ಭಾಷೆಯಲ್ಲಿ ಸರಿ ಮತ್ತು ತಪ್ಪು

To prevent automated spam submissions leave this field empty.

ಕೆಲವು ದಿನಗಳಿಂದ ಇಸ್ಮಾಯಿಲ್ ಅವರ ಬರಹಕ್ಕೆ ಪ್ರತಿಕ್ರಿಯೆಯಾಗಿ ಕುತೂಹಲಕರ ಚರ್ಚೆ ಬೆಳೆದಿರುವುದು ಗಮನಿಸಿದ್ದೇನೆ. ತುಳು ಮತ್ತು ಕನ್ನಡ ಸಂಬಂಧ ಕುರಿತು, ಲ ಳಗಳ ಬಳಕೆ ಕುರಿತು, ಅ ಹ ಗಳನ್ನು ಕುರಿತು, ಮತ್ತು ಕೆಲವು ರೂಪಗಳು ಬೇಡಾದ ಇತ್ಯಾದಿ ರೂಪುಗೊಂದಿರುವ ಕುರಿತು ಚರ್ಚೆ ನಡೆದಿದೆ. ನಾವೆಲ್ಲ ಗಮನಿಸಬೇಕಾದ ಕೆಲವು ಮೂಲ ಸಂಗತಿಗಳನ್ನು ಗಮನಿಸಬೇಕು ಅನ್ನಿಸಿದೆ. ೧. ಕನ್ನಡ ಒಂದೇ ಅಲ್ಲ ಅಸಂಖ್ಯಾತ ಕನ್ನಡಗಳಿವೆ: ಕನ್ನಡದ ಮೊದಲ ಕೃತಿ ಕವಿರಾಜ ಮಾರ್ಗದಲ್ಲಿ ಒಂದು ಮಾತಿದೆ. ಅಲ್ಲಿ ಕೃತಿಕಾರ "ಕನ್ನಡಂಗಳ್" ಕನ್ನಡಗಳು ಎಂದು ಬಹುವಚನವನ್ನು ಬಳಸಿದ್ದಾನೆ. ಭಾಷೆ ಅಸ್ತಿತ್ವಕ್ಕೆ ಬರುವುದು ಯಾರಾದರೂ ಅದನ್ನು ಬಳಸಿದಾಗ ಮಾತ್ರವೇ. ಭೌಗೋಳಿಕವಾಗಿ ಬೇರೆ ಬೇರೆ ಪ್ರದೇಶದ ಜನರ ಮಾತಿನಲ್ಲಿ ಭಿನ್ನತೆಗಳು ಕಾಣುತ್ತವೆ. ಉಚ್ಚಾರದಲ್ಲಿ ಸ್ವರಗಳ ವ್ಯತ್ಯಾಸವೇ ಎದ್ದು ಕಾಣುವುದು. ನಂತರ ಆಸ್ಪಿರೇಟೆಡ್ ಧ್ವನಿಗಳದು: ಲ-ಳ, ಇತ್ಯಾದಿ. ವ್ಯಂಜನಗಳ ಉಚ್ಚಾರದಲ್ಲಿ ಅಂಥ ವ್ಯತ್ಯಾಸ ಕಾಣುವುದಿಲ್ಲ. ಇಂಥ ವ್ಯತ್ಯಾಸಗಳು ಸರಿಯೂ ಅಲ್ಲ, ತಪ್ಪೂ ಅಲ್ಲ. ಹಾಗೆ ಒಂದು ಪ್ರದೇಶದ ಎಲ್ಲ ಜನರೂ ಬಿಡಿ ಎಲ್ಲ ವ್ಯಕ್ತಿಗಳೂ ಒಂದೇ ಥರ ಉಚ್ಚರಿಸುವುದೂ ಸಾಧ್ಯವೇ ಇಲ್ಲ. ಉಚ್ಚಾರದ ಮೂಲಕ ಗಮನಕ್ಕೆ ಬರುವ ವ್ಯತ್ಯಾಸಗಳನ್ನೆಲ್ಲ ಪಟ್ಟಿ ಮಾಡಿ ವಿವರಿಸುವುದೆಂದರೆ ಸಾವಿರ ನಾಲಗೆಯ ಆದಿಶೇಷನಿಗೂ ಅಸಾಧ್ಯವಾದ ಬೇಸರ ಹುಟ್ಟಿಸುವ ಕೆಲಸ ಅನ್ನುತ್ತದೆ ಕವಿರಾಜಮಾರ್ಗ. ಇಂಥ ಉಚ್ಚಾರ ವ್ಯತ್ಯಾಸ ಎಲ್ಲ, ಅಂದರೆ ಜಗತ್ತಿನ ಎಲ್ಲ ಭಾಷೆಗಳಲ್ಲೂ ಇದ್ದದ್ದೇ. ಇವುಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಅನ್ನುವ ಪ್ರಶ್ನೆಯೇ ತಪ್ಪು. ಪರಿಸರ ವೈವಿಧ್ಯ ಹೇಗೆ ಅಗತ್ಯವೋ ಹಾಗೆಯೇ ಭಾಷೆಯೊಂದು ಜೀವಂತ ಉಳಿದು ಬೆಳೆಯಲು ಒಂದೇ ಭಾಷೆಯೊಳಗಿನ ವೈವಿಧ್ಯವೂ ಹಾಗೆಯೇ ಅಗತ್ಯ.

ಶಿಷ್ಟಭಾಷೆ: ಇಡೀ ಭಾಷಿಕ ಸಮುದಾಯವು ಒಂದು ಬಗೆಯ ಭಾಷಾಬಳಕೆಯನ್ನು ಶಿಷ್ಟವೆಂದು ಗ್ರಹಿಸುತ್ತದೆ. ಹಾಗೆಯೇ ಅದನ್ನು ವ್ಯಾಪಕವಾಗಿ ಬಳಸತೊಡಗುತ್ತದೆ. ಭಾಷೆಯೊಂದರ ಒಂದು ಪ್ರಭೇದ ಶಿಷ್ಟವೆಂದು ಎಣಿಕೆಗೊಳ್ಳಲು ಚಾರಿತ್ರಿಕ ಮತ್ತು ರಾಜಕೀಯ ಕಾರಣಗಳಿರುತ್ತವೆ. ಶಿಷ್ಟ ಭಾಷೆ ವ್ಯಾಪಕವಾಗಿ ಬಳಕೆಗೆ ಬಂದು ಅಂಗೀಕೃತವಾಗುವುದಕ್ಕೆ ಶಿಕ್ಷಣದ ವ್ಯಾಪ್ತಿಯೂ ಕಾರಣವಾಗುತ್ತದೆ. ಮೈಸೂರು ಸಂಸ್ಥಾನದ (ಅದೇ ಹಳೇ ಮೈಸೂರು) ಕನ್ನಡ ಶಿಷ್ಟವೆಂದು ಎಣಿಕೆಗೊಳ್ಳಲು ಆ ಭಾಗದ ಆರ್ಥಿಕ ಸಮೃದ್ಧಿ, ರಾಜಕೀಯ ಶಕ್ತಿ, ಶಿಕ್ಷಣದ ವ್ಯಾಪ್ತಿ ಇವೇ ಕಾರಣ. ಶಿಷ್ಟ ಭಾಷೆ ರೂಪುಗೊಳ್ಳುತ್ತ ನಡೆದಂತೆ ಪ್ರಾದೇಶಿಕ ವೈಶಿಷಟ್ಯಗಳು ನಿಧಾನವಾಗಿ ಕಣ್ಮರೆಯಾಗುತ್ತವೆ. ಕನ್ನಡ ಪಠ್ಯ ಪುಸ್ತಕಗಳಲ್ಲಿ ಕನ್ನಡದ ಭಾಷಾ ಪ್ರಭೈದಗಳು ಎಲ್ಲಿಯಾದರೂ ತಪ್ಪಿಯೂ ಕಾಣುವುದಿಲ್ಲ. ಶಿಷ್ಟಭಾಷೆ ಸುಶಿಕ್ಷಿತರ ನುಡಿಯಾಗಿ ಉಳಿದ ರೂಪಗಳೆಲ್ಲ ಹಾಸ್ಯಕ್ಕೆ ಎಡೆ ಮಾಡುತ್ತವೆ. ಉತ್ತಮ ಉದಾಹರಣೆಯೆಂದರೆ ನಮ್ಮ ಕನ್ನಡ ಸಿನಿಮಗಳಲ್ಲಿ ಪ್ರಾದೇಶಿಕ ಭಾಷೆ ೯೫% ಹಾಸ್ಯಕ್ಕಾಗಿಯೇ ಬಳಕೆಯಾಗುತ್ತದೆ. ಆಡುನುಡಿಯ ವೈವಿಧ್ಯ (ಅಪ) ಹಾಸ್ಯ ಕೀಳರಿಮೆಗಳಿಂದ ಕೊನೆಯುಸಿರು ಎಳೆಯುತ್ತದೆ. ಕನ್ನಡವು ಹಿಂದೆ ಸಂಸ್ಕೃತದ ಇಂಗ್ಲಿಷಿನ ಯಜಮಾನಿಕೆಗೆ ಒಳಗಾಗಿದ್ದಂತೆಯೇ ಕನ್ನಡದ ಶಿಷ್ಟ ರೂಪವು ಕೊಡಗ, ತುಲು, ಎರವ, ಕೊಂಕಣಿ, ಬದಗ ಇತ್ಯಾದಿ ಭಾಷೆಗಳ ಮೇಲೂ ಯಜಮಾನಿಕೆ ತೋರಿದೆ. ಅದರಲ್ಲಿ ಸಂಶಯವೇ ಬೇಡ. ಶಕ್ತರು ಮಾತ್ರ ಬದುಕಿ ಉಳಿಯವರೆಂಬ ಡಾರ್ವಿನ್ ವಾದದ ಇನ್ನೊಂದು ನಿದರ್ಶನ ಶಕ್ತರು ಬಳಸುವ ಭಾಷೆ ಬದುಕಿ ಉಳಿಯುತ್ತದೆ ಅನ್ನುವುದು. ರಾಜಕೀಯ ಆರ್ಥಿಕ ಶಕ್ತಿಗಳು ಭಾಷೆಗೆ ಶಕ್ತಿ ತುಂಬುತ್ತವೆ. ಇಂಗ್ಲಿಷು ಜಗತ್ತಿನಲ್ಲಿ ವ್ಯಾಪಿಸಿದ್ದು ಇಂಗ್ಲಿಷು ಭಾಷೆಯ ಜನರ ಆರ್ಥಿಕ ರಾಜಕೀಯ ಶಕ್ತಿಗಳ ಕಾರಣದಿಂದಲೇ ಅಲ್ಲವೇ? ದುರಂತವೆಂದರೆ ಕನ್ನಡದ ರಾಜಕೀಯ ಮತ್ತು ಆರ್ಥಿಕತೆ ಕನ್ನಡವನ್ನು ಬಿಟ್ಟುಕೊಡುವ ಮೂಲಕ ಶಕ್ತಿಪಡೆಯಲು ಹವಣಿಸುತ್ತಿರುವುದು.

ಕನ್ನಡ ದಪದಗಳ ರೂಪ ನಿಷ್ಪತ್ತಿಯನ್ನು ಕುರಿತು:

ಕನ್ನಡದ ವ್ಯಾಕರಣ ಹಾಗೆ ಕನ್ನಡದ ಎಲ್ಲ ಪದಗಳ, ಎಲ್ಲ ರೂಪಗಳ ವಿವರಣೆಯನ್ನು ನೀಡುವಷ್ಟು ಶಕ್ತವಾಗಿ ಬೆಳೆದೇ ಇಲ್ಲ. ಆಗಬೇಕಾದ ಕೆಲಸ ಬೇಕಾದಷ್ಟಿದೆ. ಗಮನಿಸಬೇಕಾದ ಮಾತೆಂದರೆ ಕನ್ನಡವನ್ನು ಆಡುಮಾತಾಗಿ ಉಳ್ಳ ಜನ ವ್ಯಾಕರಣವನ್ನು ಕಲಿಯದೆಯೂ ತಪ್ಪಿಲ್ಲದೆ ಭಾಷೆ ಬಳಸಬಲ್ಲರು. ವ್ಯಾಕರಣವೆಂದರೆ ಅರ್ಥವಂತಿಕೆಯ ನಿಯಮಗಳು. ಬುದ್ಧಿ ತಿಳಿಯುವ ಮುನ್ನವೇ ಅಪ್ರಜ್ಞಾಪೂರ್ವಕವಾಗಿ ಕನ್ನಡದ ವಾಕ್ಯರಚನೆಯ ನಿಯಮಗಳನ್ನು ನಾವೆಲ್ಲ ಕಲಿತುಬಿಡುತ್ತೇವೆ. ನಾನು ಕಲ್ಲು ಕುಡಿದೆ, ನಾಳೆ ಬಂದೆ ಎಂದು ಯಾರೂ ಹೇಳುವುದಿಲ್ಲವಷ್ಟೆ. ಕನ್ನಡ ವ್ಯಾಕರಣವೆಂದರೆ ಕನ್ನಡದ ಮೂಲಕ ನಾವು ಹೇಗೆ ಅರ್ಥಪೂರ್ಣವಾಗಿ ಮಾತಾಡಬಹುದು ಎಂಬ ನಿಯಮಗಳ ಮೊತ್ತ ಅಷ್ಟೆ. ಶಾಲೆಯಲ್ಲಿ ಕಲಿಯುವ, ವಿದ್ವಾಂಸರು ಬರೆಯುವ ವ್ಯಾಕರಣಗಳೆಲ್ಲ ಈ ಅಪ್ರಜ್ಞಾಪೂರ್ವಕ ನಿಯಮಗಳನ್ನು ತರ್ಕಬದ್ಧವಾಗಿ ನಿರೂಪಿಸುವುದಷ್ಟೆ. ಪ್ರಾದೇಶಿಕ ವೈವಿಧ್ಯ ಶಬ್ದಗಳಲ್ಲಿ, ನಾಮ ಪದಗಳಲ್ಲಿ, ಉಚ್ಚಾರಣೆಗಳಲ್ಲಿ ಕಂಡರೂ ವಾಕ್ಯ ರಚನೆಯ ನಿಯಮಗಳು ಮಾತ್ರ ಎಲ್ಲ ಅಸಂಖ್ಯ ಕನ್ನಡಗಳಿಗೂ ಸಮಾನವಾಗಿಯೇ ಇರುತ್ತವೆ. ಅದರಿಂದಲೇ ಒಂದು ಪ್ರದೇಶದವರ ಕನ್ನಡ ಇನ್ನೊಂದು ಪ್ರದೇಶದವರಿಗೆ ತಿಳಿಯುತ್ತದೆ.

ವ್ಯಾಕರಣಾಸಕ್ತರಿಗೆ ಒಂದು ಸ್ವಾರಸ್ಯದ ಪ್ರಶ್ನೆ. ನಿನ್ನೆಯ ದಿನ ಧಾರವಾಡದಲ್ಲಿ ಗೆಳೆಯ ಕೆವಿ ನಾರಾಯಣರೊಡನೆ ಮಾತನಾಡುವಾಗ ಈ ಪ್ರಶ್ನೆ ಹುಟ್ಟಿತು. "ಕಳಿಸು" ಎಂಬುದು ತೀರ ಸಾಮಾನ್ಯವಾಗಿ ನಾವು ಬಳಸುವ ಪದ. ಅದು ಹೇಗೆ ರೂಪುಗೊಂಡಿರಬಹುದು. "ಮಾಡು" ಎಂಬ ಮೂಲ ರೂಪಕ್ಕೆ "ಇಸು" ಸೇರಿಸಿ, "ತಿನ್ನು" ಗೆ "ಇಸು" ಸೇರಿಸಿ, ಹೀಗೆಲ್ಲ ಮಾಡಿಸು, ತಿನ್ನಿಸು ಅನ್ನುವ ರೂಪ ಹುಟ್ಟಿಸಿಕೊಂಡಿದ್ದೇವೆ. ಕಳಿಸು ಅನ್ನುವುದರಲ್ಲೂ ಇಸು ಇದೆ. ಹಾಗಾದರೆ ಅದರ ಮೂಲ ರೂಪ ಏನಿರಬಹುದು? ಬಾಲಂಗೋಚಿ: ಇಂಗ್ಲಿಷಿನಜನ ಇರುವ ಪ್ರದೇಶದ ದಕ್ಷಿಣ ಭಾಗದ ನುಡಿ ವೈವಿಧ್ಯ ಕಿಂಗ್ಸ್ ಇಂಗ್ಲಿಷ್ ಆಗಿ ಶಿಷ್ಟ ಇಂಗ್ಲಿಷ್ ಎಂದು ಕರೆಸಿಕೊಂಡಿತು. ಈಗ ಜಗತ್ತಿನ ಅತಿ ಶಕ್ತ ಅಮೆರಿಕದ ಇಂಗ್ಲಿಷ್ ಶಿಷ್ಟ ಇಂಗ್ಲಿಷ್ ಅನ್ನಿಸಿಕೊಳ್ಳುತ್ತಿದೆ. ಕನ್ನಡದಂತೆಯೇ ಇಂಗ್ಲೆಂಡಿನ ಬೇರೆ ಬೇರೆ ಪ್ರದೇಶಗಳ ಜನರ ಇಂಗ್ಲಿಷೂ ವೈವಿಧ್ಯಮಯ. ಅವೂ ಕನ್ನಡದ ಪ್ರಾದೇಶಿಕ ಭೇದಗಳಂತೆಯೇ ಹಾಸ್ಯಕ್ಕೂ ಗುರಿಯಾಗುತ್ತವೆ. ಅಮೆರಿಕದ ಬೇರೆ ಬೇರೆ ಪ್ರದೇಶಗಳ ಇಂಗ್ಲಿಶೂ ಅಷ್ಟೆ. ಭಾಷೆಗಳ ಲೋಕದ ವೈವಿಧ್ಯಕ್ಕೆ ಕೊನೆಯೇ ಇಲ್ಲ.

 

(Update - 9th August, 2006)
ಓದಿ:
ಕನ್ನಡಂಗಳ್: ಪದ್ಯ ಹೀಗಿದೆ

Sampada admin team.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಇದು ಸ್ವಾರಸ್ಯದ ಸಂಗತಿ ನಿಜ. ಕಳುಹು+ಇಸು ಕಳುಹಿಸು -> ಕಳಿಸು ಎನ್ನುವುದಾದರೆ ಎರಡರ ಅರ್ಥವೂ ಒಂದೆ! ಇಲ್ಲಿ 'ಇಸು' ಪ್ರೇರಣಾರ್ಥಕವಾಗಿ ಬಂದಿಲ್ಲ.

ವೆಂ.

ಕಳ್=ಕಳಚಿಕೊಳ್ಳು, ದೂರಾಗುlose, ಕಳೆದುಕೋ. ಪತ್ರ ನಿನ್ನಿಂದ ದೂರಾಗಬೇಕಲ್ಲವೇ. ಆದ್ದಱಿಂದ ಅದನ್ನು ದೂರಾಗಿಸು. ಅಂದರೆ ಕಳಿಸು. ನಿನ್ನ ಹತಿರವೇ ಉೞಿದರೆ ಬೇಱೆಯವರಿಗೆ ಗೊತ್ತಾಗುವುದಾದರೂ ಹೇಗೆ? ನಿನ್ನಿಂದ ಪತ್ರ ಕಳಚಿಕೊಂಡು ಬೇಱೆಯವರನ್ನು ಸೇರಬೇಕಷ್ಟೆ.

ನಾಗಭೂಷಣಸ್ವಾಮಿಯವರೆ,
ನಿಮ್ಮ ಈ ಬರಹಕ್ಕಾಗಿ ಧನ್ಯವಾದಗಳು. ಸಂಪದದಲ್ಲಿ ಕನ್ನಡದ ಬಗ್ಗೆ ಬರೆಯಲ್ಪಡುತ್ತಿರುವ ಕೆಲವು ಬರಹಗಳನ್ನು ಓದಿ ಹೆದರಿಕೆ ಆಗತೊಡಗಿತ್ತು. ಭಾಷಾ ಪ್ರೀತಿಯ ಭೋರ್ಗರೆತ ಕಿವಿಗಡಚಿಕ್ಕುವಂತಾಗಿತ್ತು. ನಮ್ಮ ಸಂಪದಿಗರ ಮುಂದೆ ಕನ್ನಡ ಗಂಡುಗಲಿಗಳು, ಹೋರಾಟಗಾರರೂ ಕೂಡ ನಾಚಿಕೊಳ್ಳಬೇಕು ಅಂತಹ ಜೋರು.
ಯಾರೂ ಕೂಡ ಇದು ಯಾಕೆ ಹೀಗೇ ಇರಬೇಕು, ಯಾಕೆ ಹಾಗೂ ಇರಬಾರದು ಎಂದಾಗಲೀ, ಹಾಗೂ ಇದ್ದೀತು, ಹೀಗೂ ಇದೆ ಎಂದಾಗಲೀ ಹೇಳಹೊರಡುವುದಿಲ್ಲ. ಏನಿದ್ದರೂ, 'ಇದು ಹೀಗೇ ಇರಬೇಕು' ಎನ್ನುವ ಸೊಲ್ಲು. ಏನು ಬರೆಯಲೂ ಹೆದರಿಕೊಂಡಿದ್ದೆ, ಯಾರಾದರೂ ಹೇಳಿಯಾರು, 'ನಿನಗೆ ಕನ್ನಡ ಬರುವುದಿಲ್ಲ, ತೆಪ್ಪಗಿರು' ಎಂದು ಅಂತ.
ಭಾಷೆ ಎಂದರೆ ಪೀನಲ್ ಕೋಡ್ ನ ಒಂದು ಭಾಗವೇನೋ ಅನ್ನಿಸತೋಡಗಿತ್ತು. ನಿಮ್ಮ ಬರಹದಲ್ಲಿನ ಜಾಣ ನುಡಿಗಳು ಕೊಂಚ ಸಮತೋಲನ ತರಲಿ ಎಲ್ಲರಲ್ಲೂ ಎಂದು ಆ ಕನ್ನಡ ಮಾತೆಯನ್ನು ಪ್ರಾರ್ಥಿಸುತ್ತೇನೆ.
ನೀವು ಸ್ವಲ್ಪ ಕ್ಲಿಷ್ಟವೇ ಅನ್ನಬಹುದಾದ ವಿಷಯವನ್ನು ಚೆನ್ನಾಗಿ ವಿವರಿಸಿದ್ದೀರಿ. ಮತ್ತೆ ಧನ್ಯವಾದಗಳು.
ಕಮಲಾಕರ್

ಭಾಷಾಭಿಮಾನದ ಭೋರ್ಗರೆತಕ್ಕೆ ಸಂಬಂಧಿಸಿದ ತಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವೂ ಇದೆ.

ಓ ಎಲ್ ಎನ್ ಸರ್‍ ರವರಿಗೆ ತುಂಬ ಧನ್ಯವಾದಗಳು. ಇತ್ತೀಚೆಗೆಗಂತೂ ತಮ್ಮ ಸಂಪದದಲ್ಲಿ ತಮ್ಮ ಬರವಣಿಗೆ ಬಹಳ ಕಡಿಮೆಯೇ ಆಗಿದೆ. ದಯವಿಟ್ಟು ಸಮಯ ಮಾಡಿಕೊಂಡು ಆಗಾಗ ಬರೆಯುತ್ತಿರಿ.

ಇನ್ನು ತಾವು ಹೇಳಿದ ಇಂಗ್ಲೀಷಿನ ಪ್ರಭೇದಗಳ ಬಗ್ಗೆ ಸಂಪದ ಗೆಳೆಯರೊಟ್ಟಿಗೆ ನನಗೆ ತಿಳಿದಿರುವ ಸಣ್ಣ ಮಾಹಿತಿಯೊಂದನ್ನು ಹಂಚಿಕೊಳ್ಳುತ್ತೇನೆ. ಜಾರ್ಜ್ ಬರ್ನಾರ್ಡ್ ಶಾ ರವರು ಕಳೆದ ಶತಮಾನದ ಆರಂಭದಲ್ಲಿ ಇಂಗ್ಲೆಂಡಿನಲ್ಲಿದ್ದ ಇಂಗ್ಲೀಷ್ ಭಾಷಾಶುದ್ಧಿಯ ಬಗೆಗಿನ ಪಂಡಿತರ ಮೋಹವನ್ನು ಲೇವಡಿ ಮಾಡುತ್ತ 'ಪಿಗ್ಮಾಲಿಯನ್' ಎಂಬ ಹೆಸರಿನ ನಾಟಕ ರಚಿಸಿದ್ದರು. ಅದು ಬಹಳ ಜನಪ್ರಿಯವಾದ ಸಂಗೀತರೂಪಕವಾಗಿ ಪ್ರದರ್ಶಿಸಲ್ಪಡುತ್ತಿತ್ತು. ೧೯೬೦ರ ದಶಕದಲ್ಲಿ ಆಡ್ರೇ ಹೆಪ್ ಬರ್ನ್‌ಳ ಅಭಿನಯದಲ್ಲಿ 'ಮೈ ಫೇರ್‍ ಲೇಡಿ' ಎಂಬ ಹೆಸರಿನಲ್ಲಿ ಚಲನಚಿತ್ರವಾಯಿತು.
ಈ ಚಿತ್ರದಲ್ಲಿ ಇಂಗ್ಲೀಷಿನ ಪ್ರೊಫೆಸರನೊಬ್ಬ ಇಂಗ್ಲೆಂಡಿನ ಗ್ರಾಮೀಣ ಭಾಗದಿಂದ ಬಂದು ಲಂಡನ್ನಿನಲ್ಲಿ ಹೂಮಾರುವ ವೃತ್ತಿಯಲ್ಲಿರುವವಳೊಬ್ಬಳ ಗ್ರಾಮ್ಯ ಉಚ್ಛಾರವನ್ನು ಕಂಡು ಆಕೆಯ ಭಾಷೆಯನ್ನು ಶಿಷ್ಟಗೊಳಿಸುವ ಪಣತೊಡುತ್ತಾನೆ. ಕಡೆಗೆ ಆ ರೀತಿಯ ಪ್ರಯತ್ನದ ವ್ಯರ್ಥತೆಯನ್ನು ಮನಗಾಣುತ್ತಾನೆ. ಒಂದು ಒಳ್ಳೆಯ ಚಿತ್ರ.
ಇಂಗ್ಲೀಷಿನ ಪ್ರಭೇದಗಳ ಬಗ್ಗೆ ಮಾತು ಬಂದಾಗ ಈ ಚಿತ್ರ ನೆನಪಾಯಿತು. ಅವಕಾಶ ಸಿಕ್ಕಾಗ ಪ್ರತಿಯೊಬ್ಬರೂ ಈ ಚಿತ್ರವನ್ನು ನೋಡಿ. 'ಪಿಗ್ಮಾಲಿಯನ್' ನಾಟಕವು 'ಸೇವಂತಿ ಪ್ರಸಂಗ' ಎಂಬ ಹೆಸರಿನಲ್ಲಿ ಜಯಂತ ಕಾಯ್ಕಿಣಿಯವರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟಿದೆ. 'ಹೂ ಹುಡುಗಿ' ಎಂಬ ಹೆಸರಿನಲ್ಲಿ ರಂಗಕ್ಕೂ ಬಂದಿದೆ.

ಭಾಷೆಯ ವ್ಯಾಕರಣ ಮತ್ತು ಜನರ ಬಳಕೆಯ ಭಾಷೆ ಕುರಿತು ವಿಚಾರ ಮಾಡುವವರು 'ಸೇವಂತಿ ಪ್ರಸಂಗ'ವನ್ನು ತಪ್ಪದೇ ಓದಬೇಕು . ಶ್ರೀ ಜಯಂತ್ ಕಾಯ್ಕಿಣಿಯವರು ತುಂಬ ಚೆನ್ನಾಗಿ ಅನುವಾದಿಸಿದ್ದಾರೆ.

ನೆನಪಿನಿಂದ ಬರೆಯುತ್ತಿರುವೆ .
ಸೇವಂತಿ ಕೊಳಚೆಪ್ರದೇಶದ ನಿವಾಸಿ . ಅವಳು 'ಹೃದಯ'ವನ್ನು ರುದಯಾ ಅಂತ ಉಚ್ಚರಿಸುತ್ತಾಳೆ . ಆಗ ಭಾಷಾಷಾಸ್ತ್ರಿ ಅವಳನ್ನು ತಿದ್ದಲು ಪ್ರಯತ್ನಿಸಿ 'ಈಗ ಹೃದಯ ಅನ್ನು ,- ಹೃ ..ದ.. ಯ.. ' ಅಂತಾನೆ.
ಸೇವಂತಿ ' ಅದು ನಿನಗಿದ್ರೆ ತಾನೆ?' ಅಂತ ಕಟಕಿಯಾಡಿ ' ಮಳೆ ಗಾಳೀಲಿ ಎಲ್ಲಿ ಸೂರು ಹಾರಿ ಹೋಗುತ್ತೋ ಅಂತ ಚಿಂತೆಯಿಂದ ಡಬಾ ಡಬಾ ಅಂತ ಬಡಕೊಳ್ಳತೈತೆಲ್ಲ ಅದು ರುದಯಾ....... ಅದು ನಿಂಗೆಲ್ಲೈತೆ? ' ಅನ್ನುತ್ತಾಳೆ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

"ಟ್ರಾಯ್ ಮಾಡು", ಇದರ ಕನ್ನಡ ರೂಪ ಯಾವುದು? 'ಪ್ರಯತ್ನಿಸು'? 'ಬಾಳ ಟ್ರಾಯ್ ಮಾಡಿದ್ನಪಾ, ಆಗ್ಲೇ ಇಲ್ಲ' ಅನ್ನುವದಕ್ಕಿಂತ 'ಬಾಳ ಗುದ್ದಾಡಿದೆ, ಆಗ್ಲಿಲ್ಲ' 'ಪ್ರಯತ್ನ' ಅನ್ನೋದು ತುರುಕಿರೋದು ಅಂತ ತಿಳು ಆಗುತ್ತೆ.

ಹೊಸ ನಾಡ ಕಟ್ಟೋಣ

ತಿಳಿಯಾಗುತ್ತದೆ, ತಿಳು=ತೆಳುವಾದ, ಅರ್ಥವಾಗುತ್ತದೆ, ಇರಲಿ 'ಪ್ರಯತ್ನ' ದ ಕನ್ನಡ ಪದ ಅಥವ ಆ ಪದದ ಕನ್ನಡ ರೂಪ, ತಿಳಿದವರು ತಿಳಿಸಿ. ಇನ್ನೊಂದು ಪ್ರಶ್ನೆ, ಈ ಆಗುತ್ತದೆ, ಹೋಗುತ್ತದೆ, ಬರಹದ ಭಾಷೆಯಲ್ಲೇನೋ ಇದೆ ಆದರೆ, ಆಡು ಭಾಷೆಯಲಿ ಆಗ್ತೈತೆ, ಅಕ್ಕೈತಿ ಆಗಿದೆ, ಯಾಕೆ?

[quote]

ಸಂಸ್ಕೃತದಿಂದಾಗಿ ಕನ್ನದ ಕಸ್ತೂರಿಯಾಗಿದೆ

[/quote]

ಈ ಮಾತು ಒಪ್ಪತಕ್ಕುದಲ್ಲ, ಕನ್ನಡಕ್ಕೆ ಅದರದೇ ಆದ ಒಂದು ಲಯ, ತಾಳವಿದೆ. ಸಂಸೃತದ ಎಷ್ಟೋ ಪದಗಳು ಈ ಲಯಕ್ಕೆ ಹೊಂದುವದಿಲ್ಲ. ಆ ಪದಗಳ, ತದ್ಭವ ರೂಪಗಳ ಹೆಚ್ಚು ಬಳಕೆಯಾಗಬೇಕು.

ಹೊಸ ನಾಡ ಕಟ್ಟೋಣ

ಬೆನಕರೇ,

[quote]

ಕನ್ನಡವನ್ನು ಕೇವಲ ಭಾಷೆಯನ್ನಾಗಿಸದೆ, 'ಕಸ್ತೂರಿ'ಯನ್ನಾಗಿಸುವಲ್ಲಿ ತಾಯ್ನುಡಿ ಸಂಸ್ಕೃತದ ಕೊಡುಗೆ ಅಪಾರ, ಅಗಾಧ!

[/quote]

 ಮನ್ನಿಸಿ, ನನ್ನ ತಾಯ್ನುಡಿ ಕನ್ನಡವೆಂಬುದು ನನ್ನ ಅನಿಸಿಕೆ. ಅದೇ ಸಾಲುಗಳನ್ನು ನಾನು ಹಾಕದಿದ್ದರೂ ಎರಡರ ತಿಲುವಳಿಕೆಯೂ ಒಂದೇ.ತುಂಬಾ ಕನ್ನಡಿಗರು ಕನ್ನಡವೂ ಸಕ್ಕದದ ಮಗು ಎಂದೇ ತಿಳಿದಿದ್ದಾರೆ,ಕನ್ನಡ ತಾಯಿಯ ಹೆತ್ತವ್ವ ದ್ರಾವಿಡ ನುಡಿ,ಇದುವೇ 'ತಮಿಳು' ಎಂಬುದು ತಮಿಳರ ಹೆಮ್ಮೆ, ಅದು ಅಲ್ಲ ಎಂದು ನುಡಿ ಪರಿಣಿತರು ಹೇಳಿದ್ದಾರೆ.ಈಗಿನ 'ಸಂದರ್ಭ' ದಲ್ಲಿ(ಮನ್ನಿಸಿ, ಕನ್ನಡ ಪದ ಕಳೆದಿದೆ),ಯಾಕೆ ಕನ್ನಡದಲ್ಲಿ ಪರಂಗಿ ಪದಗಳ ಕುಣಿತ ನಡೆದಿದೆ? ಅನ್ನುವ ಪ್ರಶ್ನೆಗೆ ಉತ್ತರ, ಕನ್ನಡ ತಾಯಿಯ ದೇಹದಲ್ಲಿ 'ಸಂಸ್ಕೃತ' ಎಂಬ ದೆವ್ವ ಎಂದೋ ಹೊಕ್ಕಾಗಿದೆ, ಅದನ್ನೀಗ ಪರಂಗಿ ನುಡಿ ಬದಲಾಯಿಸುತ್ತಿದೆ ಅಷ್ಟೇ. ಈ ಎರಡೂ ದೆವ್ವಗಳನ್ನು ಒಟ್ಟಿಗೆ ತೊಲಗಿಸಬೇಕು. ತೀರಾ, ಹ,ಳ ತೆಗೆಯುವಟ್ಟು ಮಟ್ಟಿಗೆ ಹೋಗಬೇಕೆಂದು ನಾ ಹೇಳುವದಿಲ್ಲ, ಆದರೆ ಕನ್ನಡದ ಹದ(ಮಹೇಶ್, ಲಯ ಹದಗೆಡಿಸದು) ಕೆಡದಂತೆ ಇರಬೇಕು.

ಡಿ.ಎನ್.ಶಂಕರ ಭಟ್ಟರು 'ಕನ್ನಡ ಬರಹವನ್ನು ಸರಿಪಡಿಸೋಣ' ಎಂಬ ಹೊತ್ತಿಗೆ ಬರೆದಿದ್ದಾರೆ ಎಂದು ತಿಳಪಟ್ಟೆ, ಸಿಕ್ಕರೆ ಎಲ್ಲಿ ಎಂಬುದ ತಿಳಿಸಿ.ಈ ಕನ್ನಡ ಪೂಜಾರಿಯ ಬಾಲಗ (ಬ್ಲಾಗಿಗೊಂದು ಪದ,'ಬಾಲಗ', ಹೇಗಿದೆ?)ನೋಡಿ. ಇವರು ಪರಂಗಿ ನುಡಿ ಬಳಸುತ್ತಾರೆ.

ಹೊಸ ನಾಡ ಕಟ್ಟೋಣ

ಸಾರು, ಅವರ್|ಹೇಳ್ತಾಯಿರೋದು ಸರೀನೆ... ಅವರ ತಾಯ್ನುಡಿ sanskrtಅ ನಮ್ಮದಲ್ಲ. Wink

 

ಮಹೇಶ್, 

ಮನ್ನಿಸಿ, ನಾನು ಅನುಮಾನದಲ್ಲಿದ್ದೇನೆ. ಸಕ್ಕದ-ಕನ್ನಡ? ಸಂಸ್ಕೃತದ ತದ್ಭವ ಸಕ್ಕದ ಅಲ್ಲವೇ? 'ತೀರಾ', ಇಲ್ಲಿ ಬಳಸಿರುವದು ದಂಡೆ ಅರ್ಥದಲ್ಲಲ್ಲ. ಅತೀ ಎಂಬ ಅರ್ಥದಲ್ಲಿ.

ಬೆನಕರೆ,

ನಾನು 'ದೆವ್ವ' ಅನ್ನದೇ 'ಭೂತ' ಅಂದಿದ್ದರೆ, ಬಹುಶ ನಿಮಗೆ ಇಟ್ಟೊಂದು ಸಿಟ್ಟು ಬರುತಿರಲಿಲ್ಲವೇನೋ, ಯಾಕಂದ್ರೆ ದೆವ್ವ ಅಂದ್ರೆ ಸ್ವಲುಪ ಒರಟಾಗುತ್ತದೆ. ನನ್ನ ಮಾತಿನ ಅರ್ಥ ಸಕ್ಕದವನ್ನು ಹಳಿಯುವುದಲ್ಲ, ದೆವ್ವ ಸೇರಿಕೊಳ್ಳೋದು ಅಂದರೆ ಏನು? ನಮ್ಮ ಮೈಯೊಳಗೆ ಬೇರೊಂದು ಆತ್ಮದ ಸೇರ್ಪಡೆ. ನನಗೆ ತಮಿಳು ಒಂದು ನುಡಿ ಅನ್ನುವದನ್ನು ಬಿಟ್ಟರೆ, ಬೇರೇನೂ ತಿಳಿದಿಲ್ಲ, ಕನ್ನಡ ಬಿಟ್ಟು ನನಗೆ ತಿಳಿದವು, ಪರಂಗಿ ನುಡಿ ಮತ್ತು ಹಿಂದಿ. ತಮಿಳು ನಮ್ಮ ತಾಯ್ನುಡಿಯ ಸೋದರಿ, ಅದರಂತೆ ಇದು, ಇದರಂತೆ ಅದು ಇರುವುದು ಸಹಜ. ಆದರೆ ಸಕ್ಕದದ ನೇರ ತತ್ಸಮ ಪದಗಳ ಬದಲು, ತದ್ಭವಗಳ ಬಳಕೆಯಾಗಲಿ.

'ತಾಂತ್ರಿಕ ಮಹಾವಿದ್ಯಾಲಯ',ಸಂಘ, ಮಿತ್ರ, ತಾತ್ವಿಕ, ಇನ್ನೂ ಅನೇಕ. ಇಂಥವು ರೂಪ ಬದಲಾಯಿಸಲಿ ಎಂದೆ. ಸಕ್ಕದ ಕನ್ನಡದ ತಾಯ್ ಅಲ್ಲ. ಪರಂಗಿ ಮಾರಿಯನ್ನು ಓಡಿಸಲು, ಸಕ್ಕದ ಪದಗಳನ್ನು ತಿದ್ದಬೇಕು. ಆಗ ಎರಡೂ ಮಾರಿಗಳು ಕಾಲು ಮುರಕೊಂಡು ಕೈ ಕೀಳುತ್ತಾರೆ.

ಅಯ್ಯೋ ಮಲ್ಲೇಶ್ವರ, ರಸ, ಸಾರು ಇವೆರಡರ ಮಾಡುವ ಬಗೆ ಬೇರೆ, ಬೇರೆ. ರುಚಿನೂ ಬೇರೆ, ಬೇರೆ. ಅದಕ್ಕೆ 'ರಸಂ ಪೌಡರ್', 'ರಸಕ್ ಹಾಕೋ ಪುಡಿ' ಆದರೆ ಸಾಕು.

ಹೊಸ ನಾಡ ಕಟ್ಟೋಣ

ಏನ್ ಮಾಡೋದು ಸಾರ್, ಅವರು ಹುಳಿಯನ್ನ ಮೊಸರನ್ನ ಬಿಟ್ಟು ಬೇರೇನನ್ನು ನೋಡಿಲ್ಲ ಅನ್ತ ಕಾಣುತ್ತೆ

ಇರಲಿ,

ನನ್ನನ್ನು ಸೇರಿಸಿಕೊಳ್ಳಿ 'ಹೊಸ ನಾಡ ಕಟ್ಟಲು' Smile

೧) ಮುಂಚಿನ ಮರುಮಾತಿನಲ್ಲಿ(ಪ್ರತಿಕ್ರೀಯೆ ಅಲ್ಲ Wink) 'ಕಾಲು ಮುರಕೊಂಡ್ ಕೈ' ಅನ್ನುವದನ್ನು 'ಕೈ ಮುರಕೊಂಡ್ ಕಾಲು' ಅಂತ ತಿದ್ದಿಕೊಳ್ಲಿ.

೨) ಮಾಡುವ ಬಗೆ(ವಿಧಾನ ಅಲ್ಲ Wink), ಟೊಮೆಟೋ ಸಾರು, ಅದೆಲ್ಲ ಏನೇ ಇರಲಿ, ನಿಮ್ಮ 'ರಸಂ' 'ರಸ' ಆಗಲಿ ಅಂದೆ ಅಟ್ಟೆ.

ಮಹೇಶ್,

'ಮನೆ', 'ಮನಿ' ಯಾಕಾಯ್ತು? ಇದಕ್ಕೆ ಉತ್ತರ ನಿಮಗೆ ಸಿಕ್ಕಿರಬೇಕು. ಆಡೋ ಬಗೆ ಬೇರೆ, ನುಡಿಯೊಂದೇ. ಜೀವವೊಂದೇ, ಮೈಗಳು  ಬೇರೆ. ಬೇರೆ ನುಡಿಯ ಮೈಗಾಗದ ಪದಗಳನ್ನು ಸೇರಿಸಿಕೊಂಡು, ಅವೂ ಕನ್ನಡಗಳೇ, ಅನ್ನುವದು ಯಾರ್‍ಯಾರೂ ಮನ್ನಿಸಲಾಗದ ತಪ್ಪು. ಕನ್ನಡ ಜೀವ(ಆತ್ಮ)ದ ಮರುಹುಟ್ಟು, ಅಪ್ಪಟ ಕನ್ನಡ ಪದಗಳನ್ನು ಮುಟ್ಟಿ, ಬರಹದೊಳಗೆ ಕಟ್ಟಿ, ಹೊರ ಪದಗಳ ತಟ್ಟಿ ನಮ್ಮವಾಗಿಸಿ, ಬಳಸುವದರೊಂದಿಗೆ ಆಗಬೇಕಿದೆ. 

ನಾನು ಹೇಳಿದ್ದು,

[quote]

ನಾನು 'ದೆವ್ವ' ಅನ್ನದೇ 'ಭೂತ' ಅಂದಿದ್ದರೆ, ಬಹುಶ ನಿಮಗೆ ಇಟ್ಟೊಂದು ಸಿಟ್ಟು ಬರುತಿರಲಿಲ್ಲವೇನೋ, ಯಾಕಂದ್ರೆ ದೆವ್ವ ಅಂದ್ರೆ ಸ್ವಲುಪ ಒರಟಾಗುತ್ತದೆ

[/quote]

ಈ ಮಾತನ್ನು ಹೇಳಿದ್ದು, ಸಕ್ಕದದ ಪಿತ್ತ ನೆತ್ತಿಗೇರಿದವರಿಗೆ ಮಹೇಶ್. ಇವರಿಗೆ ಕನ್ನಡದ ಪದಗಳೆಲ್ಲ ಒರಟೋ ಒರಟು.

ಬೆನಕರು ಬರೆದ ಬರಕಟ್ಟು(ಶ್ಲೋಕ, ನಮ್ಮ ಪಾಲಿಗೆ ಶ್ಲೋಕ,ಶೋಕಗಳೆರಡೂ ಒಂದೇ)

[quote]

ಸಕ್ಕದದೊಳಿನಿತಕ್ಕರೆಯಿರಲ್
ಸಕ್ಕರೆಯದು ಕನ್ನಡದ ಪಾಲ್ಗೆ

[/quote]

ಬೆನಕರೇ ಇದು ನಿಮಗಲ್ಲ, ಈ ಪದಕಟ್ಟು ಬರೆದ ಆ ದೊಡ್ಡವರಿಗೆ,

ಹೌದು,ನೀವು ಮಾಡುತ್ತ ಬಂದಿರುವದೇನು ಗೊತ್ತೆ? ಕೂಸನ್ನು ತಾಯ ಮೊಲೆಗೆ ಬಾಯಿಡಲು ಬಿಡದೇ, ನೀವೇ ಹಾಲಿಂಡಿ, ನಿಮ್ಮ ಸಕ್ಕದದ 'ಸಕ್ಕರೆ ಕಲ್ಲು'ಗಳ ಬಹಳಾಗಿ ಬೆರೆಸಿ, ಕುಡಿಯಲು ಕೊಡುತ್ತಿದ್ದೀರಿ. ಈ ಸಕ್ಕರೆ ಅತಿಯಾಗಿ ನಾತ ಹೊಡಿಯುತ್ತಿದೆ, ಸಾಕು ನಿಮ್ಮ ಆಟ. ನಮ್ಮ ತಾಯೆಡೆಗೆ ಮರಳಲು ಬಿಡಿ. ಬೆನಕರೇ, ಪಾಪ ನಿವೇನು ಮಾಡುವಿರಿ, ಯಾರೋ ಹೇಳಿ ಕೊಟ್ಟಿದ್ದನ್ನು, ಬಾಯಿನೆನಪಿಂದ ಹೇಳುತ್ತಿದ್ದೀರಿ. ನೀವು ನನ್ನಂತೆ ತಾಯ್ ಎದೆ ಹಾಲು ಕಾಣದ ಕೂಸು. ಇದನ್ನು ಬೇಗ ತಿಳಿದಟ್ಟು ಚೆನ್ನು. ಪಿತ್ತ ಬೇಗ ಇಳಿಯಲಿ ಎಂದಟ್ಟೇ ನನ್ನ ಬಯಕೆ.

[quote]

ಓಹೋ! ಭೂತಸಂಚಾರ ಚೆನ್ನಾಗಿಯೇ ಆದಂತಿದೆ!
ಭೂತ ಚೇಷ್ಟೆಯಂತೂ ಮಿತಿಮೀರಿದೆ!
ನಡೆಯಲಿ ನವ ಭೂತ ನರ್ತನ!

[/quote]

ಇದು ಪಿತ್ತದ ವಾಂತಿ(ಮನ್ನಿಸಿ, ಇನ್ ಹ್ಯಾಗೆ ಹೇಳೋದು ಅಂತ ನನಗೆ ತಿಳಿಲಿಲ್ಲ). 'ಸಂಸ್ಕೃತ' ಅನ್ನೋ ಪದವೆ ನಮಗೆ ಕಬ್ಬಿಣ ಅಲ್ಲ, ಉಕ್ಕಿನ ಕಡಲೆ. 'ಸಕ್ಕದ' ಅನ್ನೋ ಪದವೇ ನನಗೆ ಗೊತ್ತಾಗಿದ್ದು ಸಂಪದದಲ್ಲಿ. ಚಣದೊಳಗೆ ಅದು ನನ್ನದೇ ಪದ ಅನ್ನಿಸಿತು, ಹುಟ್ಟಿನಿಂದ ಕೇಳಿದ 'ಸಂಸ್ಕೃತ' ಪದ, ಅದೇನೋ ಏನೋ? ಇನ್ನು ನೀವು ಬಳಸಿರುವ ಭೂತ, ಚೇಷ್ಟೆ, ನರ್ತನ ???

[quote]

ಸತ್ತಂತಿಹರನು ಬಡಿದೆಚ್ಚರಿಸು!
ಕಚ್ಚಾಡುವರನು ಕೂಡಿಸಿ ಒಲಿಸು!
ಹೊಟ್ಟೆಕಿಚ್ಚಿಗೆ ತಣ್ಣೀರ್ ಹರಿಸು!
ಒಟ್ಟಿಗೆ ಬಾಳುವ ತೆರದಲಿ ಹರಸು!

[/quote]

ಇದು ಕನ್ನಡ.

'ಸತ್ತಂತಿಹರನು', ('ಮರಣ ಹೊಂದಿದವರನು' ಅಲ್ಲ)

'ಬಡಿದೆಚ್ಚರಿಸು', ('ದಂಡಿಸಿ ಎಚ್ಚರಿಸು' ಅಲ್ಲ)

'ಕಚ್ಚಾಡುವರನು', ('ದ್ವೇಷಿಸುವರನು' ಅಲ್ಲ)

'ಕೂಡಿಸಿ', ('ಏಕೀಕರಣಗೊಳಿಸಿ' ಅಲ್ಲ)

'ಒಲಿಸು', ('ಇಷ್ಟ'ಪಡಿಸು ಅಲ್ಲ)

'ಹೊಟ್ಟೆಕಿಚ್ಚು', ('ವೈಷಮ್ಯ' ಅಲ್ಲ)

'ತನ್ನೀರು', ('ಶೀತಲ ಜಲ' ಅಲ್ಲ)

'ಎರಚು', ('ಪ್ರೋಕ್ಷಿಸು' ಅಲ್ಲ)

'ಒಟ್ಟಿಗೆ', ('ಏಕತೆಯಿಂದ' ಅಲ್ಲ)

'ಬಾಳು', ('ಜೀವಿಸು' ಅಲ್ಲ)

'ತೆರದಲಿ', ('ರೀತಿಯಲ್ಲಿ' ಅಲ್ಲ)

'ಹರಸು', ('ಅನುಗ್ರಹಿಸು' ಅಲ್ಲ)

ಬೆನಕರು ಹೇಳಿದ್ದು,

[quote]

ದೆವ್ವವನ್ನು ಬೇಗ ಬಿಡಿಸಿಕೊಳ್ಳಿ

[/quote]

ಹೌದು, ನಾವು 'ಸಕ್ಕದ'ದ ದೆವ್ವವನ್ನು ಬಿಡಿಸಿಕೊಳ್ಳುತ್ತೇವೆ. 'ಸಕ್ಕದದಾಳು'ಗಳು ಕೊಂಚ ತೆಪ್ಪಗಿದ್ದರೆ ಸಾಕು.

"ಹೊಸ ನಾಡ ಕಟ್ಟೋಣ"

ಹೆಜ್ಜೆ ಹೆಜ್ಜೆಗೂ ಪರನುಡಿಗಳು, 'ವ್ಯಾಕರಣ'ವೇ ತಪ್ಪು ತಪ್ಪು. ಈಗಿನ ಕನ್ನಡ ಪತ್ತಿಗೆ(ಪತ್ರಿಕೆ), ಮತ್ತು ಹೊತ್ತಿಗೆಗಳನ್ನು ಓದದಿರುವದೇ ಮೇಲು. ಪತ್ತಿಗೆ ಮತ್ತು ಹೊತ್ತಿಗೆಗಳಲ್ಲಿ ನಡೆದಿದೆ 'ಸಕ್ಕದೋತ್ಸವ', ಸಿನಿಮಾ, ಟಿ.ವಿ ಗಳಲಿ 'ಇಂಗ್ಲೀಸೋತ್ಸವ', ಎಲ್ಲಿದೆ ಕನ್ನಡ ಹಬ್ಬ, ಅದು ಇದ್ದರೆ ಹಳ್ಳಿಗರ ಬಾಯಲ್ಲಿ ಮಾತ್ರ. ಇನ್ನೂ ಕೊಂಚ ವರಸ ಹೀಗೇ ನಡೆದರೆ, ಅವರೂ ಮರೆಯುವರು. ಕನ್ನಡ ಪದಕಣಜದಲ್ಲಿನ ಪದಗಳನ್ನು ಕೊಳೆಯಲು ಬಿಟ್ಟು, ಸಕ್ಕದದ 'ಶಬ್ದಕೋಶ'ದಿಂದ 'ಶಬ್ದ'ಗಳನ್ನೇಕೆ ತುರುಕುತ್ತಿದ್ದಾರೆ? ಈಗಾಗಲೇ ಇದು 'ಡಿಕ್ಷನರಿ' ಅಗಿ ಹೋಗಿದೆ, 'ಪದಕಣಜ'ವನ್ನಿವರು ಮರೆತಾಗಿದೆ. " ಕನ್ನಡ 'ಸಾಹಿತ್ಯ' 'ಪರಿಷತ್ತ್' " ಇದು ಕನ್ನಡವೇ? "ಕನ್ನಡ ಬರವಣಿಗೆಯ ಸಮ್ಮೇಳ" ಆಗದೇ?

ಕೊಂಚ ಸಮಯ ಈ ಕಡೆ ತಲೆ ಹಾಕಿರಲಿಲ್ಲ, ಮನ್ನಿಸಿ, ಆದರೆ ತಲೆಯ ಒಂದು ಮೂಲೆಯಲ್ಲಿ 'ಚರ್ಚೆ'ಯ ಈ ಹುಳು ಸುಳಿದಾಡಿಕೊಂಡೇ ಇತ್ತು. 'ಭಾವನೆ'(ಅನಿಸಿಕೆ) ಮತ್ತು 'ವಿಷಯ'ಗಳನ್ನು ಒಂದು ನುಡಿಯ ಮೂಲಕ ಹೇಳಲು ಕಲಿತದ್ದು, 'ಮಾನವ ನಾಗರಿಕತೆ' ಯ ಬೆಳವಣಿಗೆಯ ಒಂದು ದೊಡ್ಡ ಮೈಲುಗಲ್ಲು.

[quote] 

hpn wrote: 

ಕೊನೆಗೆ ಸಂವಹನವೊಂದೇ ಮುಖ್ಯ ಅಲ್ವೆ? ಇಂಗ್ಲಿಷಿನವರು ಪದವೊಂದನ್ನು ಬಳಸುವಾಗ "ಇದು ಫ್ರೆಂಚ್ ಮೂಲದ ಶಬ್ಧ, ಬಳ್ಸೋದು ಬೇಡ", "ಇದು ಇಟಾಲಿಯನ್ ಮೂಲದ ಪದ, ಬಳಸೋದು ಬೇಡ" ಎನ್ನುತ್ತಿದ್ದರೆ ಎಷ್ಟು ತಮಾಷೆಯಾಗಿರುತ್ತಿತ್ತು? ;-)

[/quote]

 ಬರಿ ತಿಳಿದಿದ್ದನ್ನು ತಿಳಿಸುವದಸ್ಟೇ 'ಮುಖ್ಯ'ವಾದರೆ, ಅದು ಎಲ್ಲರ ಮತವಾಗಿದ್ದರೆ, ಕನ್ನಡದಿಂದ ಹಿಡಿದು ಬೇರಾವ 'ಭಾಷೆ'ಯೂ ಬೆಳೆಯುತ್ತಿರಲಿಲ್ಲ. ಇಲ್ಲಿ ನಾನು ಮತ್ತು ಮಹೇಶರು ಬಲು ಎಚ್ಚರದಿಂದ ಕನ್ನಡದ ಪದಗಳನ್ಣೇ ಬಳಸಿ ಬರೆಯಲು ತಿನುಕಾಡುತ್ತಿರುವುದು ನಿಮಗೆಲ್ಲ ನಗೆಪಾಟಲಾಗಿ ಕಂಡಿರಬಹುದು. ಒಮ್ಮೆ ನಕ್ಕು ಬಿಡಿ, ಆದರೆ ಅದರ ಹಿಂದಿನ ಕಾಳಜಿ ತಿಳಿದು ನೋಡಿ.

ಬೇರೇ ನುಡಿಯ ಪದಗಳು ಬೇಡವೇ ಬೇಡ ಅನ್ನುವದು ನನ್ನ ವಾದವಲ್ಲ. ಅವುಗಳನ್ನು ಕನ್ನಡದ ಹದಕ್ಕೆ ಹೊಂದಿಸುವದು ಬೇಕು(ಕನ್ನಡ ಪದ ಸಿಗದಿರುವಾಗ ಅಸ್ಟೇ(ಮಾತ್ರ)). ಕನ್ನಡದ ಬೆಂಗಳೂರು ಪರಂಗಿಗಳ ಬಾಯಲ್ಲಿ 'ಬ್ಯಾಂಗಲೋರ್' ಆಯಿತು, ಆಗ ಬೆಂಗಳೂರಿಗರು ಅದಕ್ಕೆ ನಕ್ಕಿದ್ದಿರಬೇಕು, 'ಶಿಷ್ಟ'ರು ಈಗ ಹಳ್ಳಿಗರ ತಪ್ಪು ಉಚ್ಚಾರಕ್ಕೆ (ರಾಜೋಸವ) ನಗುವಂತೆ. ಕನ್ನಡದಲ್ಲಿ ಅವಸರವಾಗಿ ಮಾತಾಡುವಾಗ 'ಹೃದಯ', 'ರುದಯ'ವೇ ಆಗುತ್ತದೆ.

[quote]

hpn wrote:

ಸಂಗನಗೌಡರಂತೂ "ಹೀಗೆ ಬರೆಯುವುದಾದರೆ ಬರೆಯಲೇಬೇಡಿ" ಎಂದು ಬರೆದದ್ದು ಸ್ವಲ್ಪವೂ ಸರಿ ಬೀಳುವಂತಿಲ್ಲ.

[/quote]

ಬರೆಯೋರು ಬರಿತಾರೆ, ತಗೋಳೋದು ಬಿಡೋದು ನಾವು ಓದುಗರಿಗೆ ಬಿಟ್ಟಿದ್ದು. ಓದುಗನಾಗಿ ನಾನು ಮರುನುಡಿಯುವ ಹಕ್ಕು ಇಲ್ಲವೇ? ಬರೆದದ್ದಕ್ಕೆಲ್ಲಾ 'ಮೂಗ ಬಸವ'ನ ಹಾಗೆ ಗೋಣು ಹಾಕಿಕೊಂಡಿರಬೇಕೇ?

[quote]

hpn wrote:

ಮಾರಾಯ, ಭಾಷೆ ಹೇಗೆ ಬೆಳೆಯುತ್ತದೋ ಹಾಗೆ ಬೆಳೆಯೋದಕ್ಕೆ ಯಾಕೆ ಬಿಡಬಾರದು? ಅದು "ಹೀಗೇ ಇರಬೇಕು" ಅನ್ನೋ ಹಠ ಯಾಕೆ? ಸಂಸ್ಕೃತ ಇಷ್ಟವಿದ್ದವರು ಅದರ ಪದಗಳನ್ನು ಬಳಸುತ್ತಾರೆ, "ಆ ಪದ ಬಳಸಬೇಡಿ" ಎಂದು ಹೇಳೋಕೆ ಹೊರಡೋದು ಯಾಕೆ?

[/quote]

ಮೊದಲು ಕರ್ನಾಟಕ ಹರಿದು ಹಂಚಿ ಹೋಗಿತ್ತು, ಅದನ್ನು ಹಾಗೇ ಬಿಡಬಾರದಿತ್ತೆ? ಬಿಟ್ಟಿದ್ದರೆ ನಮ್ಮದೊಂದು ನಾಡು ಇತ್ತು, ಅಂತ ನಾವು ಹೇಳಿಕೊಂಡಿರಬೇಕಿತ್ತು ಅಸ್ಟೆ.

ಸಕ್ಕದವನ್ನು ನುಸುಳಿಸುವುದಕ್ಕಾಗಿಯೇ ಕನ್ನಡದ ವ್ಯಾಕರಣವನ್ನು ತಿದ್ದಲಾಗಿದೆ ಎಂದು ನಾನು ನಂಬುತ್ತೇನೆ. ಇದು ಕೊಂಚ ಗಮನಿಸಿದರೆ ಸಾಕು, ತಿಳಿಯುತ್ತದೆ. 'ಸಮಸ್ಯೆ' ದೊಡ್ಡದಿದೆ ಎಂದು ಅದು ಸುಳ್ಳು ಅನ್ನಬಾರದು. ಅದು ದೊಡ್ಡ ತಪ್ಪಾಗುವದು, ಬೆನಕರಿಗೆ ಇದರ ಸುಳಿವು ತಲುಪಿದೆ, ಬಹಳ ಒಳ್ಳೆಯದು. 'ಶಿಷ್ಟ ಭಾಷೆ' ಯ ಹೆಸರಿನಲ್ಲಿ ಆಗಿನಿಂದ ಕನ್ನಡದ ಎಲುಬು ಗೂಡಿ(ಅಸ್ತಿ ಪಂಜರ)ನಲ್ಲಿ ಕನ್ನಡದ ನೆತ್ತರು ಮಾಸ ತೆಗೆದು, ಸಕ್ಕದದ 'ರಕ್ತ ಮಾಂಸ'ಗಳನ್ನು ತುಂಬುತ್ತ ಬರಲಾಗಿದೆ, ಇದನ್ನು ಒಪ್ಪಲು ಆಗದೆ 'ಅತಿ ಮಡಿವಂತರು' ಅನ್ನೋ ಹಣೆಪಟ್ಟಿ ನಮಗೆ ಕಟ್ಟಿ, ಕನ್ನಡವನ್ನು ಕಟ್ಟುವ ಹೆಸರಿನಲ್ಲಿ ಅದನ್ನು ಕೆಡುವುತ್ತ ಸಾಗುವವರಿಗೆ ಹಾರ ತುರಾಯಿಯ 'ಸನ್ಮಾನ' ಮಾಡಿಕೊಂಡೇ ಹೋಗಬೇಕೆಂಬುದು ತಮ್ಮ ಆಸೆ. ಇದು ಸರಿಯೇ?

ಒಂದು ಉದಾಹರಣೆ: ಹಿಂದಿಯ 'ನಲ್' ಕನ್ನಡದ 'ನಳ' ಆಗಿರಬಹುದು, ಅದು ಕನ್ನಡಕ್ಕೆ ಒಪ್ಪುವಂತಿದೆ, ಆದರೂ 'ನಲ್ಲಿ' ಪದದ ಬಳಕೆ ಏಕೆ? ಕನ್ನಡದಲ್ಲಿ ಇನ್ನೊಂದು ಪದ 'ಕೊಳಾಯಿ' ಇದೆ, ಅದನ್ನು ಬಳಸಬಹುದಲ್ಲ?  

ಹೊಸ ನಾಡ ಕಟ್ಟೋಣ(ಅಂದರೆ ಒಂದಾಗೋಣ ಎಂದಟ್ಟೇ)