ಒಂದು ’ಚರಕ’ದ ಕಥೆ!

To prevent automated spam submissions leave this field empty.

ಒಂದು ’ಚರಕ’ದ ಕಥೆ!

ಈ ಬರಹವನ್ನು ಈಗ್ಗೆ ಎರಡು ವಾರಗಳ ಹಿಂದೆಯೇ ಬರೆಯಬೇಕಿತ್ತು. ಆದರೆ ಅದೇ ಸಮಯದಲ್ಲಿ ಅಕಸ್ಮಾತ್ತಾಗಿ ’ಸಮಾಜ ವಿಜ್ಞಾನಿ’ ಬಾಲಗಂಗಾಧರರೊಂದಿಗೆ ಮುಖಾಮುಖಿಯಾಗಬೇಕಾಗಿ ಬಂದು, ಅದನ್ನು ದಾಖಲಿಸುವ ತುರ್ತಿನಲ್ಲಿ ಆಗಲಿಲ್ಲ. ಈಗ ನಾನು ಬರೆಯ ಹೊರಟಿರುವುದು ಹೆಗ್ಗೋಡಿನ ’ಚರಕ’ದ ಬಗ್ಗೆ. ಎರಡು ವಾರಗಳ ಹಿಂದೆ, ಅಂದರೆ ಇದೇ ಜನವರಿ ೧೬, ೧೭ ಹಾಗೂ ೧೮ರಂದು ಅಲ್ಲಿ ನಡೆದ ’ಚರಕ ಉತ್ಸವ-೨೦೦೯’ರಲ್ಲಿ ಸಕ್ರಿಯವಾಗಿ ಪಾಲ್ಗೊಂಡ ನಾನು ಅದರ ಅರ್ಥಪೂರ್ಣತೆಯನ್ನೂ, ಸಂಭ್ರಮೋಲ್ಲಾಸಗಳನ್ನೂ ಆ ಸಂದರ್ಭದಲ್ಲೇ ದಾಖಲಿಸಬೇಕಿತ್ತು. ಅದನ್ನೀಗ ಮಾಡುತ್ತಿದ್ದೇನೆ.

ಹೆಗ್ಗೋಡು ಎಂದಾಕ್ಷಣ ನಮಗೆ ನೆನಪಾಗುವುದು ನೀನಾಸಂ. ಅದು ಸಹಜ ಕೂಡ. ಅದಕ್ಕೆ ಮೂರ್ನಾಲ್ಕು ದಶಕಗಳಲ್ಲಿ ಕಟ್ಟಿಕೊಂಡ ಖ್ಯಾತಿಯ ಹಿನ್ನೆಲೆಯಿದೆ. ಅದರ ಹಿಂದೆ ಕೆ.ವಿ.ಸುಬ್ಬಣ್ಣ ಎಂಬ ಧೀಮಂತರ ದಟ್ಟ ನೆನಪಿದೆ. ಮಲೆನಾಡಿನ ಮೂಲೆಯ ಕುಗ್ರಾಮವೊಂದನ್ನು ಕೇಂದ್ರವಾಗಿಸಿಕೊಂಡು ರಂಗಭೂಮಿ ಮತ್ತು ಚಲನಚಿತ್ರ ಸಂಸ್ಕೃತಿಗಳಿಗೆ ಸಂಬಂಧಿಸಿದಂತೆ ಅವರು ಮಾಡಿದ ಅಪೂರ್ವ ಕೆಲಸಗಳ ದಾಖಲೆಯಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಪ್ರತಿ ವರ್ಷ ಅದು ನಡೆಸುವ ’ಸಂಸ್ಕೃತಿ ಶಿಬಿರ’ದ ಅಡಿಯಲ್ಲಿ ದೇಶಾದ್ಯಂತ ವಿದ್ವಾಂಸರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಆಹ್ವಾನಿಸಿ, ಕರ್ನಾಟಕದಾದ್ಯಂತ ವಿವಿಧ ಹಿನ್ನೆಲೆ ಹಾಗೂ ವಯೋಮಾನಗಳ ಶಿಬಿರಾರ್ಥಿಗಳನ್ನು ಆಕರ್ಷಿಸಿ ನಡೆಸುವ ಚರ್ಚೆಗಳು, ನಾಟಕ-ಸಿನೆಮಾ ಪ್ರದರ್ಶನಗಳು ಒಂದು ಅಪೂರ್ವ ಸಾಂಸ್ಕೃತಿಕ ಘಟನೆಯೇ ಸರಿ. ಆದರೆ ಇಲ್ಲಿ ನಡೆಯುವ ಚರ್ಚೆಗಳ ವಿಷಯ, ಅವನ್ನು ಸಂಘಟಿಸುವ ರೀತಿ, ಅವುಗಳ ಹಿಂದಿನ ಅತಿ ಬೌದ್ಧಿಕತೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅದರ ಚಟುವಟಿಕೆಗಳ ಹಿಂದಿನ ಖಾಸಗಿತನ ಕೆಲವರ ಟೀಕೆಗೆ ಗುರಿಯಾಗಿರುವುದೂ ಉಂಟು.

ಇದಕ್ಕೆ ಎಲ್ಲ ಅರ್ಥಗಳಲ್ಲಿ ಸಮಾನಾಂತರವಾಗಿ ನಡೆಯುತ್ತಿರುವ ಸಂಸ್ಥೆ ಚರಕ. ಇದೊಂದು ಗ್ರಾಮೀಣ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ. ಇದರ ಮುಖ್ಯ ಉದ್ದೇಶ, ಕೈಮಗ್ಗ ಕೈಗಾರಿಕೆಯ ಮೂಲಕ ಗ್ರಾಮೀಣ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಅವರ ವ್ಯಕ್ತಿತ್ವವನ್ನು ಬೆಳೆಸುವುದು. ಎಂಭತ್ತರ ದಶಕದಲ್ಲಿ ನೀನಾಸಂ ಭಾಗವಾಗಿಯೇ ಇದ್ದುಕೊಂಡು ನಾಟಕ ನಿರ್ದೇಶನ, ಬರವಣಿಗೆ, ಮರಗೆಲಸ ಇತ್ಯಾದಿಗಳಲ್ಲಿ ತೊಡಗಿಕೊಂಡಿದ್ದ ಹಿರಿಯ ರಂಗಕರ್ಮಿ ಪ್ರಸನ್ನ ಅವರ ಕನಸಿನ ಕೂಸಿದು. ತೊಂಭತ್ತರ ದಶಕದ ಹೊತ್ತಿಗೆ ನೀನಾಸಂ ತನ್ನ ವ್ಯಕ್ತಿತ್ವಕ್ಕೆ ಒಗ್ಗದ ಸಂಸ್ಥೆಯೆಂದು ಕಂಡುಕೊಂಡ ಪ್ರಸನ್ನ, ತಮ್ಮ ಚಟುವಟಿಕೆಗಳ ವಿಸ್ತರಣೆಯಾಗಿ ಚರಕ ಸ್ಥಾಪಿಸಿದರು. ನೀನಾಸಂನಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಭೀಮನಕೋಣೆಯ ಗುಡ್ಡವೊಂದರ ಮೇಲೆ ಪಾಳು ಬಿದ್ದಿದ್ದ ಸರ್ಕಾರಿ ಕೈಗಾರಿಕಾ ಷೆಡ್ಡೊಂದನ್ನು ೧೯೯೬ರಲ್ಲಿ, ಆಗಿದ್ದ ಜನಪರ ಅಧಿಕಾರಿಗಳ ಸಹಾಯದಿಂದ ಪಡೆದುಕೊಂಡ ಅವರು; ಸರ್ಕಾರಿ ಯೋಜನೆಯೊಂದರಡಿಯಲ್ಲಿಯೇ ಅಲ್ಲಿ ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಕೇಂದ್ರವೊಂದನ್ನು ಆರಂಭಿಸಿದರು. ಅದೀಗ ೨೬೭ ಜನ ಗ್ರಾಮೀಣ ಮಹಿಳೆಯರಿಗೆ, ಕೈಮಗ್ಗ ಮತ್ತು ಉಡುಪು ತಯಾರಿಕಾ ಕೌಶಲ್ಯಗಳನ್ನು ಕಲಿಸುವ ಮೂಲಕ ಉದ್ಯೋಗ ಒದಗಿಸಿದೆ. ಅದಕ್ಕಿಂತ ಮುಖ್ಯವಾಗಿ, ಗ್ರಾಮೀಣ ಪ್ರದೇಶದಲ್ಲಿ ಸಹಕಾರ ಸಂಸ್ಥೆಯೊಂದು ಹೇಗೆ ಮಹಿಳೆಯರಿಂದಲೇ ದಕ್ಷವಾಗಿ ಹಾಗೂ ಪರಿಣಾಮಕಾರಿಯಾಗಿ ಕೆಲಸ ಮಾಡುವುದರೊಂದಿಗೆ ವ್ಯಕ್ತಿತ್ವ ನಿರ್ಮಾಣದಲ್ಲೂ ಭಾಗಿಯಾಗಬಹುದೆಂಬುದಕ್ಕೆ ಅದು ಸಾಕ್ಷಿಯಾಗಿದೆ. ಏಕೆಂದರೆ ಅಲ್ಲಿ ಸಾಧಿತವಾಗಿರುವುದು ಆರ್ಥಿಕ ಸ್ವಾವಲಂಬನೆ ಮಾತ್ರವಲ್ಲ, ವ್ಯಕ್ತಿತ್ವ ಸ್ವಾಯತ್ತತೆಯ ವಿಕಾಸ ಕೂಡ. ಇದು ಮಹಿಳಾ ಸಹಕಾರ ಸಂಘವಾದರೂ, ಇಲ್ಲಿ ಮಹಿಳೆಯರಿಗೆ ಬೆಂಬಲವಾಗಿ ೩೬ ಜುನ ಪುರುಷರೂ ಕೆಲಸ ಮಾಡುತ್ತಿದ್ದಾರೆ. ಆದರೆ ಅವರದೇನಿದ್ದರೂ ಬೆಂಬಲದ, ಪ್ರೇರಣೆಯ, ಪ್ರೋತ್ಸಾಹದ ಕೆಲಸ ಮಾತ್ರ! ಆಡಳಿತದ ಮುಂಚೂಣಿಯಲ್ಲಿರುವವರೆಲ್ಲ ಮಹಿಳೆಯರೇ.

ಸಾಮಾಜಿಕ ನ್ಯಾಯವನ್ನೂ ಗಮನದಲ್ಲಿಟ್ಟುಕೊಂಡು ಮೂರು ವರ್ಷಗಳಿಗೊಮ್ಮೆ ಒಂಭತ್ತು ಸದಸ್ಯರ ತನ್ನ ನಿರ್ದೇಶಕ ಮಂಡಳಿಯನ್ನೂ, ಅಧ್ಯಕ್ಷರನ್ನೂ ಮತ್ತು ಕಾರ್ಯದರ್ಶಿಯನ್ನೂ ಚುನಾವಣೆಗಳ ಮೂಲಕ ಆಯ್ದುಕೊಳ್ಳುವ ಚರಕದ ಸದಸ್ಯರು, ವರ್ಷಕ್ಕೊಮ್ಮೆ ವಾರ್ಷಿಕ ಸಾಮಾನ್ಯ ಸಭೆಯನ್ನು ನಡೆಸುತ್ತಾರೆ. ಇದಲ್ಲದೆ ಆಗಾಗ್ಗೆ ನಡೆಯುವ ನಿರ್ದೇಶಕ ಮಂಡಳಿಯ ಸಭೆಗಳ ಮೂಲಕ ತಮ್ಮ ಸಂಬಳ-ಸಾರಿಗೆ, ನೇಮಕಾತಿ, ಸಿಬ್ಬಂದಿ ಶಿಸ್ತು, ಉತ್ಪಾದನೆ, ದರ ನಿಗದಿ, ಮಾರಾಟ, ಅಭಿವೃದ್ಧಿ ಮತ್ತು ಸಂಶೋಧನೆ ಇತ್ಯಾದಿಗಳಿಗೆ ಸಂಬಂಧಪಟ್ಟ ಆಡಳಿತವನ್ನು ತಾವೇ ನಿರ್ವಹಿಸಿಕೊಳ್ಳುತ್ತಾರೆ. ಹೀಗಾಗಿ ಇಲ್ಲಿ ಎಲ್ಲ ವ್ಯವಹಾರಗಳೂ ಸಾರ್ವಜನಿಕ. ಕೇಂದ್ರದ ಜವಳಿ ಖಾತೆಯಿಂದ ಮತ್ತು ರಾಜ್ಯದ ಜಿಲ್ಲಾ ಪಂಚಾಯ್ತ್‌ನಿಂದ ಕೈಮಗ್ಗ ಅಭಿವೃದ್ಧಿ ಯೋಜನೆಗಳಡಿ ದೊರೆಯುವ ಸಣ್ಣ ಪ್ರಮಾಣದ ಅನುದಾನದ ಹೊರತಾಗಿ ಇನ್ನಾವ ಹೊರಗಿನ ಸಹಾಯವನ್ನೂ ಪಡೆಯದ ಈ ಸಂಘ, ತನ್ನ ಹಣಕಾಸಿನ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಸದಾ ಲಾಭದಲ್ಲಿರುವುದು ಅದರ ಯಶಸ್ವೀ ಆಡಳಿತ ಶೈಲಿಯ ಸಂಕೇತವಾಗಿದೆ. ಸದಸ್ಯರು ತಂತಮ್ಮಲ್ಲೇ ಹತ್ತು ಸ್ವಸಹಾಯ ಸಂಘಗಳನ್ನು ಮಾಡಿಕೊಂಡಿದ್ದು ಅವುಗಳಿಂದ ಸಾಲ ಸೌಲಭ್ಯಗಳನ್ನೂ ಪಡೆದುಕೊಳ್ಳುತ್ತಿದ್ದಾರೆ.

ವರ್ಷೇ ವರ್ಷೇ ತನ್ನ ಕೆಲಸಗಾರರ ಸಂಖ್ಯೆಯ ಜೊತೆಗೆ ತನ್ನ ವಹಿವಾಟು ಹಾಗೂ ಲಾಭದ ಪ್ರಮಾಣವನ್ನೂ ಹೆಚ್ಚಿಸಿಕೊಳ್ಳುತ್ತಿರುವ ಚರಕ, ಈಗ ತಿಂಗಳಿಗೆ ಒಂಭತ್ತು ಲಕ್ಷ ರೂಪಾಯಿಗಳ ವಹಿವಾಟು ಮತ್ತು ಸುಮಾರು ಎರಡು ಲಕ್ಷ ರೂಪಾಯಿಗಳ ಲಾಭ ಗಳಿಸುತ್ತಿದೆ. ಈ ಲಾಭವನ್ನು ಸಿಬ್ಬಂದಿಗೆ ರಿಯಾಯ್ತಿ ದರದಲ್ಲಿ ಊಟ, ಚಹಾ-ಕಾಫಿ-ಕಷಾಯಗಳ ಸೌಲಭ್ಯ, ಪ್ರಾವಿಡೆಂಟ್ ನಿಧಿ, ವಾರ್ಷಿಕ ಅರ್ಧ ತಿಂಗಳ ಸಂಬಳದಷ್ಟು ಬೋನಸ್, ಚರಕಾ ಉತ್ಸವಗಳ ಖರ್ಚು ಇತ್ಯಾದಿಗಳಲ್ಲದೆ ಸಂಸ್ಥೆಯ ಅಭಿವೃದ್ಧಿ ಚಟುವಟಿಕೆಗಳಿಗೂ ಬಳಸಲಾಗುತ್ತದೆ. ಈ ವರ್ಷ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ನೆನಪಿನಲ್ಲಿ ಗುಡ್ಡದ ಮೇಲೆ ಬಯಲು ರಂಗ ಮಂದಿರವೊಂದನ್ನೂ, ವಿಚಾರವಾದಿ ಕೆ.ರಾಮದಾಸ್ ಅವರ ನೆನಪಿನಲ್ಲಿ ಅವರ ಮಗಳು ಸ್ನೇಹ ಮತ್ತು ಅಳಿಯ ಓಂಕಾರ್ ನೀಡಿರುವ ನಿಧಿಯೊಂದರ ನೆರವಿನಿಂದ ಚರಕದ ಆವರಣದಲ್ಲೇ ಕೈಮಗ್ಗ ಅಭಿವೃದ್ಧಿ ಘಟಕವನ್ನೂ ಸ್ಥಾಪಿಸಲು ಅಡಿಗಲ್ಲು ಹಾಕಲಾಗಿದೆ.

ನಾನು ಕಳೆದ ಮೂರು ವರ್ಷಗಳಿಂದ ಚರಕಕ್ಕೆ ಆಗಾಗ್ಗೆ ಭೇಟಿ ನೀಡುತ್ತಿರುತ್ತೇನೆ. ಪ್ರಸನ್ನ ನನ್ನ ಮೂರು ದಶಕಗಳ ಗೆಳೆಯ. ಎಪ್ಪತ್ತರ ದಶಕದಲ್ಲಿ ಕಟ್ಟಾ ಮಾರ್ಕ್ಸ್‌ವಾದಿಯಾಗಿ, ಕಮ್ಯುನಿಸ್ಟ್ ಪಕ್ಷದ ಸಕ್ರಿಯ ಸದಸ್ಯರೂ ಆಗಿದ್ದ ಅವರು, ’ಸಮುದಾಯ’ ಎಂಬ ಆ ಕಾಲದ ಅತ್ಯಂತ ಪ್ರಭಾವಿ ಸಾಂಸ್ಕೃತಿಕ ಸಂಘಟನೆಯನ್ನು ಕಟ್ಟಿದವರು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅನೇಕ ಅಪೂರ್ವ ರಂಗ ಪ್ರಯೋಗಗಳನ್ನು ಮಾಡಿ ಪ್ರತಿಭಾವಂತ ರಂಗ ನಿರ್ದೇಶಕ ಎಂದು ಹೆಸರು ಮಾಡಿದವರು. ಆದರೆ ತೊಂಭತ್ತರ ದಶಕದ ಹೊತ್ತಿಗೆ ಮಾರ್ಕ್ಸ್‌ವಾದದ ’ಅಪೂರ್ಣತೆ’ಯನ್ನು ಕಂಡುಕೊಂಡು, ಭಾರತೀಯ ಬದುಕಿನ ’ವಾಸ್ತವ’ ಸತ್ಯಕ್ಕಾಗಿ ಗಾಂಧಿ ವಿಚಾರಗಳಿಂದ ಹಿಡಿದು ರಮಣ ಮಹರ್ಷಿಗಳ ಉಪದೇಶಗಳವರೆಗೆ ಅಲೆದವರು. ಇದರ ಫಲವಾಗಿ ದೇಶೀ ಚಿಂತನೆಯೆಡೆಗೆ ಆಕರ್ಷಿತರಾಗಿ, ದೇಸೀ ಜೀವನ ಪದ್ಧತಿಯಲ್ಲಿ ಪ್ರಯೋಗ ಮಾಡ ಹೊರಟವರು.

ಮೂರು ದಶಕಗಳ ಹಿಂದೆ ಪ್ರಸನ್ನರೊಂದಿಗೆ ಇದ್ದ ನನ್ನ ತಾತ್ವಿಕ ಜಗಳಗಳು ಈಗ ಒಂದು ತಹಬಂದಿಗೆ ಬಂದಿದೆ. ಅದಕ್ಕೆ ಕಾರಣ, ಅವರ ಈ ಚರಕ. ಕಳೆದ ಮೂರು ದಶಕಗಳಲ್ಲಿ ಅವರಲ್ಲಿ ನಾನು ಕಾಣುತ್ತ ಬಂದ ತಾತ್ವಿಕ ಹಾಗೂ ವೈಯುಕ್ತಿಕ ದೌರ್ಬಲ್ಯಗಳೆಲ್ಲವನ್ನೂ ಇದು ಮುಚ್ಚಿ ಹಾಕಿದೆ. ನಾವೆಲ್ಲ ಮಾತಾಡುತ್ತೇವೆ;ಬದಲಾವಣೆಯ ಸಾಧ್ಯತೆಗಳ ಬಗ್ಗೆ ನಿರಂತರ ಬೌದ್ಧಿಕ ವಿಶ್ಲೇಷಣೆ ನಡೆಸುತ್ತೇವೆ. ಅದರೆ ಪ್ರಸನ್ನ ಮಾಡಿ ತೋರಿಸಿದ್ದಾರೆ! ಚರಕದ ವಿಚಾರ ತಮ್ಮ ಮನಸ್ಸಿನಲ್ಲಿ ಮೂಡಿದ್ದು, ಮಲೆನಾಡಿನಲ್ಲಿ ಕೈಗಾರಿಕೆಗಳೇ ಇಲ್ಲದೆ ಜನ ಕೃಷಿಗಾಗಿ ಒಂದೇ ಸಮನೆ ಕಾಡನ್ನು ಕಡಿಯತೊಡಗಿದ್ದನ್ನು ಗಮನಿಸಿದಾಗ ಎನ್ನುವ ಪ್ರಸನ್ನ, ಬಟ್ಟೆ ಕೈಗಾರಿಕೆಯೇ ಗ್ರಾಮೀಣ ಆರ್ಥಿಕತೆಗೆ ನಿಜವಾದ ಆಧಾರವಾಗಬಲ್ಲುದು ಎಂಬ ಗಾಂಧಿ ನಂಬಿಕೆಯ ಸ್ಫೂರ್ತಿಯಿಂದ ಈ ಸಂಸ್ಥೆಯನ್ನು ಕಟ್ಟಿದ್ದಾರೆ. ನೇಕಾರಿಕೆಯ ಪರಂಪರೆಯೇ ಇಲ್ಲದೆಡೆ ಅದನ್ನು ಒಂದು ಜಾತಿ ಮೀರಿದ ವೃತ್ತಿಯನ್ನಾಗಿ ಇಲ್ಲಿ ಪರಿಚಯಿಸಿದ್ದಾರೆ. ಇದು ನಮ್ಮ ಗ್ರಾಮ ಜೀವನ ಸಂಸ್ಕೃತಿಯ ಸರಳ ಲಯವನ್ನೂ, ನಿರಾಳ ಚೆಲುವನ್ನೂ ಭಂಗಗೊಳಿಸದ ರೀತಿಯಲ್ಲಿ ನಮ್ಮ ಕಣ್ಮುಂದೆಯೇ ಉದ್ಯೋಗ ನಿರ್ಮಾಣ ಮಾಡತೊಡಗಿದೆ. ಭೀಮನಕೋಣೆಯ ಆಸ ಪಾಸಿನ ಹಳ್ಳಿಗಳ ಹುಡುಗಿಯರು ಉದ್ಯೋಗ ಹುಡುಕಿಕೊಂಡು ನಗರಗಳಿಗೆ ವಲಸೆ ಹೋಗಿರುವ ಉದಾಹರಣೆ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ ಇದ್ದರೆ, ಅದರ ಕೀರ್ತಿ ಚರಕಕ್ಕೇ ಸಲ್ಲಬೇಕು.

ಚರಕಾ ಕಾರ್ಯತಃ ಒಂದು ಕೈಮಗ್ಗ ಹಾಗೂ ಹೊಲಿಗೆ ಕೇಂದ್ರ. ಇದು ಸುತ್ತಮುತ್ತಲ ನಾಲ್ಕಾರು ಹಳ್ಳಿಗಳಲ್ಲಿ ಸ್ಥಾಪಿಸಲಾಗಿರುವ ತನ್ನದೇ ೫೫ ಮಗ್ಗಗಳಿಂದಲ್ಲದೆ ದಾವಣಗೆರೆ, ಜಗಳೂರು, ಗಜೇಂದ್ರಗಡ ಮತ್ತು ಮಹಾಲಿಂಗಪುರಗಳಲ್ಲಿನ ಸ್ಥಳೀಯ ಕೈಮಗ್ಗ ಸಂಘಗಳ ಸುಮಾರು ೪೫ ಮಗ್ಗಗಳಿಂದ ನೇಯ್ದ ಬಟ್ಟೆ ಪಡೆಯುತ್ತದೆ. ಅದರಿಂದ ಹೆಂಗಸರ ಮತ್ತು ಗಂಡಸರ ವಿವಿಧ ರೀತಿಯ ಉಡುಪುಗಳು, ಕೌದಿ ಇತ್ಯಾದಿ ಹಾಸಿಗೆ ಬಟ್ಟೆಗಳು, ವೈವಿಧ್ಯಮಯ ಚೀಲಗಳು, ಕಛೇರಿ ಕಡತ ಕವಚಗಳೂ ಸೇರಿದಂತೆ ಸುಮಾರು ೫೬ ಮಾದರಿಯ ಉತ್ಪನ್ನಗಳನ್ನು ತಯಾರು ಮಾಡುತ್ತದೆ. ಬೆಂಗಳೂರು, ಸಾಗರ, ಧಾರವಾಡಗಳಲ್ಲಿರುವ ತನ್ನ ’ದೇಸಿ’ ಹೆಸರಿನ ಅಂಗಡಿಗಳ ಮೂಲಕ ಈ ಉತ್ಪನ್ನಗಳು ಮಾರಾಟವಾಗುತ್ತವೆ. ತಿಂಗಳಲ್ಲಿ ೧೩ ಸಾವಿರ ಮೀಟರ್ ಬಟ್ಟೆಯನ್ನು ಬಳಸುವ ಚರಕ, ಬಟ್ಟೆಯ ನೇಯ್ಗೆ, ನುಣುಪು, ಬಣ್ಣ ತಯಾರಿಕೆ, ವರ್ಣ ಮತ್ತು ವಸ್ತು ವಿನ್ಯಾಸಗಳನ್ನು ಕೆಲವು ಪರಿಣತರ ಮಾರ್ಗದರ್ಶನದಲ್ಲಿ ತಾನೇ ನಿರ್ವಹಿಸುತ್ತದೆ. ಚರಕದಲ್ಲಿ ತಯಾರಾಗಿ ದೇಸಿ ಮುದ್ರೆಯೊಂದಿಗೆ ಮಾರಾಟವಾಗುವ ಈ ಉತ್ಪನ್ನಗಳ ಹೆಗ್ಗಳಿಕೆಯೆಂದರೆ, ಅವುಗಳ ರಾಜಿಯಿಲ್ಲದ ಗುಣಮಟ್ಟ. ನೇಯ್ಗೆ, ವರ್ಣ ವಿನ್ಯಾಸ, ಕತ್ತರಿಸುವಿಕೆ ಮತ್ತು ಹೊಲಿಗೆ-ಈ ಎಲ್ಲ ಹಂತಗಳಲ್ಲ್ಲಿ ಕಟ್ಟುನಿಟ್ಟಿನ ಗುಣಮಟ್ಟ ನಿಯಂತ್ರಣವನ್ನು ಇಲ್ಲಿ ಕೈಗೊಳ್ಳಲಾಗುತ್ತದೆ. ಅಂತಿಮವಾಗಿ ಮಾರಾಟಕ್ಕೆ ಕಳಿಸುವ ಪ್ರತಿಯೊಂದು ಉತ್ಪನ್ನವನ್ನೂ ಗುಣಮಟ್ಟ ಪರಿಶೀಲನೆಗೆ ಒಳಪಡಿಸುವುದು ಚರಕದ ವಿಶೇಷ ಎಂದೇ ಹೇಳಬಹುದು. ಹಾಗಾಗಿಯೇ ಈ ದೇಸಿ ಉತ್ಪನ್ನಗಳಿಗೆ ಎಲ್ಲಿಲ್ಲದ ಬೇಡಿಕೆ. ಎಂದೂ ಯಾವುದೇ ಉತ್ಪನ್ನದ ದಾಸ್ತಾನು ಉಳಿಯದ ದಾಖಲೆ ದೇಸಿಯದು!

ಇಷ್ಟೊಂದು ಬೇಡಿಕೆ ಇರುವಾಗ ರಾಜ್ಯಾದ್ಯಂತ ಅಥವಾ ರಾಷ್ಟ್ರಾದ್ಯಂತ ಮಾರಾಟ ಕೇಂದ್ರಗಳನ್ನು ಏಕೆ ತೆರೆಯಬಾರದು? ತೆರೆಯಬಹುದು. ಆದರೆ ಅವುಗಳ ಬೇಡಿಕೆಯನ್ನು ಪೂರೈಸುವುದು ಹೇಗೆ? ಚರಕದ ವಿಶಿಷ್ಟತೆ ಇರುವುದೇ ಇಲ್ಲಿ. ಅದು ಬೃಹತ್ ಉದ್ಯಮವಾಗಿ ಬೆಳೆಯುವ ಆಕಾಂಕ್ಷೆಯನ್ನೇ ಹೊಂದಿಲ್ಲ. ಹಾಗೆ ನೋಡಿದರೆ, ಅದರ ಹುಟ್ಟೇ ಹಾಗಿದೆ. ಅದು ತನ್ನನ್ನು ತಾನೇ ಮೀರಿ ಹೋಗದ ಅಂಕೆ-ಶಂಕೆಗಳಲ್ಲಿ ಕೆಲಸ ಮಾಡುತ್ತದೆ. ತಾನೇ ಎಲ್ಲ ಕಡೆ ಬೆಳೆದು ಹರಡುವ ಬಂಡವಾಳಶಾಹಿ ಉದ್ಯಮವಾಗಲು ನಿರಾಕರಿಸಿದೆ. ಮಾನವ ಸಂಪನ್ಮೂಲದ ಸ್ವರೂಪ, ಬಣ್ಣಗಾರಿಕೆ ಹಾಗೂ ವಸ್ತ್ರ ವಿನ್ಯಾಸ ಸೇರಿದಂತೆ ಉತ್ಪಾದನೆಯ ತಾಂತ್ರಿಕತೆ ಮತ್ತು ಆಡಳಿತ ಶೈಲಿ-ಈ ಎಲ್ಲ ವಿಷಯಗಳಲ್ಲಿ ಸ್ಥಳಿಯ ವೈಶಿಷ್ಟ್ಯವನ್ನೇ ನಂಬಿ ಬೆಳೆದಿರುವ ಚರಕ, ಈ ಸ್ಥಳೀಯತೆಯೇ ತನ್ನ ಶಕ್ತಿ, ಯಶಸ್ಸಿನ ಗುಟ್ಟು ಎಂದು ಅರಿತಿದೆ. ಒಮ್ಮೆ ಈ ಸ್ಥಳೀಯತೆಯನ್ನು ಉಲ್ಲಂಘಿಸಿದರೆ, ಎಲ್ಲವೂ ಕುಸಿಯಲಿದೆ ಎಂಬ ಎಚ್ಚರವೂ ಅದಕ್ಕಿದೆ.

ಹಾಗಾಗಿಯೇ ಚರಕ; ತನ್ನ ಯಶಸ್ಸನ್ನೂ, ಲಾಭವನ್ನೂ ಬಂಡವಾಳ ಮಾಡಿಕೊಂಡು ಎಲ್ಲ ಕಡೆ ಹರಡಿಕೊಳ್ಳುವ ಪ್ರಯತ್ನ ಮಾಡಿಲ್ಲ. ಬದಲಿಗೆ, ರಾಜ್ಯದ ಹಲವು ಕಡೆ ಸರ್ಕಾರದ ದೋಷಪೂರ್ಣ ನೀತಿ, ಭ್ರಷ್ಟಾಚಾರ ಮತ್ತು ಪಾರಂಪರಿಕ ನೇಕಾರರ ವೃತ್ತಿಪರತೆಯ ಅವನತಿ ಹಾಗೂ ಸಂಘಟನೆಯ ಕೊರತೆಯಿಂದಾಗಿ ರೋಗಗ್ರಸ್ತವಾಗಿರುವ ಕೈಮಗ್ಗ ಕೈಗಾರಿಕೆಯನ್ನು ಪುನಃಶ್ಚೇತನಗೊಳಿಸುವ ಪ್ರಯತ್ನವನ್ನೂ ತನ್ನ ಮಿತಿಗಳಲ್ಲೇ ಅದು ಮಾಡುತ್ತಿದೆ. ಇಂತಹ ಪ್ರಯತ್ನದ ಫಲವಾಗಿಯೇ ಅದು ಬೇರೆ ಬೇರೆ ಊರುಗಳಲ್ಲಿ ಕೈಮಗ್ಗ ಸಂಘಗಳ ರಚನೆಯಲ್ಲಿ ಪಾತ್ರ ವಹಿಸಿ, ಅವುಗಳಿಂದ ಬಟ್ಟೆ ನೇಯಿಸಿ ಖರೀದಿ ಮಾಡುವ ವ್ಯವಸ್ಥೆ ಮಾಡಿಕೊಂಡಿರುವುದು. ಹಾಗೇ, ಪ್ರಸನ್ನ ರಾಷ್ಟ್ರ ಮಟ್ಟದ ಕೈಮಗ್ಗ ಕೈಗಾರಿಕೆಯ ಪುನಃಶ್ಚೇತನ ಆಂದೋಲನದಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಾ, ಜವಳಿ ಇಲಾಖೆಯ ಕಾರ್ಯಕ್ರಮಗಳಿಗೆ ಸಲಹಾಕಾರರಾಗಿಯೂ ಕೆಲಸ ಮಾಡುತ್ತಿದ್ದಾರೆ. ಅವರ ಪ್ರಕಾರ, ’ಸರ್ಕಾರಿ ಅಧಿಕಾರಿಗಳನ್ನು ಸುಮ್ಮನೆ ಬೈಯುತ್ತಾ ಕೂರುವುದರಿಂದ ಪ್ರಯೋಜನವಿಲ್ಲ. ನಾವೂ ನಿಜವಾಗಿ ಏನೂ ಮಾಡದೆ, ಈವರೆಗೆ ಮಾಡಿದ್ದು ಬರೀ ಇದನ್ನೇ! ಸರ್ಕಾರಿ ನೌಕರರಲ್ಲ್ಲೂ ಜನಪರರಾದವರೂ, ದಕ್ಷರೂ ಇದ್ದಾರೆ. ಅವರನ್ನು ಗುರುತಿಸಿ ಬಳಸಿಕೊಳ್ಳುವುದೇ ಸಾಮಾಜಿಕ ಪುನಾರಚನೆಯ ಮಾತಾಡುವ ನಾವು ಮಾಡಬೇಕಾದ ತುರ್ತು ಕೆಲಸ.’ ಇಂತಹ ಸಾಮಾಜಿಕ ಪುನಾರಚನೆಯ ಒಂದು ಸಣ್ಣ ಹಾಗೂ ಸುಂದರ ಉದಾಹರಣೆಯೇ ಚರಕ.

ಇದನ್ನೇ ಈ ಬಾರಿಯ ’ಚರಕ ಉತ್ಸವ’ದ ಅಂಗವಾಗಿ ಏರ್ಪಡಿಸಲಾಗಿದ್ದ ’ನೇಕಾರರ ಸಮ್ಮೇಳನ’ದ ಗೋಷ್ಠಿಯೊಂದರಲ್ಲಿ ಮಾತನಾಡಬೇಕಾಗಿ ಬಂದ ನಾನೂ ಹೇಳಿದ್ದು. ಬಡತನದಲ್ಲಿ ತೊಯ್ದು ಬಂದಂತಿದ್ದ ನೇಕಾರರ ಪ್ರತಿನಿಧಿಗಳು ಅಂದು ತಮ್ಮ ವೃತ್ತಿ ಜೀವನದ ಬಗ್ಗೆ ಆಡಿದ ಹತಾಶೆಯ ಮಾತುಗಳನ್ನು ಕೇಳಿ ನೊಂದ ನಾನು ಅವರಿಗೆ, ’ಚರಕದ ಕಾರ್ಯಶೈಲಿಯನ್ನು ಹತ್ತಿರದಿಂದ ಗಮನಿಸಿ. ನಿಮ್ಮ ಊರುಗಳಲ್ಲೂ ಇದೇ ಮಾದರಿಯ ಸಹಕಾರ ಸಂಘ ಸ್ಥಾಪಿಸಿಕೊಳ್ಳುವ ಪ್ರಯತ್ನ ಮಾಡಿ. ನೇಕಾರರ ಸಮ್ಮೇಳನಗಳನ್ನು ಜಾತಿ ಸಮ್ಮೇಳನಗಳಂತೆ ಸಂಘಟಿಸಿ, ಸರ್ಕಾರಕ್ಕೆ ಸವಲತ್ತುಗಳಿಗಾಗಿ ಅಹವಾಲು ಸಲ್ಲಿಸುತ್ತಾ ಸರ್ಕಾರಿ ಕಛೇರಿಗಳಿಗೆ ಅಲೆಯುವ ಬದಲು; ವೃತ್ತಿಪರತೆಯನ್ನು ರೂಢಿಸಿಕೊಂಡು ಕಾಲಕ್ಕೆ ತಕ್ಕಂತಹ ಗುಣಮಟ್ಟದ ಮತ್ತು ವಿನ್ಯಾಸಗಳ ಉತ್ಪನ್ನಗಳನ್ನು ತಯಾರಿಸಿ, ನಿಮ್ಮದೇ ಮಾರಾಟ ವ್ಯವಸ್ಥೆ ಮಾಡಿಕೊಳ್ಳಿ’. ನನ್ನ ಈ ಮಾತಿಗೆ ಸ್ಫೂರ್ತಿ ಒದಗಿಸಿದ್ದು, ಗಜೇಂದ್ರಗಢದ ಹಿರಿಯ ನೇಕಾರರೊಬ್ಬರು ತಮ್ಮ ವೃತ್ತಿಬಾಂಧವರಿಗೆ ಹೇಳಿದ ಈ ಕಿವಿ ಮಾತು: ’ನೇಕಾರ ಕಲಾಕಾರನಾಗದೆ, ಕೂಲಿಕಾರನಾಗಿದ್ದೇ ನಮ್ಮ ದುಃಸ್ಥಿತಿಗೆ ಕಾರಣ. ಗಿರಾಕಿ ನಮ್ಮ ಸರಕಿನ ಬೆಲೆ ನೋಡಿ ಬೇಕಾದರೆ ಹಿಂದಕ್ಕೆ ಹೋಗಲಿ;ಆದರೆ ನಮ್ಮ ಸರಕಿನ ಗುಣಮಟ್ಟ ನೋಡಿ ಹಿಂದಕ್ಕೆ ಹೋಗುವಂತಿರಬಾರದು!’

ವಾಸ್ತವವಾಗಿ ಈ ಮಾತಿನ ಹಿಂದಿನ ಮರ್ಮವೇ ಚರಕದ ಯಶಸ್ಸಿಗೂ ಕಾರಣವಾಗಿರುವುದು. ಇಲ್ಲಿನ ಯಾವ ಹುಡುಗಿಯೂ ಕೂಲಿಕಾರಳಲ್ಲ. ಇಲ್ಲಿನ ತರಬೇತಿ, ಕಾರ್ಯಶೈಲಿ, ಕೆಲಸದ ವಾತಾವರಣ ಅವರನ್ನು ಕಲಾಕಾರನ್ನಾಗಿ ಪರಿವರ್ತಿಸಿದೆ. ಹಾಗಾಗಿಯೇ ಅವರು ಸದಾ ಹಸನ್ಮುಖಿಗಳು, ಚೈತನ್ಯದ ಚಿಲುಮೆಗಳು. ಹಾಗೇ ಶಿಸ್ತಿನ ಸಿಪಾಯಿಗಳು ಕೂಡಾ! ಗುಡ್ಡವೊಂದರ ಹಿನ್ನೆಲೆಯಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಆಲದ ಮರವೊಂದರ ಸುತ್ತ ಅದರ ಪ್ರಾಕೃತಿಕ ಸೌಂದರ್ಯದ ಜೊತೆ ಸಮರಸವಾಗಿರುವ ಶೈಲಿಯಲ್ಲಿ ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಿಕೊಂಡು ಕಟ್ಟಿರುವ ಪುಟ್ಟ ಕಟ್ಟಡಗಳನ್ನೊಳಗೊಂಡ ಚರಕದ ವಿಶಾಲ ಆವರಣವೇ ಅಲ್ಲಿಗೆ ಪ್ರವೇಶಿಸುವವರಿಗೆ ಒಂದು ವಿಶೇಷ ನೆಮ್ಮದಿಯ ಅನುಭವ ನೀಡುತ್ತದೆ. ಸೌರಶಕ್ತಿ, ಮಳೆಕೊಯ್ಲು, ಇಂಗು ಗುಂಡಿಗಳಂತಹ ನೈಸರ್ಗಿಕ ಸಂಪನ್ಮೂಲ ಸೌಲಭ್ಯಗಳಿಂದ ಸುಸಜ್ಜಿತವಾದ ಮತ್ತು ಜನಪದ ಸೊಗಡಿನ ಹಸೆ ಚಿತ್ರಗಳಿಂದ ಅಲಂಕೃತವಾದ ಈ ಆವರಣ, ಒಂದು ಅನನ್ಯ ದೇಶೀ ಸೌಂದರ್ಯದ ಪ್ರತೀಕವಾಗಿದೆ. ಗಾಂಧಿ ಅರ್ಥಶಾಸ್ತ್ರ ಮತ್ತು ಗಾಂಧಿ ಜೀವನ ಮಾದರಿ ಅವಾಸ್ತವಿಕ ಹಾಗೂ ಅವ್ಯಾವಾಹರಿಕ ಎನ್ನುವವರಿಗೆ ಇಲ್ಲಿದೆ, ಕಣ್ತೆರೆಸುವಂತಹ ಒಂದು ಜೀವಂತ ಉದಾಹರಣೆ. ಚರಕ ಕೇವಲ ಒಂದು ಉದ್ಯೋಗ ಅಥವಾ ಕೈಗಾರಿಕಾ ಸಂಸ್ಥೆಯಲ್ಲ. ಅದೊಂದು ನವೀನ ಜೀವನ ಮಾದರಿಯ ಪ್ರಯೋಗಶಾಲೆಯೂ ಹೌದು.

ಇದರ ಸ್ಪಂದನಶೀಲ ಆಚರಣೆಯನ್ನು ನೋಡಬೇಕಾದರೆ, ನೀವಿಲ್ಲಿ ಚರಕದ ಸಾಂಸ್ಕೃತಿಕ ಶಾಖೆಯಂತಿರುವ ’ಕವಿ ಕಾವ್ಯ ಟ್ರಸ್ಟ್’ನ ಆಶ್ರಯದಲ್ಲಿ ಪ್ರತಿ ವರ್ಷ ನಡೆಯುವ ’ಚರಕ ಉತ್ಸವ’ಕ್ಕೆ ಬರಬೇಕು. ಹಗಲು ಪ್ರಚಲಿತ ವಿಷಯವೊಂದರ ಬಗ್ಗೆ ಗಂಭೀರ ಚರ್ಚಾ ಗೋಷ್ಠಿಗಳು, ಸಂಜೆ ನಾಟಕ, ಯಕ್ಷಗಾನ, ಸಂಗೀತಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡಿರುವ ಈ ಉತ್ಸವ; ಬಗೆ ಬಗೆಯ ತಿಂಡಿಗಳು, ಮಕ್ಕಳ ಆಟಿಕೆಗಳು, ಬಟ್ಟೆ ಮತ್ತಿತರ ಕೈಮಗ್ಗದ ಉತ್ಪನ್ನಗಳು ಮತ್ತು ಪುಸ್ತಕಗಳ ಅಂಗಡಿ-ಮುಂಗಟ್ಟುಗಳೊಂದಿಗೆ, ಊರ ಜಾತ್ರೆ ಅಥವಾ ರಥೋತ್ಸವದ ಉತ್ಸಾಹ, ಶ್ರದ್ಧೆ ಮತ್ತು ಸಂಭ್ರಮಗಳಿಂದ ಜರುಗುತ್ತದೆ! ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ಅತ್ಯುತ್ತಮ ಕೆಲಸಗಾರರಿಗೆ ’ಕಾಯಕ ಪ್ರಶಸ್ತಿ’ಗಳೆಂಬ ವಾರ್ಷಿಕ ಬಹುಮಾನಗಳನ್ನೂ ವಿತರಿಸಲಾಗುತ್ತದೆ. ರಾಜ್ಯದ ವಿವಿಧ ಕ್ಷೇತ್ರಗಳ ಕಾರ್ಯಕರ್ತರು, ಚಿಂತಕರು, ಕಲಾವಿದರ ಜೊತೆಗೆ ದೊಡ್ಡ ಸಂಖ್ಯೆಯಲ್ಲಿ ಜನಸಾಮಾನ್ಯರೂ ಪಾಲ್ಗೊಳ್ಳುವ ಈ ಮೂರು ದಿನಗಳ ಉತ್ಸವದ ಉಸ್ತುವಾರಿ, ಪೂರ್ತಿಯಾಗಿ ಚರಕದ ಮಹಿಳೆಯರದೇ. ಪುರುಷರ ಪಾತ್ರ ಏನಿದ್ದರೂ ನೇಪಥ್ಯದ್ದು. ಈ ಉಸ್ತುವಾರಿಯಲ್ಲಿ ತಮ್ಮ ಶಕ್ತಿ-ಸಾಮರ್ಥ್ಯಗಳ ಜೊತೆಗೆ ಈ ಹುಡುಗಿಯರು ಮಾಡುವ ಮುಗ್ಧ ತಪ್ಪುಗಳನ್ನು ನೋಡುವುದೂ ಒಂದು ಆನಂದವೇ! ಅಂದ ಚೆಂದದ ಉಡುಪು ತೊಟ್ಟ ವಿವಿಧ ವಯೋಮಾನಗಳ ಈ ಹುಡುಗಿಯರು ಅಲ್ಲಿ ತಮ್ಮ ವಿವಿಧ ತೆರನ ಕ್ರಿಯಾಶೀಲತೆಯೊಂದಿಗೆ, ಕಣ್ತುಂಬುವಂತಹ ಬಣ್ಣದ ಹೂಗಳ ತೋಟವೊಂದರ ವಾತಾವರಣವನ್ನು ನಿರ್ಮಿಸಿಬಿಡುತ್ತಾರೆ. ಇವರು ತಮ್ಮ ನಾಟಕ, ಕೋಲಾಟ, ಹಾಡುಗಳು, ಕಿರು ರೂಪಕಗಳ ಪ್ರದರ್ಶನಗಳ ಜೊತೆಗೆ ಅತಿಥಿಗಳ ಊಟ-ತಿಂಡಿ-ವಸತಿಗಳ ವ್ಯವಸ್ಥೆಯನ್ನೂ ಪ್ರೀತಿ-ಗೌರವಗಳೊಂದಿಗೆ ನೋಡಿಕೊಳ್ಳುವ ಪರಿ, ಚರಕ ಒಂದು ವಿಶಿಷ್ಟ ಸಾಂಸ್ಕೃತಿಕ ಮಾದರಿಯಾಗಿಯೂ ಬೆಳೆಯುತ್ತಿರುವ ಸೂಚನೆ ನೀಡುತ್ತದೆ.

ಉತ್ಸವದ ಅಂಗವಾಗಿ ಕಳೆದ ವರ್ಷಗಳಲ್ಲಿ ಏರ್ಪಡಿಸಲಾಗಿದ್ದ ಲೇಖಕಿಯರ ಸಮಾವೇಶವಿರಲಿ, ಆರ್ಥಿಕ ಅಭಿವೃದ್ಧಿ ಮತ್ತು ಗ್ರಾಮೀಣ ಬಡತನ ಕುರಿತ ವಿಚಾರ ಸಂಕಿರಣವಿರಲಿ ಅಥವಾ ಈ ವರ್ಷ ಆಯೋಜಿಸಲಾಗಿದ್ದ ನೇಕಾರರ ಸಮಾವೇಶವೇ ಆಗಿರಲಿ, ಎಲ್ಲ ಚರ್ಚೆಗಳನ್ನೂ ಗಂಭೀರವಾಗಿ ಕೂತು ಆಲಿಸುವ ಮತ್ತು ಅಗತ್ಯವೆನಿಸಿದರೆ ತಮ್ಮ ಮಿತಿಗಳಲ್ಲೇ ಸಕ್ರಿಯವಾಗಿ ಭಾಗವಹಿಸುವ ಈ ಚರಕದ ಹುಡುಗಿಯರು, ನನ್ನ ಕಣ್ಮುಂದೆಯೇ ಕಳೆದ ಮೂರು ವರ್ಷಗಳಲ್ಲಿ ತಮ್ಮ ಪ್ರಸ್ತುತಿ, ಅಭಿವ್ಯಕ್ತಿ, ಆತ್ಮ ವಿಶ್ವಾಸ ಹಾಗೂ ಪ್ರತಿಭಾ ಸಂಘಟನೆಗಳ ಮೂಲಕ ತಮ್ಮ ವ್ಯಕ್ತಿತ್ವಗಳನ್ನು ಕಟ್ಟಿಕೊಂಡಿರುವ ರೀತಿ ನನ್ನಲ್ಲಿ ಆಶ್ಚರ್ಯವನ್ನೂ, ಇಂತಹ ಪ್ರಯೋಗಗಳ ಬಗೆಗೆ ಹೊಸ ಭರವಸೆಯನ್ನೂ ಹುಟ್ಟಿಸಿದೆ. ಈಗ ಇಲ್ಲಿನ ಭಾಗೀರಥಿ, ಹಸೆ ಗೌರಮ್ಮ, ಮಹಾಲಕ್ಷ್ಮಿ, ಪಾರ್ವತಿ, ಅರುಣಾ, ಗಾಯತ್ರಿ, ದಾಕ್ಷಾಯಿಣಿ, ಚೈತ್ರ, ಸುಮಿತ್ರಾ, ಚಂದ್ರಕಲಾ ಇತ್ಯಾದಿ ಮತ್ತು ಇವರ ಹಿಂದಿರುವ ಕುಲಕರ್ಣಿ, ರಮೇಶ್, ಗಣಪತಿ, ಸುಂದರ್, ರುದ್ರಪ್ಪ, ಬಸವರಾಜಪ್ಪ ಮುಂತಾದವರು ಇಲ್ಲಿಗೆ ಸ್ವಸಂತೋಷಕ್ಕಾಗಿ ಆಗಾಗ್ಗೆ ಭೇಟಿ ನೀಡುವ ನನಗೆ ಮತ್ತು ನನ್ನ ಶ್ರೀಮತಿಗೆ ಬರೀ ಹೆಸರುಗಳಾಗಿ ಉಳಿದಿಲ್ಲ!

ಶಿವಮೊಗ್ಗ-ಸಾಗರದ ಕಡೆ ಹೋದಾಗ ಒಮ್ಮೆ ಚರಕಕ್ಕೆ ಹೋಗಿ ಬನ್ನಿ. ಸಾಧ್ಯವಾದರೆ ಮಧ್ಯಾಹ್ನ ಅಲ್ಲಿ ದತ್ತ ಗಣಪತಿ ಭಟ್ಟರು ಸರಳವಾಗಿ, ಅದರೆ ರುಚಿಕಟ್ಟಾಗಿ ಮಾಡಿ ಪ್ರೀತಿಯಿಂದ ಬಡಿಸುವ ಊಟವನ್ನೂ ಸವಿದು ಬನ್ನಿ!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮರೆತು ಹೋಯ್ತು.....ಸವಿವರವಾಗಿ ವಿವರಿಸಿರುವಿರಿ ಧನ್ಯವಾದಗಳು, ನಮ್ಮ ಗುಡಿ ಕೈಗಾರಿಕೆಗಳಿಗೆ ಹೊಸ ರೂಪ ತುಂಬುವ ದಾರಿ ಇಲ್ಲಿ ಕಾಣುತ್ತಿದ್ದೆ.

ಪ್ರಿಯ ನರೇಂದ್ರ ಅವರೇ,
ಧನ್ಯವಾದಗಳು. ಚರಕ ಉತ್ಸವ ಪ್ರತಿ ವರ್ಷ ಜನವರಿ ತಿಂಗಳಲ್ಲಿ ಅವರಿಗೆ ಅನುಕೂಲವಾದ ದಿನಾಂಕಗಳಂದು ನಡೆಯುತ್ತದೆ. ಉತ್ಸವಕ್ಕಾಗಿ ಕಾಯಬೇಡಿ! ಭಾನುವಾರ ಮತ್ತು ಇತರೆ ಸರ್ಕಾರಿ ರಜಾ ದಿನಗಳ ಹೊರತಾಗಿ ಯಾವಾಗ ಬೇಕಾದರೂ ನೀವು ಹೋಗಿ, ನೋಡಿ ಸಂತೋಷ ಪಡಬಹುದು.
-ಡಿ.ಎಸ್.ನಾಗಭೂಷಣ