ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳು: ಕುಂಭಾಸಿ

To prevent automated spam submissions leave this field empty.

ಸಪ್ತ ಕ್ಷೇತ್ರಗಳಲ್ಲಿ ಒಂದಾದ ಕುಂಭಾಸಿ ಗಣಪತಿ ದೇವಸ್ಥಾನವು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿದೆ. ಇದು ಕರಾವಳಿಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದು. ಉಡುಪಿಯಿಂದ ಸುಮಾರು ೩೦ ಕಿ.ಮೀ ಮತ್ತು ಕುಂದಾಪುರದಿಂದ ಸುಮಾರು ೭ ಕಿ.ಮೀ ದೂರದಲ್ಲಿರುವ ನಿಸರ್ಗ ರಮಣೀಯ ಕ್ಷೇತ್ರವಿದು. ಈ ಕ್ಷೇತ್ರ ರಾಹೆ-೧೭ರ ಬಳಿಯಿದೆ. ದೇವಸ್ಥಾನದ ಬಳಿ ಇರುವ ಮೆಟ್ಟಿಲುಗಳಲ್ಲಿ ಇಳಿದು ಹೋದರೆ ಶಿವನ ದೇವಸ್ಥಾನವೂ ಇದೆ. ಈ ದೇವಸ್ಥಾನದಲ್ಲಿ ಪುಷ್ಕರಿಣಿ ಕೂಡ ಇದೆ. ಕರಾವಳಿಯ ಅನೇಕ ದೇವಸ್ಥಾನಗಳು ಒಂದೋ ನದಿಯ ಬಳಿ ಇರುತ್ತವೆ ಇಲ್ಲವಾದಲ್ಲಿ ಪುಷ್ಕರಿಣಿ ಇರುತ್ತದೆ. ಪರಶುರಾಮ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯದ ಕರಾವಳಿಯ ಕನ್ನಡ ಜಿಲ್ಲೆಗಳಿರುವ ಉಡುಪಿ, ಸುಬ್ರಹ್ಮಣ್ಯ, ಕುಂಭಾಸಿ, ಕೋಟೇಶ್ವರ, ಶಂಕರನಾರಾಯಣ, ಗೋಕರ್ಣ, ಕೊಲ್ಲೂರು- ಹೀಗೆ ಸಪ್ತಕ್ಷೇತ್ರಗಳು ಪವಿತ್ರ ಸ್ಥಳಗಳಾಗಿವೆ. ಕುಂಭಾಸಿ ಪೇಟೆಯ ಬೆಟ್ಟದ ಮೇಲೆ (ಆನೆಗುಡ್ಡೆಯಲ್ಲಿ) ಶ್ರೀ ವಿನಾಯಕ ವಿರಾಜಿಸುತ್ತಿರುವನು. ಆನೆಗುಡ್ಡೆಗೆ ವೇಲಾವನದ ಭಾಗವಾದ ಮಧುವನವೆಂದೂ, ನಾಗಾಚಲವೆಂದೂ ಹೆಸರು ಪಡೆದಿದೆ. ದೇವಸ್ಥಾನ ಬಹಳ ಪುರಾತನವಾಗಿದ್ದು, ಜೀರ್ಣಾವಸ್ಥೆಯಲ್ಲಿದ್ದ ದೇವಳವನ್ನು ೧೯೮೫ರಲ್ಲಿ ಉದ್ದಾರ ಮಾಡಲಾಗಿದೆ.

 

ಪೌರಾಣಿಕ ಹಿನ್ನಲೆ:


ಈ ಕ್ಷೇತ್ರಕ್ಕೆ ಹರಿಹರಕ್ಷೇತ್ರ, ಮಧುಕಾನನ, ಗೌತಮಕ್ಷೇತ್ರ, ನಾಗಾಚಲ, ಆನೆಗುಡ್ಡೆ, ಕುಂಭಕಾಶಿ ಮುಂತಾದ ಹೆಸರುಗಳಿವೆ. ಎಲ್ಲಾ ಹೆಸರುಗಳ ಹಿಂದೆ ಪೌರಾಣಿಕ ಕಥೆಗಳಿವೆ (ಆಸಕ್ತರು ಕ್ಷೇತ್ರ ಪರಿಚಯ ಪುಸ್ತಕ ನೋಡಿ). ದೇವಸ್ಥಾನದ ಸುತ್ತಲೂ ಈ ಕಥೆಗಳನ್ನು ಬಿಂಬಿಸುವ ಕೆತ್ತನೆಗಳಿವೆ. ಕುಂಭಾಸಿ ಹೆಸರು ಬಂದ ಕಥೆಯನ್ನು ಉಲ್ಲೇಖಿಸುತ್ತೇನೆ.

ಹಿಂದೆ ಮಹಾತೇಜಸ್ವಿಯಾದ ಕುಂಭಾಸುರನೆಂಬ ಪೌಲಸ್ತ್ಯಪ್ರಪೌತ್ರನಾದ ರಾಕ್ಷಸನು ರಾಮಚಂದ್ರನಿಗೆ ಭಯಪಟ್ಟು ಮಹೇಂದ್ರಗಿರಿಯಲ್ಲಿ ಅವಿತುಕೊಂಡಿದ್ದನು. ಕಾಲಾಂತರದಲ್ಲಿ ಅಲ್ಲಿಂದ ಹೊರಟು ನಾರದನ ಮಾತಿನಂತೆ ಈಶ್ವರನನು ಮೆಚ್ಚಿಸಿ ವರಬಲೋತ್ಕಾರದಿಂದ ಮದೋನ್ಮತ್ತನಾಗಿ ಶ್ರೀ ಕ್ಷೇತ್ರಕ್ಕೆ ಬಂದು ಸಿಕ್ಕಿದ ಜನರನ್ನೆಲ್ಲ ದಂಡಿಸಿ ಸೇನಾಸಮೇತನಾಗಿ ರಾಜ್ಯ ಸ್ಥಾಪನೆ ಮಾಡಿ ರಾಜ್ಯಭಾರ ನಡೆಸತೊಡಗಿದನು. ಆಗ ಅಲ್ಲಿದ್ದವರೆಲ್ಲರೂ ಓಡಿಹೋದರು. ಆ ಸಮಯ ಪಾಂಡವರು ದ್ರೌಪದಿ ಸಹಿತ ವನವಾಸಿಗಳಾಗಿ ತೀರ್ಥಯಾತ್ರೆ ಮಾಡುತ್ತಾ ತುಂಗಭದ್ರಾ ತೀರದಲ್ಲಿರುವುದನ್ನರಿತು ಗೌತಮಾದಿ ಮುನಿಗಳು ಅಲ್ಲಿಗೆ ಹೋಗಿ ಮೊರೆಯಿಟ್ಟರು. ಧರ್ಮರಾಯನು ಅದನ್ನು ಕೇಳಿ ಸೋದರರೊಡನೆ ಅವರನ್ನೆಲ್ಲಾ ಕೂಡಿಕೊಂಡು ಭಾರ್ಗವ ಕ್ಷೇತ್ರವನ್ನು ಸೇರಿ ಮಧುವನಕ್ಕೆ ಬಂದು ಹರಿಹರ ದರ್ಶನ ಮಾಡಿದನು. ಸ್ವಲ್ಪ ದಿನಗಳಲ್ಲಿ ನಾಗಾಚಲಕ್ಕೆ ಬಂದು ಗಣೇಶನನ್ನು ಅರ್ಚಿಸುತ್ತಾ ಇದ್ದು ಭೀಮಾದಿಗಳನ್ನು ರಾಕ್ಷಸರ ಸಂಹಾರಕ್ಕೆ ಕಳುಹಿಸಿಕೊಟ್ಟನು. ಭೀಮಾದಿಗಳು ಶಂಖನಾದ ಮಾಡುತ್ತಾ ಮುಂದುವರೆಯಲು ಕುಂಭಾಸುರನು ಮಂತ್ರಿಮುಖ್ಯರೊಡನೆ ಯುದ್ಧಕ್ಕೆ ಬಂದನು. ಭೀಮನಿಗೂ ಕುಂಭಾಸುರನಿಗೂ ಭಯಂಕರ ಗದಾಯುದ್ಧ ನಡೆಯಿತು. ಅದರಲ್ಲಿ ರಾಕ್ಷಸನೇ ಜಯಶಾಲಿಯಾಗುವಂತಿದ್ದಾಗ ಅಶರೀರವಾಣಿಯೊಂದುಂಟಾಯಿತು. ಕೂಡಲೇ ಭೀಮನು ಗಣೇಶನನ್ನು ಮನದಲ್ಲೇ ಸ್ಮರಿಸಿ, ಪ್ರಸಾದ ರೂಪವಾದ ಖಡ್ಗವನ್ನು ಧರಿಸಿ ಕುಂಭಾಸುರನನ್ನು ಸಂಹಾರ ಮಾಡಿ ಮತ್ತುಳಿದ ರಾಕ್ಷಸರನ್ನು ನಿರ್ನಾಮಗೊಳಿಸಿದನು. ಹೀಗೆ ಕುಂಭಾಸುರನಿಗೆ ಭೀಮನು ಅಸಿ ಖಡ್ಗದಂತಾದ ಈ ಕ್ಷೇತ್ರವು ಕುಂಭಾಸಿ ಎಂದು ಸುಪ್ರಸಿದ್ಧವಾಯಿತು.

ವಿಶೇಷಗಳು:

ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಿಣಿಯಲ್ಲಿ ಮಿಂದು ಆನೆಗುಡ್ಡೆಯ ಸುಮಾರು ನೂರಾರು ಮೆಟ್ಟಿಲುಗಳನ್ನೇರಿ ಭಕ್ತರು ವಿಘ್ನೇಶ್ವರನ ದರ್ಶನ ಮಾಡುತ್ತಾರೆ. ಸಂಕಷ್ಟಹರ ಚತುರ್ಥಿ, ಗಣೇಶ ಚತುರ್ಥಿಯಂದು ಅಪಾರ ಜನಸಂದಣಿ. ಇಲ್ಲಿನ ಮಹಾರಥೋತ್ಸವವು ಪ್ರತಿವರ್ಷ ಮಾರ್ಗಶಿರ ಶುದ್ಧ ಚತುರ್ಥಿ ಮಹಾಚೌತಿಯಂದು ಜರುಗಲ್ಪಡುವುದು.

ಇತರೆ ಮಾಹಿತಿ:
೧) ಪ್ರತಿನಿತ್ಯ ಮಧ್ಯಾಹ್ನ (ಏಕಾದಶಿ-ದ್ವಾದಶಿ ತಿಳಿದಿಲ್ಲ) ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಇದೆ.
೨) ಮೂಡೆ ಪ್ರಸಾದ ಇಲ್ಲಿನ ವಿಶೇಷ. ಯಾರಾದರೂ ಸೇವೆ ನೀಡಿದ್ದರೆ ಲಭ್ಯವಿದೆ. ೪ ಮೂಡೆಗೆ ಇಪ್ಪತ್ತು ರೂಪಾಯಿಗಳು. ಇದರ ಬಗ್ಗೆ ದೇವಸ್ಥಾನದಲ್ಲಿ ಯಾವುದೇ ಫಲಕಗಳಿಲ್ಲ. ಕೇಳಿದವರಿಗೆ ಇದ್ದರೆ ಕೊಡುತ್ತಾರೆ.
೩) ಇಲ್ಲಿನ ಪಂಚಕಜ್ಜಾಯ ಪ್ರಸಾದ ಸವಿಯಲು ಮರೆಯಬೇಡಿ. ಬಹಳ ರುಚಿ.

ಹೋಗುವುದು ಹೇಗೆ: ಉಡುಪಿ-ಕುಂದಾಪುರ ಮಾರ್ಗವಾಗಿ ಸಂಚರಿಸುತ್ತಿರುವಾಗ, ಮಧ್ಯೆ ಈ ಕ್ಷೇತ್ರ ಸಿಗುತ್ತದೆ. ಉಡುಪಿಯಿಂದ ಸಂಚರಿಸಿದರೆ, ಮೊದಲು ದೇವಸ್ಥಾನದ ಸ್ವಾಗತ ಗೋಪುರ ಕಾಣಿಸುತ್ತದೆ (ಚಿತ್ರ ನೋಡಿ). ಕುಂದಾಪುರದಿಂದ ಬರುವುದಾದರೆ ಮೊದಲು ಕುಂಭಾಸಿ ಪೇಟೆ ಸಿಗುತ್ತದೆ ನಂತರ ದೇವಸ್ಥಾನದ ಸ್ವಾಗತ ಗೋಪುರ. ಗೋಪುರದಿಂದ ಮತ್ತೆ ಒಳದಾರಿಯಾಗಿ ಸ್ವಲ್ಪ ದೂರ ಕ್ರಮಿಸಬೇಕು. ಈ ಕ್ಷೇತ್ರ ರಾಹೆ-೧೭ಗೆ ಬಹಳ ಸನಿಹ.

೧) ಬಸ್ ಸೌಕರ್ಯ: ಉಡುಪಿ ಕುಂದಾಪುರ ಮಧ್ಯೆ ಸಂಚರಿಸುವ ಎಲ್ಲಾ ಬಸ್ಸುಗಳು ಕುಂಭಾಸಿಯಲ್ಲಿ ನಿಲ್ಲುತ್ತವೆ. ಕುಂಭಾಸಿ ಪೇಟೆಯಲ್ಲಿ ಇಳಿದು ರಿಕ್ಷಾ ಹಿಡಿಯಬೇಕಾಗಬಹುದು.
೨) ಹತ್ತಿರದ ರೈಲ್ವೆ ನಿಲ್ದಾಣ: ಕುಂದಾಪುರ
೩) ಹತ್ತಿರದ ವಿಮಾನ ನಿಲ್ದಾಣ: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
೪) ಉಡುಪಿಯಿಂದ ಟ್ಯಾಕ್ಸಿ ಮಾಡಿಕೊಂಡು ಹೋಗಬಹುದು.
೫) ಸ್ವಂತ ವಾಹನ ಇರುವವರಿಗೆ: ರಸ್ತೆ ಸಮತಟ್ಟಾಗಿ ಸಂಚಾರಕ್ಕೆ ಯೋಗ್ಯವಾಗಿದೆ (ಬದಲಾವಣೆ ಅನ್ವಯಿಸುತ್ತದೆ).

ಭೇಟಿ ನೀಡುವ ಸಮಯ: ನವೆಂಬರ್-ಫೆಬ್ರವರಿ ತಿಂಗಳುಗಳು. ಉಳಿದಂತೆ ಮಳೆಗಾಲ, ಬೇಸಿಗೆ ಸಮಯದಲ್ಲಿ ಸ್ವಲ್ಪ ಕಷ್ಟವಾಗಬಹುದು.

ಅತಿಧಿ ಗೃಹಗಳು:
ಇಲ್ಲಿ ಅಮೋದ, ಪ್ರಮೋದ ಎಂಬ ೨ ಅತಿಥಿ ಗೃಹಗಳಿವೆ

----------------------------------------------------------------------------------------------------------
ಪೌರಾಣಿಕ ಹಿನ್ನಲೆ ಮಾಹಿತಿ: ಶ್ರೀ ಕ್ಷೇತ್ರ ಕುಂಭಾಸಿ ಪರಿಚಯ ಪುಸ್ತಕದಿಂದ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಮ್ಮ ಯಾತ್ರಾಸಕ್ತಿ ಅನನ್ಯವಾಗಿದೆ,ಹತ್ತಿರದ ನನಗೇ ಇಷ್ಟು ಮಾಹಿತಿ ತಿಳಿದಿಲ್ಲ.
ಧನ್ಯವಾದಗಳು

>>೫) ಸ್ವಂತ ವಾಹನ ಇರುವವರಿಗೆ: ರಸ್ತೆ ಸಮತಟ್ಟಾಗಿ ಸಂಚಾರಕ್ಕೆ ಯೋಗ್ಯವಾಗಿದೆ (ಬದಲಾವಣೆ ಅನ್ವಯಿಸುತ್ತದೆ). :)

ನಂದಕುಮಾರ್,
ಆನೆಗುಡ್ಡೆ ಅಥ್ವಾ ಕುಂಭಾಶಿ ಅಂತ ಕರೆದು ರೂಢಿ. ಕುಂಭಾಸಿ ಗೊತ್ತಿರ್ಲಿಲ್ಲ, ನನ್ನಿ.
>>ಮೂಡೆ ಪ್ರಸಾದ ಇಲ್ಲಿನ ವಿಶೇಷ.
ಮುಡಿಯಕ್ಕಿ ಕಡುಬು, ಇಲ್ಲಿನ ಸೇವೆ ಹೆಸ್ರು. ಸೇವೆ ಮಾಡಿಸಿದವ್ರ ಕಡೆಯಿಂದ ೨೦ ಜನಕ್ಕೆ ಊಟ ಹಾಕ್ತಾರೆ.
>>ದೇವಸ್ಥಾನದ ಸ್ವಾಗತ ಗೋಪುರ
ಇದು ವಾಹನ ಹೋಗೋ ದಾರಿ, ನಡೆದುಕೊಂಡು ಹೋಗೋದಲ್ಲ. ನಡೆದುಕೊಂಡು ಹೋಗೋ ದಾರಿಲಿ ಮೆಟ್ಟಿಲು, ಮಂಗ ಎಲ್ಲಾ ಇದೆ.
>>ದೇವಸ್ಥಾನದ ಬಳಿ ಅತಿಥಿ ಗೃಹಗಳಿಲ್ಲ.
ಅಮೋದ, ಪ್ರಮೋದ ಅಂತ ೨ ಅತಿಥಿ ಗೃಹ ಇದ್ಯಲ್ಲ!

ಕುಂಭಕಾಶಿ ಅಥವಾ ಕುಂಭಾಸಿ :).

>>ಮುಡಿಯಕ್ಕಿ ಕಡುಬು, ಇಲ್ಲಿನ ಸೇವೆ ಹೆಸ್ರು. ಸೇವೆ ಮಾಡಿಸಿದವ್ರ ಕಡೆಯಿಂದ ೨೦ ಜನಕ್ಕೆ ಊಟ ಹಾಕ್ತಾರೆ.
ಧನ್ಯವಾದಗಳು. ಶುಲ್ಕ ಎಷ್ಟು?

>>ಇದು ವಾಹನ ಹೋಗೋ ದಾರಿ, ನಡೆದುಕೊಂಡು ಹೋಗೋದಲ್ಲ. ನಡೆದುಕೊಂಡು ಹೋಗೋ ದಾರಿಲಿ ಮೆಟ್ಟಿಲು, ಮಂಗ ಎಲ್ಲಾ ಇದೆ.
ಹೌದು. ವಯಸ್ಸಾದವರಿಗೆ ನಡೆದುಕೊಂಡು ಹೋಗಲಿಕ್ಕೆ ಆಗಲ್ಲಲ್ವ ಅದಿಕ್ಕೆ ಸೇರಿಸಿದೆ. ಮೆಟ್ಟಿಲಿನ ಚಿತ್ರ ಚಿತ್ರಪುಟದಲ್ಲಿದೆ. ನಾವು ಹೋಗುವಾಗ ಪುಣ್ಯಕ್ಕೆ ಮಂಗ ಇರಲಿಲ್ಲ :)

>>ಅಮೋದ, ಪ್ರಮೋದ ಅಂತ ೨ ಅತಿಥಿ ಗೃಹ ಇದ್ಯಲ್ಲ!
ಇವು ಅತಿಥಿ ಗೃಹಗಳೇ. ನಾನು ಪಾಠಶಾಲೆ ಇರಬಹುದು ಅಂದುಕೊಂಡೆ. ಬರಹ ಬದಲಾಯಿಸುತ್ತೇನೆ. ಧನ್ಯವಾದಗಳು

>>ಕುಂಭಕಾಶಿ
ಕುಂಭಕಾಶಿಲಿ "ಕಾ" ಲೋಪ, ಎಷ್ಟಂದ್ರೂ ಅಕ್ಷರ ನುಂಗೋರು ನಾವು :)
>>ಶುಲ್ಕ ಎಷ್ಟು
ದೇವ್ರ ಸೇವೆ ಮಾಡಿಸ್ಬೇಕಾದ್ರೆ ಶುಲ್ಕ ಕೇಳ್ಬಾರ್ದು :) ೫೦೦ ರೂ
>>ಇವು ಅತಿಥಿ ಗೃಹಗಳೇ.
ಹೂಂ