ಅಂತರ್ಜಾಲದಲ್ಲಿ ಬ್ಯಾಂಕಿಂಗ್

To prevent automated spam submissions leave this field empty.

"ನಾಳೆ ಮುಂಗಡ ತೆರಿಗೆ ಪಾವತಿಗೆ ಕೊನೆಯ ದಿನ,ನೆನಪಿದೆ ತಾನೆ?" ಸಂಜೆ ಕ್ಲಿನಿಕ್ ಮುಗಿಸಿ ಮನೆಗೆ ಹೋಗುವ ಸಮಯದಲ್ಲಿ ಆಡಿಟರ್ ಇಂದ ದೂರವಾಣಿ ಕರೆ. ರಾತ್ರಿ ಊಟ ಮುಗಿಸಿ ,ಲ್ಯಾಪ್ ಟಾಪ್ ತೆರೆದು ಬ್ರಾಡ್ ಬ್ಯಾಂಡ್ ಹಾಕುತ್ತಿದ್ದಂತೆ ಔಟ್ಲುಕ್ ನಿಂದ ನೆನಪಿಸುವ ಮೆಮೊ- ಮೊಬೈಲ್ ಬಿಲ್ ಪಾವಥಿಸಬೇಕು, ಎಲ್ ಐ ಸಿ ಪ್ರೀಮಿಯಮ್ ಕಟ್ಟುವ ಕೆಲಸ ಬಾಕಿ ಇದೆ! ಸರಿ , ಮೊದಲು ಬಿ ಎಸ್ ಎನ್ ಎಲ್ ನ ಅಂತರ್ಜಾಲ ಪುಟಕ್ಕೆ ಪ್ರಯಾಣ , ಅಲ್ಲಿ ಮೋಬೈಲ್ ಬಿಲ್ ಪಾವತಿ ಸೇವೆಯ ಆಯ್ಕೆ, ನಂತರ ನನ್ನ ಐ ಡಿ, ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ ಬಿಲ್ ಮೊತ್ತ ನೋಡಿ ಅಲ್ಲಿಂದ ಪಾವತಿ ಆಯ್ಕೆ ಮಾಡಿ, ನನ್ನ ನೆಟ್ ಬ್ಯಾಂಕಿಂಗ್ ಪುಟಕ್ಕೆ ಹಾರಿತು, ಮತ್ತೆ ಲಾಗಿನ್,ಪಾಸ್ ವರ್ಡ್ ,ಮೊತ್ತ , ಇತ್ಯಾದಿ ಪರೀಕ್ಶಿಸಿ ದುಡ್ಡು ಸಂದಾಯ ಮಾಡುವ ಆದೇಶ ನೀಡಿಯಾಯಿತು. ಕೆಲವೇ ಸೆಕೆಂಡುಗಳಲ್ಲಿ ಶಿವಮೊಗ್ಗದ ನನ್ನ ಬ್ಯಾಂಕಿನಲ್ಲಿ ಮಲಗಿದ್ದ ಹಣ ಮುಂಬಾಯಿ ಬಿ ಎಸ್ ಎನ್ ಎಲ್ ಕಛೇರಿಯ ಮೂಲಕ ನನ್ನ ಅಕೌಂಟ್ಗೆ ಪಾವತಿ ಯಾಗಿ ನನಗೆ ರಷೀದಿ ಕಂಪ್ಯೂಟರ ತೆರೆಯ ಮೇಲೆ ಹಾಜರ್! ಪ್ರಿಂಟ್ ತೆಗೆದು ,ಅಲ್ಲಿಂದ ಎಲ್ ಐ ಸಿ ಯ ಪುಟಕ್ಕೆ ಹಾರಿದೆ, ಮತ್ತೆ ಅದೇ ಪುನರಾವರ್ತನೆ - ಕೆಲವೇ ನಿಮಿಷ ದಲ್ಲಿ ಇನ್ಸೂರೆನ್ಸ್ ಪ್ರೀಮಿಯಂ ಸಂದಾಯ! ರಸೀದಿ ಪ್ರಿಂಟ್ ಆಗುವುದರೊಳಗೆ ನನ್ನ ಮೋಬೈಲ್ ಗೆ ಎರಡು ಸಂದೇಶ! ನಿಮ್ಮ ಪ್ರೀಮಿಯಂ ಸಂದಾಯವಾಗಿದೆ ಧನ್ಯವಾದಗಳು ಎಂದು ಎಲ್ ಐ ಸಿ ಯಿಂದ ಮತ್ತು ನಿಮ್ಮ ಅಕೌಂಟ್ ನಿಂದ ದುಡ್ಡು ಡೆಬಿಟ್ ಆಗಿದೆ ಎಂದು ಬ್ಯಾಂಕಿನವರು ಎಸ್ ಎಮ್ ಎಸ್! ಮುಂದೆ ಹಾಗೆ ತೆರಿಗೆ ಇಲಾಖೆಯ ಪುಟಕ್ಕೆ! ಇನ್ನ್ಂದೆರಡು ನಿಮಿಷದಲ್ಲಿ ಮುಂಗಡ ತೆರಿಗೆ ಪಾವತಿ! ಮತ್ತೆ ಬ್ಯಾಂಕಿನಿಂದ ಎಸ್ ಎಮ್ ಎಸ್- ನಿಮ್ಮ ಇಷ್ಟು ಹಣ ಕರಗಿದೆ ಎಂದು. ಸರಿಯಾಗಿ ೧೦-೧೫ ನಿಮಿಷಗಳಲ್ಲಿ ಶಿವಮೊಗ್ಗದ ಮೂರು ಬೇರೆ ಬೇರೆ ದಿಕ್ಕಿನಲ್ಲಿ ಇರುವ ಕಛೇರಿಗಳಲ್ಲಿ ಇಡೀ ಕಛೇರಿ ನಿದ್ರೆಯಲ್ಲಿದ್ದಾಗ ( ಬಹುಷಃ ರಾತ್ರಿ ಕಾವಲುಗಾರನೂ ಸೇರಿ) ನನ್ನ ಕೆಲಸ ಮುಗಿಸಿದ್ದೆ! ಹಣ ಪಾವತಿ ಯಾಗಿ ಅಲ್ಲಿಂದ ರಷೀದಿ ಸಿಕ್ಕಿತ್ತು! ಎಲ್ಲಾ ರಷೀದಿಗಳನ್ನೂ ಸರಿಯಾಗಿ ಸೇರಿಸಿ ಕುಳಿತ ಮೇಲೆ ಮಲಗುವ ಮುನ್ನ ಮನಸ್ಸು ಯೋಚಿಸಿತು - ಏನು ತಂತ್ರಜ್ನಾನ ,ನಮ್ಮೂರಿನಲ್ಲಿ ನಾನು ಮುಂದೊಂದು ದಿನ ಹೀಗೆ ಬ್ಯಾಂಕಿಂಗ್ ವ್ಯವಸ್ಠೆಯನ್ನು ನೋಡುತ್ತೇನೆ ಎಂದು ೪-೫ ವರ್‍ಷದ ಹಿಂದೆ ನಾನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ!
ಸುಮಾರು ೨೫ ವರ್‍ಷದ ಹಿಂದಿನ ಮಾತು- ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಊರಿನಿಂದ ನನ್ನ ತಂದೆ ದುಡ್ಡು ಬ್ಯಾಂಕಿನಿಂದ ಎಮ್ ಟಿ ಮಾಡಿದರೆ ಅದು ಹುಬ್ಬಳ್ಳಿಯ ನನ್ನ ಖಾತೆ ಸೇರುವುದು ೩-೪ ದಿನದ ನಂತರ. ಒಂದು ಡೆಬಿಟ್ ಕಾರ್ಡಿನ ಗಾತ್ರದ ಪಾಸ್ ಬುಕ್ ನಮಗೆ ಕೊಟ್ಟಿದ್ದರೆ ಬ್ಯಾಂಕಿನ ಲೆಡ್ಜರ್ ನ ಗಾತ್ರ ೨*೨ ಅಡಿ, ಪೂರ್ತಿ ಕೈ ಬರಹದ ದಾಖಲೆಗಳು,ಅದೆಷ್ಟು ವರ್‍ಷ ನಮ್ಮ ಬ್ಯಾಂಕುಗಳು ಹಾಗಿದ್ದವೋ ಕಳೆದ ೬-೮ ವರ್ಷದಿಂದೀಚೆಗೆ ಆದ ಬದಲಾವಣೆ ನಿಜಕ್ಕೂ ಅಶ್ಚರ್ಯ ಕರವಾದುದು! ನಾನು ಮೊದಲ ಬಾರಿಗೆ ವಿದೇಶಕ್ಕೆ ಹೋದಾಗ ಅಲ್ಲಿ ಎ ಟಿ ಎಮ್ ನೋಡಿ ದಂಗಾಗಿದ್ದೆ , ಎ ಬಿ ಎನ್ ಆಮ್ರೋ ಬ್ಯಾಂಕೊಂದರ ಎ ಟಿ ಎಮ್ ಹಾಲೆಂಡ್ ನಲ್ಲಿ ತೆಗೆದ ಫೊಟೊ ಇನ್ನೂ ನನ್ನ ಸಂಗ್ರಹದಲ್ಲಿದೆ.ಆದರೆ ನನಗೆ ಈಗ ಅಶ್ಚರ್ಯವಾಗುವುದು ನಮ್ಮ ಊರಿನ ಸಿಂಡಿಕೇಟ್, ಕೆನರಾ ,ಕಾರ್ಪೋರೆಷನ್ , ಎಸ್ ಬಿ ಐ ಇತ್ಯಾದಿ ಬ್ಯಾಂಕುಗಳು, ಎಲ್ ಐ ಸಿ , ಬಿ ಎಸ್ ಎನ್ ಎಲ್ ಇತ್ಯಾದಿ ಸರ್ಕಾರಿ ಸಂಸ್ಥೆಗಳು ತಂತ್ರಜ್ನಾನ ವನ್ನು ಬಳಸಿ ಕೊಡುತ್ತಿರುವ ಸೇವೆಗಳ ಬಗ್ಗೆ!
ದೊಡ್ಡ ನಗರಗಳಲ್ಲಿ ಹೇಗೋ ಗೊತ್ತಿಲ್ಲ ,ನಮ್ಮ ಶಿವಮೊಗ್ಗ ದಂತಹ ಪಟ್ಟಣಗಳಲ್ಲಿ ಯಾವುದಾದರೂ ಸರ್ಕಾರಿ ಬ್ಯಾಂಕುಗಳಿಗೆ ಹೋದರೆ ನೆಟ್ ಬ್ಯಾಂಕಿಂಗ್ ಬಗ್ಗೆ ಮಾಹಿತಿ ಕೊಡುವವರು ಬೆರಳೆಣಿಕೆಯಷ್ಟಿರಬಹುದು ,ಆದರೂ ಅಲ್ಲಿ ಈ ರೀತಿಯ ಸೇವೆಗಳು ಸಿಗುವುದು ಸಂತೋಷದ ವಿಷಯ! ಈ ವಿಷಯದಲ್ಲಿ ಅನೇಕ ಖಾಸಗಿ ಬ್ಯಾಂಕುಗಳು ಬಹಳ ಮುಂದಿವೆ ( ಆದರೆ ಬ್ರಾಂಚುಗಳಿಗೆ ಹೋದರೆ ಸಿಗುವ ಮಾಹಿತಿ ತೀರಾ ಸಾಮನ್ಯ).ಅಂತರ್ಜಾಲ ದ ಬಳಕೆ ಬ್ಯಾಂಕಿಂಗ್ ನಲ್ಲಿ ಆಗಿರುವುದು ಅನೇಕ ಸಾಧ್ಯತೆಗಳನ್ನು ತೆರೆದಿವೆ . ೧೯೯೮ ರಲ್ಲಿ ಇಂಟರ್ನೆಟ್ ಸಂಪರ್ಕ ( ಡಯಲ್ ಅಪ್) ಪಡೆಯಲು ಬೆಂಗಳೂರಿಗೆ ಸಂಪರ್ಕಿಸಬೇಕಿತ್ತು ( STD ಬಳಸಿ ) ೩ ನಿಮಿಷ ಇಂಟರ್ನೆಟ್ ಬಳಸಿದರೆ ಫೊನ್ ಬಿಲ್ಲ್ ೧೮ ರೂ.!!ಮುಂದಿನ ವರ್‍ಷ ದಿಂದ ಪರಿಸ್ಥಿಥಿ ಉತ್ತಮವಾಯಿತು ಬಿಡಿ,ಹಾಗಾಗಿ ನಮಗೆ ಈಗ ಇರುವ ಸೌಲಭ್ಯ ನೋಡಿದರೆ ಆಶ್ಚರ್ಯ ವಾಗುವುದು ಸಹಜ.
ಮೊದ ಮೊದಲು ನೆಟ್ ನಲ್ಲಿ ಬ್ಯಾಂಕಿಂಗ್ ಸೌಲಭ್ಯ ಬಳಸಲು ನನಗೆ ಭಯ ವಾಗುತ್ತಿತ್ತು! ಅದು ಹ್ಯಾಕರ್ ಗಳು ಅಥವಾ ಸ್ಪೈ ವೇರ್ ಗಳದ್ದಲ್ಲ , ದುಡ್ಡು ಸರಿಯಾಗಿ ಸಂದಾಯವಾಗದಿದ್ದರೆ ಯಾರನ್ನು ಕೇಳುವುದು? !ನಾನು ಬಿಲ್ ಕಟ್ಟಿದ್ದೇನೆ ಅಥವಾ ಸಂದಾಯವಾಗಿದೆ ಎನ್ನುವುದನ್ನು ಆ ಕಚೇರಿಯವರು ನಿರಾಕರಿಸಿದರೆ? ಅವರಿಗೆ ಹೇಗೆ ವಿವರಿಸಲಿ? ಈ ಅನುಮಾನಗಳೇ ಭಯ ಬೀಳಿಸುತ್ತಿತ್ತು! ಒಮ್ಮೆ ರೈಲ್ವೆ ಟಿಕೆಟ್ ಬುಕ್ ಮಾಡುವಾಗ ನೆಟ್ ಸಂಪರ್ಕ ಕಡಿದು ಹೋಗಿ ನನ್ನ ಅಕೌಂಟ್ನಿಂದ ಹಣ ಹೋಗಿದ್ದರೂ ಟಿಕೆಟ್ ಬುಕ್ ಆಗಿರಲೇ ಇಲ್ಲ.ಗಾಭರಿಯಾಗಿ ವಿಚಾರಿಸಿದರೆ ಬ್ಯಾಂಕ್ ನಲ್ಲಿ ಯಾರಿಗೂ ಸರಿಯಾಗಿ ಗೊತ್ತಿಲ್ಲ. ಕೊನೆಗೆ irctc ಯವರಿಂದ ಸರಿಯಾದ ಮಾಹಿತಿ ಸಿಕ್ಕಿತು, ಮರುದಿನವೇ ಹಣ ಮರಳಿ ನನ್ನ ಖಾತೆಗೆ ಜಮಾ ಆಗಿತ್ತು.ನಂತರವೇ ನನಗೆ ನೆಟ್ ಬ್ಯಾಂಕಿಂಗ್ ಬಗ್ಗೆ ಧೈರ್ಯ ಬಂದಿದ್ದು!
ಈಗ ನನ್ನ ತೆರಿಗೆ, ಟಿಕೆಟಿಂಗ್, ಇನ್ಸೂರೆನ್ಸ್, ಮೊಬೈಲ್ ಬಿಲ್ಲ್ ,ನಾನು ಪಾಲುದಾರನಾದ ಕಂಪನಿಯೊಂದರ ಕಾರ್ಪೊರೇಟ್ ತೆರಿಗೆ ಇತ್ಯಾದಿ ಎಲ್ಲಾ ನೆಟ್ ಬ್ಯಾಂಕ್ ನಲ್ಲೇ ಆಗುತ್ತದೆ. ಅದರೆ ಬ್ರಾಡ್ ಬ್ಯಾಂಡ್ ಬಂದ ಮೇಲೆ ಇವೆಲ್ಲಾ ಹೆಚ್ಚೆ ಸುಲಭ ವಾಗಿದೆ, ಇಂಟರ್ನೆಟ್ ನಿಧಾನವಾದ ಸಂಪರ್ಕವಾದಾಗ ಈ ಸೇವೆಗಳನ್ನು ಬಳಸುವುದು ಕಷ್ಟ.ಇನ್ನು ,ಸುರಕ್ಷತೆಯ ಬಗ್ಗೆ ನಮ್ಮ ಜಾಗರೂಕತೆ ಅವಶ್ಯ. ಇಲ್ಲದಿದ್ದರೆ ಈ ಬ್ಯಾಂಕಿಂಗ್ನಲ್ಲಿ ಸ್ವಲ್ಪ ರಿಸ್ಕ್ ಸಹ ಇದೆ.
ಟೆಕ್ಕಿಗಳಿಗೆ, ನಗರವಾಸಿಗಳಿಗೆ ಇದು ತೀರಾ ಸಣ್ಣ ವಿಷಯ ವೆನಿಸಬಹುದು,ಆದರೆ ಒಂದು ತಲೆಮಾರಿನ ಬ್ಯಾಂಕಿಂಗ್ ವ್ಯವಸ್ಠೆಯನ್ನು ನೋಡಿದ ನನ್ನಂತವರಿಗೆ ಈಗಿನ ತಂತ್ರಜ್ನಾನದಿಂದಾಗಿರುವ ಬದಲಾವಣೆಗಳು ,ಆಶ್ಚರ್ಯವನ್ನು ಮೂಡಿಸಿದರೆ ಅತಿಶಯವೆನಿಸದು.ಸರದಿಯಲ್ಲಿ ನಿಲ್ಲದೇ, ನಗದು ಇಲ್ಲವೇ ಚೆಕ್ ಕೊಡದೆ, ಚಿಲ್ಲರೆ ಎಣಿಸದೇ , ಮಿಂಚಿನವೇಗದಲ್ಲಿ ಖಾತೆಯಿಂದ ಖಾತೆಗೆ ಹಾರಿ , ಕ್ಷಣದಲ್ಲಿ ರಷೀದಿ ಬರುವ ಈ ನೆಟ್ ಬ್ಯಾಂಕಿಂಗ್ ನಿಜಕ್ಕೂ ಅಚ್ಚರಿಯೆನಿಸದೇ? ನೀವೇನಂತೀರೀ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸರ್‍..
ತಮ್ಮನ್ನ ಇಲ್ಲಿ ನೋಡಿ ಬಹಳ ಸಂತೋಷ ಆಯ್ತು..
ನಾನು ಶಿವಮೊಗ್ಗದವ.. ಅಲ್ಲಿ "ಮೆಡಿಕಲ್ ರೆಪ್ರೆಸೆಂಟೆಟಿವ್" ಆಗಿ ಒಂದು ಕಾಲದಲ್ಲಿ ಕೆಲಸ ಮಾಸುತ್ತಿದ್ದಾಗ ನಿಮ್ಮನ್ನ ಭೇಟಿ ಮಾಡಿದ್ದೆ ಕೂಡ..
ಇಲ್ಲಿ ಎರಡು ವರ್ಷ, ಒಂದು ತಿಂಗಳಿಂದ ಸದಸ್ಯರಾಗಿರೋದು, ನಿಮ್ಮ ಮೊದಲ ಲೇಖನ ಇಂದು ಹಾಕಿದ್ದು, ಇದೆಲ್ಲಾ ತಿಳಿದು ಅದೇನೋ ಒಂತರ ಸಂತೋಷ ತಂತು..

ನಿಮ್ಮ ಮಾತು ನಿಜ.
ನಿಮ್ಮ ಲೇಖನ ಓದುವಾಗ, ನನಗೆ ನೆನಪಿಗೆ ಬಂದ ಒಂದು ಮಾತನ್ನ ಹೇಳೋಣ ಅನ್ನಿಸುತ್ತಾ ಇದೆ..
ನಾನು ಅದೇ ಶಿವಮೊಗ್ಗದಲ್ಲಿ ಕೆಲಸ ಮಾಡುತ್ತಿದ್ದವನು, ಇವತ್ತು, ಈಗಿನ ಕೆಲಸದ ದೆಸೆಯಿಂದ ಅರ್ಧ ಭಾರತ ಸುತ್ತುವಂತಾಗಿ, ಈಗ ಪೂನಾದಲ್ಲಿದ್ದುಕೊಂಡು, ನನ್ನ ಶಿವಮೊಗ್ಗದ ಹಳೇ ಗಿರಾಕಿಗಳಲ್ಲಿ ನಾ ಹಾಕಿದ ಸಾಫ್ಟ್ ವೇರ್‍ ಎನಾದ್ರೂ ತೊಂದರೆ ಬಂದರೆ, ಇಲ್ಲೇ ಪೂನಾದಲ್ಲೇ ಕುಳಿತು, ಅವರ "ಕಂಪ್ಯೂಟರ್‍"ನ "ರಿಮೋಟ್ ಆಕ್ಸೆಸಿಂಗ್" ಮೂಲಕ, ಸರಿಮಾಡುವ ಮಟ್ಟಕ್ಕೆ ಬಂದಿರೋದನ್ನ ನೋಡಿ, ನನ್ನ ಸ್ನೇಹಿತನ ಅಮ್ಮ ಹೇಳೋ ಮಾತು ಹೀಗಿತ್ತು.."ಲೇ ಸತ್ಯ, ನೀನು ಈ ಹೊಳೆ ಸೇತುವೆ ದಾಟ್ತಿಯೋ ಇಲ್ವೋ ಅನ್ಕೊಂದಿದ್ವಿ.. ಈಗ, ಅರ್ಧ ಭಾರತ ಸುತ್ತಿದಲ್ಯೋ".
ನಿಜ ಸರ್‍.. ನಿಮ್ಮ ಮಾತು.. ಹೀಗೆಲ್ಲಾ ನನ್ನ ಜೀವನದಲ್ಲಿ ಆಗುತ್ತೆ ಅಂತ ನಾನು ಊಹಿಸೋದಕ್ಕೂ ಸಾಧ್ಯ ಇರಲಿಲ್ಲ.. :)

ನಿಮ್ಮೊಲವಿನ,
ಸತ್ಯ..

ಸತ್ಯ ಅವರೇ,ಧನ್ಯವಾದಗಳು,ನಿಮ್ಮನ್ನು ನೋಡಿ ಎಷ್ಟು ದಿನವಾಗಿತ್ತು,ಆದರೂ ನೆನಪಿಟ್ಟೂ ಗುರುತು ಹಿಡಿದರಲ್ಲ! ,ಇದೇ ಅಲ್ಲವೇ ಈ ಬ್ಲಾಗಿಂಗ್ ಗಳ ವೈಶಿಷ್ಟ್ಯ? ನನ್ನ ಎಷ್ಟೋ ಹಿಂದಿನ ಗೆಳೆಯರು, ಸಹಪಾಟಿಗಳನ್ನು ಈ ರೀತಿಯ ಬ್ಲಾಗ್ ,ಸಾಮಾಜಿಕ ಜಾಲಗಳಲ್ಲಿ ಭೇಟಿಯಾಗಿದ್ದೇನೆ. ಸಂಪದ ದ ಆರೋಗ್ಯ ಸಂಪದದಲ್ಲಿ ಹಿಂದೆ ಬರೆದಿದ್ದಿದೆ.
ವಿಶ್ವಾಸದೋಂದಿಗೆ,
ಶ್ರೀಕಾಂತ ಹೆಗಡೆ

ಪ್ರಿಯ ಡಾಕ್ಟರ್,
ನಿಮ್ಮ ಲೇಖನ ಸಂಪದದಲ್ಲಿ ನೋಡಿ ಖುಶಿಯಾಯಿತು. ನನಗೆ ನಿಮ್ಮ ಪರಿಚಯ ಚೆನ್ನಾಗಿ ಇದೆಯಾದರೂ ತಮಗೆ ನನ್ನ ಪರಿಚಯ ಇಲ್ಲದಿರಬಹುದು. ನನ್ನ ಪರಿಚಯ ಮಾಡಿಸಿಕೊಳ್ಳುವ ಸಲುವಾಗಿಯೂ ಸಹಾ ಈ ಪ್ರತಿಕ್ರಿಯೆ ಹಾಕುತ್ತಿದ್ದೇನೆ. ಬಹುಷಹ ನಾನು ಪ್ರೊ. ಬಿ. ಎಂ. ಕುಮಾರಸ್ವಾಮಿ (ಅವರ ಪರಿಚಯ ನಿಮಗೆ ಇರುವುದರಿಂದ)ಯವರ ಹೆಂಡತಿ ಎಂದರೆ ತಿಳಿಯಬಹುದೇನೋ. ನನಗಂತೂ ನಿಮ್ಮ ಲೇಖನ ಓದಿ ಸಂತೋಷವಾಯಿತು. ಬ್ಯಾಂಕಿಂಗ್‍ನಲ್ಲಿ ಅಂತರ್‍ಜಾಲದ ಬಳಕೆಯ ಬಗ್ಗೆ ಉತ್ತಮ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು.
ಶೈಲಾಸ್ವಾಮಿ

ಶ್ರೀಮತಿ ಶೈಲಾ ಕುಮಾರಸ್ವಮಿ ಯವರಿಗೆ ಧನ್ಯವಾದಗಳು. ನಿಮ್ಮನ್ನು ನೋಡಿದ್ದೆ, ಕಳೆದ ತಿಂಗಳು ಕಾಶಿ ಯವರ ಬೀಳ್ಕೊಡುಗೆ ಸಮಾರಂಭದಲ್ಲಿ ನೀವು ಸರ್ ಜೋತೆ ಬಂದಾಗ ಭೇಟಿ ಯಾಗಿದ್ದೆ. ಬ್ಲಾಗ್ ಲೇಖನ ಓದಿ ಪ್ರತಿಕ್ರಿಯಿಸಿದ್ದು ಸಂತೋಷ ವಾಯಿತು ,ಧನ್ಯವಾದ
ವಿಶ್ವಾಸಗಳೊಂದಿಗೆ
ಶ್ರೀಕಾಂತ ಹೆಗಡೆ

ಶ್ರೀಮತಿ ಶೈಲಾ ಕುಮಾರಸ್ವಮಿ ಯವರಿಗೆ ಧನ್ಯವಾದಗಳು. ನಿಮ್ಮನ್ನು ನೋಡಿದ್ದೆ, ಕಳೆದ ತಿಂಗಳು ಕಾಶಿ ಯವರ ಬೀಳ್ಕೊಡುಗೆ ಸಮಾರಂಭದಲ್ಲಿ ನೀವು ಸರ್ ಜೋತೆ ಬಂದಾಗ ಭೇಟಿ ಯಾಗಿದ್ದೆ. ಬ್ಲಾಗ್ ಲೇಖನ ಓದಿ ಪ್ರತಿಕ್ರಿಯಿಸಿದ್ದು ಸಂತೋಷ ವಾಯಿತು ,ಧನ್ಯವಾದ
ವಿಶ್ವಾಸಗಳೊಂದಿಗೆ
ಶ್ರೀಕಾಂತ ಹೆಗಡೆ