ಗಣಿ ಮಹಾತ್ಮೆ

To prevent automated spam submissions leave this field empty.

Mining೨೦೦೩ ರ ನಂತರ ಜಗತ್ತಿನೆಲ್ಲೆಡೆ ಎಕಾನಮಿ ಬೂಮ್. ಅದರ ಜೊತೆಗೆ ಬಂತು ಚೀನಾದ ಒಲಂಪಿಕ್ಸ್ ಆಟ. ಕ್ರೀಡಾಂಗಣ ನಿರ್ಮಾಣಕ್ಕೆ ಬೇಕಿತ್ತು ಟನ್ ಗಟ್ಟಲೆ ಸ್ಟೀಲ್. ಇದಕ್ಕೆ ಸಹಕರಿಸಿದವರು ನಮ್ಮ ರಾಜ್ಯದ ಗಣಿ ಸಾಮ್ರಾಟರು. ಶುರುವಾಯಿತು ಗಣಿ ರಂಪಾಟ, ಕೇಳುವವರಿಲ್ಲ ಜನರ ಪರದಾಟ. ಚೀನಾದ ಕೃಪೆಯಿಂದ ಮಣ್ಣಿಗೂ ಬಂತು ಹೊನ್ನಿನ ಬೆಲೆ. ಲಾರಿ ತಯಾರಿಕರಿಗಂತೂ ಹಬ್ಬವೋ ಹಬ್ಬ. ಹಾಗೆ ರಾಜ್ಯದ ಬಂದರುಗಳು ಭರ್ಜರಿ ಹಣವನ್ನು ಎಣಿಸುತ್ತಿದ್ದವು. ರಾಜ್ಯದ ಲೆಕ್ಕವಿಲ್ಲದಷ್ಟು ಅರಣ್ಯ ಪ್ರದೇಶಗಳು ಬಯಲು ಪ್ರದೇಶವಾದವು. ಬಳ್ಳಾರಿ, ತುಮಕೂರು, ಚಿತ್ರದುರ್ಗ ಸೀಮೆಯ ಕೆಲವೇ ಮಂದಿ ದಿಡೀರ್ ಶ್ರೀಮಂತರಾದರು. ಯುವಕರು ಗಣಿ ಕೆಲಸಕ್ಕೆ ಇಳಿದರು. ಹಲವಾರು ಮಂದಿ ಕೃಷಿ ಬಿಟ್ಟು ಗಣಿಗೆ ಕೈ ಚಾಚಿದರು. ಗಣಿ ನಾಯಕರು ಪ್ರತ್ಯೇಕ ಹೆಲಿ-ಪಾಡ್ ಗಳ ಒಡೆಯರಾದರು.

ಆದರೆ ಇದರಿಂದ ಆದ ದುಷ್ಪರಿಣಾಮಗಳು ಯಾರಿಗೂ ಬೇಡ. ಕರ್ನಾಟಕದಲ್ಲಿ ಅತ್ಯಂತ ಭಯಾನಕ ಮತ್ತು ಹದೆಗೆಟ್ಟ ರಾಷ್ಟ್ರೀಯ ಹೆದ್ದಾರಿಗಳೆಂದರೆ ೧೭,೪೮,೬೩,೧೩. ಇವುಗಳಲ್ಲಿ ಅನೇಕ ಹೋಲಿಕೆಗಳು ಇದೆ. ಎಲ್ಲ ಹೆದ್ದಾರಿಗಳು ಕರಾವಳಿ ಮತ್ತು ಮಲೆನಾಡಿನ ಭಾಗ. ಹಾಗೆ ಎಲ್ಲ ಹೆದ್ದಾರಿಗಳು ಸಿಕ್ಕಾಪಟ್ಟೆ ಮಳೆ ಬೀಳುವ ಪ್ರದೇಶಗಳು. ಅಷ್ಟೇ ಅಲ್ಲ , ಎಲ್ಲ ಹೆದ್ದಾರಿಗಳು, ಗಣಿ ಲಾರಿಗಳು ಸಂಚರಿಸುವ ರಸ್ತೆಗಳು. ೨೦ ಟನ್ ಸಾಗಿಸಬೇಕೆಂಬ ನಿಯಮ ಇದ್ದರೂ ಸಹ ೪೦ ಟನ್ ಸಾಗಿಸುತ್ತಿದ್ದ ಲಾರಿಗಳಿಂದ, ಹೆದ್ದಾರಿ ಸಂಪೂರ್ಣ ಕುಸಿದುಹೊಗಿತ್ತು. ಅದರಲ್ಲೂ ಶಿರಾಡಿ ಘಾಟಿ(೪೮), ಉಡುಪಿ-ಕುಂದಾಪುರ(೧೭) ರಸ್ತೆಗಳು national-highway ಬದಲು notional-highwayಗಳಾಗಿದ್ದವು. ಸುಮಾರು ಎರಡು ವರ್ಷದ ಹಿಂದೆ ಕರಾವಳಿಯಲ್ಲಿ ಕಾಣಿಸುತ್ತಿದ್ದ ರಸ್ತೆಗಳು ಮೂರೇ ಬಗೆಯವು. ಒಂದು ಕೆಟ್ಟ ರಸ್ತೆ, ಎರಡನೆಯದು ಅತಿ ಕೆಟ್ಟ ರಸ್ತೆ, ಮೂರನೆಯದು ರಸ್ತೆಯೇ ಇಲ್ಲ. ಇದು ಗ್ರಾಮೀಣ ರಸ್ತೆ ಸ್ಥಿತಿ ಅಲ್ಲ, ಬದಲಾಗಿ ರಾಷ್ಟ್ರೀಯ ಹೆದ್ದಾರಿಗಳ ಅವಸ್ಥೆ. ಕಡೆಗೂ ಹೆದ್ದಾರಿ ಬಂದ್ ಮಾಡಿಸಿ ರಸ್ತೆ ದುರಸ್ತಿ ಆಯಿತು. ಇನ್ನು ಹೆದ್ದಾರಿ-೧೩ ಕ್ಕೆ ಬಂದರೆ ಆ ರಸ್ತೆಗೆ ರಾಷ್ಟ್ರೀಯ ಹೆದ್ದಾರಿ ಮಾನ್ಯತೆ ಹೇಗೆ ಕೊಟ್ಟರೋ ತಿಳಿಯದು. ಕೇವಲ ಒಂದು ಬಸ್ಸು ಹೋಗುವಷ್ಟು ಜಾಗ ಇರುವ ಕಡಿದಾದ ಮಾರ್ಗ. ಇದರಲ್ಲೂ ರಾಜಕೀಯ ನಡೆದಿರಬಹುದು. ತುಮಕೂರಿನಿಂದ ಸಾಗಿಸುವ ಗಣಿಗಳಿಗೆ ಮಂಗಳೂರಿಗೆ ಹೋಗಲು ಅತ್ಯಂತ ಸಮೀಪದ ಮಾರ್ಗ ಈಗಿರುವ ಹೆದ್ದಾರಿ-೧೩. ಗಣಿ ಲಾರಿಗಳಿಗೆ ರಾಷ್ಟ್ರೀಯ-ಹೆದ್ದಾರಿ ಬಿಟ್ಟರೆ ಬೇರೆ ಯಾವ ರಸ್ತೆಗಳಲ್ಲೂ ಅವಕಾಶವಿಲ್ಲ. ಅದಕ್ಕೆ ಇಂತಹ ಮಾರ್ಗಗಳನ್ನು ಸಹ ರಾಷ್ಟ್ರೀಯ-ಹೆದ್ದಾರಿಯಾಗಿ ಮಾರ್ಪಾಡು ಮಾಡಲಾಯಿತು.

ಕರಾವಳಿಯದು ಕೆಂಪು ಮಣ್ಣು. ಇದು ಲೂಸ್ ಸೋಯಿಲ್. ಅಂದರೆ ಮಳೆ ನೀರನ್ನು ಬೇಗ ಹೀರಿಕೊಳ್ಳುತ್ತದೆ. ಮಳೆಗಾಲದಲ್ಲಿ ಅತಿ ಭಾರದ ಲಾರಿಗಳು ಸಂಚರಿಸಿದಾಗ ತುಂಬಾ ಒತ್ತಡ ಬಿದ್ದು ರಸ್ತೆಗಳು ಕುಸಿದುಹೋಗುತ್ತದೆ. ಇದನ್ನು ತಡೆಯಲು ವೇ-ಬ್ರಿಡ್ಜ್ ಗಳನ್ನು ಸ್ಥಾಪಿಸಲು ಚಿಂತಿಸಲಾಯಿತು. ಬಂತು ಗಂಗೋಳ್ಳಿಗೆ ಒಂದು ವೇ-ಬ್ರಿಡ್ಜ್. ಎಂತಹ ವೇ-ಬ್ರಿಡ್ಜ್ ಎಂದರೆ ವಾರಕ್ಕೆ ಎರಡು ಬಾರಿ ಕೆಟ್ಟುಹೋಗದೆ ಇದ್ದರೆ ಅದಕ್ಕೆ ಸಂತೋಷವೇ ಇಲ್ಲ. ಇನ್ನೊಂದು ನೆಲ್ಯಾಡಿ ಮತ್ತೆ ಸಕಲೇಶಪುರದಲ್ಲಿ. ಇದರ ಬಗ್ಗೆ ಮಾತು ಬಂತೆ ವಿನಃ ವೇ-ಬ್ರಿಡ್ಜ್ ಮಾತ್ರ ಬರಲಿಲ್ಲ. ಇದರಲ್ಲೂ ರಾಜ್ಯದ ಮಹಾನ್ ಗಣಿ-ನಾಯಕರ ಪಾತ್ರ ಇದೆ ಎಂದು ನಿಸ್ಸಂದೇಹವಾಗಿ ಹೇಳಬಹುದಲ್ಲವೇ. ಇನ್ನು ಶಿರಾಡಿ ರಸ್ತೆಗೆ ಕಾಂಕ್ರೀಟ್ ಮಾಡುವ ಯೋಜನೆ ಪ್ರಸ್ತಾವನೆಯಾಗೆ ಉಳಿದಿದೆ.

Shiraadiಇನ್ನು ಜನರ ವ್ಯಥೆ ವರ್ಣಿಸಲಾಗದು. ಅದನ್ನು ಅನುಭವಿಸಿದವರಿಗೆ ಗೊತ್ತು. ಅಧಿಕ ಭಾರ ಹೊತ್ತ ಗಣಿ ಲಾರಿಗಳಿಂದ ರಸ್ತೆಯೆಲ್ಲ ಹೊಂಡಮಯವಾಗಿತ್ತು. ಮಂಗಳೂರು-ಉಡುಪಿ ೬೦ ಕಿ.ಮೀ ಸಂಚರಿಸಲು ಸುಮಾರು ೨ ಘಂಟೆ ತಗುಲುತ್ತಿತ್ತು. ಉಡುಪಿ-ಕುಂದಾಪುರ ಹೆದ್ದಾರಿಯಂತೂ ಕಂಬಳಕ್ಕೆ ಮಾಡಿಟ್ಟ ರಸ್ತೆಯಂತೆ ತೋರುತ್ತಿತ್ತು. ಇದರ ಮಧ್ಯೆ ಬೆನ್ನು ಮುರಿದುಕೊಂಡವರ ಸಂಖ್ಯೆ ಅದೆಷ್ಟೋ ತಿಳಿಯದು. ಇನ್ನು ಏರಿನಲ್ಲಿ ಹೋಗುವಾಗ 'ಡೋರಾ, ಡೋರಾ, ಡೋರಾ' ಎಂದು ಹತ್ತಲಿಕ್ಕೆ ಕಷ್ಟಪಡುವ ಹಾಗೆ ಇಳಿಜಾರಿನಲ್ಲಿ ಇಳಿಯುವಾಗ ಅತಿವೇಗದಲ್ಲಿ ಚಲಿಸುತ್ತಿದ್ದ(ಲಾರಿಯ ವೇಗ+ಭಾರದ ಗಣಿಯ momentum) ಗಣಿ ಲಾರಿಗಳನ್ನು ಹಿಂದಕ್ಕೆ ಹಾಕುವುದು ಒಂದು ಸಾಹಸವೇ ಸರಿ. ಏರಿನಲ್ಲಿ ಇಂಧನ ಉಳಿಸಲು ಚಾಲಕರು ೩ ನೆ ಗೆಯರ್ ನಲ್ಲಿ ಲಾರಿ ಚಲಾಯಿಸುತ್ತಿದ್ದರು. ಮಧ್ಯೆ ಲಾರಿ ನಿಂತರೆ ಹಿಂಬದಿ ವಾಹನಗಳ ಗತಿ ಅಧೋಗತಿ. ಆದ್ದರಿಂದ ಬಹಳಷ್ಟು ಮಂದಿ ೫೦ ಮೀ ಅಂತರ ಕಾಯ್ದುಕೊಳ್ಳುತ್ತಿದ್ದರು. ಮೊದಲೇ ೩೦೦೦೦ ಪಿ.ಸಿ.ಯು ಸಾಂದ್ರತೆ ಇರುವ ಮಂಗಳೂರು-ಕುಂದಾಪುರ ಹೆದ್ದಾರಿಯಲ್ಲಿ, ಇಂತಹ ಲಾರಿಗಳು ಅಡ್ಡ ಬಂದರೆ ಪಡ್ಚ. ಕೆಲವೊಮ್ಮೆ ೨ ಕಿ.ಮೀ chase ನಂತರ ಅವುಗಳನ್ನು ಹಿಮ್ಮೆಟ್ಟಿಸಲು ಸಾಧ್ಯ. ಒಟ್ಟೊಟ್ಟಿಗೆ ನಾಲ್ಕು ಲಾರಿಗಳು ಸಂಚರಿಸುತ್ತಿರುವಾಗ ಹಿಂಬದಿ ವಾಹನದವರ ಪಾಡು ಆ ದೇವನೇ ಬಲ್ಲ. ಅದರ ಜೊತೆಗೆ ಗಣಿಗೆ ಹೊದಿಕೆ ಹಾಕದೆ ಇರುವುದರಿಂದ, ಹಿಂಬದಿ ವಾಹನದವರಿಗೂ ಪವಿತ್ರ ಗಣಿಯ ಪ್ರೋಕ್ಷಣೆ ಬೇರೆ.

 

 

Shiraadiಇನ್ನು ಮಳೆಗಾಲ ಬಂದಾಗ ಹೆದ್ದಾರಿ ಸಂಪೂರ್ಣ ಕೆಸರುಮಯವಾಗುತಿತ್ತು. ಮಳೆಗಾಲದಲ್ಲಿ ಕಾರವಾರ ಬಂದರು ಬಂದ್. ಆಗ NMPTಗೆ ಬರುವ ಗಣಿ ಲಾರಿಗಳು ಮತ್ತಷ್ಟು ಅಧಿಕವಾಗುತ್ತದೆ. NMPT ತನಗೆ ಸಾಮರ್ಥ್ಯ ಇಲ್ಲದಿದ್ದರೂ ಸಾವಿರಾರು ಲಾರಿಗಳನ್ನು ಸ್ವೀಕರಿಸುತ್ತಿತ್ತು. ಇದರ ಪರಿಣಾಮ ಕಿಲೋಮೀಟರುಗಟ್ಟಲೆ ಟ್ರಾಫಿಕ್ ಜಾಮ್. ಇದರಿಂದಾಗಿ ಅನೇಕ ವಿದ್ಯಾರ್ಥಿಗಳಿಗೆ ಪರೀಕ್ಷೆ ತಪ್ಪಿಹೋದ ನಿದರ್ಶನಗಳೂ ಇವೆ. ಹಾಗೆಯೇ ಬಂಟ್ವಾಳ-ಸುರತ್ಕಲ್ ನಡುವೆ ಸುಮಾರು ನಾಲ್ಕು ವರ್ಷದಿಂದ ಚತುಷ್ಪದ ರಸ್ತೆ ಕಾರ್ಯ ನಡೆಯುತ್ತಿದೆ. ಇನ್ನು ಕಾಮಗಾರಿ ಕೇವಲ ೪೪% ಮಾತ್ರ ಮುಗಿದಿದೆ. ಮಳೆಗಾಲದಲ್ಲಿ ಈ ರಸ್ತೆ ಗದ್ದೆಯೆಂದೆ ಹೇಳಬಹುದು. ಎಂತಹ ನಾಚಿಕೆಗೇಡಿನ ಸಂಗತಿ. ಇದಕ್ಕೆ ಗುತ್ತಿಗೆದಾರರು ನೀಡುವ ದೂರು 'ಅತಿಯಾದ ಮಳೆ'. ಮುಂಬೈ-ಪೂನಾ ಷಟ್ಪಥ ರಸ್ತೆ ಕೂಡ ಇಂತಹ ಹವಾಮಾನ ಇರುವ ಪ್ರದೇಶದಲ್ಲೇ ಕಾರ್ಯಗತವಾಗಿದ್ದು ಎಂಬ ವಿಷಯ ಇವರಿಗೆ ಯಾವಾಗ ಅರ್ಥವಾಗುವುದೋ. ಈಗ ಸುರತ್ಕಲ್-ಕುಂದಾಪುರ ಚತುಷ್ಪಥ ಟೆಂಡರ್ ಹಂತದಲ್ಲಿದೆ. ಹೆದ್ದಾರಿ ಪ್ರಾಧಿಕಾರದವರು ಅದೇನು ಎರಡು ಸುತ್ತಿನ ಟೆಂಡರ್ ಕರೆಯುತ್ತಾರೋ, ಸುಮ್ಮನೆ ಸಮಯ ವ್ಯರ್ಥ ಮಾಡುತ್ತಾರೆ ಅನ್ನಿಸುತ್ತದೆ. ಕಡೆಗೂ ಆಯ್ಕೆ ಮಾಡುವುದು ೪ ವರ್ಷವಾದರೂ ಕೆಲಸ ಮುಗಿಸಲಾಗದ ಗುತ್ತಿಗೆದಾರರನ್ನು. ಇನ್ನು ಶಿರಾಡಿ ಬವಣೆ ಕೇಳಿದವರಿಲ್ಲ. ಟ್ರಾಫಿಕ್ ಜಾಮ್ ನಿಂದಾಗಿ ಅರ್ಧ ದಿನ ಘಾಟಿಯಲ್ಲೇ ಕಳೆದವರು ಅದೆಷ್ಟೋ ಜನ. ಆಹಾರ, ಶೌಚಾಲಯ ಇಲ್ಲದೆ ಜನರು ಪಟ್ಟ ಕಷ್ಟ ವಾಯು-ಮಾರ್ಗದಲ್ಲಿ ಸಂಚರಿಸುವ ನಮ್ಮ ಘನ ರಾಜಕಾರಣಿಗಳಿಗೆ ಹೇಗೆ ಗೊತ್ತಾಗಬೇಕು. ಶಿರಾಡಿ ಘಾಟಿಯಲ್ಲಿ ಗಣಿ ಲಾರಿಗಳು ಕುರಿ-ಮಂದೆ ತರಹ ನಿಲ್ಲುತ್ತಿದ್ದವು. ಕುರಿಗಳಿಗೆ ಸ್ವಲ್ಪ ಜೋರು ಮಾಡಿದರೆ ಆಚೆ ಸರಿಯುವವು, ಆದರೆ ಚಾಲಕರಿಗೆ ಬುದ್ಧಿ ಹೇಳಿದರೆ ಗೋರ್ಕಲ್ಲ ಮೇಲೆ ಮಳೆ ಸುರಿದಂತೆ. ಶಿರಾಡಿ ರಿಪೇರಿ ಹಂತದಲ್ಲಿರುವಾಗ ಘನ-ವಾಹನಗಳಿಗೆ ನಿಷೇಧ ಇತ್ತು. ಆದರೂ ನಿಯಮ ಮೀರಿ ಗಣಿ-ಲಾರಿಗಳು ಸಂಚರಿಸುತ್ತಿದ್ದವು. ಇದರ ಹೆಚ್ಚು ಲಾಭ ಪಡೆದವರು ಹಾಸನ ಪೊಲೀಸರು. ಒಂದೊಂದು ಲಾರಿಯಿಂದ ಸುಮಾರು ೨೦೦ರೂ ಕೀಳುತ್ತಿದ್ದರು. ಅಂದರೆ ಸುಮಾರು ೫೦೦ ಲಾರಿ ಅಂದಾಜು ಮಾಡಿದರೆ ಒಟ್ಟು ೧೨೦ ದಿನಕ್ಕೆ ೫೦೦*೨೦೦*೧೨೦ = ೧.೨ ಕೋಟಿ ಇವರ ಗಳಿಕೆ. ಲೋಕಾಯುಕ್ತರಿಗೆ ದೂರು ನೀಡಿದರೆ ಎಲ್ಲ ಹೊರಬೀಳಬಹುದು.


ರೈಲು ಮಾರ್ಗದಲ್ಲಿ ಗಣಿ ಸಾಗಿಸಿದರೆ ಲಾರಿಗಳ ಕಾಟ ಕಡಿಮೆ. ಆದರೆ ಇದರಲ್ಲೂ ಲಾಬಿ ಇದೆ. ಹಾಸನ-ಮಂಗಳೂರು ರೈಲು ಮಾರ್ಗದಲ್ಲಿ ದಿನಕ್ಕೆ ೮ ರೈಲು ಮಾತ್ರ ಸಂಚರಿಸಬಹುದು. ಅತ್ತ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಆಗಬೇಕಾದರೆ ಇನ್ನು ಎಷ್ಟು ದಶಕಗಳು ಕಳೆಯಬೇಕೋ. ಈ ಮಾರ್ಗಕ್ಕೆ ಪರಿಸರವಾದಿಗಳ ಕಾಟ. ಆದರೆ ಸಾವಿರಾರು ಗಣಿ ಲಾರಿಗಳು ಧೂಳೆಬ್ಬಿಸಿ ಪಶ್ಚಿಮ ಘಟ್ಟದಲ್ಲಿ ಕೋಲಾಹಲ ಮಾಡುತ್ತಿರುವದು ಇವರಿಗೆ ಗೋಚರಿಸುವುದಿಲ್ಲ. ಇನ್ನು ರೈಲು ಮಾರ್ಗ ಸಾಕಾರಗೊಂಡರೆ ಲಾರಿ ಮಾಲೀಕರು ನಷ್ಟ ಅನುಭವಿಸುತ್ತಾರೆ ಎಂಬ ಇನ್ನೊದು ಲಾಬಿ. ತಾಳಗುಪ್ಪ-ಹೊನ್ನಾವರ ರೈಲು ಮಾರ್ಗ ಇನ್ನು ಬಾಯಿ ಮಾತಿನಲ್ಲಿ ಮಾತ್ರ ಇದೆ. ಇದರ ಹಳಿ ಕಾಣಲು ನಾವು ಮುದುಕರಾಗುವ ತನಕ ಕಾಯಬೇಕಾಗುತ್ತದೆ. ಮಂಗಳೂರು-ಬೆಂಗಳೂರು ಒಂದು ರೈಲು ಕಷ್ಟದಲ್ಲಿ (ಕರಾವಳಿಯವರ ಹೋರಾಟದ ಫಲವಾಗಿ) ದಕ್ಕಿತು. ಹಗಲು ರೈಲು ಕೂಡ ಓಡಿದರೆ ಶಿರಾಡಿ ಘಾಟಿಯಲ್ಲಿ ಬಸ್ಸುಗಳ ಸಾಂದ್ರತೆ ಕಡಿಮೆಯಾಗುತ್ತದೆ. ಎಲ್ಲಿ ಬಸ್ಸುಗಳು ನಷ್ಟ ಅನುಭವಿಸುತ್ತವೋ ಎನ್ನುವ ಲಾಬಿ ಈ ರೈಲಿಗೆ ಅಡ್ಡಗಾಲು. ಈ ಬಸ್ಸುಗಳ ಮಾಲೀಕರು ಕೂಡ ಕರಾವಳಿಯ ಘನ ರಾಜಕಾರಣಿಗಳು. ಹಾಗೆ ಹಗಲು ರೈಲಿನಿಂದ ತಮ್ಮ ಗಣಿ ಸಂಚಾರಕ್ಕೆ ಎಲ್ಲಿ ತೊಂದರೆಯಾಗುವುದೋ ಎಂಬ ಲಾಬಿ ಕೂಡ ಬಲವಾಗಿ ಕಾರ್ಯ ಮಾಡುತ್ತಿದೆ. ಕೇವಲ ಲಾಭದ ಮೇಲೆ ಕಣ್ಣಿಟ್ಟಿರುವ ನೈರುತ್ಯ ರೈಲ್ವೆಗೆ ಈ ಲಾಬಿಗಳು ಫಲದ ರೂಪದಲ್ಲಿ ಬಂದಿದೆ.

ಹಾಗೆ ಕೇಳಿಬಂದ ಕೆಲವು ರೈಲುಗಳು:
೧) ಸಚಿವರೊಬ್ಬರು ಮಳೆಗಾಲದಲ್ಲಿ ಅದಿರು ರಫ್ತು ನಿಲ್ಲಿಸುವ ಬಗ್ಗೆ ಹೇಳಿಕೆ ಕೊಟ್ಟಿದ್ದರು. ಸಂಪುಟದಲ್ಲಿ ಇರುವವರೇ ಗಣಿ-ನಾಯಕರಾಗಿರುವಾಗ ಇಂತಹ ಹಾಸ್ಯಾಸ್ಪದ ಹೇಳಿಕೆಗಳು ಬೇರೆ.
೨) ದಿನಕ್ಕೆ ನಿಯಮಿತ ಲಾರಿಗಳನ್ನು ಮಾತ್ರ ಸ್ವೀಕರಿಸುವುದು. ಇದು NMPT ಹೇಳಿಕೆ. ಇದುವರೆಗೆ ಕಾರ್ಯಗತವಾಗಿಲ್ಲ.
೩) ಬೆಂಗಳೂರು-ಮಂಗಳೂರು ಹಗಲು ರೈಲಿನ ಬಗ್ಗೆ ಈಗಲೂ ರೈಲುಗಳನ್ನು ಕೇಳುತ್ತಿದ್ದೇವೆ.
೪) ಗಣಿ ಲಾರಿಗಳು ಈಗ ೨೦ ಟನ್ ಮಾತ್ರ ಭಾರ ಹೊರುತ್ತಿವೆ. ಇದು ವೇ-ಬ್ರಿಡ್ಜ್ ಅಧಿಕಾರಿಗಳ ಹೇಳಿಕೆ. ಅದಕ್ಕೆ ಈಗಲೂ ಕರಾವಳಿಯ ರಸ್ತೆಗಳಲ್ಲಿ ಹೋಂಡ ಬೀಳುತ್ತಲೇ ಇವೆ.
೫) ಶಿರಾಡಿ ಮುಕ್ಕಾಲು ಭಾಗ ಸ್ಥಿರವಾಗಿದೆ. ಸ್ವಲ್ಪ ಭಾಗ ಮಾತ್ರ ಕೆಟ್ಟು ಹೋಗಿದೆ. ಇದು ಇತ್ತೀಚಿಗಷ್ಟೇ ಬಂದ ಹೆದ್ದಾರಿ ಇಲಾಖೆಯ ಹೇಳಿಕೆ.

ಗಣಿ ರಫ್ತಿನಿಂದ ಬರುವ ಶುಲ್ಕ ತೀರ ಕಡಿಮೆ. ಇದರಿಂದ ವಯಕ್ತಿಕವಾಗಿ ಲಾಭ ಮಾಡಿಕೊಂಡವರ ಸ್ವತ್ತು ಸುಮಾರು ೨೫೦೦ ಕೋಟಿ. ಆದರೆ ಸರ್ಕಾರಕ್ಕೆ ಬಂದ ಹಣ ಕೇವಲ ೮೦ ಕೋಟಿ. ಹಾಸನ RTO ಮಾಹಿತಿ ಪ್ರಕಾರ ಅಧಿಕ ಭಾರದ ಲಾರಿಗಳಿಂದ ಸಂಗ್ರಹಿಸಿದ ದಂಡ ಸುಮಾರು ೫ ಕೋಟಿ. ಆದರೆ ಸಾರ್ವಜನಿಕ ಆಸ್ತಿಗಳಿಗೆ ಈ ಲಾರಿಗಳು (ಮುಖ್ಯವಾಗಿ ಹೆದ್ದಾರಿಗಳಿಗೆ) ಸುಮಾರು ೧೦೦ ಕೋಟಿಯಷ್ಟು  ನಷ್ಟವನ್ನುಂಟುಮಾಡಿದೆ. ಉಚ್ಚ ನ್ಯಾಯಾಲಯ ಹೇಳಿದಂತೆ ಸರಕಾರದವರೇ ಗಣಿ ನಿರ್ವಹಣೆ ಮಾಡಿದ್ದರೆ, ಅದರಿಂದ ಬಂದ ಹಣ ಅಭಿವೃದ್ದಿ ಕಾರ್ಯಕ್ಕೆ
ಉಪಯೋಗಿಸಬಹುದಿತ್ತು.ಉದ್ಯೋಗಾವಕಾಶಗಳು ಹೆಚ್ಚುತ್ತಿದ್ದವು. ಆದರೆ ಇದು ಯಾವ ರಾಜಕೀಯ ಪಕ್ಷಕ್ಕೂ ಬೇಡ. ಎಲ್ಲರಿಗೂ ಹಣ ಮಾಡುವುದೊಂದೇ ಗುರಿ. ಕೋಟಿಗಟ್ಟಲೆ ಹಣ ಇಟ್ಟುಕೊಂಡವರಿಗೆ ಇನ್ನು ಬೇಕೆನ್ನುವ ದುರಾಸೆ. ಇವರ ದುರಾಸೆಗೆ ಕೊನೆಯೇ ಇಲ್ಲ. ಭಾರತದಷ್ಟೇ ಅಲ್ಲ ಬ್ರೆಸಿಲ್  ನಲ್ಲಿ ಕೂಡ ಇದರ ಪರಿಣಾಮ ತೀವ್ರವಾಗಿದೆ. ವಿಶ್ವದಲ್ಲಿ ಅತ್ಯಂತ ವಿಶಿಷ್ಟ ಹಾಗೂ ವಿರಳ ಸಸ್ಯ-ಸಂಪತ್ತು ಮತ್ತು ವನ್ಯ ಮೃಗಗಳ ಭೇದವನ್ನು ಹೊಂದಿರುವ ಅಮೆಜಾನ್ ಮಳೆ ಕಾಡುಗಳು ಈಗ ಬಯಲು ಸೀಮೆಗಳಾಗಿವೆ. ಎಷ್ಟೋ ವಿಧದ ಸಸ್ಯ-ಪ್ರಾಣಿ ಪ್ರಭೇದಗಳು ನಶಿಸಿ ಹೋಗುತ್ತಿವೆ. ನಮ್ಮ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದು ರಫ್ತು ಮಾಡುತ್ತಿರುವ ಕಪಟ ರಾಜಕಾರಣಿಗಳಿಂದಾಗಿ ಮುಂದೊಂದು ದಿನ ನಾವು ಚಿನ್ನದ ಬೆಲೆ ಕೊಟ್ಟು ಸ್ಟೀಲನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗಬಹುದು. ಆಗ ಕಷ್ಟ ಪಡುವವರು ನಮ್ಮಂತಹ ಜನ-ಸಾಮಾನ್ಯರು. ರಾಜಕಾರಣಿಗಳಿಗೆ ಕೊಳ್ಳೆ ಹೊಡೆದ ಸಂಪತ್ತಿನ ಗಳಿಕೆ ಇರುತ್ತದಲ್ಲವೆ?

ಕೊನೆ ಹನಿ: ಸ್ವಲ್ಪ ದಿನದ ಹಿಂದೆ "ರಾಜ್ಯದಿಂದ ಒಂದು ಬಕೆಟ್ ಗಣಿ ಕೂಡ ರಫ್ತಾಗಕೂಡದು" ಎಂದು ಉಚ್ಚ ನ್ಯಾಯಾಲಯ ಆದೇಶ ನೀಡಿತು. ಇಷ್ಟಾಗಿಯೂ ಗಣಿ ಲಾರಿಗಳ ಮೆರವಣಿಗೆ NMPT ಮುಂದೆ ಈಗಲೂ ಕಾಣಬಹುದು.

**********************************************************************************
ಚಿತ್ರ ಕೃಪೆ: ಹಿಂದು ಪತ್ರಿಕೆ
ಪ್ಯಾಸೆಂಜರ್ ಕಾರ್ ಯುನಿಟ್: http://en.wikipedia.org/wiki/Passenger_car_equivalent
ರಾಷ್ಟ್ರೀಯ ಹೆದ್ದಾರಿ ೧೭: http://en.wikipedia.org/wiki/National_Highway_17_(India)
ರಾಷ್ಟ್ರೀಯ ಹೆದ್ದಾರಿ ೪೮: http://en.wikipedia.org/wiki/NH-48
ರಾಷ್ಟ್ರೀಯ ಹೆದ್ದಾರಿ ೬೩: http://en.wikipedia.org/wiki/National_Highway_63_(India)
ರಾಷ್ಟ್ರೀಯ ಹೆದ್ದಾರಿ ೧೩: http://en.wikipedia.org/wiki/National_Highway_13
ಹಾಸನ-ಮಂಗಳೂರು ರೈಲು ಮಾರ್ಗ: http://www.hmrdc.com/
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ: http://www.business-standard.com/india/storypage.php?autono=317080
ತಾಳಗುಪ್ಪ-ಹೊನ್ನಾವರ ರೈಲು ಮಾರ್ಗ: http://idd.kar.nic.in/IDD%20103%20NSW%2007.pdf
ಅಮೆಜಾನ್: http://en.wikipedia.org/wiki/Amazon_Basin
ಉಪಯೋಗಿಸಿದ ನಿಘಂಟು: http://www.baraha.com/kannada/index.php
***********************************************************************************

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

>>ಈ ಲಾರಿಗಳು (ಮುಖ್ಯವಾಗಿ ಹೆದ್ದಾರಿಗಳಿಗೆ) ಸುಮಾರು ೧೦೦ ಕೋಟಿಯಷ್ಟು ನಷ್ಟವನ್ನುಂಟುಮಾಡಿದೆ.
ಜನರಿಗಾಗುತ್ತಿರುವ ತೊಂದರೆಗಳ ಮಹಾಪೂರ ಲೆಕ್ಕಕ್ಕೆ ಹಿಡಿದರೆ, ಈ ನೂರು ಕೋಟಿಯ ಲೆಕ್ಕಾಚಾರ ಎಷ್ಟು ಸರಿ?
ಉತ್ತಮ (ಸಂಶೋಧನಾ) ಬರಹ.

ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು ಸರ್.

>>ಜನರಿಗಾಗುತ್ತಿರುವ ತೊಂದರೆಗಳ ಮಹಾಪೂರ ಲೆಕ್ಕಕ್ಕೆ ಹಿಡಿದರೆ, ಈ ನೂರು ಕೋಟಿಯ ಲೆಕ್ಕಾಚಾರ ಎಷ್ಟು ಸರಿ?
ಖಂಡಿತವಾಗಿ. ಜನರ ಕಷ್ಟ ರಾಜಕಾರಣಿಗಳಿಗೆ ಬೇಡ. ಅಂತಹ ರಾಜಕಾರಣಿಗೆ ಅಧಿಕಾರ ಕೊಡುವ ನಮ್ಮನ್ನು ನಾವೇ ಖಂಡಿಸಬೇಕು.