ಸುಪ್ರಸಿದ್ಧ ಭಾವಗೀತೆಗಳ ಗಾಯಕಿ, ಸಂಗೀತ ಬಾಲಚಂದ್ರ, ಮುಂಬೈನಲ್ಲಿ !

To prevent automated spam submissions leave this field empty.

ಹೆಸರಾಂತ  ಭಾವಗೀತೆಗಳ ಗಾಯಕಿ, ಸಂಗೀತ ಬಾಲಚಂದ್ರ, ರವರ ಗಾಯನ, ’ಕರ್ನಾಟಕ ಸಂಘದ ಸಮಾರೋಪ ಉತ್ಸವ ’ ಕ್ಕೆ, ಬೆಳ್ಳಿಯ ಮೆರುಗನ್ನು ಕೊಟ್ಟಿದೆ !

ಮುಂಬೈ ನಗರದ, ’ಕರ್ನಾಟಕ ಸಂಘದ ಅಮೃತೋತ್ಸವದ ಸಮಾರೋಪಣೆಯ ಉತ್ಸವ ’ ದ ಶುಭಸಮಯದಲ್ಲಿ, ನಾಲ್ಕನೆಯದಿನ, (೬, ಜೂನ್ ೨೦೦೯ ರಂದು,) ಸಾಯಂಕಾಲ ೪-೩೦ ಕ್ಕೆ ಸರಿಯಾಗಿ, ಸುಪ್ರಸಿದ್ಧ ಗಾಯಕಿ, ಸಂಗೀತ ಬಾಲಚಂದ್ರ ಉಡುಪಿ, ಹಾಗೂ ಅವರ ಸಂಗಡಿಗರು ನಡೆಸಿಕೊಟ್ಟ ' ಭಾವಸಂಗಮ,' (ಭಾವಗೀತೆಗಳ ಕಾರ್ಯಕ್ರಮ) ಸಂಗೀತಕಾರ್ಯಕ್ರಮ ಬಹಳ ಸೊಗಸಾಗಿ ಮೂಡಿಬಂತು.

ಮೊದಲು, ಶ್ರೀ. ಭರತ್ ಕುಮಾರ್ ಪೊಲಿಪು ರವರು, ಕಾರ್ಯಕ್ರಮವನ್ನು ಸಂಚಾಲನೆಮಾಡಿ, ಸಭಿಕರಿಗೆ ಅತಿಥಿಗಳ ಪರಿಚಯಮಾಡಿದರು. ಅವರಲ್ಲಿ ಪ್ರಶಸ್ತಿಪಾತ್ರರಾದ, ಶ್ರೀ ಮೂಳೂರು ಸಂಜೀವ ಕಾಂಚನ್ ಮತ್ತು ಸಮಾಜಸೇವಕ, ಶ್ರೀ. ಶೇಖರ್ ಆರ್ ಶೆಟ್ಟಿಯವರೂ ಇದ್ದರು. ಮೊದಲು ಸಭೆಯಲ್ಲಿ ಕಡಿಮೆ ಜನರಿದ್ದರು. ಪೊಲಿಪುರವರು ಕಾರ್ಯಕ್ರಮವನ್ನು ನಾವು ತಡವಾಗಿ ಮಾಡುವುದು ಸರಿಯುಲ್ಲ. ಸಮಯಕ್ಕೆ ಸರಿಯಾಗಿ ನಾವು ಶುರುಮಾಡಿದರೆ ಹಾಲ್ ತುಂಬುವುದು, ಅಂತ್ಯದಲ್ಲಿಯೇ ಎಂದು, ಭರವಸೆನೀಡಿ, ಸಂಗೀತ ಕಾರ್ಯಕ್ರಮಕ್ಕೆ ಚಾಲನೆಕೊಟ್ಟರು. ಅವರು ತಿಳಿಸಿದಂತೆ, ನಿಧಾನವಾಗಿ ಒಬ್ಬರಾದಮೇಲೆ ಒಬ್ಬರು ಸಂಗೀತಪ್ರಿಯರು ಬರಲಾರಂಭಿಸಿ, ಕೊನೆಯಹೊತ್ತಿಗೆ ಹೆಚ್ಚು ಕಡಿಮೆ, ಸಭಾಗೃಹ ತುಂಬಿತ್ತು. ನಾನು ಯಾಕೋ ಹಿಂತಿರುಗಿದರೆ, ನಮ್ಮ ’ಮೈಸೂರು ಅಸೋಸಿಯೇಷನ್ ’ ನ ಗಣ್ಯರಾದ, ಡಾ. ಮಂಜುನಾಥ್, ಹಾಗೂ ಮಂಜುನಾಥಯ್ಯನವರು, ಕುಳಿತಿದ್ದು, ’ ಸಂಗೀತ ಬಾಲಚಂದ್ರ ’ ರ ಸುಮಧುರ ಗಾಯನ-ಮಾಧುರ್ಯಕ್ಕೆ ತಲೆದೂಗುತ್ತಾ, ಮೈಮರೆತಿದ್ದರು. ಕಾರ್ಯಕ್ರಮದ ಮಧ್ಯೆ, ಯಕ್ಷಗಾನ ಸಂಘಟಕ, ಮೂಳೂರು ಸಂಜೀವ ಕಾಂಚನ್ ರವರನ್ನು ಶಾಲುಹೊದಿಸಿ, ಗೌರವಿಸಲಾಯಿತು.

ಗೌರವ ಅತಿಥಿಯಾಗಿ, 'ಯಕ್ಷಮಾನಸ ಸಂಗಟನೆ,' ಯ ಅಧ್ಯಕ್ಷರಾದ, ಸಮಾಜಸೇವಕ, ಶೇಖರ್ ಆರ್, ಶೆಟ್ಟಿಯವರು ಸಭೆಯಲ್ಲಿ ಹಾಜರಿದ್ದು, ಕಾರ್ಯಕ್ರಮದ ಗರಿಮೆಯನ್ನು ಹೆಚ್ಚಿಸಿದರು. ಸಂಘವು ಶೇಖರ್ ಆರ್ ಶೆಟ್ಟಿಯವರಿಗೆ, ಶಾಲುಹೊದಿಸಿ, ಪುಷ್ಪಗುಚ್ಛವಿತ್ತು, ಗೌರವ ಸೂಚಿಸಿದರು. ನೆನ್ನೆಯದಿನದ, ಪ್ರಮುಖ ಸುಗಮಸಂಗೀತ ಕಲಾವಿದೆ, ಸಂಗೀತ ಬಾಲಚಂದ್ರರವರು, ಉಡುಪಿಯ ಬೈಲೂರಿನ ಮಣ್ಣಿನಲ್ಲಿ ಉದ್ಭವಿಸಿ, ಮೇಲೆದ್ದುಬಂದ ಕಲಾವಿದೆ. ಈಗಾಗಲೇ ಅವರು ತಮ್ಮ ಸೋಲೋಹಾಡುಗಾರಿಕೆಯಲ್ಲಿ ೪೦೦ ಕ್ಕೂ ಹೆಚ್ಚು ಕ್ಯಾಸೆಟ್ ಗಳಲ್ಲಿ ತಮ್ಮ ದ್ವನಿಯನ್ನು ಮುದ್ರಿಸಿದ್ದಾರೆ. ಡಾ. ಎಸ್. ವಿ. ಪರಮೇಶ್ವರಭಟ್ಟರ ಶಿಷ್ಯೆ. ಬೆಂಗಳೂರಿನಲ್ಲಿ ಆಯೋಜಿಸಿದ್ದ ’ಇ-ಟೀವಿ ' ಎದೆತುಂಬಿಹಾಡಿದೆನು ಸಂಗೀತ ಸ್ಪರ್ಧೆ ಕಾರ್ಯಕ್ರಮ ’ ದಲ್ಲಿ ಪ್ರಶಸ್ತಿವಿಜೇತೆಯಾಗಿದ್ದಾರೆ.

’ಬೆಂಗಳೂರು ಆಕಾಶವಾಣಿಯ ಬಿ ಗ್ರೇಡ್ ನಲ್ಲಿ ಹೈಗ್ರೇಡ್ ಕಲಾವಿದೆ ’ ಯಾಗಿ ಸೇವೆಸಲ್ಲಿಸುತ್ತಿದ್ದಾರೆ. ಅವರ ಪಕ್ಕವಾದ್ಯವೃಂದದವರಲ್ಲಿ, ಮುಂಬೈ ನ, ಶ್ರೀ. ವೇಣುಗೋಪಾಲ್, ಶ್ರೀ. ಜನಾರ್ಧನ್, ಶ್ರೀ ಮನೋಜ್ ರಾವ್ ಇದ್ದರು. * ಕಾರ್ಯಕ್ರಮದ ಶುಭಾರಂಭವನ್ನು ಗಾಯಕಿ, ಸಂಗೀತ ಬಾಲಚಂದ್ರ,, ’ ಗಣೇಶ ಸ್ತುತಿ,’ ಯಿಂದ ಪ್ರಾರಂಭಮಾಡಿದರು. * ನಂತರ ಕುವೆಂಪುರವರ, ಭಕ್ತಿಪ್ರಧಾನ ಕೃತಿ, 'ಇಳಿದುಬಾ ತಾಯೆ ಇಳಿದುಬಾ. ಹೊರಹೊಮ್ಮಿತು...ಅಲ್ಲಿನ ಗಾನಪ್ರಿಯರ ಮನಸ್ಸಿನಲ್ಲಿ ಒಮ್ಮೆಲೇ ಗಾಯಕಿ ತಪ್ಪುಮಾಡಿದರು, ಎನ್ನುವ ಮನೋಭಾವ ಎದ್ದು ಕಾಣುತ್ತಿತ್ತು. ಎಲಾ, ಈ ಗೀತೆ ನಮ್ಮ ವರಕವಿ-ಬೇಂದ್ರೆಯವರದು, ಎನ್ನುವವೇಳೆಗೆ, ನಮಗರಿವಾದದ್ದು, ಇಲ್ಲ, ಇದೇ ವಾಕ್ಯಗಳನ್ನು ಬಳಸಿ’ ಕುವೆಂಪು,’ ತಮ್ಮ ಜಾಡನ್ನು ಕಂಡುಹಿಡಿದುಕೊಂಡಿದ್ದಾರೆ, ಎನ್ನುವ ಮಾತು ನಮ್ಮೆಲ್ಲರ ತಲೆಗೆ ಮುಟ್ಟಿತು ! * ಜಿ. ಎಸ್. ಶಿವರುದ್ರಪ್ಪನವರ ಕೃತಿಯೊಂದನ್ನು ’ಎದೆ ತುಂಬಿ ಹಾಡಿದೆನು ಅಂದು ನಾನು ”...ಕಾರ್ಯಕ್ರಮದ ಕೊನೆಯಲ್ಲಿ ಹಾಡಿದರು. ನಮಗೆ ಜಿ. ಎಸ್. ಎಸ್. ರವರ ಇನ್ನೂ ಅನೇಕ ಸುಂದರ ಕೃತಿಗಳನ್ನು ಕೇಳುವ ಆಶೆಯಿತ್ತು. ಉದಾಹರಣೆಗೆ, " ಎಲ್ಲೋ ಹುಡಿಕಿದೆ ಇಲ್ಲದ ದೇವರ ಕಲ್ಲುಮುಳ್ಳುಗಳ ಗುಡಿಯೊಳಗೆ, " ಇತ್ಯಾದಿ. *

ಹೆಚ್ಚಾಗಿ ಅವರು ಹಾಡಿದ ಕವನಗಳು, ಅವರ ಗುರುಗಳಾದ ಲಕ್ಷ್ಮೀ ನಾರಾಯಣ ಭಟ್ಟರ ಕೃತಿಗಳು ಇದ್ದವು. ’ನನ್ನ ಇನಿಯನ ನೆಲೆಬಲ್ಲೆ ಯೇನೆ, ಹೇಗೆತಿಳಿಯಲಿ ನಾನು ಹೇಳೆನೀನು ”... * ’ನೀ ಸಿಗದೆ ಬಾಳೊಂದು ಬಾಳೆ ಕೃಷ್ಣ ” ಮುಂದೆ, * ಎಲ್ಲಿ ಜಾರಿತು ಮನವು ಎಲ್ಲೆ ಮೀರಿತು... ಬಾಲಚಂದ್ರ ಹಾಡಿದ ’ಸುಬ್ರಾಯ ಚೊಕ್ಕಾಡಿ ” ಯವರ ಕವನಗಳು ಚೆನ್ನಾಗಿದ್ದವು. ..ಉದಾಹರಣೆಗೆ, * ’ಕಾಲಂದಿಗೆ ಘಲು ಘಲು ಎನೆ, ಗೆಳೆಯ ಹಾಡಿದೆನು,” ಅಬ್ಬಾ ! ಅದೇನು ಹೃದಯಸ್ಪರ್ಶಿಯಾಗಿತ್ತು, ಆ ರಚನೆ ಮತ್ತು ಕೃತಿ-ಹೊಮ್ಮಿಕೆ ! * ಎಚ್. ಎಸ್. ವೆಂಕಟೇಶ ಮೂರ್ತಿ, ಯವರ ರಚನೆಗಳು, ಅರ್ಥಪೂರ್ಣವಾಗಿದ್ದವು. * ಉದಾಹರಣೆಗೆ, " ಇಷ್ಟುಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ, ಅರಿತೆವೇನು ನಮ್ಮ ಅಂತರಾಳವಾ " ಈ ರಚನೆಯನ್ನು ಅದ್ಭುತವಾಗಿ ಹಾಡಿ ಶ್ರೋತೃಗಳ ಮನಸ್ಸನ್ನು ರಂಜಿಸಿದ ಗರಿಮೆ, ಬಾಲಚಂದ್ರರಿಗೆ ಸಲ್ಲಬೇಕು !

ಇದಕ್ಕೆ ಮೊದಲು, " ನಾಬೆಣ್ಣೆಯನ್ನು ಕದ್ದಿಲ್ಲವಮ್ಮ.." ವೆಂಬ ಹಿಂದಿಭಾಷೆಯಿಂದ ರೂಪಾಂತರಗೊಂಡ ಅತ್ಯಂತ ಸುಂದರಗೀತೆಯನ್ನು ಅಷ್ಟೇ ಭವ್ಯವಾಗಿ, ಪ್ರಸ್ತುತಿಮಾಡಿದರು, ಬಾಲಚಂದ್ರ ! * -ವ್ಯಾಸರಾಯರ ರಚನೆ. ’ನೀನಿಲ್ಲದೆ ನನಗೇನಿದೆ, ಮನಸೆಲ್ಲಾ ನಿನ್ನಲ್ಲೆ ನೆಲೆಯಾಗಿದೆ’ ಹೃದಯಸ್ಪರ್ಶಿಯಾದ ಗೀತೆ, ಚೆನ್ನಾಗಿ ಮೂಡಿಬಂತು. ಕುವೆಂಪು ರವರ, ಗುರುರಾಜ್ ಮಂಗಳೂರು ರವರು ಸಂಗೀತ ನೀಡಿದ ರಚನೆ. *’ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖಿ”.. ಬಹಳ ಸೊಗಸಾಗಿತ್ತು.

* ’ ಬಹುದೂರ ದೂರ ಹೋಗುವಬಾರ ಅಲ್ಲಿಹುದೆನ್ನ ಊರ ತೀರ.”..ಕುವೆಂಪುರವರ, ಈ ಹಾಡನ್ನು ಹಾಡಿ ಅದನ್ನು ಪ್ರಸಿದ್ಧಪಡಿಸಿದವರು, ಶ್ರೀ. ರಾಮನಾಥನ್ ರವರು... ಅವರ ಧಾಟಿ ಇಂದಿಗೂ ನಮ್ಮ ನೆನೆಪಿನಂಗಳದಲ್ಲಿವೆ. ಆದರೆ, ನಿನ್ನೆ ಹಾಡಿದ ಸಂಗೀತ ಬಾಲಚಂದ್ರರ ಶೈಲಿ, ನಿಜಕ್ಕೂ ಅದರ ವಿಸ್ತಾರವೆಂದು ಹೇಳಬಹುದು. ಚೆನ್ನಾಗಿತ್ತು. * ಸಂತ ಶಿಶುನಾಳ ಶರೀಫರ ರಚನೆ, " ನಾನಾ ನಾನಲ್ಲ..ಈ ಮಾನುಷ ಜನ್ಮದ.." ಅತ್ಯಂತ ಸುಂದರವಾಗಿ ಹೊರಬಂತು ! * ಪುರುಂದರದಾಸರ ಅಪರೂಪದ ಕೃತಿ, " ಇವನಾ ಹಿಡಕೊಂಡು ಹೋಗೆಲೋ ಜೋಗಿ " ಎನ್ನುವ ಕೀರ್ತನೆಯನ್ನು ಬಹಳ ಅಮೋಘವಾಗಿ ಹಾಡಿದರು. * ’ಯಶರಾಜ್ ಕೌರ್ ’ ರವರ, ’ ಮುಂಜಾನೆ ಮಸುಕಿನ ಮುಸುಕಿನೊಳಗೆ,.... ಹಾಡು ಚೆನ್ನಾಗಿತ್ತು.

ಅತ್ಯುತ್ತಮ ಕಂಠಶ್ರೀಯ ಜೊತೆಗೆ, ಪಕ್ಕವಾದ್ಯದವರನ್ನೂ ತಮ್ಮ ಸಂಗೀತಸುಧೆಯಲ್ಲಿ ಪಾಲುದಾರರನ್ನಾಗಿ ಒಯ್ಯುವ ಹೊಂದಾಣಿಕೆಯನ್ನು ಸಂಗೀತ ಬಾಲಚಂದ್ರರ ಹಾಡುಗಾರಿಕೆಯಲ್ಲಿ ನಾವು ಕಂಡೆವು. ಭಾವಗೀತೆಗಳೇ ಹಾಗೆ; ಕೆಲವೊಮ್ಮೆ ಕೆಲವು ಪ್ರಭಾವೀ ಭಾವಗೀತೆಗಳು, ಸಭಿಕರನ್ನು ಹುಚ್ಚೆಬ್ಬಿಸುವಲ್ಲಿ ಸಹಕಾರಿಯಾಗಿರುತ್ತವೆ. ದ್ವನಿಯ ಏರಿಳಿತ, ಹಾಗೂ ಗೀತೆಯನ್ನು ಅರ್ಥೈಸಿಕೊಂಡು ರಸಿಕರಿಗೂ ಅದನ್ನು ಹಂಚುವ ಕಲೆಯನ್ನು ಪಡೆದಿರುವ ಸಂಗೀತ ಬಾಲಚಂದ್ರ, ಗೀತೆಗಳನ್ನು ಹಾಡುವಾಗ, ಪದಗಳನ್ನು ಒತ್ತಿ-ಒತ್ತಿ, ಹೇಳಿ, ಅವುಗಳ ಆಂತರಿಕ ಭಾವವನ್ನು ಅವರ ಮಿಂಚುತ್ತಿದ್ದ ಕಣ್ಣುಗಳು ಸಭಿಕರಿಗೆ ರಸಾನುಭವವನ್ನು ಹೊರೆಹೊರೆಯಾಗಿ ತಂದವು ಎಂದರೆ, ಅದೇನು ಅತಿಶಯೋಕ್ತಿಯಲ್ಲ.

ವಿದುಷಿ ರತ್ನಮಾಲಾ ಪ್ರಕಾಶ್, ಎಚ್. ಆರ್. ಲೀಲಾವತಿ, ಮತ್ತು ವಾಣಿ ಜಯರಾಂ ಮುಂತಾದವರು, ಅಂತಹ ಕಲೆಯಲ್ಲಿ ನಿಷ್ಣಾತರು. ಸಂಗೀತ ಬಾಲಚಂದ್ರ ಅದೇ ದಾರಿಯಲ್ಲಿ ಮಿಂಚಿಸಾಗುತ್ತಿದ್ದಾರೆ. ಅವರಿಗೆ ಉಜ್ವಲ ಭವಿಷ್ಯವಿದೆ. ನಾವೆಲ್ಲಾ ಮುಂಬೈ ಕನ್ನಡಿಗರು, ಸಂಗೀತ ಬಾಲಚಂದ್ರರವರಿಗೆ ಯಶಸ್ಸನ್ನು ಕೋರೋಣ ! ೭೫ ವರ್ಷಗಳ ಹಬ್ಬವನ್ನು ಆಚರಿಸುತ್ತಿರುವ ’ಕರ್ನಾಟಕ ಸಂಘ ’ ದ ಕಟ್ಟಕಡೆಯದಿನದ ಪೂರ್ವ ಸಂಧ್ಯದಂದು ಆಯೋಜಿಸಿದ ಭಾವಗೀತೆಯ ಕಾರ್ಯಕ್ರಮ ಅತ್ಯಂತ ಸಮರ್ಪಕವಾಗಿಯೂ ಮನೋಜ್ಞವಾಗಿಯೂ ಇತ್ತು.

ವರ್ಷವಿಡೀ ಹಮ್ಮಿಕೊಂಡಿದ್ದ ವೈವಿಧ್ಯಪೂರ್ಣಕಾರ್ಯಕ್ರಮಗಳತ್ತ ಕಣ್ಣಾಡಿಸಿದರೆ, ನಿಧಾನವಾಗಿ ಮುಂದಿನ ವರ್ಷದವರೆಗೂ ಮೆಲುಕುಹಾಕುವಷ್ಟು ಅಚ್ಚುಕಟ್ಟಾಗಿದ್ದವು, ಹಾಗೂ ಅನುಕರಣೀಯವಾಗಿದ್ದವು ಸಹಿತ !

ಹಾ... ಮತ್ತೊಂದು ಸುಂದರ ದಿನವಿದೆ ! ಸಂಗೀತಾಭಿಲಾಶಿಗಳು, ಈ ದಿನವೂ ಅಂದರೆ, ೦೭-೦೬-೨೦೦೯ ರಂದು ಸಂಜೆ, ಮತ್ತೆ " ಕರ್ನಾಟಕ ಸಂಘದ ವಿಶ್ವೇಶ್ವರಯ್ಯ ಸಭಾಗೃಹ, " ಕ್ಕೆ ಬನ್ನಿ. ಇನ್ನೂ ಹೆಚ್ಚು ಸಂಖ್ಯೆಯಲ್ಲಿ ಕನ್ನಡಿಗರನ್ನು ಕರೆತನ್ನಿ, ಎನ್ನುವ ಕಳಕಳಿಯ ವಿನಂತಿಯೊಂದಿಗೆ ಸರ್ವರಿಗೂ ಸುಸ್ವಾಗತವನ್ನು ಬಯಸುತ್ತಿದ್ದಾರೆ, ಸಂಘದ ಆಡಳಿತ ವರ್ಗದವರು !

* ಮೇಲಿನ ಚಿತ್ರದಲ್ಲಿ ಶ್ರೀಮತಿ. ಸಂಗೀತ ಬಾಲಚಂದ್ರರವರಿಗೆ ಕರ್ನಾಟಕ ಸಂಘ, ಗೌರವಾರ್ಥವಾಗಿ ’ಸ್ಮೃತಿಚಿನ್ಹೆ ’ ಯನ್ನೂ ’ ಫಲ-ಪುಷ್ಪ ’ ಗಳನ್ನೂ ಕೊಟ್ಟು ಗೌರವಿಸಿತು. ಬದಿಯಲ್ಲಿ ಕರ್ನಾಟಕ ಸಂಘ, ಸಂಘದ ಅಧ್ಯಕ್ಷ, ಶ್ರೀ ಮನೋಹರ ಕೋರಿ, ಶ್ರೀ. ಶೇಖರ್. ಆರ್. ಶೆಟ್ಟಿ, ಶ್ರೀ ಮೂಳೂರು ಸಂಜೀವ ಕಾಂಚನ್, ಮತ್ತು ಕೊನೆಯದಾಗಿ, ಸಂಘದ ಗೌ. ಕಾರ್ಯದರ್ಶಿ, ಶ್ರೀ ಓಂದಾಸ ಕಣ್ಣಂಗಾರ್ ರವರು.

-ವೆಂಕಟೇಶ್.

ಲೇಖನ ವರ್ಗ (Category):