ಬಿದಿರಮ್ಮ ತಾಯಿ ಕೇಳೆ

To prevent automated spam submissions leave this field empty.
ಮೈಸೂರು ದಾರಿಯಲ್ಲಿರುವ ಜನಪದ ಲೋಕ ಕಿವಿಗೆ ಬಿದ್ದ ಹೆಸರು ಮಾತ್ರ ಆಗಿತ್ತು. ಭಾನುವಾರ ರಾಮನಗರಕ್ಕೆಂದು ಸ್ನೇಹಿತರೊಂದಿಗೆ ಹೋದಾಗ ಅದರ ಝಲಕ್ ನೋಡಲು ಸಿಕ್ಕಿದ್ದು. ಅಲ್ಲಿಯ ಫೋಟೋಗಳು ಸುಮಾರಿದ್ದವು. ಅದನ್ನೆಲ್ಲ ಮೆಲುಕು ಹಾಕುವ ಮೊದಲು ಕೆಳಗಿನ ಫೋಟೋ ಹಾಗು ಅದರಲ್ಲಿರುವ ಹಾಡು ಎಲ್ಲರೊಂದಿಗೂ ಹಂಚಿಕೊಳ್ಳುವ ಮನಸ್ಸಾಯಿತು.

(ಬಿದಿರನ್ನು ಕುರಿತ ಜನಪದ ಗೀತೆ)

ಬಿದಿರಮ್ಮ ತಾಯಿ ಕೇಳೆ ನೀನಾರಿಗಲ್ಲದವಳೆ
ಹುಟ್ಟುತ್ತಾ ಹುಲ್ಲು ಆದೆ ಬೆಳೆಯುತ್ತಾ ಬಿದಿರು ಆದೆ || ಪಲ್ಲವಿ ||
ಬೆಟ್ಟಾದ ಕೆಳಗೆ ಇದ್ದೆ ಅದರುದ್ದ ಬೆಳೆದಿದ್ದೆ || ಅನುಪಲ್ಲವಿ ||

ರಂಗನಿಗೆ ಕೊಳಲು ಆದೆ ಕಂದನಿಗೆ ತೊಟ್ಟಿಲಾದೆ
ಆಡುವ ಮಕ್ಕಳಿಗೆ ಓಡುವ ಕುದುರೆ ಆದೆ || ೧ ||

ಮದುವೇಯ ಹಂದರಕ್ಕೆ ಚಪ್ಪರದ ಕಂಬವಾದೆ
ಮೈದುಂಬುವ ಕುಣಿತಕ್ಕೆ ನಂದೀಯ ಕೋಲು ಆದೆ || ೨ ||

ಅತ್ತೆಮನೆ ಸೊಸೆಯರೀಗೆ ಬೀಸುವ ಕುಕ್ಕೆಯಾದೆ
ಮುತ್ತೈದೆ ಮಕ್ಕಳೀಗೆ ಬಾಗಣದ ಮರಗಳಾದೆ || ೩ ||

ಆಡು ಕಾಯೊ ಮಕ್ಕಳೀಗೆ ಸೆಣೆಯೆಂಬ ಜವಳಿಯಾದೆ
ಕಾಳುಗಳ ಕೂಡಿ ಇಡಲು ಕಟ್ಟೀದ ಕಣಜವಾದೆ || ೪ ||

ಊರೂರು ಸೂರು ಆದೆ ಕೂರಿಗೆಯ ಕೊಳವೆ ಆದೆ
ಮುಪ್ಪೀನ ಮುದುಕರಿಗೆ ಊರಂಬೊ ದೊಣ್ಣೆಯಾದೆ || ೫ ||

ಅಂಬಿಗನಿಗೆ ಹುಟ್ಟು ಆದೆ ಮ್ಯಾದಾರ್ಗೆ ಬುಟ್ಟಿ ಆದೆ
ಹತ್ತುವವಗೆ ಏಣಿ ಆದೆ ಸತ್ತವಂಗೆ ಚಟ್ಟವಾದೆ || ೬ ||

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಅಂಬಿಗನಿಗೆ ಹುಟ್ಟು ಆದೆ ಮ್ಯಾದಾರ್ಗೆ ಬುಟ್ಟಿ ಆದೆ
ಹತ್ತುವವಗೆ ಏಣಿ ಆದೆ ಸತ್ತವಂಗೆ ಚಟ್ಟವಾದೆ

very beautiful and thought provoking