ಜಾತಿ ರಾಜಕಾರಣದ ಅಪಾಯಗಳು ಮತ್ತು ಆತಂಕಗಳು

To prevent automated spam submissions leave this field empty.

ಜಾತಿ ರಾಜಕಾರಣದ ಅಪಾಯಗಳು ಮತ್ತು ಆತಂಕಗಳು

ನಮ್ಮ ರಾಷ್ಟ್ರವನ್ನು ನಾವು ಸಾರ್ವಭೌಮ ಪ್ರಜಾಸತ್ತಾತ್ಮಕ ಧರ್ಮನಿರಪೇಕ್ಷ ಸಮಾಜವಾದಿ ಗಣರಾಜ್ಯ ಎಂದು ಘೋಷಿಸಿಕೊಂಡಿದ್ದೇವೆ. ಒಂದು ಶತಮಾನದ ಕಾಲ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಮೂಡಿದ ಆಶೋತ್ತರಗಳ ಅಭಿವ್ಯಕ್ತಿಯಾಗಿ ನಾವು ಸಂವಿಧಾನದ ಮೂಲಕ ಈ ಘೋಷಣೆಯನ್ನು ಮಾಡಿದ್ದೇವೆ. ಅಂದ ಮಾತ್ರಕ್ಕೆ ನಮ್ಮದು ಈ ಆದರ್ಶಗಳ ಗಣರಾಜ್ಯವಾಗಿಬಿಟ್ಟಿದೆ ಎಂದರ್ಥವಲ್ಲ. ಈ ಗಣರಾಜ್ಯವೆಂಬುದು ಒಂದು ತತ್ವ ಹೇಗೋ ಒಂದು ಪ್ರಕ್ರಿಯೆ ಕೂಡ. ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯಬೇಕೆಂದು ನಾವೇ ಗೊತ್ತು ಮಾಡಿಕೊಂಡಿರುವ ಚುನಾವಣೆಗಳ ಮೂಲಕ ಈ ಪ್ರಕ್ರಿಯೆಯನ್ನು ಸದಾ ಜಾರಿಯಲ್ಲಿಡಬೇಕಾದ ಜವಾಬ್ದಾರಿ ಈ ಗಣರಾಜ್ಯದ ಪ್ರಜೆಯದು. ಅಂದರೆ, ನಮ್ಮ ಆದರ್ಶವಾದ ಸಾರ್ವಭೌಮ ಪ್ರಜಾಸತ್ತಾತ್ಮಕ ಧರ್ಮನಿರಪೇಕ್ಷ ಸಮಾಜವಾದಿ ಗಣರಾಜ್ಯವನ್ನು ಕಟ್ಟುವ ಕೆಲಸವನ್ನು ಐದು ವರ್ಷಗಳಿಗೊಮ್ಮೆ(ರಾಜಕೀಯ ಅನಿವಾರ್ಯತೆಗಳ ಸಂದರ್ಭದಲ್ಲಿ ಕೆಲವೊಮ್ಮೆ ಇನ್ನೂ ಮೊದಲೇ) ಹಿಂದಿರುಗಿ ನೋಡಿ, ಅಗತ್ಯವೆನಿಸಿದ ಮಾರ್ಪಾಡುಗಳನ್ನು ಮಾಡಿಕೊಳ್ಳುವ ಅವಕಾಶಗಳನ್ನೂ ಈ ಚುನಾವಣೆಗಳು ಒದಗಿಸುತ್ತವೆ. ನಾವು ಸಂಸದೀಯ ಪ್ರಜಾಪ್ರಭುತ್ವವೆಂಬ ಪ್ರಾತಿನಿಧಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆಯ್ದುಕೊಂಡಿದ್ದೇವೆ. ಇದರಡಿಯಲ್ಲಿ ನಮ್ಮ ಪ್ರತಿನಿಧಿಗಳನ್ನು ಪ್ರತಿ ಚುನಾವಣೆಯಲ್ಲೂ ಹೊಸದಾಗಿ ಆಯುವ ಮೂಲಕ ಈ ಕೆಲಸದಲ್ಲಿನ ಮಾರ್ಪಾಡುಗಳನ್ನು ಕುರಿತಂತೆ ನಮ್ಮ ಸೂಚನೆಗಳನ್ನು ನಿರಂತರವಾಗಿ ನೀಡುತ್ತಾ ಹೋಗಬಹುದಾಗಿದೆ.

ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ಎಂದರೆ ನಮ್ಮ ಗಣರಾಜ್ಯದ ಭವಿಷ್ಯ ಕುರಿತಂತೆ ನಮ್ಮ ಅಭಿಪ್ರಾಯಗಳನ್ನು ಅನುಮೋದಿಸುವ ಅಥವಾ ಅದಕ್ಕೆ ಹತ್ತಿರದ ಅಭಿಪ್ರಾಯಗಳನ್ನುಳ್ಳ ಅಭ್ಯರ್ಥಿಯನ್ನು ಅಥವಾ ಪಕ್ಷವನ್ನು ಬೆಂಬಲಿಸುವುದೇ ಆಗಿದೆ. ಈ ಅರ್ಥದಲ್ಲಿ ಚುನಾವಣೆ ಎಂದರೆ ದೇಶ ಕಟ್ಟುವ ಕೆಲಸವೇ ಆಗಿದೆ. ಆದರೆ ಇಂದಿನ ಚುನಾವಣೆಗಳು ದೇಶ ಕಟ್ಟುವ ಕೆಲಸವಾಗಿ ಕಾಣುತ್ತಿದೆಯೆ? ಇಂದು ಚುನಾವಣೆಗಳು ನಡೆಯುತ್ತಿರುವ ರೀತಿ ನೋಡಿದರೆ ಅದು ದೇಶ ಕಟ್ಟುವ ಕೆಲಸಕ್ಕೆ ಬದಲಾಗಿ ದೇಶ ಕೆಡುವುವ ಕೆಲಸವಾಗಿಯೇ ಕಾಣುತ್ತಿದೆ ಎಂಬುದು ಸಾಮಾನ್ಯ ಸಾರ್ವಜನಿಕ ಅಭಿಪ್ರಾಯವಾಗಿದೆ. ಏಕೆಂದರೆ, ಚುನಾವಣೆಗಳ ಮೂಲಕ ನಾವು ಆರಿಸಬೇಕಾದದ್ದು, ಹೊಸ ಹೊಸ ಜಾಗತಿಕ ಸವಾಲುಗಳ ಎದುರಲ್ಲಿ ರಾಷ್ಟ್ರ ಕಟ್ಟುವ ಕೆಲಸಕ್ಕೆ ಅಗತ್ಯವಾದ ಶಾಸನಗಳನ್ನೂ, ಆಡಳಿತಾತ್ಮಕ ಕಾನೂನುಗಳನ್ನೂ ಚರ್ಚಿಸಿ ರೂಪಿಸಬಲ್ಲ ಸಮರ್ಥ ಪ್ರತಿನಿಧಿಗಳನ್ನು. ಆದರೆ ಇಂದು ನಾವು ರಾಷ್ಟ್ರದ ಲೋಕಸಭೆಗೆ ಮತ್ತು ರಾಜ್ಯ ವಿಧಾನ ಸಭೆಗಳಿಗೆ ಆರಿಸಿ ಕಳಿಸುತ್ತಿರುವ ಪ್ರತಿನಿಧಿಗಳ ಈ ಸಂಬಂಧದ ಅರ್ಹತೆಗಳನ್ನು ನೋಡಿದರೆ ಆಘಾತವಾಗುತ್ತದೆ.

ಈಗ ಅವಧಿ ಅಂತ್ಯಗೊಳ್ಳುತ್ತಿರುವ ಹದಿನಾಲ್ಕನೇ ಲೋಕಸಭೆಗೆ ಸಂಬಂಧಿಸಿದ ಕೆಲವು ವಿದ್ಯಮಾನಗಳನ್ನೂ, ಅಂಕಿ ಅಂಶಗಳನ್ನೂ ಗಮನಿಸಿದರೆ ನಮ್ಮ ಈ ಚುನಾವಣೆಗಳು ಎಷ್ಟರ ಮಟ್ಟಿಗೆ ದಾರಿ ತಪ್ಪಿವೆ ಎಂಬುದು ಗೊತ್ತಾಗುತ್ತದೆ. ಲೋಕಸಭೆಯ ಕೆಲವು ಸದಸ್ಯರು ಮಾನವ ಕಳ್ಳ ಸಾಗಣೆಯ ಅಪರಾಧದಲ್ಲಿ ಸಿಕ್ಕಿ ಹಾಕಿಕೊಂಡಿದ್ದರೆ, ಇನ್ನು ಕೆಲವರು ಪಟ್ಟಭದ್ರ ಹಿತಾಸಕ್ತಿಗಳಿಗೆ ನೆರವಾಗುವ ದೃಷ್ಟಿಯಿಂದ ಅವರಿಂದ ಬೃಹತ್ ಪ್ರಮಾಣದ ಹಣ ಪಡೆದು ಸದನದಲ್ಲಿ ಪ್ರಶ್ನೆಗಳನ್ನು ಕೇಳುವ ಅಪರಾಧದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಹಾಗೇ, ಅಮೆರಿಕಾದೊಡನೆಯ ಅಣು ಒಪ್ಪಂದದ ಮೇಲಿನ ಚರ್ಚೆಯ ಸಂಬಂಧವಾಗಿ ನಡೆದ ಮತದಾನದ ಸಂದರ್ಭದಲ್ಲಿ ಲೋಕಸಭೆಯಲ್ಲಿ ಕೋಟಿಗಟ್ಟಲೆ ರೂಪಾಯಿಗಳ ಹಣದ ಪ್ರದರ್ಶನ ನಡೆದ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಳ್ಳಬೇಕಿದೆ. ಸತ್ಯ ಹೊರಬರಬೇಕಿದೆ. ಇಂತಹವುಗಳೆಲ್ಲ ಬಹಳ ಹಿಂದಿನಿಂದಲೂ ನಡೆಯುತ್ತಾ ಬಂದಿದ್ದರೂ, ಸದ್ಯದ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿಯವರ ಸಂಸದೀಯ ಪ್ರಜಾಪ್ರಭುತ್ವ ಬದ್ಧತೆ ಮತ್ತು ಕ್ರಿಯಾಶೀಲತೆಗಳಿಂದಾಗಿ ಇವೆಲ್ಲ ಬಹಿರಂಗಗೊಂಡು, ಸಂಬಂಧಪಟ್ಟವರ ಲೋಕಸಭಾ ಸದಸ್ಯತ್ವ ರದ್ದಾಗಲು ಸಾಧ್ಯವಾಗಿದೆ. ಅವರ ವಿರುದ್ಧ ಅಪರಾಧ ಪ್ರಕರಣಗಳೂ ದಾಖಲಾಗಿವೆ. ಇನ್ನು ಸದ್ಯದ ಮುಖ್ಯ ಚುನಾವಣಾ ಆಯುಕ್ತರ ಪ್ರಕಾರವೇ ಈ ಲೋಕಸಭೆಯ ಶೇಕಡಾ ಸುಮಾರು ೧೦ರಷ್ಟು ಜನ ಮತ್ತು ಇಂದಿನ ವಿವಿಧ ರಾಜ್ಯಗಳ ವಿಧಾನ ಸಭೆಗಳ ಶೇಕಡಾ ೨೦ ಜನ ಅಪರಾಧಗಳ ಹಿನ್ನೆಲೆ ಹೊಂದಿದವರಾಗಿದ್ದಾರೆ. ಈ ಅಪರಾಧಗಳಲ್ಲಿ ಕೊಲೆ-ದರೋಡೆ-ಲೂಟಿ-ಹಲ್ಲೆ-ಮಾನಭಂಗ ಪ್ರಕರಣಗಳು ಸೇರಿದ್ದು, ಇವುಗಳಲ್ಲಿ ಕೆಲವರಿಗೆ ಕೆಳ ನ್ಯಾಯಾಲಯಗಳಿಂದ ಶಿಕ್ಷೆಯೂ ಘೋಷಿತವಾಗಿದೆ. ಆದರೆ ಅವರು ಮೇಲಿನ ಹಂತದ ನ್ಯಾಯಾಲಯಗಳಿಗೆ ಮನವಿ ಸಲ್ಲಿಸಿ, ಜನ ಪ್ರತಿನಿಧಿಗಳ ಚಾರಿತ್ರ್ಯವನ್ನು ನಿಯಂತ್ರಿಸುವ ಜನತಾ ಪ್ರಾತಿನಿಧ್ಯ ಕಾಯಿದೆಯ ನಿರ್ಬಂಧಗಳಿಂದ ರಕ್ಷಣೆ ಪಡೆದಿದ್ದಾರೆ! ಮಿಕ್ಕಂತೆ, ಬಹಳಷ್ಟು ಸದಸ್ಯರು ತಮ್ಮನ್ನೇಕೆ ಜನ ಆಯ್ದು ಕಳಿಸಿದ್ದಾರೆ ಎಂಬ ಕಲ್ಪನೆಯೇ ಇಲ್ಲದವರಂತೆ, ತಮ್ಮ ಸದಸ್ಯತ್ವದ ಅಧಿಕಾರಗಳನ್ನು ತಮ್ಮ ಕೌಟುಂಬಿಕ ವ್ಯಾಪಾರ-ವ್ಯವಹಾರಗಳ ರಕ್ಷಣೆ ಮತ್ತು ಪೋಷಣೆಗಳಿಗಾಗಿ ಬಳಸಿಕೊಳ್ಳುತ್ತ್ತಾ ನಿಷ್ಕ್ರಿಯ ಸಂಸದೀಯ ಜೀವನ ನಡೆಸುವವರಾಗಿದ್ದಾರೆ.

ಇಂತಹ ಜನ ಪ್ರತಿನಿಧಿಗಳಿಂದ ಎಂತಹ ರಾಷ್ಟ್ರ ನಿರ್ಮಾಣದ ಕೆಲಸ ಆದೀತು? ಇಂತಹವರನ್ನು ಜನರಾದರೂ ಏಕೆ ಆಯ್ಕೆ ಮಾಡುತ್ತಾರೆ? ಬಹುಶಃ ಇದಕ್ಕೆ ಉತ್ತರ, ಹಳೆಯ ರಾಷ್ಟ್ರೀಯ ಹೋರಾಟದ ವಾರಸುದಾರರು ಮತ್ತು ಹೊಸ ಸಾಂಸ್ಕೃತಿಕ ರಾಷ್ಟ್ರೀಯತೆಯ ಪ್ರತಿಪಾದಕರೂ ಸೇರಿದಂತೆ ರಾಷ್ಟ್ರ ನಿರ್ಮಾಣ ಯಾರಿಗೂ ಬೇಡವಾಗಿದೆ. ಇದು ಕಳೆದ ಹದಿನೈದು-ಇಪ್ಪತ್ತು ವರ್ಷಗಳಿಂದ ಮತ್ತು ಕಳೆದ ಮೂರ್ನಾಲ್ಕು ಚುನಾವಣೆಗಳೀಂದೀಚೆಗೆ ಕಾಣ ಬರುತ್ತಿರುವ ಪ್ರವೃತ್ತಿ. ಜಾಗತೀಕರಣವೆಂಬ ಪರಿಕಲ್ಪನೆಯ ಫಲವಿದು. ಸ್ಥಳೀಯ-ಪ್ರಾದೇಶಿಕ-ರಾಷ್ಟ್ರೀಯ ಸಂಬಂಧಗಳ ಮೇಲೆ ಜಾಗತಿಕ ಸಂಬಂಧಗಳು ಸವಾರಿ ಮಾಡುವಂತಾದ ಪರಿಸ್ಥಿತಿಯಿಂದಾಗಿ ರಾಷ್ಟ್ರ ಕಲ್ಪನೆಯೇ ಇಂದು ಭಂಗಗೊಂಡಿದೆ, ಭ್ರಷ್ಟಗೊಂಡಿದೆ. ರಾಷ್ಟ್ರದ ಜನವನ್ನೆಲ್ಲ ಹಲವು ನೆಲೆಗಳಲ್ಲಿ ಒಗ್ಗೂಡಿಸುತ್ತಿದ್ದ ಭಾವ ಸಂಬಂಧಗಳು ಇಂದು ದುರ್ಬಲವಾಗಿವೆ. ಇದರಿಂದಾಗಿ ಒಂದು ರಾಷ್ಟ್ರವನ್ನಾಗಿ ನಮ್ಮನ್ನು ಕಲ್ಪಿಸಿಕೊಳ್ಳುವಲ್ಲಿ ಅಡೆ ತಡೆಗಳಾಗಿದ್ದ ಶಕ್ತಿಗಳು ಮತ್ತೆ ಸಾಧುತ್ವವನ್ನು ಪಡೆದು ತಲೆ ಎತ್ತಿವೆ. ಇವುಗಳಲ್ಲಿ ಮುಖ್ಯವಾದುವು ವೈಯುಕ್ತಿಕ ಲಾಭ ಅಥವಾ ಸ್ವಾರ್ಥ ದೃಷ್ಟಿ ಮತ್ತು ಜಾತಿ ಸಂಘಟನೆ.

ಕರ್ನಾಟಕವೀಗ ಚುನಾವಣೆಗಳಿಗೆ ಸಂಬಂಧಿಸಿದಂತೆ ಅತ್ಯಂತ ಭ್ರಷ್ಟ ರಾಜ್ಯವೆಂಬ ಕುಖ್ಯಾತಿಯನ್ನು ಗಳಿಸಿಕೊಂಡಿದೆ. ಇಲ್ಲಿನ ಶೇಕಡಾ ೪೩ರಷ್ಟು ಜನ ಹಣ ಪಡೆದು ಮತ ಹಾಕುವವರೆಂದು ಇತ್ತೀಚಿನ ಸಮೀಕ್ಷೆಯೊಂದು ತಿಳಿಸಿದೆ. ಇತರ ರಾಜ್ಯಗಳೇನೂ ಈ ವಿಷಯದಲ್ಲಿ ಬಹು ಹಿಂದೇನೂ ಉಳಿದಿಲ್ಲ. ಹಾಗಾಗಿ, ನಮ್ಮ ರಾಷ್ಟ್ರ ಕಲ್ಪನೆಗೆ, ಅದನ್ನು ಈವರೆಗೆ ಸಾಕಾರಗೊಳಿಸಿರುವ ಪ್ರಜಾಪ್ರಭುತ್ವಕ್ಕೆ ಇದೊಂದು ದೊಡ್ಡ ಆಘಾತವೇ ಸರಿ. ಬಡವರ ಮತ್ತು ದರಿದ್ರರ ಒಂದು ವರ್ಗಕ್ಕಷ್ಟೇ ಸೀಮಿತವಾಗಿದ್ದ ಈ ಹಣ-ಹೆಂಡಗಳ ಆಮಿಷದ ಈ ರೋಗ, ರಾಷ್ಟ್ರದ ಅಭಿವೃದ್ಧಿ ದರ ಹೆಚ್ಚಿ ಕೆಲವರ ಬಳಿ ಹಡಬೆ ಹಣದ ಹೊಳೆಯೇ ಹರಿಯುವಂತಾಗಿ ಈಗ ಮಧ್ಯಮ ವರ್ಗದವರೆಗೂ ಹಬ್ಬಿದೆ. ಆದರೆ ವರ್ಗಬೇಧವನ್ನೂ ಮೀರಿ ನಮ್ಮ ರಾಷ್ಟ್ರಕ್ಕೆ, ಪ್ರಜಾಪ್ರಭುತ್ವಕ್ಕೆ ಮಾರಕವಾಗಿ ಹಬ್ಬುತ್ತಿರುವ ಇನ್ನೊಂದು ರೋಗವೆಂದರೆ ಜಾತಿ.

ಜಾತಿ ಭಾರತೀಯ ಸಮಾಜದ ಒಂದು ವಾಸ್ತವ, ನಿಜ. ಆದರೆ ಅದು ಸತ್ಯವೆ? ಅದು ವೈಚಾರಿಕವೆ? ಎಂದು ಕೇಳಿದರೆ ಉತ್ತರ ಕಷ್ಟವಾಗಬಹುದು. ಜಾತಿ ಒಂದು ರೂಢಿ, ಹೆಚ್ಚೆಂದರೆ ಒಂದು ಸಂಪ್ರದಾಯ. ಅದೊಂದು ಮಾನಸಿಕತೆ. ಖ್ಯಾತ ಸಮಾಜವಾದಿ ಚಿಂತಕ ಹಾಗೂ ರಾಜಕಾರಣಿ ಲೋಹಿಯಾ ಪ್ರಕಾರ, ಯಾವುದೇ ಪ್ರೀಮಿಯಂ ಕಟ್ಟದೆ ಲಭ್ಯವಿರುವ ಸಾಮಾಜಿಕ ವಿಮೆಯದು! ಹಾಗೇ ಭಾರತೀಯ ಸಮಾಜದ ಸೃಷ್ಟಿಶೀಲತೆಯನ್ನೂ, ಸತ್ವವನ್ನೂ, ಸಮಗ್ರ ದಕ್ಷತೆಯನ್ನೂ ಹಾನಿಗೊಳಿಸಿ ಅದನ್ನು ಪರ ದಾಸ್ಯಕ್ಕೆ, ಹೆರವರ ಶೋಷಣೆಗೆ ಈಡು ಮಾಡಿದ ವಿಚ್ಛಿದ್ರಕಾರಿ ಶಕ್ತಿಯೂ ಹೌದು. ಹಾಗಾಗಿಯೇ ಸ್ವಾತಂತ್ರ್ಯೋದಯದ ಸಂದರ್ಭದ ಎಚ್ಚರದಲ್ಲಿ ಮತ್ತು ಹುರುಪಿನಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಜಾತಿ ವಿರುದ್ಧ;ಜಾತಿರಹಿತ ಸಮಾಜದ ಮಾತನಾಡಿದವು. ವಿಶೇಷವಾಗಿ ಲೋಹಿಯಾರ ಸಮಾಜವಾದಿ ಪಕ್ಷ ಜಾತಿ ವಿನಾಶವಿಲ್ಲದೆ ಯಾವುದೇ ಅಭಿವೃದ್ಧಿ ಅಥವಾ ರಾಷ್ಟ್ರ ನಿರ್ಮಾಣ ಸಾಧ್ಯವೇ ಇಲ್ಲವೆಂದು ಸಾರಿ, ಅದಕ್ಕಾಗಿ ವಿಶೇಷ ನೀತಿ-ಕಾರ್ಯಕ್ರಮಗಳನ್ನು ರೂಪಿಸಿತು. ಆದರೆ ಲೋಹಿಯಾ ನಂತರದ ದಿನಗಳಲ್ಲಿ ಈ ನೀತಿ-ಕಾರ್ಯಕ್ರಮಗಳೆಲ್ಲ ಅವಕಾಶವಾದಿ ರಾಜಕಾರಣಕ್ಕೆ ಸಿಕ್ಕಿ, ಅದರ ಪರಿಣಾಮ ಇಂದು ತಿರುಗು ಮುರುಗಾಗಿದೆ. ಸಾರ್ವತ್ರಿಕ ಸಮಾನತೆಯನ್ನು ತನ್ನ ಅಂತಿಮ ಗುರಿಯನ್ನಾಗಿಸಿಕೊಂಡಿದ್ದ ಆ ಸಾಮಾಜಿಕ ನ್ಯಾಯ ಕಾರ್ಯಕ್ರಮ ಇಂದು ಜಾತಿ ವಿನಾಶಕ್ಕೆ ಬದಲಾಗಿ ಜಾತಿ ಸಮಾನತೆಯನ್ನು ಪ್ರತಿಪಾದಿಸುತ್ತಾ, ರಾಜಕಾರಣದಲ್ಲಿ ಜಾತಿಯ ಪಾತ್ರಕ್ಕೆ ಒಂದು ಸಾರ್ವತ್ರಿಕ ಅನುಮೋದನೆಯನ್ನೂ ನೀಡಿಬಿಟ್ಟಿದೆ!

ಹಾಗಾಗಿಯೇ ಎಲ್ಲ ಪಕ್ಷಗಳೂ ಚುನಾವಣೆ ಬಂದೊಡನೆ ಜಾತಿ ಲೆಕ್ಕಾಚಾರ ಶುರು ಮಾಡುತ್ತವೆ. ನಮ್ಮ ಮಾಧ್ಯಮಗಳೂ ಇದಕ್ಕೆ ಪೂರಕವಾಗಿ ಕ್ಷೇತ್ರಗಳ ಜಾತಿವಾರು ಅಂಕಿ ಅಂಶಗಳನ್ನು ಓದುಗರ ಅರ್ಥಾತ್ ಮತದಾರರ ಮುಂದೆ ಹರಡಿ ತಮ್ಮ ಸಮೀಕ್ಷೆ, ವಿಶ್ಲೇಷಣೆ, ಮುನ್ನೋಟಗಳನ್ನು ನೀಡತೊಡಗುತ್ತವೆ. ಇದೆಲ್ಲದರ ಒಟ್ಟು ಪರಿಣಾಮವೆಂದರೆ, ಚುನಾವಣೆಗಳನ್ನು ಮತ್ತು ಆನಂತರದ ಅಧಿಕಾರ ರಾಜಕಾರಣವನ್ನು ನಮ್ಮ ನಾಯಕರು ಜಾತಿ ಪರಿಗಣನೆಯ ಆಧಾರದ ಮೇಲೆಯೇ ಮಾಡತೊಡಗುವುದು. ನಮ್ಮ ರಾಜ್ಯ ಸರ್ಕಾರ ಇತ್ತೀಚೆಗೆ ಮಠ-ಮಂದಿರಗಳಿಗೆ ಮತ್ತು ಇತರ ಜಾತಿ ಸಂಘ-ಸಂಸ್ಥೆಗಳಿಗೆ ಪ್ರಕಟಿಸುತ್ತಿರುವ ಕೋಟ್ಯಾಂತರ ರೂಪಾಯಿಗಳ ಅನುದಾನ ಈ ಪ್ರವೃತ್ತಿಗೆ ಸಿಕ್ಕಿರುವ ಅಧಿಕೃತ ಮಾನ್ಯತೆಗೆ ಸಾಕ್ಷಿಯಾಗಿದೆ.

ಆದರೆ ನಿಜವಾಗಿ ಜನ ಜಾತಿ ನೋಡಿಯೇ ಮತ ಹಾಕುತ್ತಾರೆಯೆ? ಬೆರಳೆಣಿಕೆಯಷ್ಟು ಅಪವಾದಗಳ ಹೊರತಾಗಿ, ಯಾವ ಕ್ಷೇತ್ರದಲ್ಲೂ ಯಾವ ಜಾತಿ-ಉಪಜಾತಿಯ ಜನಸಂಖ್ಯೆ ಕಾಲು ಭಾಗಕ್ಕಿಂತಲೂ ಹೆಚ್ಚಿಲ್ಲದಿರುವಾಗ ಜಾತಿ ಆಧಾರದ ಮೇಲೇ ಯಾವ ಅಭ್ಯರ್ಥಿಯಾದರೂ ಗೆಲ್ಲಲು ಸಾಧ್ಯವೆ? ತನ್ನ ಜಾತಿಯ ಜನರೊಂದಿಗೆ ರಾಜಕೀಯವಾಗಿ ಗುರುತಿಸಿಕೊಂಡ ಅಭ್ಯರ್ಥಿ ಇತರ ಜಾತಿಯ ಜನರ ಅಸಮಧಾನ-ವಿರೋಧಗಳನ್ನು ಆಹ್ವಾನಿಸುವ ಅಪಾಯವನ್ನು ಎದುರಿಸುವುದಿಲ್ಲವೆ? ನಮ್ಮ ಜನದ ಮೇಲೆ ಜಾತಿ ವಿರೋಧಿ ವಿಚಾರ-ಆಂದೋಲನಗಳ ಪ್ರಭಾವ ಸಂಪೂರ್ಣ ನಶಿಸಿ ಹೋಗಿ ಅವರೆಲ್ಲ ಜಾತಿ ಮೂಢರಾಗಿಬಿಟ್ಟಿದ್ದಾರೆಯೆ? ಇಂತಹ ಅನೇಕ ಪ್ರಶ್ನೆಗಳು ನಮ್ಮನ್ನು ನಮ್ಮ ನಾಯಕರು ಮತ್ತು ಅವರ ಜೊತೆಗೆ ಮಾಧ್ಯಮಗಳು ಸೇರಿ ಸೃಷ್ಟಿಸಿರುವ ಹುಸಿ ವಾಸ್ತವದಾಚೆಗೆ ನಮ್ಮನ್ನು ಕರೆದೊಯ್ಯುತ್ತವೆ. ಜಾತಿಯ ಆಧಾರದ ಮೇಲೇ ಮತ ಹಾಕುವವರು ಇದ್ದಾರೆ ನಿಜ. ಆದರೆ ಅವರಷ್ಟೇ ಸಂಖ್ಯೆಯಲ್ಲಿ ಅಥವಾ ಅದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಜಾತಿ ಮೀರಿ ಮತ ಹಾಕುವ ಪ್ರಬುದ್ಧ ಮತದಾರರೂ ಇದ್ದಾರೆ. ಇಲ್ಲದೇ ಹೋಗಿದ್ದಲ್ಲಿ ಅಲ್ಪ ಸಂಖ್ಯಾತ ಜಾತಿ ಮತ್ತು ಕೋಮಿನ ಅಭ್ಯರ್ಥಿಗಳು ಆಯ್ಕೆಯಾಗುವ ಸಂಭವವೇ ಇಲ್ಲದಾಗಿರುತ್ತಿತ್ತು. ಆದರೆ ರಾಷ್ಟ್ರದ ಮತ್ತು ರಾಜ್ಯದ ಚುನಾವಣಾ ಇತಿಹಾಸದಲ್ಲಿ ಎಷ್ಟು ಜನ ಎಷ್ಟು ಬಾರಿ ಅಲ್ಪ ಸಂಖ್ಯಾತ ಜಾತಿಗಳ-ಕೋಮುಗಳ ಜನ ಚುನಾವಣೆಗಳಲ್ಲಿ ಗೆದ್ದಿಲ್ಲ? ಉದಾಹರಣೆಗೆ ತಮ್ಮ ಕ್ಷೇತ್ರಗಳಲ್ಲಿ ಶೇಕಡಾ ನಾಲ್ಕೈದರಷ್ಟೂ ಮತದಾರರನ್ನು ಹೊಂದದ ದೇವರಾಜ ಅರಸು, ವೀರಪ್ಪ ಮೊಯ್ಲಿ, ಪಿ.ಜಿ.ಆರ್.ಸಿಂಧ್ಯಾ, ರಮೇಶ್ ಕುಮಾರ್, ಧರ್ಮಸಿಂಗ್ ಮುಂತಾದವರು ಪದೇ ಪದೇ ಹೇಗೆ ಗೆದ್ದು ಬರಲು ಸಾಧ್ಯವಾಗುತ್ತಿತ್ತು? ಹಿರಿಯ ದಲಿತ ನಾಯಕ ಕೆ.ಎಚ್.ರಂಗನಾಥ್ ತಮ್ಮ ಚುನಾವಣಾ ರಾಜಕೀಯವನ್ನು ಆರಂಭಿಸಿದ್ದೇ ಸಾಮಾನ್ಯ ಕ್ಷೇತ್ರವೊಂದರಿಂದ ಗೆದ್ದುದರೊಂದಿಗೆ ಎಂಬುದು ಎಷ್ಟು ಜನಕ್ಕೆ ಗೊತ್ತು? ಹಾಗೇ ರಾಷ್ಟ್ರ ಮಟ್ಟದಲ್ಲಿ ನಮ್ಮ ಯಾವ ಜಾತಿಗೂ ಸೇರದ ಸೋನಿಯಾ ಗಾಂಧಿಯವರನ್ನು ಉತ್ತರ ಪ್ರದೇಶದ ಮತದಾರರು ಪ್ರತಿ ಬಾರಿಯೂ ಭರ್ಜರಿ ಅಂತರದಿಂದ ಏಕೆ ಗೆಲ್ಲಿಸುತ್ತಾರೆ?

ಆದರೆ ಈಚಿನ ವರ್ಷಗಳಲ್ಲ್ಲಿ ಜಾತಿ ಮತ್ತು ಮತದ ಆಧಾರದ ಮೇಲೇ ಅಭ್ಯರ್ಥಿಗಳ ಆಯ್ಕೆ ಮತ್ತು ಮತ ಕೇಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದರ ಜೊತೆಗೆ ಇತರ ವೈವಿಧ್ಯಮಯ ಆಮಿಷಗಳೂ ಸೇರಿ ಜನರ ಮನಸ್ಸನ್ನು ಭ್ರಷ್ಟಗೊಳಿಸುವ, ಜಾತೀಯಗೊಳಿಸುವ ಪ್ರಯತ್ನಗಳು ನಿರ್ಲಜ್ಜವಾಗಿ ಮತ್ತು ನಿರ್ಭಿಡೆಯಿಂದ ನಡೆದಿವೆ. ಇದಕ್ಕೆ ನಮ್ಮ ರಾಜಕಾರಣ ರಾಷ್ಟ್ರ ಕಟ್ಟುವ, ಸಾಮಾಜಿಕ ಪುರ್ನನಿರ್ಮಾಣದ ಕೆಲಸವಾಗಿರದೆ, ಒಂದು ಬೃಹತ್ ಉದ್ಯಮವಾಗಿ ಬೆಳೆಯುತ್ತಿದ್ದು, ಅದರ ನಿಯಂತ್ರಣಕ್ಕೆ ಬೇಕಾದ ಜನ ಪ್ರತಿನಿಧಿಗಳೆಂಬುವವರ ಸಂಖ್ಯಾ ಬೆಂಬಲವನ್ನಷ್ಟೇ ಸಂಘಟಿಸಿಕೊಳ್ಳುವ ಕೆಲಸವಾಗಿ ಮಾರ್ಪಾಡಾಗಿರುವುದೇ ಕಾರಣವಾಗಿದೆ. ಈಚಿನ ವರ್ಷಗಳಲ್ಲಿ ಎಲ್ಲ ಪಕ್ಷಗಳಲ್ಲೂ ಮಕ್ಕಳ ಮತ್ತು ಬಂಧುಗಳ ರಾಜಕಾರಣ ಆರಂಭವಾಗಿರುವುದೂ ಇದೇ ಕಾರಣದಿಂದಾಗಿಯೇ! ಹಾಗಾಗಿ ಪ್ರತಿ ಪಕ್ಷಕ್ಕೂ ಅಭ್ಯರ್ಥಿಯ ಗುಣಮಟ್ಟಕ್ಕಿಂತ ಹೆಚ್ಚಾಗಿ ಆತನ ಗೆಲ್ಲುವ ಶಕ್ತಿಯೇ ಪ್ರಧಾನವಾಗುತ್ತಿದ್ದು, ಈ ಶಕ್ತಿಯನ್ನು ಹಣ ಮತ್ತು ಜಾತಿಯಲ್ಲಿ ಗುರುತಿಸಲಾಗುತ್ತಿದೆ. ಹೀಗೆ ಹಣ ಮತ್ತು ಜಾತಿ ಒಟ್ಟಿಗೆ ಸೇರಿದರೆ ಅದು ನಮ್ಮ ಪ್ರಜಾಪ್ರಭುತ್ವಕ್ಕೆ, ಆ ಮೂಲಕ ನಮ್ಮ ರಾಷ್ಟ್ರಕ್ಕೇ ಉರುಳಾಗುವುದೇ ಸರಿ. ಇದರ ಪರಿಣಾಮಗಳನ್ನು ನಾವಿಂದು ರಾಷ್ಟ್ರಜೀವನದಲ್ಲಿ ತೀವ್ರ ಗತಿಯಲ್ಲಿ ಮತ್ತು ವೈವಿಧ್ಯದಲ್ಲಿ ಹೆಚ್ಚುತ್ತಿರುವ ಭ್ರಷ್ಟತೆ, ಅಪರಾಧ, ಹಿಂಸೆ, ಅಸಹಾಯಕತೆ, ಆತ್ಮಹತ್ಯೆಗಳ ರೂಪದಲ್ಲಿ ನೋಡುತ್ತಿದ್ದೇವೆ.

ಇದಕ್ಕೆ ಪ್ರಮುಖ ಕಾರಣ, ತಮ್ಮ ಜನಪ್ರಿಯತೆಯನ್ನು ಪಣಕ್ಕೊಡ್ಡಿ ಅಪ್ರಿಯ ಸತ್ಯವನ್ನು ಹೇಳಬಲ್ಲ ಮತ್ತು ಕಳೆದುಹೋಗುತ್ತಿರುವ ಆದರ್ಶಗಳನ್ನು ಜನರ ಮನಸ್ಸಿನಲ್ಲಿ ಮತ್ತೆ ಬಿತ್ತಲು ರಾಜಕೀಯದಲ್ಲಿ ಸದ್ಯಕ್ಕೆ ಅವ್ಯಾವಹಾರಿಕವೆನಿಸಿದ್ದನ್ನೂ ಮಾಡಬಲ್ಲ ದೀರ್ಘಕಾಲಿಕ ನೋಟವುಳ್ಳ ನಾಯಕರು ಕಾಣೆಯಾಗಿರುವುದು. ೧೯೬೨ರ ಚುನಾವಣೆಗಳಲ್ಲಿ ಗ್ವಾಲಿಯರ್‌ನಲ್ಲಿ ಮಹಾರಾಣಿ ವಿಜಯರಾಜೇ ಸಿಂಧ್ಯಾ ಲೋಕಸಭಾ ಚುನಾವಣೆಗೆ ನಿಂತಾಗ, ಪ್ರಜಾಪ್ರಭುತ್ವದ ಭಾವನೆಯನ್ನು ಎತ್ತಿ ಹಿಡಿಯಲು ಅವರ ವಿರುದ್ಧ ಲೋಹಿಯಾ ತಮ್ಮ ಸಮಾಜವಾದಿ ಪಕ್ಷದಿಂದ ಸುಖೋರಾಣಿ ಎಂಬ ಆ ಊರಿನ ಝಾಡಮಾಲಿ ಮಹಿಳೆಯನ್ನು ಅಭ್ಯರ್ಥಿಯಾಗಿ ನಿಲ್ಲಿಸಿದರು! ೧೯೬೭ರ ಚುನಾವಣೆಗಳಲ್ಲಿ ಅವರು ತಮ್ಮ ಪಕ್ಷದ ನಾಯಕರ ಎಚ್ಚರಿಕೆಯ ಮಧ್ಯೆಯೂ ಏಕರೂಪದ ನಾಗರಿಕ ಸಂಹಿತೆಯ ಜಾರಿಯನ್ನು ತಮ್ಮ ಪಕ್ಷದ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡು ಮತ ಕೇಳುವ ಧೈರ್ಯ ಮಾಡಿದರು! ಹಾಗೇ, ಅದೇ ವರ್ಷ ಬಿಹಾರ ಸರ್ಕಾರದ ತಮ್ಮದೇ ಪಕ್ಷದ ದಲಿತ ಮಂತ್ರಿಯೊಬ್ಬ ಮುಖ್ಯಮಂತ್ರಿಯಾಗಲು ಕುಟಿಲ ರಾಜಕಾರಣಕ್ಕಿಳಿದಾಗ ತಮ್ಮ ಪಕ್ಷದ ನೇತೃತ್ವದ ಸರ್ಕಾರವನ್ನೇ ಬಲಿಗೊಡಲು ಅವರು ಹಿಂಜರಿಯಲಿಲ್ಲ.

ಅಂತಹ ನಾಯಕರು ಇಂದಿಲ್ಲ. ಆ ಶೂನ್ಯವನ್ನು ಜನತೆ ತಮ್ಮ ವಿವೇಕವನ್ನು ಬಳಸಿ ಮತ ಹಾಕಿ ತುಂಬಬೇಕಿದೆ. ಅತಿಯಾದ ಹಣ ಮತ್ತು ಜಾತಿ ಅಭಿಮಾನವನ್ನು ಪ್ರಚೋದಿಸಿ ರಾಜಕಾರಣ ಮಾಡಹೊರಟಿರುವ ರಾಜಕಾರಣಿಗಳಿಗೆ ನಿರ್ಣಾಯಕ ಪಾಠ ಕಲಿಸಬೇಕಿದೆ. ಆಗ ಮಾತ್ರ ಉದಾತ್ತ ಧ್ಯೇಯಗಳ ರಾಜಕಾರಣ ಮತ್ತು ಜಾತಿ ಮೀರಿದ ನಾಯಕರು ಹುಟ್ಟಿಬಂದಾರು! ರಾಷ್ಟ್ರ ನಿರ್ಮಾಣದ ಕೆಲಸ ಮತ್ತೆ ನಿಜವಾದ ಅರ್ಥದಲ್ಲಿ ಆರಂಭವಾದೀತು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸರಿಯಾದ ಮಾತು. ಅತ್ಯಂತ ಪ್ರಸ್ತುತ ಹಾಗೂ ಸಮಯೋಚಿತ.
ಇಂದಿನ ಸನ್ನಿವೇಶದಲ್ಲಿ ಎಲ್ಲ ಪಕ್ಷಗಳೂ ಜಾತ್ಯತೀತತೆಯ ಸೋಗು ಹಾಕುತ್ತಾ ಜಾತೀಯತೆಯನ್ನು ಪೋಷಿಸುತ್ತಿರುವುದು ವಿಪರ್ಯಾಸ.