ಭಾರತೀಯ ಶಾಸ್ತ್ರೀಯ ಸಂಗೀತ -ಒಂದು ಇಣುಕು (ಭಾಗ ೧)

To prevent automated spam submissions leave this field empty.

ಲಾಸ್ ವೇಗಸ್ ನ್ ಡಾನ್ಸ್ ಬಾರೊಂದಕ್ಕೆ ಭೇಟಿ ನೀಡಿದ್ದ ನನ್ನ ಸ್ನೇಹಿತನೊಬ್ಬನನ್ನು ಅಲ್ಲಿನ ಡಾನ್ಸರೊಬ್ಬಳು ಭಾರತದ ಬಗ್ಗೆ ಕೇಳಿದಾಗ “India is a land of cultures” ಅಂತ ಥಟ್ಟೆಂದು ಉತ್ತರಿಸಿದನೆಂದು ಹೇಳಿದಾಗ ನನಗೆ ಅಭಾಸವಾದರೂ “ಭಾರತದ ಬಗ್ಗೆ ಮಾತನಾಡವಾಗ ಸಹಜವಾಗಿ ಅದರ ಪ್ರಾಚೀನ ಹಾಗು ಭವ್ಯ ಸಂಸ್ಕೃತಿಯ ಬಗ್ಗೆ ಮಾತನಾಡುವವರೇ ಹೆಚ್ಚು” ಎಂಬ ಮಾತು ಸ್ಪಷ್ಟವಾಯಿತು.
ಬಹುತೇಕ ಭಾರತೀಯರೂ, ಸ್ಥಳ ಕಾಲಗಳ ಪರಿವಿಲ್ಲದೇ ಈ ಸಾಂಸ್ಕೃತಿಕ ಬಳುವಳಿಯ ಬಗ್ಗೆ ಹೆಮ್ಮೆಯಿಂದ ಹೇಳುತ್ತಾ ಪ್ರಾಚೀನ ವೇದಗಳು , ಕಲಾಕೌಶಲ್ಯಗಳನ್ನು ಪ್ರಸ್ತಾಪಿಸುವುದನ್ನು ಕೇಳಿದ್ದೇನೆ.

ಮಾನವನ ಭಾವನೆಗಳನ್ನು, ಚಿಂತನೆಗಳನ್ನು ಹೊರಗೆಡಹುವ ಮಾಧ್ಯಮವಾದ ಕಲೆ ಹಾಗು ಅದೇ ಭಾವನೆಗಳನ್ನು ನೈತಿಕ ದೃಷ್ಟಿಯಿಂದ ಪರೀಕ್ಷೆಗೊಡ್ಡುವ ಅಧ್ಯಾತ್ಮಿಕತೆ, ವ್ಯತಿರಿಕ್ತ ವಿಚಾರಗಳಾದರೂ ಅವೆರಡನ್ನೂ ಒಟ್ಟಿಗೆ ಕೊಂಡೊಯ್ಯವ ಪ್ರಯತ್ನವನ್ನು ಪ್ರತಿಯೊಂದು ನಾಗರೀಕತೆಯಲ್ಲಿಯೂ ಕಾಣಬಹುದು.ಎಷ್ಟೊ ಬಾರಿ ಆಧ್ಯಾತ್ಮಿಕತೆಯ ಸೋಗಿನಲ್ಲಿ ಕಲೆಯನ್ನು ಹತ್ತಿಕ್ಕುವ ಪ್ರಯತ್ನ ನಡೆದಾಗ, ಅದನ್ನು ಸಮಾಜವು ಒಟ್ಟಾಗಿ ವಿರೋಧಿಸುವುದನ್ನೂ ನೋಡಬಹುದು. ( ಬಾಮಿಯಾನ್ ಬುದ್ಧ ಮೂರ್ತಿಗಳ ನಾಶ ಇದಕ್ಕೊಂದು ನಿದರ್ಶನ). ದಿನನಿತ್ಯದ ಜೀವನದಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಕಲಾ ಕೌಶಲ್ಯವನ್ನು ಆಳವಾಗಿ ಹಾಗು ಸರಳವಾಗಿ ಅಡಕಮಾಡಿಕೊಂಡ ನಾಗರೀಕತೆಗಳಲ್ಲಿ ನಮ್ಮ ದು ಪ್ರಮುಖವಾದುದು. ಕಲೆಗಳ ವಿವಿಧ ಪ್ರಕಾರಗಳಾದ ಸಂಗೀತ, ನಾಟ್ಯ, ಶಿಲ್ಪ ಹಾಗು ಚಿತ್ರ ಕಲೆಗಳಲ್ಲಿ ಸಾಧಿಸಿರುವ ಪ್ರಗತಿಯೇ ಇದಕ್ಕೆ ನಿದರ್ಶನ. ಆದರೂ ಇಂದು ಪ್ರೋತ್ಸಾಹದ ಕೊರತೆಯಿಂದ ಭಾರತೀಯ ಶಿಲ್ಪ ಹಾಗು ವರ್ಣಕಲೆಗಳು ಕುಂಠಿತಗೊಂಡಿವೆ. ಸಂಗೀತ ಹಾಗು ನಾಟ್ಯ ಕಲೆಗಳು ಅದೇ ಹಾದಿ ಹಿಡಿದಿವೆಯಾದರೂ ಇನ್ನೂ ಭಾರತೀಯರ ಜೀವನದ ಅಂಗವಾಗಿ ಉಳಿದಿವೆ.
ಈಗಲೂ ಪ್ರಸ್ತುತವಾಗಿ ಉಳಿದಿರುವ ಪ್ರಾಚೀನ ಕಲಾಪ್ರಕಾರಗಳಲ್ಲಿ ಪ್ರಮುಖವಾದ ಶಾಸ್ತ್ರೀಯ ಸಂಗೀತದ ಉಗಮ,ಬೆಳವಣಿಗೆ ಹಾಗು ಅದರ ಇಂದಿನ ಸ್ವರೂಪಕ್ಕೆ ಕಾರಣವಾದ ಘಟನೆಗಳ, ವ್ಯಕ್ತಿಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವೇ ಈ ಲೇಖನ.

ಒಬ್ಬ ಚರಿತ್ರಕಾರನಂತೆ ಶಾಸ್ತ್ರೀಯ ಸಂಗೀತವು ನಡೆದು ಬಂದ ಹಾದಿಯನ್ನು ಸಾಕ್ಷಿ ಪುರಾವೆಗಳಿಂದ ಅಚ್ಚುಕಟ್ಟಾಗಿ ಹಾಗು ನಿಖರವಾಗಿ ವಿವರಿಸುವ ಗೋಜಿಗೆ ಹೋಗದೆ,ಬರೆ ಸಂಗೀತಾಸಕ್ತನ ಉತ್ಸಾಹ ಮತ್ತು ಅಪಕ್ವತೆಯೊಂದಿಗೆ ಶಾಸ್ತ್ರೀಯ ಸಂಗೀತವನ್ನು ನೋಡುವ ಪ್ರಯತ್ನವಿದು.

ಶಾಸ್ತ್ರಿಯ ಸಂಗೀತದ ಇರುವಿಕೆಯ ಉಲ್ಲೇಖಗಳು ವೇದ ಕಾಲದಲ್ಲೇ ಕಾಣಬಹುದು. ಋಷಿಗಳ ತಮ್ಮ ಧ್ಯಾನ ಶ್ಲೋಕಗಳನ್ನು, ಮಂತ್ರಗಳನ್ನು ಉಚ್ಛರಿಸುವಾಗ ಹೊರಟ ಮಂದ್ರ ಶೃತಿಯೇ,ಮುಂದೆ ಹಲವಾರು ಅಯಾಮಗಳನ್ನು ಪಡೆದುಕೊಂಡು ಬೆಳೆದು ಹೆಮ್ಮರವಾಗಿ ಇಂದು ಅಧ್ಯಯನ/ಸಂಶೋಧನ ವಸ್ತುವಾಗಿದೆ.ಸಂಗೀತಕ್ಕು ಅಧ್ಯಾತ್ಮಕ್ಕು ಇರುವ ಸಂಬಂಧವನ್ನು ಸಾಮವೇದದಲ್ಲಿರುವ ಮಂತ್ರಗಳನ್ನು ರಾಗವಾಗಿ ಹಾಡುವ ಪದ್ಧತಿ ಇರುವುದನ್ನು ಗಮನಿಸಿದರೆ ತಿಳಿಯುತ್ತದೆ. ಭಾರತೀಯ ಶಾಸ್ತ್ರೀಯ ಸಂಗೀತದ ಮೊದಲ ಹಂತದ ಬೆಳವಣಿಗೆಯಾದದ್ದು ಅಧ್ಯಾತ್ಮಿಕ ಆಯಾಮದಲ್ಲಿ ಮಾತ್ರ. ಭಾರತೀಯ ಸಂಸ್ಕೃತಿಯ ವಿಶಿಷ್ಟ ಶಿಕ್ಷಣ ಪದ್ಧತಿಯಾದ ಗುರುಕುಲ ಶಿಕ್ಷಣದ ಆಶ್ರಯದಲ್ಲಿ ಬೆಳೆಯುತ್ತಾ ಮುಂದುವರಿದಾಗ ಸಂಗೀತದ ಕುರಿತು ಹಲವಾರು ಶಾಸ್ತ್ರಗಳು ರಚಿಸಲ್ಪಟ್ಟವು. ಸಂಗೀತದ ನಿಯಮ, ಸ್ವರೂಪ, ಹಾಗು ಬಳಕೆಯ ಬಗ್ಗೆ ಹಲವಾರು ಶಾಸ್ತ್ರಗಳು ಬರೆಯಲ್ಪಟ್ಟರಿಂದಲೇ ಸಂಗೀತಕ್ಕೆ “ಶಾಸ್ತ್ರೀಯ ಸಂಗೀತ”ವೆನ್ನುವರು.ಇವುಗಳಲ್ಲಿ ದತ್ತಿಲನ "ದತ್ತಿಲಂ", ನಾರದನ "ನಾರದೀಯ ಶಿಕ್ಷಾ" ಪ್ರಮುಖವಾದವು. ಸಂಗೀತ ಶಾಸ್ತ್ರಗಳು ಸಂಸ್ಕೃತ ಭಾಷೆಯಲ್ಲಿ ಮಾತ್ರ ರಚಿತವಾಗದೇ ತಮಿಳು ಮಹಾಕಾವ್ಯವಾದ "ಶಿಲಪ್ಪಡಿಕಾರಮ್" ನಲ್ಲಿಯೂ ಉಲ್ಲೇಖಗಳನ್ನು ಕಾಣಬಹುದು.
ಮುಂದೆ ಅರಮನೆಗಳ ಪ್ರತಿಷ್ಟೆಯ ಸಂಕೇತವಾದಗಲೂ ಶಾಸ್ತ್ರರಚನೆಯು ಕುಂದಲಿಲ್ಲ.ಜಯದೇವನ "ಗೀತಗೋವಿಂದ" , ಸಾರಂಗದೇವನ "ಸಂಗೀತ ರತ್ನಾಕರ" ಹೀಗೆ ಸಾಕಷ್ಟು ರಚನೆಗಳಾದವು. ೧೦ನೇ ಶತಮಾನದಲ್ಲಿ ಸ್ವರಗಳನ್ನು ಪ್ರಾಣಿಗಳ ಕೂಗಿಗೆ ಹೋಲಿಸುವ ಸಿದ್ಧಾಂತಗಳು, ರಾಗಗಳ ಸಮಯವನ್ನು ನಿರ್ಧರಿಸುವ ಸಿದ್ಧಾಂತಗಳ, ಮುಂತಾದುವುಗಳ ಪ್ರಸ್ತಾಪ ಶಾಸ್ತ್ರಗಳಲ್ಲಿ ಗಮನಿಸಿದರೆ ಇದು ಸಂಗೀತಕ್ಕೆ ಒಳ್ಳೆಯ ಕಾಲವೇನ್ನಿಸುತ್ತದೆ.
ಈ ಕಾಲದಲ್ಲಿ ರೂಪುಗೊಂಡ ಸಂಗೀತದ ಶೈಲಿಗೆಗೆ "ಪ್ರಭಂದ"ವೆಂದು ಹೆಸರು.

ಅರಮನೆಗಳಲ್ಲಿ ಸಂಗೀತಕ್ಕೆ ಸಿಕ್ಕ ವಿಶೇಷ ಸ್ಥಾನವು ಎರಡಲುಗಿನ ಕತ್ತಿಯೇ ಆಯಿತು.ಸಂಗೀತ ಬಲ್ಲವರ ಪಾಂಡಿತ್ಯ ಪ್ರದರ್ಶನ ವೇದಿಕೆಯಾಗುವ ಜೊತೆಗೆ, ಅವರ ಜಂಭ,ಅಹಂಕಾರಗಳ ಪ್ರದರ್ಶನ ವೇದಿಕೆಯಾದದ್ದು ನನಗೆ ವಿಚಿತ್ರವಾಗಿ ತೋರುತ್ತದೆ. ಎಲ್ಲ ಸಫಲ ವ್ಯವಸ್ಥೆಗಳಂತೆ ಸತ್ವವನ್ನು ಗುರುತಿಸಿ ಗೌರವಿಸುವವರು ಹಾಗು ಜಳ್ಳನ್ನು ಗುರುತಿಸಿ ಹೊರಗಟ್ಟುವವರು ಇದ್ದರಿಂದ ಸಂಗೀತವು ಹಾದಿತಪ್ಪದೆ ಉಳಿಯಿತೆನ್ನಬಹುದು.
ಸುಮಾರು ಹನ್ನೊಂದನೇ ಶತಮಾನದ ಅಂತ್ಯದಲ್ಲಿ ಪಶ್ಚಿಮದಿಂದ ಅರಬ್ ಸೈನ್ಯಗಳ ಧಾಳಿ ಪ್ರಾರಂಭವಾದಾಗ ಎಲ್ಲ ಕಲೆಗಳಂತೆ ಸಂಗೀತವನ್ನು ಅನಿಶ್ಚಿತತೆ ಕಾಡುತ್ತಿತ್ತು.ರಾಜಾಶ್ರಯದ ಜೊತೆಗೆ ಮಠ,ದೇವಸ್ಥಾನಗಳು ಸಂಗೀತಗಾರರ ಆರ್ಥಿಕ ಹಾಗು ಸಾಮಾಜಿಕ ಪ್ರೋತ್ಸಾಹಕರಾಗಿದ್ದವು.ಹಿಂದೂ ರಾಜ್ಯಗಳ ಸೋಲು, ದೇವಸ್ಥಾನಗಳ,ಪ್ರಮುಖ ಸಾಂಸ್ಕೃತಿಕ ಕೇಂದ್ರಗಳ ನಾಶವನ್ನು ಪರಿಗಣಿಸಿದರೆ ಇದು ಸಂಗೀತಕ್ಕೆ ಸಂದಿಗ್ಧಕಾಲವೇ ಸರಿ.ಆದರೆ ಆದ್ದದ್ದೇ ಬೇರೆ.ಭಾರತ ಉಪಖಂಡದವು ಇಸ್ಲಾಂ ಧರ್ಮದ ಪ್ರಭಾವಕ್ಕೊಳಗಾಗ ತೊಡಗಿದಾಗ ಎಲ್ಲ ಕಲೆಗಳಲ್ಲಿಯು ಮಾರ್ಪಾಟ್ಟುಗಳು ಆಗತೊಡಗಿದವು.
ಪ್ರಧಾನವಾಗಿ ಭಕ್ತಿಯ ಮಾಧ್ಯಮವಗತೊಡಗಿದ್ದ ಸಂಗೀತಕ್ಕೆ ಈಗ ಎಲ್ಲ ಆಯಾಮಗಳಲ್ಲಿ ವಿಸ್ತಾರಗೊಳ್ಳಬೇಕಾದ ಅಗತ್ಯವು ಬಂದೊದಗಿತು.ಜೊತೆಗೆ ಪರ್ಶಿಯನ್ ಸಂಸ್ಕೃತಿಯು ಅಂಶಗಳು ಭಾರತೀಯ ಕಲೆಗಳಲ್ಲಿ, ಹಾಗು ಭಾರತೀಯ ಸಂಸ್ಕೃತಿಯ ಅಂಶಗಳು ಪರ್ಶಿಯನ್ ಸಂಸ್ಕೃತಿಯಲ್ಲಿ ಅಡಕವಾಗತೊಡಗಿದವು.ಈ ಸಾಂಸ್ಕೃತಿಕ ವಿನಿಮಯದ ಫಲವಾಗಿ ಸಿತಾರ್ ಸರೋದ್, ತಬಲ ಮುಂತಾದ ವಾದ್ಯಗಳ ಭಾರತೀಯ ಸಂಗೀತಕ್ಕೆ ಪರಿಚಯವಾದರೆ ಕೊಳಲು, ವೀಣೆಗಳು ಪರ್ಶಿಯನ್ ಸಂಗೀತಕ್ಕೆ ಪರಿಚಯವಾದವು.

ಒಂದು ವ್ಯವಸ್ಥೆಯಲ್ಲಿ ಬದಲಾವಣೆಗಳ ಗಾಳಿ ಬೀಸತೊಡಗಿದಾಗ ಕೆಲವರು ಹೊಂದಿಕೊಂಡು ಪ್ರತ್ಯೇಕ ವ್ಯವಸ್ಥೆಯನ್ನು ಸ್ಥಾಪಿಸುವುದು ಸಾಮಾನ್ಯ. ಈ ಮಾತು ಹಿಂದುಸ್ಥಾನಿ ಸಂಗೀತದ ಮಟ್ಟಿಗಂತೂ ನಿಜವೆನ್ನಬಹುದು. ಇದು ಶಾಸ್ತ್ರೀಯ ಸಂಗೀತದ ಸಂಕ್ರಮಣಕಾಲವೆಂದರೆ ತಪ್ಪಾಗುವುದಿಲ್ಲ. ಇಸ್ಲಾಂ ಧರ್ಮದ ಪ್ರಭಾವ ಉತ್ತರ ಭಾರತಕ್ಕೆ ಸೀಮಿತವಾದುದರಿಂದ ದಕ್ಷಿಣ ಭರತದ ಸಂಗೀತ ಪದ್ಧತಿಯು ಇಂತಹ ಬದಲಾವಣೆಗಳಿಂದ ಪ್ರಭಾವಿತವಾಗದೇ ಮೂಲ ಸ್ವರೂಪದಲ್ಲೇ (ಅಂದರೆ ಪ್ರಬಂಧ ಶೈಲಿಯಲ್ಲಿ) ಉಳಿಯಿತು.ಉತ್ತರ ಹಾಗು ದಕ್ಷಿಣ ಭಾರತೀಯ ಸಂಗೀತ ಪದ್ಧತಿಗಳು ಕವಲೊಡೆದು ಬೇರೆ ಬೇರೆ ಹಾದಿ ಹಿಡಿದವು.ದಕ್ಷಿಣ ಭಾರತೀಯ ಪದ್ಧತಿಯು ಈಗಿನ ಕರ್ನಾಟಕ ಸಂಗೀತ ಪದ್ಧತಿಯಾಗಿ ಭಕ್ತಿ ಪ್ರಧಾನವಾದರೆ ಉತ್ತರ ಭಾರತದ ಸಂಗೀತವು ಈಗಿನ ಹಿಂದುಸ್ಥಾನಿ ಸಂಗೀತವಾಯಿತು.ಪ್ರಬಂಧ ಸ್ವರೂಪದಲ್ಲಿದ್ದ ಪ್ರಾಚೀನ ಸಂಗೀತವು ಉತ್ತರ ಭಾರತದಲ್ಲಿ ಅವಸಾನಗೊಂಡು "ಧ್ರುಪದ್" ಶೈಲಿಯ ಉಗಮವಾಗತೊಡಗಿತು.

ಧ್ರುಪದ್ ಶೈಲಿಯ ಉಗಮ ಕಾಲವು ಸ್ಪಷ್ಟವಾಗಿಲ್ಲ. ಸಾರಂಗದೇವನ "ಸಂಗೀತ ರತ್ನಾಕರ" ದಲ್ಲಿ ಅದರ ಉಲ್ಲೇಖಗಳು ಕಾಣದಿದ್ದರೂ, ಆಮಿರ್ ಖುಸ್ರೋ ಕಾಲಕ್ಕೆ ಅದು ಬಹು ಪ್ರಖ್ಯಾತವಾಗಿತ್ತು.ಕೆಲವರು ೨೦೦೦ ವರ್ಷ ಹಳೆಯದೆಂದು ಹೇಳುತ್ತಾರಾದರೂ, ಸಂಗೀತದ ಪ್ರಧಾನ ಶೈಲಿಯ ಸ್ಥಾನಮಾನ ದೊರೆತದ್ದು ಕ್ರಿ ಶ ೧೩-೧೫ ಶತಮಾನದಲ್ಲಿಯೇ.ಮೊಘಲರ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಗೆ ತಲುಪಿದ ಈ ಶೈಲಿಯ ವಿಶೇಷ ಗುಣವೆಂದರೆ,ಅದರ ಧ್ಯಾನ ಪ್ರಧಾನ ಗುಣ. ಇದು ದೇವರ ಸಾನಿಧ್ಯದಲ್ಲಿ ಹಾಡುವ ಸಂಗೀತವಾಗುವುದರ ಜೊತೆಗೆ ಅರಮನೆಗಳ ಅಸಹಜ ಗಾಂಭೀರ್ಯ ತುಂಬಿದ ವಾತಾವರಣದಲ್ಲಿ,ಉಲ್ಲಾಸವನ್ನು ಉಂಟು ಮಾಡುವ ಸಂಗೀತವೆನ್ನಿಸುತ್ತದೆ.ನಾನು ಮೊದಲ ಬಾರಿ ಧ್ರುಪದ್ ಕೇಳಿದಾಗ ದೇವರ ಮುಂದೆ ಕುಳಿತ ಭಕ್ತಿಪರವಶವಾಗಿ ಹಾಡುವ ಕಲಾವಿದನ ಚಿತ್ರ ಮನಸ್ಸಿಗೆ ಬಂದಿತು.ಈ ಶೈಲಿಯ ಒಂದು ಸಣ್ಣ ನಮೂನೆ [:http://www.musicalnirvana.com/li3zab37xyfr4vj7/gundecha%20brothers%20-%2...|ಈ ಕೊಂಡಿಯಲ್ಲಿದೆ].

"ಮಲ್ಹರ್" ರಾಗ ಸಮೂಹಗಳ ಜನಕ ತಾನ್ಸೇನ್ ಧ್ರುಪದ್ ಶೈಲಿಯಲ್ಲೇ ಹಾಡುತ್ತಿದ್ದು. ಮೊಘಲ್ ಚಕ್ರವರ್ತಿಯ ಗೌರವಕ್ಕೆ ಪಾತ್ರನಾದ ತಾನ್ಸೇನ್ ನ ಗುರು ಸ್ವಾಮಿ ಹರಿದಾಸ್, ಅಕ್ಬರ್ನ ಅಸ್ಥಾನದಲ್ಲಿ ಬೈಜು ಬಾವರ ಮುಂತಾದ "ಧ್ರುಪದಿಯಾ"ಗಳು(ಧ್ರುಪದ್ ಸಂಗೀತಗಾರರು) ಧ್ರುಪದ್ ಶೈಲಿಯ ಪ್ರಮುಖ ಗಾಯಕರು.
ಶಾಸ್ತ್ರಗಳಲ್ಲಿ, ಸಂಗೀತವನ್ನು "ನಾದಬ್ರಹ್ಮ"ನೆಂದು ಸಂಭೋದಿಸಿ, ಮೋಕ್ಷ ಪಡೆಯುವ ದಾರಿಗಳಲ್ಲಿ ಒಂದೆಂದು ಹೇಳಿರುವುದನ್ನು ಈ ಕಾಲದ ಜನ ಬಲವಾಗಿ ನಂಬಿದ್ದರೆಂದು ತೋರುತ್ತದೆ.ಸಂಗೀತವನ್ನು ದೈವೀಕತೆಯನ್ನು ಸಮಾನವಾಗಿ ಕಂಡ ಕಾಲವಿದು. ಅದ್ದರಿಂದಲೇ ಏನೋ, ಸಂಗೀತದಿಂದ ಮಳೆಗರೆಸುವ,ದೀಪಗಳನ್ನು ಬೆಳಗಿಸುವ,ಸತ್ತ ಮನುಷ್ಯನನು ಬದುಕಿಸುವ ಘಟನೆಗಳು ಈ ಕಾಲದಲ್ಲಿ ಹೇರಳವಾಗಿದ್ದು ಹಿಂದೂಸ್ಥಾನೀ ಸಂಗೀತದ ದಂತಕಥೆಗಳಾಗಿ ಉಳಿದಿವೆ.
ಹೀಗೆ ಮೆರೆದ ಧ್ರುಪದ್ ಶೈಲಿಯು ೧೮ನೆ ಶತಮಾನದಿಂದ ಅವಸಾನವಾಗತೊಡಗಿತು.ಧ್ರುಪದ್ ಸಂಗೀತವನ್ನು ಪುನರುಜ್ಜೀವಗೊಳಿಸುವ ಪ್ರಯತ್ನವನ್ನು ಒಂದು ಕುಟುಂಬವು ತನ್ನ ತಲೆಯ ಮೇಲೆ ಹಾಕಿಕೊಂಡಿರುವುದು ಕುತೂಹಲದ ವಿಷಯ. ಡಾಗರ್ ಕುಟುಂಬವು ೨೧ ತಲೆಮಾರುಗಳಿಂದ ಈ ಧ್ರುಪದ್ ಶೈಲಿಯನ್ನು ಕಾಪಾಡಿಕೊಂಡು ಬರುತ್ತಿದೆ.ಇವರ ಗಾಯನ ಶೈಲಿಗೆ ಡಾಗರ್ ವಾಣಿ ಎಂದು ಹೆಸರು.
ಡಾಗರ್ ಕುಟುಂಬದವರು ಮೂಲತಃ ಬ್ರಾಹ್ಮಣ ಕುಲದವರು. ಅವರ ವಂಶಜ ಬಾಬ ಗೋಪಾಲ್ ದಾಸ್ ಪಾಂಡೆ ಮೊಘಲ್ ರಾಜನಾದ ಅಹ್ಮದ್ ಶಾಹ್ "ರಂಗಿಲೆ" ಕೊಟ್ಟ ಪಾನ್(ಎಲೆ ಅಡಿಕೆ) ಸ್ವೀಕರಿಸಿದನೆಂದು ಅವನ ಕುಲದವರು ಬಹಿಷ್ಕಾರ ಹಾಕಿದಾಗ, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಇಮಾಂ ಭಕ್ಷ್ ಡಾಗರ್ ಎಂಬ ಹೆಸರಿಟ್ಟುಕೊಂಡು ಡಾಗರ್ ಮನೆತನದ ಸ್ಥಾಪಕನಾದನು.
ಶ್ರದ್ಧಾಳು ಮುಸಲ್ಮಾನರಾದರೂ, ಯಾವುದೇ ಹಿಂಜರಿತವಿಲ್ಲದೇ ದರ್ಬಾರಿ ಕಾನಡ ರಾಗದಲ್ಲಿ ಸರಸ್ವತಿಯನ್ನು ಹಾಡಿ ಹೊಗಳುವು ಡಾಗರ್ ಸಹೋದರರ ಸಂಗೀತವನ್ನು ಕೇಳುವಾಗ,ಜಾತಿ-ಮತಗಳ ಕಟ್ಟಳೆಗಳನ್ನು ಬದಿಗೊತ್ತಿದ ಸಂಗೀತವು "ನಾದಬ್ರಹ್ಮ" ಎಂದು ಒಮ್ಮೆ ನನಗೆ ಅನಿಸಿದ್ದುಂಟು.ಆದರೂ ವಾಸ್ತವವಾಗಿ ಯೋಚಿಸಿದಾಗ, ಇದು ಅವರು ತಾವಾಗಿಯೇ ಆರಿಸಿಕೊಂಡ ಕುಲಕಸುಬು/ಜೀವನೋಪಾಯ,ಜಾತಿ ಕುಲಗಳ ಬಗ್ಗೆ ಯೋಚಿಸುತ್ತಾ ಕುಳಿತರೆ ಅವರ ಕಲೆಗೆ ಬೆಲೆಕೊಡುವವರಾದರೂ ಯಾರು ? ಅನ್ನಿಸಿತು.ಆದ್ದರಿಂದ ಕಾಂಗ್ರೆಸ್ ರಾಜಕಾರಣಿಗಳಂತೆ ಜಾತ್ಯಾತೀತತೆಯ ಉದಾಹರಣೆಯಾಗಿ ಕೊಂಡಾಡದೇ,ಅವರು ಮಾಡುತ್ತಿರುವ ಕೆಲಸಕ್ಕೆ ಗೌರವದಿಂದ ಕಾಣುವುದೇ ನನಗೆ ಸರಿಯೆನ್ನಿಸುತ್ತದೆ.

ಸಂಗೀತಕಾರರಲ್ಲಿ ಧರ್ಮ ಬದಲಾಯಿಸಿಕೊಂಡ ಉದಾಹರಣೆಗಳು ವಿರಳವೇನಲ್ಲ,ತಾನ್ಸೇನ್ ಕೂಡ ವೃದ್ಧಾಪ್ಯದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದುಂಟು.ಆದರೂ ಅವನ ವಂಶದವರು ತಮ್ಮನ್ನು "ಸೇನಿಯ" ಘರಾನ ದವರೆಂದು ಸಂಭೋದಿಸಿಕೊಳ್ಳುತ್ತಾರೆ. ಸಂಗೀತಗಾರರ ಕುಲ-ಗೋತ್ರಗಳ ವಿಷಯದ ಚರ್ಚೆ ಇಲ್ಲಿ ಅನಗತ್ಯವಾಗಿತ್ತೆಂದು ಓದುಗರಿಗೆ ಅನ್ನಿಸಿದರೆ,ಮನ್ನಿಸಬೇಕು.ಭಾರತದ ಚರಿತ್ರೆಯಲ್ಲಿ ಮತ-ಧರ್ಮಗಳು ಎಲ್ಲ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿ, ಅವುಗಳ ಇಂದಿನ ಸ್ವರೂಪಕ್ಕೆ ಕಾರಣವಾಗಿವೆ.ಆದ್ದರಿಂದ ಈ ಮತ-ಧರ್ಮಗಳ ಉಲ್ಲೇಖ ನನಗೆ ಅಗತ್ಯವೆನ್ನಿಸಿತು. ಸರಿ,ಕುಲ-ಗೋತ್ರಗಳ ಚರ್ಚೆಯನ್ನು ಸದ್ಯಕ್ಕೆ ಬದಿಗೊತ್ತಿ ಸ್ವಲ್ಪ ದಕ್ಷಿಣದ ಕಡೆ ಗಮನ ಹರಿಸೋಣ.

(ಸಶೇಷ)

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸಂಗೀತಕ್ಕು ಅಧ್ಯಾತ್ಮಕ್ಕು ಇರುವ ಸಂಬಂಧವನ್ನು ಸಾಮವೇದದಲ್ಲಿರುವ ಮಂತ್ರಗಳನ್ನು ರಾಗವಾಗಿ ಹಾಡುವ ಪದ್ಧತಿ ಇರುವುದನ್ನು ಗಮನಿಸಿದರೆ ತಿಳಿಯುತ್ತದೆ. ಭಾರತೀಯ ಶಾಸ್ತ್ರೀಯ ಸಂಗೀತದ ಮೊದಲ ಹಂತದ ಬೆಳವಣಿಗೆಯಾದದ್ದು ಅಧ್ಯಾತ್ಮಿಕ ಆಯಾಮದಲ್ಲಿ ಮಾತ್ರ.

ನಮ್ಮ ಬಹುತೇಕ ಕಲಾಪ್ರಕಾರಗಳು ಶಾಸ್ತ್ರೀಯ ರೂಪ ಪಡೆಯಲು ಬಹು ಮುಖ್ಯ ಕಾರಣವೇ ಕಲೆಯನ್ನು ಬಳಸಿ ಆತ್ಯಂತಿಕವಾದ ಸತ್ಯವೊಂದನ್ನು ಕಾಣುವ ಪ್ರಯತ್ನ ನಡೆಸಿದ್ದು. ಗುರು ನಿತ್ಯ ಚೈತನ್ಯ ಯತಿ ನಾದಯೋಗಿಯೊಬ್ಬರ ಕುರಿತಂತೆ ಬಹಳ ಕುತೂಹಲಕಾರಿ ಅನುಭವವೊಂದನ್ನು ದಾಖಲಿಸಿದ್ದರು. ಇದನ್ನು ನಾನೇ ಕನ್ನಡಕ್ಕೆ ಅನುವಾದಿಸಿದ್ದೆ. ಅದೀಗ ನನ್ನ ಬ್ಲಾಗ್ ನಲ್ಲಿ ಇದೆ.

ಹಿಂದೂಸ್ಥಾನಿ ಹಾಗು ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಕಾರಗಳು ತಮ್ಮ ತಮ್ಮ ಹಾದಿ ಹಿಡಿದಿದ್ದರೂ, ಅವುಗಳನ್ನು ಪ್ರತ್ಯೇಕ ಸಂಗೀತ ಸಂಪ್ರಾದಾಯಗಳನ್ನಾಗಿ ಗುರುತಿಸುವ ಮೊದಲ ಪ್ರಯತ್ನ ಹರಿಪಲ್ಲವದೇವನ "ಸಂಗೀತ ಸುಧಾಕರ" ದಲ್ಲಿ ಕಾಣಬಹುದು.
ದಕ್ಷಿಣದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯಾಗಿ ಕರ್ನಾಟಕ ಸಂಗೀತಕ್ಕೆ ವಿಶೇಷ ಪ್ರೋತ್ಸಾಹ ದೊರೆಯತೊಡಗಿತು.ಆ ಸಾಮ್ರಾಜ್ಯದ ಸ್ಥಾಪಕರಾದ ಋಷಿ ವಿದ್ಯಾರಣ್ಯರು "ಸಂಗೀತಸಾರ" ದಲ್ಲಿ ರಾಗಗಳನ್ನು ಆಳವಾಗಿ ಅಧ್ಯಯನ ಮಾಡಿ, ಆಲಾಪನೆಗಳ ಪ್ರಾಮುಖ್ಯತೆಯ ಬಗ್ಗೆ, ಅವುಗಳ ಪ್ರಯೋಗದ ಬಗ್ಗೆ ವಿವರಿಸಿದ್ದಾರೆ.ಜೊತೆಗೆ ರಾಗಗಳನ್ನು ಮೇಳ ಹಾಗು ಜನ್ಯ ರಾಗಗಳಾಗಿ ವಿಂಗಡನೆ ಮಾಡುವ ಪ್ರಯತ್ನವನ್ನು ಕೂಡ ಕಾಣಬಹುದು.ಈ ರಚನೆಯನ್ನು ಆಧಾರಿಸಿ, ಮುಂದೆ ರಾಮಮಾತ್ಯ ಹಾಗು ವೆಂಕಟಮಾಖಿ ವಿದ್ಯಾರಣ್ಯರ ಕೆಲವನ್ನು ವಿಸ್ತರಿಸಿ ರಾಗಗಳ ವಿಶದವಾದ ವಿಂಗಡನೆ ಹಾಗು ವಿವರಣೆಯನ್ನು ನೀಡಿದರು.ಕರ್ಣಾಟಕ ಸಂಗೀತದ ಮಟ್ಟಿಗೆ ರಾಮಮಾತ್ಯರ ಕೊಡುಗೆ ಪ್ರಮುಖವಾದುದು.ರಾಮಮಾತ್ಯನು "ಸ್ವರಮೇಳ ಕಲಾನಿಧಿ"ಯಲ್ಲಿ ಅಂದಿನ ಕಾಲದಲ್ಲಿ ಪ್ರಚಲಿತವಾಗಿದ್ದ ಸಂಗೀತದ ವಿವಿಧ ಅಂಗಗಳ ವ್ಯತಿರಿಕ್ತ ಗ್ರಹಿಕೆಗಳನ್ನು ವಿಶ್ಲೇಷಿಸಿ,ಕರ್ಣಾಟಕ ಸಂಗೀತಕ್ಕೆ ಒಂದು ಸ್ಪಷ್ಟ ನಿಯಮಗಳ ಚೌಕಟ್ಟಿಗೆ ಒಳಪಡಿಸಿ ಈಗಿನ ಸಂಗೀತ ಸ್ವರೂಪಕ್ಕೆ ಬುನಾದಿಯಿಟ್ಟರು.ಬಹುಶಃ ಇಂತಹ ಕೂಲಂಕಶ ವಿವರಣೆಗಳಿಂದ ಕರ್ಣಾಟಕ ಸಂಗೀತವನ್ನು ಪ್ರಮಾಣೀಕರಿಸಿದ್ದರಿಂದ ಹಿಂದೂಸ್ಥಾನಿ ಸಂಪ್ರದಾಯದಲ್ಲಿನ ವಿವಿಧ ಘರಾನಗಳಂತೆ ಕರ್ಣಾಟಕ ಸಂಗೀತದಲ್ಲಿ ವಿವಿಧ ಪ್ರಕಾರಗಳು ಬಳಕೆಗೆ ಬರಲಿಲ್ಲ.ರಾಮಮಾತ್ಯರು ವೀಣೆಯಲ್ಲಿ ಬದಲಾವಣೆಗಳನ್ನು ಮಾಡಿ ಅದನ್ನು ನುಡಿಸುವ ಹೊಸ ತಂತ್ರಗಳನ್ನು ಪ್ರಾರಂಭಿಸಿದರು.
ಕರ್ಣಾಟಕ ಸಂಗೀತ ಪ್ರಕಾರಗಳಲ್ಲಿ ಕೀರ್ತನೆಗಳ ಉಗಮದಿಂದ ಗಮನಾರ್ಹ ಬದಲಾವಣೆಯದವು . ಅನ್ನಮಾಚಾರ್ಯರ ಕೀರ್ತನೆಗಳು ಮುಂದೆ ಕೃತಿಗಳಾಗಿ ವಿಕಾಸವಾದವು.ಅವರು ತಾಳೆಗರಿಗಳಲ್ಲಿ ಬರೆದಿಟ್ಟ ಕೀರ್ತನೆಗಳನ್ನು (ಸುಮಾರು ೩೨೦೦೦)ಅವರ ಮೊಮ್ಮಗ ಚಿನ್ನಣ್ಣ ತಾಮ್ರದ ಅಚ್ಚುಗಳಲ್ಲಿ ಬರೆಸಿ ಕಾಪಾಡಿದ್ದನು. ಅದರೂ ಅವುಗಳು ಇರುವಿಕೆ, ೧೯೨೨ರವರೆಗೆ ರಹಸ್ಯವಾಗಿತ್ತು. ತಿರುಪತಿ ದೇವಸ್ಥಾನದಲ್ಲಿ ೨೫೦೦ ತಾಮ್ರದ ಅಚ್ಚುಗಳಲ್ಲಿ ಅನ್ನಮಾಚಾರ್ಯರ ಸುಮಾರು ೧೪೦೦೦ ಕೀರ್ತನೆಗಳು ದೊರೆತು ಆ ಸ್ಥಳಕ್ಕೆ "ಸಂಕೀರ್ತನ ಭಾಂಡಾಗಾರಂ" ಎಂದು ಹೆಸರಿಟ್ಟಿದ್ದಾರೆ.

ಅನ್ನಮಾಚರ್ಯರ ಕೀರ್ತನೆಗಳನ್ನು ಹರಿದಾಸರು ತಮ್ಮ ದಾಸ-ಕೂಟದ ಮೂಲಕ ಪ್ರಸಿದ್ಧಗೊಳಿಸಿ ಬೆಳೆಸಿದರು.ಕರ್ಣಾಟಕ ಸಂಗೀತದ ಪಿತಾಮಹ ಎನ್ನಿಸಿಕೊಂಡ ಪುರಂದಾರದಾಸರ ಕೀರ್ತನೆಗಳ ವ್ಯವಸ್ಥಿತ ಕಲಿಕೆಯನ್ನು ನಿರೂಪಿಸಿದರು.ಸರಳಿ ವರಸೆ, ಜಂಟಾ ಸ್ವರ. ಹೆಚ್ಚು ಸ್ಥಾಯಿ ಸ್ವರ, ಅಲಂಕಾರ, ಗೀತಗಳ ಮೂಲಕ ಹಲವು ಹೆಜ್ಜೆಗಳಲ್ಲಿ ಸಂಗೀತ ಕಲಿಯುವ ಪದ್ದತಿ ಪ್ರಾರಂಭವಾಯಿತು.
ವಿಜಯನಗರದ ನಾಶವಾದ ಮೇಲೆ ಕರ್ಣಾಟಕ ಸಂಗೀತಕ್ಕೆ ಮೈಸೂರಿನ ಒಡೆಯರ, ತಂಜಾವೂರಿನ ನಾಯಕರ ರಾಜಾಶ್ರಯ ದೊರೆತಿತು.ಇದೆ ಕಾಲದಲ್ಲಿ ವೆಂಕಟಮಾಖಿ ಮೇಳಕರ್ತ ರಾಗಗಳ ವಿಶದವಾದ ವಿಂಗಡನೆ ಇರುವ "ಚತುರ್ದಂಡಿ ಪ್ರಕಾಶಿಕ" ರಚಿಸಿದರು.ಇದನ್ನು "ಕರ್ಣಾಟಕ ಶಾಸ್ತ್ರೀಯ ಸಂಗೀತದ ಪೀರಿಯೊಡಿಕ್ ಟೇಬಲ್" ಎಂದರೆ ತಪ್ಪಾಗದು.ರಾಗದ ಹೆಸರಿಂದ ಆರೋಹಣ, ಅವರೋಹಣ ಸ್ವರಗಳು ತಿಳಿಯುವಂತೆ ಜೋಡಿಸಲ್ಪಟ್ಟ ಮೇಳಕರ್ತ ರಾಗಗಳ ಈ "ಪೀರಿಯೊಡಿಕ್ ಟೇಬಲ್" ಇಂದು ಕೂಡ ಬಳಕೆಯಲ್ಲಿದೆ.
೧೮ನೇ ಶತಮಾನದಲ್ಲಿ ತ್ಯಾಗರಾಜ, ಶ್ಯಾಮಾ ಶಾಸ್ತ್ರಿ ಹಾಗು ಮುತ್ತುಸ್ವಾಮಿ ದೀಕ್ಷಿತರ್ ಹಲವಾರು "ಕೃತಿ"ಗಳನ್ನು ರಚಿಸಿ ಅವುಗಳ ರಚನೆಯ ಆಕಾರಗಳನ್ನು ಪ್ರಮಾಣಿಕರಿಸಿದರು.ಮುತ್ತುಸ್ವಾಮಿ ದೀಕ್ಷಿತರ್ ತಮ್ಮ ಕೃತಿಗಳನ್ನು ಸಂಸ್ಕೃತದಲ್ಲಿ ರಚಿಸಿದರೆ ಮಿಕ್ಕಿಬ್ಬರು ತೆಲಗುವಿನಲ್ಲಿ ರಚಿಸಿದರು.ಮೂವರೂ ವೆಂಕಟಮಾಖಿ ತಯಾರಿಸಿದ್ದ ೭೨ ರಾಗಗಳ ಮೇಳಕರ್ತ ವ್ಯವಸ್ಥೆಯನ್ನು ಉಪಯೋಗಿಸಿ ತಮ್ಮ ಕೃತಿಗಳನ್ನು ರಚಿಸಿದರು.
ಮೂವರೂ ರಾಜಾಶ್ರಯದಲ್ಲಿರದೇ ವೈಷ್ಣವ ದೇವಸ್ಥಾನಗಳನ್ನು ಆಸರಿಸಿದ್ದರು. ಅದ್ದರಿಂದ ಭಕ್ತಿಪ್ರಧಾನವಾಗಿದ್ದ ಇವರ ರಚನೆಗಳು, ಹೀಂದೂಸ್ಥಾನಿ ಸಂಗೀತದಂತೆ ಅರಮನೆಗಳ ವಸ್ತುವಾಗದೇ ಜನಸಾಮಾನ್ಯರ ಮನ್ನಣೆಗಳಿಸಿತು.
ತ್ಯಾಗರಾಜರ ೫ ಉತ್ಕೃಷ್ಟ ಕೃತಿಗಳಾದ "ಪಂಚರತ್ನ ಕೃತಿ"ಗಳನ್ನು ಇಂದು ಕೂಡ ತ್ಯಾಗರಾಜ ಆರಾಧನೆಯಂದು ಹಾಡುತ್ತಾರೆ.ಹೀಗೆ ಹರಿದಾಸರ ಭಕ್ತಿಪರಂಪರೆಯನ್ನು,ತ್ಯಾಗರಾಜ,ಶ್ಯಾಮ ಶಾಸ್ತ್ರಿ ಹಾಗು ಮುತ್ತುಸ್ವಾಮಿ ದೀಕ್ಷಿತರು ವಿನ್ಯಾಸಗೊಳಿಸಿದ ಕೃತಿ ಪದ್ಧತಿಯೊಂದಿಗೆ ಕರ್ಣಾಟಕ ಸಂಗೀತದ ವಿಕಾಸ ೧೮೫೦ರ ಕಾಲಕ್ಕೆ ಪೂರ್ಣಗೊಂಡಿತ್ತು.

(ಸಶೇಷ)

ಶ್ರೀಕಾಂತ್
http://kavisamaya.blogspot.com

ಮಾನ್ಯರೆ,
ನಾನು ತಮ್ಮೆಲ್ಲರಂತೆ, ಶಾಸ್ತ್ರೀಯ ಸಂಗೀತದ ಒಬ್ಬ ತೀವ್ರತೆಯುಳ್ಳ, ಶ್ರೋತ್ರು ! ಕರ್ನಾಟಕ ಸಂಗೀತದ ಅನೇಕ ಗಣ್ಯರ ಸಂಗೀತ ಕಛೇರಿಗಳನ್ನು ಕೇಳಿ ಆನಂದಿಸುವ ಸುಯೋಗ ನಾನು ಬೆಂಗಳೂರಿನ ಶೇಶಾದ್ರಿ ಪುರಂನ ಒಂದು ಹಾಸ್ಟೆಲ್ ನಲ್ಲಿ ನನ್ನ ವಾಸ್ಯವ್ಯ ಹೂಡಿದ್ದಾಗ ಅಂದರೆ ಸುಮಾರು, ೧೯೬೨-೧೯೬೪ ರ ಕೊನೆಯವರೆಗೆ. ಮುಂದೆ ನಾನು ಮುಂಬೈಗೆ ಹೊಟ್ಟೆಪಾಡಿಗೆ ಬಂದಾಗಲೂ ಸಂಗೀತ ನನ್ನನ್ನು ಬಿಡಲಿಲ್ಲ. ಶನ್ಮುಖಾನಂದ ಹಾಲ್ ನಲ್ಲಿ ಅನೆಕ ವಿದ್ವಾಂಸರ ಕಛೇರಿಗಳನ್ನು ನೊಡಿ ಕೇಳುವ ಸೌಭಾಗ್ಯ ನನಗಿದೆ.ನಿಮ್ಮ ಲೇಖನ ಚೆನ್ನಾಗಿದೆ. ಸಂಪದದ 'ಪಾಡ್ ಶ್ರಾವ್ಯ'ದಲ್ಲಿ ನಿಮ್ಮಂತಹವರ, ಅನಿಸಿಕೆಗಳು ಬರಬೇಕು, ಎನ್ನುವುದನ್ನೆ ನಾನು ಬಹಳ ಬಾರಿ ವ್ಯಕ್ತಪಡಿಸಿದ್ದೆನೆ.

ಸಂಗೀತಜ್ಞರ ಬಗ್ಗೆ ನಾನಾಗಲೆ ಹೆಸರುನ್ನೂ ಕೊಟ್ಟಿದ್ದಾಗಿದೆ.ಇನ್ನೊಮ್ಮೆ ಕೇಳಿ. ಹಾಲಿ ಈಗ ಸಂಗೀತದ ಹಲವು ಮಜಲುಗಳನ್ನು ವ್ಯವಸ್ಥಿತವಾಗಿ ಎಲ್ಲರಿಗೂ ತಿಳಿಯುವಂತೆ ವಿದ್ವತ್ ಪೂರ್ಣ ವಾಗಿ ಹೇಳಬಲ್ಲ ಎರಡು ಹಸ್ತಿಗಳನ್ನು ನಿಮ್ಮ ಗಮನಸೆಳೆಯಲು ಕೊಡಲು ಇಛ್ಛಿಸುತ್ತೇನೆ:

೧. ಡಾ. ಸುಕನ್ಯಾ ಪ್ರಭಾಕರ್
೨. ಡಾ. ಸತ್ಯವತಿ

ಅವರ ಕಾರ್ಯಾಗಾರಗಳಿಗೆ* (ಸರಿಯಾಗಿದೆಯಾ ? )ಭೇಟಿ ಕೊಡಿ.

ವೆಂಕಟೇಶ್ ರವರೆ ,
ಲೇಖನದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. ರೇಡಿಯೊದಲ್ಲಿ ಒಮ್ಮೆ ಕಿಶೋರಿ ಅಮೋನ್ಕರ್ರವರ ಗಾಯನ ಕೇಳಿದ ಮೇಲೆ ಹಿಂದೂಸ್ಥಾನಿ ಸಂಗೀತದ ಬಗ್ಗೆ ಸ್ವಲ್ಪ ಆಸಕ್ತಿ ಬೆಳೆಯಿತು.ಅದರ ಬಗ್ಗೆ  ಕವಿಸಮಯ ದಲ್ಲಿ ಬರೆದಿದ್ದೇನೆ. ಆ ಕುತೂಹಲವೇ ಮುಂದುವರೆದು ನೆಟ್ ನಲ್ಲಿ  ಸಂಗೀತದ ಬಗ್ಗೆ  ತಿಳಿದುಕೊಳ್ಳಲು ಹುಡುಕಾಡಿದೆ.ಆಗ ಕೆಲವು ವಿಚಾರಗಳು ಓದಲು ಸಿಕ್ಕವು. ಅದನ್ನೇ ಇಲ್ಲಿ ಬರೆದಿರುವೆ. ಸಂಗೀತದ ಬಗ್ಗೆ ನನ್ನಲ್ಲಿ ರುವುದು  ಬರೆ "intuitive"  ಆಸಕ್ತಿ. ರಾಗ ತಾಳಗಳ ನಿಯಮಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಿಲ್ಲ. ಅದ್ದರಿಂದ ಸಂಗೀತಜ್ಞ ಸಂಗೀತಜ್ಞಾನ ಲೇಖನದಲ್ಲಿ ಎಲ್ಲಿಯೂ ಕಂಡುಬರುವುದಿಲ್ಲ . ಇದನ್ನು ಬರೆ ಒಂದು ಅನುವಾದ ಪ್ರಯತ್ನವೆಂದು ಪರಿಗಣಿಸಿ. 

ಬೇಳೂರು ಸುದರ್ಶನರವರು ಕನ್ನಡದಲ್ಲಿ ಹಿಂದೂಸ್ಥಾನಿ ಸಂಗೀತದ ಬಗ್ಗೆ ಹೆಚ್ಚಾಗಿ ಬರೆಯಲ್ಪಟ್ಟಿಲ್ಲ ಎಂದು ಒಮ್ಮೆ ಸಂಪದದಲ್ಲಿ ಪ್ರಸ್ತಾಪಿಸಿದ್ದರು.ಇದು ಕೂಡ ಈ ಲೇಖನ ಬರೆಯಲು ಒಂದು ಪ್ರೇರಣೆ.

ಶ್ರೀಕಾಂತ್

 http://kavisamaya.blogspot.com

 

ದಕ್ಷಿಣದಲ್ಲಿ ಕರ್ಣಾಟಕ ಸಂಗೀತ ಪದ್ಧತಿಯ ಬೆಳವಣಿಗೆ ತೀವ್ರಗತಿಯಲ್ಲಿ ಆಗುತ್ತಿರಬೇಕಾದರೆ, ಉತ್ತರದಲ್ಲಿ ಹಿಂದೂಸ್ಥಾನಿ ಪದ್ಧತಿಯು ಅರಮನೆಗಳ ಬಂಧಿಯಾಗಿ ನಿಂತನೀರಾಗತೊಡಗಿತ್ತು.ಔರಂಗಜೇಬನು ಸಂಗೀತದ ಮೇಲೆ ನಿಷೇಧ ಹೇರಿದ್ದು ಕೂಡ ಹಿಂದೂಸ್ಥಾನಿ ಸಂಗೀತಕ್ಕೆ ಪ್ರತಿಕೂಲವಾಗಿತ್ತು.ಆಗ ಈ ಪದ್ಧತಿಯು ಅವಸಾನಗೊಳ್ಳದಂತೆ ಕಾಪಾಡಿದ ಶ್ರೇಯ, ಅರಮನೆಗಳಲ್ಲಿ ಗಾಯನ-ನೃತ್ಯಗಳಿಗೆ ನೇಮಿಸಲಾಗಿದ್ದ "ಬೈಜಿ"ಗಳಿಗೆ ಸಲ್ಲುತ್ತದೆ. ಆದರೆ ಬೈಜಿಗಳೊಂದಿಗಿನ ಸಂಯೋಜನೆಯಿಂದಾಗಿ ಹಿಂದೂಸ್ಥಾನಿ ಪದ್ಧತಿಯು ಜನಸಾಮಾನ್ಯರ ಮನ್ನಣೆ ಸಿಗಲಿಲ್ಲ.ಬದಲಿಗೆ ಹಾಡು-ಕುಣಿತ ಮುಜುಗರ,ಅಗೌರವಗಳಿಗೆ ಕಾರಣವಾಗುವ ವಿಷಯಗಳಾಗಿಹೋದವು.
ಮುಘಲ್ ಸಾಮ್ರಾಜ್ಯದ ಅವಸಾನದ ಕಾಲದಲ್ಲೂ, ಮಹಮದ್ ಶಾಹ್ "ರಂಗೀಲೆ" ನಂತಹ ಕಲಾಪೋಷಕರ ಸಹಾಯದಿಂದ ಹಿಂದೂಸ್ಥಾನಿ ಪದ್ಧತಿಯು ಬದುಕುಳಿಯಿತು. ಈತನ ಆಸ್ಥಾನದಲ್ಲಿದ್ದ ನ್ಯಾಮತ್ ಖಾನ್ "ಸದರಂಗ್" ಮತ್ತು ಫೀರೋಜ್ ಖಾನ್ "ಅದರಂಗ್" (ಸದರಂಗ್ ಮತ್ತು ಅದರಂಗ್ ಅವರಿಬ್ಬರ ಕಾವ್ಯನಾಮಗಳು) ಖಯಾಲ್ ಶೈಲಿಯನ್ನು ಪ್ರಖ್ಯಾತಗೊಳಿಸಿದರು.ಧ್ರುಪದ್ ಶೈಲಿಯು ಅವಸಾನವಾಗತೊಡಗಿ ಖಯಾಲ್ ಅದರ ಸ್ಥಾನದಲ್ಲಿ ವಿಜ್ರಂಭಿಸತೊಡಗಿತು.
ಮುಂದೆ ಬ್ರೀಟಿಷರು ಭಾರತವನ್ನು ಆಕ್ರಮಿಸಿದಾಗ, ಭಾರತದ ಸಾಮಂತ ರಾಜರ ಆಶ್ರಯದಲ್ಲಿ ಹಲವಾರು ಖಯಾಲ್ ಘರಾನಗಳು ಪ್ರಾರಂಭವಾದವು. ೧೮ನೇ ಶತಮಾನದಲ್ಲಿ ಹಿಂದೂಸ್ಥಾನಿ ಸಂಗೀತವು ತೀವ್ರಗತಿಯಲ್ಲಿ ಬೆಳೆಯತೊಡಗಿತು.
ಹಿಂದುಸ್ಥಾನಿ ಸಂಗೀತದ ವೈವಿಧ್ಯತೆಗೆ ಈ "ಘರಾನ"ಗಳ ಇರುವಿಕೆ ಕಾರಣ.ಕರ್ಣಾಟಕ ಸಂಗೀತ ಪದ್ಧತಿಯಲ್ಲಾದಂತೆ ಸಂಗೀತವನ್ನು ಪ್ರಮಾಣೀಕರಿಸುವ ಪ್ರಯತ್ನ ಹಿಂದುಸ್ಥಾನಿ ಸಂಗೀತದಲ್ಲಿ ಆಗಲೇ ಇಲ್ಲ.ಜೊತೆಗೆ ಖಯಾಲ್ ಗಳನ್ನು ಜಾಗರೂಕತೆಯಿಂದ ತಮ್ಮ ಕುಟುಂಬದೊಳಗೆ ಕಾಯ್ದಿಟ್ಟುಕೊಳ್ಳುವ ಪರಿಪಾಠವಿದ್ದುದ್ದರಿಂದ ಸಂಗೀತದ ಬಗ್ಗೆ ಮುಕ್ತವಾದ ಚರ್ಚೆಗಳು ಸಾಧ್ಯವಿರಲಿಲ್ಲ.ಹಿಂದುಸ್ಥಾನಿ ಪದ್ಧತಿಯಲ್ಲಿ ಒಟ್ಟು ೩೨ ಘರಾನಗಳು ಇವೆ(ಗಾಯನ ಹಾಗು ವಾದ್ಯ ಘರಾನಗಳು ಎರಡನ್ನೂ ಸೇರಿಸಿ).ಆದರೆ ಕೆಲವು ಘರಾನಗಳು, ಆ ಶೈಲಿಯನ್ನು ಮುಂದಕ್ಕೆ ಕೊಂಡೊಯ್ಯುವ ಕಲಾವಿದರಿಲ್ಲದೆ ಅವಸಾನಗೊಂಡಿವೆ.ಮತ್ತೆ ಕೆಲವು ಅಪ್ರಸ್ತುತವಾಗಿವೆ.ಇವುಗಳಲ್ಲಿ ಗ್ವಾಲಿಯರ್,ಕಿರಾಣ,ಜೈಪುರ್-ಅತ್ರೌಳಿ ಘರಾನಗಳು ಪ್ರಮುಖ ಗಾಯನ ಘರಾನಗಳು. ಮೈಹರ್,ಪಂಜಾಬ್ (ತಬಲ) ಘರಾನಗಳು ಪ್ರಮುಖ ವಾದ್ಯ ಘರಾನಗಳು.
ಈ ಘರಾನಗಳ ಸ್ಥಾಪಕರು ಸಂಗೀತದ ಮೇಧಾವಿಗಳಾಗಿದ್ದು ಅವರ ಬಗ್ಗೆ ಹಲವಾರು ಕಥೆಗಳು ಪ್ರಚಲಿತವಾಗಿವೆ.ಅವರ ಮೇಧಾವಿತನದ ಜೊತೆಗೆ ತಿಳಿಗೇಡಿತನವನ್ನು ಸೂಚಿಸುವಂತಹ ವಿಚಿತ್ರ ನಂಬಿಕೆಗಳ ಕಥೆಗಳನ್ನು ಓದಿದಾಗ ಸ್ವಲ್ಪ ಆಶ್ಚರ್ಯವಾಯಿತು.ಮೈಹರ್ ಘರಾನದ ಸ್ಥಾಪಕ ಅಲ್ಲವುದ್ದೀನ್ ಖಾನ್,ಸೇನಿ ಘರಾನದ ಸಂಗೀತಗಾರ ವಜೀರ್ ಖಾನ್ ರಲ್ಲಿ ಸಂಗೀತ ಕಲಿಯುವ ಅವಕಾಶ ಸಿಗದಿದ್ದಾಗ ವಿಷಸೇವಿಸುವ ನಿರ್ಧಾರಕ್ಕೆ ಬಂದದ್ದು,ಜೈಪುರ್ ಅತ್ರೌಳಿ ಘರಾನದ ಸ್ಥಾಪಕ ಅಲ್ಲಾ ದಿಯ ಖಾನ್ ತಾನು ಬ್ರಾಹ್ಮಣ ಕುಲಸ್ಥನೆಂದು ಬಲವಾಗಿ ನಂಬಿದ್ದರಿಂದ ಸಾಯುವ ಕಾಲದಲ್ಲಿ ಅಪಖ್ಯಾತಿ ತಂದುಕೊಂಡದ್ದು, ಮುಂತಾದುವುಗಳು ಹಿಂದುಸ್ಥಾನಿ ಸಂಗೀತದ ಮಟ್ಟಿಗೆ ನಮ್ಮ ಅಜ್ಜ-ಅಜ್ಜಿ ಹೇಳುವ ಅವರ ಕಾಲದ ಕಥೆಗಳಂತೆ ಆಸಕ್ತಿ ಕೆರಳಿಸುವ ಕಥೆಗಳು.

ಇದೇ ಕಾಲದಲ್ಲಿ ಠುಮ್ರಿ, ಠಪ್ಪ, ತರಾನ ಮತ್ತು ಗಜಲ್ ಶೈಲಿಯ ಗಾಯನಗಳು ಬೆಳೆದವು.ಆದರೆ ಇವು ಖಯಾಲ್ ಶೈಲಿಯನ್ನು ಬದಿಗೊತ್ತದೆ ಅದಕ್ಕೆ ಒತ್ತಾಸೆಯಾಗಿದ್ದವು.

೧೯ನೇ ಶತಮಾನದಲ್ಲಿ ಅರಮನೆಯ ಸಂಗೀತವಾಗಿದ್ದ ಹಿಂದುಸ್ಥಾನಿ ಸಂಗೀತವನ್ನು ಜನಸಾಮನ್ಯರಿಗೆ ತಲುಪಿಸುವ ಪ್ರಯತ್ನ ನಡೆಯಿತು.ವೃತ್ತಿಯಿಂದ ವಕೀಲರಾಗಿದ್ದ ಚತುರ್ಪಂಡಿತ್ ಭತ್ಖಂಡೆಯವರು ದಕ್ಷಿಣ ಭಾರತದ ಸಂಗೀತ ಕೇಂದ್ರಗಳಾಗಿದ್ದ ಸ್ಥಳಗಳಿಗೆ ಭೇಟಿಕೊಟ್ಟು, ವೆಂಕಟಮಖಿಯ ಮೇಳಕರ್ತ ರಾಗಗಳ ವಿಂಗಡಣೆಯನ್ನು ಅಧ್ಯಯನ ಮಾಡಿ ಹಿಂದೂಸ್ಥಾನಿ ರಾಗಗಳಿಗೆ ಒಂದು ವಿಂಗಡನಾ ಕ್ರಮವನ್ನು ಸಿದ್ಧಪಡಿಸುವ ಪ್ರಯತ್ನಮಾಡಿದರು.ಆದರೆ ಹಿಂದುಸ್ಥಾನಿ ರಾಗಗಳ ವಿಂಗಡನೆ ಸುಲಭದ ಕೆಲಸವಾಗಿರಲ್ಲಿಲ್ಲ.ಅವರು ಸ್ವರಗುಂಪುಗಳ ಆಧಾರದ ಮೇಲೆ ರಾಗಗಳನ್ನು ೧೦ ಪ್ರಭೇದಗಳಾಗಿ ವಿಂಗಡಿಸಿದರು. ಈ ವಿಂಗಡನೆಯನ್ನು ಎಲ್ಲರೂ ಒಪ್ಪಿ ಪ್ರಮಾಣೀಕರಿಸಿಲ್ಲವಾದರೂ,ಹಿಂದೂಸ್ಥಾನಿ ಸಂಗೀತದ ಮಟ್ಟಿಗೆ ಅದೊಂದೇ ಚಾಲ್ತಿಯಲ್ಲಿರುವ ರಾಗ ವಿಂಗಡನ ಕ್ರಮ ಎಂದರೆ ತಪ್ಪಾಗಲಾರದು.ಅವರ ಪರಿಶ್ರಮದ ಫಲವಾಗಿ ಹಿಂದುಸ್ಥಾನಿ ಸಂಗೀತ ಪದ್ಧತಿಯ ವಿವರಣೆ ಇರುವ "ಹಿಂದುಸ್ಥಾನಿ ಸಂಗೀತ ಪದ್ಧತಿ" ಎಂಬ ೪ ಸಂಪುಟಗಳ ಮರಾಠಿ ಪುಸ್ತಕವನ್ನು ೧೯೦೯-೩೨ ರ ಕಾಲದಲ್ಲಿ ರಚಿಸಲ್ಪಟ್ಟಿತು.ಭತ್ಖಂಡೆಯವರು ೪೦೦೦ ವರ್ಷಗಳಲ್ಲಿ ಮೊದಲ ಬಾರಿಗೆ ಸಂಗೀತವನ್ನು ಸ್ವರಪ್ರಸ್ತಾರಗಳ ಮೂಲಕ ಬರೆಯುವ ವಿಧಾನವನ್ನು ಬಳಕೆಗೆ ತಂದರು.ಜೊತೆಗೆ ವಿವಿಧ ಘರಾನಗಳ ಸುಮಾರು ೨೦೦೦ ಸಾವಿರ ರಚನೆಗಳನ್ನು ಶೇಖರಿಸಿ ಜನಸಾಮನ್ಯರಿಗೆ ಅವು ಸುಲಭವಾಗಿ ದೊರಕುವಂತೆ ಮಾಡಿದರು.ಬರೋಡದಲ್ಲಿ ಸಂಗೀತದ ಕಾಲೇಜೊಂದನ್ನು ಸ್ಥಾಪಿಸಿ ಅಲ್ಲಿನ ತರಗತಿಗಳಿಗೆ ಪಠ್ಯಪುಸ್ತಕಗಳನ್ನು "ಕ್ರಮಿಕ ಪುಸ್ತಕ ಮಾಲಿಕಾ" ಎಂಬ ಶೀರ್ಷಿಕೆಯಲ್ಲಿ ಬರೆದರು.
ಬರೋಡ ಮಹಾರಾಜರ ಸಹಾಯದಿಂದ ೧೯೧೬ ಅಖಿಲ ಭಾರತ ಸಂಗೀತ ಸಮಾವೇಶವನ್ನು ಆಯೋಜಿಸಿದರು. ಅದು ವಾರ್ಷಿಕ ಸಮಾವೇಶದ ಸ್ವರೂಪ ಪಡೆದು ೧೯೨೫ರಲ್ಲಿ ಲಖ್ನೌ ನಲ್ಲಿ ಮತ್ತೊಂದು ಸಂಗೀತದ ಕಾಲೇಜು ಸ್ಥಾಪಿತವಾಯಿತು.ಇಷ್ಟೆಲ್ಲ ಸಾಧನೆ ಮಾಡಿದ ಭತ್ಖಂಡೆಯವರನ್ನು ಅಧುನಿಕ ಹಿಂದುಸ್ಥಾನಿ ಸಂಗೀತದ ಜನಕ ಎಂದರೆ ತಪ್ಪಾಗಲಾರದು.

ಭತ್ಖಂಡೆಯವರು ಕೆಲಸಗಳು ಹಿಂದುಸ್ಥಾನಿ ಸಂಗೀತದ ತಾಂತ್ರಿಕತೆಯ ಸುಧಾರಣೆಗಳಿಗೆ ಮಾತ್ರ ಸೀಮಿತವಾಗಿತ್ತು. ಜನಸಾಮಾನ್ಯರಿಗೆ ಸಂಗೀತವನ್ನು ತಲುಪಿಸಿದ ಶ್ರೇಯ ವಿಷ್ಣು ದಿಗಂಬರ್ ಪಲೂಸ್ಕರ್ ರಿಗೆ ಸಲ್ಲುತ್ತದೆ.ಅಪಘಾತವೊಂದರಲ್ಲಿ ತಮ್ಮ ದೃಷ್ಟಿ ಕಳೆದುಕೊಂಡರೂ, ಉತ್ತರ ಭಾರತದ ಉದ್ದಗಲಕ್ಕೂ ಸಂಚರಿಸಿದರು. ಲಾಹೋರ್ ನಲ್ಲಿ ವಾಸವಾಗಿದ್ದಾಗ, ಗುರುಸೇವೆಯಲ್ಲಿ ಸಮಯವನ್ನು ಕಳೆಯುವುದು ವ್ಯರ್ಥವೆನ್ನಿಸಿ ೧೯೦೧ ರಲ್ಲಿ "ಗಂಧರ್ವ ಮಹಾವಿದ್ಯಾಲಯ" ಹೆಸರಿನ ಸಂಗೀತಶಾಲೆಯನ್ನು ಪ್ರಾರಂಭಿಸಿದರು. ರಾಜಮನೆತನಗಳಿಂದ ಯಾವ ಸಹಾಯವಿಲ್ಲ ಜನರಿಂದ ಪಡೆದ ಚಂದ ಹಣದಿಂದ ಪ್ರಾರಂಭವಾದ ಈ ಶಾಲೆ, ಹಿಂದೂಸ್ಥಾನಿ ಸಂಗೀತವನ್ನು ಕಲಿಯಬಯಸಿದ ಎಲ್ಲರಿಗೂ ದೊರಕುವಂತೆ ಮಾಡಿತು.ತಮ್ಮ ಸಂಗೀತ ಕಾರ್ಯಕ್ರಮಗಳಿಂದ ಸಂಪಾದಿಸಿದ ಹಣವನ್ನು ಪಲೂಸ್ಕರ್ ಶಾಲೆಯ ನಿರ್ವಹಣೆ,ಹಾಗು ಬೆಳವಣಿಗೆಗೆ ವ್ಯಯಿಸಿದರು.ಜನರಿಂದ ಜನರಿಗಾಗಿ ಸ್ಥಾಪಿಸಲ್ಪಟ್ಟ ಮೊದಲ ಸಂಗೀತ ಶಾಲೆಯಿದು ಸಂಗೀತ ಕಲಿಕೆಯ ಅವಿನಾಭಾವ ಅಂಗವಾಗಿದ್ದ ಗುರು-ಶಿಷ್ಯ ಪರಂಪರೆಯು ಇದರಿಂದಾಗಿ ಅಪ್ರಸ್ತುತವಾಯಿತು.೧೯೦೮ರಲ್ಲಿ ಪಲೂಸ್ಕರ್ ಮುಂಬೈಗೆ ಮರಳಿ ಗಂಧರ್ವ ವಿದ್ಯಾಲಯದ ಶಾಖೆಯೊಂದನ್ನು ಸ್ಥಾಪಿಸಿದರು.ಸಂಗೀತ ಕಲಿಸುವ ಜೊತೆಗೆ ವಿಧ್ಯಾರ್ಥಿಗಳನ್ನು ಕಠಿಣ ಮೌಲಿಕ ಶಿಕ್ಷಣಕ್ಕೆ ಗುರಿಪಡಿಸಲಾಗುತ್ತಿತ್ತು. ಮುಂದೆ ಅವರಲ್ಲಿ ಹಲವರು ದಕ್ಷ ಹಾಗು ಮೇಧಾವಿ ಕಲಾವಿದರಾಗಿ, ಅಂದಿನ ಸಂಗೀತಗಾರರಿಗೆ ಅಂಟಿದ್ದ ಚಾರಿತ್ರ್ಯವಿಲ್ಲದ ಸೋಮಾರಿಗಳೆಂಬ ಹಣೆಪಟ್ಟಿಯನ್ನು ಅಳಿಸುವಲ್ಲಿ ಕಾರಣರಾದರು.ಆದರೆ ಹಣಕಾಸಿನ ಕೊರತೆಯಿಂದಾಗಿ ೧೯೨೬ರಲ್ಲಿ ಗಂಧರ್ವ ವಿದ್ಯಾಲಯ ಹರಾಜಾಯಿತು. ಭತ್ಖಂಡೆ ಹಾಗು ಪಲುಸ್ಕರ್ ರವರು ಹಿಂದುಸ್ಥಾನಿ ಸಂಗೀತದ ಬುನಾದಿಯನ್ನು ಗಟ್ಟಿಗೊಳಿಸಿದ್ದರಿಂದ ಈಗ ಅದು ಅಪ್ರಸ್ತುತವಾಗದೇ ಪ್ರಚಲಿತವಾಗಿದೆ ಎಂದರೆ ಅತಿಶಯೋಕ್ತಿ ಆಗದು.

(ಸಶೇಷ)

ಶ್ರೀಕಾಂತ್
http://kavisamaya.blogspot.com