ಆಸ್ತಿಕರು ‍ಯಾಕೆ ಹಿಂಗಾಡ್ತಾರೊ ?

To prevent automated spam submissions leave this field empty.

ನಾನು ಆಸ್ತಿಕ. ಆದರೆ ದೇವರು ಇದ್ದಾನೆ ಎಂದು ಸಾಧಿಸುವ ಅವಶ್ಯಕತೆಯಾಗಲೀ, ಬುದ್ಧಿಯಾಗಲೀ, ಆಳವಾದ ಜ್ಞಾನವಾಗಲೀ ನನಗಿಲ್ಲ. ಆಸ್ತಿಕರೆಲ್ಲಾ ಯಾಕೆ ನಾಸ್ತಿಕರ ಹಿಂದೆ ಬಿದ್ದು ದೇವರಿದ್ದಾನೆ ಎಂದು ನಿರೂಪಿಸಲು ಹೊರಡುತ್ತಾರೊ ತಿಳಿಯದು. ಏನೇನೊ ತರ್ಕಗಳನ್ನು ಹುಡುಕುತ್ತಾರೆ. ಧರ್ಮಗ್ರಂಥಗಳಲ್ಲಿ ವಿಜ್ಞಾನವನ್ನು ಹುಡುಕುತ್ತಾರೆ! ಅದಕ್ಕೆ ನಾಸ್ತಿಕರ ಟೀಕೆಗಳು, ವ್ಯಂಗ್ಯಗಳಿಗೆ ಬಲಿಯಾಗಿ ನರಳುತ್ತಾರೆ! ವಾದ ಮಾಡುತ್ತ ಕೂರಲು ಆಳವಾದ ಜ್ಞಾನ ಅಥವಾ ತರ್ಕಶಕ್ತಿ ಬೇಕು. ಒನ್ಸ್ ಅಗೇನ್ ತರ್ಕದಿಂದ ನಾವು ಎಷ್ಟು ಬುದ್ಧಿವಂತರು ಎಂದು ತಿಳಿಯುತ್ತದೋ ಹೊರತು ಸತ್ಯವನ್ನು ನಿರೂಪಿಸಲು ಸಾಧ್ಯವಾಗುವುದಿಲ್ಲ.

ಸಂಪ್ರದಾಯಗಳು, ನಂಬಿಕೆಗಳು ಒಂದು ಸಮಾಜವನ್ನು ಸಂಸ್ಕೃತಿಯನ್ನು ರೂಪಿಸುತ್ತವೆ. ಪ್ರತಿಯೊಂದು ಸಂಪ್ರದಾಯಕ್ಕೂ ವೈಜ್ಞಾನಿಕ ಕಾರಣಗಳಿಲ್ಲದಿದ್ದರೂ ಕೆಲವು ಆಚರಣೆಗಳು ಕೆಲ ನಂಬಿಕೆಗಳನ್ನು ಪ್ರತಿನಿಧಿಸುತ್ತವೆ. ಈ ನಂಬಿಕೆ ಆಚರಣೆಗಳಿಗೆ ಗೌರವ ಸಲ್ಲಲೇಬೇಕು. ನಮಗೆ ನಂಬಿಕೆ ಇಲ್ಲದಿದ್ದರೆ ನಂಬಿದವರು ಆಚರಿಸಿಕೊಳ್ಳಲಿ. ಅದಕ್ಕೆ ವಿರೋಧದ ಅಗತ್ಯವಿಲ್ಲ. ಜನರ ಭಾವನೆಗಳನ್ನು ಆದರಿಸಬೇಕು. ಅದರೆ ಆಚರಣೆಯೊಂದು ಸಾಮಾಜಿಕ ದೋಷವಾಗಿದ್ದರೆ ಅದನ್ನು ವಿರೋಧಿಸಲೇಬೇಕು (ಉದಾ: ಅಸ್ಪೃಷ್ಯತೆ ಇತ್ಯಾದಿ). ಆಚರಣೆ, ನಂಬಿಕೆ, ಸಂಪ್ರದಾಯಗಳಿಲ್ಲದ ಸಮಾಜ ಮಹಾಬೋರಿಂಗ್ ಆಗಿಬಿಡುತ್ತದೆ. ಕಮ್ಯುನಿಸ್ಟ್ ಆಳ್ವಿಕೆಯ ಥರ!

ಆಸ್ತಿಕರು, ಸನಾತನಿಗಳು ತಪ್ಪು ಮಾಡುತ್ತಾರೆ. ಸುಮ್ಮನೆ ತಮ್ಮ ಪಾಡಿಗೆ ದೇವರ ಜೊತೆ ಇರುವುದು ಬಿಟ್ಟು ಧರ್ಮಗ್ರಂಥಗಳಲ್ಲಿ ವೈಜ್ಞಾನಿಕತೆಯನ್ನು ಹುಡುಕಲು ಹೊರಡುತ್ತಾರೆ. ನಾಸ್ತಿಕರಿಗೆ ದೇವರ ಬಗ್ಗೆ ನಂಬಿಕೆ ಹುಟ್ಟಿಸಲು ಹೊರಡುತ್ತಾರೆ. ಎಲ್ಲೆಲ್ಲಿನದೋ ಹುಡುಕಿ ಈಗಿನ ಯಾವುದ್ಯಾವುದೊ ಸಂಶೊಧನೆಗೆ ಸಮೀಕರಿಸಿ ಹೆಮ್ಮೆ ಪಟ್ಟುಕೊಳ್ಳುತ್ತಾರೆ.

ಇಂತಹ ಕೆಲವು ಸರ್ಕಸ್‍ಗಳು ನಗೆ ತರಿಸುತ್ತವೆ.

೧. ದೇವಸ್ಥಾನದಲ್ಲಿ ತೀರ್ಥ ಕೊಡುವುದು ವಾಟರ್ ಥೆರಪಿ. ಜರ್ಮನಿಲೆಲ್ಲ ಐನೂರು ರೂಪಾಯಿಗೆ ಒಂದು ಚಮಚ ತೀರ್ಥ ಸಿಗುತ್ತದೆ. ಜನ ಕ್ಯೂ ನಿಂತು ತೆಗೆದುಕೊಳ್ಳುತ್ತಾರೆ.-- ಮನೆಲಿ ನೀರಿರಲ್ವೆನೊ. ಅದನ್ನು ಕೊಡಿದರೆ ವಾಟರ್ ಥೆರಪಿ ಆಗಲ್ವೆನೊ?

೨. ಸೂರ್ಯನಿಗೆ ಅರ್ಘ್ಯ ಕೊಡುವಾಗ ನೀರ ಹನಿಗಳ ಮೂಲಕ ಕಿರಣಗಳು ವಿಭಜನೆಯಾಗಿ ಮೈಮೇಲೆ ಆ ಕಿರಣದ ಬಣ್ಣಗಳು ಬಿದ್ದು ಕಲರ್ ಥೆರಪಿ ಆಗುತ್ತದೆ!-- ಕಲ್ಪನೆ ಅದ್ಭುತವಾಗಿದೆ!

೩. ಎಡಗಡೆಯಿಂದ ಎದ್ದರೆ ಹೃದಯದ ಮೇಲೆ ಭಾರ ಬೀಳುತ್ತದೆ.-- ಹೃದಯ ಎದೆಯ ಮಧ್ಯಭಾಗದಲ್ಲಿರುತ್ತದೆ. ಎಡಕ್ಕೆ ವಾಲಿಕೊಂಡಿರುತ್ತದೆ ಅಷ್ಟೆ. ಯಾವ ಕಡೆಯಿಂದ ಎದ್ದರೂ ಸಮಾನವದ ಭಾರ ಹೃದಯದ ಮೇಲೆ ಬೀಳುತ್ತದೆ. ಇದು ನಿಜವೇ ಆಗಿದ್ದಲ್ಲಿ ರಾತ್ರಿ ನಾವು ಎಡಕ್ಕೆ ಹೊರಳಿ ಮಲಗಲೇಬಾರದು.

೪. ಭಗವದ್ಗೀತೆಯಲ್ಲಿ ಡಾರ್ಕ್ ಮ್ಯಾಟರ್ ಬಗ್ಗೆ ಹೇಳಿದೆ-- ಥತ್!

೫. ಬಂಗಾರದ ಬಳೆ ಉಂಗುರ ಹಾಕುವುದರಿಂದ ಕೀಲು ನೋವು ಬರುವುದಿಲ್ಲ.-- ಅದಕ್ಕೇ ಬಂಗಾರದ ರೇಟು ಜಾಸ್ತಿಯಾಗಿರುವುದು ಅನ್ಸುತ್ತೆ!

೬ ಸ್ವಾಮಿ ವಿವೇಕಾನಂದರ ಸಾವಿನ ಬಗ್ಗೆ ಅತ್ಯಂತ ಹಾಸ್ಯಾಸ್ಪದ ವಿವರಣೆಗಳಿವೆ. ಅವರು ವೀರ್ಯವನ್ನು ನಿಗ್ರಹಿಸಿ ಆ ಶಕ್ತಿಯನ್ನು ತಾಳಲಾಗದೇ ದೇಹ ತ್ರಾಣ ಕಳೆದುಕೊಂಡಿತಂತೆ, ಧ್ಯಾನ ಮಾಡುವಾಗ ಅವರ ಭ್ರೂಮಧ್ಯದಿಂದ ಚಲಿಸುತ್ತಿದ್ದ ಶಕ್ತಿ ಓಘವನ್ನು ತಾಳಲಾಗದೇ ಭ್ರೂಮಧ್ಯ ಒಡೆದು ಹೋಗಿ ಸಾವು ಸಂಭವಿಸಿತಂತೆ; ಆದ್ದರಿಂದಲೇ ಅವರು ಮರಣಿಸಿದಾಗ ಭ್ರೂಮಧ್ಯದಿಂದ ರಕ್ತ ಹರಿಯುತ್ತಿತ್ತಂತೆ! ವಿವೇಕಾನಂದರು ಗಂಟಲ ಕ್ಯಾನ್ಸರ್ ನಿಂದ ತೀರಿಹೋದರು ಎಂಬುದು ನನಗೆ ಗೊತ್ತಿರುವ ಮಾಹಿತಿ. ಅವರಿಗೆ ಸಿಗರೇಟು ಸೇದುವ ಅಭ್ಯಾಸ ಇತ್ತೆಂದೂ ಕೇಳಿದ್ದೇನೆ.

೭. ಶಿವನ ಮೂರನೆ ಕಣ್ಣಿಂದ ಬಂದ ಬೆಂಕಿ ಮನ್ಮಥನನ್ನು ಸುಟ್ಟು ಹಾಕಿತು. ಇದು ಇಂದಿನ ಲೇಸರ್ ಗೆ ಸಮ. ಹಾಗಾಗಿ ಲೇಸರ್ ಬಗ್ಗೆ ನಮ್ಮ ಹಿರಿಯರಿಗೆ ಗೊತ್ತಿತ್ತು. -- ಕಲ್ಪನೆ ಇತ್ತು ಎನ್ನಬಹುದೇ ಹೊರತು ಗೊತ್ತಿತ್ತು ಎನ್ನಲಾಗುವುದಿಲ್ಲ.ಪುಷ್ಪಕ ವಿಮಾನವೂ ಇದೇ ವಿಭಾಗಕ್ಕೆ ಸೇರುತ್ತದೆ.

೮ ಅರ್ಜುನನ ಸರ್ಪಾಸ್ತ್ರ(ಇನ್ಯಾವುದೊ ಅಸ್ತ್ರ ಅಂತ ಇಟುಕೊಳ್ಳಿ) ಜಗತ್ತನ್ನೆ ನಾಶ ಮಾಡುವಂತಿತ್ತು. ಇದು ಹೈಡ್ರೋಜನ್ ಬಾಂಬ್!-- ಕಲ್ಪನೆ ಚೆನ್ನಾಗಿದೆ ಅಷ್ಟೇ.

ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ. ವಸ್ತ್ರದ್ ರವರು "ಜಗದ ಚೇಷ್ಟೆಗಳಿಗೆಲ್ಲಾ ರವಿ ಬೀಜ" ಎಂಬ ಅಕ್ಕನ ವಚನಕ್ಕೆ "Sun is source of energy on the Earth" ಎಂದು ವಿವರಣೆ ಕೊಟಿದ್ದರು. ಬೆಳಕು ಹರಿದ ಮೇಲೆಯೇ ಎಲ್ಲಾ ಕೆಲಸಗಳು ಶುರು ಆಗುತ್ತವೆ ಎಂಬುದು ಇದರ ನೇರ ವಿವರಣೆ.
ತಾಳಿ ಕಟ್ಟಲು ಯಾವ ವೈಜ್ಞಾನಿಕ ವಿವರಣೆ ಇದೆಯೋ ನನಗೆ ಗೊತ್ತಿಲ್ಲ. ತಾಳಿ ಕಟ್ಟಿಕೊಳ್ಳಲೇಬೇಕು, ಕುಂಕುಮ ಹಚ್ಚಿಕೊಳ್ಳಲೇಬೇಕು ಎಂದು ಯಾವ ಶಾಸ್ತ್ರಗಳಲ್ಲೂ ಹೇಳಿಲ್ಲ. ಮದುವೆಗೆ ಮುಖ್ಯ ಅಂದರೆ ಪ್ರತಿಜ್ಞಾ ವಿಧಿ ಅಷ್ಟೇ!
ಮಹಿಳೆಯರೇ ಕೇಳಿ! ಇನ್ನು ಮುಂದೆ ಯಾರಾದರೂ ನಿಮಗೆ ಜೀವ ಬೆದರಿಕೆ ಹಾಕಿ ಮಂಗಳ ಸೂತ್ರ ಬಿಚ್ಚಿಕೊಡು ಎಂದು ಕೇಳಿದರೆ ಸುಮ್ಮನೆ ಕೊಟ್ಟು ಪ್ರಾಣ ಉಳಿಸಿಕೊಳ್ಳಿ. ತಾಳಿ ಬಿಚ್ಚಿದ ತಕ್ಷಣ ನಿಮ್ಮ ಗಂಡನೇನೂ ನೆಗೆದು ಬಿದ್ದು ಹೋಗುವುದಿಲ್ಲ. "ಪ್ರಾಣಾನ್ ರಕ್ಷೇತ್ ಭಾರ್ಯೈರಪಿ ಧನೈರಪಿ". ಇದು ಹೆಣ್ಣು ಮಕ್ಕಳಿಗೂ ಅನ್ವಯಿಸುತ್ತದೆ. ಸ್ವಯಂ ಪ್ರಾಣರಕ್ಷಣೆ ಪ್ರಕೃತಿ ನಿಯಮ!

ದೇವರು ಎಂಬುದು ಸಮುದ್ರದ ನೀರಿನಂತೆ. ನಮಗೆ ಎಲ್ಲವನ್ನೂ ತುಂಬಿಕೊಳ್ಳಲಾಗುವುದಿಲ್ಲ. ನಮ್ಮ ಬಳಿ ಎಷ್ಟು ದೊಡ್ಡ ತಂಬಿಗೆ ಅಥವಾ ಬಿಂದಿಗೆ ಇದೆಯೋ ಅಷ್ಟೇ ನಮಗೆ ಪ್ರಾಪ್ತಿ! ಸುಮ್ಮನೆ ದಿನಕೊಂದು ಬಾರಿ ದೇವರಿಗೆ ಕೈಮುಗಿದು ಮುಂದೆ ನಮ್ಮ ನಮ್ಮ ಕರ್ಮಗಳಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು. ದೇವರನ್ನು ನಂಬಿದರೆ ಒಳ್ಳೆಯದು (ನನ್ನ ಅಭಿಪ್ರಾಯ) ಏಕೆಂದರೆ ನಮ್ಮನ್ನು ಕಾಪಾಡುವವನೊಬ್ಬನಿದ್ದಾನೆ ಎಂಬ ನಂಬಿಕೆ ನಮ್ಮಲ್ಲಿ ಕೊನರಿಸುವ ಮನೋಸ್ಥೈರ್ಯ ನಮ್ಮಿಂದ ಉತ್ತಮ ಕೆಲಸಗಳನ್ನು ಮಾಡಿಸುತ್ತದೆ. ಹೋಮ ಪೂಜೆಗಳೆಲ್ಲ ಮನಕ್ಕೆ ಬಲ ಕೊಡುವ ಕಸರತ್ತುಗಳೇ! ಪೂಜೆ ನಡೆಸಿ ಒಳ್ಳೆಯದಾಗುತ್ತದೆ ಕೆಲಸವನ್ನು ಕೈಗೆತ್ತಿಕೊಳ್ಳಿ ಎಂದು ತಾವು ನಂಬಿರುವ ದೇವರ ಪರವಾಗಿ ಒಬ್ಬರು ಹೇಳಿದರೆ ಮನಸ್ಸಿಗೆ ಒಂದು ತಾಕತ್ತು ಬರುತ್ತದೆ. ಕಷ್ಟದ ಸಮಯದಲ್ಲಿ ನಮ್ಮ ಪರವಾಗಿ ಒಬ್ಬ ಪೂಜೆ ನೆರವೇರಿಸಿ ದೇವರ ಪರವಾಗಿ ನಮಗೆ ಆಶೀರ್ವಾದ ನೀಡಿದರೆ ಮನಸ್ಸಿಗೆ ಸಮಾಧಾನವಾಗುತ್ತದೆ.

ಆಸ್ತಿಕರೇ ಕೇಳಿ! ಪೂಜೆ ನಂಬಿಕೆಗಳಿಲ್ಲದೇ ಮನೋಸ್ಥೈರ್ಯವನ್ನು ನಾನು ಸಾಧಿಸಬಲ್ಲೆ ಎಂದು ಯಾರಾದರೂ ಹೇಳಿದರೆ ಸಾಧಿಸಲಿ ಬಿಡಿ! ಪ್ರಚಾರಕ್ಕಾಗಿ ಕೆಲವರು ಸಂಪ್ರದಾಯಗಳನ್ನು ಪ್ರಶ್ನಿಸಿದರೆ ಇನ್ನು ಕೆಲವರಿಗೆ ಆಸ್ತಿಕರನ್ನು ಗೋಳು ಹೊಯ್ದುಕೊಳ್ಳುವುದೇ ಖುಶಿ! ತಲೆ ಯಾಕೆ ಚಚ್ಚಿಕೊಳ್ತೀರಾ? ಸಲ್ಪ ನಗೋದು ಕಲೀರಿ. ನಿಮ್ಮನ್ನು ನೋಡಿ ನಾಸ್ತಿಕರು ನಗುತ್ತಾರೆ. ಅವರನ್ನು ನೋಡಿ ನೀವು ನಕ್ಕುಬಿಡಿ ಅಷ್ಟೆ. ಅವರು ಕೆಲವು ತರ್ಕಗಳನ್ನು ಹೇಳಿದಾಕ್ಷಣ ನಿಮ್ಮ ನಂಬಿಕೆ ಸುಳ್ಳಾಗಲೇಬೇಕು ಎಂದು ನಿಯಮವೇನೂ ಇಲ್ಲ. ಬನ್ನಂಜೆ ಗೋವಿಂದಾಚಾರ್ಯರಂತಹ ವಿದ್ವಾಂಸರು ನಾಸ್ತಿಕರ ಜೊತೆ ಚರ್ಚೆ ಮಾಡಿ ಮೇಲುಗೈ ಸಾಧಿಸಿದ್ದಾರೆ. ನಿಮ್ಮಲ್ಲೂ ಅಷ್ಟು ವಿದ್ವತ್ತು ಇದ್ದರೆ ಚರ್ಚಿಸಿ. ಇಲ್ಲವೆಂದರೆ ನನ್ನ ಹಾಗೆ ನಕ್ಕು ಸುಮ್ಮನಾಗಿಬಿಡಿ. ಬಿ.ಪಿ ಏರಿಸಿಕೊಳ್ಳುವುದು ಬೇಡ ಎಂದಷ್ಟೇ ನನ್ನ ಆಸ್ತಿಕ ಮಿತ್ರರ ಬಗ್ಗೆ ನನ್ನ ಕಳಕಳಿ! ಸಂಪ್ರದಾಯಗಳನ್ನು ಆಚರಿಸಿ; ಧರ್ಮಗ್ರಂಥ, ಧರ್ಮ, ದೇವರಲ್ಲಿ ಶ್ರದ್ಧೆ ಇಡಿ. ಆದರೆ ಅದರಲ್ಲಿ ವೈಜ್ಞಾನಿಕತೆ ಹುಡುಕುವುದು ....ಯಾಕೊ ಸರಿ ಅನ್ನಿಸ್ತಿಲ್ಲ!!!

ಯಾಕೆ ಅಂದರೆ ವಿಜ್ಞಾನ ಇತಿಹಾಸದಂತೆ ನಿಚ್ಚಳ ಸತ್ಯವಲ್ಲ. ನ್ಯೂಟನ್ ಹೇಳಿದ್ದನ್ನು ಐಗನ್ ಸುಳ್ಳು ಎಂದು ಸಾಧಿಸುತ್ತಾನೆ. ಜೆ.ಜೆ ಥಾಮ್ಸನ್ ಕಂಡುಹಿಡಿದಿದ್ದನ್ನು ಅವನ ಶಿಷ್ಯ ರುದರ್ಫ಼ೊರ್ಡ್ ಸುಳ್ಳು ಎನಿಸುತ್ತಾನೆ. ಇನ್ನೊಬ್ಬ ಬಂದು ಇದು ಸುಳ್ಳು ಎಂದು ಹೇಳುವವರೆಗೂ ಸಧ್ಯದ ಸಂಶೊಧನೆಯೆ ಸತ್ಯ ಎಂದು ನಂಬಲಾಗುತ್ತದೆ. ಸತ್ಯ ಕಾಲಕಾಲಕ್ಕೆ ಬದಲಾಗುವುದು ವಿಜ್ಞಾನದಲ್ಲಿ ಮಾತ್ರ! ರಷ್ಯನ್ ವಿಜ್ಞಾನಿಯೊಬ್ಬ ಯಾವುದೋ ನಕ್ಷತ್ರದ ಅಧ್ಯಯನ ಮಾಡಿ ಆ ನಕ್ಷತ್ರದಲ್ಲಿ ರಂಜಕ ಇದೆ ಎಂದು ಸಾಧಿಸಿದನಂತೆ. ಮೂವತ್ತು ವರ್ಷಗಳ ಕಾಲ ಇದೇ ಸತ್ಯ ಎಂದು ನಂಬಲಾಗಿತ್ತು. ಹೆಚ್ಚಿನ ಸಂಶೊಧನೆಗೆಂದು ವಿದ್ಯಾರ್ಥಿಯೊಬ್ಬ ಆ ನಕ್ಷತ್ರವನ್ನು ಆಯ್ದುಕೊಂಡಾಗ ಸ್ಪೆಕ್ಟ್ರಮ್ ನಲ್ಲಿ ರಂಜಕದ ಅಂಶಗಳೇ ಇಲ್ಲದ್ದು ಕಂಡು ಬಂತಂತೆ! ಏಕೆ ಹೀಗಾಯಿತು ಎಂದು ತನಿಖೆ ಮಾಡಿದಾಗ ಹವೆಯಲ್ಲಿದ್ದ ಸಿಗರೇಟಿನ ಹೊಗೆ ಹಿಂದಿನ ವಿಜ್ಞಾನಿಯ ಸ್ಪೆಕ್ಟ್ರಮ್ ನಲ್ಲಿ ರಂಜಕದ ಗೆರೆಗಳನ್ನು ಮೂಡಿಸಿತ್ತಂತೆ! ಇದು ಇವರೆಲ್ಲಾ ಹೇಳುವ ವಿಜ್ಞಾನದ ಖಚಿತತೆ!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಧನ್ಯವಾದಗಳು..
ಕೆಲವೊಮ್ಮೆ.. ಗೊತ್ತಿರೋ ವಿಚಾರನ ಮತ್ತೆ ಗೊತ್ತು ಮಾಡ್ಕೋತಾ ಇರಬೇಕ೦ತೆ..
ನಿಮ್ಮ ಸಲಹೆಗೆ ನನ್ನ ಧನ್ಯವಾದಗಳು..

@ನಾನು ಆಸ್ತಿಕ. ಆದರೆ ದೇವರು ಇದ್ದಾನೆ ಎಂದು ಸಾಧಿಸುವ ಅವಶ್ಯಕತೆಯಾಗಲೀ, ಬುದ್ಧಿಯಾಗಲೀ, ಆಳವಾದ ಜ್ಞಾನವಾಗಲೀ ನನಗಿಲ್ಲ.
@ವಾದ ಮಾಡುತ್ತ ಕೂರಲು ಆಳವಾದ ಜ್ಞಾನ ಅಥವಾ ತರ್ಕಶಕ್ತಿ ಬೇಕು. ಒನ್ಸ್ ಅಗೇನ್ ತರ್ಕದಿಂದ ನಾವು ಎಷ್ಟು ಬುದ್ಧಿವಂತರು ಎಂದು ತಿಳಿಯುತ್ತದೋ ಹೊರತು ಸತ್ಯವನ್ನು ನಿರೂಪಿಸಲು ಸಾಧ್ಯವಾಗುವುದಿಲ್ಲ.
ಇದು ನನ್ನ ಭಾವನೆ ಕೂಡ..

ನನ್ನ ಸ೦ಪದದಲ್ಲಿನ "ಈ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ದೇವರಿದ್ದಾನೆ ಅ೦ದುಕೊ೦ಡಲ್ಲಿ..!" ( http://sampada.net/blog/smsathyacharana/18/03/2009/18074 ) ಬ್ಲಾಗ್‌ನಲ್ಲಿ ನಡೆಡ ಚರ್ಚೆ ನೋಡಿದಾಗ.. ನನ್ನ ಉದ್ದೇಶ ಇದ್ದದ್ದು ಏನು ಅ೦ತಾ ನಾನೇ ಯೋಚನೆ ಮಾಡೋ ಹಾಗಾಯ್ತು.. ನನ್ನ ಉದ್ದೇಶ ದೇವರನ್ನು ಎಲ್ಲಾರು ಈಗ ನ೦ಬಿ ಅನ್ನೋದು ಇರಲಿಲ್ಲ.. ಅವನಿದ್ದಾನೆ ಅ೦ದುಕೊ೦ಡರೆ ಎನಾಗಬಹುದು ಅನ್ನೋ ಯೊಚನೆ ಇತ್ತು.. ಆದರೆ, ಚರ್ಚಿಸಿದವರು ದೊಡ್ಡವರು.. ವಿಷಯ ತಿಳಿದವರು.. ಅವರಿಗೆ ನಾನು ಬುದ್ಧಿ ಹೇಳೋ ತಾಕತ್ತು, ಅವರೊಡನೆ ಚರ್ಚಿಸೋ ತಾಕತ್ತು ನನಗಿಲ್ಲ ಅ೦ತಾ ನಾನು ತೆರದ ಮನಸ್ಸಿನವನಾಗಿ ಹೇಳಿದೆ.. ಹಾಗೆ ಚರ್ಚೆ ಮು೦ದುವರಿಸೋ ಇಷ್ಟ ನನಗಿಲ್ಲ ಅನ್ನೋದನ್ನ ಸೂಚ್ಯವಾಗಿ ಹೇಳಿ, ಅವರ ಚರ್ಚೆಗಳನ್ನ ವೀಕ್ಷಿಸುತ್ತಾ ಕುಳಿತೆ..

ತಿಳಿದವರು ಹೇಳುವಾಗ, ಕೇಳೋದು ಒಳ್ಳೆಯದು ಅನ್ನೋದು ನನ್ನ ಭಾವನೆ.. :)

@ಸತ್ಯ ಕಾಲಕಾಲಕ್ಕೆ ಬದಲಾಗುವುದು ವಿಜ್ಞಾನದಲ್ಲಿ ಮಾತ್ರ!
ಈ ಮಾತು ಖ೦ಡಿತ ಸತ್ಯ.. ನನ್ನ ಅರಿವಿಗೆ ಬ೦ದಿರೋ ಲೆಕ್ಕದಲ್ಲಿ..
ಆಧ್ಯಾತ್ಮದ ವಿವರಣೆ "ಸತ್ಯ"ಕ್ಕೆ.. "ಎ೦ದೂ ಬದಲಾಗದ೦ತಿರೋದು" ಅ೦ತ..
ಆದರೆ, ನಾನು ಒಬ್ಬ ವಿಜ್ಙಾನದ ವಿಧ್ಯಾರ್ಥಿ.. ವಿಜ್ಙಾನದ ರೀತಿಯಲ್ಲಿ... ಈ ವಿವರಣೆಗೆ, ಸ೦ದೇಹವೇ ಜಾಸ್ತಿ ಅ೦ತ ನನಗನ್ನಿಸುತ್ತದೆ..
ವಿಜ್ಙಾನದಲ್ಲಿ.. ಯಾವುದೂ ಬದಲಾಗದೇ ಇರೋದೇ ಇಲ್ಲ.. (ನಾನು Definitionsಗಳ ಬಗ್ಗೆ ಹೇಳ್ತಾ ಇದೀನಿ).
ಇಲ್ಲಿನ ಸಿದ್ಧಾ೦ತಗಳೆಲ್ಲಾ ದಿನದಿನಕ್ಕೂ, ಕಾಲಕಾಲಕ್ಕೂ ಬದಲಾಗುತ್ತಲೇ ಇದೆ..
ಇರಲಿ.. ಇದು ಮುಗಿಯದ ಕತೆ..
ಮತ್ತೆ ಚರ್ಚೆ... :D

ನಿಮ್ಮೊಲವಿನ,
ಸತ್ಯ..

ಎಷ್ಟು ಬೇಗ ಅರ್ಥ ಮಾಡ್ಕೊಂಡು ಬಿಟ್ರಿ ಸತ್ಯಚರಣ್ ! ನಗೋದನ್ನ ಮರೀಬೇಡಿ ಮತ್ತೆ. ನಿಮ್ಮ ಲೇಖನದ ಮೇಲಿನ ಚರ್ಚೆಯನ್ನು ಓದಿ ನಾನು ಎರಡು ದಿನ ಪರ್ಯಂತ ನಕ್ಕಿದ್ದೇನೆ. ಇಲ್ಲೂ ನಡೆಯುತ್ತದೆ. ನಗ್ತಾ ಇರಿ ನನ್ನ ಜೊತೆ ! :D

ನಮ್ಮ ಚರ್ಚೆಯನ್ನು ನೋಡಿ ತಮಗೆ ನಗು ಬಂದಿದ್ದು ತಿಳಿದು ತುಂಬಾ ಸಂತೋಷ ಆಯಿತು. ಗೆಲಿಲಿಯೋ ನನ್ನು ನೋಡಿ ಜನ ನಕ್ಕಾಗ ಅವನಿಗೆ ಏನು ಅನಿಸಿರಬಹುದು ಎಂದು ಯೋಚಿಸುತ್ತಿದ್ದೆ.

ಉಫ್...
ನಗೋದಾ.. ಕೆಲವೊ೦ದು ಬಾರಿ ನನಗೆ ಉಸಿರು ಕಟ್ಟೋ ಅನುಭವ.. ಮತ್ತೆ ನಾನೇ ಸುಧಾರಿಸಿಕೊಳ್ಳೋದು, (ಇರೋದು ಪೂನಾದಲ್ಲಿ, ಇದೇ ತರ ಯೋಚನೆಯವರು ಜೊತೆಯಲ್ಲಿ, ಹ೦ಚಿಕೊಳ್ಳೋಕೆ, ಅಥವಾ ಸಮಾದಾನಿಸೋಕೆ ಯಾರೂ ಇಲ್ಲ ನೋಡಿ)..
ಆದರೂ ಎ೦ತದೇ ಕಷ್ಟದ ಪರಿಸ್ಥಿತಿಯಲ್ಲೂ ನಗ್ತಾ ಇರೋದು, ನಗ್ತಾ ಇರೋ ಪ್ರಯತ್ನ ಮಾಡೋದು, ನನ್ನ ಜಾಯಮಾನ.. :)
:) :) :) :) :)

ನಿಮ್ಮೊಲವಿನ,
ಸತ್ಯ..

ಹರ್ಷ,
ನನಗೆ ನಿಮ್ಮ ಲೇಖನ ಓದಿ ಎಷ್ಟು ಸಂತಸ-ಸಮಾಧಾನವಾಗಿದೆ ಎಂದರೆ , ನಾನು ನನ್ನ ಅನೇಕ ಮಿತ್ರರಿಗೆ ಆಗಾಗ ಹೇಳುತ್ತಿರುತ್ತೇನೆ."ನಿಮ್ಮ ನಂಬಿಕೆಗಳನ್ನು ಸಾಬೀತು ಮಾಡಲು ಹೋಗುತ್ತೀರಾದರೂ ಏಕೆ?.ಅದರ ಅಗತ್ಯ ಇಲ್ಲ. ಹಿಂದಿನದೆಲ್ಲವೂ ಸರಿ ಎಂದೇನೂ ಅಲ್ಲ.ನಿಮಗೆ ಹಿತವಾಗಿದೆಯೇ ಆಚರಿಸಿ.ಅದನ್ನು ಸಾಬೀತು ಪಡಿಸುವ ಉಸಾಬರಿ ನಿಮಗೇಕೆ? ನಾನಂತೂ ಭಾವನೆಗಳ ಮೂಟೆ. ನನಗೆ ಸಿಕ್ಕಾಪಟ್ಟೆ ಅಧ್ಯಯನ ಮಾಡಲು ಶಕ್ತಿಯೂ ಇಲ್ಲ. ಆಸಕ್ತಿಯೂ ಇಲ್ಲ. ನನಗೆ ಹಿತವಾಗಿ ಕಂಡದ್ದನ್ನು ಓದುವೆ, ಕೇಳುವು. ಖುಷಿ ಪಡುವೆ. ಅಷ್ಟೆ. ನಿಮ್ಮ ಫೋಟೋ ನೋಡಿದಾಗಲೇ ನಾನು ಎಣಿಸಿದ್ದೆ. ಅದಕ್ಕೇನೋ ಅರ್ಥ ಇದೆ ಅಂತ. ಈಗ ತಿಳೀತು[ಏನೂ ಅಂತಾ ಕೆಳ್ಬೇಡಿ]ಧನ್ಯವಾದಗಳು.

ಹರ್ಷಣ್ಣ ನಂಗೊಂದು ಸಣ್ಣ ಅನುಮಾನ..

ಸ್ವಾಮೀಜಿ ಸತ್ತಿದ್ದು ಗಂಟಲ ಕಾನ್ಸರ್ ನಿಂದ ಅಂದ್ರಿ...
ಪರಮಹಂಸರು ಸತ್ತಿದ್ದು ಗಂಟಲ ಕಾನ್ಸರ್ ನಿಂದ ಅಲ್ವ??

ಸ್ವಾಮೀಜಿಗೆ ಅನಾರೋಗ್ಯವಿತ್ತು ಆದರೆ ಕಾನ್ಸರ್ ಅಲ್ಲ ಅಂತ ಅಂದುಕೊಂಡಿದ್ದೀನಿ...
ಸ್ವಾಮಿ ಪುರುಷೋತ್ತಮಾನಂದರು ಬರೆದಿರುವ ಸ್ವಾಮೀಜಿಯ ಜೀವನ ಚರಿತ್ರೆಯ ಮೂರನೇ ಸಂಪುಟ "ವಿಶ್ವ ಮಾನವ ವಿವೇಕಾನಂದ" ದಲ್ಲಿ
ಅವರು ಸ್ವ ಇಚ್ಛೆಯಿಂದ ಪ್ರಾಣ ತ್ಯಾಗ ಮಾಡಿದರು ಅಂತ ಹೇಳಿದ್ದಾರೆ...

ತಪ್ಪಿದ್ರೆ ತಿದ್ದಣ್ಣ....

ನನ್ನಿ
ದೃಶ್ಯ ಪ್ರದೀಪ :)

< ತರ್ಕದಿಂದ ನಾವು ಎಷ್ಟು ಬುದ್ಧಿವಂತರು ಎಂದು ತಿಳಿಯುತ್ತದೋ ಹೊರತು ಸತ್ಯವನ್ನು ನಿರೂಪಿಸಲು ಸಾಧ್ಯವಾಗುವುದಿಲ್ಲ.>
ಸತ್ಯವನ್ನು ನಿರೂಪಿಸಲು ತರ್ಕದ ಜೊತೆಗೆ ಪ್ರಮಾಣಗಳೂ ಇರಬೇಕಾಗುತ್ತದೆ. ವೈಗ್ನಾನಿಕ ಪ್ರಮಾಣಗಳನ್ನು ಪ್ರತಿಪಾದಿಸಲ್ಫಟ್ಟಾಗ
ಸತ್ಯ ಸತ್ಯವೇ ಆಗುತ್ತದೆ. ಉದಾಹರಣೆಗೆ ಜೀವ ಸತ್ಯ, ಜಗತ್ ಸತ್ಯ, ಜೀವ ಜೀವ ಬೇಧ ಸತ್ಯ....(ಜಗನ್ಮಿಥ್ಯಾ ಅನ್ನೋದಕ್ಕೆ ಪ್ರಮಾಣ ಸಿಗುತ್ತಾ?).
ವೈಚಾರಿಕತೆ ಜೊತೆಗೆ ವಿಗ್ನಾನದ ಮಿಲನದ ಆದಾಗ ಸತ್ಯದ ಪ್ರತಿಪಾದನೆ ಮಾಡಲಿಕ್ಕೆ ಸಾಧ್ಯ ಇದೆ. ಅಲ್ವಾ?

ಅನ೦ತ್

ಶ್ರೀಹರ್ಷ ರವರೆ,

<<< ಸಂಪ್ರದಾಯಗಳನ್ನು ಆಚರಿಸಿ; ಧರ್ಮಗ್ರಂಥ, ಧರ್ಮ, ದೇವರಲ್ಲಿ ಶ್ರದ್ಧೆ ಇಡಿ. ಆದರೆ ಅದರಲ್ಲಿ ವೈಜ್ಞಾನಿಕತೆ ಹುಡುಕುವುದು ....ಯಾಕೊ ಸರಿ ಅನ್ನಿಸ್ತಿಲ್ಲ!!!
ಸರಿ.

http://www.sabhlokcity.com/metaphysics/metaphysics.pdf
" Eternally Talented India 108 Facts " ಮತ್ತು ' The architecture of knowledge " ಪುಸ್ತಕಗಳು ಸಿಕ್ಕರೆ ಒಮ್ಮೆ ಓದಿ ...

ಶ್ರೀಹರ್ಷ ರವರೇ,

ನಿಮ್ಮ ಲೇಖನ ನೋಡಿ "ನಾನು ಹೇಳಬಯಸಿದ್ದು ಇದನ್ನೆ" ಅಂತ ಅನ್ನಿಸಿತು. ಕೆಲವು ತಿಂಗಳ ಹಿಂದೆ ಟಿವಿಯಲ್ಲಿ ಈ ಒಂದು ತುಣುಕು ಕೇಳಿದ ನೆನಪು, ಅದನ್ನು ಕನ್ನಡದಲ್ಲಿ ಇಲ್ಲಿ ಬರೆದಿದ್ದೇನೆ :

ಕಬೀರನ ಮನೆಯೆಡೆಗೆ ಸಾಗುವ ಪಥ ಬಲು ದುರ್ಗಮ
ಇರುವೆಯೇ ಜಾರುವಾಗ, ಎತ್ತಿನ ಗಾಡಿ ಕಟ್ಟುವುದೆಂತು ?
ಪರಮಾತ್ಮನು ಬೇರೆ ಲೋಕದಲ್ಲಿಲ್ಲ, ಇಲ್ಲೆ ಅವನನ್ನು ಕಾಣು

-ಶ್ರೀಕಾಂತ್

ಕಮೆಂಟು ಗಳ ಸಂಖ್ಯೆ ನೂರು ದಾಟಿತು. ಯಾರಾದ್ರು ಸೀಟಿ ಹೊಡಿರಪ್ಪೋ(ಹೊಡಿರಮ್ಮೋ)......ನಂಗೆ ಬರಲ್ಲ ಅದಕ್ಕೆ. ಹಿಟ್ಟುಗಳೂ ಸಾವಿರದ ಹತ್ರ ಬಂದಿವೆ...(ಇದರ ಅರ್ಥ ನನ್ನ ಲೇಖನ ಜನಪ್ರಿಯವಾಗಿದೆ ಅಂತ ಅಲ್ಲ)!
ನನ್ನ ಬೆನ್ನು ತಟ್ಟಿದೊರಿಗೂ, ಕಾಲೆಳೆದೊರಿಗೂ ನನ್ನೀ ನನ್ನೀ...

ಲೇಖನದ ಉದ್ದೇಶ ಕಟ್ಟಕಡೆಗೆ ಸಫಲವಾಗಿ ವಾಸುರವರ ಕಾಮೆಂಟ್ ನಿಂದ ಹೊರಬಿದ್ದಿದೆ. ನಾನು ಹೇಳಬಯಸಿದ್ದು ಕೇವಲ ಅಷ್ಟು ಮಾತ್ರವನ್ನೇ! ಶ್ರೀಕಾಂತ್, ಮಂಜುನಾತ್, ಪಾಟೀಲರು, ಸುಪ್ರೀತ್ , ಅನಂತ್ ಇವರೆಲ್ಲ ವಿಷಯವನ್ನು ಇನ್ನೂ ಆಳಕ್ಕೆ ಕೊಂಡೊಯ್ದರು. ನನಗೆ ತುಂಬಾ ಉಪಯೋಗವಾಯಿತು. ಇವರಿಗೆ ಸ್ಪೆಷಲ್ ನನ್ನೀ...

ಸಕತ್ ಮಜಾ ಬಂತು. ಎಲ್ರಿಗೂ ಬಂದಿದೆ ಅನ್ಕೊತಿನಿ.... ಅಂದ ಹಾಗೆ ನಾನು ಇನ್ನೂ ಆಸ್ತಿಕ ;)

century ಹೊಡೆಸ್ಕ೦ಡದ್ದಕ್ಕೆ..(ಇದು ಹೊಡೆದದ್ದಲ್ಲ, ಹೊಡೆಸ್ಕ೦ಡದ್ದು) ಫುಲ್ ಕ೦ಗ್ರಾಟ್ಸ್ ಹರ್ಷ..

ನಿಮ್ಮ ಪ್ರತಿಕ್ರಿಯೆ ಕ೦ಡ ಕೂಡಲೇ ಮೊದಲು ಮಾಡಿದ ಕೆಲಸ ನನ್ನ ಬ್ಲಾಗ್‌ಗೆ ಭೇಟಿಯಿತ್ತು, ಅದರ ಅ೦ಕಿ ಅ೦ಶ ನೋಡಿದ್ದು.. :D
ಆದರೆ, ನನ್ನ ಬ್ಲಾಗನಲ್ಲಿ, ಅನಿಸಿಕೆ, 115ಕ್ಕೆ ನಿ೦ತರೂ, ನಿಮಗೆಸಿಕ್ಕ ಹಿಟ್ಸ್ ನನಗೆ ಸಿಕ್ಕಿಲ್ಲ.. ಖುಷಿಪಡಬೇಕೋ, ಬೇಡ್ವೋ.. ಎಲ್ಲಾ ಒ೦ದೆಡೆ ಇರಲಿ.. ನೀವು ಹೇಳಿದ್ದರಲ್ಲಾ.. ನಗೋದು ಮರೆಯಬೇಡ ಅ೦ತ,.. ಹಾಗಾಗಿ.. ಮತ್ತೆ.. ನಗು, ಮುಗುಳ್ನಗು.. :) :) :) :) :)
ಮು೦ದುವರೆಯಿಲಿ ಅನ್ನೋಣವೇ, ಸಾಕು ಬಿಡಿ ಅನ್ನೋಣವೇ.. ತಿಳಿಯದು,.. ನಾವ್ಯಾರು ಸ್ವಾಮಿ ಅದನ್ನ ಹೇಳೋಕೆ, ಮೊದಲೇ ತಿಳಿಸಿದ್ದೀವಿ.. ನಮ್ಮ ಜ್ಙಾನ ಆ ಮಟ್ಟದ್ದಲ್ಲ ಅ೦ತ ಅಲ್ವೇ ಹರ್ಷ.. :? :D

ನಿಮ್ಮೊಲವಿನ,
ಸತ್ಯ..

ಆಸ್ಥಿಕರು ಯಾರಾದರೂ ಇದ್ದರೆ

ಈ ಪ್ರಶ್ನೆಗೆ ಉತ್ತರಿಸಿತ್ತಾರೋ ?

>>ತಾಳಿ ಕಟ್ಟಲು ಯಾವ ವೈಜ್ಞಾನಿಕ ವಿವರಣೆ ಇದೆಯೋ ನನಗೆ ಗೊತ್ತಿಲ್ಲ. ತಾಳಿ ಕಟ್ಟಿಕೊಳ್ಳಲೇಬೇಕು, ಕುಂಕುಮ ಹಚ್ಚಿಕೊಳ್ಳಲೇಬೇಕು ಎಂದು ಯಾವ ಶಾಸ್ತ್ರಗಳಲ್ಲೂ ಹೇಳಿಲ್ಲ. ಮದುವೆಗೆ ಮುಖ್ಯ ಅಂದರೆ ಪ್ರತಿಜ್ಞಾ ವಿಧಿ ಅಷ್ಟೇ!<<

ಅರವಿಂದ್

ಹಿಟ್ಟುಗಳ ಮೊತ್ತ ಸಾವಿರದ ಗಡಿಗಳ ದಾಟಲಿ ಕ
ಮೆಣ್ಟುಗಳ ಮೊತ್ತ ನೂರರ ಎಲ್ಲೆಗಳ ಮೀರುತ್ತ
ಒನ್ದನೊನ್ದು ಕೆಣಕುತಿರಲಿ ಆಸ್ತಿಕ-ನಾಸ್ತಿಕರ್ಗಳ
ತೂರಿ-ಪಿತೂರಿಗಳು, ಸಕಲ ಮಹೋದಯರ್ಗಳಿಗೆ ನನ್ನಿಗಳ ತಿಳಿಸುತ್ತ!

ಹುರ್ರ್ರಾ !!! ನೂರೈವತ್ತು ಕಮೆಂಟು ..ಒಂದುವರೆ ಸಾವಿರ ಹಿಟ್ಸು... ಇದು ಹೊಸ ರೆಕಾರ್ಡಾ ? ಅಥವಾ ಯಾರಾದ್ರು ಹಿಂದೆ ಇದಕ್ಕಿಂತ ಹೆಚ್ಚು ಹಿಟ್ಟಿಸಿ ಕೊಂಡವರು, ಕಮೆಂಟಿಸಿ ಕೊಂಡವರು ಇದ್ದಾರೋ?

ಚೆನ್ನಾಗಿತ್ತು ಚರ್ಚೆ ! :)

ಈಗಲೂ ನಾನು ಆಸ್ತಿಕ! ;)

ಪ್ರತಿಕ್ರಿಯೆ/ಟೀಕೆ/ಟಿಪ್ಪಣಿಗಳ ನೆರವಿಲ್ಲದೆ ಇಲ್ಲಿರುವ ಝೆನ್ ಕತೆಗಳು ( http://sampada.net/category_0 ) ಸುಮಾರು ಸಾವಿರ ಹಿಟ್ ಕಂಡಿವೆ . ಕೆಲವಂತೂ ಎರಡು ಸಾವಿರ ಹತ್ತಿರ ಸಾಗುತ್ತಿವೆ .

ಹರ್ಷರವರೆ,
ನಿಮ್ಮ ಈ ಲೇಖನವನ್ನು ಮತ್ತದರ ಕಾಮೆಂಟುಗಳನ್ನು ಓದಿದೆ. ಕೆಲವರು ಮೂಗಿರುವುದೇ ನೆಗಡಿಗೆ ಕಾರಣ, ಆದ್ದರಿಂದ ಮೂಗನ್ನೇ ಕಿತ್ತೊಗೆಯಬೇಕು ಎಂದಿದ್ದಾರೆ, ಇನ್ಕೆಲವರು, ನೆಗಡಿ ಬರಲೆ೦ದೆ ಮೂಗಿರುವುದು, ಏನು ಮಾಡಲಾಗುವುದಿಲ್ಲ ಎಂದಿದ್ದಾರೆ. ಕೊನೆಗೂ ದೇವರು/ಧರ್ಮ/ಆಸ್ತಿಕತೆ/ನಾಸ್ತಿಕತೆ ಹೀಗೆ೦ದರೇನು ಎನ್ನುವುದಕ್ಕೆ ಉತ್ತರ ಸಿಗಲಿಲ್ಲ. ಆದರು ನಿವೆ೦ದ೦ತೆ ಮಜಾ ಬಂತು. ಧನ್ಯವಾದಗಳು :)

ವಿವೇಕಾನಂದರು ಗಂಟಲ ಕ್ಯಾನ್ಸರಿನಿಂದ ಸತ್ತಿದ್ದಲ್ಲ. ಅವರ ಗುರುಗಳಾದ ರಾಮಕೃಷ್ಣ ಪರಮಹಂಸರು ಗಂಟಲ ಕ್ಯಾನ್ಸರಿನಿಂದ ಸತ್ತಿದ್ದು. ವಿವೇಕಾನಂದರು ಸತ್ತಿದ್ದು ನಿಯಂತ್ರಣಕ್ಕೆ ಬರಲಾಱದ ಮಧುಮೇಹರೋಗದಿಂದ ತಮ್ಮ ೩೯ನೇ ವಯಸ್ಸಿನಲ್ಲಿ.