ನಮ್ಮೊಳಗಿನ ಶಾಶ್ವತ ಸಂಗಾತಿಗಳು

To prevent automated spam submissions leave this field empty.

ಏಕಾಂತದಲ್ಲಿ ಕುಳಿತು ಈ ಲೇಖನವನ್ನು ಓದಬೇಕೆಂದಿದ್ದೀರಾ? ಹಾಗೆ ನೀವು ಓದಲಾರಿರಿ. ಏಕೆನ್ನುವಿರಾ? ‘ನಾನು’ ಮತ್ತು ‘ಏಕಾಂತ’ ಎನ್ನುವುದು ನಮ್ಮ ಭ್ರಮೆ. ಏಕೆಂದು ನೋಡೋಣ. ಜೈವಿಕ ಪರಿಭಾಷೆಯಲ್ಲಿ ಹೇಳುವುದಾದರೆ ‘ನಾನು’ ಎಂಬ ಈ ಶರೀರ ಸುಮಾರು ಹತ್ತು ಟ್ರಿಲಿಯನ್(ಬಿಡುವಾಗಿರುವ ಮಕ್ಕಳಿಗೆ ಒಂದರ ಮುಂದೆ ಹದಿಮೂರು ಸೊನ್ನೆಗಳನ್ನು ಹಾಕಲು ಹೇಳಿ. ಅದೇ ಹತ್ತು ಟ್ರಿಲಿಯನ್) ವಿವಿಧ ರೀತಿಯ, ವಿವಿಧ ಅಂಗಾಂಗಗಳ ಜೀವಕೋಶಗಳಿಂದ ರೂಪಿಸಲ್ಪಟ್ಟಿದೆ. ಈ ಎಲ್ಲಾ ಹತ್ತು ಟ್ರಿಲಿಯನ್ ಜೀವಕೋಶಗಳು ‘ನಮ್ಮವು’. ಏಕೆಂದರೆ ಅವುಗಳಲ್ಲಿರುವುದು ನಮ್ಮವೇ ‘ಜೀನ್’(gene)ಗಳು. ಆದರೆ ಈ ಹತ್ತು ಟ್ರಿಲಿಯನ್ ಜೀವಕೋಶಗಳಷ್ಟೇ ನಮ್ಮ ಶರೀರ ಎಂದು ಹೇಳಲಾಗದು. ನಮ್ಮ ‘ಜೀರ್ಣಾಂಗ’ಗಳಲ್ಲಿ ನಮ್ಮ ಜೀವಕೋಶಗಳಿಗಿಂತ ಭಿನ್ನವಾದ, ಬೇರೆ ವಿಧವಾದ ‘ಜೀನ್’ಗಳನ್ನು ಜೋಡಿಸಿಕೊಂಡಿರುವ ಅಪಾರಪ್ರಮಾಣದ ಸೂಕ್ಷ್ಮಾಣುಗಳು ವಾಸಿಸುತ್ತಿದೆ. ಆಕಾರದಲ್ಲಿ, ಗಾತ್ರದಲ್ಲಿ, ನಮ್ಮ ಜೀವಕೋಶಗಳಿಗಿಂತ ಇವು ಬಹಳ,ಬಹಳ ಕಿರಿದಾದವು. ಆದ್ದರಿಂದಲೇ ಈ ಸೂಕ್ಷ್ಮಾಣುಗಳು ನಮ್ಮ ಜೀವಕೋಶಗಳಿಗಿಂತ ಸಂಖ್ಯೆಯಲ್ಲಿ ಹತ್ತು ಪಟ್ಟು ಹೆಚ್ಚಿದ್ದರೂ ನಮ್ಮ ಅರಿವಿಗೆ ಬರುವುದಿಲ್ಲ. ‘ಒಬ್ಬರಿಗೆ ಒಂದು ವೋಟು’ ಎಂಬ ಪ್ರಜಾಪ್ರಭುತ್ವ ವ್ಯವಸ್ಥೆಯ ದೃಷ್ಟಿಯಿಂದ ನೋಡುವುದಾದರೆ, ನಮ್ಮ ಶರೀರದಲ್ಲಿ ನಾವೇ ಅಲ್ಪಸಂಖ್ಯಾತರು.

ಈ ಸೂಕ್ಷ್ಮಾಣುಜೀವಿಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ಅವಿಲ್ಲದೇ ನಾವು ಆರೋಗ್ಯವಾಗಿ ಬದುಕಲು ಸಾಧ್ಯವಿಲ್ಲ. ಕೇವಲ ಕೆಲವು ನಮಗೆ ತೊಂದರೆ ನೀಡಿದರೂ, ಬಹುತೇಕ ಸೂಕ್ಷ್ಮಾಣುಗಳು ನಮಗೆ ನಮ್ಮ ನಿತ್ಯಜೀವನದಲ್ಲಿ ಅನಿವಾರ್ಯ. ಅವುಗಳು ನಮ್ಮ ಜೀರ್ಣವ್ಯವಸ್ಥೆಯಲ್ಲಿ ವಹಿಸುವ ಪಾತ್ರ ನಿರ್ಣಾಯಕ. ಇವುಗಳ ಅನಿವಾರ್ಯತೆ ಮತ್ತು ನಿರ್ಣಾಯಕ ಪಾತ್ರದಿಂದಾಗಿ ನಮ್ಮೊಳಗಿನ ಈ ‘ಸೂಕ್ಷ್ಮಾಣುಪ್ರಪಂಚ’ವನ್ನು ಒಂದು ಪ್ರತ್ಯೇಕ ಅಂಗವೆಂದು ಪರಿಗಣಿಸಬಹುದು.

ನಮ್ಮೊಳಗೆ ವಾಸಿಸುವ ಸೂಕ್ಷ್ಮಾಣುಗಳ ವೈವಿಧ್ಯತೆಯ ಬಗೆಗೆ ಇನ್ನೂ ನಿಖರವಾಗಿ ತಿಳಿದಿಲ್ಲ. ನಾವು ವಿಸರ್ಜಿಸುವ ಮಲದ ತೂಕದ ಶೇಕಡ ಅರವತ್ತು ಭಾಗ ಸೂಕ್ಷ್ಮಾಣುಗಳಿಂದಲೇ ತುಂಬಿರುತ್ತದೆ. ಇದರ ವಿಶ್ಲೇಷಣೆಯಿಂದ, ನಮ್ಮೊಳಗೆ ಮುನ್ನೂರರಿಂದ ಸಾವಿರ ವಿವಿಧ ಪ್ರಭೇಧದ ಸೂಕ್ಷ್ಮಾಣುಗಳು ವಾಸಿಸುತ್ತವೆ ಎಂದು ತಿಳಿದುಬಂದಿದೆ. ಇವುಗಳಲ್ಲಿ ಕೆಲವು fungi and protozoaಗಳು. ಉಳಿದೆಲ್ಲಾ ಸೂಕ್ಷ್ಮಾಣುಗಳು ‘ಬ್ಯಾಕ್ಟೀರಿಯಾ’ ವಿಭಾಗಕ್ಕೆ ಸೇರಿದವು.

ಹುಟ್ಟುವಾಗಲೇ ಸೂಕ್ಷ್ಮಾಣುಗಳನ್ನು ತಾಯಿಯಿಂದ ನಾವು ಬಳುವಳಿಯಾಗಿ ಪಡೆಯುತ್ತೇವೆ. ಒಮ್ಮೆ ಪಡೆದ ಸೂಕ್ಷ್ಮಾಣುಗಳ ಪ್ರಭೇಧಗಳೇ ಜೀವನಪರ್ಯಂತ ನಮ್ಮೊಡನೆ ಇರಬಹುದು ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಸೂಕ್ಷ್ಮಣುಗಳ ವೈವಿಧ್ಯತೆ ಬದಲಾಗುತ್ತದೆ. ಜೀವನಪಯಣದ ವಿವಿಧ ಕಾಲಘಟ್ಟಗಳಲ್ಲಿ ತಂದೆ,ತಾಯಿ, ಹೆಂಡತಿ, ಮಕ್ಕಳು ನಮ್ಮೊಡನೆ ಹೆಜ್ಜೆ ಹಾಕುತ್ತಾರೆ. ಆದರೆ ನಮ್ಮೊಳಗಿನ ಸುಕ್ಷ್ಮಾಣುಗಳು ಮಾತ್ರ ಹುಟ್ಟಿನಿಂದ ಸಾಯುವವರೆಗೆ ನಮ್ಮ ಜೀವನದ ಶಾಶ್ವತ ಸಂಗಾತಿಗಳು.

ಈ ಸೂಕ್ಷ್ಮಾಣುಗಳನ್ನು ಪರಾವಲಂಬಿಗಳು ಅಥವಾ ಪರಾನ್ನಜೀವಿಗಳು ಎಂದು ಭಾವಿಸಬೇಡಿ. ಬೆರಳೆಣಿಕೆಯಷ್ಟು ಸೂಕ್ಷ್ಮಾಣುಗಳು ಮಾತ್ರ ಪರಾವಲಂಬಿಗಳು ಅಥವಾ ಪರಾನ್ನಜೀವಿಗಳಿರಬಹುದು. ಆದರೆ ಬಹುತೇಕ ಸೂಕ್ಷ್ಮಾಣುಗಳು ನಮ್ಮ ಆಹಾರವನ್ನು ಹಂಚಿಕೊಂಡರೂ ಅವುಗಳು ಸ್ರವಿಸುವ ‘ಕಿಣ್ವ’(enzymes)ಗಳು ಮತ್ತು ರಾಸಾಯನಿಕಗಳು ನಮ್ಮ ಜೈವಿಕ ವ್ಯವಸ್ಥೆಯಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತವೆ.

ನಾವು ತಿನ್ನುವ ಆಹಾರದ ಹಲವಾರು ಅಂಶಗಳನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ನಮಗಿಲ್ಲ. ಹಲವಾರು ರೀತಿಯ ಪಿಷ್ಟ ಪದಾರ್ಥ(carbohydrates)ಗಳನ್ನು ಜೀರ್ಣಿಸಿಕೊಳ್ಳಲು ಬೇಕಾದ ‘ಕಿಣ್ವ”(enzymes)ಗಳನ್ನು ನಮ್ಮ ದೇಹ ಉತ್ಪಾದಿಸುವುದಿಲ್ಲ. ಈ ಕಿಣ್ವಗಳನ್ನು ನಮ್ಮೊಳಗಿನ ಸೂಕ್ಷ್ಮಾಣುಗಳೇ ನಮಗಾಗಿ ಸ್ರವಿಸಬೇಕು. ಈ ಕುರಿತು ಇಲಿಗಳ ಮೇಲೆ ಸಂಶೋಧನೆ ನಡೆಸಲಾಗಿದೆ. ‘ಸೂಕ್ಷ್ಮಾಣುರಹಿತ ಇಲಿ’ಗಳು ತಮ್ಮ ತೂಕವನ್ನು ಕಾಪಾಡಿಕೊಳ್ಳಲೂ ಕೂಡ ‘ಸೂಕ್ಷ್ಮಾಣುಸಹಿತ ಇಲಿ’ಗಳಿಗಿಂತ ಶೇಕಡ ಮೂವತ್ತು ಹೆಚ್ಚಿನ ಆಹಾರ ಸೇವನೆ ಮಾಡಬೇಕಾಗುತ್ತದೆ ಎಂದು ತಿಳಿದುಬಂದಿದೆ.

ದೇಹದ ಹಲವಾರು ಪ್ರಮುಖ ಜೈವಿಕ ಅಂಗಾಂಗಗಳಿಗೆ, ಜೈವಿಕ ಕ್ರಿಯೆಗಳಿಗೆ ಬೇಕಾದ ‘ಕಿಣ್ವ’ಗಳು ‘ಷಾರ್ಟ್ ಚೈನ್ ಫ಼್ಯಾಟೀ ಆಸಿಡ್’(short chain fatty acid)ಗಳು. ಹೃದಯದ ಜೀವಕೋಶಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಇವು ಬೇಕು. ಕರುಳಿನ ಜೀವಕೋಶಗಳು ಬಲವಾಗಿ ರೂಪುಗೊಳ್ಳಲು, ಹೆಚ್ಚಿನ ನೀರನ್ನು ಹೀರಲು ಮತ್ತು ಪ್ರತಿರೋಧಕ ಶಕ್ತಿಯನ್ನು ರೂಢಿಸಿಕೊಳ್ಳಲು S.C.F.A. ಗಳು ಬೇಕೇ ಬೇಕು. S.C.F.A.ಗಳಲ್ಲಿ ಹಲವಾರು ರೀತಿಗಳಿವೆ. ಸ್ನಾಯುಗಳಿಗೆ ಬೇಕಾದ ‘ಅಸಿಟಿಕ್ ಆಸಿಡ್’(acetic acid), ಯಕೃತ್ತಿ(liver)ಗೆ ಬೇಕಾದ ‘ಪ್ರೊಪಿಯೋನಿಕ್ ಆಸಿಡ್ ‘(propionic acid), ಕರುಳಿಗೆ ಅತ್ಯವಶ್ಯಕವಾದ ‘ಬುಟಿರಿಕ್ ಆಸಿಡ್’(butyric acid), S.C.F.A. ಗಳಲ್ಲಿ ಕೆಲವು. ಇಷ್ಟೇ ಅಲ್ಲ. ದೇಹಕ್ಕೆ ಬೇಕಾದ ವಿಟಮಿನ್ ‘ಕೆ’ ಮತ್ತು ಹಲವಾರು ‘ಲಿಪಿಡ್’(lipid) ಗಳನ್ನು ಸೂಕ್ಷ್ಮಾಣುಗಳೇ ಕೊಡಬೇಕು. ಕ್ಯಾಲ್ಸಿಯಮ್, ಮೆಗ್ನೀಸಿಯಮ್, ಕಬ್ಬಿಣ ಮೊದಲಾದ ಖನಿಜಗಳನ್ನು ಹೀರಲೂ ‘ಸೂಕ್ಷ್ಮಾಣು ಕಿಣ್ವ’ ಗಳು ನೆರವಾಗುತ್ತವೆ.

ನಮ್ಮೊಳಗಿನ ಸೂಕ್ಷ್ಮಾಣುಗಳೇ ನಮ್ಮ ದೇಹದ ಹೊರಗಿನ ರಕ್ಷಣಾ ಪದರವಿದ್ದಂತೆ. ಇವು ಎರಡು ರೀತಿಯಲ್ಲಿ ನಮಗೆ ರಕ್ಷಣೆ ನೀಡುತ್ತವೆ. ಸೂಕ್ಷ್ಮಾಣುಗಳು ದೇಹದಲ್ಲಿ ತಮ್ಮದೇ ಆದ ಪ್ರಪಂಚವನ್ನು(ecosystem) ನಿರ್ಮಿಸಿಕೊಂಡಿರುತ್ತವೆ. ದೇಹಕ್ಕೆ ಮಾರಕವಾಗದ ಆದರೆ ಹೊರಗಿನಿಂದ ಬರುವ ಬೇರೆ ಹಾನಿಕಾರಕ ಸೂಕ್ಷ್ಮಾಣುಗಳಿಗೆ ಮಾರಕವಾದ ವಿಷಗಳನ್ನು ಇವುಗಳು ಬಿಡುಗಡೆ ಮಾಡಿ ಹಾನಿಕಾರಕ ಸೂಕ್ಷ್ಮಾಣುಗಳು ದೇಹದಿಂದ ಹಿಂತೆಗೆಯುವಂತೆ ಮಾಡುತ್ತವೆ. ಇದು ಮೊದಲನೆಯದು. ಎರಡನೆಯದಾಗಿ ನಮ್ಮ ದೇಹವು ಹೊರಗಿನ ಹಾನಿಕಾರಕ ಸೂಕ್ಷ್ಮಾಣುಗಳಿಗೆ ‘ಪ್ರತಿರೋಧಕ ರಾಸಾಯನಿಕ’ಗಳನ್ನು ಬಿಡುಗಡೆ ಮಾಡುವಂತೆ ಉತ್ತೇಜಿಸುತ್ತವೆ. ಅತಿನೇರಳೆ(ultraviolet)ಕಿರಣಗಳಿಂದ ದೇಹಕ್ಕಾಗುವ ಹಾನಿಯನ್ನು ಸರಿಪಡಿಸಿಕೊಳ್ಳಲು ಬೇಕಾದ ‘ಟೋಲ್ ಲೈಕ್ ರಿಸೆಪ್ಟರ್’(toll like receptor)ಗಳನ್ನು ಬಿಡುಗಡೆ ಮಾಡುವಂತೆ ದೇಹವನ್ನು ಉತ್ತೇಜಿಸುತ್ತವೆ. ಇದರಲ್ಲಿ ಸೂಕ್ಷ್ಮಾಣುಗಳ ಸ್ವಾರ್ಥವೂ ಇದೆ ಎನ್ನಿ. ನಮ್ಮ ದೇಹ ಆರೋಗ್ಯವಾಗಿದ್ದರೆ ತಾನೇ ಅವು ಬದುಕಲು ಸಾಧ್ಯ.

‘ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರು’ ಎಂಬ ಗಾದೆ ಕೇಳಿದ್ದೀರಿ ತಾನೇ?. ಅಲರ್ಜಿ ಎಂದರೆ ಇದೇ. ನಮ್ಮ ದೇಹಕ್ಕೆ ಹಲವಾರು ಜೈವಿಕ, ಅಜೈವಿಕ ವಸ್ತುಗಳು ಸತತವಾಗಿ ಧಾಳಿಯಿಡುತ್ತಿರುತ್ತವೆ. ನಮ್ಮ ದೇಹವು ಇವುಗಳನ್ನು ಪರಕೀಯವೆಂದು ಭಾವಿಸಿ ಅವುಗಳ ನಾಶಕ್ಕೆ ಬೇಕಾದ ‘ಪ್ರತಿರೋಧಕ ರಾಸಾಯನಿಕ”(antibodies)ಗಳನ್ನು ಬಿಡುಗಡೆ ಮಾಡುತ್ತವೆ. ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ. ನಮ್ಮ ದೇಹವನ್ನು ಪ್ರವೇಶಿಸುವ ಎಲ್ಲಾ ಪರಕೀಯ ವಸ್ತುಗಳೂ ಹಾನಿಕಾರಕವಲ್ಲ. ಯಾವುದು ಹಾನಿಕಾರಕವಲ್ಲ, ಯಾವುದು ಹಾನಿಕಾರಕ ಮತು ಎಷ್ಟು ಹಾನಿಕಾರಕ ಎಂದು ತೀರ್ಮಾನಿಸುವ ಸಾಮರ್ಥ್ಯ ದೇಹಕ್ಕಿರಬೇಕು ಮತ್ತು ಅಗತ್ಯಕ್ಕೆ ತಕ್ಕಷ್ಟು ಮಾತ್ರ ‘ಪ್ರತಿರೋಧಕ ರಾಸಾಯನಿಕ’ಗಳನ್ನು ದೇಹ ಬಿಡುಗಡೆ ಮಾಡಬೇಕು. ಈ ರೀತಿಯ ವಿವೇಚನಾ ಸಾಮರ್ಥ್ಯವಿಲ್ಲದೇ ಅನಿಯಂತ್ರಿತವಾಗಿ ಅಗತ್ಯಕ್ಕಿಂತ ಹೆಚ್ಚಾದ ‘ಪ್ರತಿರೋಧಕ ರಾಸಾಯಕ’ಗಳನ್ನು ದೇಹ ಉತ್ಪಾದಿಸಿದಾಗ ಅವುಗಳಿಂದ ನಮ್ಮ ಶರೀರದ ಮೇಲೆ ಅಡ್ಡಪರಿಣಾಮಗಳಾಗುತ್ತವೆ. ಇದನ್ನೇ ಅಲರ್ಜಿ ಎಂದು ಕರೆಯುತ್ತಾರೆ. ಸರಿಯಾದ ರೀತಿಯ, ಸರಿಯಾದ ಪ್ರಮಾಣದ ‘ನಮ್ಮೊಳಗಿನ ಸೂಕ್ಷ್ಮಾಣುಗಳು’ ನಮ್ಮ ದೇಹವು ಈ ರೀತಿಯ ಹಾನಿಕಾರಕ, ಹಾನಿಕಾರಕವಲ್ಲದ ವಸ್ತುಗಳನ್ನು ಗುರುತಿಸುವ ಹಾಗೂ ಸರಿಯಾದ ರೀತಿಯಲ್ಲಿ ‘ಪ್ರತಿರೋಧಕ ರಾಸಾಯನಿಕ’ಗಳನ್ನು ಬಿಡುಗಡೆ ಮಾಡುವಂತೆ ದೇಹವನ್ನು ಪ್ರಚೋದಿಸುತ್ತವೆ.

ಲೇಖನ ವರ್ಗ (Category):