ಕರ್ಣಾಟಕದಲ್ಲಿ ಹೆಣ್ಣುಮಕ್ಕಳು ಮನೆಯಲ್ಲಿ ಹೇಳುವ ಹಾಡುಗಳು !

To prevent automated spam submissions leave this field empty.

೧೯೩೫ ರಲ್ಲಿ ನಮ್ಮ ತಾಯಿಯವರು ಬರೆದಿಟ್ಟ, ಅವರು ಹೇಳುತ್ತಿದ್ದ ಹಾಡುಗಳ ಸಂಗ್ರಹದಿಂದ :

ಅವರು ನೂರಾರು ಹಾಡುಗಳನ್ನು ಪುಸ್ತಕ ನೋಡದೆ, ಬಾಯಿನಲ್ಲೇ ಹೇಳುತ್ತಿದ್ದರು. ಒಂದು ಉದಾಹರಣೆ ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ. ಇದು 'ನಳಚರಿತ್ರೆ'ಯ ಪ್ರಸಂಗ.

ಲೆತ್ತವಾಡಿ ಕೌರವರಿಗೆ ರಾಜ್ಯ ಸೋತು ಧರ್ಮಜ, ತನ್ನ ಪತ್ನಿ 'ದ್ರೌಪದಿ' ಮತ್ತು ತಮ್ಮಂದಿರೊಡನೆ ವನದಲ್ಲಿ ಜೀವಿಸುತ್ತಿದ್ದಾಗ, 'ಬೃಹದಶ್ವ' ಎಂಬ ಮುನಿವರ್ಯರು ಅವರ ಕುಟೀರಕ್ಕೆ ಬರುತ್ತಾರೆ. ದ್ರೌಪದಿ ಅತಿ ಸಂತಾಪದಿಂದ ಅವರ ಹತ್ತಿರ 'ಮುಂದೇನು ಗತಿ'ಎಂದು ಕೇಳಿದಾಗ ಅವರು ನೀವು ಕಷ್ಟ ಪಡುತ್ತಿರುವುದು ನಳಮಹಾರಾಜನಿಗೆ ಹೋಲಿಸಿದರೆ ಏನೂ ಇಲ್ಲ. ಸಮಾಧಾನ ಮಾಡಿಕೊಳ್ಳಿ ಎಂದು ಹೇಳಿ ಸಂತೈಸುತ್ತಾರೆ. ಅವರು ಹೇಳಿದ 'ನಳಚರಿತ್ರೆ' ಹಾಡಿನ ರೂಪದಲ್ಲಿದೆ.

ಉಮೆಯ ಸುತನಾಚರಣ ಕಮಲಕೆ, ನಮಿಸಿ ಪೇಳುವೆನು ನಾನು ಹರುಷದಿ, ರಮೆಯ ರಮಣನ
ಕರುಣದಿಂದಲಿ , ನಳನ ಕಥೆಗಳನು.[೧] ಕಂತು ಪಿತನಾ ಕರುಣದಲಿ , ದಮಯಂತಿ ಸಹಿತಾಪತ್ತು ಕಳೆದು, ಸಂತಸದಿ ಸಾಮ್ರಾಜ್ಯ ನಾಳಿದ , ಕಥೆಯ ಪೇಳುವೆನು,[೨]ಸತ್ಯವಂತಾನೆಂಬ ನಳತಾ, ಪೃಥುವಿಪತಿ ರಾಜಾಧಿರಾಜನು, ಭೃತ್ಯನಾಗಿ ಭೀಮೇಶ ಕೃಷ್ಣನ , ಭಕ್ತನೆನಸಿದನು [೩]

ಮುಂದೆ 'ಕೃಷ್ಣ'ನ ದಯದಿಂದ 'ನಳಚಕ್ರವರ್ತಿ' ದೊರೆತನ ಮತ್ತೆ ಪಡೆದು ಪಟ್ಟವನ್ನಾಳುತ್ತಾನೆ.

ಮಂಗಳ ಹೀಗಿದೆ:

ಎತ್ತಿ ಬೆಳಗಿರೆ ಮುತ್ತಿನಾರತಿಯ, ನಳಚಕ್ರವರ್ತಿರಾಜಭೂಪಾಲಗೆ, ಪಟ್ಟದರಶೀ ಸಹಿತ ಕುಳಿತನಳರಾಜಗೇ, ಅಚ್ಚಕೆಂಪಿನ ಕದಾಲಾರತೀಯ [ಪ] ಅಕ್ಷಹೃದಯಾವನ್ನು ಕಲಿತುಕೊಂಡಾಕಲಿಯು ಕಾರ್ಕೋಟಕನ ಕರುಣದಿಂದತಾನು , ಪಗಡೆನಾಡಿ ಪುಷ್ಕರನತಾಗೆದ್ದೂ, ಸಡಗರದಿಸಾಂಬ್ರಾಜ್ಯವಾಳಧೊರೆಗೇ [೧] ರುಳಿಗೆಜ್ಜೆ ಪೈಝುಣವು, ಕಾಲು ಪಂದ್ಯಹೆರಳು,ಭಂಗಾರರಾಗಟೆಯುಗೊಂಡ್ಯಅರಳು, ಮಲ್ಲಿಗೇಪಾರಿಜಾತವುಮುತ್ತಿನಾದಂಡೆ, ಕಳೆಯು ಸುರಿಯುತಿದೆ, ದಮಯಂತಿಗೀಗ [೨] ಹತ್ತಿಸಿಂಹಾಸನದಿಮುದದಿಂದಕುಳಿತಿರಲು, ಎತ್ತಿ ಚಾಮರಗಳನುಬೀಸುತಿರಲು, ಮುತ್ತೈದೇರೆಲ್ಲಪಾಡಿ ಮುದದಿಂದ, ಹಚ್ಚಿಜೋತಿಗಳಹರಿವಾಣದೊಳಗೆ [೩] ಜಾಂಬುವನಜರಿವೋಪೀತಾಂಬರವನುಟ್ಟು, ಕುಂದಣದಂಚೀನಕುಪ್ಪುಸವತೊಟ್ಟು, ಹೊಂದಿಕುಳಿತಿರಲು ಭೀಮೇಶಕೃಷ್ಣನ್ನಪಾಡಿ, ಆನಂದದಿಂ ಅಕ್ಷತೆನಿಟ್ಟುಹರಸುತಾಲಿ [೪]

ಸಂಪೂರ್ಣಂ, ಶುಭಮಸ್ತು. ಜಯ ಜಯ ರಘುವೀರ ಸಮರ್ಥ.

ಹೀಗೆ ಹಾಡುತ್ತಿದ್ದವರಲ್ಲಿ, ನಮ್ಮತಾಯಿಯವರು ನಿಸ್ಸೀಮರು. ಮದುವೆಯ, ಹಸೆಗೆ ಕರೆದ ಹಾಡು,ಬೀಗರ್ನ ಕರೆಯುವ ಹಾಡು, ಆರತಿ, ಶುಭಾಶೀರ್ವಾದ,ನಾಗವಲ್ಲೀ ಹಾಡು, ಉಡಿತುಂಬುವ ಹಾಡು, ಬೀಳ್ಕೊಡುವ ಹಾಡು ಇತ್ಯಾದಿ.

ಅವರ ಹಾಡುಗಳನ್ನು 'ಮಹಿಳೆಯರ ಕಾರ್ಯಕ್ರಮ'ದವರ ವಿಭಾಗ, ಆಕಾಶವಾಣಿ, ಧ್ವನಿಮುದ್ರಿಸಿತ್ತು, ಎಂದು ಮನೆಯವರು ಹೇಳುತ್ತಾರೆ. ಆಗ ನಾನು ಮುಂಬೈನಲ್ಲಿದ್ದೆ. ಅವರ ಹಾಡುಗಳಲ್ಲಿ ಕೆಲವನ್ನು ನಮ್ಮ ಅಣ್ಣಂದಿರು ಬರೆದಿಟ್ಟಿದ್ದರು. ಈ ದಿನ ಸಿಕ್ಕಿತು. ನಮ್ಮ ತಾಯಿಯವರ 'ಪುಣ್ಯತಿಥಿ' ೩೧ ನೆಯ ತಾರೀಖು, ಜುಲೈ ಇದೆ. ಸಮಯಕ್ಕೆ ಸರಿಯಾಗಿ ದೊರೆತಿದೆ. 'ಮಾತೃ ಚರಣ'ಕ್ಕೆ ನನ್ನ ಹೃತ್ಪೂರಕ ನಮನಗಳು ! ಓಂ ಶಿವಾಯ ನಮಃ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಬಹುಶಃ ಇದನ್ನು, 'ಕರ್ಣಾಟಕದಲ್ಲಿ ಹೆಣ್ಣುಮಕ್ಕಳು ಮನೆಯಲ್ಲಿ ಹೇಳುತ್ತಿದ್ದ ಕಾಲದ ಹಾಡುಗಳು' ಎನ್ನಬಹುದೇನೋ !

ನಮ್ಮ ಸಂಸ್ಕೃತಿಯ ಒಂದು ತುಣುಕನ್ನು ಇಲ್ಲಿ ಹಂಚಿಕೊಂಡು ಉಳಿಸಿದುದಕ್ಕಾಗಿ ಧನ್ಯವಾದಗಳು. ಸಂಪ್ರದಾಯದ ಹಾಡುಗಳು ಇವೆಯೆಂದೂ ನಮ್ಮ ತರುಣ/ತರುಣಿಯರಿಗೆ ಬಹುತೇಕ ತಿಳಿದಿಲ್ಲ. ಅವರ ಮೊಮ್ಮಕ್ಕಳ ಕಾಲಕ್ಕೆ ನಮ್ಮ ಸಂಸ್ಕೃತಿಯ ಒಂದು ಪಾಲನ್ನು ಮತ್ತೆ ಸಿಕ್ಕದ ಹಾಗೆ ಕಳೆದುಕೊಳ್ಳುತ್ತೇವೆ.

ಸಂಪ್ರದಾಯದ ಹಾಡುಗಳ ಸಂಕಲನವನ್ನು ಶ್ರೀಮತಿ ವಾಗೀಶ್ವರೀ ಶಾಸ್ತ್ರಿ ಪ್ರಕಟಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಹುಡುಕಿದಾಗ ನನಗೆ ಪ್ರತಿಗಳು ಸಿಕ್ಕಲಿಲ್ಲ. ಸುಮಾರು ೬೦೦ ಪುಟಗಳಷ್ಟಿನ ಪುಸ್ತಕ.
ಅಲ್ಲಿ ಸೇರಿಲ್ಲದ ಹಾಡುಗಳೆಷ್ಟೋ ಇವೆ.

ಭೀಮೇಶಕೃಷ್ಣ - ಇದು ಹೆಳವನಕಟ್ಟಿ ಗಿರಿಯಮ್ಮನವರ ಅಂಕಿತವಲ್ಲವೆ?

ವೆಂ.

ಜಿವಿಎಮ್ಟಿರವರಿಗೆ,
ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. ನೀವು ತಿಳಿಸಿದ,ಹಳೆಯ, ಒಂದು ಹಸೆಗೆ ಕರೆದ ಹಾಡು ಕೊಡುತ್ತಿದ್ದೇನೆ. ಅದೂ, ವಾಗೇಶ್ವರಿ ಶಾಸ್ತ್ರಿಯವರ 'ಸಂಪ್ರದಾಯದ ಹಾಡುಗಳ ಪುಸ್ತಕದಿಂದಲೇ ! ಸರೀನಾ ?

ಬಾರೇ ನೀರೇ ವೈಯ್ಯಾರೆ :

ರಾಗ : ಅಭೇರಿ, ಆದಿತಾಳ.
ತ್ಯಾಗರಾಜರ, 'ನಗುಮೊಮುಗನಲೇನಿ' ಎಂಬಂತೆ.

ಬಾ ನೀರೆ ವೈಯ್ಯಾರೆ .
ಬಲು ಗಂಭೀರೆ . ಬಾ ಪೀಠಕೆ ನೀ [ಪ]
ಸುಂದರೀ ನಿನ್ನನೂ. ಚಂದದಿ ಕರೆವೇ.
ಅಂದವಾದ ಕುಂದಣದ್ಹಸೇಗೇ. ಚಂದದಿಂದನೀ.[ಅ][ಪ]

ರತ್ನಖಚಿತವಾದ. ಚಿತ್ರದಾ ಹಸೆಗೇ
ಕೃತ್ತಿವಾಸನ ಸತಿ ನಿನ್ನಾ. ಅರ್ಥಿಯಿಂದ ಕರೆವೇ.
ಮುತ್ತಿನಾರತಿಗಳ . ಹಸ್ತದಿಂ ಪಿಡಿದೂ.
ಮುತ್ತೈದೆಯರೆಲ್ಲಾ. ಕರೆವೊರು ನಿನ್ನ.
ಚಿತ್ತೈಸು ದೇವಿ.[ನೀ] [ಚರಣ]

ಇವೆಲ್ಲಾ ಅಂದು ಚಾಲ್ತಿಯಲ್ಲಿದ್ದ ನಮ್ಮಮ್ಮ,ನಿಮ್ಮ ಅಜ್ಜಿಯರ ಬಾಯಿಂದ ಹೊರಟ, ನುಡಿ ಮುತ್ತುಗಳು !

ನಮ್ಮ ಅವ್ವನೂ ಎಷ್ತೆಷ್ಟೋ ಹಾಡುಗಳನ್ನು ಹಾಡುತ್ತಿರುತ್ತಾರೆ .
ಅದರಲ್ಲಿ ಎಣ್ಣೆಯನ್ನು ಹಚ್ಚುವಾಗ - ವಿಶೇಷತ: ದೀಪಾವಳಿ ಸಮಯದಲ್ಲಿ - ಪುರಂದರ ದಾಸರ ಈ ಹಾಡನ್ನು ಹಾಡುವಳು.

ಬಣ್ಣಿಸಿ ಗೋಪಿ ಹರಸಿದಳು
ಎಣ್ಣೆಯನ್ನೊತ್ತುತ ಯದುಕುಲ ತಿಲಕನಿಗೆ

ಆಯುಷ್ಯವಂತನಾಗು ಅತಿಬಲ್ಲಿದನಾಗು
ಮಾಯದ ಖಳರ ಮರ್ದನನಾಗು
ಧೀರನು ನೀನಾಗು ಬವಾಂಬುಧಿಯಾಗು
...... ಎಂದೆನುತ
ಇತ್ಯಾದಿ ..

( ನಾನು ' ಆಯುಷ್ಯವಂತನಾಗು , ಅತಿ ಮುಠ್ಠಾಳನಾಗು! ,
ಊರಿನ ಜಗಳ ಮನೆಗೆ ತಗೊಂಬಾ!! ' ಅನ್ನುತ್ತೇನೆ!)

ದಾಸರ ಮತ್ತೆ ಶರಣರ ವಚನಗಳು ,ಶರೀಫರ ಎಷ್ಟೋ ಹಾಡುಗಳು ಬೇರೆ ಬೇರೆ ಉದ್ದೇಶಕ್ಕೂ ಬಳಕೆಯಾಗುವಂತಿದ್ದು ನಮ್ಮ ಪ್ರಜ್ಞೆಯ ಭಾಗವಾಗಿವೆ .
.
ನನಗೆ ಮದುವೆ ನಿಶ್ಚಯವಾದಾಗ ನನ್ನ ಹೆಂಡತಿಗೆ ಆಕೆಯ ಗೆಳತಿಯರು .
' ಶ್ರೀಕಾಂತ ಎನಗಿಷ್ಟು ದಯಮಾಡೋ ,
ಏಕಾಂತದಲಿ ನಿನ್ನ ಭಜಿಸುವ ಸೌಭಾಗ್ಯ' ... ಎಂದು ಕಾ(ಛೇ)ಡಿಸುತ್ತಿದ್ದರು!

ಇವೆಲ್ಲ ಉಳಿಯುತ್ತವೋ ಇಲ್ಲ ಕಾಲದ ಹುಚ್ಚು ಪ್ರವಾಹದಲ್ಲಿ ಕೊಚ್ಚಿ ಹೋಗುವವೋ ?

ಶ್ರೀಕಾಂತ ಮಿಶ್ರಿಕೋಟಿ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಶ್ರೀಕಾಂತರಿಗೆ ನಮಸ್ಕಾರ.

ನಿಮ್ಮ ಉದಾಹರಣೆಗಳು ಬಹಳ ಪ್ರಸ್ತುತವಾಗಿವೆ. ನೆನೆಸಿಕೊಂಡು ಖುಶಿ ಪಡುವಂತಹವೇ !
ನಮ್ಮತಾಯಿಯವರು, ಮಕ್ಕಳಿಗೆ ತಲೆಗೆ ಎಣ್ಣೆ ಒತ್ತುವಾಗ, ಮೊದಲು ಒಂದು ಬೊಟ್ಟಿನಲ್ಲಿ ಎಣ್ಣೆ ಅದ್ದಿಕೊಂಡು ತೊಡೆಯಮೇಲೆ, ಅಶ್ವತ್ಥಾಮ, ಬಲಿರ್ವ್ಯಾಸ,ಕೃಪಃ,ಹನುಮಾನ್,ಪರುಶರಾಮಸ್ಛ, ಸಪ್ತೈತೆ ಚಿರಂಜಿವನಹಃ [ಏಳನೆಯವ ಯಾರು?] ಇಡುತ್ತಾ ಹೋಗಬೇಕು. ನಂತರ ಆ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳುತ್ತಿದ್ದೆವು. ಅದು ಎಲ್ಲಾ ಕಡೆ ರೂಢಿಯಲ್ಲಿತ್ತು.

ನಂತರ, ಮಕ್ಕಳಿಗೇಲ್ಲಾ ಆರತಿ.

ಒತ್ತಿದರೆಣ್ಣೆಯ ಚಿತ್ತಜ ಪಿತನಿಗೆ... [ಇರಬೇಕು, ಇದೆ ಹಾಡು] ಹಾಡುತ್ತಿದ್ದರು.
ಹರಸುವ ಹಾಡಿನಿಂದ ಮುಕ್ತಾಯ !

ಇವೆಲ್ಲಾ ನೆನೆಸಿಕೊಂಡರೆ ಕಣ್ಣಲ್ಲಿ ನೀರು ಬರುತ್ತೆ !

ಅಶ್ವತ್ಥಾಮೋ ಬಲಿರ್ವ್ಯಾಸೋ ಹನೂಮಂತೋ ವಿಭೀಷಣಃ |
ಕೃಪಶ್ಚ ಪರಶುರಾಮಶ್ಚ ಸಪ್ತೇತೇ ಚಿರಂಜೀವಿನಃ ||

ಅಶ್ವತ್ಥಾಮನದಾದರೂ ಎಂತಹ ಚಿರಂಜೀವನ, ಪಾಪ. ಆದರೂ ಮಾಡಿದುಣ್ಣೋ ಮಹರಾಯ, ಏನೂ ಮಾಡಲಾಗದು.

ಹಸೆಗೆ ಕರೆದ ಹಾಡಿಗಾಗಿ ಥ್ಯಾಂಕ್ಯೂ.

ವೆಂ.

ನಿಮಗೆ ಬಿಡುವಾದಾಗ ನಿಮ್ಮ ಅವ್ವನವರನ್ನು ಕೂಡಿಸಿಕೊಂಡು ಹಾಡುಗಳನ್ನು ಹೇಳಿಸಿ ರೆಕಾರ್ಡು ಮಾಡಿಟ್ಟುಕೊಳ್ಳಿ.

ಆಮೇಲೆ ನಿಧಾನವಾಗಿ transcribe ಮಾಡಿ ನಿಮ್ಮ ಬ್ಲಾಗಿನಲ್ಲಿ ಹಾಕಿ.

ಹಾಡುಗಳಷ್ಟೆ ಅಲ್ಲ, ತಿಂಡಿಗಳನ್ನೂ ಸಹ.

ವೆಂ.