'ಶಿವನುಟ್ಟ ಸೀರೆ'

To prevent automated spam submissions leave this field empty.
ಸಾಮಾನ್ಯ ಶಕೆಯ ೧೪೧೦ನೆಯ ವರ್ಷದಲ್ಲಿ ಹುಟ್ಟಿದ ಹಂಪೆಯ ಶಾಸನವೊಂದರಲ್ಲಿ [S. I. I. IV, ಸಂ. ೨೭೬, ಪುಟ ೬೦-೬೬, ಸಾಲು ೯೫-೯೫] ಈ ಕೆಳಕೊಂಡ ಪದ್ಯವಿದೆ. ಅವನಿಯನಾಕ್ರಮಿಪುದು ದಾ ನವಿಚಿತ್ರಂ ಲೋಕವಱಿಯೆ ಶುಚಿಯೆನಿಸಿರ್ದ್ದುಂ ಶಿವನುಟ್ಟ ಸೀರೆಯಂ ಪಿಡಿ ದವಗಡಿಪಳ್ಕೀರ್ತ್ತಿಲಕ್ಷ್ಮಿ ಲಕ್ಷ್ಮೀಧರನಾ ಮೊದಲನೆಯ ದೇವರಾಯನ ಮಂತ್ರಿಯಾದ ಲಕ್ಷ್ಮೀಧರನು ಗಣಪತಿ ದೇವಾಲಯವನ್ನು ಮಾಡಿಸಿ ಈ ಶಾಸನವನ್ನು ಹಾಕಿಸಿದನು. ಶಾಸನದಲ್ಲಿ ಬರುವ ಲಕ್ಷ್ಮೀಧರಾಮಾತ್ಯನ ವಿಸ್ತಾರವಾದ ಪ್ರಶಸ್ತಿಯಲ್ಲಿ ಈ ಪದ್ಯವೂ ಸೇರಿದೆ. ಇದರಲ್ಲಿಯ "ಲೋಕವಱಿಯೆ ಶುಚಿಯೆನಿಸಿರ್ದ್ದುಂ ಶಿವನುಟ್ಟ ಸೀರೆಯಂ ಪಿಡಿದವಗಡಿಪಳ್" ವಾಕ್ಯಖಂಡದ ಅರ್ಥವನ್ನು ಬಿಡಿಸಲು ಕೊಂಚ ಅವಕಾಶವಿದೆ. ಸೀರೆ ಎಂದರೆ ಬಟ್ಟೆ. ಗಂಡಸರ ಉಡುಗೆಗೂ ಸೀರೆಯೆಂಬ ವ್ಯವಹಾರವಿದೆ [ವಡ್ಡಾರಾಧನೆಯ ಭದ್ರಬಾಹುಭಟಾರರ ಕಥೆಯಲ್ಲಿನ "... ನಂದಿಮಿತ್ರನೆಂದನಯ್ಯ ಎನಗುಡಲಿಲ್ಲೇನುಮೊಂದು ದಮ್ಮಕ್ಕಾದೊಡಂ ಸೀರೆಯಂ ಕೊಂಡೀಯಿಂ..." ವಾಕ್ಯವನ್ನು ನೋಡಬಹುದು]. ನಮ್ಮ ಮಿಥಿಕಗಳಲ್ಲಿ ಶಿವನು ಆನೆಯ ತೊಗಲನ್ನು ಉಟ್ಟಿರುತ್ತಾನೆ ಇಲ್ಲ ಬತ್ತಲೆಯಿರುತ್ತಾನೆ. ಈ ಪದ್ಯದ ಸಂದರ್ಭಕ್ಕೆ ಶಿವನ ಬತ್ತಲೆವೇಷವು ಒಪ್ಪುತ್ತದೆ. ದಿಗಂಬರನಾದ ಶಿವನಿಗೆ ದಿಕ್ಕುಗಳೆ ಬಟ್ಟೆ. ಅವೆ ಶಿವನುಟ್ಟ ಸೀರೆ. ಕೀರ್ತಿಲಕ್ಷ್ಮಿಯು ದಿಕ್ಕುಗಳನ್ನು ಹಿಡಿದು ಅವಗಡಿಸಿದಳು, ಹರಡಿದಳು. ನಮ್ಮಲ್ಲಿ "ಸೆರಗು ಹಿಡಿ" ಮಾತಿಗೆ "ಹಿಂಬಾಲಿಸು" ಎಂಬ ಧ್ವನಿಯಿದೆ. ಇದು ಹೊಗಳಿಕೆಯ ಮಾತಲ್ಲ. ಲಕ್ಷ್ಮೀಧರಾಮಾತ್ಯನ ಕೀರ್ತಿಲಕ್ಷ್ಮಿಯು ಪರಪುರುಷನಾದ ಶಿವನ ಬಟ್ಟೆಯನ್ನು ಹಿಡಿಯುವುದು ಆಕೆಯ ಪಾವಿತ್ರ್ಯಕ್ಕೆ ಕುಂದು ತರುವಂತಹ ಸಂಗತಿ. ಹಾಗಿರುವಲ್ಲಿ ಆಕೆ ಶಿವನ ಸೀರೆಯನ್ನು ಹಿಡಿದರೂ ಲೋಕಕ್ಕೆ ಶುಭ್ರಳಾಗಿಯೇ ಕಂಡಳು. ಅದರಿಂದ ಲಕ್ಷ್ಮೀಧರನ ಕೀರ್ತಿಗೆ ಯಾವ ಕಡಮೆಯೂ ಉಂಟಾಗಲಿಲ್ಲ. ಲಕ್ಷ್ಮೀಧರನ ದಾನಗಳ ವಿಷಯ ಭೂಮಿಯಲ್ಲೆಲ್ಲಡೆ ಹರಡಿತ್ತು. ಅವನ ಧವಳಕೀರ್ತಿಯು ಎಲ್ಲ ದಿಕ್ಕುಗಳಲ್ಲಿಯೂ ವ್ಯಾಪಿಸಿತ್ತು ಎಂಬುದೆ ಈ ಪದ್ಯದ ಆಶಯ.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

'ಱಿ' ಎಂಬುದನ್ನು ಹೇಗೆ ಓದಿಕೊಳ್ಳುವುದು? (ಕ್ಷಮಿಸಿ ಹಳೆಗನ್ನಡ ಬಲ್ಲವನಲ್ಲ) ಲಕ್ಷ್ಮೀಧರನ ಬಗ್ಗೆ ಇನ್ನಷ್ಟು ಮಾಹಿತಿ ದೊರಕುವುದೆ? ವಿಕಿಪೀಡಿಯಕ್ಕೆ ಸೇರಿಸುವೆ. :) -- "ಹೊಸ ಚಿಗುರು, ಹಳೆ ಬೇರು"

'ರ' ನುಡಿಯುವ ಸ್ಥಾನದಲ್ಲಿಯೆ ನಾಲಗೆಯನ್ನು ಇನ್ನಷ್ಟು ಒತ್ತಿ ನುಡಿದರೆ 'ಱ' ಹೊರಡುತ್ತದೆ. ಱ ಱಾ ಱಿ ಱೀ ... ಹೀಗೆ. 'ಱ್ಱ'ವು ಹೆಚ್ಚು ಕಡಮೆ 'ಟ್ರ'ದಂತೆಯೆ ಕೇಳಿಸುವುದರಿಂದ 'ಱ'ದ ನುಡಿಕೆಯನ್ನು ಊಹಿಸಬಹುದು. 'ೞ'ದಂತೆ ಈ ಅಕ್ಷರವೂ ಈಗ ನಮ್ಮಲ್ಲಿ ಬಳಕೆಯಲ್ಲಿಲ್ಲ; ವಚನಕಾರರ ಕಾಲಕ್ಕಾಗಲೆ ಇವು ಆಡುಮಾತಿನಿಂದ ಬಿಟ್ಟುಹೋಗಿದ್ದವು (ಆದರೆ ಸಾಹಿತ್ಯದಲ್ಲಿ ೧೬ರ ಶತಕದವರೆಗೂ ಅಲ್ಲಲ್ಲಿ ಉಳಿದಿದ್ದವು!!) ಆಡುಮಾತಿನಲ್ಲಿ 'ಱ'ಕ್ಕೆ ಬದಲಾಗಿ 'ರ'ವೂ 'ೞ'ಕ್ಕೆ ಬದಲಾಗಿ 'ೞ'ವೂ ಬಂದವು. ನಾವಿಂದು "ತಿಳಿ" ಎಂಬರ್ಥದಲ್ಲಿ ಬಳಸುವ "ಅರಿ" ಮೂಲತಃ "ಅಱಿ"ಯಾಗಿದ್ದಿತು. ತಮಿೞು, ಮಲೆಯಾಳಗಳಲ್ಲಿ 'ಱ' 'ೞ' ಗಳು ಈಗಲೂ ಚಾಲ್ತಿಯಲ್ಲಿವೆ; ಇವುಗಳ ಉಚ್ಚಾರಣೆಗೆ ನಾವು ಆಯಾ ಭಾಷೆಗಳ ಟೀವೀ ವಾರ್ತೆ/ಧಾರಾವಾಹಿಗಳಿಗೇ ಮೊರೆಹೋಗಬೇಕು :) ಲಕ್ಷ್ಮೀಧರನ ಶಾಸನವನ್ನು ಬಿಟ್ಟು ಬೇರೆಲ್ಲೂ ಅವನ ವಿಷಯ ಬಂದಂತಿಲ್ಲ. ಶಾಸನದಲ್ಲಿರುವುದನ್ನು ನಿಮಗೆ ಅನುವಾದಿಸಿ ಕಳಿಸಿಕೊಡಬಲ್ಲೆ, ಬೇಕಾದ ಪಕ್ಷದಲ್ಲಿ. ವೆಂ.

ಶಾಸನಗಳ ಬಗ್ಗೆ ನಿಮ್ಮ ಲೇಖನ ತುಂಬಾ ವಿಷಯಪೂರಿತವಾಗಿದೆ. ಹಳಗನ್ನಡದ ಅಕ್ಷರಗಳನ್ನು ಹೇಗೆ ಟೈಪಿಸಿದಿರಿ ಎಂದು ಕೇಳಬಹುದೇ? ಹಾಗೇ, ಕಂಚಿಯಲ್ಲಿನ ಶಿವನ ದೇವಸ್ಥಾನದಲ್ಲಿ ಒಂದು ಶಾಸನ ಇದೆ. ಅದರಲ್ಲಿ ಕೆಲವು ಅಕ್ಷರಗಳನ್ನು ತಮಿಳು ಭಾಷಿಗರೂ ಮತ್ತು ಕನ್ನಡ ಭಾಷಿಗರೂ ಓದಬಹುದು. ದಯವಿಟ್ಟು ಅದರ ಬಗ್ಗೆ ಸ್ವಲ್ಪ ಮಾಹಿತಿ ನೀಡಿ. --- ತವಿಶ್ರೀನಿವಾಸ

ಶ್ರೀನಿವಾಸರೆ, ಕನ್ನಡ ಯೂನಿಕೋಡ್‌ನಲ್ಲಿ ಈ ಅಕ್ಷರಗಳು ಸೇರಿವೆ; ಬರಹದ ಲಿಪ್ಯಂತರಣದಲ್ಲೂ ಇವೆ. ಕಂಚಿಯ ರಾಜಸಿಂಹೇಶ್ವರ ದೇವಸ್ಥಾನದಲ್ಲಿ ಚಾಲುಕ್ಯ ವಿಕ್ರಮಾದಿತ್ಯನ ಕನ್ನಡ ಶಾಸನವೊಂದಿದೆ. ನೀವು ಕೇಳುತ್ತಿರುವುದು ಇದರ ವಿಷಯವೆ? ಕಂಚಿಯಲ್ಲಿ ಬೇರೆ ಕನ್ನಡ ಶಾಸನಗಳೂ ಇದ್ದಾವು. "ತಮಿಳುನಾಡಿನ ಕನ್ನಡ ಶಾಸನಗಳು" ಪುಸ್ತಕವನ್ನು ಕನ್ನಡ ವಿ.ವಿಯು ಪ್ರಕಟಿಸಿದೆ. ಕಂಚಿಯಲ್ಲಿಯ ಎಲ್ಲ ಕನ್ನಡ ಶಾಸನಗಳ ಪಾಠವನ್ನು ಅದರಲ್ಲಿ ಕಾಣಬಹುದು. ವೆಂ.

ಹೌದು. ನಾನು ಶಾಸನವನ್ನು ನೋಡಿರುವುದು ರಾಜಸಿಂಹೇಶ್ವರನ ದೇವಸ್ಥಾನದಲ್ಲೇ. ಕನ್ನಡ ವಿ.ವಿ. ಯವರು ಪ್ರಕಟಿಸಿರುವ ಆ ಪುಸ್ತಕವನ್ನು ಈ ಬಾರಿ ಬೆಂಗಳೂರಿಗೆ ಬಂದಾಗ ಕೊಳ್ಳುವೆ. ಉಪಯುಕ್ತ ಮಾಹಿತಿದೆ ಧನ್ಯವಾದಗಳು. --- ತವಿಶ್ರೀನಿವಾಸ