ಕೃಷಿಕರ ಯುಗಾದಿ

To prevent automated spam submissions leave this field empty.

ಯುಗಾದಿ ಯಾವುದೇ ದೇವ-ದೇವತೆಗಳ ಸೋಂಕಿಲ್ಲದ ನಿಸರ್ಗದ ಹಬ್ಬ. ಜನಪದರಿಗೆ ಹೊಸವರ್ಷದ ಮೊದಲ ದಿನ. ಹೊಸ ಮಳೆಗಾಲಕ್ಕೆ ಶ್ರೀಕಾರ. ಒಳ್ಳೆಯದು - ಕೆಟ್ಟದ್ದನ್ನು ಸಮನಾಗಿ ಸ್ವೀಕರಿಸುವ ಆಶಯದಿಂದ ಬೇವು-ಬೆಲ್ಲ ಬಾಯಿಗೆ ಹಾಕಿಕೊಳ್ಳುತ್ತಾರೆ. ಹೊಸ ಬಟ್ಟೆ ತೊಟ್ಟು ಹೊಟ್ಟೆ ತುಂಬಾ ಒಬ್ಬಟ್ಟು ತಿಂದು ಆಗತಾನೇ ಎಳೆ ಚಿಗುರಿಡುತ್ತಿರುವ ಹೊಂಗೆ ಮರದ ನೆರಳಲ್ಲಿ ಹಳ್ಳಿಗರು ಮಲಗುವುದು ಸಾಮಾನ್ಯ. ಇಸ್ಪೀಟು ಈ ಹಬ್ಬಕ್ಕೆ ಹೇಗೆ ತಳುಕು ಹಾಕಿಕೊಂಡಿತೆಂಬುದು ತಿಳಿಯುತ್ತಿಲ್ಲ. ಯುಗಾದಿ ಮರುದಿನ ಹೊಸತಡುಕು, ಚಂದ್ರ ದರ್ಶನ. ಮಾಂಸಾಹಾರಿಗಳಿಗೆ ಸಡಗರ. ಕೆಲವೆಡೆ ಸಾಮೂಹಿಕ ಬೇಟೆಯೂ ಉಂಟು.

ಯುಗಾದಿ ಸಂಪೂರ್ಣ ಬಿಡುವಿನ ಕಾಲದಲ್ಲಿ ಅಥವಾ ವಿರಾಮದ ಕೊನೆಯ ಮತ್ತು ದುಡಿಮೆಯ ಆರಂಭ- ಇವೆರಡರ ನಡುವೆ ಬರುವಂತಹುದು. ಹಾಗಾಗಿಯೇ ಈ ಹಬ್ಬದಲ್ಲಿ ಸಿಹಿ-ಕಹಿಯ ಮಿಶ್ರಣವಿರುತ್ತದೆ. ಯುಗಾದಿ ಬರುವ ಸ್ವಲ್ಪ ದಿನ ಮುಂಚೆ ಕಾಮನ ಹಬ್ಬ ಬಂದಿರುತ್ತದೆ. ಕಾಮನ ಹಬ್ಬವನ್ನು ಹಳ್ಳಿಗರು ಕದಿರೆ ಹುಣ್ಣಿಮೆ ಎಂತಲೂ ಕರೆಯುತ್ತಾರೆ. ಕಾಮನ ಹಬ್ಬ ನಿಸರ್ಗದ ವರ್ಷದಲ್ಲಿ ಕೊನೆಯ ಹಬ್ಬ. ಹಳೆಯ ವಸ್ತುಗಳನ್ನು ಸುಟ್ಟು ಹೊಸ ವಸಂತದ ಆಗಮನಕ್ಕೆ ಸಿದ್ಧವಾಗುವ ಪರ್ವ ಕಾಲ. ಇದಾದ ಸ್ವಲ್ಪ ದಿನಕ್ಕೆ ಬರುವ ಯುಗಾದಿ ನಿಸರ್ಗ ವರ್ಷದ ಮೊದಲ ಹಬ್ಬ. ಯುಗದ ಆದಿ. ಶಾಲಿವಾಹನ ಶಕೆಯ ಹೊಸ ಸಂವತ್ಸರದ ಶುರು.

ಯುಗಾದಿಯ ನೈಜತೆ ಉಳಿದಿರುವುದೇ ರೈತಾಪಿಗಳಲ್ಲಿ. ನಗರವಾಸಿಗಳಿಗೆ ಯುಗಾದಿ ಕೇವಲ ಒಂದು ಹಬ್ಬ ಅಷ್ಟೇ. ಅವರು ಹೆಚ್ಚೆಂದರೆ ಎರಡು ದಿವಸ ಹಬ್ಬ ಮಾಡಿಯಾರು. ಆದರೆ ರೈತರ ಹಬ್ಬದ ಸಂಭ್ರಮ ಹದಿನೈದು ದಿನ ಮುಂಚೆಯೇ ಶುರು. ಆಗ ಯಾರು ಏನು ಕೇಳಿದರೂ ಅವರ ಉತ್ತರ ಒಂದೇ “ ಹಬ್ಬ ಮುಗಿಲಿ ತಡಿರಿ”. ಸಾಲ ಕೇಳಲು ಬಂದವರಿಗೂ ಅಥವಾ ಸಾಲ ಕೇಳುವವರಿಗೂ ಸಹ ಇದೇ ಉತ್ತರ. ಮನೆಯ ಹೆಣ್ಣು ಮಕ್ಕಳು ಎರಡು ವಾರ ಮುಂಚೆಯೇ ಮನೆ ಸ್ವಚ್ಚಗೊಳಿಸಲು ಶುರುಮಾಡುತ್ತಾರೆ. ಪ್ರತಿಯೊಂದು ವಸ್ತುವನ್ನು ತೊಳೆದು ಬೆಳಗಿ ಹಸನು ಮಾಡುತ್ತಾರೆ. ಅಟ್ಟ, ಗೋಡೆ, ಅಂಗಳ, ಮಾಡುಗಳ ಧೂಳೊಡೆಯುತ್ತಾರೆ. ಮನೆ ಮುಂಭಾಗದ ಗೋಡೆಗಳಿಗೆ ಕೆಮ್ಮಣ್ಣು-ಸಗಣಿಯಿಂದ ಸಾರಿಸುತ್ತಾರೆ. ಇಡೀ ಮನೆ ಸುಣ್ಣ-ಬಣ್ಣ ಕಾಣುತ್ತದೆ.

ಗಂಡಸರು ಹೊಸ ಬಟ್ಟೆ-ಬರೆ ತೆಗೆಯುವುದು, ಬೇಸಾಯಕ್ಕೆ ಬೇಕಾದ ಹೊಸ ಸಲಕರಣೆಗಳಾದ ನೇಗಿಲು, ನೊಗ, ಮೇಣಿ, ದೊಡ್ಡಮಿಣಿ, ಹಗ್ಗ, ಚಿಲಕ್ಕಣ್ಣಿ, ಮಕಾಡ, ಕೊಳದಂಡೆ, ಕುಂಟೆ, ಕುಳ, ಅಲುಗು, ಕೂರಿಗೆ ಮುಂತಾದವುಗಳನ್ನು ಹೊಂಚುವ ಧಾವಂತದಲ್ಲಿರುತ್ತಾರೆ. ದನಗಳ ಪರಿಶೆಗಳೂ ಇದೇ ಸಂದರ್ಭದಲ್ಲಿ ಬರುವುದರಿಂದ ಮನೆಯ ದನಗಳನ್ನು ಮಾರುವುದು, ಹೊಸ ದನಗಳನ್ನು ಕೊಳ್ಳುವುದು ನಡೆಯುತ್ತಿರುತ್ತದೆ.

ಯುಗಾದಿ ಮೂರು ದಿನದ ಹಬ್ಬ. ಮೊದಲ ದಿನ ಮುಸುರೆ ಹಬ್ಬ. ಪಾತ್ರೆ-ಪಗಡಗಳನ್ನು ತೊಳೆದು ಹೊಸ ನೀರು ತಂದು ತುಂಬಿಸುತ್ತಾರೆ. ಹದಿನೈದು ದಿನಗಳ ಸ್ವಚ್ಚತಾ ಕಾರ್ಯಕ್ಕೆ ಅಂತಿಮ ರೂಪ. ಒಂದು ರೀತಿಯ ಫೈನಲ್ ಟಚ್ಚಿಂಗ್ ಎನ್ನಬಹುದು. ಎರಡನೇ ದಿನ ಸೀ ಹಬ್ಬ. ಮನೆ ಮಕ್ಕಳೆಲ್ಲಾ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ತೊಡುತ್ತಾರೆ. ಎಲ್ಲಾ ಬಾಗಿಲುಗಳ ಹೊಸ್ತಿಲಿಗೂ, ದನಗಳ ಕೊಟ್ಟಿಗೆಗೂ ಮಾವಿನ ಎಲೆ ತೋರಣ ಕಟ್ಟಿ ಬೇವಿನ ಚಿಕ್ಕ-ಚಿಕ್ಕ ಕೊಂಬೆಗಳನ್ನು ಮನೆಯ ಎಲ್ಲಾ ಕಡೆಗೂ ಸಿಗಿಸಲಾಗುತ್ತದೆ. ಮನೆ ಯಜಮಾನ ಎಲ್ಲರಿಗೂ ಬೇವು-ಬೆಲ್ಲ ಹಂಚುತ್ತಾರೆ. ಮನೆಗೆ ಯಾರೇ ಬಂದರೂ ಅವರಿಗೆ ಬೇವು-ಬೆಲ್ಲ ನೀಡಲಾಗುತ್ತದೆ. ಹೋಳಿಗೆ, ಗಟ್ಟಕ್ಕಿ ಪಾಯಸ, ಅಕ್ಕಿ ಪಾಯಸ, ಕಡುಬು ವಿಶೇಷ ಅಡುಗೆಗಳು. ಅಂದು ಕೆಲವೆಡೆ ಎತ್ತುಗಳಿಗೆ ಗೌಸು ಹೊದಿಸಿ, ಚೆಂಡು ಹೂವಿನ ಹಾರ ಹಾಕಿ, ಬಂಡಿ ಕಟ್ಟಿ ದೇವಾಲಯಕ್ಕೆ ಮೂರು ಸುತ್ತು ಬರುತ್ತಾರೆ. ಅವಕ್ಕೆ ವಿಶೇಷ ಎಡೆ ಇರುತ್ತದೆ. ಹೊಸ ಬಟ್ಟೆ ತೊಡುವ ಮುಂಚೆ ದನಗಳ ಬೆನ್ನ ಮೇಲೆ ಹಾಕುವುದು ರೂಢಿ. ಮೈಸೂರು ಸೀಮೆಯಲ್ಲಿ ಧವಸ ಧಾನ್ಯಗಳನ್ನು ಕಣದಲ್ಲಿ ಒಟ್ಟಿ ಪೂಜಿಸುವುದು ಕಂಡು ಬರುತ್ತದೆ.

ಉತ್ತರ ಕರ್ನಾಟಕದ ಕೆಲವೆಡೆ ಚಕ್ಕಡಿಗೆ (ಗಾಡಿ) ತರಾತರ ಬಣ್ಣ ಹಚ್ಚಿ ಸಿಂಗರಿಸುತ್ತಾರೆ. ಚಕ್ಕಡಿಯ ಒಂದೊಂದು ಭಾಗಕ್ಕೆ ಒಂದೊಂದು ಬಣ್ಣ, ಗಾಲಿಗಳಿಗೆ ಕೆಮ್ಮಣ್ಣು, ಗಾಲಿ ಅಂಚಿಗೆ, ಗುಂಭಗಗೆ, ಗುಜ್ಜುಗಳಿಗೆ ಸುಣ್ಣ ಬಳಿಯುವುದು ವಾಡಿಕೆ. ಬಯಲು ಸೀಮೆಯಲ್ಲಿ ಕೆಲವು ಜನಾಂಗದವರು ಕೃಷಿ ಆಯುಧಗಳನ್ನಿಟ್ಟು ಪೂಜಿಸುತ್ತಾರೆ. ಹಿರಿಯರ ಸಮಾಧಿಗಳಿಗೆ ಹೋಗಿ ಹಣ್ಣು-ಕಾಯಿ ಮಾಡಿ, ಎಡೆ ಹಾಕಿ ಸಣ ಮಾಡುತ್ತಾರೆ. ಅಂದು ಮನೆಯಲ್ಲಿನ ಹಳೆಯ ಮಣ್ಣಿನ ಮಡಕೆಗಳನ್ನು ಎಸೆದು ಹೊಸ ಮಡಕೆ ತರುತ್ತಾರೆ. ಈ ಭಾಗದಲ್ಲಿ ವಿಶೇಷ ಗಳೆ ಪೂಜೆ ಇರುತ್ತದೆ.

ಮೂರನೇ ದಿನ ಹೊಸತಡುಕು. ಕರಿಹಬ್ಬ ಎಂದೂ ಕರೆಯುತ್ತಾರೆ. ಮಾಂಸದೂಟದ ಸಂಭ್ರಮ. ಒಂದು ರೀತಿಯಲ್ಲಿ ಮೊದಲ ಎರಡು ದಿನಗಳು ಹೆಂಗಸರ ಸಡಗರವಾದರೆ ಮೂರನೇ ದಿನ ಗಂಡಸರದೇ ದರ್ಬಾರು. ಬೆಳಗಿನ ಜಾವ ಮೊದಲ ಕೋಳಿ ಕೂಗುವಾಗಲೇ ಮಾಂಸ ಬೇಯಿಸುವ ಪಾತ್ರೆಗಳು ಸದ್ದು ಹೊರಡಿಸುತ್ತವೆ. ಸಾಮೂಹಿಕ ಬೇಟೆಯ ಸಂಪ್ರದಾಯವಿದೆ. ಮನೆಗೆ ಒಂದಾಳಿನಂತೆ ಬೇಟೆಯಲ್ಲಿ ಭಾಗವಹಿಸಬೇಕು. ಹೆಚ್ಚಾಗಿ ಕಾಡುಹಂದಿ ಮತ್ತು ಮೊಲದ ಬೇಟೆ ಇರುತ್ತದೆ. ಈಗೀಗ ಬೇಟೆಗೆ ಹೋಗುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಒಳ್ಳೆಯ ಬರಹ ಮಲ್ಲಿಕಾರ್ಜುನ್!!! ಮೂಲತಃ ಮನುಷ್ಯ ಪ್ರಕೃತಿ ಆರಾಧಕ. ಹಬ್ಬಗಳು ಇದೆ ಆರಾಧನೆಯ ಧ್ಯೋತಕಗಳು

ಯುಗಾದಿಯ ವಿವಿಧ ಆಚರಣೆಗಳನ್ನು ಚೆನ್ನಾಗಿ ಹೇಳಿದ್ದೀರಿ.
>>ನಗರವಾಸಿಗಳಿಗೆ ಯುಗಾದಿ ಕೇವಲ ಒಂದು ಹಬ್ಬ ಅಷ್ಟೇ. ಅವರು ಹೆಚ್ಚೆಂದರೆ ಎರಡು ದಿವಸ ಹಬ್ಬ ಮಾಡಿಯಾರು

ಸತ್ಯವಾದ ಮಾತು. ಎರಡು ದಿನಾನು ಇಲ್ಲ, ಯಾವತ್ತು ಯುಗಾದಿ ಅಂತ ರಜ ಕೊಟ್ಟಿರ್ತಾರೋ ಅವತ್ತು ಮಾತ್ರ ಹಬ್ಬ, ಒ೦ದೇ ದಿನ. ಹಳ್ಳಿಯಲ್ಲಾದ್ರೆ, ಶಾವಿಗೆ ಒ೦ದು ದಿನ, ಎಣ್ಣೆಸ್ನಾನ ಒ೦ದು ದಿನ, ಹೋಳಿಗೆ ಒ೦ದು ದಿನ ಅಂತ ೩ ದಿನ ಮಾಡ್ತಾರೆ.

ನಮ್ಮ ಹಬ್ಬಗಳನ್ನು ಕೃಷಿಕ ದೃಷ್ಟಿಯಿಂದ ನೋಡುವ , ನಮ್ಮ ಸಂಸ್ಕೃತಿ ಪರಂಪರೆಗಳನ್ನು ರೈತರ ದೃಷ್ಟಿಯಿಂದ ನೋಡುವ ಹೆಚ್ಚೆಚ್ಚು ಲೇಖನಗಳು ಬರಲಿ. ಮಲ್ಲಿಕಾರ್ಜುನರೆ ನಿಮಗೊಂದು ದೊಡ್ಡ ಥ್ಯಾಂಕ್ಸ್. ಇಂತ ಲೇಖನಗಳು ಅತಿ ಹೆಚ್ಚು ಮೂಡಿ ಬರಲಿ.

ರೈತಾಪಿ ಜನರ ಆಚರೆಣೆಗಳನ್ನೂ ... ಒಂದು ಕಥೆ ಕಟ್ಟಿ .. ತಮ್ಮ ಪುರಾಣದ ಉಪಕಥೆಗಳನಾಗಿ ಮಾಡಿಕೊಂಡು ಅವನ್ನೂ ಬರೀ ವೈದಿಕ ದೃಷ್ಟಿಯಿಂದ ವಿವರಣೆ ಕೊಡುವ ವರನ್ನು ನೋಡಿ ಸಾಕಾಗಿ ಹೋಗಿದೆ.

ಈ ಬರಹವನ್ನು ವಿಶೇಷ ಬರಹವನ್ನಾಗಿ ಆಯ್ಕೆ ಮಾಡಿದ ನಿರ್ವಾಹಕರಿಗೂ ಥ್ಯಾಂಕ್ಸ್!.

ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ. ಇನ್ನೂ ಆಳಕ್ಕಿಳಿದು ನೋಡಿದರೆ ನಮ್ಮ ಹಬ್ಬಗಳ ಸೊಗಡು ಅದ್ಭುತ.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ.