ್ವಾಗಿಲ್ಲ ಕೆಟ್ಟದಾಗೇನೂ ಇಲ್ಲ ಅಂದುಕೊಂಡು ಚಮಚೆಯಲ್ಲಿ ಕಟ್ ಮಾಡುತ್ತ ತಿಂದ್ದದ್ದೇನೋ ಆಯ್ತು ಅಂದುಕೊಳ್ಳಿ.

ನಾನು ಪಾಯಸ ಮಾಡಿ ತಿಂದದ್ದನ್ನು ನಿಮಗೆಲ್ಲಾ ಹೇಳಿ ನಿಮ್ಮ ತಲೆಗೆ ಹುಳು ಬಿಡೋ ಉದ್ದೇಶ ಖಂಡಿತ ನನಗಿರಲಿಲ್ಲ. ಆದರೆ ಪಾಯಸ ತಿಂದು ಸುಮ್ಮನಾಗದೇ ಪಾಯಸದೂಟದ ಇತಿಹಾಸ ಹಾಗೂ ಅದರ ಮಹತ್ವದ ಬಗ್ಗೆ ನನ್ನ ಮನಸ್ಸು ಯೋಚಿಸಹತ್ತಿತ್ತು. ಸರಿ ಅಲ್ಲಿ ಇಲ್ಲಿ ಸುತ್ತಿ ಕೆಲ ವಿಷಯಗಳನ್ನು ಕಲೆ ಹಾಕಿತು. ಅದನ್ನು ಇಲ್ಲಿ ಕಾರಿಕೊಂಡು ನಾನು ಹಗುರಾಗುವ ಸ್ವಾರ್ಥವಷ್ಟೇ ನನ್ನದು. ಪಾಯಸಕ್ಕೆ ಎಷ್ಟು ಶತಮಾನಗಳ ಇತಿಹಾಸವಿದೆಯೋ ನನಗಂತೂ ನಮ್ಮಪ್ಪನಾಣೆ ಗೊತ್ತಿಲ್ಲ. ಆದರೆ ನಾನು ಹುಟ್ಟಿದಾಗಿನಿಂದ ಅಂತೂ ಪಾಯಸ ಕುಡಿಯುತ್ತಾ ಬಂದಿರುವುದರಿಂದ ಪಾಯಸಕ್ಕೆ ಪ್ರಾಚೀನ ಇತಿಹಾಸವನ್ನು ಆರೋಪಿಸಿದ್ದೇನೆ. ಸಿಹಿ ಪದಾರ್ಥಗಳನ್ನು ಕಂಡರೆ ಮುಖ ಕಿವುಚುವ ನನಗೆ ಅದೇಕೋ ಗೊತ್ತಿಲ್ಲ, ಪಾಯಸದ ಬಗ್ಗೆ ಮಾತ್ರ ಏನೋ ಒಂಥರಾ............

ನಿಮಗೆಲ್ಲಾ ತಿಳಿದಿದ್ದರೂ ತಿಳಿಯದಿದ್ದರೂ ಪಾಯಸದಲ್ಲಿಯಂತೂ ಹಲವು ಬಗೆಗಳಿವೆ. ಹೆಸರುಬೇಳೆ ಪಾಯಸ, ಗಸಗಸೆ ಪಾಯಸ, ಅಕ್ಕಿ ಪಾಯಸ, ಕಡ್ಲೆಬೇಳೆ ಪಾಯಸ, ಗೋಧಿ ಪಾಯಸ, ಸಬ್ಬಕ್ಕಿ ಪಾಯಸ, ಮಾವಿನಹಣ್ಣಿನ ಪಾಯಸ, ಖರ್ಜೂರದ ಪಾಯಸ, ಕ್ಯಾರೆಟ್ ಪಾಯಸ, ಹಲಸಿನ ಹಣ್ಣಿನ ಪಾಯಸ, ರವೆ ಪಾಯಸ, ಶಾವಿಗೆ ಪಾಯಸ,ಬೂದುಗುಂಬಳದ ಪಾಯಸ ಇನ್ನೂ ಮುಂತಾದವು(ಕೆಲವು ನಾನು ತಿಂದೇ ಇಲ್ಲದ ಪುಸ್ತಕದಲ್ಲಿ ಕದ್ದಿರುವ ಹೆಸರುಗಳು). ಯಾವುದೋ ಅಡುಗೆ ಮನೆಗೆ ಉಪಯೋಗವಾಗುವ ಲೇಖನವೆಂದು ಖಂಡಿತ ತಿಳಿಯಬೇಡಿ. ಏಕೆಂದರೆ ಇವೆಲ್ಲಾ ಪಾಯಸದ ಇತಿಹಾಸ ಮಾತ್ರ. ನಾನು ಹೇಳಹೊರಟಿರುವುದು ಪಾಯಸದೂಟದ ಮಹತ್ವವನ್ನು. ಅದರ ಮಹತ್ವವನ್ನು ಬಲ್ಲವರೇ ಬಲ್ಲರು.

ಇಷ್ಟುದ್ದದ ಇತಿಹಾಸವನ್ನು ಹೊಂದಿರುವ ಪಾಯಸದೂಟದ ಮಹತ್ವವನ್ನು ಹೇಳುತ್ತಾ ಹೋದರೆ ಒಂದೇ ಎರಡೇ, ಹಬ್ಬ-ಹರಿದಿನಗಳಲ್ಲಿ ಮಾತ್ರವಲ್ಲದೇ ದಿನವೂ ಅದೇ ಅನ್ನ-ಸಾರು ಉಂಡು ಊಟದ ಮೇಲೆ ಬೇಸರ ಬಂದರೆ ವಿಶೇಷವೇನನ್ನಾದರೂ ತಿನ್ನಬೇಕೆನಿಸಿದರೆ ಮೊದಲು ಹೊಳೆಯುವುದೇ ಪಾಯಸ. ಏಕೆಂದರೆ ಯಾವುದೇ ಕಷ್ಟವಿಲ್ಲದೇ ತ್ವರಿತವಾಗಿ ಅಗುವ ವಿಶೇಷ ಅಡುಗೆ ಬಹುಶಃ ಅದೊಂದೇ ಎನಿಸುತ್ತದೆ. ಮೊದಲೆಲ್ಲಾ ಮದುವೆ ಊಟದಲ್ಲಿ ಪಾಯಸಕ್ಕೆ ವಿಶೇಷ ಸ್ಥಾನವಿತ್ತು. ಈಗಿನಂತೆ ಟೇಬಲ್ ಊಟ ಎಲ್ಲರಿಗೂ ಅಪ್ಯಾಯಮಾನವಾಗಿರಲಿಲ್ಲ. ನೆಲದ ಮೇಲೆ ಕೂತು ಪಂಕ್ತಿ ಊಟ ಮಾಡುವುದು ಪದ್ದತಿಯಾಗಿತ್ತು. ಸರಿ ಚಿತ್ರಾನ್ನ, ಅನ್ನ-ಸಾರು ಮುಗಿಸುವ ಹೊತ್ತಿಗೆ ಬಿಸಿಬಿಸಿ ಪಾಯಸ ಒಬ್ಬರು ಬಡಿಸುತ್ತಾ ಹೋದರೆ ಅವರ ಹಿಂದೆಯೇ ಬೂಂದಿ ಹಿಡಿದು ಬರುವವರು ಮತ್ತೊಬ್ಬರು. ಬಿಸಿ ಪಾಯಸ ನಾಲಿಗೆ ಸುಡುತ್ತಿದ್ದರೂ ಸೊರ್-ಸೊರ್ ಎಂದು ಸವಿಯುತ್ತಾ ಬಟ್ಟೆ ಮುಖಗಳಿಗೆಲ್ಲಾ ಪಾಯಸದ ರುಚಿ ತೋರಿಸಿಯೇ ಊಟ ಮುಗಿಸುವುದು ಪದ್ದತಿ. ತೀರ ಹತ್ತಿರದವರಾದರೋ ಅವರಿಗೆ ಎರಡೆರಡು ಬಾರಿ ಪಾಯಸದ ಔತಣ. ಪಾಯಸದ ಊಟ ಮಾಡುವಾಗ ಬರುವ ಸೊರ್-ಸೊರ್ ಸದ್ದಿನ ಬಗ್ಗೆಯೇ ಒಂದು ಹಾಸ್ಯ ಲೇಖನವನ್ನು ಬಹಳ ಹಿಂದೆ ಓದಿದ್ದೆ. ಅದರ ಕರ್ತೃ ಯಾರೆಂಬುದು ಮರೆತುಹೋಗಿದ್ದರೂ ಊಟದ ಪಂಕ್ತಿಯಲ್ಲಿ ಬರುವ ವಿವಿಧ ಸದ್ದುಗಳು, ಯಾರು ಯಾವ ರೀತಿಯಲ್ಲಿ ಕೈಯನ್ನು ಬಾಯೊಳಗೆ ತುರುಕುತ್ತಾರೆ ಎಂಬುದರ ಬಗ್ಗೆ ಬಹಳ ವಿಶ್ಲೇಷಣಾತ್ಮಕವಾಗಿ ಬರೆದಿದ್ದರು. ಚಿಕ್ಕವಳಾಗಿದ್ದಾಗಿಂದಲೂ ಹೊರಗೆ ಪಾಯಸವನ್ನು ನಾನು ಎಂದೂ ಕುಡಿಯುತ್ತಿರಲಿಲ್ಲ. ಏಕೆಂದರೆ ಕೈಗಳಲ್ಲಿ ತೆಗೆದು ಕುಡಿಯುವಾಗ ಆಗುವ ಸದ್ದು ಮತ್ತು ಬಟ್ಟೆ ಹಾಳಾಗುವ ಭಯ. ಆದರೆ ಕೂತು, ಎದುರಿನವರು ಪಕ್ಕದವರು ತಿನ್ನುವುದನ್ನು ನೋಡುತ್ತಾ ಮಜಾ ತೆಗೆದುಕೊಳ್ಳುವುದನ್ನು ಮಾತ್ರ ತಪ್ಪಿಸಿಕೊಳ್ಳುತ್ತಿರಲಿಲ್ಲ. ಎಲ್ಲಾ ಮುಜುಗರಗಳಿಂದಾಚೆಗೆ ತಲುಪಿ ಹೆಂಗಸರು-ಗಂಡಸರೆಲ್ಲರೂ ತಮ್ಮ ನಾಲ್ಕೂ ಬೆರಳುಗಳನ್ನು ಬಾಯೊಳಗೆ ತುರುಕಿ ಸೊರಸೊರನೆಂದು ಕುಡಿಯುವುದನ್ನು ನೋಡುವುದೇ ಒಂದು ಮಜಾ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಂತೋಷಕ್ಕಂತೂ ಕಲ್ಲು ಬಿದ್ದಿದೆ. ಯಾವ ಮದುವೆಯಲ್ಲಿಯೂ ಇಂದು ಪಾಯಸದೂಟಕ್ಕೆ ಸ್ಥಾನವಿಲ್ಲ. ಅದರ ಬದಲು ಸಕ್ಕರೆಯ ಪಾಕದಲ್ಲಿ ಬೇಯಿಸಿರುವ ಶಾವಿಗೆಯನ್ನು ಖೀರ್ ಎಂದು ತಂದು ಉಪ್ಪಿನಕಾಯಿಯಷ್ಟು ಪಕ್ಕದಲ್ಲಿಟ್ಟು ಹೋಗುತ್ತಾರೆ. ಜೊತೆಗೆ ಹೆಸರು ಕುಲ ಗೊತ್ತಾಗದ ಹೊಸ ಹೊಸ ಸಿಹಿ ತಿಂಡಿಗಳು. ಪಾಯಸದ ಮೇಲೆ ಬೂಂದಿ ಹಾಕಿ ತಿನ್ನುವ ಆ ಸ್ವಾದ ಇವು ಯಾವುದರಲ್ಲಿಯೂ ಸಿಗುವುದಿಲ್ಲ ಎಂದರೆ ಅತಿಶಯೋಕ್ತಿಯಲ್ಲ ಎನಿಸುತ್ತದೆ.

ಪಾಯಸದ ಊಟದ ಮತ್ತೊಂದು ಮಹತ್ವ ಹಿರಿಯರಿಗಾಗಿ ಮಾಡುವ ಎಡೆ ಇಡುವ ಹಬ್ಬದಲ್ಲಿ. ಇಂದಿಗೂ ಇಲ್ಲಿ ಪಾಯಸ ತನ್ನ ಸ್ಥಾನವನ್ನು ಕಳೆದುಕೊಂಡಿಲ್ಲ. ಅದರ ಜೊತಗೆಂದೇ ಮಾಡುವ ಕಡಲೇಬೇಳೆಯ ವಡೆ ಆಹಾ.... ವಡೆಯನ್ನು ಮುರಿದು ಪಾಯಸದಲ್ಲಿ ಅದ್ದು ತಿನ್ನುತ್ತಿದ್ದರೆ........ ಸತ್ತು ಸ್ವರ್ಗವನ್ನೋ ನರಕವನ್ನೋ ಸೇರಿರುವ ಪೂರ್ವಜರು ಅದೊಂದು ದಿನ ಇಳಿದುಬಂದು ನಾವಿಟ್ಟ ಎಡೆಯನ್ನು ತಿಂದು, ನಾವಿಟ್ಟ ಅವರ ಪ್ರೀತಿ ಪಾತ್ರ ಸಿಗರೇಟ್ ಸೇದಿ ಹೋಗುತ್ತಾರೋ ಇಲ್ಲವೋ ತಿಳಿಯದು. ನಾವು ಮಾತ್ರ ಅವರ ಹೆಸರುಹೇಳಿಕೊಂಡು ಪಾಯಸದೊಂದಿಗೆ ವಡೆಯನ್ನು ಸವಿಯುತ್ತಿದ್ದರೆ(ಕೆಲವು ವರ್ಗದವರ ಪ್ರಕಾರ ಸಾಮಾನ್ಯವಾಗಿ ಪಾಯಸದೊಂದಿಗೆ ವಡೆಯ ಹೆಸರು ಹೇಳಿದರೆ ಅಶುಭ).
ನಮ್ಮ ಕಡೆಯಲ್ಲಿ ಒಂದು ಮಾತಿದೆ "ಈ ಗೌಡ್ಗಳ್ ಬಿಡಪ್ಪ ಅವ್ರು ಕಿತ್ತಾಡೋದೆಸ್ಟೊತ್ತು ಒಂದಾಗೋದೆಸ್ಟೊತ್ತು ಒಂದು ಕುರಿ ಕಡ್ದು ಊಟ ಹಾಕುಸ್ಬುಟ್ರೆ ಮುಗ್ದೋಯ್ತು ಏನೂ ನಡೆದೇ ಇಲ್ಲ ಅನ್ನೋ ತರ ದೋಸ್ತಿಗಳಾಗೋಯ್ತರೆ" ಎಂದು. ನಾನು ಕಂಡುಕೊಂಡಿರುವಮಟ್ಟಿಗೆ ಇದು ಅಕ್ಷರಶಃ ಸತ್ಯ. ನಮ್ಮ ಮನೆಗಳಲ್ಲಿಯೇ, ಅಕ್ಕ-ಪಕ್ಕದಲ್ಲಿಯೇ ಇದಕ್ಕೆ ಅನೇಕ ಉದಾಹರಣೆಗಳನ್ನು ನಾನು ಕಂಡಿದ್ದೇನೆ. ಇಂಥದೇ ಪಾತ್ರವನ್ನು ಪಾಯಸದೂಟವೂ ಕೂಡ ಹೊಂದಿತ್ತು. ಆದರೆ ಇಂದಿನ ಫಾಸ್ಟ್ ಫುಡ್ ಯುಗದಲ್ಲಿ ಪಾಯಸ, ಹೋಳಿಗೆ ಮಾಡುವುದು ಮಹಾಬೇಸರದ ಕೆಲಸಗಳಾಗಿರುವುದರಿಂದ ಅಂಗಡಿಯಲ್ಲಿ ಸಿಗುವ ರೆಡಿ ಫುಡ್ ಗಳನ್ನು ತಂದು ತಿಂದು ತೃಪ್ತಿ ಪಡುವ ಪ್ರವೃತ್ತಿಯಿಂದಾಗಿ ಸಂಬಂಧಗಳು ಕೂಡ ಅಷ್ಟೇ ತ್ವರಿತ ಗತಿಯಲ್ಲಿ ದೂರಸರಿಯುತ್ತಿವೆ.

ಇಷ್ಟೆಲ್ಲಾ ಮಹತ್ ಕಾರ್ಯಗಳನ್ನು ನಿರ್ವಹಿಸುವ ಪಾಯಸದ ಬಗ್ಗೆ ಕೇಳಿ ಬಾಯಲ್ಲಿ ನೀರೂರುತ್ತಿದ್ದರೆ ಫೋನಾಯಿಸಿ ಸಂಜೆಗೆ ಪಾಯಸ ರೆಡಿ ಮಾಡಲು ಹೇಳಿ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

>>ಆದರೆ ಸಿಹಿ ಕಡಿಮೆಯಾಗಿ ಮತ್ತೆ ಬೆಲ್ಲ ಹಾಕಿ ಬೇಯಿಸಿ ನೋಡಿದರೆ ಪಾಯಸ ಹೋಗಿ ಹಲ್ವಾ ಆಗಿತ್ತು
ಹೀಗೇ ಅಲ್ವೆ ಹೊಸ ರುಚಿಯ ಅನ್ವೇಷಣೆಯಾಗೋದು

ಎಂಥಾ ಹೊತ್ತಲ್ಲಿ ಪಾಯಸದೂಟ ನೆನಪು ಮಾಡ್ತಾ ಇದೀರಾ ರೀ.. ನಮ್ಮೂರ ಕೇರಿ ಮನೇಲಿ ಶ್ರಾದ್ಧದೂಟ ಹೆಚ್ಚಾಗಿ ಮಳೆಗಾಲದಲ್ಲಿ ಬರುತ್ತೆ. ಹೆಸರು ಬೇಳೆ ಪಾಯಸ ಬಿಸಿ ಬಿಸಿ ವಡೆ.. ಆಹಾ ಏನು ಕಾಂಬಿನೇಶನ್ ರೀ ಅದು.. ನನಗೂ ಸಕ್ಕರೆ ಪಾಯಸಾಂದ್ರೆ ಅಷ್ಟಕ್ಕಷ್ಟೆ.. ಸೂಪರ್ರಾಗಿದೆ ನಿಮ್ಮ ಪಾಯಸ ಪ್ರಬಂಧ :)