ಭಾಷೆ ಮತ್ತು ಸಾಮಾಜಿಕ ವಾಸ್ತವ

To prevent automated spam submissions leave this field empty.

ಭಾಷೆ ಚಲನಶೀಲವಾಗಿದ್ದರಷ್ಟೇ ಉಳಿದುಕೊಳ್ಳುತ್ತದೆ. ಕನ್ನಡ ಉಳಿದು ಬೆಳೆಯಬೇಕಾದರೆ ಅದು ಚಲನಶೀಲವಾಗಿರಲೇ ಬೇಕಾಗುತ್ತದೆ. ಎಲ್ಲ ಜೀವಂತ ಭಾಷೆಗಳೂ ಹೀಗೆ ಸದಾ ಬದಲಾಗುತ್ತಿರುತ್ತವೆ. ಎಷ್ಟೋ ಪದಗಳು ಬಳಕೆಯಾಗದೆ ಕಾಣೆಯಾಗುವಂತೆಯೇ ಹೊಸ ಪದಗಳೂ ಸೇರಿಕೊಳ್ಳುತ್ತಿರುತ್ತವೆ. ಕೆಲವು ಪದಗಳು ಅರ್ಥವನ್ನೇ ಬದಲಾಯಿಸಿಕೊಂಡು ಉಳಿದುಕೊಂಡಿರುತ್ತವೆ. ಈ ಬದಲಾವಣೆಯನ್ನು ಪ್ರಜ್ಞಾಪೂರ್ವಕವಾಗಿ ತಡೆಯುಲು ಸಾಧ್ಯವೇ?

ಓಎಲ್ಎನ್ ಅವರು ಬರೆದ ಭಾಷೆಯಲ್ಲಿ ಸರಿ ಮತ್ತು ತಪ್ಪು ಲೇಖನದ ಸುತ್ತ ನಡೆಯುತ್ತಿರುವ ಚರ್ಚೆ ಭಾಷೆಯ ಸಹಜ ವಿಕಾಸಕ್ಕೆ ತಡೆಯೊಡ್ಡಬೇಕು ಎಂದು ಪ್ರತಿಪಾದಿಸುತ್ತಿದೆಯೇ ಎಂಬ ಅನುಮಾನ ನನ್ನದು.

ಓಎಲ್ಎನ್ ತಮ್ಮ ಲೇಖನದಲ್ಲಿ ಭಾಷೆಯೊಂದರ ವಿಕಾಸ ಮತ್ತು ಪದಗಳ ಪ್ರಮಾಣೀಕರಣಗಳ ವೇಳೆ ಪ್ರಭಾವ ಬೀರುವ ಚಾರಿತ್ರಿಕ, ಸಾಮಾಜಿಕ, ರಾಜಕೀಯ ಕಾರಣಗಳ ಬಗ್ಗೆ ಹೇಳಿದ್ದಾರೆ. ಈ ಅಂಶಗಳ ಬಗ್ಗೆ ಯೋಚಿಸಿದಯೇ ಇಡೀ ಚರ್ಚೆ ನಡೆಯುತ್ತಿರುವಂತೆ ಕಾಣಿಸುತ್ತದೆ. ಕನ್ನಡದಲ್ಲಿ ಅನ್ಯದೇಶ್ಯ ಶಬ್ದಗಳು ಇರಬೇಕೇ ಬೇಡವೇ ಎಂಬ ಚರ್ಚೆಯೇ ಈಗ ಅಪ್ರಸ್ತುತ. ಏಕೆಂದರೆ ಇವೆಲ್ಲವೂ ಭಾಷೆಯೊಂದರ ವಿಕಾಸದ ವಿವಿಧ ಹಂತದಲ್ಲಿ ವಿವಿಧ ಕಾರಣಗಳಿಂದ ಸೇರಿಕೊಂಡಿವೆ. ಇದಕ್ಕೆ ಯಾರ ಮೇಲಾದರೂ ಆರೋಪ ಹೊರಿಸುವುದರಿಂದ ಯಾವ ಪ್ರಯೋಜನವೂ ಇಲ್ಲ.

ಭಾಷೆಯನ್ನು ಬಳಸುವವರು ಪದಗಳ ಚರಿತ್ರೆಯನ್ನೋ, ವ್ಯುತ್ಪತ್ತಿಯನ್ನೋ ಗಮನಿಸಲು ಹೋಗುವುದಿಲ್ಲ. ತಾವು ಬಳಸುವ ಪದಗಳು ತಾವು ಉದ್ದೇಶಿಸಿದನ್ನು ಹೇಳುತ್ತವೆಯೋ ಇಲ್ಲವೋ ಎಂಬುದಷ್ಟೇ ಅವರ ಕಾಳಜಿ. ಸಂವಹನವಷ್ಟೇ ಅವರ ಗುರಿ. ಇದು ಬರೆಹ ಮತ್ತು ಆಡು ಮಾತುಗಳೆರಡರ ಸಂದರ್ಭದಲ್ಲಿಯೂ ನಿಜ. ಬರೆಹದ ಸಂದರ್ಭಕ್ಕೆ ಬಂದರೆ ಇಲ್ಲಿ ಔಪಚಾರಿಕತೆ ಸ್ವಲ್ಪ ಹೆಚ್ಚು. ಇದಕ್ಕೆ ಅನುಗುಣವಾದ ಒಂದು ಭಾಷೆ ರೂಪುಗೊಳ್ಳುತ್ತಾ ಹೋಗುತ್ತದೆ. ಬರೆಹದ ಸಂದರ್ಭದಲ್ಲಿ prosodyಗೆ ಅವಕಾಶವಿರುವುದಿಲ್ಲ. ಆದ್ದರಿಂದ ಇಲ್ಲಿ ಒಂದು ಮಟ್ಟದ ಔಪಚಾರಿಕತೆ ಅನಿವಾರ್ಯವೂ ಹೌದು.

ಅನ್ಯ ದೇಶ್ಯ ಅಥವಾ ಭಾಷಾ ಶಬ್ದಗಳು ಒಂದು ಭಾಷೆಯೊಳಗೆ ಸೇರುವುದಕ್ಕೆ ಇರುವ ಸಾಮಾನ್ಯ ಕಾರಣ ಹೊಸ ಪರಿಕಲ್ಪನೆಗಳು. ಉದಾಹರಣೆಗೆ ಸಾಫ್ಟ್ ವೇರ್ ಎಂಬ ಪದವನ್ನೇ ಗಮನಿಸಿ. ಈ ಪದದ ಮೂಲ ಭಾಷೆಯಲ್ಲಿ ಇದಕ್ಕೆ ಇರುವ ನಿಜವಾದ ಅರ್ಥಕ್ಕೂ ಅದು ಈಗ ಬಳಕೆಯಾಗುತ್ತಿರುವ ಅರ್ಥಕ್ಕೂ ವ್ಯತ್ಯಾಸವಿದೆ. ಕಂಪ್ಯೂಟರ್ ಯುಗದ ಹಿಂದೆ ಸಾಫ್ಟ್ ವೇರ್ ಗೆ ಈಗ ಇರುವ ಅರ್ಥವನ್ನು ಆರೋಪಿಸಲು ಸಾಧ್ಯವೇ ಇರಲಿಲ್ಲ. ಇದಕ್ಕೆ ಕನ್ನಡಿಗರು ಬಳಸಲು ಸಾಧ್ಯವಿರುವ ಒಂದು ಸರಿಯಾದ ಪದ ಹುಟ್ಟಿಕೊಳ್ಳುವುದಕ್ಕೆ ಹಲವು ವರ್ಷಗಳೇ ಬೇಕಾಯಿತು. 'ಲಘು ವರ' ಎಂಬಂಥ ಹಾಸ್ಯಾಸ್ಪದ ಪದಗಳ ಸೃಷ್ಟಿಯಾದವು. ಕೊನೆಗೊಮ್ಮೆ 'ತಂತ್ರಾಂಶ' ಎಂಬ ಪದ ದೊರೆಯಿತು.

ಹೀಗೆ ಹೊಸ ಪರಿಕಲ್ಪನೆಗಳನ್ನು ಒಂದು ಭಾಷಿಕ ಸಂಸ್ಕೃತಿ ಅರಗಿಸಿಕೊಂಡು ತನ್ನದೇ ಆದ ಪದಗಳನ್ನು ಸೃಷ್ಟಿಸಿಕೊಳ್ಳುತ್ತದೆ. ಈ ಸೃಷ್ಟಿಸಿಕೊಳ್ಳುವ ಕ್ರಿಯೆಗೆ ತನಗೆ ಸಾಧ್ಯವಿರುವ, ತನಗೆ ಹತ್ತಿರವಾಗಿರುವ ಸಂಸ್ಕೃತಿಗಳಿಂದ ಧ್ವನಿ ಸಂಜ್ಞೆಗಳನ್ನು ಎರವಲು ಪಡೆಯುತ್ತದೆ. ಇದು ಸಾಮುದಾಯಿಕ ಪ್ರಜ್ಞೆಯೊಳಗೆ ಸುಪ್ತವಾಗಿ ನಡೆಯುವ ಕ್ರಿಯೆ.

ಸಂಸ್ಕೃತ ಭಾರತೀಯ ಭಾಷೆಗಳಿಗೆಲ್ಲಾ ಮೂಲ ಎಂಬುದು ನಿಜವಲ್ಲ ಎಂಬುದನ್ನು ರೆವರೆಂಡ್ ಕಾಲ್ಡ್ ವೆಲ್ ಬಹಳ ಹಿಂದೆಯೇ ಸಾಬೀತು ಮಾಡಿದ್ದಾರೆ. ಸಂಸ್ಕೃತ ಪ್ರತಿನಿಧಿಸುವ ಭಾಷಾ ಕುಟುಂಬವೇ ಬೇರೆ. ಕನ್ನಡದಂಥ ಭಾಷೆಗಳಿರುವ ಭಾಷಾ ಕುಟುಂಬವೇ ಬೇರೆ. ಹಾಗೆಂದು ಕನ್ನಡ ಸಂಸ್ಕೃತದಿಂದ ಏನನ್ನೂ ಪಡೆದಿಲ್ಲ ಎಂದರ್ಥವಲ್ಲ. ಕನ್ನಡ ಸಂಸ್ಕೃತದಿಂದ ಪಡೆದುಕೊಂಡಂತೆಯೇ ಫಾರ್ಸಿ, ಅರಬಿ, ಪೋರ್ಚುಗಲ್, ಇಂಗ್ಲಿಷ್ ಭಾಷೆಗಳಿಂದಲೂ ಸಾಕಷ್ಟನ್ನು ಪಡೆದುಕೊಂಡಿದೆ. ಆಡಳಿತ ಸಂಬಂಧೀ ವಿಷಯಗಳಲ್ಲಿ ಬಳಕೆಯಾಗುವ ಹೆಚ್ಚಿನ ಪದಗಳು ಈ ಭಾಷೆಗಳಿಂದ ಬಂದಿವೆ ಎಂಬುದನ್ನಿಲ್ಲಿ ನೆನಪಿಸಬಹುದು. ಕಚೇರಿ, ಟಪಾಲು, ಎಕರೆ, ಗುಂಟೆ, ಹೆಕ್ಟೇರ್, ಸೆಂಟ್ಸ್, ಬಗೈರ್ ಹುಕುಂ, ಕುಮ್ಕಿ, ಖುಷ್ಕಿ, ಕರಾಬ್, ಜಮಾಬಂದಿ ಹೀಗೆ ಇಂಥ ಪದಗಳ ಪಟ್ಟಿಯನ್ನು ಬೆಳಸುತ್ತಾ ಹೋಗಬಹುದು.

ನಮ್ಮನ್ನು ಆಳಿದ ಬೇರೆ ಬೇರೆ ಸಂಸ್ಕೃತಿಯ ಜನರಿಂದ ದೊರೆತ ಪದಗಳು ಇವು. ಈಗ ಎಕರೆ, ಗುಂಟೆ, ಕಚೇರಿ, ಟಪಾಲಿನಂಥ ಪದಗಳು ನಮ್ಮವೇ ಆಗಿಬಿಟ್ಟಿವೆಯಲ್ಲ. ಈ ಪದಗಳ ಮೂಲ ಹುಡುಕುವುದು ಭಾಷಾಶಾಸ್ತ್ರಜ್ಞನೊಬ್ಬನಿಗೆ ಕುತೂಹಲ ಹುಟ್ಟಿಸುವು ಸಂಶೋಧನೆಯಾಗುತ್ತದೆ. ಆದರೆ ಭಾಷೆಯ ಸಾಮಾನ್ಯ ಬಳಕೆದಾರನಿಗೆ ಈ ಬಗೆಯ ಆಸಕ್ತಿಗಳಿರಬೇಕೆಂದೇನೂ ಇಲ್ಲ. ಅವನಿಗೆ/ಅವಳಿಗೆ ಬೇಕಿರುವುದು ತನ್ನ ಆ ಕ್ಷಣದ ಅಭಿವ್ಯಕ್ತಿಗೆ ಬೇಕಾದ ಪದಗಳು ಮಾತ್ರ.

ಇಂಗ್ಲಿಷ್ ಸೇರಿಸಿಕೊಂಡು ಮಾತನಾಡುವುದು, ಬರೆಯುವುದು ಮುಂತಾದುವುಗಳನ್ನೆಲ್ಲಾ ವರ್ತಮಾನದ ಸಾಮಾಜಿಕ ಸಂಬಂಧಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕು ಎನಿಸುತ್ತದೆ. ಮಧ್ಯಮ ವರ್ಗಕ್ಕೆ ಇಂಗ್ಲಿಷ್ ನ ಬಗ್ಗೆ ಇರುವ ಅತೀವ ಮೋಹವನ್ನು ಬದಿಗಿಟ್ಟು ಕನ್ನಡ ಮಾತನಾಡುವಾಗ ಅಥವಾ ಬರೆಯುವಾಗ ಇಂಗ್ಲಿಷ್ ಸೇರಿಸುವುದನ್ನು ವಿಶ್ಲೇಷಿಸಲು ಸಾಧ್ಯವೇ? ಈ ಮಧ್ಯಮ ವರ್ಗಕ್ಕೆ ಇಂಗ್ಲಿಷ್ ನತ್ತ ಇರುವ ಸೆಳೆತಕ್ಕೂ ವರ್ತಮಾನದ ಉದ್ಯೋಗ ಮಾರುಕಟ್ಟೆಗೂ ಇರುವ ಸಂಬಂಧವನ್ನು ನಿರಾಕರಿಸಲು ಸಾಧ್ಯವೇ? ಸಾಮಾಜಿಕ ವಾಸ್ತವಗಳನ್ನು ಮರೆತು ಭಾಷೆಯ ಶುದ್ಧಾಶುದ್ಧಿಯ ಚರ್ಚೆ ಸಾಧ್ಯವೇ?

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

[quote=ismail]
ಓಎಲ್ಎನ್ ಅವರು ಬರೆದ ಭಾಷೆಯಲ್ಲಿ ಸರಿ ಮತ್ತು ತಪ್ಪು ಲೇಖನದ ಸುತ್ತ ನಡೆಯುತ್ತಿರುವ ಚರ್ಚೆ ಭಾಷೆಯ ಸಹಜ ವಿಕಾಸಕ್ಕೆ ತಡೆಯೊಡ್ಡಬೇಕು ಎಂದು ಪ್ರತಿಪಾದಿಸುತ್ತಿದೆಯೇ ಎಂಬ ಅನುಮಾನ ನನ್ನದು.
[/quote]

ಖಂಡಿತವಾಗಿ. ಭಾಷೆಯನ್ನು ನಿಜವಾಗಿ ಬಳಸುವವರು ಹಾಗೂ ಭಾಷೆಯ "ನಿಯಂತ್ರಣ"ದ ಬಗ್ಗೆ ಮಾತನಾಡುವವರು ಬೇರೆ ಬೇರೆಯಾಗಿರುವುದರಿಂದಲೇ ಬಹುಶಃ ಈ ಸಮಸ್ಯೆ.

ಹಳ್ಳಿಯೊಂದರಲ್ಲಿ ಕುಳಿತು ತಮ್ಮ ಅಗತ್ಯಕ್ಕೆ ಕನ್ನಡ ಬಳಸುವವರು "ಇದು ಸಂಸ್ಕೃತ ಮೂಲದ ಪದ. ಇದನ್ನು ಬಳಸೋದು ಬೇಡ. ಇದು ಇಂಗ್ಲಿಷ್ ಮೂಲದ ಪದ - ಇದನ್ನು ಬಳಸೋದು ಬೇಡ" ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದೂ ಇಲ್ಲ.

ಇಲ್ಲಿ ಸಾಫ್ಟ್ವೇರ್ ಕೆಲಸ ಮಾಡಿಕೊಂಡು ದಿನವೆಲ್ಲ ಇಂಗ್ಲೀಷ್ ಬಳಸುವ ನಮ್ಮಂತಹ ಕೆಲವರಿಗೆ ಕನ್ನಡವನ್ನು "ಶುಚಿಗೊಳಿಸುವ" ಗೋಳು (ಮತ್ತು ಗೀಳು). ಎಂತಹ ವಿಪರ್ಯಾಸ!

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ನಾಡಿಗ್ ಹಾಗೂ ಇಸ್ಮೈಲ್ ಸೂಚಿಸಿದಂತೆ ಒಮ್ಮೊಮ್ಮೆ ನನಗೂ ಭಾಷೆಯವಿಕಾಸಕ್ಕೆ ಈ ತರಹದ ಅತಿ ಮಡಿವಂತಿಕೆ ಮುಳುವಾಗುತ್ತಿದೆಯೇನೊ ಅನ್ನಿಸುತ್ತಿದೆ.ಕನ್ನಡದಲ್ಲಿ ಹೊಸ ಹೊಸ 'ಪದಗುಛ್ಛಗಳು' ಬರಬೇಕು. 'ಅವು ಕನ್ನಡೀಕರಿಸಿದವುಗಳಾದರು' ಅಡ್ಡಿಯಿಲ್ಲ. ಆಧುನಿಕ ತಂತ್ರಜ್ಞಾನದಲ್ಲಿ (ನಮ್ಮ ಕಿಟ್ಟೆಲ್ ಶಬ್ದಕೊಶದ ಪದಗಳು ) ಎಲ್ಲಾ ಕನ್ನಡದ ಪದಗಳೆ ಬಳಸಲು ಸಾಧ್ಯವಾಗದಿರಬಹುದು. ಆ ಪದಗಳನ್ನು ನಾವೆ ಸಂದರ್ಭಾನುಸಾರ ತಯಾರಿಸಿಕೊಳ್ಳಬೇಕಾಗುತ್ತದೆ.

೧. 'ಸಂಪದ'ದಂತಹ ಪುಟದಲ್ಲಿ ಬರೆಯುವವರ ಸೂಕ್ಷ್ಮ ಪರಿಚಯ ನೊಡಿದರೆ, ಅವರೆಲ್ಲಾ ವೃತ್ತಿಪರ
ತಂತ್ರಜ್ಞರು. ಇನ್ನು ಕೆಲವರು ಕಛೇರಿಗಳಲ್ಲಿ ದುಡಿಯುವವರು. ತಮ್ಮ ಕೆಲಸದ ಜೊತೆಗೆ ಕನ್ನಡದಲ್ಲಿ
ಬರೆಯುವ ಗೀಳು ಬೆಳಸಿಕೊಂಡವರು. ಈ ಮಾಧ್ಯಮದಲ್ಲಿ ಸುಲಭವಾಗಿ ಬರೆದು ನಮ್ಮ
ಅಭಿಪ್ರಾಯಗಳನ್ನು ಕೂಡಲೇ ಮೂಡಿಸಬಹುದು ಎನ್ನುವ ಪ್ರಮುಖ ಕಾರಣದಿಂದ ಬರೆಯಲು ಸಾಹಸ
ಮಾಡಿದವರು. ನಿಯತಕಾಲಿಕಗಳಲ್ಲಿ ಒಂದು ಅಬಿಪ್ರಾಯ ತಿಳಿಸಲು ಅನಾನುಕೂಲತೆಯಿಂದ ಅದರ
ಸಹವಾಸ ಮಾಡದೆ ಸುಮ್ಮನಿರುವವರ ಸಂಖ್ಯೆ ಹೆಚ್ಚು.ಇಷ್ಟು ಬರೆಯಬಲ್ಲೆ ಎಂದು ಈಗ ನನಗೆ
ತಿಳಿಯುತ್ತಿದೆ.

ನನ್ನ ಇಂಗ್ಲಿಷ್ ಲೇಖನಗಳು ಹಲವಾರು ಬ್ಲಾಗ್ ಗಳಲ್ಲಿ ಪ್ರಕಟವಾಗಿವೆ. ಉದಾ:
ಸುಲೇಖ ಬ್ಲಾಗ್, ಹೊಳಲ್ಕೆರೆ ಗಣೇಶ,ಗಣೇಶ,ಸುಂಕದವರ್,'World of Cotton'
ಯಾಹು ೩೬೦ ಡಿಗ್ರಿ,ಇತ್ಯಾದಿ. ಒಂದು ಕನ್ನಡ ಬ್ಲಾಗ್-'ಸಿರಿಕನ್ನಡಂ ಗೆಲ್ಗೆ,

೨. ಅಲ್ಲಿ ಬರೆಯುವವರು ಹೆಚ್ಚಾಗಿ ನುರಿತ ಅಂಕಣಕಾರರು.(ನಮ್ಮ ಇಸ್ಮೈಲ್ ರವರ ತರಹ)

೩. ಬಹುಶಃ ನನ್ನ ಲೇಖನ 'ಉದಯವಾಣಿ'ಯಲ್ಲಿ ಪ್ರಕಟಗೊಳ್ಳುವ ಸಾಧ್ಯತೆಯನ್ನು ನಂಬಲಾರೆ !

೩. ಒಂದುವೇಳೆ ನುರಿತ ಬರಹಗಾರರೆಲ್ಲಾ ಈ ಕ್ಷೇತ್ರಕ್ಕೆ ಲಗ್ಗೆ ಹಾಕಿದರೆ ನನ್ನಂತಹವರ ಪಾಡು ದೇವರಿಗೆ
ಗೊತ್ತು !

ಮೇಲಿನ ಹಿನ್ನೆಲೆಯಲ್ಲಿ ನಾವೆಲ್ಲಾ ಬರೆಯುತ್ತೇವೆ. ವ್ಯಾಕರಣ, ಛಂದಸ್ಸು ನಮಗೂ ಗೊತ್ತು. ಆದರೆ ಆ ಕಡೆ ಹೆಚ್ಚು ಗಮನ ಹಾಯಿಸಲು ಸಮಯ ನಮಗೆ ಸಿಕ್ಕಿಲ್ಲ !

ಹಾಗೆ ನಾವು ಇದನ್ನು ನಿರಾಕರಿಸಿಯು ಇಲ್ಲ. ನನ್ನ ಸಾಕರ್ ಲೇಖನದಲ್ಲಿ, ಸಾಧ್ಯವಾದಷ್ಟು ಮಟ್ಟಿಗೆ ಕನ್ನಡದ ಪದಗಳನ್ನು ಹಾಕಿ ದುಡಿಸಿಕೊಂಡಿದ್ದೇನೆ. ಆದರೆ ಅದನ್ನೇ ಒಂದು ದೊಡ್ಡ 'ವ್ಯಾಕರಣದ ಕಾರ್ಯಾಗಾರ' ಮಾಡಿದರೆ ಭಾಷೆಯ ಬೆಳವಣಿಗೆ ಕುಂಠಿತವಾಗುತ್ತದೆ.

ಬೀ.ಎಮ್.ಶ್ರಿ. ರವರು ದಶಕಗಳ ಹಿಂದೆಯೆ ಇದನ್ನು ಗಮನಿಸಿ ಬರೆದ ಒಂದು ಪದ್ಯ ತುಂಬಾಚೆನ್ನಾಗಿತ್ತು.
ಸರಿಯಾಗಿ ನೆನಪಿಲ್ಲ.

'ಇವಳ ತೊಡಿಗೆ ಅವಳಿಗಿಟ್ಟು,ಅವಳ ತೊಡಿಗೆ ಇವಳಿಗಿಟ್ಟು ಸಂಭ್ರಮಿಸಿದೆ.....ಹಾಡಿದೆ'...ಅಂತ. ಇದು ಕನ್ನಡ ಮತ್ತು ಸಂಸ್ಕೃತಗಳ ಪದಗಳ ಮಿಲನ ಬೇಡ; ಪೂರ್ತಿ ಕನ್ನಡ ದಲ್ಲಿಯೆ ಬರೆಯಬೇಕು ಎಂದು ಮಾಡಿದ 'ಬೃಹತ್ ಚರ್ಚೆ'ಯಲ್ಲಿ ನುಡಿದ ಅವರ ಮಾತುಗಳು ಎಂದೂ ಮರೆಯಲಾರದಂತಿವೆ ! ಇಂಗ್ಲಿಷ್ ಪ್ರೊಫೆಸರ್ ಆಗಿದ್ದ ಅವರು, ಕನ್ನಡಕ್ಕಾಗಿ ದುಡಿದರು. ಅವರ ಕೊಡುಗೆ ಅಪಾರ.

'ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡುದು ನಡೆಸೆನ್ನನು'. ಅವರ ಆಂಗ್ಲ ಕವಿತೆಯ ಸುಂದರ ಅನುವಾದ ಮರೆಯಲು ಸಾಧ್ಯವೇ ?

> 'ಲಘು ವರ' ಎಂಬಂಥ ಹಾಸ್ಯಾಸ್ಪದ ಪದಗಳ ಸೃಷ್ಟಿಯಾದವು. ಕೊನೆಗೊಮ್ಮೆ 'ತಂತ್ರಾಂಶ' ಎಂಬ ಪದ ದೊರೆಯಿತು.

ದಯವಿಟ್ಟು ನನ್ನ ಈ ಲೇಖನ ಓದಿ - [http://vishvakannada.com/node/71|http://vishvakannada.com/node/71]. ಅದರಲ್ಲಿ ನಾನು ವಿವರವಾಗಿ ಈ ಪದಗಳ ಬಗ್ಗೆ ಬರೆದಿದ್ದೇನೆ. ತಂತ್ರಾಂಶ ಪದ ಮೊದಲೇ ಇತ್ತು. ಅದು ಗೊತ್ತಿಲ್ಲದ ವಾರಪತ್ರಿಕೆಯ ಸಂಪಾದಕರೊಬ್ಬರು ಸ್ಪರ್ಧೆ ನಡೆಸಿ ಸೃಷ್ಟಿಸಿದ ಪದ ಲಘುವರ.

ಅಂದಹಾಗೆ, ನಿಮ್ಮ ಮಾತುಗಳಿಗೆ ನನ್ನ ಸಹಮತವಿದೆ.

ಸಿಗೋಣ,
ಪವನಜ
-----------
[http://www.vishvakannada.com/|Vishva Kannada]
Think globally, Act locally

ಕಂಪ್ಯೂಟರ್ ಬಳಸುವರು ಜಾಸ್ತಿ ಯಾಗುತ್ತ್ತಿರುವುದು ನಿಜವಾದರು, ಅವರಿಂಡ ಕನ್ನಡ ಕೆಟ್ಟಿದೆ ಎನ್ನುವ ಅಪಾದನೆ ಸಲ್ಲದು, ಈ ನಿಟ್ಟಿನಲ್ಲಿ ಡಾ|ಪವನಜರವರೆ ಕನ್ನಡ ಪದಗಳನ್ನು ನಮಗೆ ಕೋಡುತ್ತಿದ್ದಿರಿ ಧನ್ಯ್ವವಾದಗಳು, ಆದರೆ ಕಛೇರಿಯನ್ನು ಕಚೇರಿಯಾಗಿರುವುದರ ಬಗ್ಗೆ ತಮ್ಮ ಅಭಿಪ್ರಾಯವೇನು, ಕಂಪ್ಯೂಟರ್ ಬಳಸುವ ಪ್ರತಿಯೋಬ್ಬರು ಅದನ್ನು ಸ್ವಲ್ಪ ಅರ್ಥಮಾಡಿಕೊಂಡು ಬಳಸಿದರೆ ಇನ್ನು ಹೆಚ್ಚು ಅರ್ಥ ಪೂರ್ಣವಾಗುವುದರಲ್ಲಿ ಸಂದೇಹವೇ ಇಲ್ಲ, ಈ ನಿಟ್ಟಿನಲ್ಲಿ ತಮ್ಮ ಪ್ರಯತ್ನ ಶ್ಲಾಘ್ಹನೀಯ ಮತ್ತೊಮೆ ಧನ್ಯವಾದಗಳು

ಇಸ್ಮಾಯಿಲ್ ಅವರು ಹೇಳುವುದು ಸರಿಯಾಗಿಯೇ ಇದೆ. ಪರ ಭಾಷಾ ಪದಗಳು ಹಲವು ಕಾರಣಗಳಿಗೆ ನಮ್ಮ ಭಾಷಾ ವಲಯವನ್ನು ಪ್ರವೇಶಿಸುತ್ತವೆ, ಸ್ವೀಕರಿಸಲ್ಪಡುತ್ತವೆ ಹಾಗೂ ನಮ್ಮವೇ ಆಗುತ್ತವೆ. (ಅದರಲ್ಲೊಂದು ಕಾರಣ ನಮ್ಮನ್ನು ಆಳುತ್ತಿದ್ದವರು ತಮ್ಮ ಭಾಷೆಯನ್ನೇ ಆಳಲು ಬಳಸಿದುದು.) ಇಂಗ್ಲೀಷರೇನು ನಮ್ಮನ್ನು ಇಂದು ಆಳುತ್ತಿಲ್ಲ. ಆದಾಗ್ಯೂ ಆ ಭಾಷೆಯ ಪ್ರತಿಷ್ಟೆ ನಮ್ಮನಿನ್ನೂ ಆಳುತ್ತಿದೆ.

ಇತ್ತೀಚೆಗೆ ನಾನು ಅನುವಾದದಲ್ಲಿ ಬಳಸಲು spindle, frit ಪದಗಳಿಗೆ ಅರ್ಥ/ಪರ್ಯಾಯ ಹುಡುಕುತ್ತಿದ್ದೆ. ಸಿಕ್ಕ ಪರ್ಯಾಯಗಳು ಕದಿರು (ಕದಿರಣಿಗೆ), ಕಾಚಲು. ಇವೆರಡೂ ಪದಗಳು ನೇಕಾರಿಕೆ ಹಾಗೂ ಲೋಹ ತಯಾರಿಕೆಯಲ್ಲಿ ಬಳಸುವ ಪದಗಳು. ನಮ್ಮ ಜನರ ಮಧ್ಯದಲ್ಲಿ (ಕರಕುಶಲಗಾರರ, ರೈತರ ಮುಂತಾದ) ಹಲವು ಇಂತಹ ಪದಗಳು ಬಳಕೆಗೆ (ಪಾರಿಭಾಷಿಕ ಪದಗಳಾಗಿ) ಕಾಯುತ್ತಿರ ಬಹುದು ಎಂಬ ಅನುಮಾನ ನನ್ನನ್ನು ಕಾಡುತ್ತಿದೆ. ಇಂಗ್ಲೀಷ್ ಇತಿಹಾಸ ಪುಸ್ತಕದಲ್ಲಿ Engilish bond ಎಂದು ಕರೆಯಲ್ಪಡುವ ಇಟ್ಟಿಗೆಗಳನ್ನು ಪೇರಿಸಿ ಕಟ್ಟುವ ಪದ್ಧತಿಗೆ ನಮ್ಮಲ್ಲಿರುವ ಹೆಸರು ಉದ್ದಿಟ್ಟಿಗೆ (ನಾನಾಗಲೆ ಇಂಗ್ಲೀಷ್ ಬಾಂಡ್ ಗೆ ಪರ್ಯಾಯ ಸಿಗುವುದಿಲ್ಲವೆಂದೇ ನಿರ್ದರಿಸಿ ಮುಂದುವರೆದಿದ್ದೆ). ವಾಸ್ತವದಲ್ಲಿ ಭಾರತದಾಧ್ಯಂತ ಓದಲ್ಪಡ ಬೇಕೆಂದು ಇಂಗ್ಲೀಷ್ ನಲ್ಲಿ ಪುಸ್ತಕಗಳನ್ನು ಬರೆಯುವವರು ಆ ಭಾಷೆಯ ಮೋಡಿಯನ್ನು ಆಹ್ವಾಸಿಕೊಳ್ಳುತ್ತಾರೆಂದೇ ಭಾಸವಾಗುತ್ತದೆ.(ಈ ಗುಂಪಿಗೆ ಜ್ಞಾನಕ್ಕಾಗಿ ಓದುವ ಕೆಲವರನ್ನು ಸೇರಿಸ ಬೇಕಾದ ಅಗತ್ಯವಿದೆಯೆಂದು ಕಾಣುತ್ತದೆ)  ಇದರ ಪರಿಣಾಮಗಳು ಹಲವು ಎಂದು ನಾವು ಗುರುತಿಸುವುದು ಅಗತ್ಯವೆಂದೇ ಭಾಸವಾಗುತ್ತದೆ.

 `ಈ ಮಧ್ಯಮ ವರ್ಗಕ್ಕೆ ಇಂಗ್ಲಿಷ್ ನತ್ತ ಇರುವ ಸೆಳೆತಕ್ಕೂ ವರ್ತಮಾನದ ಉದ್ಯೋಗ ಮಾರುಕಟ್ಟೆಗೂ ಇರುವ ಸಂಬಂಧವನ್ನು ನಿರಾಕರಿಸಲು ಸಾಧ್ಯವೇ?` ಎಂಬ ಇಸ್ಮಾಯಿಲ್ ಅವರ ಪ್ರಶ್ನೆ ಪ್ರಸ್ತುತವಾಗುವುದು ಈ ಹಿನ್ನೆಲೆಯಲ್ಲಿಯೇ. ಇಂದಿಗೂ ನಮ್ಮ ಕೇಂದ್ರದ ಸರಕಾರಿ ಕಚೇರಿಗಳು ಇಂಗ್ಲೀಷನ್ನೇ ಬಳುಸುತ್ತಿವೆ. ಇಲ್ಲವೆ ಹಿಂದಿಯನ್ನು. ಆಯಾ ಪ್ರಾಂತೀಯ ಕ್ಷೇತ್ರದಲ್ಲಿ ಆಯಾ ಪ್ರಾಂತೀಯ ಭಾಷೆಯನ್ನು ಬಳಸಲು ಸಾಧ್ಯವೆ?

ಈ ಪ್ರಶ್ನೆಯನ್ನು ನಾವು ಕೇಳಲೂ ತಯಾರಿಲ್ಲವೆಂದು ಕಾಣುತ್ತದೆ. (ಅದು ಅಸಾಧ್ಯವೆಂದೇ ಮಧ್ಯಮ ವರ್ಗ ಭಾವಿಸಿದೆ ಎಂದು ನನ್ನ ಅನಿಸಿಕೆ.) ಹಿಂದೆ ಕೇಂದ್ರದಲ್ಲಿ ಆಡಳಿತ ಹಿಡಿದಿದ್ದ  ಎನ್ ಡಿ ಎ ಸರಕಾರ ಹಾಗೂ ಇಂದಿನ ಯುಪಿಎ ಸರಕಾರಗಳೆರಡೂ ಕನ್ನಡನವನ್ನೂ ಒಳಗೊಂಡು ಎಲ್ಲ ಶೆಡ್ಯೂಲ್ ಎಂಟರಲ್ಲಿ ಸೇರಿಸಲ್ಪಟ್ಟ ಭಾಷೆಗಳಿಗೂ ರಾಷ್ಟ್ರ ಭಾಷೆ ಸ್ಥಾನಮಾನ ಕೊಡುವ ಸಾಧ್ಯತೆ ಪರಿಶೀಲಿಸಲು ಸಮತಿಯೊಂದನ್ನು ರಚಿಸುವುದಾಗಿ ತಮ್ಮ ಅಜೆಂಡಾದಲ್ಲಿ ಭರವಸೆ ಕೊಟ್ಟಿವೆ (ಅಥವಾ ಕೊಟ್ಟಿದ್ದವು). ಯುಪಿಎ ಈ ಅಶ್ವಾಸನೆಯ ಎರಡನೆಯ ಭಾಗವಾಗಿ ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ಕೊಡುವ ಪ್ರಸ್ತಾಪ ಮಾಡಿತ್ತು. ಅಂತಹ ಪರಿಶೀಲನಾ ಸಮತಿ ರಚಿಸಲು ಎನ್ ಡಿ ಎ ಸರಕಾರಕ್ಕೆ ಸಾಧ್ಯವಾಗಲಿಲ್ಲ, ಇಂದಿನ ಯುಪಿಎ ಸರಕಾರ ಈ ಬಗೆಗೆ ಮಾತನಾಡಲೂ ತಯಾರಿಲ್ಲ. ಕನ್ನಡಕ್ಕೂ ಶಾಸ್ತ್ರೀಯ ಸ್ಥಾನಮಾನ ಕೊಡುವಂತೆ ಕೇಳುತ್ತಿರುವ ಬುದ್ಧಿಜೀವಿ ವರ್ಗ ಈ ಅಶ್ವಾಸನೆಯ ಬಗೆಗೆ ಬೇಡಿಕೆ ಮಂಡಿಸುವುದಿರಲಿ (ಸಾಧ್ಯತೆಯ ಬಗೆಗೆ ಅಧ್ಯಯನ ಸಮಿತಿಯ ಸ್ವರೂಪ ಸಹ ಬೇಡಿಕೆ ಈಡೇರುತ್ತದೆಯೇ ಇಲ್ಲವೆ ಎಂಬುದನ್ನು ನಿರ್ಧರಿಸುತ್ತದೆ) ಈ ಬಗೆಗೆ ಚರ್ಚೆಗೂ ತಯಾರಿಲ್ಲವೆಂದು ಕಾಣುತ್ತದೆ.

 ನಾವು ಯಾವುದಕ್ಕೆ ಪ್ರಾಮುಖ್ಯತೆ ಕೊಡುತ್ತೇವೆ, ಯಾವುದರ ಬಗೆಗೆ ದಿವ್ಯ ಮೌನ ವಹಿಸುತ್ತೇವೆ ಎನ್ನುವುದು ಹೇಗೆ ನಿರ್ಧರಿಸಲ್ಪಡುತ್ತದೆ? (ಈ ಸಾಧ್ಯಸಾಧ್ಯತೆಯ ಗೃಹೀತದ ಆಧಾರದ ಮೇಲೆ ಅಲ್ಲವೆ?) ಇದು ಕನ್ನಡದ ಸಮಸ್ಯೆಯೊಂದೇ ಆಗಿ ನನಗೆ ಕಾಣುತ್ತಿಲ್ಲ, ಎಲ್ಲ ಭಾರತೀಯ ಭಾಷೆಗಳ ಸಮಸ್ಯೆಯೂ ಹೌದು. ಬೇರೆ ಭಾಷೆಯವರು ಬೇಡಿಕೆ ಮುಂದಿಟ್ಟ ನಂತರವಾದರೂ ನಮ್ಮವರೂ ಈ ಬಗೆಗೆ ಮಾತನಾಡಲು ಪ್ರಾರಂಭಿಸುತ್ತಾರೆ ಎಂದು ಭಾವಿಸೋಣವೆ?  

[quote]

ನಮ್ಮ ಜನರ ಮಧ್ಯದಲ್ಲಿ (ಕರಕುಶಲಗಾರರ, ರೈತರ ಮುಂತಾದ) ಹಲವು ಇಂತಹ ಪದಗಳು ಬಳಕೆಗೆ (ಪಾರಿಭಾಷಿಕ ಪದಗಳಾಗಿ) ಕಾಯುತ್ತಿರ ಬಹುದು ಎಂಬ ಅನುಮಾನ ನನ್ನನ್ನು ಕಾಡುತ್ತಿದೆ.

[/quote]

ಆ ಅನುಮಾನವೇ ಬೇಡ ಪ್ರದೀಪ್, ಈ 'ಶಿಷ್ಟ' ಕನ್ನಡ ಜನಕನ್ನಡವಾಗಬೇಕಿದೆ.

ಇವೊತ್ತಿನ ಪತ್ತಿಗೆಯಲ್ಲಿ ರವಿ ಬೆಳಗೆರೆಯವರ ಹೇಳಿಕೆಯಲ್ಲಿ 'ಪರಿತ್ಯಕ್ತ ಪ್ರೇಮದ ಸ್ವಗತ ಮೀಮಾಂಸೆ' ಅನ್ನುವ ಸಾಲೊಂದು ಇದೆ, ಇಲ್ಲೆಲ್ಲ ಸಂಸ್ಕ್ರುತ ಮಲ್ಲರು ಸೇರಿದ್ದೀರಿ, ಅದಕ್ಕೆ ಹಾಗಂದ್ರೆ ಏನು ಅಂತ ತುಸು ಹೇಳುತ್ತೀರ?

[quote=ಸಂಗನಗೌಡ]ಇಲ್ಲೆಲ್ಲ ಸಂಸ್ಕ್ರುತ ಮಲ್ಲರು ಸೇರಿದ್ದೀರಿ[/quote]

ಅತಿರೇಕದ ಮಾತು ಇಲ್ಲಿ ಬೇಡ. ಹಾಗೆ ಮಾಡುವುದೇ ಸೈ ಎನ್ನೋದಾದರೆ [:http://sampada.net/rules_and_regulations|ಕಾಮೆಂಟ್ ಮಾಡರೇಟ್ ಮಾಡಲಾಗುವುದು, ಖಾತೆ ಅಳಿಸಲಾಗುವುದು]. ಸದಸ್ಯರ ಗಮನದಲ್ಲಿರಲಿ.

ಸಮುದಾಯದಲ್ಲಿನ ಜವಾಬ್ದಾರಿಯರಿತು ಬರೆಯಿರಿ.

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ಪ್ರಾಯಶಃ ಸಂಗನಗೌಡರು ಒಂದಿಷ್ಟು ಸಲಿಗೆಯಿಂದ ಹೀಗೆಂದಿರಲಿಕ್ಕೂ ಸಾಕು. ಅಂದ ಹಾಗೆ ಸಂಸ್ಕ್ರುತ ಮಲ್ಲರು ಯಾರೂ ಇಲ್ಲಿಲ್ಲ. ಸಂಸ್ಕೃತ ಮಲ್ಲರೊಂದಿಷ್ಟು ಜನ ಇದ್ದಾರೆ. ನಾನು ಅವರ ಲಿಸ್ಟಿನಲ್ಲಿಯೂ ಸೇರಿಕೊಳ್ಳುವಷ್ಟು ಜಾಣನಲ್ಲದ್ದರಿಂದ ಕೇವಲ ಅವರ ಸಂವಾದವನ್ನು ಗಮನಿಸಿ ಖುಷಿ ಪಡುತ್ತಾ ಇರ್ತೇನೆ.

ನಾಡಿಗರ ಪಾಯಿಂಟೂ ಸರಿಯೇ.

ಎನಗಿಂತ ಕಿರಿಯರಿಲ್ಲ

ಎನಗಿಂತ ಕಿರಿಯರಿಲ್ಲ

ಈಗಿನ ಕನ್ನಡ news paper ಗಳನ್ನು ಓದಿ ತಿಳಿದುಕೊಳ್ಳಬಲ್ಲವರೆಲ್ಲರೂ ಸಂಸ್ಕ್ರುತ ಮಲ್ಲರೇ, ಅದಕ್ಕೆ ಹಾಗೆಂದೆ, ಉಳಿದದ್ದು ತಮ್ಮ ಚಿತ್ತ.

ಇಂಗ್ಲೀಶಿನ good morning ಗೆ ಕನ್ನಡದಲ್ಲಿ 'ಶುಭೋದಯ' ಅಂತಾರೆ ಅನ್ನುವದು ಎಲ್ಲರಿಗೂ ಗೊತ್ತು. ಇದನ್ನೇ 'ಹೊಂಬೆಳಗು' ಅನ್ನಬಹುದು. ಇದು ಸರಳವಾಗಿ ಹೇಳಬಹುದಾದದ್ದು ಅಲ್ಲದೇ 'ಗುಡ್' ಅತವಾ 'ಶುಭ' ಎರಡಕ್ಕಿಂತಲೂ 'ಬಂಗಾರದಂತ ಬೆಳಗು' ಹೆಚ್ಚಿನ ಒಳ್ಳೆಯ ಅನಿಸಿಕೆ ನೀಡುತ್ತದೆ. ಹಾಗೆ 'ಶುಭರಾತ್ರಿ'ಗೆ 'ಚನ್ನಿರುಳು'.

ಇಂದಿನ ವಿಜಯಕರ್ನಾಟಕದಲ್ಲಿ ಮೊದಲ ಪುಟದಲ್ಲಿ ಈ ಸಾಲುಗಳಿವೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 'ಮೀಸಲು' 'ಕಲ್ಪಿಸು'ವ ವಿಧೇಯಕಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ 'ನೀಡಿರುವದನ್ನು' ದುರಾದೃಷ್ಟಕರ 'ಎಂದು' 'ಬನ್ನಿಸಿರುವ' ಸ್ಥಾನಿಕ ವೈದ್ಯರು ಮಂಗಳವಾರ ಬ್ರುಹತ್ ಪ್ರತಿಭಟನೆ ಆಯೋಜಿಸಿದ್ದಾರೆ. 

ಹೀಗೆ ಕನ್ನಡವನ್ನು ತಿಣುಕಿ ಓದುವದು ಮತ್ತು ತಿಳಿದುಕೊಳ್ಳುವದು ಹಣೆಬರಹ. ಇದನ್ನು ಸರಳವಾಗಿ ಹೇಗೆ ತಿಳಿಸಬಹುದು, ಮತ್ತೆ ಬರೆಯುವೆ.

mobileಗೆ ಸಂಚಾರಿ ದೂರವಾಣಿ ಅನ್ನುತ್ತಾರೆ, ಅದು ನಿಜವಾಗಿ 'ಜಂಗಮ ಗಂಟೆ'. 'ಜಂಗಮ' ಅಂದರೆ ಯಾವುದು ನಿಂತಲ್ಲಿ ನಿಲ್ಲದೇ ಸಂಚಾರ ಮಾಡಿಕೊಂಡಿರುವದು, ಅದು.

[quote]

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 'ಮೀಸಲು' 'ಕಲ್ಪಿಸು'ವ ವಿಧೇಯಕಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ 'ನೀಡಿರುವದನ್ನು' ದುರಾದೃಷ್ಟಕರ 'ಎಂದು' 'ಬನ್ನಿಸಿರುವ' ಸ್ಥಾನಿಕ ವೈದ್ಯರು ಮಂಗಳವಾರ ಬ್ರುಹತ್ ಪ್ರತಿಭಟನೆ ಆಯೋಜಿಸಿದ್ದಾರೆ.

[/quote]

ದೊಡ್ಡ ಸಾಲೆಗಳಲ್ಲಿ ಮೀಸಲಾತಿ ಕಲ್ಪಿಸುವದನ್ನು ದೊಡ್ಡ ಸರಕಾರ(ನಟ್ಟ ನಡುವಿನ ಸರಕಾರ) ಒಪ್ಪಿಕೊಂಡಿರುವದನ್ನು ಕೆಟ್ಟ ಹಣೆಬರಹ ಎಂದು ಬನ್ನಿಸಿರುವ ಅಲ್ಲಿಯೇ ಇರುವ(ದೆಹಲಿಯ) 'ವೈದ್ಯ'ರು, ಮಂಗಳವಾರ ಬಹು ದೊಡ್ಡ ಮೆರವಣಿಗೆ ಇಟ್ಟುಕೊಂಡಿದ್ದಾರೆ.

ಕನ್ನಡದ ಸಹಜ ಬೆಳವಣಿಗೆಗೆ ತಡೆಒಡ್ಡಿರುವುದು, ಒತ್ತಾಯವಾಗಿ ಸಂಸ್ಕ್ರುತವನ್ನು ತುರುಕಿರುವುದು, ಮತ್ತು ಅದಕ್ಕಾಗಿಯೇ ವ್ಯಾಕರಣವನ್ನೇ ತಿದ್ದಿರುವುದು. ಮನ್ನಿಸಿ, ಈ ಸರಪಳಿಯನ್ನು ಹೀಗೇ ಜೋಡಿಸಿಕೊಂಡು ಹೋಗುವ ಆಸೆ ನನ್ನದಲ್ಲ. ಆದರೆ ಈ ಕೆಳಗಿನ ಸಾಲುಕಟ್ಟನ್ನು ನೋಡಿ, ಇದು ಬೆರಕೆ ಕನ್ನಡಗಳ ಮುತ್ತಾತ! ;-) ಇದು ಬುದವಾರ ೨೩ ಅಗಸ್ಟ್ ದಿನದ ವಾಣಿಜ್ಯ ವಿಜಯದಲ್ಲಿ ಮೂಡಿ ಬಂದ ಬರಹ.

ಬ್ಯಾಂಕ್‍ಗಳ ತಂತ್ರಾತ್ಮಕ ವಿಲೀನಕ್ಕೆ ಧೋರಣಾತ್ಮಕ ಚೌಕಟ್ಟು.

ಕೇಂದ್ರ ಅರ್ಥ ಸಚಿವ ಪಿ.ಚದಂಬರಮ್ ಜಾಗತಿಕವಾಗಿ ಸ್ಪರ್ದಾತ್ಮಕತೆಯಿರುವ ಬ್ಯಾಂಕಿಂಗ್ ಸಮಸ್ಯೆಗಳ ಸೃಸ್ಟಿಗಾಗಿ ಬ್ಯಾಂಕುಗಳ ವಿಲೀನವನ್ನು ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ. ಭಾರತದಲ್ಲಿ ಬ್ಯಾಂಕುಗಳ ವಿಲೀನ ಹೊಸತೇನೂ ಅಲ್ಲ. ಆದರೆ ಸುಧಾರಣೋತ್ತರೆ ಅವಧಿಯಲ್ಲಿ ಈವರೆಗೆ ನಡೆದ ವಿಲೀನಗಳು ಬ್ಯಾಂಕ್‍ಗಳ ವಿಫಲತೆ ಚಾಲಿತ ಪ್ರಕ್ರೀಯೆಗಳಷ್ಟೇ ಆಗಿವೆ. ಅದರ ಬದಲಾಗಿ ಅರ್ಜನೆ ಮತ್ತು ವಿಲೀನಗಳು ಬ್ಯಾಂಕುಗಳ ಮತ್ತು ಬ್ಯಾಂಕಿಂಗ್ ಉದ್ಯಮದ ತ್ವರಿತ ಹಾಗು ಆರೋಗ್ಯಪೂರ್ಣ ಬೆಳವಣಿಗೆ ಮತ್ತು ಸ್ಪರ್ದಾತ್ಮಕತೆ ವ್ರುದ್ಧಿಗೆ ಒಂದು ತಂತ್ರಾತ್ಮಕ ಹಾದಿಯಾಗಬಹುದು. ಈ ಉದ್ದೇಶದಿಂದ ತಂತ್ರಾತ್ಮಕ ಅರ್ಜನೆ ಮತ್ತು ವಿಲೀನಗಳಿಗೆ ಬೇಕಾದ ಧೋರಣಾತ್ಮಕ ಚೌಕಟ್ಟನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ.

[quote]

ಚರ್ಚೆ ಭಾಷೆಯ ಸಹಜ ವಿಕಾಸಕ್ಕೆ ತಡೆಯೊಡ್ಡಬೇಕು ಎಂದು ಪ್ರತಿಪಾದಿಸುತ್ತಿದೆಯೇ ಎಂಬ ಅನುಮಾನ ನನ್ನದು.

[/quote]

ನನಗೆ ತಿಳಿದಂತೆ ಕನ್ನಡದ ಸಹಜ ಬೆಳವಣಿಗೆಗೆ(ವಿಕಾಸ) ತಡೆಯೊಡ್ಡಿರುವುದು, ಒಡ್ಡುತ್ತಾ ಬಂದಿರುವುದು ಸಕ್ಕದ. ಕನ್ನಡದ ವ್ಯಾಕರಣ ತಿದ್ದಿರುವುದು. ಸೂರ್ಯ+ಉದಯ=ಸೂರ್ಯೋದಯ ಇದು ಕನ್ನಡದ ಗುಣ ಸಂಧಿ ಅನ್ನುತ್ಟೇವೆ, ಈ ಗುಣ ಸಂಧಿ ಕನ್ನಡದ್ದಲ್ಲವೇ ಅಲ್ಲ. ಕನ್ನಡದ ವ್ಯಾಕರಣವನ್ನು ಸರಿಪಡಿಸಬೇಕಿದೆ.

[quote]

'ಇವಳ ತೊಡಿಗೆ ಅವಳಿಗಿಟ್ಟು,ಅವಳ ತೊಡಿಗೆ ಇವಳಿಗಿಟ್ಟು ಸಂಭ್ರಮಿಸಿದೆ.....ಹಾಡಿದೆ'...ಅಂತ. ಇದು ಕನ್ನಡ ಮತ್ತು ಸಂಸ್ಕೃತಗಳ ಪದಗಳ ಮಿಲನ ಬೇಡ; ಪೂರ್ತಿ ಕನ್ನಡ ದಲ್ಲಿಯೆ ಬರೆಯಬೇಕು ಎಂದು ಮಾಡಿದ 'ಬೃಹತ್ ಚರ್ಚೆ'ಯಲ್ಲಿ ನುಡಿದ ಅವರ ಮಾತುಗಳು ಎಂದೂ ಮರೆಯಲಾರದಂತಿವೆ ! ಇಂಗ್ಲಿಷ್ ಪ್ರೊಫೆಸರ್ ಆಗಿದ್ದ ಅವರು, ಕನ್ನಡಕ್ಕಾಗಿ ದುಡಿದರು. ಅವರ ಕೊಡುಗೆ ಅಪಾರ.

[/quote]

ಬರಿ ಸೇರಿಸಬಾರದಲ್ಲ, ಸೇರಿಸಲು ಬಾರದಂತೆ ವ್ಯಾಕರಣವನ್ನು ಬದಲಿಸಬೇಕು, ಕನ್ನಡದಲ್ಲದ ಸಂಧಿಗಳನ್ನು ತೆಗೆಯಬೇಕು, ಮಹಾಪ್ರಾಣಗಳನ್ನು ತೆಗೆಯಬೇಕು. ಋ ವನ್ನು ತೆಗೆದು ಹಾಕಿದ್ದರೂ ಅದರ ಬಳಕೆ ನಡೆದೇ ಇದೆ.

ಕನ್ನಡ ಯಾಕೆ ನಶಿಸುತ್ತಿರುವ ನುಡಿಗಳ ಸಾಲಿಗೆ ಸೇರಿದೆ ಅಂತ ನನಗೀಗ ತಿಳಿಯಿತು, ನಿಮಗೆ ಒಳ್ಳೆಯದಾಗಲಿ.