ರಾಜ್ಕುಮಾರ!

To prevent automated spam submissions leave this field empty.

ಐದು ವರ್ಷಗಳ ಹಿಂದಿನ ಮಾತು. ವೀರಪ್ಪನಿಂದ ಬಿಡಿಸಿಕೊಂದು ಜಕ್ಕೂರಿನ ಏರ್‌ಪೋರ್ಟಿನಲ್ಲಿ ಕಾಲಿರಿಸಿದ ಕೂಡಲೇ ರಾಜ್‌ಕುಮಾರ್‌ ಮಾಡಿದ ಮೊದಲ ಕೆಲಸವೆಂದರೆ ಮಂಡಿಯೂರಿ, ನೆಲಕ್ಕೆ ಬಾಗಿ, ಈ ಮಣ್ಣಿಗೆ ಮುತ್ತಿಟ್ಟಿದ್ದು! ಸಂಕೋಚ ಸ್ವಭಾವದ ಕನ್ನಡಿಗರಿಗೆ ಇದೊಂದು ಅದ್ಭುತ ಸಂಕೇತವಾಗಿ ಹೋಗಬೇಕಾಗಿತ್ತು.

ಎಂ.ಜಿ.ಆರ್‌, ಶಿವಾಜಿ ಗಣೇಶನ್‌ಗಿಂತಲೂ ರಾಜ್‌ ನನಗೆ ಆತ್ಮೀಯವೆನಿಸಲು ಕಾರಣ ಅವರು ಸ್ವಇಚ್ಛೆಯಿಂದ ರೂಪಿಸಿಕೊಂಡ ಒಂದು `ಸಿಂಬಾಲಿಸಂ'. ಅದೇನೆಂದರೆ ತಮ್ಮ ಜನ್ಮಸಿದ್ಧ ಮುಗ್ಧತೆಯಿಂದ ರಾಜಕಾರಣ ಪ್ರವೇಶ ಮಾಡದಿದ್ದುದು. ತನ್ಮೂಲಕ ತನ್ನ ದೇಹ-ಮನಸ್ಸುಗಳು ರೂಢಿಗತವಾಗಿ, ಶಿಸ್ತುಬದ್ದವಾಗಿ ಯಾವುದಕ್ಕೆ ತಯಾರಾಗಿತ್ತೋ ಅಂತಹ `ಅಭಿನಯಕ್ಕೆ', `ಸಾಂಸ್ಥೀಕರಣದ ಹೊರಗಿನ' ಕನ್ನಡದ ಭಾಷಾಭಿಮಾನದ ಕಟ್ಟುನಿಟ್ಟಿಗೆ ಅವರು ಒಳಪಟ್ಟದ್ದು.

ಇಂತಹ ಸ್ನಿಗ್ದ ಸಿಂಬಾಲಿಸಂಗಳೇ ವ್ಯಕ್ತಿಗಳನ್ನು ಸಹಜವಾಗಿ ದಂತಕಥೆಗಳನ್ನಾಗಿಸುವುದು, ಎಂದು ಕಮಲಹಾಸನ್‌ ಟಿ.ವಿ. ಚಾನೆಲ್‌ ಒಂದಕ್ಕೆ ಗೆ ನೀಡಿದ ಸಂದರ್ಶನದಲ್ಲಿ (12ನೇ ಏಪ್ರಿ 2006) ಹೇಳಿದ್ದಾರೆ. ಈ ತಾರೀಕಿನ ವಿಶೇಷವೆಂದರೆ ಅಂದು ರಾಜ್‌ ಭೌತಿಕವಾಗಿ ಇಲ್ಲವಾದ ದಿನ.
ಭಾವತೀವ್ರತೆಯ ಪರಿಯ ಹೊರಗಿನಿಂದ ಮಾತನಾಡಿದ ಕಮಲ್‌ಗೆ ಈ ವಾಕ್ಯ ನಾಲಿಗೆಯ ತುದಿಯಲ್ಲಿರಬೇಕಾದರೆ ಅದೊಂದು ಸಾಕಷ್ಟು ಚಿಂತನೆ ಮಾಡಿದ ನಂತರ ಹುಟ್ಟಿದ ಹೇಳಿಕೆಯೇ ಇರಬೇಕು.

ಶಿವಾಜಿ ರಾಜಕಾರಣ ಪ್ರವೇಶ ಮಾಡಿದಾಗ ನಾನು ಇದೇಕೆ ಹೀಗೆ ಮಾಡುತ್ತಿದ್ದಾರೆ ಎಂದುಕೊಂಡೆ. ರಾಜ್‌ ಹಾಗೆ ಮಾಡದಿರಲಿ ಎಂದೂ ಭಾವಿಸಿಕೊಂಡೆ. ಮನೆಗೆ ಹಿರಿಯರಾದವರಿಗೆ ಚಿಕ್ಕವನಾದ ನಾನು ನನಗನಿಸಿದ್ದನ್ನು ಹೇಳಲು ಸಾಧ್ಯವೆ. ನಾನು ಹೇಳದೆಲೇ ರಾಜ್‌ ನನಗನಿಸಿದ್ದನ್ನು, ತಮಗನಿಸಿದ್ದನ್ನು ಮಾಡಿದರು. ಅಭಿಮಾನಿಗಳ ಭಾವನೆಗಳೊಂದಿಗೆ ಒಂದು `ಎಂಪಥಿ' (ಸಾಹಚರ್ಯ) ರಾಜ್‌ ಅವರಿಗೆ ಸಾಧ್ಯವಾದುದು ಅವರನ್ನೊಬ್ಬ ಅತ್ಯುತ್ತಮ ದೃಶ್ಯಕಲಾವಿದನನ್ನಾಗಿಸುತ್ತದೆ ಎಂದು ಮುಂದುವರೆಸಿದ್ದರು ಕಮಲ್‌.

ಅದಾಗಲೇ ಕಾಸ್ಮೊಪಾಲಿಟನ್‌ ನಗರವಾಗಲು ತೊಡಗಿದ್ದ ಬೆಂಗಳೂರು ಇದನ್ನು ಅರಿಯದೇ ಹೋಯಿತು! ಪ್ರತಿ ಮೆಟ್ರೊಪಾಲಿಟನ್‌ ನಗರದಲ್ಲಾಗುವಂತೆ ಇಲ್ಲಿನ ಅಲ್ಪಸಂಖ್ಯಾತರಾಗಿರುವ ಕನ್ನಡಿಗರಿಗೆ ಮಾತ್ರ ಧುತ್ತನೆ 'ತಮ್ಮತನದ' ಭಾವವು, ರಾಜ್‌ ನೆಲಕ್ಕೆ ಮುತ್ತಿಡುತ್ತಿದ್ದ ಪತ್ರಿಕಾ ಫೋಟೋಗಳ ಮೂಲಕ ಉದ್ದೀಪಿತವಾದುದು ದಿಟ. ರಾಜ್ ಕೊನೆಯ ಚಿತ್ರ ಶಬ್ದವೇದಿ ಅದಾಗಲೇ ತೆರೆಕಂಡದ್ದಾಗಿತ್ತು. ಅದಾದ ನಂತರ ರಾಜ್‌ ವೀರಪ್ಪನ್‌ನಿಂದ ಅಪಹರಣಕ್ಕೊಳಗಾದ ಕೂಡಲೇ ಅಭಿಮಾನಿಗಳ ಸಿಟ್ಟಿಗೆ ಹೊಸ ಗುರಿಯಾಗಿ ದಕ್ಕಿದ್ದು ಕಟ್ಟಡಗಳ ಬೃಹತ್‌ ಗಾಜುಗಳು. ಮೊದಲೆಲ್ಲ ಸರ್ಕಾರಿ ಆಸ್ತಿಯಾದ ಬಸ್ಸುಗಳು ಗುರಿಯಾಗಿದ್ದು ಈಗ ಕಟ್ಟಡಗಳ ಗಾಜುಗಳಿಗೆ ಆ `ಗುರಿ' ಬದಲಾಗಲು 80, 90ರ ಸಾಂಸ್ಕೃತಿಕ ಸ್ಥಿತ್ಯಂತರವೇ ಕಾರಣ.

ಗಾಜುಗಳನ್ನು ಉಳಿಸಿಕೊಳ್ಳಲು ಹೊರಗಿನ, ನವ ಶ್ರೀಮಂತರಿಗೆ ಸ್ವತಃ ರಾಜ್‌ ಆಶ್ರಯವಾದುದೂ ಒಂದು ವಿಶೇಷ. ರಾಜ್‌ ಪೋಸ್ಟರುಗಳನ್ನು ಅಂಟಿಸಲ್ಪಟ್ಟ ಗಾಜುಗಳೆಲ್ಲ ಜೀವ ಉಳಿಸಿಕೊಂಡವು. ಜಾಹಿರಾತಿಲ್ಲದೆ ಬದುಕುಳಿದ ಕನ್ನಡದ ಜಾಣ ಸಾಂಸ್ಕೃತಿಕ ಪತ್ರಿಕೆಗಳೂ ಈ ನವೀನ ಜಾಹಿರಾತು ತಂತ್ರವನ್ನು ಅದಾಗಲೇ ಬಳಸಿಕೊಂಡಾಗಿತ್ತು. ಆರಿಂಚು, ನಾಲ್ಕಿಂಚು ರಾಜ್‌ ಭಾವಚಿತ್ರ ಮುಖಪುಟದಲ್ಲಿ, ಆ ಅಳತೆಗಿಂತಲೂ ಸಣ್ಣದಾದ ರಾಜ್‌ ಬಗೆಗಿನ ಒಂದು ಸಣ್ಣ ಸುದ್ದಿ ಕಾಣದ ಒಳಗಿನ ಪುಟಗಳಲ್ಲಿ!

ಒಬ್ಬ ಜನಪ್ರಿಯ ಪಾಪ್‌ ಐಕಾನ್‌ ಸಂಸ್ಕೃತಿಯೊಂದರ ನಿರ್ಮಿತಿಗೆ ಬದ್ಧವಾಗಿರುವ ಭಾಷಾಪತ್ರಿಕೆಗೂ ಅನಿವಾರ್ಯವಾಗಿ ಹೋದುದರ ಅರ್ಥವಿಷ್ಟೆ. ಜಗ ಜಾಹಿರಾತಿನ ಭೌಗೋಳಿಕ ಮುಖವನ್ನು ನಿರಾಕರಿಸಿದ ಒಂದು ಕನ್ನಡದ ಡಿಸ್ಕೋರ್ಸಿಗೂ ಕನ್ನಡದೊಳಗಿನಿಂದಲೇ ಹುಟ್ಟಿಕೊಂಡ `ಐಕಾ' ಒಂದು ತನ್ನ ಒಂದು ಭಾಗವಾಗಿ ಕಂಡದ್ದು ಹೇಗೆ ಸಾಧ್ಯವಾಯಿತು?

ಕಳೆದ ಒಂದು ಸಾವಿರ ವರ್ಷದ ಕನ್ನಡ ಭಾಷೆಯ ಇತಿಹಾಸದಲ್ಲಿ ಡಾ. ರಾಜ್‌ಕುಮಾರರಷ್ಟು ಕನ್ನಡ ಭಾಷೆಯೊಂದಿಗೆ ಗುರ್ತಿಸಿಕೊಂಡು ಜನಪ್ರಿಯವಾದ ವ್ಯಕ್ತಿತ್ವ ಮತ್ತೊಂದಿಲ್ಲ. ಮತ್ತು ಇದು ಉತ್ಪ್ರೇಕ್ಷೆಯೂ ಅಲ್ಲ. ಮತ್ತೊಂದು ಸಾವಿರ ವರ್ಷದ ಕನ್ನಡದ ಇತಿಹಾಸದಲ್ಲಿ ಈ ಭಾಷೆಯನ್ನು ನಿರ್ದಿಷ್ಟ ಪ್ರಾಂತ್ಯೀಕರಣದ `ಇಕ್ಕಳದಿಂದ' ಇವರಂತೆ ಮೀರಿಸಿ ನಿಲ್ಲಿಸುವವರು ಬರುವುದಿಲ್ಲ. ಅದೇ ಕಾರಣಕ್ಕೆ ಸಾವಿರ ವರ್ಷದ ನಂತರ ಕನ್ನಡವು ಇಂದಿನ ಕನ್ನಡದೊಂದಿಗೆ ಹೋಲಿಕೆ ಮಾಡುವಂತೆ ಉಳಿದುಕೊಳ್ಳುವ ಸಾಧ್ಯತೆಯೂ ಅತಿ ಕ್ಷೀಣ. `ಸ'ಕಾರ, `ಶ'ಕಾರದಷ್ಟು ಸರಳ, ಮೂಲಭೂತ ಕನ್ನಡದ ಉಚ್ಛಾರಣೆಗಳಿಗೆ ಕನ್ನಡ ಟಿ.ವಿ, ರೇಡಿಯೋಗಳಿರಲಿ--ಕನ್ನಡದ ಉತ್ಕೃಷ್ಟ ಅಧ್ಯಯನ ಸಂಸ್ಥೆಗಳಲ್ಲಿಯೇ ಸಂಚಕಾರ ಬಂದಿದೆ. ಮೂರನೇ ಇಯ್ಯತೆ ಪಾಸ್‌ ಮಾಡಿದ್ದ ರಾಜ್‌ಗೆ ಸಾಮಾಜಿಕ, ಐತಿಹಾಸಿಕ, ಪೌರಾಣಿಕದ ಅವಶ್ಯಕತೆಗೆ ತಕ್ಕಂತೆ ಭಾಷಾ ಶುದ್ಧತೆ ಹಾಗೂ ರೂಪಾಂತರವು ಸಾಧ್ಯವಾದುದು, ಸಾಂಸ್ಥೀಕರಣದ ಹೊರಗೇ ಕನ್ನಡದ ಉಳಿವು ಸಾಧ್ಯವೆಂಬುದನ್ನು ನಿರೂಪಿಸುತ್ತದೆ.

ಒಂದೇ ಹುಟ್ಟಿದ ತಾರೀಕನ್ನು (ಏಪ್ರಿ 24) ಹಂಚಿಕೊಂಡಿದ್ದಾರೆಂಬ ಅಂಶವನ್ನು ಹೊರತುಪಡಿಸಿ ಸಚಿ ತೆಂಡುಲ್ಕರ್‌ ಹಾಗೂ ಡಾ.ರಾಜ್‌ಕುಮಾರ್‌ಗೆ ಇದ್ದಂತಹ ಸಾಮ್ಯತೆಗಳು ಏನೇನು? ಇಬ್ಬರೂ ತಮ್ಮ ತಮ್ಮ ವೃತ್ತಿಬದುಕಿನ 'ಆರಂಭದಿಂದಲೇ' ದಂತಕಥೆಯಾಗಿ ಹೋದವರು. ಆದ್ದರಿಂದ, ತದನಂತರ ಅವರುಗಳಿಗೆ ಇನ್ನಿಲ್ಲದ ತೊಂದರೆ ಆರಂಭವಾಯಿತು. ಅದೇನೆಂದರೆ ತಮ್ಮ ತಮ್ಮ ಸಾಧನೆಗಳನ್ನು ಹೋಲಿಕೆ ಮಾಡಿಕೊಳ್ಳಲು ಅವರುಗಳಿಗೆ ಇದ್ದಂತಹ ಒಂದೇ ಮಾನದಂಡ, ಬೆಂಚ್‌ ಮಾರ್ಕ್‌ಗಳೆಂದರೆ-ಅದು ಅವರುಗಳೇ! ತಮಗೆ ತಾವೇ ಮಾದರಿಗಳಾಗಿ ಹೋಗುವ ದಂತಕಥೆಗಳ ಕಷ್ಟ ಇಂತಹದ್ದು!

ಗಂಗೂಲಿಯಿನ್ನೂ ಟೀಮಿನ ಒಳಗೇ ಇದ್ದಾಗೊಮ್ಮೆ ಸುರೇ ಮೇನನ್‌ ಒಂದು ಕುತೂಹಲಕರ ಅಂಶದ ಕಡೆ ಗಮನ ಸೆಳೆದಿದ್ದರು. ಯಾರಿಗಿಂತ ಯಾರು ಚೆನ್ನಾಗಿ ಆಡುತ್ತಾರೆಂಬ ಅಂಶವನ್ನು ಬದಿಗಿರಿಸಿದರೂ ಗಂಗೂಲಿಗಿಂತಲೂ ದ್ರಾವಿಡ್‌ ಎಲ್ಲರಿಗೂ ಇಷ್ಟವಾಗುವ ಆಟಗಾರ. (ಬೆಂಗಾಲಿಗಳನ್ನು ಹೊರತುಪಡಿಸಿ ಎಂದೇನು ಮೇನನ್‌ ಲೇವಡಿ ಮಾಡಿರಲಿಲ್ಲ). ವೈಯಕ್ತಿಕ ರೆಕಾರ್ಡ್‌ಗಳನ್ನು ಹೊರತುಪಡಿಸಿಯೂ ಜನಪ್ರಿಯ ವ್ಯಕ್ತಿಗಳು ಒಬ್ಬರಿಗಿಂತ ಒಬ್ಬರು ಹೇಗೆ ಹೆಚ್ಚು ಇಷ್ಟವಾಗುತ್ತಾರೆ ಎಂಬ ಸೂಕ್ಷ್ಮ ಪ್ರಶ್ನೆಯೊಂದಿಗೆ ಮೇನನ್‌ ಲೇಖನ ಮುಗಿಸಿದ್ದರು.

ಮಿಕ್ಕೆಲ್ಲ ಘಟಾನುಘಟಿಗಳೆಲ್ಲ ಇಷ್ಟದ ಪಟ್ಟಿಯಿಂದ ಕಳಚಿಕೊಂಡರೂ ರಾಜ್‌ ಮಾತ್ರ ಕೊನೆಯವರೆಗೂ ಇಷ್ಟವಾಗಿಯೇ ಉಳಿದುಕೊಂಡದ್ದಕ್ಕೆ ನಿರ್ದಿಷ್ಟ ಕಾರಣಗಳಿವೆ. ಸುದ್ದಿಪತ್ರಿಕೆಗಳಿಂದ ಒಂದು ಮರ್ಯಾದೆಯ ದೂರ ಉಳಿಸಿಕೊಂಡಿದ್ದಾಗಲೂ ರಾಜ್‌ ನಟನೆಂಬ ವ್ಯಕ್ತಿತ್ವವನ್ನು ಮೀರಿ ಈ `ಇಷ್ಟವಾಗುವ' ವ್ಯಕ್ತಿತ್ವ ಪಡೆದುಕೊಂಡದ್ದು ಅವರ ಪ್ರಮುಖ ಸಾಧನೆಗಳಲ್ಲಿ ಒಂದು.

ಸ್ಥಳೀಯ ಭಾಷೆಯ ಸಾವಿನ ಭೀತಿಯಿಂದ ಟ್ರಿನಿಡಾಡ್‌-ಟೊಬಾಗೋದಲ್ಲಿ (ವೆಸ್ಟ್ ಇಂಡೀಸ್‌) ಆ ಭಾಷೆಯ ರೇಡಿಯೋ ಸ್ಟೇಷನ್‌ ಒಂದನ್ನು ಪ್ರಾರಂಭಿಸಲಾಗಿತ್ತು. ಈಗ ಅದು ಅಂತರರಾಷ್ಟ್ರೀಯ ಪ್ರಸರಣವಿರುವ ಸ್ಥಳೀಯ ಭಾಷೆಯ ರೇಡಿಯೋ ಚಾನಲ್‌! ರಾಜ್‌ ಪ್ರಾರಂಭಿಸಿದ ಸ್ಥಳೀಯ ಭಾಷೆಯ ಉಳಿವಿನ ಚಾನೆಲ್ಲನ್ನು ಹಾಗೆ ಮುಂದುವರೆಸಲು ಇರುವ ಉಪಾಯಗಳೇನು?

ಬೀದಿಯಲ್ಲಿ ಗೋಲಿ ಆಡದಿರಲು, ಚಿಕ್ಕದಾಗಿ ಕಟಿಂಗ್‌ ಮಾಡಿಸಿಕೊಳ್ಳಲು, ಶುದ್ದ ಬಟ್ಟೆ ಹಾಕಿಕೊಳ್ಳಲು, ಎಲ್ಲದಕ್ಕೂ ರಾಜ್ಕುಮಾ ಇದ್ದಂಗಿದ್ದೀಯ ಎಂದು-ಈಗ ನಲ್ವತ್ತರ ವಯಸ್ಸಿನಲ್ಲಿರುವವರು ಮಕ್ಕಳಾಗಿದ್ದಾಗ- ಹೇಳಿಸಿಕೊಳ್ಳುತ್ತಿದ್ಡ ಸಂಪ್ರದಾಯವು ತೀರ ಇತ್ತೀಚಿನವರೆಗೂ ಬೆಂಗಳೂರಿನಲ್ಲಿ ಚಾಲ್ತಿಯಲ್ಲಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಜೀವಂತವಿರುವ ಒಂದು ಆಚರಣೆ ಇದು.

ರಾಜ್‌ರಂತೆ ಮಾತನಾಡುವುದು, ನಡೆದಾಡುವುದು, ಕುಟುಂಬ ರಕ್ಷಣೆಗೆ ನಿಲ್ಲುವ ಆತ್ಮೀಯ ನಡವಳಿಕೆ, ಜೂಜು-ಕುಡಿತ-ಅಶ್ಲೀಲತೆ ಮುಂತಾದುವುಗಳಿಂದ ದೂರವಿರುವುದು, ಇತ್ಯಾದಿ ಗುಣಗಳು ರಾಜ್‌ ಅಭಿಮಾನಿಗಳು ಅಳವಡಿಸಿಕೊಂಡಿರಬಹುದಾದ ರಾಜ್‌-ಪ್ರಭಾವಿತ ಗುಣಗಳು. ಇವೆಲ್ಲ ಸಾಮಾಜಿಕ ವ್ಯಕ್ತಿತ್ವಗಳನ್ನು ರೂಪಿಸುವ ಚೀನೀಯರ ಕನ್‌ಫ್ಯೂಷಿಯಸ್‌ ಎಂಬಾತನ ತತ್ವಾದರ್ಶಕ್ಕೆ ಪೂರಕ. 'ಮನೆಯವರೆಲ್ಲರೂ ಕುಳಿತು ನೋಡಬಲ್ಲ' ಈಡಿಯಂ ಕನ್ನಡ ಸಿನೆಮದಲ್ಲಿ ಉದಯಿಸಿದ್ದಕ್ಕೆ ಕಾರಣ ರಾಜ್‌ ಅಭಿನಯಿಸಿದ ಮತ್ತು ನಿರ್ಮಿಸಿದ ಚಿತ್ರಗಳು.

ಸಮಾಜವಿರೋಧಿ ಇರಲಿ `ಸಮಾಜಕ್ಕೆ ವಿಮುಖಿಯಾದ' ರೂಪಕವನ್ನೂ ರಾಜ್ ಊರ್ಜಿತಗೊಳಿಸಿದ್ದಿಲ್ಲ. ಬೌದ್ಧರ ಝೆನ್‌ ತತ್ವದಲ್ಲಿ ಇದಕ್ಕೆ ಆಸ್ಪದವುಂಟು. ಅನ್ಯಾಯವನ್ನು ಬಗ್ಗುಬಡಿಯುವಾಗಲೂ ರೋಷಾವೇಶವು ನಿಷಿದ್ದ. ಏಕೆಂದರೆ ಅದು ಮೊದಲು ವ್ಯಕ್ತಿಯ ಭಾವನೆ ಹಾಗೂ ನಂತರ ಆರೋಗ್ಯವನ್ನು ಹದಗೆಡಿಸಬಹುದೆಂಬ, ಸಮಾಜವಿಮುಖಿಯಾದ ವೈಯಕ್ತಿಕತೆಗೇ ಝೆನ್‌ ಮೂಲಭೂತವಾಗಿ ಬದ್ಧ. ಸಮಾಜವೆಂಬುದು ಕೇವಲ ಒಂದು ಪ್ರಜ್ನಾಪೂರ್ವಕ 'ನಿರ್ಮಿತಿ' (ಕಸ್ಟ್ರಕ್ಟ್‌) ಎಂದು ಝೆನ್‌ ಭಾವಿಸಿದರೆ ಅದೇ ಅತ್ಯಂತಿಕ ಎಂದು ನಂಬುವ ಕನ್‌ಫ್ಯೂಷಿಯಸ್‌ ಪಂಥದ ಸ್ಥಳೀಯ ಹರಿಕಾರ ರಾಜ್‌.

ಜಾತ್ಯಾತೀತ ಮಧ್ಯಮವರ್ಗದ ಕನ್ನಡಿಗರಿಗೆ ಈ ಮಾದರಿಯು ಆತ್ಮೀಯವಾದುದು. ನಟನೆ ಹಾಗೂ ಸ್ವಯಂ-ವಿರಚಿತ ಭಾಷಾಭಿಮಾನದ ಹೊರಗೂ 'ರಾಜ್‌ಕುಮಾ' ಅರವತ್ತು ಎಪ್ಪತ್ತರ ದಶಕದ ಮಕ್ಕಳಿಗೆ ಒಬ್ಬ ರಾಜಕುಮಾರನೇ ಆಗಿಹೋದುದು ಹೇಗೆ? ಹಾಗೆ ಆಗಿದ್ದು ಒಂದು ಹಿಸ್ಟರಿ, ಅದು ಆಗಿದ್ದು ಹೇಗೆಂಬುದು ಮಾತ್ರ ಒಂದು ಮಿಸ್ಟರಿ!

* *

ಕಳೆದ ಶತಮಾನದ 70ರ ದಶಕದಲ್ಲಿ ಕನ್ನಡ ಶಾಲೆಗೆ ಹೋದವರೆಲ್ಲ ಈಗ ನಲ್ವತ್ತರ ಆಸುಪಾಸಿನಲ್ಲಿರುವವರು. ಅಣ್ಣಾವ್ರ ಚಿತ್ರಗಳನ್ನು ಮೊದಲ ದಿನದ, ಮೊದಲ ಶೋ ಆಗಿ ಕಂಪಲ್ಸರಿ ನೋಡುವುದರ ಜೊತೆ ಜೊತೆಗೇ ಇವರುಗಳಿಗೆಲ್ಲ ಮತ್ತೊಂದು ಸ್ಥಿತಿಪಲ್ಲಟವುಂತಾದುದುಂಟು. ಆರ್ಥಿಕವಾಗಿ ಸ್ಥಿತಿವಂತರಾದ ತಂದೆತಾಯಿಗಳನ್ನು ಪಡೆದಿದ್ದವರು ಇಂಗ್ಲೀಷ್‌ ಕಲಿತರು. ರಾಜ್‌ ಮತ್ತು ಕನ್ನಡ ಹಾಗೂ ರಾಜ್‌ ರೀತಿಯ ಕನ್ನಡಕ್ಕೆ ಹೊಂದಿಕೊಂಡಿದ್ದ ಇಂತಹವರು ಇಲ್ಲಿಂದ ತಮ್ಮ ಬದುಕಿಗೆ ಅಗತ್ಯವಿರುವ ಭೌಗೋಳಿಕ ಮಾದರಿಗಳನ್ನು ಅರಸಿಕೊಂಡು ಎಲ್ಲೆಲ್ಲಿಗೋ ಹೋದದ್ದಿದೆ. ಸರಳವಾಗಿ ಇಂತಹವರನ್ನು ಎನ್‌.ಆರ್‌. ಐಗಳು ಎನ್ನುತ್ತೇವೆ. ಅವರೆಲ್ಲ ತಮ್ಮ ತಮ್ಮ ಭೌತಿಕ ಅಗತ್ಯಗಳನ್ನು ಪೂರೆಸಿಕೊಂಡ ನಂತರದ ತಂಪುಹೊತ್ತಿನಲ್ಲಿ ರಾಜ್ಕುಮಾರ್‌ ನೆನಪಾಗಿ ಉಳಿದುಕೊಂಡಿದ್ದರ ಹಿಂದಿನ ನಾಸ್ಟಾಲ್ಜಿಕ್‌ ಯಾತನೆಯ ರಹಸ್ಯ ಅವರಿಗೇ ಅರ್ಥವಾಗುತ್ತಿಲ್ಲ. ಆದರೆ ವಿದೇಶಗಳಲ್ಲಿ ನೆಲೆನಿಂತವರು ಟಿ.ವಿಯಲ್ಲಿ ಅಣ್ಣಾವ್ರು ಅಪಹರಣದ, ಅವಾರ್ಡಿನ ಇತ್ಯಾದಿ ಕಾರಣಗಳಿಂದ ಕಾಣಿಸಿಕೊಂಡಾಗ ಕೂಡಲೆ `ಏನೋ' ಕಳೆದುಕೊಂಡವರಂತೆ ತಡಬಡಾಯಿಸುವುದು ಒಂದು ನಿತ್ಯಸತ್ಯ. ತಮ್ಮ ಮಕ್ಕಳಿಗೂ ಈ ತಳಮಳ ವಿವರಿಸಲಾಗದ ಅಸಹಾಯಕತೆ. ವಲಸಿಗ ಸಂಸ್ಕೃತಿ ತಂತ್ರಜ್ಞಾನದ ಆಗಮನ ಇತ್ಯಾದಿ ಜಾಗತೀಕರಣದ ಸೊಬಗಿನ ಸಂಕೀರ್ಣತೆಯೂ ಸೋತು ತಲೆಬಾಗುವುದು ರಾಜ್‌ ಎಂಬ ಸ್ಥಳೀಯ ನಾಸ್ಟಾಲ್ಜಿಯದ ಸೊಗಡಿಗೆ!

ಏನಿಲ್ಲವೆಂದರೂ ಅರವತ್ತರ ದಶಕದಿಂದ ನಾಲ್ಕಾರು ತಲೆಮಾರು ಈ ಸೊಗಡಿನ ಸವಿಯನ್ನು ಸವಿದಿದ್ದಾರೆ. ಚಿತ್ರೀಕರಣದ ತಾಂತ್ರಿಕ ಅದ್ಭುತಗಳಿಗೆಲ್ಲ ಆ ಒಂದು ಮುಖ, ಒಂದು ಡೈಲಾಗ್‌, ಒಂದು ಚಲನೆ, ಒಂದು ಭಾವ ಪರ್ಯಾಯ ಉತ್ತರವಾಗಿತ್ತು ರಾಜ್‌ರಲ್ಲಿ. ಆದ್ದರಿಂದಲೇ ಅವರ ಸಂಸ್ಥೆ ನಿರ್ಮಿಸಿದ ಸಿನೆಮಗಳಲ್ಲಿ ತಾಂತ್ರಿಕ ಚಮತ್ಕಾರವು ರಾಜ್‌-ಅಭಿನಯದ ರೂಪದಲ್ಲಿ ಅಷ್ಟೊಂದು ಕಂಡುಬರುವುದು.
ಮತ್ತೊಂದೆಡೆ ಸ್ಥಿತಿವಂತರಲ್ಲದೆ, ಕನ್ನಡ ಶಾಲೆಯಲ್ಲಿಯೇ ಓದಿದವರು ಸಮಾಜದ ಮಧ್ಯಮವರ್ಗದ ನಿರ್ಮಿತಿಯ ಒಳಗೇ ಉಳಿದುಕೊಂಡು, ಬೆಂಗಳೂರೆಂಬುದು ಮೇಲ್ವರ್ಗಕ್ಕೆ ಮಾತ್ರ ಸೇರಿದ್ದೆಂದು ಬೆಚ್ಚುತ್ತಿದ್ದಾಗ್ಯೂ ಅವರ ನೈತಿಕ ಸ್ಥೆರ್ಯಕ್ಕೆ ಆಸರೆಯಾಗಿ ನಿಂತದ್ದು ರಾಜ್‌ ವ್ಯಕ್ತಿತ್ವದ ಮೇಲ್ವಿಚಾರಣೆಯೇ!

* *

ಇಂದಿನ ಬೆಂಗಳೂರು ಹಾಗೂ ಕನ್ನಡಕ್ಕೂ ಮಧ್ಯೆ ಇದ್ದಂತಹ ಕೊನೆಯ ಗಟ್ಟಿ ಕೊಂಡಿ ರಾಜ್‌. ಕಾಸ್ಮೊಪೊಲಿಟನ್‌ ಬೆಂಗಳೂರನ್ನು ಸಂಕೇತಿಸುವ ಕೋಶಿಸ್‌ ನಂಥ ಸ್ಥಳಗಳಲ್ಲಿ ಬೆಂಗಳೂರಿಗೆ ವಲಸಿಗರಾಗಿ ಬಂದವರಿಗೆ ರಾಜ್‌ಕುಮಾರ್‌ ಅವರನ್ನು `ಸರಿಯಾಗಿ' ಪರಿಚಯಿಸುವುದು ಒಂದು ಕ್ಲಿಷ್ಟಕರ ವಿಚಾರ. `ಐದು ದಶಕಗಳ ಕಾಲ ನಿರಂತರವಾಗಿ ಒಂದು ಭಾಷಾ ಪ್ರಾಂತ್ಯದಲ್ಲಿ ಸೂಪರ್‌ಸ್ಟಾರಾಗಿ ಮೆರೆದವರನ್ನು ಎಲ್ಲಾದರೂ ಕಂಡಿರುವಿರಾ?' ಎಂದು ಮ್ಯಾಕ್ಸ್ ಮುಲ್ಲರ್‌ ಭವನದ ಹುಡುಗಿಯೊಬ್ಬಳನ್ನು ಕೇಳಿದೆ. ಇಲ್ಲವೆಂದು ತಲೆಯಾಡಿಸಿದಳು.
ಕಳೆದ ವರ್ಷ ಲಂಡನ್ನಿನ ರಾಯಲ್‌ ಕಾಲೇಜ್‌ ಆಫ್‌ ಆರ್ಟ್ಸ್‌ನಲ್ಲಿ ಆಶಿಶ್‌ ರಾಜಾಧ್ಯಕ್ಷ ಸಹಸಂಪಾದಕರಾಗಿರುವ ಭಾರತೀಯ ಸಿನಿಮ ಎನಂಸೆಕ್ಲೋಪಿಡಿಯದಲ್ಲಿ ರಾಜ್‌ ಬಗೆಗಿನ ಪುಟಕ್ಕಾಗಿ ಹುಡುಕಾಡಬೇಕಾಯಿತು. ಬಾಲಿವುಡ್‌ ಸಿನಿಮಾಗಳೇ ಭಾರತದ ಮುಖ್ಯ ಸಿನಿಮಾಗಳು ಎನಿಸಿಬಿಡುವಂತೆ ಸಂಯೋಜನೆಗೊಂಡಿರುವ ಆ ಬೃಹತ್‌ ಸಂಪುಟದ ಹೊದಿಕೆಯ ಮೇಲೆ ಒಂದು ದೊಡ್ಡ ಎಂ.ಜಿ. ಆರ್‌. ಫೋಟೊ! ಟೆಲಿವಿಷನ್ನಿನ ಹಿಂದಿ ಚಾನೆಲ್ಲುಗಳಲ್ಲಿ ಕನ್ನ ಸಿನೆಮ ಸೂಪರ್‌ಸ್ಟಾರ್‌ ನಿಧನ ಎನ್ನುವಾಗಲೂ ಹಿಂದಿ ಹೊರತುಪಡಿಸಿದ ಭಾರತೀಯ ಭಾಷೆ, ಸಿನೆಮಾ, ಸಂಸ್ಕೃತಿಗಳೆಲ್ಲ ಅಂಚಿನವು ಎಂಬಂತಹ ಭಾವ.

ಕಾಲೇಜಿನಲ್ಲಿದ್ದಾಗ ಕುತ್ತಿಗೆ ಸುತ್ತಲಿನ ತಾಯಿತದಲ್ಲಿ ದೇವರ ಬದಲು ಪುಟ್ಟ ರಾಜ್‌ಕುಮಾರ್ ಫೋಟೋ ಹಾಕಿಕೊಳ್ಳುತ್ತಿದ್ದೆ ಎಂದು ನಮ್ಮ ಅಂದಿನ ದಿನಗಳ ಬಗ್ಗೆ ಹೇಳಿದರೆ ವಸಾಹತುಶಾಹಿಗಳು ವಸಾಹತೀಕರಣಗೊಂಡವರನ್ನು ನೋಡುವಂತ ಕರುಣಾಜನಕ ನೋಟ ಬೆಂಗಳೂರಿಗೆ ಬಂದ ಹೊಸಬರದು. ರಾಜ್‌ ತೀರಿಕೊಂಡ ಸಂಜೆಯ ಆಗುಹೋಗುಗಳ ನಂತರ ಅಣ್ಣಾವ್ರ ಭಕ್ತನಾಗಿದ್ದ ಗೆಳೆಯನೊಬ್ಬ ಮ್ಯಾಕ್ಸ್ ಮುಲ್ಲರ್ ಭವನದ ಅದೇ ಹುಡುಗಿಗೆ ಕೇಳುತ್ತಿದ್ದ, ಈಗ ತಿಳಿಯಿತೆ ರಾಜ್‌ಕುಮಾರ್‌ ಎಂದರೆ ಯಾರೆಂದು?

ರಾಜ್‌ ಹುಟ್ಟುಹಾಕಿದ ಆದರ್ಶ ಮಧ್ಯಮವರ್ಗದ ಮಾದರಿಯನ್ನು ತಾತ್ವಿಕವಾಗಿ ವಿವರಿಸಲು, ಜಾಗತೀಕರಣದ ತೆಕ್ಕೆಯೊಳಕ್ಕೆ ಸೇರಿಸಲು ದೊಡ್ಡ ತೊಡಕಿದೆ. ಕನ್ನಡ ಸಾಹಿತ್ಯವು ಕನ್ನಡ ಸಂಸ್ಕೃತಿಯ ತಾತ್ವಿಕ ಗುತ್ತಿಗೆ ಪಡೆದಿರುವುದು, ಮತ್ತು ಆ ಸಾಂಸ್ಕೃತಿಕ ವಿರಚನೆಯು (ಡಿಸ್ಕೋ‌ರ್ಸ್‍) ವಾಚ್ಯ ಪ್ರಧಾನವಾಗಿದ್ದುಕೊಂಡು, ದೃಶ್ಯಸಂಸ್ಕೃತಿಯ ಬಗ್ಗೆ ಕುರುಡಾಗಿರುವುದು--ಇವೆರೆಡೂ ಈ ತೊಡಕಿಗೆ ಮುಖ್ಯ ಕಾರಣಗಳು.

* *

'ಬ್ರಾಹ್ಮಣೀಯ' ಗುಣಗಳೇ ಹೆಚ್ಚಿದ್ದ, ಅಕ್ಷರೇತರ ಕಲೆಗಳಿಗಿಂತ ಅಕ್ಷರಗಳದ್ದೇ ಆಪತ್ಯವಿದ್ದ ಕನ್ನಡದ ಸಂಸ್ಕೃತಿಯಲ್ಲಿ ಅಬ್ರಾಹ್ಮಣ ವ್ಯಕ್ತಿತ್ವವೊಂದು, ಜಾತ್ಯತೀತ ಮೆಚ್ಚುಗೆ ಪಡೆದುದು ವಿಮರ್ಶಕರ ಮೆಚ್ಚುಗೆಯ ಅಂಶವೂ ಹೌದು, ವೋಟು ಕೇಳುವವರ ಹೊಟ್ಟೆಯುರಿಗೆ ಕಾರಣವೂ ಹೌದು.
ಇಲ್ಲಿ `ಬ್ರಾಹ್ಮಣ್ಯ' ಎಂಬುದನ್ನು, ಅದರ ವಿರುದ್ಧ ಪದವನ್ನೂ ಒಂದು ಮನಸ್ಥಿತಿಯನ್ನಾಗಿ ನೋಡಬೇಕೇ ಹೊರತು ಒಂದು ಜಾತಿ-ನಿಷ್ಠ ದೃಷ್ಟಿಕೋನದಿಂಲ್ಲ. ಅಕ್ಷರಗಳಿಗೂ ಬ್ರಾಹ್ಮಣ ಕುಲಕ್ಕೂ ಇರುವ ಆತ್ಮೀಯತೆಯು ಐತಿಹಾಸಿಕ ಸತ್ಯವಾಗಿರುವಂತೆ ಅಕ್ಷರೇತರ (ದೃಶ್ಯಾತ್ಮಕ, ಅಭಿನಯಾತ್ಮಕ) ಕಲೆಗೂ ಶೂದ್ರತ್ವಕ್ಕೂ ಹೆಚ್ಚಿನ ನಂಟಿದೆ, ವಿಮರ್ಶೆಯ ಸೌಕರ್ಯ ಕಡಿಮೆ ಇದೆ. ಆದ್ದರಿಂದಲೇ ದೃಶ್ಯಕಲೆ ಹೇಗಿರಬೇಕೆಂದು ಹೇಳುವ ಗ್ರಂಥಗಳು ಶಾಲಾ ಕಾಲೇಜುಗಳಲ್ಲಿ ಕಂಡುಬಂದರೆ, ಅವುಗಳನ್ನಾಧರಿಸಿ ಮೂಡಿಸಲಾದ ದೃಶ್ಯಕಲೆಯು ಟೈಂಪಾಸಿಗಿರುವ ಟೂರಿಸ್ಟ್‌ ತಾಣವಾಗಿವೆ. ಕನ್ನಡ ಮಾಧ್ಯಮದಲ್ಲಿ ಮೂರನೇ ತರಗತಿಯಷ್ಟೇ ಓದಿರುವ ರಾಜ್‌ಕುಮಾರ್‌ ಶಾಲಾಕಾಲೇಜನ್ನೂ ಮನರಂಜನಾ ತಾಣಗಳನ್ನು ಬೆಸೆದ ಏಕೈಕ ಸಾಂಸ್ಕೃತಿಕ ವ್ಯಕ್ತಿತ್ವ.

ರಾಜ್‌ನೇತೃತ್ವ ವಹಿಸಿದ್ದ ಕನ್ನಡದ ಗೋಕಾಕ್‌ ಚಳವಳಿಯು (1982) ಸ್ಕ್ರೀನ್‌ ಎಂಬ ಸಿನಿಮಾ ಪತ್ರಿಕೆಗೆ ಮಿನಿ-ಹಿಟ್ಲರ್‌ನ ಚಟುವಟಿಕೆಗಳಂತೆ ಕಂಡಿತ್ತು. ಅದೇ ಚಳುವಳಿ ಕನ್ನಡದ ತಾತ್ವಿಕರಿಗೆ ಸಮೂಹ ಸನ್ನಿಯಂತೆಯೂ ಕಂಡಿದ್ದಿದೆ. ಅಣ್ಣಾವ್ರ ಜನಪ್ರಿಯತೆಯ ಜಲಸಿ ಇದಕ್ಕೆ ಕಾರಣವಿರಬಹುದೇನೋ?
ಡಾ. ಯು. ಆರ್‌. ಅನಂತಮೂರ್ತಿಯವರು ಇದಕ್ಕೆ ಪೂರಕವಾದ ಒಂದು ಘಟನೆಯ ಬಗ್ಗೆ ಹೆಗ್ಗೋಡಿನಲ್ಲೊಮ್ಮೆ ಮಾತನಾಡಿದ್ದರು. ಅವರು ಹೇಳಿದ್ದು ಸಮಗ್ರವಾಗಿ ರಾಜಕುಮಾರ್‌ ಎಂಬ ಸಾಂಸ್ಕೃತಿಕ ವ್ಯಕ್ತಿತ್ವವನ್ನು ಹೇಗೆ ಶೈಕ್ಷಣಿಕ ಅಧ್ಯಯನವು ಮುಂದೆ ಒಟ್ಟುಗೂಡಿಸಬಹುದೆಂಬುದಕ್ಕೆ ಸಾಕ್ಷಿ. ,ಕನ್ನಡ ಸಾಹಿತ್ಯ ಸಮ್ಮೇಳನಗಳಾದಾಗ ಕಂಬಾರರ ಮಾತನ್ನು ಕೊನೆಯಲ್ಲಿಡುತ್ತಿದ್ದರು. ಏಕೆಂದರೆ ಅಷ್ಟು ಚೆನ್ನಾಗಿ ಅವರು ಹಾಡು ಹೇಳುತ್ತಿದ್ದರು . ನಮಗೆಲ್ಲ ಆಗ ಒಂದು ರೀತಿಯ ಇರಿಸುಮುರಿಸು.

ಒಮ್ಮೆ ಅಂತಹ ಸಮ್ಮೇಳನವೊಂದಕ್ಕೆ ರಾಜ್‌ಕುಮಾರ್‌ ಆಗಮಿಸಿದ್ದರು. ಆಗ ಕೊನೆಯಲ್ಲಿ ಮಾತನಾಡಿ ಹಾಡುವ ಅವಕಾಶವಿದ್ದುದು ರಾಜ್‌ಕುಮಾರರಿಗೆ. ಜನ ಎದ್ದು ಹೋಗದಿರಲು ಎಂದು ಆ ಉಪಾಯ ಮಾಡಿದ್ದರು. ಆಗ ನಮಗೆ ಕಂಬಾರರ ಮೇಲೆ ಸೇಡು ತೀರಿಸಿಕೊಳ್ಳುವ ಅವಕಾಶ ದೊರಕಿತ್ತು.

ಕಳೆದ ಒಂದು ಸಾವಿರ ವರ್ಷದ ಕನ್ನಡ ಭಾಷೆಯ ಇತಿಹಾಸದಲ್ಲಿ ಡಾ. ರಾಜ್‌ಕುಮಾರರಷ್ಟು ಕನ್ನಡ ಭಾಷೆಯೊಂದಿಗೆ ಗುರ್ತಿಸಿಕೊಂಡು ಜನಪ್ರಿಯವಾದ ವ್ಯಕ್ತಿತ್ವ ಮತ್ತೊಂದಿಲ್ಲ. ಮತ್ತು ಇದು ಉತ್ಪ್ರೇಕ್ಷೆಯೂ ಅಲ್ಲ.
ಎಚ್ ಎ ಅನಿಲ್‌ಕುಮಾರ್

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

'ರಾಜ್ಕುಮಾರ್'

ಶ್ರೀ. 'ಅನಿಲ್ ಕುಮಾರ್' ರವರ ಅನ್ನಿಸಿಕೆಗಳು ಎಶ್ಟು ನೈಜ ಹಾಗೂ ಭಾವೋತ್ಕರ್ಷದ ಸಂಗಮವಾಗಿವೆ !
ಅವನ್ನು ನಾನು ೩-೪ ಬಾರಿಯಾದರೂ ಮೆಲುಕುಹಾಕಿರಬೇಕು ! ಅನಿಲ್, ನೀವು ನಿರೂಪಿಸಿದ ಭಾಷೆಯೂ ಎಶ್ಟು ಸಮರ್ಪಕವಾಗಿದೆ !
ತೀರ ಹಚ್ಚಿಕೊಂಡ ವ್ಯಕ್ತಿಯನ್ನು ಬೇರೆಯವರಿಗೆ ಹೇಳುವಾಗ ನಾವು ಬಳಸುವುದು 'ಅವರಂಥವರು ಇನ್ನಿಲ್ಲ' ಎಂಬ ಮಾತೇ ತಾನೆ ? ಬಹುಶಃ ಇನ್ನೊಬ್ಬ ವ್ಯಕ್ತಿ ಆ ಸ್ಥಾನವನ್ನು ಆಕ್ರಮಿಸಿಕೊಳ್ಳುವವರೆವಿಗೂ ಇದು ಸತ್ಯ!
ಆದರೂ 'ರಾಜ್' ನಂತಹ ವ್ಯಕ್ತಿ ಒಮ್ಮೆಮ್ಮೆ ಹುಟ್ಟುತ್ತಾರೆ ಅಶ್ಟೆ !
ನಿಮ್ಮ ಮಾತುಗಳನ್ನೇ ಮತ್ತೆ ಜ್ಞಾಪಿಸಿಕೊಳ್ಳುವ !
ಕಳೆದ ಒಂದು ಸಾವಿರ ವರ್ಷದ ಕನ್ನಡ ಭಾಷೆಯ ಇತಿಹಾಸದಲ್ಲಿ ಡಾ. ರಾಜ್ ಕುಮಾರ್ ಅಶ್ಟು ಕನ್ನಡಭಾಷೆಯೊಡನೆ ಗುರುತಿಸಿಕೊಂಡು ಜನಪ್ರಿಯವಾದ ವ್ಯಕ್ತಿತ್ವ ಮತ್ತೊಂದಿಲ್ಲ. ಮತ್ತು ಇದು ಉತ್ಪ್ರೇಕ್ಷೆಯೂ ಅಲ್ಲ !
ಮೇಲಿನ ವಾಕ್ಯವನ್ನು ನಿಮ್ಮ ಲೇಖನದ ಅಂತ್ಯದಲ್ಲೂ ಮರುನುಡಿದಿದ್ದೀರಿ. ಇನ್ನೊಂದು ವಾಕ್ಯವನ್ನು ಉಧ್ಧರಿಸೋಣ.
ಇಂದಿನ ಬೆಂಗಳೂರು ಹಾಗೂ ಕನ್ನಡಕ್ಕೂ ಮಧ್ಯೆ ಇದ್ದಂತಹ ಕೊನೆಯ ಗಟ್ಟಿ ಕೊಂಡಿ- ರಾಜ್ !
ಆದರೆ ನಿಮ್ಮ ಇನ್ನೊಂದು ಮಾತನ್ನು ಓದುವಾಗ ಬಹಳ ದುಖಃ ವಾಗುತ್ತದೆ. ಭಾರತೀಯ 'ಸಿನೆಮಾ ವಿಶ್ವಕೋಶ' ದಲ್ಲಿ ರಾಜ್ ಬಗೆಗಿನ ಪುಟಕ್ಕಾಗಿ ಹುಡುಕಬೇಕಾದ ಪ್ರಮೇಯ ಬಂದಿದ್ದು ಎಶ್ಟು ಖೇದಕರ !
ರಾಜ್ ಬದುಕಿನ ಬಗ್ಯೆ 'ಕ್ಷ' ಕಿರಣ ಚೆಲ್ಲಿದ್ದಕ್ಕೆ ತುಂಬಾ ಸಂತೋಷವಾಯಿತು !
'ಸಂಪದ' ಪರಿವಾರ ಇದನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸುತ್ತದೆ !

ವೆಂಕಟೇಶ.