ಇದನ್ನು ತಿಂದರೆ ನಂಬರ್‌ ೨ ಸಮಸ್ಯೆ ಮಾಯ!

To prevent automated spam submissions leave this field empty.

ಬೆಳಿಗ್ಗೆ ಉಲ್ಲಸಿತರಾಗಿ ಏಳಬೇಕೆಂದರೆ, ರಾತ್ರಿ ಊಟದಲ್ಲಿ ಈ ಸೊಪ್ಪನ್ನು ತಿಂದರೆ ಬೆಸ್ಟು ಅಂತಾರೆ ಹಳ್ಳಿ ಜನ.

ಈ ಸೊಪ್ಪಿಗೆ ದಕ್ಷಿಣ ಕರ್ನಾಟಕದ ಕಡೆ ಏನು ಹೇಳುತ್ತಾರೋ ತಿಳಿಯದು. ಉತ್ತರ ಕರ್ನಾಟಕದ ಕಡೆ ಹಕ್ಕರಕಿ ಅಂತಾರೆ. ಚೂಪು ತುದಿಯುಳ್ಳ ಉದ್ದನೆಯ ಎಲೆಗಳು ಹೂವಿನ ದಳಗಳಂತೆ ಹರಡಿಕೊಂಡಿರುವ ಮಬ್ಬು ಹಸಿರಿನ ಸೊಪ್ಪಿದು.

ಕಪ್ಪು ಮತ್ತು ಕೆಂಪು ಮಣ್ಣಿನ ಭೂಮಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಸ್ಯ ಹಕ್ಕರಕಿ. ತಿಳಿ ಹಸಿರು ಬಣ್ಣದ ಉದ್ದನೆಯ ಎಲೆಗಳು ಒತ್ತೊತ್ತಾಗಿ ನಕ್ಷತ್ರಾಕಾರವಾಗಿ ಹರಡಿಕೊಂಡು ಬೆಳೆಯುತ್ತವೆ. ಭೂಮಿಯನ್ನು ಆವರಿಸಿಕೊಂಡು ಬೆಳೆಯುವ ಹಾಗೂ ವರ್ಷದ ಎಲ್ಲಾ ಕಾಲಗಳಲ್ಲಿ ಕಂಡುಬರುವ ಸಸ್ಯ ಇದು.

ಅಪರೂಪದ ಔಷಧೀಯ ಗುಣಗಳಿವೆಯೆಂದು ಹೇಳಲಾಗುವ ಹಕ್ಕರಕಿಯನ್ನು ಯಾರೂ ನೆಟ್ಟು ಬೆಳೆಸುವುದಿಲ್ಲ. ಇದು ತಾನೆ ತಾನಾಗಿ ಕಂಡುಬರುವ ಒಂದು ರೀತಿಯ ಕಳೆ. ಡಯಾಬಿಟೀಸ್, ಮಲಬದ್ಧತೆ, ಪಿತ್ತ, ಕಣ್ಣು ನೋವು ಮುಂತಾದ ರೋಗಗಳಿಗೆ ಇದರ ಎಲೆ ಉತ್ತಮ ಔಷಧಿ ಎಂದು ಹೇಳುವವರಿದ್ದಾರೆ.

ಈ ಬುಡಮಟ್ಟದ ಅಂಗೈ ಅಗಲದ ಸಸ್ಯಕ್ಕೆ ಉತ್ತರ ಕರ್ನಾಟಕದಾದ್ಯಂತ ಎಲ್ಲಿಲ್ಲದ ಮಾನ್ಯತೆ. ಯಾವ ರೈತನೂ ಹಕ್ಕರಕಿಯನ್ನು ತಿರಸ್ಕಾರದಿಂದ ನೋಡುವುದಿಲ್ಲ. ಅದು ಹೊಲದಲ್ಲಿ ಎಲ್ಲೇ ಬೆಳೆದಿರಲಿ, ಊಟದ ಹೊತ್ತಿಗೆ ತರಿದು ತರುತ್ತಾನೆ. ರೊಟ್ಟಿ-ಪಲ್ಯದ ಜೊತೆ ನೆಂಜಿಕೊಂಡು ಉಣ್ಣುತ್ತಾನೆ. ಕೇಳಿದರೆ, ‘ನಾನು ಸಣ್ಣಾಂವ ಇದ್ದಾಗಿಂದ ಇದನ್ನ ತಿನ್ನಕೋಂತ ಬಂದೀನ್ರಿ. ಇದು ಮೈಗೆ ಚಲೋ ಅಂತ ದೊಡ್ಡೋರು ಹೇಳ್ತಾರ್ರಿ’ ಅಂತಾನೆ.

ವೆಜಿಟೆಬಲ್ ಸಲಾಡ್ ತಯಾರಿಕೆಯ್ಲಲಿ ಮೂಲಂಗಿ ಎಲೆಯೊಂದಿಗೆ ಹಕ್ಕರಕಿಯನ್ನು ಬಳಸುವದುಂಟು. ಅಪರೂಪಕ್ಕೊಮ್ಮೆ ಖಾನಾವಳಿಗಳಲ್ಲಿಯೂ ಇದು ಕಾಣಿಸುವುದುಂಟು. ತಾಜಾ ಹಕ್ಕರಕಿಯೇ ಬಳಕೆಗೆ ಉತ್ತಮ ಎಂಬ ನಂಬಿಕೆ ಇರುವುದರಿಂದ ಯಾರೂ ಇದನ್ನು ಕಿತ್ತು ತಂದು ಮಾರುಕಟ್ಟೆಯಲ್ಲಿ ಮಾರುವುದಿಲ್ಲ.

ಮೆಂತ್ಯ ಸೊಪ್ಪಿನಂತೆ ಕೊಂಚ ಸಪ್ಪನೆಯ ರುಚಿಯಿರುವ ಆದರೆ ನಾರಿನಂಶ ಹೇರಳವಾಗಿರುವ ಹಕ್ಕರಕಿಗೆ ಇತರ ಔಷಧೀಯ ಗುಣಗಳೂ ಇರಬಹುದು. ಅವುಗಳ ಬಗ್ಗೆ ಯಾರೂ ವ್ಯವಸ್ಥಿತವಾಗಿ ಅಧ್ಯಯನ ಮಾಡಿದಂತಿಲ್ಲ. ಅವು ಜನರ ಗಮನಕ್ಕೆ ಬರುವಂತಾದರೆ ಹೊಲದಲ್ಲೇ ಉಳಿದುಕೊಂಡಿರುವ ಈ ಅಪರೂಪದ ಸಸ್ಯಕ್ಕೆ ಬೇಡಿಕೆ ಏರಬಹುದು. ರೈತನಿಗೆ ಕೊಂಚ ಆದಾಯ ದಕ್ಕಬಹುದು. ಜನರ ಆರೋಗ್ಯದ ಜೊತೆಗೆ ರೈತನ ಆರ್ಥಿಕ ಆರೋಗ್ಯವೂ ಸುಧಾರಿಸಬಹುದು.

ಆದರೆ, ಹಣಕಾಸಿನ ಲಾಭ ಇರಲಿ, ಇಲ್ಲದಿರಲಿ, ತಾನಿರುವ ಜಾಗದಲ್ಲಿ ಈ ಸೊಪ್ಪು ಭೂಮಿಗೆ ತುಸು ಹೊದಿಕೆ ಹೊದಿಸುತ್ತದೆ. ಮಣ್ಣಿನ ತೇವಾಂಶವನ್ನು ಕಾಪಾಡುತ್ತದೆ. ಒಣಗಿದ ನಂತರ, ಪೋಷಕಾಂಶವಾಗಿ ಮಣ್ಣನ್ನು ಬಲಗೊಳಿಸುತ್ತದೆ.

ಹೀಗಾಗಿ, ಹಕ್ಕರಕಿಯನ್ನು ತಿಂದರೂ ಲಾಭ, ಹಾಗೇ ಬಿಟ್ಟರೂ ಲಾಭ.

- ಚಾಮರಾಜ ಸವಡಿ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕಂಗಡಿ ಅಂತ ತಪ್ಪಾಗಿ ಬರೆದೆ...ತಂಗಡಿ ಆಗಬೇಕಿತ್ತು...

೧. ತಂಗಡಿ (ದೇ) (ನಾ) ಆವರಿಕೆ ಗಿಡ, ಹೊನ್ನಾವರಿಕೆ
೨. ಹೊನ್ನಾವರಿಕೆ (ದೇ) (ನಾ) ಹಳದಿ ಹೂಗಳನ್ನು ಬಿಡುವ ಒಂದು ಬಗೆಯ ಗಿಡ, ತಂಗಡಿ ಗಿಡ

--ಶ್ರೀ

ಹೊನ್ನಾವರಿಕೆ ಗಿಡದ ಬಗ್ಗೆ ನನಗೆ ಪರಿಚಯವಿಲ್ಲ. ಬಹುಶಃ ನೋಡಿದ್ದರೂ ಬೇರೆ ಹೆಸರಿನಿಂದ ಗುರುತಿಸುತ್ತಾರೇನೋ ತಿಳಿಯದು. ಬಿಜಿಎಲ್ ಸ್ವಾಮಿಯವರ ಪುಸ್ತಕ ತಿರುವಿದಾಗ ಇನ್ನೊಂದು ಹೆಸರಿನಿಂದ ಕರೆಯುವ ಗಿಡದ ಮಾಹಿತಿ ಸಿಕ್ಕಿತು. ಅದು ಹೀಗಿದೆ.

ಸೋನಾಮುಖಿ (ನೆಲಾವರಿಕೆ) Cassia angustifolia vahl
ಕ್ರಿಸ್ತಶಕ ೯ನೇ ಶತಮಾನದಲ್ಲಿ ಅರಬ್ಬೀ ವೈದ್ಯರಿಂದ ಈ ಗಿಡ ಬೆಳಕಿಗೆ ಬಂತು. ಯೆಮೆನ್ ಪ್ರದೇಶ ಈ ಗಿಡದ ತೌರು. ಅಪಾಯ ಸತ್ವಗಳಿಲ್ಲದ ಒಳ್ಳೆಯ ವಿರೇಚಕವಾಗಿ ಎಲೆಗಳನ್ನು ಬಳಸಿದರು. ಒಣ ಎಲೆಗಳನ್ನು ನೀರಿನಲ್ಲಿ ಒಂದೆರಡು ಗಂಟೆಗಳ ಕಾಲ ನೆನೆಹಾಕಿ ಆ ನೀರನ್ನು ಕುಡಿಯುವುದು ವಿನಿಯೋಗ ರೀತಿ. ೧೭/೧೮ನೇ ಶತಮಾನಗಳಲ್ಲಿ ಇಂಗ್ಲಿಷ್ ವೈದ್ಯರೂ ಇದೇ ಅನುಪಾಕವನ್ನು ಸೆನ್ನ ಎಂಬ ಹೆಸರಿನಿಂದ ಕೊಡುತ್ತಿದ್ದರು.
ತಮಿಳುನಾಡಿನ ತಿನ್ನವೆಲ್ಲಿ (ತಿರುನೆಲ್ವೇಲಿ) ಜಿಲ್ಲೆಯಲ್ಲಿ ಇದರ ಬೆಳೆ ಮುನ್ನೂರು ವರ್ಷಗಳ ಹಿಂದೆ ಆರಂಭವಾಯಿತು. ಬೀಜ ಆಮದಾದದ್ದು ಗಿಡದ ಹುಟ್ಟೂರಿನಿಂದಲೇ ಆದರೂ ತಿನ್ನವೆಲ್ಲಿಯಲ್ಲಿನ ಸೆನ್ನ ಬಹುಬೇಕ ಪ್ರಖ್ಯಾತಿ ಪಡೆಯಿತು. ಹುಟ್ಟೂರಿನ ಸೆನ್ನಕ್ಕಿಂತ ಮಿಗಿಲಾದ ವಿರೇಚಕಗುಣ ತಿನ್ನವೆಲ್ಲಿ ಸೆನ್ನಕ್ಕೆ ಲಭಿಸಿತು. ಬಹುಶಃ ತಿನ್ನವೆಲ್ಲಿಯ ಭೂವಾಯುಗುಣಗಳು ಸೆನ್ನದ ಕೃಷಿಗೆ ವಿಶೇಷ ಅನುಕೂಲವಾಗಿದ್ದಿರಬೇಕು.
೨೦ನೇ ಶತಮಾನದ ಉತ್ತರಾರ್ಧದಲ್ಲಿ ವೈಜ್ಞಾನಿಕ - ವೈದ್ಯಕೀಯ ಸಂಶೋಧನೆಗಳ ಫಲವಾಗಿ ನೂರಾರು ಬಗೆಯ ವಿರೇಚಕ ಔಷಧಿಗಳು ಪ್ರಚಾರಕ್ಕೆ ಬಂದಿವೆಯಾದರೂ ತಿನ್ನವೆಲ್ಲಿ ಸೋನಾಮುಖಿಯ ಕೀರ್ತಿ ಉಡುಗಿಲ್ಲ. ಕೆಲವರ ಮೈಗೆ ಹೊಂದಿಕೊಂಡಿರುವ ವಿರೇಚಕ ಇದೊಂದೇ.
(ಗ್ರಂಥ ಋಣ: ಫಲಶೃತಿ ಲೇಖಕರು: ಪ್ರೊ. ಬಿ ಜಿ ಎಲ್ ಸ್ವಾಮಿ ಪ್ರಕಾಶಕರು: ಐ ಬಿ ಎಚ್ ಪ್ರಕಾಶನ, ಬೆಂಗಳೂರು, ೧೯೮೪ ಪುಟ ೧೨೯)

ಗೂಗಲ್ ಇಮೇಜಸ್ ನಲ್ಲಿ Cassia angustifolia vahl ಹುಡುಕಿದಾಗ ನೀವು ಹೇಳಿದಂತೆ ಹಳದಿ ಹೂಗಳ ಗಿಡ ಇದೆ. ಆದರೆ ನೀವು ಒಮ್ಮೆ ನೋಡಿ ಅದೇನಾ ಅನ್ತ ಹೇಳ್ತೀರಾ?

ಪ್ರೀತಿಯಿಂದ
ಸಿ ಮರಿಜೋಸೆಫ್

ತಂಗಡಿ ಗಿಡದ ಮಾಹಿತಿ ಸಿಕ್ಕೇ ಬಿಡ್ತು!
ಶ್ರೀಧರ್ ಹೇಳಿದ ಹಾಗೆ ಹಕ್ಕರಿki, ಹೊನ್ನಾವರಿಕೆ ಬೇರೆ ಬೇರೆ...

ವಿಕಿ ಪ್ರಕಾರ, ತಂಗಡಿ ಗಿಡದಲ್ಲೂ ಇದೇ ಉಪಯೋಗ ಇದೆ ಅಂತ ಬರೆದಿದ್ದಾರೆ...
The root is used in decoctions against fevers, diabetes, diseases of urinary system and constipation
http://en.wikipedia.org/wiki/Senna_auriculata

http://envis.frlht.org/trade_search.php?lst_part=SEED&lst_trade=AVARAI

ನಮ್ಮಮ್ಮ ಹಳ್ಳಿಲಿದ್ದಾಗ ತಂಗಡಿ ಹೂವು ಕಾಫಿಗೆ ಹಾಕಿಕೊಂಡು ಕುಡೀತಿದ್ದರಂತೆ...

--ಶ್ರೀ

ನಮ್ಮಲ್ಲಿ ಇದೇ ರೀತಿಯ ಗಿಡಕ್ಕೆ ದತ್ತೂರಿ ಗಿಡ ಅನ್ನುತ್ತಾರೆ.

ಚರ್ಮವ್ಯಾಧಿಗೆ ಔಷಧವಾಗಿ ಇದನ್ನು ಬಳಸುತ್ತಾರೆ. ಇವುಗಳ ಹಳದಿ ಹೂವಿನ ಪಕಳೆಗಳಿಂದ ವಿಷಲ್ ಊದ್ತಿದ್ವಿ :)

ಸರಿ ..ನಾನು ಇದೇ ರೀತಿಯ ಗಿಡಕ್ಕೆ ದತ್ತೂರಿ ಗಿಡ ಅನ್ನುತ್ತಾರೆ ಅಂದಿದ್ದೆ. ಎಲೆಯಲ್ಲಿ ತುಸು ಹೋಲಿಕೆ ಇದೆ. ಆದರೆ ಇದು ನೆಲದ ಮಟ್ಟಕ್ಕೆ ಬೆಳೆಯೋ ಗಿಡದ ಥರ ಕಾಣ್ತಿದೆ

ಪೊದೆ ಗಾತ್ರಕ್ಕೆ ಬೆಳೆಯುವ ಗಿಡ ಹೊನ್ನಾವರಿಕೆ ಅನಿಸುತ್ತೆ ರಾಮಪ್ರಸಾದ್‌. ಅದಕ್ಕೆ ಕೊಪ್ಪಳದ ಕಡೆ ಹೊನ್ನಂಬರಿಕೆ ಅಂತ ಕರೀತಾರೆ. ರೈತರು ಸುಗ್ಗಿ ಕಾಲದಲ್ಲಿ ಅದರ ಎಲೆಯಿಂದ ಚಹ ಮಾಡುವುದುಂಟು. ಅದೊಂಥರಾ ಮಜವಾಗಿರುತ್ತದೆ. ನನಗೆ ಗೊತ್ತಿರುವಂತೆ, ಹಕ್ಕರಕಿಯಲ್ಲಿ ಹೂ ಅಥವಾ ಕಾಯಿ ಬರುವುದಿಲ್ಲ. ಅದರ ಎಲೆಗಳು ಯಾವಾಗಲೂ ನೆಲದ ಮೇಲೆಯೇ ಹರಡಿಕೊಂಡಿರುತ್ತವೆ. ಗಿಡ ದೊಡ್ಡದಾಗುವುದೂ ಇಲ್ಲ.

ಹೌದು ಚಾಮರಾಜ್ ಅವರೇ,

ನಮ್ಮ ಮನೆಯಲ್ಲೂ ಸಹ ಇದನ್ನ ಉಪಯೋಗಿಸುತ್ತೇವೆ, ಇದು ಕೊಪ್ಪಳದಲ್ಲಿ ಸಿಗುವುದಿಲ್ಲವಾದರೂ ನಮ್ಮ ಹಳ್ಳೀಂದ ಇದನ್ನ ಮನೆಗೆ ತರುತ್ತೇವೆ. ರೊಟ್ಟಿಯ ಜೊತೆ ಇದು ತಿನ್ನುವುದಕ್ಕೆ ಬಹಳ ಸೊಗಸಾಗಿರುತ್ತೆ.

ನನಗೆ ಗೊತ್ತಿರುವ ಕೆಲವು ಕೃಷಿ ತಜ್ಞರನ್ನು ವಿಚಾರಿಸಿದೆ. ಅವರಿಗೂ ಇತ್ತ ಗಮನ ಹರಿದಿಲ್ಲ. ಬಹುಶಃ ಶೀಘ್ರ ಇನ್ನಷ್ಟು ಮಾಹಿತಿಯನ್ನು ಸೇರಿಸಬಲ್ಲೆ ಅನಿಸುತ್ತದೆ.

ಹಕ್ಕರಿಕೆಯ ವಿಶೇಷ ಗುಣಗಳ ಬಗ್ಗೆ ತಿಳಿಸಿಕೊಟ್ಟಿದ್ದೀರಿ. ಧನ್ಯವಾದಗಳು. ನೀವು ಹೇಳಿದಂತೆ ದಕ್ಷಿಣ ಕರ್ನಾಟಕದವರಿಗೆ ಇದರ ತಳ ಬುಡ ಗೊತ್ತಿಲ್ಲ. ನಾನು ರೊಟ್ಟಿಯಲ್ಲಿ ಬಲು ಇಷ್ಟಪಟ್ಟು ತಿನ್ನುವ ಪದಾರ್ಥ ಇದು.

ಚಾಮರಾಜ್ ಅವರೇ.
ಈ ಸಸ್ಯದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

ಉದಯ್ ಅವರೇ
ಚಾಮರಾಜ್ ಅವರು "ದಕ್ಷಿಣ ಕರ್ನಾಟಕದವರಿಗೆ ಇದರ ತಳ ಬುಡ ಗೊತ್ತಿಲ್ಲ" ಅಂತ ಬರ್ದಿರೋದು ಅವರ ಲೇಖನದಲ್ಲಿ ಎಲ್ಲೂ ಕಾಣಿಸ್ತಿಲ್ಲ... ನೀವೆಲ್ಲಿ ಓದಿದ್ರಿ?

ಪ್ರೀತಿಯ ಉದಯ್‌, ಮೊನ್ನೆ ಯಾವುದೋ ಲೇಖನ ಹುಡುಕುತ್ತ ಕೂತಾಗ ಕಂಡಿತ್ತು ಹಕ್ಕರಕಿ. ಹಿಂದೊಮ್ಮೆ ಪ್ರಜಾವಾಣಿಯಲ್ಲಿ ಇದರ ಬಗ್ಗೆ ಬರೆದಾಗ ಸಾಕಷ್ಟು ಪ್ರತಿಕ್ರಿಯೆಗಳೂ ಬಂದಿದ್ದವು. ಇದನ್ನು ಕ್ರಮಬದ್ಧವಾಗಿ ಬೆಳೆಯಲು, ಕೃಷಿ ಉಪ ಉತ್ಪನ್ನವಾಗಿ ಅಭಿವೃದ್ಧಿಪಡಿಸುವುದು ಸಾಧ್ಯವೆ? ಬಲ್ಲವರೇ ಹೇಳಬೇಕು.

ಚಾಮರಾಜ್ ಅವರೇ, ಬಹಳ ದಿನಗಳ ನಂತರ ನನ್ನ ಅಜ್ಜಿ ಊಟದಲ್ಲಿ ಕೊಡುತ್ತಿದ್ದ ತರಕಾರಿಯನ್ನು ನೆನಪಿಸಿದ್ದೀರಿ ಧನ್ಯವಾದಗಳು. ಎರೆಹೊಲದಲ್ಲಿ ಬೆಳೆದ ಹಕ್ಕರಿಕಿ ಸೊಪ್ಪು ಆರೋಗ್ಯಕ್ಕೆ ತುಂಬ ಒಳ್ಳೆಯದು ಎಂದು ನನ್ನ ಅಜ್ಜಿ ಹೇಳುತ್ತಿದ್ದಳು. ಆ ಸೊಪ್ಪನ್ನು ಸಣ್ಣಗೆ ಹೆಚ್ಚಿ ಅದಕ್ಕೆ ಸ್ವಲ್ಪ ಎಣ್ಣೆ, ಗುರೆಳ್ಳುಪುಡಿ, ಒಣಖಾರ ಕಲೆಸಿ ರೊಟ್ಟಿಯ ಜೊತೆ ತಿಂದರೆ ಎಂಥ ರುಚಿ! ಇದರಲ್ಲಿ ಹೊಟ್ಟೆಯಲ್ಲಿನ ಹರಳುಗಳನ್ನು ಕರಗಿಸುವ ಶಕ್ತಿ ಇದೆ, ಕಬ್ಬಿಣಾಂಶ ಇದೆ ಎಂದು ನನ್ನ ತಾಯಿಯೂ ಹೇಳುತ್ತಿದ್ದಳು. ಇದೇ ರೀತಿಯಲ್ಲಿ ಹಸಿ ಮೆಂತೆ ಸೊಪ್ಪು, ರಾಜಗಿರಿ, ಬಸಳೆ, ಮೂಲಂಗಿ ಸೊಪ್ಪು, ರೊಟ್ಟಿಗೆ ತಿನ್ನಲು ಎಷ್ಟೊಂದು ವಿಧಗಳು ಅಲ್ಲವೆ? ಬಹುಶ: ಉತ್ತರಕರ್ನಾಟಕದಲ್ಲಿ ಇದ್ದಷ್ಟು ಸೊಪ್ಪಿನ ವೈವಿಧ್ಯತೆ ದಕ್ಷಿಣ ಕರ್ನಾಟಕದಲ್ಲಿ ಇರಲಿಕ್ಕಿಲ್ಲ. ಇದ್ದರಂತೂ ತುಂಬ ಒಳ್ಳೆಯದು.- ಸಿದ್ಧರಾಮ ಹಿರೇಮಠ. ಕೂಡ್ಲಿಗಿ

ಸಿದ್ಧರಾಮ ಅವರೇ, ನನಗೂ ಅವೇ ನೆನಪುಗಳು. ಬಾಲ್ಯದಲ್ಲಿ ಈ ಸೊಪ್ಪನ್ನು ತುಂಬಾ ತಿಂದಿದ್ದೇನೆ. ಊರಿಗೆ ಹೋದರೆ, ಈಗಲೂ ಅದು ಇಷ್ಟ. ರೊಟ್ಟಿಯೊಂದಿಗಿನ ಕಾಂಬಿನೇಶನ್‌ ಚಪಾತಿ ಜೊತೆ ಬರುವುದಿಲ್ಲ.

ಸವಡಿಯವರೇ ಈ ಲೇಖನ ಹಿಂದೊಮ್ಮೆ ಪ್ರಜಾವಾಣಿಯಲ್ಲಿ ಬಂದಿತ್ತಲ್ಲವೇ?

ಬೆಂಗಳೂರಿನಲ್ಲೂ ಈ ಸೊಪ್ಪು ಬೆಳೆಯುವುದನ್ನು ಕಂಡಿದ್ದೇನೆ. ಹೆಸರೇನೆಂದು ತಿಳಿಯದು. ನಾಳೆ ಕೆಲಸಕ್ಕೆ ಹೋದಾಗ ತಿಳಿದು ಬರುವೆ.

ಹಕ್ಕರಿಕೆ ಪದಕ್ಕೆ ನಿಘಂಟಿನಲ್ಲಿ "ಕಡಿಯಾಲದ ಗಿಡ" ಎಂಬ ಅರ್ಥ ಇದೆ.

ಪ್ರೀತಿಯಿಂದ
ಸಿ ಮರಿಜೋಸೆಫ್

<< ಈ ಲೇಖನ ಹಿಂದೊಮ್ಮೆ ಪ್ರಜಾವಾಣಿಯಲ್ಲಿ ಬಂದಿತ್ತಲ್ಲವೇ?>>

ಹೌದು ಮರಿಜೋಸೆಫ್‌ರೇ, ನಾನೇ ಬರೆದಿದ್ದೆ. ಮೊನ್ನೆ ಹುಡುಕುವಾಗ ಸಿಕ್ಕಿದ್ದನ್ನು ಹೆಕ್ಕಿ ಸಂಪದದಲ್ಲಿ ಹಾಕಿದ್ದೇನೆ. ಮನೆಮನೆಯಲ್ಲೂ ಬೆಳೆಯಬಹುದಾದ ಸೊಪ್ಪಿದು. ತಿಂದವರಿಗೂ ಒಳ್ಳೆಯದು. ನಗರವಾಸಿಗಳೂ ಇದನ್ನು ಬೆಳೆಯುವಂತಾದರೆ ಉತ್ತಮ.

ಈ ಕುರಿತು ಹೆಚ್ಚಿನ ಮಾಹಿತಿ ಇದ್ದರೆ ದಯವಿಟ್ಟು ಹಂಚಿಕೊಳ್ಳಿ.

ಚಾಮರಾಜ್,
ಎಲೆ ಚಿತ್ರ ನೋಡಿದರೆ ಇದು ಗೋಲೋಮಿಕ(ಸಂ) ಇರಬಹುದು.
ಬಾಟನಿಕಲ್ ಹೆಸರು- Launaea pinnatifida
ಯಾರಿಗೋ ನಂ ೨ ಸಮಸ್ಯೆ ಬಂದ ಹಾಗೆ ಇದೆ. ನೀವು ಫೋಟೋ ತೆಗೆಯುವುದರೊಳಗೆ ಕೀಳಲು ಹೊರಟ್ಟಿದ್ದಾರೆ. :)
-ಗಣೇಶ.

ಈ ಎಲೆಯ ಬಗ್ಗೆ ಈಗ ಬರೆದಿರುವುದಕ್ಕಿಂತ ಹೆಚ್ಚಿನ ವಿಷಯ ನನಗೂ ಗೊತ್ತಿಲ್ಲ. ಆದರೆ, ಇದು ಉತ್ತರ ಕರ್ನಾಟಕದಾದ್ಯಂತ ನಿತ್ಯ ಬಳಕೆಯಲ್ಲಿದೆ ಎಂಬುದು ಮಾತ್ರ ಗೊತ್ತು.

<< ಯಾರಿಗೋ ನಂ ೨ ಸಮಸ್ಯೆ ಬಂದ ಹಾಗೆ ಇದೆ. ನೀವು ಫೋಟೋ ತೆಗೆಯುವುದರೊಳಗೆ ಕೀಳಲು ಹೊರಟ್ಟಿದ್ದಾರೆ >>
:)

"ಬಿಟ್ಟು ಹೊಂಟೆಲ್ಲಾ ನನ್ನ ಹಳ್ಳಿ" ಅನ್ನೋ ನಮ್ಮೂರು ಕಡೆಯ ವರ್ಲ್ಡ ಫೇಮಸ್ ಟ್ರ್ಯಾಕ್ಟರ್ ಜಾನಪದ ಹಾಡಿನ್ಯಾಗ ಹಿಂಗೊಂದು ಸಾಲು ಬರ್ತೈತ್ರಿ:

"ಹಾತರಕಿ ಪಲ್ಯೆ ತಿಂದು
ಹರ್ಗ್ಯಾಡಿ ಬಂದಿದ್ದು ನೀ ಮರತಿಯೇನು"

ಶಬ್ಬಿರ ಡಾಂಗೆ ಹಾಡಿದಂಗ ನೆನಪು...

-ಶೆಟ್ಟರು

ಶೋಭಾ, ಮಾಯ್ಸ್ ೨, ಪಾಲಚಂದ್ರ, ಮೇರಿಜೋಸೆಫ್ ಅವರೆ, ನಮ್ಮ ಭಾಗದಲ್ಲಿ ಬೆರಕಿ ಸೊಪ್ಪು, ಶಕುಂತಲಾ ಸೊಪ್ಪು, ಹುಣಸೀಕ್, ಸಬ್ಬಸಿಗೆ, ಕಿರಕಸಾಲಿ, ಗೋಳಿ ಸೊಪ್ಪು, ಗೊಂಡೆ ಸೊಪ್ಪು, ಕೋಲಾಣಿ ಸೊಪ್ಪು, ಬಳಸುತ್ತೇವೆ. ನಿಮ್ಮಲ್ಲಿಯೂ ಇವುಗಳನ್ನು ಬಳಸುತ್ತಿದ್ದಲ್ಲಿ(ನೆಟ್ ಲ್ಲಿ ಹುಡುಕದೆ) ಇವುಗಳ ಬಗ್ಗೆ ಸ್ವಲ್ಪ ಮಾಹಿತಿ ಕೊಡುತ್ತೀರಾ?-ಸಿದ್ಧರಾಮ ಹಿರೇಮಠ. ಕೂಡ್ಲಿಗಿ

ಸಿದ್ದರಾಮ್ ಅವರೇ
ಸಬ್ಬಸಿಗೆ, ಕಿರಕಸಾಲಿ, ಗೋಳಿ ಸೊಪ್ಪು.. ನಾವೂ ಬಳಸುತ್ತೇವೆ..
ದಯವಿಟ್ಟು ನೀವು ಹೇಳಿದ ಸೊಪ್ಪುಗಳ ಫೋಟೋ ಇದ್ದರೆ ಅಪ್ಲೋಡ್ ಮಾಡಿ. ಏಕೆಂದರೆ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಹೆಸರಿರುತ್ತೆ.
"ಉತ್ತರಕರ್ನಾಟಕದಲ್ಲಿ ಇದ್ದಷ್ಟು ಸೊಪ್ಪಿನ ವೈವಿಧ್ಯತೆ ದಕ್ಷಿಣ ಕರ್ನಾಟಕದಲ್ಲಿ ಇರಲಿಕ್ಕಿಲ್ಲ. " ಅಂತ ಹೇಳಲಿಕ್ಕಗೋಲ್ಲ.. ದಕ್ಷಿಣ ಕರ್ನಾಟಕದಲ್ಲಿ ಸಿಗೋ ಸೊಪ್ಪು ಅಲ್ಲಿ ಸಿಗದಿರಬಹುದು. ಪ್ರಕೃತಿ ಎಲ್ಲವನ್ನು ಸರಿದೂಗಿಸಿರುತ್ತೆ.

ನನ್ನ ಪ್ರತಿಕ್ರಿಯೆಯ ಉದ್ದೇಶ ಅಷ್ಟೇ ಇತ್ತು. ಕರ್ನಾಟಕದ ಬೇರೆ ಭಾಗಗಳಲ್ಲಿ ಸೊಪ್ಪುಗಳ ವೈವಿಧ್ಯತೆ ಇದೆಯೋ ಇಲ್ಲವೋ, ಇದ್ದರಂತೂ ಒಳ್ಳೆಯದೆಂದೇ ಹೇಳಿದ್ದೆ. ಆದರೆ ಅದನ್ನು ಭೇದ ಮಾಡಿದವರು ನೀವು ಮಾತ್ರ. ಇದರಲ್ಲಿ ಹಾಸ್ಯ ಮಾಡುವ ವಿಷಯವೇನಿದೆಯೋ ತಿಳೀಲಿಲ್ಲ. ಅದಕ್ಕೆಂದೇ ಪ್ರತಿಕ್ರಿಯಿಸಿದೆ. ಇದರಲ್ಲಿ ಯಾರ ಮನಸನ್ನೂ ನೋಯಿಸುವ ಉದ್ದೇಶವಿರಲಿಲ್ಲ. ಅದನ್ನೇ ನೀವು ಬೇರೆ ಭಾಗಗಳಲ್ಲಿಯೂ ಸೊಪ್ಪು ಬಳಸುತ್ತಾರೆಂದು ಅವುಗಳ ಬಗೆಗಳನ್ನು ಹೇಳಲಾಗುತ್ತಿರಲಿಲ್ಲವೇ? ಯಾರೂ ಎಲ್ಲದರಲ್ಲೂ ಪಂಡಿತರಲ್ಲವಲ್ಲ. ನನಗೂ ಎಷ್ಟೋ ಸೊಪ್ಪುಗಳ ಹೆಸರುಗಳು ಗೊತ್ತಿಲ್ಲ. ಹಾಗಂತ ಅದು ಹಾಸ್ಯದ ವಸ್ತುವಾಗಲ್ಲ. - ಸಿದ್ಧರಾಮ ಹಿರೇಮಠ. ಕೂಡ್ಲಿಗಿ.

ನನ್ನ ಪ್ರತಿಕ್ರಿಯೆ ನಿಮ್ಮೊಬ್ಬರಿಗೆ ಆಗಿರಲಿಲ್ಲ ಸಿದ್ದರಾಮ್ ಅವರೇ... ಪುನಃ ನೋಡಿ..
ಉದಯ್ ಅವರ ಪ್ರತಿಕ್ರಿಯೆಯನ್ನೂ ("ನೀವು ಹೇಳಿದಂತೆ ದಕ್ಷಿಣ ಕರ್ನಾಟಕದವರಿಗೆ ಇದರ ತಳ ಬುಡ ಗೊತ್ತಿಲ್ಲ ") ಗಮನದಲ್ಲಿಟ್ಟುಕೊಂಡು ನಾನು ಪ್ರತಿಕ್ರಿಯಿಸಿದ್ದೇನೆ.

ಯಾರೂ ಸರ್ವ ಜ್ನಾನಿಗಳಾಗಿರೋಲ್ಲ.. ಎಲ್ಲ ಪ್ರದೇಶಗಳನ್ನೂ ನೋಡಿ ಸರ್ವವನ್ನೂ ಅರಿತಿದ್ದೇವೆ ಅನ್ನುವವರು ಯಾರೂ ಇಲ್ಲ .. ಹೀಗೆ ಸಾರಾಸಗಟಾಗಿ ಗೊತ್ತಿಲ್ಲದೆ ಏನೂ ಹೇಳಬಾರದಲ್ವ?

ನೀವು ಈಗ ಅನಂತಶೇಷ ಅವರ ಉತ್ತರ ನೋಡಿ ಸಮರ್ಥಿಸಿಕೊಳ್ಳುತ್ತಿದ್ದೀರಿ..

ಶೋಭಾ ಅವರೆ, ಅನಂತಶೇಶ ಅವರ ಪ್ರತಿಕ್ರಿಯಿಸಿದ ದಿನಾಂಕ ಹಾಗೂ ಸಮಯ ಗಮನಿಸಿ. ನಾನು ಪ್ರತಿಕ್ರಿಯೆ ನೀಡಿರುವುದು ಜೂನ್ ೨೦ ಬೆಳಿಗ್ಗೆ ೭.೦೨ಕ್ಕೆ, ಅನಂತಶೇಷ ಅವರು ಪ್ರತಿಕ್ರಿಯೆ ನೀಡಿರುವುದು ಜೂನ್ ೨೦ ಬೆಳಿಗ್ಗೆ ೮.೪೯ಕ್ಕೆ. ಅದು ಹೇಗೆ ನಾನು ಅವರ ಪ್ರತಿಕ್ರಿಯೆ ನೋಡಿ ಸಮರ್ಥಿಸಿಕೊಳ್ಳಲ್ಲಿಕ್ಕಾಗುತ್ತೆ?
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ

ಶೋಭಾ ಅವರೆ, ಅನಂತಶೇಶ ಅವರ ಪ್ರತಿಕ್ರಿಯಿಸಿದ ದಿನಾಂಕ ಹಾಗೂ ಸಮಯ ಗಮನಿಸಿ. ನಾನು ಪ್ರತಿಕ್ರಿಯೆ ನೀಡಿರುವುದು ಜೂನ್ ೨೦ ಬೆಳಿಗ್ಗೆ ೭.೦೨ಕ್ಕೆ, ಅನಂತಶೇಷ ಅವರು ಪ್ರತಿಕ್ರಿಯೆ ನೀಡಿರುವುದು ಜೂನ್ ೨೦ ಬೆಳಿಗ್ಗೆ ೮.೪೯ಕ್ಕೆ. ಅದು ಹೇಗೆ ನಾನು ಅವರ ಪ್ರತಿಕ್ರಿಯೆ ನೋಡಿ ಸಮರ್ಥಿಸಿಕೊಳ್ಳಲ್ಲಿಕ್ಕಾಗುತ್ತೆ?
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ