ಸದಾನಂದನ ‘ಅಳಿಲು ಸೇವೆ’ಯಿಂದಾಗಿ ಸತ್ತು ಬದುಕಿದ ಅಳಿಲು ಮರಿ.

To prevent automated spam submissions leave this field empty.

ಇತ್ತೀಚೆಗೆ ಧಾರವಾಡದಲ್ಲಿ ಲ್ಯಾರಿ ಬೇಕರ್ ಸೂಚಿತ ಮಾದರಿಯಲ್ಲಿ ಕಡಿಮೆ ವೆಚ್ಚದ, ಪರಿಸರ ಸ್ನೇಹಿ ಮನೆಗಳನ್ನು ಕಟ್ಟಲು ಕೆಲವರು ಮೊದಲು ಮಾಡುತ್ತಿದ್ದಾರೆ. ಮನೆ ಕಟ್ಟುವ ಖರ್ಚು ಕಡಿಮೆ ಎನ್ನುವ ಸಮಾಧಾನ ಒಂದೆಡೆಯಾದರೆ, ನೈಸರ್ಗಿಕ ಗಾಳಿ, ಬೆಳಕು, ಗಿಡ-ಮರ ಬಳ್ಳಿಗಳಿಗೆ ಆಶ್ರಯ ನೀಡುತ್ತ, ಪ್ರಾಣಿ- ಪಕ್ಷಿ ಸಂಕುಲಕ್ಕೂ ತನ್ನ ಸೂರಿನಡಿ ನೆಮ್ಮದಿ ಕಲ್ಪಿಸಿದೆವಲ್ಲ ಎಂಬ ನೆಮ್ಮದಿ ಅವರದ್ದು.

ಬೈಫ್ ನಿರ್ದೇಶಕರು ಹಾಗು ಸದ್ಯ ದೇಶಪಾಂಡೆ ಪ್ರತಿಷ್ಠಾನದ ನಿರ್ದೇಶಕ ಡಾ. ಪ್ರಕಾಶ ಭಟ್ಟರ ಮನೆ ‘ಬಯಲು’, ಆಕಾಶವಾಣಿಯ ಹಿರಿಯ ಕಾರ್ಯಕ್ರಮ ನಿರ್ವಾಹಕ ದಿವಾಕರ ಹೆಗಡೆ ಅವರ ಮನೆ ‘ಬದುಕು’ ಹಾಗೆಯೇ ಪ್ರೊ.ಗೋಪಾಲ ಕೃಷ್ಣ ಜೋಶಿ ಅವರ ‘ಶ್ರೀನಿವಾಸ’, ನಮ್ಮ ಡಾ.ಸಂಜೀವಣ್ಣ ಅವರ ತೆತ್ಸುಕೋ ಕೊರೋಯಾನಾಗಿ ಪ್ರೇರಿತ ತೊತ್ತೋಚಾನ್ ಮಾದರಿಯ ‘ಬಾಲ ಬಳಗ’ ಶಾಲೆ ಎಲ್ಲ ಕಡಿಮೆ ಖರ್ಚಿನ, ಪರಿಸರ ಸ್ನೇಹಿ, ಆಕರ್ಷಕ ಕಟ್ಟಡಗಳು.

ಮತ್ತೊಂದೆಡೆಗೆ ಅವಳಿ ನಗರದಲ್ಲಿ ಕಣ್ಣು ಕೋರೈಸುವ, ಲಕ್ಷಾಂತರ ರುಪಾಯಿ ಬೆಲೆ ಬಾಳುವ ಗಾಜುಗಳಿಂದ, ಪಾರದರ್ಶಕ ‘ಫೆಕೇಡ್’ ಹೊಂದಿದ ಪರಿಸರ ಅಸ್ನೇಹಿ ಕಟ್ಟಡಗಳು. ಮಾರುಕಟ್ಟೆ ತಜ್ಞರ ಪ್ರಕಾರ ಗ್ರಾಹಕರನ್ನು ಓಲೈಸಲು ಈ ಕಣ್ಣು ಕೋರೈಸುವಿಕೆ ಅನಿವಾರ್ಯವಂತೆ! ಆದರೆ, ಇದು ಶೈಕ್ಷಣಿಕ ಸಂಸ್ಥೆಗಳ ಕಟ್ಟಡಗಳಿಗೂ ಅನ್ವಯವಾಗಬೇಕೆ? ರಾಷ್ಟ್ರೀಯ ಶಿಕ್ಷಣ ನೀತಿಯ ಖಾದಿ ಶಾಲೆಗಳಲ್ಲಿ ಕಲಿತ ನನ್ನಂತಹವರಿಗೆ ಹೆಂಚಿನ ಶಾಲೆಗಳ ಮೇಲೆ ವಿಶೇಷ ಪ್ರೀತಿ. ಅಲ್ಲಿನ ಹಣ್ಣಿನ ಗಿಡಗಳು, ನೂರಾರು ಪಕ್ಷಿಗಳ ಕಲರವ, ಇಣಚಿಗಳ ಓಡಾಟ, ಅವುಗಳಿಂದ ನಮ್ಮ ಊಟದ ಡಬ್ಬಿ ಎಗರಿಸುವಿಕೆ, ಕಲ್ಲು ಛಡಿಗಳನ್ನೆತ್ತಿ ಬೆನ್ನಟ್ಟುವಿಕೆ, ರಬ್ಬರ್ ಕ್ಯಾಟಿ ಹಿಡಿದು ಗೆಳೆಯರೆಲ್ಲ ಸೇರಿ ಬೇಟೆಗೆ ಹೊರಡುತ್ತಿದ್ದ ರೀತಿ.. ನೆನಪುಗಳ ಜಾತ್ರೆಯ ಮೆರವಣಿಗೆ ನನ್ನ ಕಣ್ಣುಗಳ ಮುಂದೆ ಹರಿದಾಡುತ್ತದೆ. ರಾಮ ರಾವಣನನ್ನು ಕೊಂದು ಸೀತೆಯನ್ನು ರಕ್ಷಿಸಲು ವಾನರ ಸೇನೆಯೊಂದಿಗೆ ಹೊರಟು, (ಈಗಿನ ವಿವಾದಾತ್ಮಕ ಸೇತು ಸಮುದ್ರಂ ಯೋಜನೆ) ಶ್ರೀಲಂಕೆಗೆ ಸೇತುವೆ ಕಟ್ಟುವಾಗ ಅಳಿಲು ಮರಿ ತನ್ನ ಕೈಲಾದ ಅಳಿಲು ಸಹಾಯ ನೀಡಿತ್ತು ಎನ್ನುತ್ತದೆ ನಮ್ಮ ಪುರಾಣ. ಹಾಗಾಗಿ ಅಳಿಲಿನ ಭಕ್ತಿಗೆ ಮೆಚ್ಚಿ ಶ್ರೀ ರಾಮಚಂದ್ರ ಅಳಿಲಿನ ಬೆನ್ನಿನ ಮೇಲೆ ಮೂರು ಬೊಟ್ಟು ಕೈಯಾಡಿಸಿ ಪ್ರೀತಿ ಸ್ಫುರಿಸಿದ, ಹಾಗಾಗಿ ಅಳಿಲಿನ ಬೆನ್ನಿನ ಮೇಲೆ ಮೂರು ಬಿಳಿ ಗೆರೆಗಳಿವೆ ಎಂದು ಅಮ್ಮ ಹೇಳುತ್ತಿದ್ದ ಕಥೆಯೂ ನೆನಪಾಗುತ್ತಿತ್ತು.

ಈಗ ನಮ್ಮ ಅವಳಿ ನಗರಗಳಲ್ಲಿ ಕ್ರೀಡಾಂಗಣಗಳಿಲ್ಲದ ಶಾಲೆಗಳು ನೂರಾರಿವೆ. ಹಾಗೆಯೇ ಮಕ್ಕಳೆಲ್ಲ ಆಡುವುದನ್ನು ಬಿಟ್ಟಿದ್ದಾರೆ ಈಗ. ಕೇವಲ ಕಂಪ್ಯೂಟರ್ ಗೇಮ್ ಮಾತ್ರ ಅವರ ಪ್ರಾಧಾನ್ಯ. ಅದ್ಭುತ ಆಂತರಿಕ ಹಾಗು ಬಾಹ್ಯವಿನ್ಯಾಸದ ಕಣ್ಣುಕುಕ್ಕುವ ಕಟ್ಟಡದ ಶಾಲೆಗಳಿಗೆ ನನ್ನಲ್ಲಿ ಲೆಕ್ಕವಿಲ್ಲ. ಈ ಭೌತಿಕ ಅಭಿವೃದ್ಧಿ ನಮ್ಮ ಮಕ್ಕಳ ಆಂತರಿಕ ವ್ಯಕ್ತಿತ್ವವನ್ನು ವಿಶ್ವಮಾನವತ್ವದ ಅಭಿವೃದ್ಧಿ ಎಡೆಗೆ ಒಯ್ಯಬಲ್ಲುದೆ? ನಮ್ಮ ಮಣ್ಣಿನೊಂದಿಗೆ ಅವರ ಸಂಬಂಧ ಬಲಗೊಳ್ಳಬಲ್ಲುದೆ? ನಾನು ಹಿಂದೆ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಇಲಿ ಬಲಿಗೆ ಕೇಕ್ ಸಿಕ್ಕಿಸಿ ಗಿಡದ ಬುಡದಲ್ಲಿಟ್ಟು ಅಳಿಲಿನ ಮರಿ ಹಿಡಿದು, ಪಂಜರದಲ್ಲಿಟ್ಟು ಸಾಕುವ ಪ್ರಯತ್ನಕ್ಕೆ ಕೈ ಹಾಕಿದ್ದೆ. ಆದರೆ ಅಳಿಲು ಮರ ಇಳಿದು ಬರುವುದಕ್ಕಿಂತ ಮುಂಚೆ ನಮ್ಮ ಮನೆಯ ಬೆಕ್ಕಿನ ಮರಿ ಕೇಕ್ ರುಚಿ ನೋಡಲು ಹೋಗಿ ಮೂತಿ ಸಿಕ್ಕಿಸಿ ಕೊಂಡು ಒದ್ದಾಡಿತ್ತು. ಅಪ್ಪ ಅದನ್ನು ಬದುಕಿಸಲು ಹರ ಸಾಹಸ ಪಟ್ಟು, ಕೊನೆಗೂ ಬಲೆ ಬಿಡಿಸುತ್ತಲೇ ಅದು ಅವರನ್ನು ಕಚ್ಚಿ, ಕಿರುಚುತ್ತ ಓಡಿ ಹೋಗಿತ್ತು. ಆ ಮೇಲೆ ಅಪ್ಪ ನನ್ನ ಈ ಘನ ಕಾರ್ಯಕ್ಕೆ ಹಿಗ್ಗಾ-ಮುಗ್ಗಾ ಬಾರಿಸಿದ್ದರು. ನನ್ನ ಅಜ್ಜಿ ಬೆಕ್ಕಿಗೆ ಅರಿಷಿಣ ಎಣ್ಣಿ ಹಚ್ಚಿ ಅದರ ಗಂಟಲಿಗಾಗಿದ್ದ ದೊಡ್ಡ ಗಾಯ ಮಾಯಿಸಲು ಪಟ್ಟಿದ್ದ ಶ್ರಮ ಇಂದಿಗೂ ನನ್ನ ಕಣ್ಣ ಮುಂದಿದೆ.

ನಿನ್ನೆಯ ಕಥೆ ಕೇಳಿ: ಇಲ್ಲಿನ ಅಳಿಲಿನ ಮರಿಯೊಂದು ಗಿಡದ ಒಂದು ಟೊಂಗೆಯಿಂದ ಇನ್ನೊಂದು ಟೊಂಗೆಗೆ ಹಾರುತ್ತ, ಗಿಡದ ತುದಿಗಳಲ್ಲಿ ಕುಪ್ಪಳಿಸುತ್ತ, ಎಲೆಗಳ ಮೇಲೆ ಜೀಕುತ್ತ ಹಾರಿ ನಮ್ಮ ಕಟ್ಟಡದ ಅಲ್ಯುಮಿನಿಯಮ್ ಮತ್ತು ಗಾಜಿನ ಗೋಡೆಯನ್ನು ಹಿಡಿದುಕೊಳ್ಳಲು ನೆಗೆದಿದೆ. ಆದರೆ ಆಯ ತಪ್ಪಿ ನಾಲ್ಕನೇ ಅಂತಸ್ತಿನಿಂದ ತಲೆ ಕೆಳಗಾಗಿ ನೇರವಾಗಿ ನೆಲಕ್ಕೆ ಬಿದ್ದಿದೆ. ತಾಯಿ ಮತ್ತು ತಂದೆ ಅಳಿಲುಗಳು ಕೆಟ್ಟ ಧ್ವನಿ ತೆಗೆದು ಕಿರುಚಲು ಆರಂಭಿಸಿದವು. ಹೀಗೆ ಕಟ್ಟಡಗಳನ್ನು ಪರಿಸರ ಅಸ್ನೇಹಿಯಾಗಿ ರೂಪುಗೊಳಿಸುವ ಅಥವಾ ವಿನ್ಯಾಸಗೊಳಿಸುವ ಜರೂರತ್ತಾದರೂ ಏನು ನಮಗೆ?

ನಾನು ಹುಬ್ಬಳ್ಳಿಯಲ್ಲಿ ಕೆಲಸ ಮಾಡುವ ಮಹಾವಿದ್ಯಾಲಯದ ಎದುರು ಧೊಪ್ಪೆಂದು ಅಳಿಲಿನ ಮರಿಯೊಂದು ಆಯ ತಪ್ಪಿ ನಾಲ್ಕಾರು ಅಂತಸ್ತುಗಳ ಮೇಲಿಂದ ಟಾರ್ ರಸ್ತೆಯ ನೆಲಕ್ಕೆ ಬಿತ್ತು. ಬಿದ್ದ ರಭಸಕ್ಕೆ ಹಾಗು ಪೆಟ್ಟಿನಿಂದ ತತ್ತರಿಸಿದ್ದ ಮರಿ ಅಳಿಲು ನಡುಗುತ್ತ ದಾರಿಗಾಣದೇ ಬಿದ್ದ ಸ್ಥಳದಿಂದ ಕದಲದೇ ನಿಂತಿತು. ರಕ್ತ ಬಂತೇ ಎಂದು ಸುತ್ತಲಿದ್ದವರು ಗಮನಿಸುವಷ್ಟರಲ್ಲಿ ಅಲ್ಲಿಯೇ ಮಲಗಿದ್ದ ಬೀದಿ ನಾಯಿ ಅದನ್ನು ಕಬಳಿಸುವ ಹುನ್ನಾರದಲ್ಲಿ ಎಗರಿ ಬಂತು. ನಮ್ಮ ಸಿಬ್ಬಂದಿ ಸದಾನಂದ ಓಡಿ ಹೋಗಿ ಮರಿಯನ್ನು ಎತ್ತಿ ಕೊಂಡು ನಾಯಿ ಓಡಿಸಿದ. ಮಹಾವಿದ್ಯಾಲಯದ ಒಳಕ್ಕೆ ತಂದು ಇಣಚಿಯ ಮರಿಯ ಬೆನ್ನು ಸವರಿ ಉಪಚರಿಸಿದ. ನೀರು ಕುಡಿಸಿ ತುಸು ಸುಧಾರಿಸಿ ಕೊಳ್ಳುವಂತೆ ಮಾಡಿದ. ಪಾಪ ಕೃತಜ್ಞತೆ ದರ್ಶಿಸಲೋ ಏನೋ ಗಿಡದ ಬುಡದಲ್ಲಿ ಬಿಟ್ಟ ಮೇಲೂ ಅದು ಹೋಗದೇ ಸದಾನಂದನ ಬಳಿ ಓಡಿ ಬಂದು ಮತ್ತೆ ಎತ್ತಿ ಕೊಳ್ಳುವಂತೆ ಕೈ ಮುಗಿದ ಭಂಗಿಯಲ್ಲಿ ನಿಂತಿತ್ತು. ಆತ ಅದರ ತಲೆ ನೇವರಿಸಿ, ಭಾರವಾದ ಹೃದಯದೊಂದಿಗೆ ರಸ್ತೆ ದಾಟಿ ಈ ಬದಿಗೆ ಬಂದ.

ನಮ್ಮ ಅನುಕೂಲ, ಅವಶ್ಯಕತೆ ಪೂರ್ತಿಯಾದರೆ ಆಯಿತು? ನಮ ಹಕ್ಕು ಸಾಧಿಸಿದರೆ ಸಾಕಲ್ಲವೇ? ಪಾಪ ಅವುಗಳ ಪೈಕಿ ಯಾರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ನಮನ್ನು ಆಕ್ಷೇಪಿಸಬೇಕು? ಇದನ್ನೇ ‘HUMAN RIGHTS’ AS WELL AS ‘HUMAN WRONGS!’ ಎನ್ನಬಹುದಲ್ಲವೇ?

ನಾವು ಮುಟ್ಟಿದ ಮೇಲೆ ಆ ಅಳಿಲಿನ ತಂದೆ-ತಾಯಿಗಳು ಅದನ್ನು ಮುಟ್ಟಿಸಿಕೊಳ್ಳದೇ ಕಚ್ಚಿ ಕೊಂದು ಹಾಕುತ್ತವೇನೋ? ಎಂಬ ದುಗುಡ ನಮ್ಮಲ್ಲಿ ಮನೆ ಮಾಡಿತ್ತು. ಮಾನವರ ಬೆವರಿನ ವಾಸನೆ ಆ ಮರಿಯ ದೇಹದಿಂದ ಬಂದಿದ್ದೇ ಆದರೆ ಮರಿ ಅಳಿಲಿನ ಸಾವು ನಿಶ್ಚಿತ. ದೇವರ ದಯದಿಂದ ಹಾಗಾಗದಿರಲಿ ಎಂಬುದೇ ನಮ್ಮ ಹಾರೈಕೆ. ಆ ಸಂದರ್ಭದಲ್ಲಿ ಸದಾನಂದ ಗಿಡಗಳಿಗೆ ನೀರುಣಿಸುತ್ತಿದ್ದ, ಹಾಗಾಗಿ ಕೈ ಬೆವರಿನ ವಾಸನೆಯ ಬದಲು ನೀರಿತ್ತು ಎನ್ನುವುದೇ ಸಮಾಧಾನ. ಉಳಿದಿದ್ದು ಆ ಭಗವಂತನ ಇಚ್ಛೆ.

ನಮ್ಮ ಮಹಾವಿದ್ಯಾಲಯ ಇರುವ ಭೈಲಪ್ಪನವರ ನಗರದ ಮುಖ್ಯ ರಸ್ತೆಯುದ್ದಕ್ಕೂ ಅಕ್ಕ ಪಕ್ಕದಲ್ಲಿ ‘ದೇವರ ದಯೆ’ಯಿಂದ ಯಾವ ‘ದೆವ್ವದ ಕಣ್ಣಿ’ಗೂ ಬೀಳದೇ ದೊಡ್ಡ ಮರಗಳು ಇಂದಿಗೂ ಬದುಕುಳಿದಿವೆ ಎಂಬುದೇ ಸಮಾಧಾನದ ಸಂಗತಿ. ಬಾರಿ ಹಣ್ಣು, ಇಲಾಚಿ ಕಾಯಿ ಹಾಗು ಹುಣಿಸೆ ಹಣ್ಣಿನ ಗಿಡಗಳಿರುವುದರಿಂದ ಯಥೇಚ್ಛವಾಗಿ ಪಕ್ಷಿ ಹಾಗು ಅಳಿಲಿನ ಕುಟುಂಬಕ್ಕೆ ಸೇರಿದ ಪ್ರವರ್ಗದ ಪ್ರಾಣಿಗಳಿಗೆ ಈ ಗಿಡಗಳು ನೆರಳು ಹಾಗು ಆಹಾರಕ್ಕೆ ಆಸರೆಯಾಗಿವೆ. ಆದರೆ, ಕಳೆದ ಒಂದು ವಾರದಲ್ಲಿ ಹುಬ್ಬಳ್ಳಿಯಲ್ಲಿ ನೂರಾರು ಗಿಡಗಳು ಹೆಸ್ಕಾಂ, ಬಿ ಎಸ್ ಎನ್ ಎಲ್, ಪಿಡಬ್ಲೂಡಿ, ಎಚ್ ಡಿ ಎಂ ಸಿ, ಜಲ ಮಂಡಳಿ ಸೇರಿದಂತೆ ಸರಕಾರದ ವಿವಿಧ ಇಲಾಖೆಗಳ ರಿಪೇರಿ ಕಾರ್ಯಕ್ರಮ ಅಂಗವಾಗಿ ಧರಾಶಾಯಿಯಾಗಿವೆ. ಇನ್ನೂ ನೂರಾರು ಗಿಡಗಳ ಹನನ ಆಗಲಿದೆಯಂತೆ. ಗ್ರೀನ್ ಕಮಾಂಡೋಗಳು ಈ ಬೆಳವಣಿಗೆಗಳನ್ನು ಖಂಡಿಸಿ, ಹನನ ಕಾರ್ಯ ನಿಲ್ಲಿಸುವಂತೆ ಪ್ರತಿಭಟನೆಗೂ ಸಜ್ಜಾಗಿದ್ದಾರೆ. ಈ ಮರಗಳನ್ನು ಆಶ್ರಯಿಸಿರುವ ಪ್ರಾಣಿ-ಪಕ್ಷಿಗಳ ಪರಿಸ್ಥಿತಿಯಂತೂ ಆ ಭಗವಂತನಿಗೇ ಪ್ರೀತಿ.

ಆದರೂ ಪಾಪ ನಮ್ಮ ಪುಟ್ಟ ಅಳಿಲು ಜೀವ ಕಳೆದುಕೊಳ್ಳದೇ ಬದುಕುಳಿದಿದ್ದೇ ಸಮಾಧಾನದ ವಿಷಯ. ಹಾಗೆಯೇ ತನ್ನ ಸಮಯಪ್ರಜ್ಞೆ ದರ್ಶಿಸಿ ಮರಿ ಅಳಿಲನ್ನು ಬದುಕಿಸಿ ‘ಅಳಿಲು ಸೇವೆ’ ಮಾಡಿದ ನಮ್ಮ ಸದಾನಂದನಿಗೆ ಒಂದು ಪುಟ್ಟ THANKS ನನ್ನಿಂದ ಸಂಪದಿಗರ ಪರವಾಗಿ.. ಹೀಗೆ ಅವನ ಅನನ್ಯ ಮಾನವೀಯ ಕಾಳಜಿ ಮುಂದುವರೆಯಲಿ ಎಂಬ ಹಾರೈಕೆಯೊಂದಿಗೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

>>ಲ್ಯಾರಿ ಬೇಕರ್ ಸೂಚಿತ ಮಾದರಿಯಲ್ಲಿ
ಇದರ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳುವಾಸೆ. ಸಾಧ್ಯವಾದರೆ ಹೆಚ್ಚಿನ ಮಾಹಿತಿ ಚಿತ್ರದೊಂದಿಗೆ ಒದಗಿಸಬಹುದೇ?

>>ನಾವು ಮುಟ್ಟಿದ ಮೇಲೆ ಆ ಅಳಿಲಿನ ತಂದೆ-ತಾಯಿಗಳು ಅದನ್ನು ಮುಟ್ಟಿಸಿಕೊಳ್ಳದೇ ಕಚ್ಚಿ ಕೊಂದು ಹಾಕುತ್ತವೇನೋ?
ಇದು ನಂಬಿಕೆಯೇ ಅಥ್ವಾ ವೈಜ್ಞಾನಿಕ ಆಧಾರ/ಕಾರಣ ಏನಾದರೂ ಇದೆಯೆ.. ಯಾಕಂದ್ರೆ ಅಳಿಲಿಗೆ ಮನುಷ್ಯರ ಬೆವರಿನ ವಾಸನೆ ಹೇಗೆ ತಿಳಿಯುತ್ತದೆ.. ನಾನೂ ಚಿಕ್ಕವನಿದ್ದಾಗ ಇದೇ ತರ ಮರದ ಮೇಲಿಂದ ಬಿದ್ದ ಅಳಿಲನ್ನು ೧ ವಾರದವರೆಗೂ ಸಾಕಿದ್ದೆ. ಮನೆಯವರು ಬೈದದ್ದರಿಂದ ಬೇಜಾರಾಗಿ ಬಿಟ್ಟು ಬಂದೆ. ಮರದ ಮೇಲೆ ಬಿಟ್ಟು ಸ್ವಲ್ಪ ಹೊತ್ತಿಗೇ ಕೂಗಲು ಆರಂಭಿಸಿದ ಮರಿ ಅಳಿಲು, ದೊಡ್ಡ ಅಳಿಲೊಂದರ ಜೊತೆ ಹೋಯ್ತು.

ಸದಾನಂದ ಅವರಿಗೆ ನನ್ನ ಕಡೆಯಿಂದಲೂ ಒಂದು ಥ್ಯಾಂಕ್ಸ್

ಆತ್ಮೀಯ ಫಾಲಚಂದ್ರ ಅವರೆ,

ಲ್ಯಾರಿ ಬೇಕರ್ ಪ್ರತಿಪಾದಿಸಿದ ಮನೆಗಳ ಬಗ್ಗೆ ಪ್ರತ್ಯೇಕವಾಗಿವೇ ಬರೆಯುತ್ತೇನೆ. ಅದೂ ತಮಗಾಗಿ.
ಆದರೆ, ಅಳಿಲುಗಳು ಗುಬ್ಬಚ್ಚಿಯಂತೆ ತನ್ನ ಮರಿಗಳನ್ನು ಇತರರು (ಮಾನವರು ಬಹು ಮುಖ್ಯವಾಗಿ) ಮುಟ್ಟಿದರೆ ಮರಳಿ ತಮ್ಮ ಕುಲಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ನಾನು ಸಾಕಷ್ಟು ಬಾರಿ ಓದಿದ್ದೇನೆ. ಹಾಗೆಯೇ ನೀವು ತೇಜಸ್ವಿ ಅವರು ಬರೆದ ಅಣ್ಣನ ನೆನಪು ಓದಿ, ಅಲ್ಲಿಯೂ ಈ ಉಲ್ಲೇಖವಿದೆ.

ಆದರೆ ಆ ಘಟನೆ ನನ್ನ ಅನುಭವಕ್ಕೆ ಬಂದಿಲ್ಲ. ಈ ವಿಷಯ ಬಲ್ಲ ಸಹೃದಯದ ಸಂಪದಿಗರು ನಮಗೆ ಮಾರ್ಗದರ್ಶನ ಮಾಡಬಹುದೇನೋ? ನನಗೂ ತಿಳಿದುಕೊಳ್ಳುವ ತವಕವಿದೆ. ವೈಜ್ಞಾನಿಕ ವಿಶ್ಲೇಷಣೆಯಾದರೆ ಇನ್ನೂ ಒಳ್ಳೆಯದು.

ಪ್ರತಿಕ್ರಿಯೆಗೆ ಧನ್ಯವಾದ.

ಹರ್ಷವರ್ಧನ್,
>>ಲ್ಯಾರಿ ಬೇಕರ್ ಪ್ರತಿಪಾದಿಸಿದ ಮನೆಗಳ ಬಗ್ಗೆ ಪ್ರತ್ಯೇಕವಾಗಿವೇ ಬರೆಯುತ್ತೇನೆ. ಅದೂ ತಮಗಾಗಿ.
ತುಂಬಾ ಉಪಕಾರವಾದಂತೆ ಆಗುತ್ತೆ, ನನ್ನಿ

>>ಗುಬ್ಬಿ ಮರಿ
ಇದರ ಬಗ್ಗೆ ನಾನೂ ಚಿಕ್ಕಂದಿನಲ್ಲಿ ದೊಡ್ಡವರು ಹೇಳಿದ್ದು ಕೇಳಿದ್ದೆ, ಆದರೆ ನನ್ನನುಭವಕ್ಕೆ ಬಂದಿಲ್ಲ. ಆದ್ದರಿಂದ ನನ್ನ ಮನಸಿನಲ್ಲಿ ಇದಿನ್ನೂ ನಂಬಿಕೆಯಾಗೇ ಉಳಿದಿದೆ.

ನಾವು ಮುಟ್ಟಿದ ಮೇಲೆ ಆ ಅಳಿಲಿನ ತಂದೆ-ತಾಯಿಗಳು ಅದನ್ನು ಮುಟ್ಟಿಸಿಕೊಳ್ಳದೇ ಕಚ್ಚಿ ಕೊಂದು ಹಾಕುತ್ತವೇನೋ?

ಪಾಪ ಆಗಾಗದಿರಲಿ? ನಿಮ್ಮ ಸದಾನಂದನಿಗೆ ನಮ್ಮ ಧನ್ಯವಾದಗಳು..

ನಾವು ಮುಟ್ಟಿದ ಮೇಲೆ ಆ ಅಳಿಲಿನ ತಂದೆ-ತಾಯಿಗಳು ಅದನ್ನು ಮುಟ್ಟಿಸಿಕೊಳ್ಳದೇ ಕಚ್ಚಿ ಕೊಂದು ಹಾಕುತ್ತವೇನೋ?

ಪಾಪ ಆಗಾಗದಿರಲಿ? ನಿಮ್ಮ ಸದಾನಂದನಿಗೆ ನಮ್ಮ ಧನ್ಯವಾದಗಳು..

ಆತ್ಮೀಯ ಮಾಲತಿ ಅವರೆ,

ತಮ್ಮ ಪ್ರತಿಕ್ರಿಯೆ ಓದಿ ಖುಷಿಯಾಯಿತು. ನಿಮ್ಮ ಆಶಯದಂತೆಯೇ ಆಗಲಿ ಎಂಬ ಹಾರೈಕೆ ನನ್ನದು. ಸದಾನಂದನಿಗೆ ತಮ್ಮ ಪ್ರತಿಕ್ರಿಯೆ ತೋರಿಸಿ, ಧನ್ಯವಾದ ಅರ್ಪಿಸಿದ್ದೇನೆ.

ನಮಸ್ಕಾರ.

ಹರ್ಷವರ್ಧನ್ ಸರ್, ನಿಮ್ಮ ಲೇಖನ ಓದಿ ಸಂತೋಷದ ಜೊತೆಗೆ ದುಃಖವೂ ಆಗುತ್ತಿದೆ.
ಮೊದಲು ಅಳಿಲು ಮರಿಯನ್ನು ಉಳಿಸಿದ ಸದಾನಂದ್ ರವರಿಗೆ ನನ್ನ ವಂದನೆಗಳು.

ಗಾಜಿನ ಗೋಡೆಗಳಿಂದ ಜನರನ್ನು ಆಕರ್ಷಿಸುವುದು ಒತ್ತಟ್ಟಿಗಿರಲಿ ಸೂರ್ಯನ ಶಾಖವನ್ನು ಅದು ಹೆಚ್ಚು ಸೆಳೆಯುತ್ತದೆ ಎಂಬ ಸಾಮಾನ್ಯ ಜ್ಞಾನವು ನಮ್ಮ ಜನಗಳಿಗಿದ್ದಂತಿಲ್ಲ. ಬೆಂಗಳೂರಿಗೆ ಹೋದರೆ ಎಲ್ಲೆಲ್ಲಿಯೂ ಇಂತಹ ಕಟ್ಟಡಗಳೇ ಏಳುತ್ತಿರುವುದನ್ನು ನೋಡಿದರೆ ಬೇಸರವಾಗುತ್ತದೆ.

ಪರಿಸರಸ್ನೇಹಿ ಮನೆಗಳ ಬಗ್ಗೆ ನನಗೆ ತಿಳಿಯಬೇಕಿದೆ. ನಿಮ್ಮ ಲೇಖನಕ್ಕಾಗಿ ಕಾಯುತ್ತಿರುತ್ತೇನೆ.

ಆತ್ಮೀಯ ರೂಪ ಮಂಜುನಾಥ್ ಅವರೆ,

ದೂರದ ದುಬೈದಿಂದ ನಿಮ್ಮ ಪ್ರತಿಕ್ರಿಯೆ ಬಂದಿದ್ದು ನನಗೆ ಖುಷಿ ತಂದಿತು. ನನ್ನ ಅನುಭವಕ್ಕೆ ತಾವು ಸಹೃದಯತೆಯಿಂದ ಸ್ಪಂದಿಸಿದ್ದೀರಿ. ತಮ್ಮ ಅನುಭವವನ್ನು ಸಹ ಉಲ್ಲೇಖಿಸಿದ್ದೀರಿ. ಸಾಧ್ಯವಾದರೆ ದುಬೈನಲ್ಲಿನ ಇಂತಹ ಕಟ್ಟಡಗಳ ಬಗ್ಗೆ ಬರೆಯುವುದಕ್ಕಿಂತ, ಲಭ್ಯವಿರುವ ಕಿಂಚಿತ್ ನೀರು ಬಳಸಿ ರಸ್ತೆ ಬದಿಗೆ, ಉದ್ಯಾನಗಳಲ್ಲಿ ಹಸಿರು ಉಕ್ಕಿಸುತ್ತಿರುವ ಪ್ರಯತ್ನಗಳ ಬಗ್ಗೆ ಸಂಪದಿಗರಿಗಾಗಿ ಬರೆಯಿರಿ. ತಮ್ಮಿಂದ ನನಗೆ ಆ ದೇಶದ ಬಗ್ಗೆ ತಿಳಿಯುವ ಕುತೂಹಲವಿದೆ.

ಪೆತ್ರೋಲ್ ಹೇರಳವಾಗಿ ಸಿಕ್ಕರೂ ಕುಡಿಯುವ ನೀರಿಗೆ ತಾತ್ವಾರವಿರುವ ಆ ನಾಡಿನಲ್ಲಿ ಜನ ಹೇಗೆ ಜಲ ಪ್ರಬಂಧನೆ ಕೈಗೊಂಡಿದ್ದಾರೆ, ಕೃಷಿ ಕಾಯಕ ಹೇಗೆ ಮಾಡುತ್ತಾರೆ ಹಾಗೆಯೇ ಅಲ್ಲಲ್ಲಿ ಹಸಿರು ಉಕ್ಕಿಸುವ ಭಗೀರಥ ಪ್ರಯತ್ನಗಳ ಒಟ್ಟು ಫಲಗಳೇನು? ಎಂಬುದರ ಬಗ್ಗೆ ಬರೆಯಿರಿ. ತಮ್ಮ ಆಶಯವನ್ನು ಸದಾನಂದನಿಗೆ ತಿಳಿಸಿದ್ದೇನೆ.

ಧನ್ಯವಾದಗಳು.