ಮುಗ್ಧತೆಯ ಮೋಡಿ

To prevent automated spam submissions leave this field empty.

ಅಜ್ಜಿಯವರ ಹಠಾತ್ ನಿಧನದ ವಾರ್ತೆ ಕೇಳಿ ಕೂಡಲೇ ಭಾರತಕ್ಕೆ ಬಂದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ನನ್ನ ಪ್ರಥಮ landing. ಹೊಚ್ಚ ಹೊಸ ನಿಲ್ದಾಣ. ಆದರೆ ಆಗಲೇ ನಿರ್ವಹಣೆಯ ಬೇಜವಾಬ್ದಾರಿಯೋ ಏನೋ ಸೀಲಿಂಗ್ ನ ಲೈಟ್ ಫಿಟ್ಟಿಂಗ್ ಮೇಲೆ ಒಂದಿಂಚು ಧೂಳು ತುಂಬಿಕೊಂಡಿತ್ತು. ಸಾವಿರಾರು ಕೋಟಿ ಖರ್ಚು ಒಂದು ಒಳ್ಳೆ ವಿಮಾನ ನಿಲ್ದಾಣದ ನಿರ್ಮಾಣಕ್ಕೆ. ಆ ಹಣ ಪ್ರಜೆಗಳದು. ಈ ರೀತಿಯ ನಿರ್ಲಕ್ಷ್ಯದಿಂದ ಕೆಲವೇ ವರ್ಷಗಳಲ್ಲಿ ಕಟ್ಟಡ ಶಿಥಿಲಗೊಳ್ಳಲು ಶುರುವಾಗುತ್ತದೆ. ಅಂದರೆ ಈ ಸಾರ್ವಜನಿಕ ಹಣ ಈ ರೀತಿ ಪೋಲಾದರೆ ಅದಕ್ಕೆ ಒಂದು ವ್ಯವಸ್ಥೆ ಬೇಡವೇ ಪ್ರಶ್ನಿಸಲು? ಖರ್ಚು ಮಾಡುವವರೂ, ನಿರ್ವಹಿಸುವವರೂ ಒಬ್ಬರೇ ಆದಾಗ ಈ ಸಮಸ್ಯೆ ತಲೆದೋರುತ್ತದೋ ಏನೋ? ವಲಸೆ ವಿಭಾಗದಲ್ಲಿ ತನ್ನ ಪಾಡಿಗೆ ತಾನು ಪ್ರಯಾಣಿಕರ ಪಾಸ್ಪೋರ್ಟ್ಗಳನ್ನು ಎಂಟರ್ ಮಾಡುತ್ತಿದ್ದ ಸಿಬ್ಬಂದಿಯ ಹತ್ತಿರ ಅಧಿಕಾರಿ ಥರ ಕಾಣುತ್ತಿದ್ದ ವ್ಯಕ್ತಿ ಹೋಗಿ " ಹೀಗೆ ಸುಮ್ಮನೆ ಮಾತಾಡದೆ ಎಂಟರ್ ಮಾಡಬಾರದು, ಏನಾದರೂ ಪ್ರಶ್ನೆ ಕೇಳಬೇಕು" ಎಂದು ತನ್ನ ಬ್ರಿಟಿಷ್ ಕಾಲದ ಯಜಮಾನಿಕೆಯ ಪ್ರದರ್ಶನ ಮಾಡುತ್ತಿದ್ದ. ನಿಲ್ದಾಣದಿಂದ ಹೊರ ಬಂದ ನಾನು ನನ್ನನ್ನು ಬರ ಮಾಡಿಕೊಳ್ಳಲು ಬರುವ ತಮ್ಮನಿಗಾಗಿ ಕಾಯುತ್ತಾ ಅಲ್ಲೇ ಇದ್ದ ಸಾಲು ಖುರ್ಚಿಗಳತ್ತ ನಡೆದು ಕುಳಿತಾಗ ಪಕ್ಕದಲ್ಲಿ ೬೫- ೭೦ ಸುಮಾರಿನ ಗೌಡರು ಕುಳಿತಿದ್ದರು. ನಮಸ್ಕಾರ ಯಜಮಾನರಿಗೆ ಎಂದ ಕೂಡಲೇ ತಬ್ಬಿಬ್ಬಾದ ಅವರು ಇದ್ಯಾರು ಅಪರಿಚಿತ ವ್ಯಕ್ತಿ ಎಂದು ನನ್ನೆಡೆ ನೋಡಿ, ನಂಸ್ಕಾರ ಕೂತ್ಕೋ ಅಪ್ಪ ಎಂದು ಸ್ವಾಗತಿಸಿದರು. ಶುಭ್ರ ಬಿಳಿ ಪಂಚೆ, ಅಂಗಿ, ತಲೆಗೆ ಮುಂಡಾಸು ಧರಿಸಿದ್ದ ಅವರನ್ನು ಕೇಳಿದೆ ಯಾರನ್ನು ಬರಮಾಡಿಕೊಳ್ಳಲು ಬಂದಿರಿ ಎಂದು. ಅವರು, ಅಯ್ಯೋ, ಇಲ್ಲ ಕಣಪ್ಪ, ಏನೋ ಒಸ ವಿಮಾನ ನಿಲ್ದಾಣ ಕಟ್ಟವ್ರಂತ ಕೇಳ್ದೆ, ನೋಡ್ಕೊಂಡ್ ಓಗಣ ಅಂತ ಬಂದೆ ಎಂದರು.

ಆಗ ತಾನೇ ತಿರುಪತಿಯಿಂದ ಮಗ ಅಳಿಯಂದಿರ ಒಟ್ಟಿಗೆ ಮರಳಿ ಬಂದಿದ್ದ ಗೌಡರಿಗೆ ನಮ್ಮ ಹೊಸ development ನೋಡುವಾಸೆ. ನೋಡಪ್ಪ ಎಂಗೈತೆ ಕಟ್ಟಡ, ಎಲ್ನೋಡಿದ್ರೂ ಗಾಜೆ ಎಂದು ಅಚ್ಚರಿ ಪಟ್ಟರು. ನೋಡಪ್ಪ, ನೀನು ಯಾರೋ ಏನೋ ನಾ ಕಾಣೆ, ಆದರೆ ನೀನಾಗೇ ಬಂದು ನಮಸ್ಕಾರ ಹೇಳ್ದೆ, ಅಷ್ಟು ಸಾಕು ಎಂದು ನನ್ನತ್ತ ನೋಡಿ ಹೇಳಿದಾಗ ಈ ಹಿರಿಯ ವ್ಯಕ್ತಿಯ ಸೀದಾ ಸಾದಾ ನಡವಳಿಕೆ, ಅವರ ಶುಭ್ರ ಮಂಜಿನಂಥ ವಸ್ತ್ರದಷ್ಟೇ ಸ್ವಚ್ಛ ಮನಸ್ಸು ಕಂಡು ಸಂತಸ ಪಟ್ಟೆ. ಸ್ವಲ್ಪ ದೂರದಲ್ಲಿ ಒಬ್ಬ ತರುಣ ಮತ್ತು ತರುಣಿ ( ಅಣ್ಣ ತಂಗಿಯೋ, ಯಾರೋ ಇರಬೇಕು ) hug ಮಾಡುವುದನ್ನು ನೋಡಿ, ಅಯ್ಯೋ ಇದೇನು, ನಮ್ ಕಾಲ್ದಲ್ ಇದಿರ್ಲಿಲ್ಲ ಬಿಡು ಎಂದು ಮುಗ್ಧತೆಯಿಂದ ನಾಚಿದರು ಗೌಡರು. ಇನ್ನೂ ಪೇಟೆ ಜೀವನ ಪೂರ್ತಿ ಕಾಣದಿದ್ದ ಗೌಡರಿಗೆ ಬರೀ ಒಂದು "simple hug" atrocious ಆಗಿ ಕಂಡಿದ್ದು ನೋಡಿ ಮನದಲ್ಲೇ ನಕ್ಕೆ. ನಮ್ಮದು ತೋರಿಕೆಯ ಬದುಕು ಸ್ವಾಮೀ, ಎಲ್ಲಾ ಥಳಕು ಬೆಳಕು, ವಿಮಾನದಲ್ಲಿ ಹಾರಿದ ಮಾತ್ರಕ್ಕೆ ಇಂಗ್ಲಿಷ್ ಭಾಷೆಯಲ್ಲೇ ಉಲಿಯಬೇಕು, hug ಮಾಡ್ಬೇಕು, ಹೊಸದಾಗಿ ಬಂದ ಸಂಪತ್ತನ್ನು ಎಲ್ಲರಿಗೂ ಕಾಣುವಂತೆ ತೋರಿಸಿ ಬಿಂಕದಿಂದ ನಡೆಯಬೇಕು, ಅದನ್ನೇ ಈ modern ಬದುಕು ಕಲಿಸುತ್ತಿರುವುದು ಎಂದು ಹೇಳೋಣ ಅನ್ನಿಸಿದರೂ ಹೇಳದೆ ಸುಮ್ಮನಾದೆ. ಇಷ್ಟೆಲ್ಲಾ ಮಾತನಾಡಿದರೂ ನನ್ನ ಹೆಸರನ್ನೂ, ಧರ್ಮವನ್ನೂ, ಜಾತಿ ಉಪಜಾತಿಯನ್ನೋ ಕೇಳದ ಗೌಡರ ಹೃದಯವೈಶಾಲ್ಯತೆಗೆ ಮನದಲ್ಲೇ ವಂದಿಸಿ ಅವರಿಂದ ಬೀಳ್ಕೊಂಡು ಆಗಮಿಸಿದ ತಮ್ಮನೊಂದಿಗೆ ದೇವನಹಳ್ಳಿಯ ಬೆಳಗ್ಗಿನ ತಂಪಾದ ಹವೆಯನ್ನು ಸವಿಯುತ್ತ ಊರಿನ ದಾರಿ ಹಿಡಿದೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಲೇಖನ, ನಿಮ್ಮ ಅನಿಸಿಕೆ ಚೆನ್ನಾಗಿವೆ.
<<ಅಜ್ಜಿಯವರ ಹಠಾತ್ ನಿಧನದ ವಾರ್ತೆ ಕೇಳಿ ಕೂಡಲೇ ಭಾರತಕ್ಕೆ ಬಂದೆ.>>
ಸಾರಿ, ಕೇಳಿ ಬೇಸರವಾಯಿತು. ಇದ್ದಾಗ ಇನ್ನೊಮ್ಮೆ ಬಂದು ನೋಡಿ ಹೋಗಿದ್ದರೆ ಅಂತ ಅನ್ಸತ್ತಲ್ವೆ, ಹೊರಗಿರೋವ್ರ ಪಾಡೇ ಇಷ್ಟು :(
ಶಾಮಲ

ಹೌದು ಶಾಮಲ ಅಲೆಮಾರಿಗಳ ಬದುಕೇ ಹೀಗೆ. ಬಹಳಷ್ಟು ಜನ ಸಂಬಂಧಿಕರು, ನೆಂಟರಿಷ್ಟರು ತೀರಿಹೋದರು. ಆದರೆ ಅಜ್ಜಿಯವರ ಬಗ್ಗೆ ನನಗೆ ಅಷ್ಟು regrets ಇಲ್ಲ. ಹೋದವರ್ಷವಷ್ಟೇ ಅವರನ್ನು ನೋಡಿದ್ದೆ. ಮತ್ತು ಮನೆತನದ ಹಿರಿಯ ಮೊಮ್ಮಗನಾಗಿ ಅವರ ಬಗ್ಗೆ ಬಹಳಷ್ಟು ಕಾಳಜಿ ತೆಗೆದುಕೊಂಡಿದ್ದೆ. ಅದೊಂದೇ ಸಮಾಧಾನ. ನಾನು ನನ್ನ ಅಜ್ಜಿಯ ನೆಚ್ಚಿನ ಮೊಮ್ಮಗ. ಪ್ರತಿಕ್ರಿಯೆಗೆ ಪ್ರೀತಿಯ ವಂದನೆಗಳು.

ಅದೇ ರೀ ನಮ್ಮ ದೇಶ ಒಂದು ಕಡೆ ತುಂಬಾ ಮುಗ್ದರು ಇನ್ನೊಂದು ಕಡೆ ಈ ಮುಗ್ದರನ್ನು ಮುರಿದು ತಿನ್ನವ ದೇಶ ಮುರುಕರು.

ಸರಿಯಾಗಿ ಹೇಳಿದಿರಿ, ಶೆಟ್ಟರೆ. ಈ ಮುಗ್ಧತೆಯ ದುರುಪಯೋಗ ಮಾಡಿ ಶತಮಾನಗಳ ಹಿಂದೆ ಸಂದು ಹೋದ ಕಾಲ್ಪನಿಕ ಘಟನೆಗಳನ್ನು, ಪ್ರಮಾದಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಹಗೆಯ ಅಂಗಡಿ ಮುಂಗಟ್ಟುಗಳನ್ನು ತೆರೆದು ಕುಳಿತಿದ್ದೇವೆ. ಭಯ ಪಡಬೇಡಿ, ಭಾರತೀಯತೆಯೇ ಗುಣ, ಬಾಕಿಯೆಲ್ಲಾ ಗೌಣ. ಜಯ ನಮ್ಮದೇ, not hate merchants'.

ಸಯ್ಯೆದ್,
ಅದೇನೊ ಗೊತ್ತಿಲ್ಲ ನನಗೆ ಬುದ್ದಿ ತಿಳಿದಾಗಿನಿಂದಲು ನಿಮ್ಮ ಜನಾಂಗದವರಿಗು ನನಿಗು ಬಿಡಲಾರದ ನಂಟು ಎಷ್ಟ ಮಟ್ಟಿಗೆ ಅಂದ್ರೆ ನಮ್ಮಜ್ಜಿ ನನಿಗೆ ಹೋದ ಜನಮದಲ್ಲಿ ಇವಳು ಮುಸ್ಲಿಮ್ಮಾಗಿದ್ಲು ಅಂತ ಕಾಣುತ್ತೆ ಅಂತ ಇದ್ರು . ನನ್ನ ಬಾಲ್ಯದ ಸ್ನೇಹಿತೆ Naazeema...gulnaaz. ಅವರ ಎಲ್ಲ ಅಕ್ಕಂದಿರು ನನಗೆ ಒಳ್ಳೆ ಸ್ನೇಹಿತೆಯರಾಗಿದ್ದರು......ಕಾಲೇಜಿನಲ್ಲಿ ಮತ್ತು ಇಂದಿಗು ನನ್ನ ಆಪ್ತ ಸ್ನೇಹಿತರು ಅಂದ್ರೆ ಆಸ್ಮ... naazeeya......... ಇನ್ನು ತುಂಬಾ ಜನ ಸ್ನೇಹಿತೆಯರಿದ್ದಾರೆ.............ಅದುಕ್ಕೆ ನಿಮ್ಮನ್ನು ಸಂಪದದಲ್ಲಿ ನೋಡಿದಾಗೆ ಏನೊ ಒಂದು ರೀತಿ ಆತ್ಮೀಯರನ್ನು ಕಂಡಂತಾಯಿತು......ಆದರೆ ನಿಮ್ಮೊಡನೆ ಈ ವಿಷ್ಯವನ್ನು ಹಂಚಿಕೊಳ್ಳುವ ಸಂದರ್ಭ ಬಂದಿತಲಿಲ್ಲ......ಈಗ ಸಂತೋಷವಾಯಿತು ಗೆಳೆಯ....ಆದ್ರು ನಿಮ್ಮ ಕನ್ನಡ ಮತ್ತು ನಿಮ್ಮ ಕನ್ನಡದ ಅಭಿಮಾನ ನೋಡಿದರೆ ನೀವು ಮುಸಲ್ಮಾನರೆನಿಸುವುದಿಲ್ಲ...ಇನ್ನೊಂದು co-incident ಅಂದ್ರೆ ನಾನು ನಿಮ್ಮ ಪಕ್ಕದೂರಿನ ಶಿವಮೊಗ್ಗದವಳೆ....ನನ್ನ husband ಭದ್ರಾವತಿಯವರು........

ನನಗೆ ಸ್ವಲ್ಪ ಜಾಸ್ತಿಯೇ ಉಪಚಾರ ಮಾಡಬೇಕು ನೀವು, ಮಾಲತಿ. ಅಳಿಯಂದಿರ ಊರಿನವನಲ್ಲವೇ ನಾನು? ಸ್ನೇಹಿತರನ್ನು ಆಯ್ಕೆ ಮಾಡುವಾಗ ಜಾತಕದ ಅವಶ್ಯಕತೆ ಇಲ್ಲ. ಒಳ್ಳೆ ಮನಸ್ಸು, ಒಡನಾಟ. ಬಾಕಿಯೆಲ್ಲಾ ಗೌಣ. ನನ್ನ ಸ್ನೇಹಿತರೆಲ್ಲಾ ಹಿಂದೂಗಳೇ. ಆದರೆ ನನಗಾಗಲಿ ಅವರಿಗಾಗಲಿ ಆ ಭಾವನೆಗಳಿಲ್ಲ. ತಮ್ಮ ಪ್ರತಿಕ್ರಿಯೆ ಓದಿ ತುಂಬಾ ಸಂತೋಷವಾಯಿತು. ಪ್ರೀತಿಯಿಂದ..ಅಬ್ದುಲ್

ನನ್ನ ಪ್ರತಿಕ್ರಿಯೆಯನ್ನು ತಪ್ಪುತಿಳಿದಿಲ್ಲವೆಂದು ಭಾವಿಸುತ್ತೇನೆ..........:( :-( :sad: :ಬೇಜಾರು:
ನನ್ನ ಈ ಪ್ರತಿಕ್ರಿಯೆಯ ಉದ್ದೇಶ ಜಾತಿ ಮತದ ಬಗ್ಗೆ ಮಾತನಾಡುವುದಾಗಿರಲಿಲ್ಲ.. ನಿಮ್ಮ ಹೆಸರು ನನ್ನ ಸ್ನೇಹಿತೆಯರನ್ನು ನೆನೆಯುವಂತೆ ಮಾಡಿತು ಅಷ್ಟೆ.........ತಪ್ಪಾಗಿದ್ದಲ್ಲಿ ನಿಮ್ಮ ಸ್ನೇಹಿತೆಗೊಂದು ಕ್ಷಮೆಯಿರಲಿ..ಅಷ್ಟಕ್ಕು ನಾನು ಈ ಭೂಮಿ ಮೇಲೆ ಜಾತಿಯರಡೆ ಅದು ಗಂಡು ಮತ್ತು ಹೆಣ್ಣು ಎಂದು ನಂಬಿರುವವಳು.

ತಮ್ಮ ಹಾಗೆ ನಾನೂ ಮಾಲತಿ. ತಪ್ಪಾಗೇನೂ ತಿಳಿದಿಲ್ಲ. ಅಭಿಪ್ರಾಯ ಹೇಳಿದೆ ಅಷ್ಟೇ. ಪ್ರೀತಿ ಇರಲಿ

ತಮ್ಮ ಹಾಗೆ ನಾನೂ ಮಾಲತಿ. ತಪ್ಪಾಗೇನೂ ತಿಳಿದಿಲ್ಲ. ಅಭಿಪ್ರಾಯ ಹೇಳಿದೆ ಅಷ್ಟೇ. ಪ್ರೀತಿ ಇರಲಿ

[quote]ನಮ್ಮದು ತೋರಿಕೆಯ ಬದುಕು ಸ್ವಾಮೀ, ಎಲ್ಲಾ ಥಳಕು ಬೆಳಕು, ವಿಮಾನದಲ್ಲಿ ಹಾರಿದ ಮಾತ್ರಕ್ಕೆ ಇಂಗ್ಲಿಷ್ ಭಾಷೆಯಲ್ಲೇ ಉಲಿಯಬೇಕು, hug ಮಾಡ್ಬೇಕು, ಹೊಸದಾಗಿ ಬಂದ ಸಂಪತ್ತನ್ನು ಎಲ್ಲರಿಗೂ ಕಾಣುವಂತೆ ತೋರಿಸಿ ಬಿಂಕದಿಂದ ನಡೆಯಬೇಕು, ಅದನ್ನೇ ಈ modern ಬದುಕು ಕಲಿಸುತ್ತಿರುವುದು ಎಂದು ಹೇಳೋಣ ಅನ್ನಿಸಿದರೂ ಹೇಳದೆ ಸುಮ್ಮನಾದೆ.[/quote]
ಯಾವೊತ್ತೂ ಹಂಗೇ ಕಾಣ್ರಿ...... ತುಟೀ ಮ್ಯಾಕ್ ಬರಾ ಮಾತೊನ್ದೇ ಒನ್ದು, ಎದೆಯಾಗ್ ವುಳ್ದಿರುತ್ತೆ ಮುನ್ನೂರ್ವನ್ದು!