ಪು.ತಿ. ನ. ಅವರ ಕಾವ್ಯಗಳ ರಸಧಾರೆ!!!

To prevent automated spam submissions leave this field empty.

ಸಹೃದಯ ಗೋಷ್ಠಿಯಲ್ಲಿ "ಪು.ತಿ.ನ. ಅವರ ಕಾವ್ಯಗಳ ರಸಧಾರೆ"!!!

ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.

ಸಹೃದಯ ಗೋಷ್ಠಿ ಹಮ್ಮಿಕೊಂಡಿದ್ದು, ಸಹೃದಯತೆಗೆ ಹೆಸರಾದ ನಮ್ಮ ಬೇ ಏರಿಯಾದ ಅಪರೂಪ ಮತ್ತು ಅನುರೂಪ ದಂಪತಿಗಳಾದ, ಅಲಮೇಲು ಮತ್ತು ತಿರುನಾರಾಯಣ ಐಯ್ಯಂಗಾರ್ ಅವರು. ಸಾಹಿತ್ಯಾಸಕ್ತರೂ, ಸ್ವತಃ ಕವಿಗಳೂ ಆದ ಈ ದಂಪತಿಗಳು ಸರಟೋಗಾದಲ್ಲಿರುವ ಅವರ ಸುಂದರವಾದ ಸ್ವಗೃಹದಲ್ಲಿ ಈ ಗೋಷ್ಠಿಯನ್ನು ಏರ್ಪಡಿಸಿದ್ದರು. ಈ ಗೋಷ್ಠಿಯ ಇನ್ನೊಂದು ವಿಶೇಷತೆ ಏನೆಂದರೆ, ಪು ತಿ ನ ಅವರೇ ಈ ವೇದಿಕೆ ಮೇಲೆ ಮೊದಲನೆಯ ಗೋಷ್ಠಿಯಲ್ಲಿ ಮಾತನಾಡಿ ನಂತರ ಹಲವಾರು ಸುಪ್ರಸಿದ್ಧ ಕನ್ನಡ ಸಾಹಿತಿಗಳು, ಡಾ. ಜಿ.ಎಸ್. ಶಿವರುದ್ರಪ್ಪ, ಹೆಚ್. ಎಸ್. ವೆಂಕಟೇಶ ಮೂರ್ತಿ ಮುಂತಾದವರು ಮಾತನಾಡಿ ಅಣಿಮಾಡಿದ ವೇದಿಕೆ ಇದು.

ಈ ಸರತಿಯ ಮಾತನಾಡುವ ಸುಯೋಗ ಡಾ. ತುಳಸಿ ರಾಮಚಂದ್ರ ಅವರಿಗೆ ಲಭಿಸಿತು. ಡಾ. ತುಳಸಿ ರಾಮಚಂದ್ರ ಅವರು ವಿಜ್ಞಾನದಲ್ಲಿ ಪದವೀಧರೆಯಾದರೂ ಕನ್ನಡದಲ್ಲಿ ಸ್ನಾತಕೋತ್ತರ ಪಧವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ೨-ಚಿನ್ನದ ಪದಕಗಳೊಂದಿಗೆ, ಎರಡನೇ ರ್‍ಯಾಂಕ್ ನಲ್ಲಿ ಉತ್ತೀರ್ಣರಾಗಿ ಮತ್ತು ಅದೇ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಸಹ ಪಡೆದಿದ್ದಾರೆ. "ಕನ್ನಡ ಸಾಹಿತ್ಯದಲ್ಲಿ ನೃತ್ಯಕಲೆಯ ಉಗಮ, ಮತ್ತು ವಿಕಾಸಗಳ ಅಧ್ಯಯನ" ಈ ವಿಷಯದ ಮೇಲಿನ ಪ್ರಭಂದ ಇವರಿಗೆ ಡಾಕ್ಟರೇಟ್ ತಂದು ಕೊಟ್ಟಿದೆ. ಡಾ. ತುಳಸಿಯವರು ಸಾಹಿತಿ, ನೃತ್ಯಗಾತಿ, ಭಾಷಣಕಾರರು, ಮೈಸೂರಿನಲ್ಲಿ ನೃತ್ಯಾಲಯ ಟ್ರಸ್ಟ್ ನೃತ್ಯ ಶಾಲೆ ನಡೆಸುತ್ತಾ, ನೂರಾರು ವಿದ್ಯಾರ್ಥಿಗಳಿಗೆ, ಭರತನಾಟ್ಯಮ್, ಕೂಚಿಪುಡಿ, ಮತ್ತು ಕಥಕ್ ನೃತ್ಯ ಕಲಿಸುತ್ತಾ, ಹಲವಾರು ಕೃತಿಗಳಿಗೆ ಲೇಖಕಿಯಾಗಿದ್ದಾರೆ. ಇವರ "ಪದಗತಿ-ಪಾದಗತಿ" ಕೃತಿಯು ಹಂಪಿ ವಿಶ್ವವಿದ್ಯಾಲಯ ಪ್ರಕಟಿಸಿ ಕನ್ನಡಿಗರಲ್ಲಿ ಹೆಸರುವಾಸಿಯಾಗಿದೆ. ಇವರಿಗೆ ೨೦೦೪ ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಮತ್ತು ೨೦೦೭ ರಲ್ಲಿ ಸಂಗೀತ ನೃತ್ಯ ಅಕಾಡೆಮಿಯ ವಿಶೇಷ ಪ್ರಶಸ್ತಿಯೂ ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆ. ಡಾ. ತುಳಸಿಯವರು, ೨೦೦೩ ರ ದಸರಾ ಉತ್ಸವದ ಸಾಂಸ್ಕೃತಿಯ ಕಾರ್ಯಕ್ರಮದಲ್ಲಿ ಶ್ರೀಹರಿ ಚರಿತೆಯ "ರಾಧಾ ದರ್ಶನ" ನೃತ್ಯ ನಾಟಕವನ್ನು, ಮತ್ತು "ಶಬರಿ" ನೃತ್ಯ ನಾಟಕವನ್ನು ಮೈಸೂರು ವಿಶ್ವವಿದ್ಯಾಲಯ ನೂರು ವರ್ಷದ ಸಮಾರಂಭ (ಸೆಂಟೆನರಿ ಸೆಲೆಬ್ರೇಶನ್) ದಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿ, ಸಭಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಡಾ. ತುಳಸಿಯವರು ಪು.ತಿ.ನ. ಅವರ ಕಾವ್ಯಗಳ ರಸಯಾತ್ರೆ ರಸಧಾರೆ ಹರಿಸಲು ಆಯ್ದು ಕೊಂಡ ಎರಡು ಕೃತಿಗಳು "ಶ್ರೀಹರಿ ಚರಿತೆ" ಮತ್ತು "ಶಬರಿ". "ಶ್ರೀಹರಿ ಚರಿತೆ" ಒಂದು ಮಹಾಕಾವ್ಯ, "ಶಬರಿ" ಒಂದು ಖಂಡ ಕಾವ್ಯ", ಕ್ರಮವಾಗಿ "ಶೃಂಗಾರ" ಮತ್ತು "ಕರುಣ" ರಸಗಳಲ್ಲಿ ರಚಿಸಲಾಗಿದೆ. "ನಿಲ್ಲಿಸದಿರು ವನಮಾಲಿ ಕೊಳಲ ಗಾನವ" (ಪು.ತಿ.ನ.ವಿರಚಿತ) ಕವನವನ್ನು ಸುಶ್ರಾವ್ಯವಾಗಿ ಹಾಡುವುದರ ಮೂಲಕ, "ಈ ಒಂದು ಪದ್ಯ ಅವರಿಗೆ ಬಾಳಿನಲ್ಲಿ ಹೇಗೆ ಸ್ಪೂರ್ತಿಕೊಟ್ಟಿದೆ" ಎಂದು ವಿವರಿಸುತ್ತಾ, ಕೃಷ್ಣ ನ ಅರಾಧಕರಾದ ಪು.ತಿ.ನ ಅವರ "ಶ್ರೀಹರಿ ಚರಿತೆ" ಯನ್ನು ಅರಂಭಿಸಿದರು.

"ಶ್ರೀಹರಿ ಚರಿತೆ" ಪು.ತಿ.ನ ಅವರ ಮಹಾಕಾವ್ಯ. ಮಹಾಕಾವ್ಯದಲ್ಲಿರಬೇಕಾದ ಸಕಲ ಲಕ್ಷಣಗಳೂ ಈ ಕಾವ್ಯದಲ್ಲಿದೆ. ಪು.ತಿ.ನ. ಅವರು "ಶ್ರೀ ಕೃಷ್ಣನ ಗೋಕುಲ ಲೀಲೆಗಳು, ಮುಖ್ಯವಾಗಿ ಕೃಷ್ಣ-ರಾಧೆಯರ ದೈವಿಕ ಪ್ರೇಮವನ್ನು ಈ ಕಾವ್ಯದಲ್ಲಿ ಬಹಳ ಚೆಂದದಿಂದ ಚಿತ್ರಿಸಿದ್ದಾರೆ. ಅವರೇ ಹೇಳಿದಂತೆ ಈ ಗೀತನಾಟಕವಾನ್ನು "ಬ್ರಹ್ಮ ಛಂದಸ್ಸಿನಲ್ಲಿ" ರಚಿಸಲಾಗಿದೆ. ಡಾ. ತುಳಸಿಯವರು ಮಾತನಾಡುತ್ತಾ "ಇದರ ತಾಳ, ಲಯಗಳು, ಭಾವಬಂಧಗಳು ನೃತ್ಯ ನಾಟಕಕ್ಕೆ ಅತ್ಯಂತ ಸಮರ್ಥಕವಾಗಿ ರಚಿಸಲಾಗಿದೆ" ಎಂದು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ಶ್ರೀಹರಿ ಚರಿತೆ ಯಲ್ಲಿ "ಶೃಂಗಾರ" ರಸದ ಹಲವು ಮಜಲುಗಳನ್ನು ಹೃದಯಂಗಮವಾಗಿ ಚಿತ್ರಿಸಲಾಗಿದೆ. ಅವರು "ಶ್ರೀಹರಿ ಚರಿತೆ" ಅರಂಭದಲ್ಲಿ, ಕೃಷ್ಣ ನ ಮೂರ್ತಿಯನ್ನು ಕಣ್ಣಾರೆ ಕಂಡಂತೆ, ಶ್ರೀ ಕೃಷ್ಣನಿಗೇ ಪ್ರಶ್ನೆ ಹಾಕುತ್ತಾರೆ "ನಿನ್ನನ್ನು ಯಾವರೀತಿ ನಾನು ನೋಡಬೇಕು? ತಂದೆಯಾಗೋ, ತಾಯಿಯಾಗೋ, ಪ್ರಣಯಿನಿಯಾಗೋ, ಮಗನ ಹಾಗೋ? ನೀ ಹೇಳು? "ಈ ಯಾವ ರೂಪದಲ್ಲೂ ನಾನು ನಿನ್ನನ್ನು ನೋಡಲು ಅಸಾಧ್ಯ" ಅಂತ ಕಾರಣಗಳೊಂದಿಗೆ ತಿಳಿಸಿ, ಕಡೆಗೆ "ನೀನು ಇವರೆಲ್ಲರಿಗೂ ಮಿಗಿಲಾದವ, ಮೀರಿದವ", ಎಂದು ಅವರಿಗೆ ಅವರೇ ಸಮಾಧಾನ ಹೇಳಿ ಕೊಳ್ಳುತ್ತಾರೆ. ಇಲ್ಲಿಂದ ಶುರುವಾಗಿ, ರಾಧಾ ಕೃಷ್ಣರ ಅನ್ಯೂನ್ಯ ಸಂಬಂಧವನ್ನು ಕಾವ್ಯ ಲಕ್ಷಣದೊಂದಿಗೆ ಪಾತ್ರಗಳ ಚಿತ್ರಣ ಮನಸ್ಸಿನಲ್ಲಿ ನಿಲ್ಲುವಂತೆ ರಚಿಸಿದ್ದಾರೆ. ಉ.ದಾ, ರಾಧೆಯನ್ನು "ರಾಧೇ" ಅಂತ ಕರೆದಿದ್ದೇ ಇಲ್ಲ, ಬದಲಾಗಿ, "ಉಜ್ವಲ ತರುಣಿ, ಹರಿವಲ್ಲಭೆ, ಹರಿ ಮಾನಸೆ," ಹೀಗೆ ಆ ಚೈತನ್ಯಾ ಶಕ್ತಿಯನ್ನು ರಾಧೆಗೆ ಸೇರಿಸಿ ಸಂಭೋದಿಸಿದ್ದಾರೆ. ಪು.ತಿ.ನ. ಅವರು ಶ್ರೀಹರಿ ಚರಿತೆಯ ರಾಧಾದರ್ಶನದಲ್ಲಿ ಶೃಂಗಾರ ರಸಕ್ಕೆ ಪ್ರಾಧಾನ್ಯತೆ ಕೊಡುವುದರ ಜೊತೆಗೆ, ರಾಧೆಯನ್ನು "ಮುಗ್ಧನಾಯಕಿ" ಯಾಗಿ ಚಿತ್ರಿಸಿದ್ದಾರೆ. "ಶ್ರೀಹರಿ ಚರಿತೆ" ಯಲ್ಲಿ, "ಕೃಷ್ಣನ ಕೊಳಲು" ರಾಧೆಗೆ ಕೃಷ್ಣ ನಂತೆಯೇ ವ್ಯವಹರಿಸುತ್ತದೆ.

ರಾಧೆ ಕೃಷ್ಣನಿಗಾಗಿ ಕಾದು, ಕಾದು, ಅವನು ಬರಲಿಲ್ಲವೆಂದು ಮುನಿಸಿ, ಅವಳ ಒಲವು, ಚೆಲುವು ಅವನಿಗೆ ಸರಿಸಾಟಿಯಾಗಿಲ್ಲವೇನೋ ಎಂದು ಅವಳ ಸೌಂದರ್ಯವನ್ನೇ ಅನುಮಾನಿಸಿ, ಕಡೆಗೆ, ಕೃಷ್ಣನನ್ನು ಮನ್ನಿಸಿ "ಅವನು ಲೋಕ ಮೋಹಕ, ಅವನೊಂದು ಸಾಗರದಂತೆ, ಅವನು ನನ್ನವ, ಹಾಗೇ ಎಲ್ಲರವ" ಎಂದು ಅವಳೇ ಮನಸ್ಸಿಗೆ ಸಾಂತ್ವನ ಮಾಡಿಕೊಳ್ಳುವುದನ್ನು ಕೆಳಗಿನ ಪದ್ಯದಲ್ಲಿ ಪರಿಪೂರ್ಣವಾಗಿ ಇಳಿಸಿದ್ದಾರೆ. ಈ ಪದ್ಯ "ವ್ಯಷ್ಟಿ ಸಮಷ್ಟಿ" ಭಾವವನ್ನು ಸೆರೆಹಿಡಿಯುವುದರಲ್ಲಿ ಸಾರ್ಥಕವಾಗಿದೆ. ವ್ಯಷ್ಟಿ-ಸಮಷ್ಟಿ ಭಾವ ಸಂಭಂದವು "ಜೀವಾತ್ಮ-ಪರಮಾತ್ಮ" ಮತ್ತು "ಯೋಗಕ್ಷೇಮಂ ವಹಾಮ್ಯಹಮ್" ಎಂದು ಶ್ರೀಕೃಷ್ಣನೇ ಭಗವತ್ ಗೀತೆಯಲ್ಲಿ ಹೇಳಿದಂತೆ, "ಎಲ್ಲರೊಳು ಅವನಿದ್ದು, ಎಲ್ಲರನು ಸಲಹುವನು, ಇದಕೆ ಸಂಶಯವಿಲ್ಲ" ಎಂಬ ಎಲ್ಲರಿಗೂ ಭಗವಂತನೊಡನಿರುವ ಅನೂನ್ಯ ಸಂಭಂದವನ್ನು ವ್ಯಕ್ತಪಡಿಸುತ್ತದೆ.

"ಶ್ರೀಹರಿಯೆಲ್ಲರವ, ನಾನವನವಳು
ಹೊಳೆ ಕಡಲಿನದು, ಕಡಲೆಲ್ಲರದು,
ನೂರು ಮಿಂಚಾಡುವವು, ಕಾರ್ಮುಗಿಲೊಳಲಂತೆಯೆವು,
ಅಂತೆಯೇ, ನೂರುಜೀವಂಗಳೊಲವಿಂ ಹೊಳೆವು-
ವಾ ನೀಲಮೇಘಶ್ಯಾಮನೋಳು."

ರಾಧಾ-ಕೃಷ್ಣರ ಅಲೌಕಿಕ ಪ್ರೇಮ, ದಿವ್ಯ ಕಾಮ, ಭಾವನಾರ್ಥಕ, ನಿರ್ವ್ಯಾಜ್ಯ ಪ್ರೇಮವನ್ನು ಸಾಂಗೋಪಾಂಗವಾಗಿ, ಶ್ರೀ ಕೃಷ್ಣ ಕೊಳಲನ್ನು ತ್ಯಜಿಸುವವರೆಗೆ ನಿರಂತರವಾಗಿ ಕಾವ್ಯಲಹರಿಯಲ್ಲಿ ನಿರ್ಮಿಸಿದ್ದಾರೆ. ಶ್ರೀಹರಿ ಚರಿತೆಯನ್ನು ಬರೆಯುವಾಗ, ಪು.ತಿ.ನ ಅವರು ವಿಶೇಷವಾದ ಆನಂದೋಲ್ಲಾಸಗಳನ್ನು ಅನುಭವಿಸಿರಬೇಕು, ಅಂತೆಯೇ ಇದರ ವಿಭಾಗಗಳನ್ನು "ಉಲ್ಲಾಸಗಳು" ಎಂದು ಉತ್ಸಾಹದಿಂದ ಕರೆಯಲಾಗಿದೆ. ಓದುಗರ ಮನಸ್ಸನ್ನು ಅಹ್ಲಾದಕರವಾಗಿಸುವ ಕವಿ ಪ್ರಯತ್ನದಲ್ಲಿ ಯಶಸ್ವಿಯಾಗಿದೆ.

ಮುಂದಿನ ಕೃತಿ, "ಶಬರಿ" ಯಲ್ಲಿ ಆರ್ದ್ರತೆಯಿಂದ ಕರುಣರಸ ಹರಿದಿದೆ ಎಂದರೆ ತಪ್ಪಾಗಲಾರದು. ಮತಂಗ ಮುನಿ ಆಶ್ರಮದಲ್ಲಿ, ಅವಳ ಗುರು ಇಹಲೋಕವ ತ್ಯಜಿಸಿದ ಮೇಲೆ, ಮತಂಗ ಮುನಿಯ ಆದೇಶದ ಮೇರೆಗೆ, ಶಬರಿ ಹಣ್ಣುಹಣ್ಣು ಮುದುಕಿಯಾಗೂ, ಹೂವು, ತರ, ತರಹಾವರಿ ಹಣ್ಣುಗಳನ್ನು ಶೇಕರಿಸಿ ಒಂದೇ ನಿಟ್ಟಿನಿಂದ ಶ್ರೀರಾಮನ ಬರವಿಗಾಗಿ ಬರದಿಂದ ಕಾಯುತ್ತಾಳೆ. ಕಾಯುವಾಗ ರಾಮನ ಗುಣಗಳನ್ನಾಡಿ, ಪಾಡುತ್ತಾಳೆ.

"ನಿಂತಲ್ಲಿಯೆ ನಾ ನಿಂತಿರುವೆ
ರಾಮ ನೀನೆಂದೈತರುವೇ?

ನೀನಿಹುದೆಲ್ಲೋ ನಾನರಿಯೆ
ನಿನ್ನೆಡೆಗೈದುವ ಬಳಿಯರಿಯೆ
ನೀ ಬಹೆ ಎನ್ನುವ ನೆಚ್ಚಿನೊಳು
ನಾನಿಹೆ ಬಯಕೆಯ ಹುಚ್ಚಿನೊಳು|

ಇಂತಿಹೆಯಾ ಅಂತಿಹೆಯಾ
ಎಂತಿಹೆಯೋ ನಾ ಕಾಣೆನಲಾ
ಕಂಡ ಗುರುಜನರು ನಿನ್ನ ಸಮಾನರೆ
ಇಲ್ಲವೆಂದು ಬೆರಗಾದರಲಾ
ಚೆಲುವನೇ
ಎನ್ನಾಸೆಯ ಕೊಂಡವನೇ|

ದಿನದಿನವೆಣಿಸುತ ಕಳೆವುದೆ ಯಾತ್ರೆ
ಕಂಬನಿ ಹೊನಲೊಳು ಮೀವುದೆ ತೀರ್ಥ
ಈ ಗಳಿಗೆಗೊ ಮರುಗಳಿಗೆಗೊ ಬಹೆಯೆಂ-
ಬಾತುರ ಕಾತರವೇ ದಣಿವೋ|"

ಶಬರಿ: "ರಾಮಾ, ನೀನು ಹೀಗಿದಿಯಂತೆ, ನೋಡಲು ತುಂಬಾ ಸುಂದರವಂತೆ, ನೀನು ಸೌಜನ್ಯಕ್ಕೆ ಸಾಕಾರವಾಗಿದಿಯಂತೆ, ನೀನು, ಬಲು ಶೂರ, ವೀರ, ರಘುವೀರ, ಉದಾರ, ರಾಜಕುಮಾರ, ಹೀಗೆಲ್ಲಾ ಎಲ್ಲ ಜನ ಹೇಳ್ತಾರೆ, ನೀನು ಯಾವಾಗ ಬರ್ತೀಯಪ್ಪಾ?, ನಾನು ನಿನ್ನ ನೋಡಬೇಕು, ನೋಡಿದಮೇಲೇ ನಾನು ಪರಂಧಾಮಕ್ಕೆ ತೆರಳುವುದು". "ಬೇಗ ಬಾ ನನ್ನಲ್ಲಿಗೆ" ಎಂದು ಹಾಡುವುದು ಈ ಪದ್ಯಗಳಲ್ಲಿ ನೋಡಬಹುದು.

"ಕಿರಣ ಶಿಶು ನಲಿವ ತಳಿರ ಹಾಸಿನೊಳು
ರಾಮನನೆಂದಿಗೆ ಕುಳ್ಳಿರಿಪೆಂ
ಮೈಯ್ಯಮೇಲೆ ಮನ ತೇಲುವ ತೆರದೊಳು
ಕಂಪಿಡುವೀ ಜೊಂಪೆಯ ಸಲಿಪೆಂ
ರಾಮ ಬಾರದೇ
ನನಗೇನು ತೋರದೇ|

ಅವ ಸವಿದಲ್ಲದೆ ಸವಿಯಾಗದ ಈ
ಕಡುಸವಿ ಹಣ್ಗಳನೇಗೆಯ್ಯೆಂ
ಮಧುಕರಗೀತದ ಮಧು ಊರಿರುವೀ
ಮಧುಪರ್ಕವ ನಾನಾರ್ಗೀವೆಂ

ಬಾ ರಾಮ ಬಾ ರಾಮ ಬಾರೈ
ಬಾ ಬಗೆಯಿರುಳಿನ ಪೆರೆಯೇ
ಕೋ ಕೋ ಹಣ್ಗಳ ಕೋ ಹೂಗಳ ಕೋ
ಎಲ್ಲವ ಕೋ ಎನ್ನೊಳಮೊರೆಯೇ
ರಾಮ ಬಾರದೇ
ನನಗೇನು ಸೇರದೇ|"

ಕೊನೆಯಲ್ಲಿ, ರಾಮ, ಲಕ್ಷ್ಮಣನೊಡನೆ ಸೀತೆಯನ್ನು ಹುಡುಕುತ್ತಾ ಮತಂಗಾಶ್ರಮದ ಸಮೀಪ ಬರುತ್ತಾನೆ, ರಾಮನೇ ಇರಬೇಕೆಂದು ಶಬರಿ ಅವರ ಹತ್ತಿರ ಬರುವಾಗ, ಲಕ್ಷ್ಮಣ ರಾಮನನ್ನು ತಡೆದು, ನೀ ನನ್ನ ಹಿಂದೆ ಬಾ, ಈ ವೃದ್ಧೆ ಯಾರೋ ಏನೋ ಯಾರು ಬಲ್ಲವರು? ಎಂದು ಶಬರಿ ಮುಂದೆ ಬಂದು "ತಾಯಿ, ದಾರಿಗರಿಗೆ ಇಲ್ಲಿ ಬೀಡು(ತಂಗಲು ಆಶ್ರಯ) ದೊರೆಯುವುದೇ?" ಎಂದು ಶಬರಿಯನ್ನು ಕೇಳುತ್ತಾನೆ. "ರಾಮನೇನೆ? ಇವನು?" ಎಂದು ಹಂಬಲಿಸಿ ಶಬರಿ ಕೇಳಲು, ಶ್ರೀ ರಾಮ ಸೌಜನ್ಯದಿಂದ " ಅಹುದು ತಾಯಿ, ಅಹುದು ರಾಮನೆಂಬರು ನನ್ನ, ಈತ ನನ್ನನುಜ ಸೌಮಿತ್ರಿ" ಎಂದು ಲಕ್ಷ್ಮಣನನ್ನು ತೋರಿಸಿ ಹೇಳುವುದರ ಮೂಲಕ, ಪು.ತಿ.ನ. ಅವರು ರಾಮನ ವ್ಯಕ್ತಿ ಚಿತ್ರಣವನ್ನು ಅಪ್ರತಿಮವಾಗಿ ಚಿತ್ರಿಸಿದ್ದಾರೆ. ಶಬರಿ, "ರಾಮನನ್ನು ಕಂಡೆ" ಎಂಬ ಅಪರಿಮಿತ ಸಂತೋಷದಿಂದ,

"ಕಣ್ನ ತುಂಬಿ ಮನವ ತುಂಬಿ
ಎದೆಯ ತಳುವನೆಲ್ಲ ತುಂಬಿ
ಆನಂದ ತೆರೆಗಳೆದ್ದು
ಒಳಗ ಮೀರಿ ಹರಘೆ ತುಳುಕೆ

ಕಂಡ ಬೆರಗು ಕಳೆದ ಬಳಿಕ
ಸನಿಯಕೈದಿ ಮೈಯ್ಯ ಮುಟ್ಟಿ
ಪದದಿ ಕೆಡೆದು ಕೈಯ ಕಣ್ಣಿ-
ಗೊತ್ತಿಕೊಂಡು ಹನಿಯ ಸುರಿಸಿ|

ಬನ್ನಿರೆಂದು ಗದ್ಗದಿಸುತ
ಅಯ್ಯೊ ಏನು ಅಣಿಯೆ ಇಲ್ಲ
ನೆನ್ನೆಯಷ್ಟು ಚೆನ್ನವಿಲ್ಲ
ಎನ್ನುತ ಬಲು ಹಂಬಲಾತು|"

"ಕಾಲತೊಳೆದು ಸೆರೆಗಲ್ಲೊರಸಿ" ಅವರಿಗೆ ಹಣ್ಣು, ಹಂಪಲುಗಳನ್ನು ತಿನ್ನಿಸಿ, ಪರಮ ಸಂತೋಷವನ್ನು ಹೀಗೆ ವ್ಯಕ್ತ ಪಡಿಸುತ್ತಾಳೆ.

"ಸುಖಿ ನಾ ಸುಖಿ ನಾ ಸುಖಿ ನಾನು
ಬರಿ ಸುಖಿ ಸುಮ್ಮನೆ ಸುಖಿ ನಾನು|

ಹೊಳೆ ಕಡಲಿಗೆ ಸೇರುವ ತೆರದಿ
ನಾವೆ ರೇವಿಗೆ ಬಹ ತೆರದಿ
ಬಗೆಬಗೆ ಹಾರೈಕೆಯ ಪಟವಿಳಿಸಿ
ನಿಂತಿದೆ ಮನ ಇದೆ ಬಿಡುವೆನಿಸಿ|

ಇಂದಾಗಿಹೆ ನಾ ಬಲು ಹಗುರ
ನೀಡಿಹುದೋ ಪರ ತನ್ನ ಕರ
ನಿನ್ನೆ ನಾಳೆ ಇನ್ನಿಲ್ಲವೆನಗೆನೆ
ಈ ನಲವೇ ಚಿರವೆಂಬ ತೆರ|ಸುಖಿ ನಾ|"

ಎಂದು ಹಾಡುತ್ತಾಳೆ. ರಾಮನಾದರೋ, ಶಬರಿಯ ಸೇವೆಗೆ ಮಣಿದು,

"ಇಂದು ಕಾಡು ಮರೆತೆವು, ಅಮ್ಮನಂತಾದೆ ನೀನು,

ನಿನ್ನಾದರದೊಳು ಸುಖಿ ನಾವು
ನಿನ್ನೀ ಸೊಗದೊಳು ಸುಖಿ ನಾವು
ಕಾಡಿನೊಳಿ ಸವಿ ಕಾಣುವ ಪುಣ್ಯಕೆ
ನಿನಗೆಂದಿಗು ಋಣಿ ನಾವು|

ತಿರೆಯಲ್ಲಿ ತನ್ನ ಬಹುದಿನಗಳ ಬಯಕೆ ಕೈಗೂಡಿತೆಂಬ ಸಂತ್ರಿಪ್ತಿಯಿಂದ ಶಬರಿ:

ಜಪತೀರಿತು ತಪ ತೀರಿತು- ಧ್ಯಾನ
ಕಣ್ಗಳವಟ್ಟಿದೆ- ನೀನೆ ಪ್ರಂಆಣ
ನಲವೆಲರಿನ ಮೇಲೆರೆಂಕೆಯಾಡಿಸಿ
ಇನ್ನೆನಗತ್ತ ಪ್ರಯಾಣ|

" ಪುಣ್ಯಲೋಕ ದೊರೆಯಲೆಂದು ಹರಕೆಯಿಡೆನಗೆ" ಎಂದು ಕೋರುತ್ತಾಳೆ.
"ಇನಿತು ಪ್ರಿಯವ ಗೈದ ನಿನಗೆ ಸಾವೆ ನಮ್ಮ ಕಾಣ್ಕೆ?" ಎಂದು ನೊಂದು ನುಡಿದ ರಾಮನಿಗೆ ಶಬರಿ:,

ಮರಣವಲ್ಲ ಮುಕ್ತಿ ಪ್ರಭೋ ಇದುವೆ ನನ್ನ ಪೂಣ್ಕೆ!
ಇಂತ ನಲವನುಂಡ ಬಳಿಕ ನೆನ್ನೆ ಬಾಲ ಬಾಲೆ
ಇನ್ನು ನನಗೆ ಅಗ್ನಿ ಸಮೆವ ಹಾದಿ- ಇಲ್ಲ ನಾಳೆ|

ಎಂದು ರಾಮನಿಗೆ ಹೇಳುತ್ತಾ, ಅವಳ ಪರಿಶುದ್ಧ ನಿಷ್ಟೆಗೆ ಸೋತ ರ್‍ಆಮ:, "ಬೆರಗಾಗಿಹೆ ನಾ ನಿನಗೆ, ಅಸ್ತು ಎಂಬೆ ನಲ್ಮೆಗೆ, ಅಸ್ತು ಅಸ್ತು, ಪೋಗವ್ವ ನಿನ್ನಭೀಷ್ಟ ಸಿದ್ಧಿಗೆ" ಎಂದು ಮಣಿಯುತ್ತಾನೆ. ಸಂತೃಪ್ತಳಾದ ಶಬರಿ:,

ನಮೋ ನಮೋ, ನಿನಗೆ ನಮೋ,
ಬನಕೆ ನಮೋ ಮಲೆಗೆ ನಮೊ
ತಿರೆಗು ನಮೋ ತಪಕು ನಮೋ
ಎಲ್ಲರಿಗೆಲ್ಲಕು ಶರಣು
ಶಾಂತಿ ಪುಷ್ಟಿ ತುಷ್ಟಿ ಶಿವಂ
ಆಗಲಯ್ಯ- ಗುರು ಶರಣು|

ಎಂದು ಮಂಗಳ ಹಾಡುತ್ತಾ ಅಗ್ನಿ ಪ್ರವೇಶಿಸುತ್ತಾಳೆ. ಅಗ್ನಿ ಆಹುತಿಯಲ್ಲಿ "ರಜತಶ್ರೀ" ಯಂತೆ ರಾರಾಜಿಸುತ್ತಿರುವ ಶಬರಿಯನ್ನು ಕಂಡು ರಾಮ ಲಕ್ಷ್ಮಣನಿಗೆ ತೋರಿಸುತ್ತಾ, ನೋಡು ಲಕ್ಷ್ಮಣ, ನಮಗೆ ಅಭಯ ಹಸ್ತವನ್ನು ತೋರುತ್ತಿರುವ "ತೇಜಸ್ವಿನಿ" ಗೆ ನಮಸ್ಕರಿಸು" ಎನ್ನುತ್ತಾ, ಆ ದಿವ್ಯ ಶ್ರೀರಕ್ಷೆಯನ್ನೇ ತದೇಕಚಿತ್ತದಿಂದ ನೋಡುತ್ತಿರುತ್ತಾನೆ. ಹೀಗೆ, ಶಬರಿಯ ಅಗ್ನಿಪ್ರವೇಶದಿಂದ ಕೊನೆಗೊಳ್ಳುವ ಈ (ಶಬರಿ) ಖಂಡ ಕಾವ್ಯವು, ಶೋತೃಗಳ, ಪ್ರೇಕ್ಷಕರ ಮತ್ತು ಓದುಗರ ಮನಸ್ಸಿನಲ್ಲಿ ನೆಲೆಯಾಗುವ ವಿಶೇಷ ಭಾವಗಳನ್ನು ಕರುಣಾ ರಸದಲ್ಲಿ ಪು.ತಿ.ನ. ಅವರು ಅಮೋಘವಾಗಿ ಹಿಡಿದಿಟ್ಟಿದ್ದಾರೆ.

ಹೀಗೆ, ಎರಡು ಗಂಟೆಗಳ ಪು.ತಿ.ನ. ಅವರ "ಕಾವ್ಯಗಳ ರಸಯಾತ್ರೆ" ಹರಿದಿದ್ದೇ ತಿಳಿಯಲಿಲ್ಲ. ಈ ಅವಕಾಶವನ್ನು ಕಲ್ಪಿಸಿದ ಅಲಮೇಲು ದಂಪತಿಗಳಿಗೆ ನನ್ನ ಅನಂತ ಕೃತಜ್ಞತೆಗಳು.

__________________________________________

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಅದ್ಭುತ ರಸಾನುಭೂತಿ, ಧನ್ಯವಾದಗಳು ಸ್ಪೆಷಲ್ ಧನ್ಯವಾದಗಳು ಮೀನಾ. ಪುತಿನ ಅವರದೇ ಒ೦ದು ಕವನದ ತುಣುಕಿನ ಅನುಭವವಾಯಿತು.
ಲಘುವಾಗೆಲೆ ಮನ
ಗೆಲುವಾಗೆಲೆ ಮನ
ಹಾರು ನನ್ನ ಬಿಟ್ಟು| ಹಾರಿ ಹರಿಯ ಮುಟ್ಟು||

ಪ್ರಬಂಧ ನಿಜಕ್ಕೂ ಚೆನ್ನಾಗಿದೆ. ನೀವು ಅಲ್ಲಿ ಕಣ್ತುಂಬಿ ನೋಡಿದರೆ, ನಾವು ನಿಮ್ಮ ಲೇಖನದ ಮೂಲಕ ನೋಡಿದಂತಾಯಿತು ಮೀನಾ.

"ನಿಲ್ಲಿಸದಿರು ವನಮಾಲಿ ಕೊಳಲ ಗಾನವ" ಈ ಹಾಡನ್ನು ನನ್ನ ಅಮ್ಮ ನಾನು ೬ನೇ ತರಗತಿಯಲ್ಲಿದ್ದಾಗ ಸ್ಪರ್ಧೆಗೆ ಹೇಳಿಕೊಟ್ಟಿದ್ದರು. ಈಗಲೂ ನೆನಪಿದೆ. ಇಲ್ಲಿ ಈ ಮುಖಾಂತರ ನೆನೆಪಿಸಿದಕ್ಕೆ ಮತ್ತೊಮ್ಮೆ ನನ್ನಿ.

ಕಮಲ

ಡಾ|| ಮೀನಾ, ನಮಸ್ತೆ.
ಲೇಖನ ಓದಿದ ಮೇಲೆ ನನಗನಿಸಿದ್ದು ಹೀಗೆ. ಹೊರದೇಶದಲ್ಲಿರುವ ನೀವುಗಳು ಅದ್ಭುತವಾದ ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸುತ್ತೀರೆಂದು ಕಾಣುತ್ತೆ. ನಿಮ್ಮಲ್ಲಿ ನಡೆದಿರುವ ವಿವಿಧ ಕಾರ್ಯಕ್ರಮಗಳ ಒಂದು ಸ್ಥೂಲ ಪರಿಚಯ ಲೇಖನ ಕೊಡಬಹುದೇ? ನಮಗೂ ಸ್ಪೂರ್ತಿ ಸಿಗಲಿ. ರಾಮನಿಗೆ ರುಚಿಯಾದ ಹಣ್ಣನ್ನು ಕೊಡಬೇಕೆಂಬ ಅವಳ ಮುಗ್ಧ ಚಿಂತನೆಯಿಂದ ಹಣ್ಣನ್ನು ಕಚ್ಚಿ ರುಚಿನೋಡಿ, ಅದು ಎಂಜಲಾಗಿದೆ ಎಂದು ಚಿಂತಿಸುವ ಗೋಜಿಗೆ ಹೋಗದೆ ಹಣ್ಣನ್ನು ಕೊಟ್ಟ ಘಟನೆ ಮಾತ್ರ ನಾನು ಕೇಳಿದ್ದೆ. ಆದರೆ ಇನ್ನೂ ಹೆಚ್ಚು ತಿಳಿಯಪಡಿಸಿದಿರಿ. ಧನ್ಯವಾದಗಳು.ನಿಲ್ಲಸದಿರಿ ಕೊಳಲ ಗಾನವ.

ಧನ್ಯವಾದಗಳು ! ಶ್ರೀಧರ್ ಅವರೆ,
ಅಂದಹಾಗೆ-ಅಲಮೇಲು ಐಯ್ಯಂಗಾರ್ ಅವರು ಪು.ತಿ.ನ. ಅವರ ಮಗಳು, ತುಂಬಾ ಹಾಸ್ಯ ನಾಟಕಗಳನ್ನು ಬರೆದು ಪ್ರದರ್ಶಿಸಿದ್ದಾರೆ ನಮಗೆಲ್ಲ. "ಉಪ್ ಟೊ ಡೇಟ್ ಅಂಬುಜಮ್ಮ", ಹೈಟೆಕ್ ಹಯವದನಾಚಾರ್" ಇತ್ಯಾದಿ.
~ಮೀನಾ.