ಕನ್ನಡಂಗಳ್: ಪದ್ಯ ಹೀಗಿದೆ

To prevent automated spam submissions leave this field empty.

ಸಂಪದದ ಗೆಳೆಯರೊಬ್ಬರು ಕನ್ನಡಂಗಳ್ ಅನ್ನುವ ಮಾತು ಕವಿರಾಜಮಾರ್ಗದಲ್ಲಿದೆಯೇ ಎಂದು ಸಂದೇಹ ವ್ಯಕ್ತಪಡಿಸಿದ್ದರು. ಆ ಮಾತು ಬರುವ ಜಾಗ ಆಶ್ವಾಸ ೧, ಪದ್ಯ ೪೬.

"ದೋಸಂ ಇನಿತು ಎಂದು ಬಗೆದು ಉದ್ಭಾಸಿಸಿ ತರಿಸಂದು ಕನ್ನಡಂಗಳೊಳ್ ಎಂದುಂ ವಾಸುಗಿಯುಂ ಅರಿಯಲಾರದೆ ಬೇಸರಿಸುಗುಂ ದೇಸಿ ಬೇರೆಬೇರಪ್ಪುದರಿಂ"
ಅರ್ಥ: "ದೇಸಿ ನುಡಿಗಳು ಬೇರೆ ಬೇರೆಯಾಗಿರುವುದರಿಂದ ಈ ಹಲವು ಕನ್ನಡಗಳಲ್ಲಿ ದೋಷಗಳು ಎಷ್ಟಿವೆ ಎನ್ನುವುದನ್ನು ನಿಶ್ಚಯಿಸಿ ಕಾಣಿಸಿ ಹೇಳಲು ಹಲವು ನಾಲಗೆಯುಳ್ಳ ವಾಸುಕಿಯೂ ಬೇಸರಿಸಿಯಾನು" ಇದು ಶ್ರೀ ಕೆ.ವಿ. ಸುಬ್ಬಣ್ಣ ಅವರು ತಮ್ಮ ಲೇಖನದಲ್ಲಿ (ಅರೆ ಶತಮಾನದ ಅಲೆಬರಹಗಳು, ಪುಟ ೪೫೨, ಅಕ್ಷರಪ್ರಕಾಶನ) ವಿವರಿಸಿರುವ ರೀತಿ.
ದೇಸಿಯಲ್ಲಿ ವೈವಿಧ್ಯ ಅಪಾರವಾಗಿ ಇರುವುದರಿಂದಲೇ ಒಂದು ಶಿಷ್ಟ ಭಾಷೆಯ ರೂಪವನ್ನು ನಿರ್ಮಿಸಿಕೊಳ್ಳುವ ಅಗತ್ಯ ಕಂಡುಬರುತ್ತದೆ. ಹಾಗೆ ಆಗುವುದಕ್ಕೆ ರಾಜಕೀಯ ಬೆಂಬಲವೂ ಬೇಕು. ಆದ್ದರಿಂದಲೇ ಕವಿ ಮತ್ತು ರಾಜ ಇಬ್ಬರೂ ಸೇರಿ ನಿರ್ಮಿಸಿದ್ದು ಕವಿರಾಜಮಾರ್ಗ ಅನ್ನುವುದು ಅವರ ವಿವರಣೆ.
ಇನ್ನು ಕಳಿಸು ಎಂಬ ಪದದ ಬಗ್ಗೆ:
ವ್ಯಾಕರಣದ ನಿಯಮಗಳು ಎಲ್ಲ ಪದಗಳ ರೂಪವನ್ನೂ ವಿವರಿಸಲಾರವು ಅನ್ನುವುದಕ್ಕೆ ಉದಾಹರಣೆಯಾಗಿ ಇದನ್ನು ಹೇಳಿದ್ದೆ.
ನೋಡಿ, ಇಸು ಮಾತ್ರವಲ್ಲ, ಪು, ಹು, ಇವು ಕೂಡ ಪ್ರತ್ಯಯಗಳೇ. ಮುಡುಹು, ಮುಡಿಪು ಇತ್ಯಾದಿಗಳಲ್ಲಿ ಮುಡಿ ಎಂಬ ರೂಪಕ್ಕೆ ಪು, ಹು, ಇತ್ಯಾದಿ ಸೇರಿವೆ. ಕಳುಹು ಅನ್ನುವುದನ್ನು ಮೂಲ ರೂಪ ಅನ್ನುವುದು ಸರಿಯಾಗದು. ಕಳುಹಿಸು ಅನ್ನುವುದರಲ್ಲಿ ಕಳುಹು ಮತ್ತು ಇಸು ಮಾತ್ರ ಅಲ್ಲ, ಮೊದಲಿನ ಹು (ನಡುಗನ್ನಡದಲ್ಲಿ ಪು) ಕೂಡ ಇದೆ. ಹಾಗಿದ್ದರೆ ಕಳ್ ಅನ್ನುವುದು ಮೂಲವೆನ್ನೋಣವೇ? ಧಾತುಗಳಿಗೆ, ಅಂದರೆ ಕ್ರಿಯಾಪದದ ಮೂಲರೂಪಕ್ಕೆ ಎರಡು ಅರ್ಥಗಳು ಸಾಮಾನ್ಯವಾಗಿ ಇರುವುದಿಲ್ಲ. ಕಳವು ಅನ್ನುವ ಪದದಲ್ಲಿ ಕೂಡ ಕಳ ಅನ್ನುವ ಮೂಲರೂಪಕ್ಕೆ ವು ಎಂಬ ಪ್ರತ್ಯಯ ಸೇರಿ ನಾಮಪದ ಹುಟ್ಟಿದೆ. ಭಾಷೆಯಲ್ಲಿ ಇಂಥ ಸ್ವಾರಸ್ಯದ ತೊಡಕುಗಳು ಅನೇಕವಿವೆ. ಅವುಗಳದೇ ಬೇರೆ ಲೋಕ. ಕೊಂಚ ಯೋಚಿಸಿದರೆ ಕನ್ನಡದ ಸಾಮಾನ್ಯ ಪದ "ಆದರೆ" ಕೂಡ ಸಮಸ್ಯಾತ್ಮಕವೇ. ಅದರಲ್ಲಿ ಆಗು ಅನ್ನುವುದು ಮೂಲ ರೂಪ. ಹಿಂದೆ ಒಡೆ ಎಂಬ ಪ್ರತ್ಯಯವಿತ್ತು. ಆದೊಡೆ ಅನ್ನುವುದು ಹಳಗನ್ನಡ ನಡುಗನ್ನಡದಲ್ಲಿ ಸಿಗುತ್ತದೆ. ಒಡೆ ಅನ್ನುವುದು ಅರೆ ಎಂದು ಬದಲಾಗಿದ್ದು ನಡುಗನ್ನಡ ಕಾಲದಲ್ಲಿ. ಸುಮಾರು ೧೪ನೆಯ ಶತಮಾನ. ಆದರೆ (!) ಆದೊಡೆ ಅನ್ನುವುದು ಭೂತಕಾಲ ಸಂಬಂಧಿಯಾಗಿತ್ತು. ನುಡಿದೊಡೆ ಮುತ್ತಿನ ಹಾರ ಇತ್ಯಾದಿ. ಹೊಸಗನ್ನಡದಲ್ಲಿ ಭೂತವಲ್ಲದ (ನಾನ್ ಪಾಸ್ಟ್) ಎಂಬ ಅರ್ಥದಲ್ಲಿ ಬಳಕೆಯಾಗುತ್ತಿದೆ. ಯಾಕೆ, ಹೇಗೆ, ಬಲು ದೊಡ್ಡ ಪ್ರಶ್ನೆಗಳು.
ಕೇವಲ ಸರಿ ಮತ್ತು ತಪ್ಪು ರೂಪಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ವ್ಯರ್ಥ. ಜನಕ್ಕೆ ಅರ್ಥವಾಗುವ, ಜನ ಬಳಸುತ್ತಿರುವ ರೂಪಗಳೆಲ್ಲವೂ ಸರಿಯೇ. ಶಿಷ್ಟರೂಪ ಯಾರೊಬ್ಬರ ಇಚ್ಛೆಯಿಂದ ನಿರ್ಧಾರಿತವಾಗುವುದಿಲ್ಲ. ವ್ಯಾಕರಣ ಅಂಕುಶವಲ್ಲ, ಭಾಷಾ ಸತ್ಯದ ವಿವರಣೆಯ ಪ್ರಯತ್ನ, ಅಷ್ಟೆ.

ಲೇಖನ ವರ್ಗ (Category):