ಜಾತಿ ವ್ಯವಸ್ಥೆ ಎಲ್ಲಿದೆ? ಇಲ್ಲಿದೆ, ಇಲ್ಲಿದೆ!

To prevent automated spam submissions leave this field empty.

ಜಾತಿ ವ್ಯವಸ್ಥೆ ಎಲ್ಲಿದೆ? ಇಲ್ಲಿದೆ, ಇಲ್ಲಿದೆ!

ಭಾರತದ ಜಾತಿ ವ್ಯವಸ್ಥೆ ಕುರಿತಂತೆ ಪ್ರೊ|| ಎಸ್.ಎನ್.ಬಾಲಗಂಗಾಧರ ರಾವ್(ಅವರ ಅಭಿಮಾನಿಗಳ ಬಾಯಲ್ಲಿ ಬಾಲು) ಎನ್ನುವವರು ನಡೆಸಿರುವ ಸಂಶೋಧನೆ ಬಹಳ ಜನಕ್ಕೆ ತಿಳಿದಿರಲಾರದು. ಈ ಸಂಶೋಧನೆ ಅಂತಾರಾಷ್ಟ್ರೀಯ ಮಟ್ಟದ ಕೆಲವು ವಲಯಗಳಲ್ಲಿ, ವೇದಿಕೆಗಳಲ್ಲಿ ಮಾತ್ರ ಚರ್ಚೆಯಾಗುತ್ತಿರುವುದೂ ಇದಕ್ಕೆ ಕಾರಣವಾಗಿರುವುದು. ಭಾರತದ ’ಜಾತಿ ವ್ಯವಸ್ಥೆ’ ಎಂಬ ಕಲ್ಪನೆಯೇ ಪಾಶ್ಚಿಮಾತ್ಯ ಅಧ್ಯಯನಕಾರರು, ನಿರ್ದಿಷ್ಟವಾಗಿ ಕ್ರಿಶ್ಚಿಯನ್ ಮಿಷನರಿ ದೃಷ್ಟಿಕೋನ ಸೃಷ್ಟಿಸಿದ ಒಂದು ಕಲ್ಪನೆ ಎಂಬುದು ಇವರ ಮುಖ್ಯ ಸಂಶೋಧನೆ. ಹಿಂದೂ ಧರ್ಮವನ್ನು ಏಕ ದೇವ, ಏಕ ಪ್ರವಾದಿ, ಏಕ ಧರ್ಮಗ್ರಂಥ ಆಧಾರದ ಕ್ರಿಶ್ಚಿಯನ್ ಧರ್ಮದ ಮಾದರಿಯಲ್ಲಿ ಏಕರೂಪಿಯಾಗಿ ಗ್ರಹಿಸಿದ್ದರಿಂದಾಗಿ, ಜಾತಿಯನ್ನು ಹಿಂದೂ ಧರ್ಮದ ಒಂದು ’ವ್ಯವಸ್ಥೆ’ಯನ್ನಾಗಿ ಬಿಂಬಿಸಲಾಗಿದೆ ಎಂಬುದು ಇವರ ವಾದ. ಹೀಗಾಗಿ, ಭಾರತದಲ್ಲಿ ಜಾತಿ ಇದೆ ಮತ್ತು ಜಾತಿ ತಾರತಮ್ಯವೂ ಇದೆ; ಆದರೆ ಜಾತಿ ವ್ಯವಸ್ಥೆ ಎಂಬುದಿಲ್ಲ. ಏಕೆಂದರೆ, ಜಾತಿ ವ್ಯವಸ್ಥೆಯನ್ನು ಒಂದು ಅನನ್ಯ ಸಾಮಾಜಿಕ ವ್ಯವಸ್ಥೆಯಾಗಿ ಗುರುತಿಸಲು ಇಡೀ ಭಾರತಕ್ಕೆ ಅನ್ವಯವಾಗುವ ಸಾಮಾನ್ಯ ಚಿಹ್ನೆಯಿಲ್ಲ ಎಂಬುದು ಇವರು ಇದಕ್ಕೆ ನೀಡುವ ವಿವರಣೆ. ಇವರ ಈ ವಿವರಣೆಯಲ್ಲಿ ಅನೇಕ ತೊಂದರೆಗಳಿವೆ ಎಂಬುದು ನಿಜವಾದರೂ, ಇದು ಭಾರತೀಯ ಸಮಾಜದ ಇತಿಹಾಸದ ಬಗ್ಗೆ ಮರುನೋಟವೊಂದನ್ನು ಬೀರುವ ಪ್ರಯತ್ನ ಎಂಬ ದೃಷ್ಟಿಯಿಂದ ಗಮನಾರ್ಹವೇ.

ಬಾಲಗಂಗಾಧರರು ಮೂಲತಃ ಕರ್ನಾಟಕದವರು, ಕನ್ನಡಿಗರು. ೬೦-೭೦ರ ದಶಕದಲ್ಲಿ ಭಾರತದಲ್ಲಿದ್ದಾಗ ಇವರು ತೀವ್ರವಾದಿ ಕಮ್ಯುನಿಸ್ಟರಾಗಿದ್ದರಂತೆ. ಈಗ ಇವರು ಬೆಲ್ಜಿಯಂನಲ್ಲಿ ನೆಲೆಸಿದ್ದು, ಅಲ್ಲಿನ ಘೆಂಟ್ ವಿಶ್ವವಿದ್ಯಾಲಯದಲ್ಲಿ ತಮ್ಮ ಈ ಸಂಶೋಧನೆ ಕೈಗೊಂಡಿದ್ದಾರೆ ಮತ್ತು ಈ ಸಂಶೋಧನೆಯ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗಬೇಕೆಂಬ ದೃಷ್ಟಿಯಿಂದ ಅನೇಕ ಅಂತಾರಾಷ್ಟ್ರೀಯ ಯೋಜನೆಗಳನ್ನೂ, ಕಾರ್ಯಕ್ರಮಗಳನ್ನೂ ಇವರು ರೂಪಿಸಿದ್ದಾರೆ. ಇಂತಹ ಒಂದು ಯೋಜನೆಯ ಅಡಿಯಲ್ಲಿ ನಮ್ಮ ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರವೊಂದನ್ನು ಸ್ಥಾಪಿಸಿ, ಅವರೇ ಅದರ ಪ್ರಧಾನ ಪೋಷಕರೂ ಆಗಿದ್ದಾರೆ. ಇದಕ್ಕೆ ಈ ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ|| ಜೆ.ಎಸ್.ಸದಾನಂದ ಸ್ಥಳೀಯ ಪೋಷಕರಾಗಿದ್ದರೆ, ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ|| ರಾಜಾರಾಮ ಹೆಗಡೆ ನಿರ್ದೇಶಕರಾಗಿದ್ದಾರೆ. ಇವರಿಬ್ಬರೂ ನಾನು ಬಹುವಾಗಿ ಗೌರವಿಸುವ ವಿದ್ವಾಂಸರೂ ಮತ್ತು ನನ್ನ ಆಪ್ತ ಗೆಳೆಯರೂ ಆಗಿರುವುದರಿಂದ, ಬಾಲಗಂಗಾಧರರ ವಿಚಾರಗಳ ಕುರಿತಂತೆ ಕಳೆದ ಎರಡು-ಮೂರು ವರ್ಷಗಳಲ್ಲಿ ನಮ್ಮ ನಡುವೆ ಅನೇಕ ಚರ್ಚೆಗಳಾಗಿವೆ. ಪತ್ರಿಕೆಗಳ ಮೂಲಕವೂ ಸಾಕಷ್ಟು ವಾದ-ವಿವಾದಗಳು ನಡೆದಿವೆ.

ಇತ್ತೀಚಿನ ವರ್ಷಗಳಲ್ಲಿ ನಮ್ಮ ಸಾಮಾಜಿಕ ನ್ಯಾಯ ರಾಜಕಾರಣ ವಿಕ್ಷಿಪ್ತಗೊಳ್ಳುತ್ತಿರುವ ರೀತಿ-ನೀತಿಗಳ ಹಿನ್ನೆಲೆಯಲಿ, ಜಾತಿ ವ್ಯವಸ್ಥೆ ಕುರಿತ ಈವರೆಗಿನ ಸಂಕಥನದ ಬಗ್ಗೆ ನನ್ನಲ್ಲಿ ಕೆಲವು ಸಂದೇಹಗಳು ಹುಟ್ಟಿವೆ, ನಿಜ. ಆದರೆ, ಜಾತಿ ವ್ಯವಸ್ಥೆ ಎಂಬುದೇ ಇಲ್ಲ;ಅದು ಯಾರೋ ನಮ್ಮ ಮೇಲೆ ಹೇರಿದ ಕಲ್ಪನೆ ಎಂಬ ಸಾರಾ ಸಗಟು ತೀರ್ಮಾನ (ಇದನ್ನು ಈ ಗೆಳೆಯರು ತಮ್ಮ ಪ್ರಮೇಯದ ಊಹಾ ಪ್ರತಿಜ್ಞೆ - hypothesis - ಅಷ್ಟೆ ಎಂದು ಹೇಳುವರಾದರೂ, ತಮ್ಮ ಲೇಖನಗಳಲ್ಲಿ ಇದನ್ನು ತೀರ್ಮಾನದ ರೂಪದಲ್ಲೇ ’ಸಾಧಿಸಿ’ ತೋರಿಸುತ್ತಾರೆ!) ನನಗೆ ಒಂದು ಜಾಣ ಬೌದ್ಧಿಕ ವಾದದಂತೆ ಮಾತ್ರ ಕಾಣುತ್ತದೆ. ಮುಖ್ಯವಾಗಿ ಕ್ರಿಶ್ಚಿಯನ್ ಅಥವಾ ಯಾವುದೇ ಸೆಮೆಟಿಕ್ (ಮರಳುಗಾಡಿನ) ಧರ್ಮ ಏಕರೂಪಿಯಾಗಿದೆಯೆಂದು ಭಾವಿಸುವ ಮತ್ತು ಹಿಂದೂ ಧರ್ಮವನ್ನು ಏಕರೂಪಿ ಧರ್ಮವನ್ನಾಗಿ ಮಾಡುವ ಪ್ರಯತ್ನಗಳು ನಮ್ಮ ಇತಿಹಾಸದಲ್ಲಿ ನಿರಂತರವಾಗಿ - ಈಗಲೂ - ನಡೆದಿರುವ ಹಿನ್ನೆಲೆಯಲ್ಲಿ; ಇವರ ವಾದಕ್ಕೆ, ಇವರು ಬಹುವಾಗಿ ಎತ್ತಿ ಹಿಡಿಯುವ ’ವೈಜ್ಞಾನಿಕ’ ಆಧಾರಗಳೇನೂ ಇದ್ದಂತೆ ತೋರುವುದಿಲ್ಲ. ಇನ್ನೂ ಮುಖ್ಯವಾಗಿ, ಈ ಸಂಶೋಧನೆಯ ಕಾರಣ ಮತ್ತು ಉದ್ದೇಶವಾದರೂ ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಾಗದಾಗಿದೆ!

ಜಾತಿ ವ್ಯವಸ್ಥೆ ಎಂಬುದು ಒಂದು ಆರೋಪಿತ ಕಲ್ಪನೆಯಾಗಿರುವುದರಿಂದ, ಇದರಿಂದ ಪ್ರಭಾವಿತರಾಗಿರುವ ಭಾರತೀಯರಿಗೆ ತಮ್ಮದೇ ಆದ ನಿಜ ಅನುಭವವೆಂಬುದು ದಕ್ಕದಾಗಿದೆ ಎಂಬ ದೊಡ್ಡ ಮಾತುಗಳನ್ನು ಈ ಗೆಳೆಯರು ಆಡುವರಾದರೂ, ಇವರ ಸಂಶೋಧನೆಯ ರೀತಿ-ನೀತಿಗಳ ಬಗ್ಗೆಯೇ ಕರ್ನಾಟಕದ ವಿದ್ವದ್ವಲಯಗಳಲ್ಲಿ ಅನೇಕ ಅನೇಕ ಸಂದೇಹಗಳೂ, ಅಸಮಾಧಾನಗಳೂ ವ್ಯಕ್ತವಾಗಿವೆ. ಇದರಿಂದಾಗಿ ಇವರ ವಾದಗಳಿಗೆ ಸೂಕ್ತ ಉತ್ತರಗಳು ವಿದ್ವದ್ವಲಯದಲ್ಲಿ ವ್ಯವಸ್ಥಿತವಾಗಿ ಮಂಡಿತವಾಗಿಲ್ಲ. ಇವರ ವಾದ ಇವರೇ ಸೃಷ್ಟಿಸಿಕೊಂಡಿರುವ ಗೊಂದಲಗಳಿಂದಾಗಿ ಮೂಡಿರುವುದರಿಂದ, ಉತ್ತರಕ್ಕೆ ಅವು ಅರ್ಹವಲ್ಲ ಎಂಬುದು ಕೆಲವರ ಅಭಿಪ್ರಾಯವಾದರೆ; ಇವರ ಇಡೀ ಗುಂಪೇ ತಲೆ ಪ್ರತಿಷ್ಠೆಯದೂ, ಇವರ ನಾಯಕ ಬಾಲಗಂಗಾಧರರು ವಿಪರೀತ ದುರಹಂಕಾರಿಯೂ ಆಗಿರುವುದರಿಂದ ಇವರೊಂದಿಗೆ ವಾದ ಸಾಧ್ಯವಿಲ್ಲ ಎಂಬುದು ಇನ್ನು ಕೆಲವರ ಅಭಿಪ್ರಾಯ. ಹಿಂದೆ ನಡೆದ ಇಂತಹ ಚರ್ಚೆಗಳಲ್ಲಿ ಬಾಲಗಂಗಾಧರರು ತಮಗೆ ಅನಾನುಕೂಲವೆನಿಸಿದ ಸಂದರ್ಭ ಸೃಷ್ಟಿಯಾದಾಗಲೆಲ್ಲ ಎದುರಾಳಿಗಳ ಮೇಲೆ ಒರಟೊರಟಾಗಿ ಹರಿ ಹಾಯ್ದು, ಕೊನೆಗೆ ’ಹೊರಗೆ ಹಾಕಿ ಅವರನ್ನು’ ಎಂದು ತಮ್ಮ ಶಿಷ್ಯರಿಗೆ ಆದೇಶಿಸಿದ್ದೂ ಉಂಟು ಎಂದು ಡಾ|| ಯು.ಆರ್.ಅನಂತಮೂರ್ತಿ ಮತ್ತು ಡಾ||ರಾಜೇಂದ್ರ ಚೆನ್ನಿಯವರೂ ಸೇರಿದಂತೆ ಹಲವರು ನನ್ನ ಬಳಿ ಹೇಳಿದ್ದರು. ಆದರೆ ಸದಾನಂದ ಮತ್ತು ಹೆಗಡೆಯವರ ಉದಾರವಾದಿ ವರ್ತನೆಗಳ ಹಿನ್ನೆಲೆಯಲ್ಲಿ ನಾನದನ್ನು ಪೂರ್ಣವಾಗಿ ನಂಬದಾಗಿದ್ದೆ.

ಹೀಗಾಗಿ, ಇದೇ ಜನವರಿ ೧೮ ಹಾಗೂ ೧೯ರಂದು ಕುವೆಂಪು ವಿಶ್ವವಿದ್ಯಾಲಯದ ಪಿ.ವೆಂಕಟರಾಮಯ್ಯ ಸಭಾ ಭವನದಲ್ಲಿ ಈ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ ಭಾರತದ ರಾಜಕೀಯ ಚಿಂತಕರನ್ನು ಕುರಿತಂತೆ ಏರ್ಪಡಿಸಿದ್ದ ವಿಚಾರ ಸಂಕಿರಣಕ್ಕೆ ಆಹ್ವಾನ ಬಂದಾಗ, ನಾನು ಹೋಗಬೇಕೋ ಬೇಡವೋ ಎಂಬ ಗೊಂದಲಕ್ಕೆ ಬಿದ್ದೆ. ಘೆಂಟ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಏರ್ಪಾಡಾಗಿದ್ದ ಈ ಸಮ್ಮೇಳನಕ್ಕೆ ಬಾಲಗಂಗಾಧರರೂ ಬರುವವರಿದ್ದರಿಂದಾಗಿ, ಅವರನ್ನೂ ಮುಖತಃ ನೋಡಿದಂತಾಯಿತು ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳು ಹೇಗಿರುತ್ತವೆ ಹಾಗೂ ಯಾವ ಮಟ್ಟದ ಚರ್ಚೆ ನಡೆಯುತ್ತವೆ ಎಂಬುದು ತಿಳಿದಂತೆಯೂ ಆಯಿತು ಎಂದು ನಾನು ಒಂದು ದಿನದ ಮಟ್ಟಿಗೆ - ೧೯ರಂದು - ವಿಚಾರ ಸಂಕಿರಣಕ್ಕೆ ಹೋದೆ. ಅಂದು ಗಾಂಧಿ, ತಿಲಕ್, ಲೋಹಿಯಾ, ಗೋಲ್ವಾಲ್ಕರ್ ಮತ್ತು ಧರ್ಮಪಾಲ್‌ರ ಬಗ್ಗೆ ಒಟ್ಟು ಎಂಟು ಜನ ಉಪನ್ಯಾಸಗಳನ್ನು ನೀಡಿದರು! ಒಂದಿಷ್ಟು ಚರ್ಚೆಯೂ ನಡೆಯಿತು. ಬಾಲಗಂಗಾಧರರು ತಮಗೆ ಬಿಜೆಪಿ - ಆರ್.ಎಸ್.ಎಸ್. ಬಗ್ಗೆ ಏನೂ ಗೊತ್ತಿಲ್ಲವೆಂದು ಹೇಳುತ್ತಲೇ, ಗೋಲ್ವಾಲ್ಕರರ ವಿಚಾರಗಳ ಬಗ್ಗೆ ಪ್ರಶ್ನೆ ಎತ್ತಿದ ಇತಿಹಾಸದ ಪ್ರಾಧ್ಯಾಪಕರೊಬ್ಬರ ಮೇಲೆ, ಅವರು ಪ್ರಶ್ನೆ ಎತ್ತಿರುವ ರೀತಿ ಸರಿಯಿಲ್ಲವೆಂದು ಅವಮಾನಕರ ರೀತಿಯಲ್ಲಿ ಹರಿಹಾಯ್ದು ಅವರ ಬಾಯಿ ಮುಚ್ಚಿಸಿದ್ದೂ ನಡೆಯಿತು!

ಇದಾವುದರಲ್ಲೂ ಅಂತಾರಾಷ್ಟ್ರೀಯ ಎನ್ನುವುದು ಏನೂ ಇರಲಿಲ್ಲ. ಎಲ್ಲ ನಮ್ಮ ವಿಚಾರ ಸಂಕಿರಣಗಳಂತೆಯೇ ಸಾಮಾನ್ಯ, ಅತಿ ಸಾಮಾನ್ಯ. ಆದರೆ ಈ ವಿಚಾರ ಸಂಕಿರಣದ ಕೊನೆಯಲ್ಲಿ ಬಾಲಗಂಗಾಧರರೊಂದಿಗೆ ಆಕಸ್ಮಿಕವೆಂಬಂತೆ ನಡೆದ ನನ್ನ ಸಂಕ್ಷಿಪ್ತ ಮುಖಾಮುಖಿ ಅವರ ಈ ಇಡೀ ಚಟುವಟಿಕೆಗಳ ಮೇಲೆ ವಿಶೇಷ ಬೆಳಕು ಚೆಲ್ಲುವಂತಿತ್ತು! ಎಷ್ಟರ ಮಟ್ಟಿಗೆ ಎಂದರೆ, ಈ ಹಿಂದೆ ನನ್ನ ಕೆಲವು ಗೆಳೆಯರು ಇವರ ಬಗ್ಗೆ ಹೇಳಿದ್ದಾಗ ಯಾವುದನ್ನು ನಾನು ನಂಬದಾಗಿದ್ದೆನೋ ಅದೇ, ಹಾಗೇ ನಡೆದು ಹೋಯಿತು. ೧೯ರಂದು ವಿಚಾರ ಸಂಕಿರಣ ಮುಕ್ತಾಯವಾದ ಮೇಲೆ ಎಲ್ಲರೂ ಸಭಾ ಭವನದ ಹೊರಕ್ಕೆ ಬಂದಾಗ, ಅಕಸ್ಮತ್ತಾಗಿ ಅವರು ಬಹು ಹತ್ತಿರದಲ್ಲಿ ನನಗೆ ಎದುರಾದಾಗ ನಾನು ಬಹು ಗೌರವದಿಂದಲೇ ನಮಸ್ಕರಿಸಿ ನನ್ನ ಹೆಸರು ಹೇಳಿದೆ. ಅವರೂ ವಿಶ್ವಾಸದಿಂದ ಕೈ ನೀಡಿ ಪ್ರತಿಸ್ಪಂದಿಸಿದಾಗ, ಜಾತಿ ಪದ್ಧತಿ ಬಗೆಗಿನ ಅವರ ಸಂಶೋಧನೆಗಳನ್ನು ಕುರಿತ ನನ್ನ ಸಂದೇಹಗಳನ್ನು ಅವರ ಮುಂದಿಡಬಹುದಲ್ಲವೇ ಎಂಬ ಯೋಚನೆಯೂ ಬಂತು. ಅಂದಿನ ಮಧ್ಯಾಹ್ನದ ಊಟದ ವೇಳೆಯಲ್ಲಿ ತೀರ್ಥಹಳ್ಳಿಯ ಗೆಳೆಯ ಶ್ರೀಧರ್ ಅವರು, ನಿಮ್ಮ ಲೇಖನಗಳ ಕೇಂದ್ರ ಪ್ರಶ್ನೆಯನ್ನು ಈಗ ಅವರನ್ನೇ ಕೇಳಿ, ಒಳ್ಳೆಯ ಚರ್ಚೆಯಾಗಬಹುದು ಎಂದು ಒತ್ತಾಯಪೂರ್ವಕವಾಗಿ ನನಗೆ ಸೂಚಿಸಿದ್ದರು. ಆದರೆ ಈ ಸೂಚನೆಯನ್ನು ಆಗ ದೊಡ್ಡ ಮನುಷ್ಯರ ವೈಯುಕ್ತಿಕ ಸಹವಾಸ ಬೇಡವೆಂದು ತಿರಸ್ಕರಿಸಿದ್ದೆನಾದರೂ, ಈಗ ಅವರ ವಿಶ್ವಾಸದ ಪ್ರತಿಸ್ಪಂದನದ ಸಂದರ್ಭದಲ್ಲಿ ಅದನ್ನು ಕೇಳಿಯೇ ಬಿಡುವ ಉಮೇದು ಉಂಟಾಯಿತು.

ಹೀಗಾಗಿ, ನಾನು ಬಾಲಗಂಗಾಧರರಿಗೆ ನನ್ನ ( ’ಸಂವಾದ’ ಮಾಸಿಕದಲ್ಲಿ ಪ್ರಕಟವಾಗಿದ್ದ) ಲೇಖನದಲ್ಲಿದ್ದ ನನ್ನ ಮುಖ್ಯ ಪ್ರಶ್ನೆಯನ್ನು ಯಾರೋ - ಬಹುಶಃ ಕಣ್ಣನ್ ಎಂಬುವವರು - ಅಂತರ್ಜಾಲಕ್ಕೆ ಹಾಕಿದುದನ್ನೂ, ಅದಕ್ಕೆ ಅವರು ಪ್ರಶ್ನೆಯೇ ಅರ್ಥವಾಗಿಲ್ಲ ಎಂದು ಉತ್ತರಿಸಿದುದನ್ನೂ ಸಂಕ್ಷಿಪ್ತವಾಗಿ ನೆನಪಿಸಿದೆ. ಅದು ಕೂಡಲೇ ಅವರ ನೆನಪಿಗೂ ಬಂದು, ಸಾಕಷ್ಟು ಉತ್ಸಾಹದಿಂದಲೇ ನನ್ನನ್ನು ಒಂದು ಪಕ್ಕಕ್ಕೆ ಕರೆದು ಕುರ್ಚಿಯೊಂದನ್ನು ಎಳೆದು ಕೂತು, ಈಗ ನಿಮ್ಮ ಪ್ರಶ್ನೆಯನ್ನು ನನಗೆ ವಿವರಿಸಿ ಎಂದರು. ಸರಳ ಕನ್ನಡದಲ್ಲಿದ್ದ ಎರಡು ವಾಕ್ಯಗಳ ನನ್ನ ಪ್ರಶ್ನೆಯನ್ನು ಇಂಗ್ಲಿಷಿಗೆ ಅನುವಾದಿಸಿ ಅವರಿಗೆ ತಲುಪಿಸಲು ಅವರ ಅನುಯಾಯಿಗಳೋ, ಅಭಿಮಾನಿಗಳೋ ಪಟ್ಟಿರುವ ಕಷ್ಟದ ಬಗ್ಗೆ; ಆದರೂ ಅದು ಅವರಿಗೆ ಅರ್ಥವಾಗದಂತಿರುವುದರ ಬಗ್ಗೆ ನನ್ನ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಾ, ನನ್ನ ಪ್ರಶ್ನೆಯನ್ನು ಮತ್ತೆ ಅವರ ಮುಂದಿಟ್ಟೆ. ಅಲ್ಲಿಂದ ಮುಂದೆ ಕನ್ನಡದಲ್ಲೇ ನಮ್ಮಿಬ್ಬರ ನಡುವೆ ಸಂಭಾಷಣೆ ಹೀಗಿದೆ:

ನಾನು: ನನ್ನ ಪ್ರಶ್ನೆ ಇಷ್ಟೆ. ನೀವು ಜಾತಿ ಇದೆ ಎನ್ನುವುದನ್ನು ಒಪ್ಪುತ್ತೀರಿ. ಜಾತಿ ತಾರತಮ್ಯವಿದೆ ಎನ್ನುವುದನ್ನೂ ಒಪ್ಪುತ್ತೀರಿ. ಆದರೆ ಈ ತಾರತಮ್ಯ ಯಾವುದರಿಂದ ಸೃಷ್ಟಿಯಾಗುತ್ತಿದೆ? ಅದಕ್ಕೊಂದು ಕಾರಣ ಮತ್ತು ಆ ಕಾರಣ ಕಾರ್ಯರೂಪಕ್ಕೆ ಬರಲು ಒಂದು mechanism ಇರಲೇ ಬೇಕಲ್ಲವೆ?

ಬಾಲ ಗಂಗಾಧರ: ಹಾಂ! ಅದನ್ನೇ ನಾವು ನಮ್ಮ ಸಂಶೋಧನೆಯ ಮೂಲಕ ಹುಡುಕುತ್ತಿರುವುದು.

ನಾ: ಈಗಾಗಲೇ ಇಲ್ಲ ಎಂದು ನೀವೇ ಹೇಳುತ್ತಿರುವುದನ್ನು ಹುಡುಕುತ್ತಿದ್ದೇವೆ ಎಂದರೆ ಏನರ್ಥ?

ಬಾ: Caste ಅನ್ನುವುದು ಒಂದು System ರೂಪದಲ್ಲಿ ಇಲ್ಲ ಎಂದು ನಾವು ಹೇಳುತ್ತಿರುವುದು.

ನಾ: ನೀವು ಭಾರತದ ಜಾತಿ ಪದ್ಧತಿ ಎಂಬುದನ್ನು caste system ಎಂದು ಇಂಗ್ಲಿಷ್‌ಗೆ ಅನುವಾದಿಸಿಕೊಂಡು, system ಎಂಬುದಕ್ಕೆ ಇಂಗ್ಲಿಷ್ ಸಂದರ್ಭದಲ್ಲಿ ಇರುವ ಅರ್ಥವನ್ನು ಅದಕ್ಕೆ ಆರೋಪಿಸಿಕೊಂಡಿದ್ದೀರಿ. ಹಾಗಾಗಿ, ಅದೆಲ್ಲ ಜಾತಿಗೆ ಸಂಬಂಧಿಸಿದಂತೆ ಇಲ್ಲ ಎನ್ನುತ್ತಿದ್ದೀರಿ ಎಂದು ಕಾಣುತ್ತದೆ. ಅದರಿಂದ ಏನು ಪ್ರಯೋಜನ ? ವಾಸ್ತವವಾಗಿ ಇಲ್ಲಿರುವುದು ಜಾತಿ ಪದ್ಧತಿ ಅಲ್ವಾ? ಅದನ್ನಾದರೂ ಒಪ್ಪಿಕೊಳ್ಳುತ್ತೀರಾ?

ಬಾ: ಓ! ಹಾಗಾದರೆ ಪದ್ಧತಿ ಎಂದರೇನು?

ನಾ: ಪದ್ಧತಿ ಅಂದರೆ, ಪದ-ಹತಿ. ಹೆಜ್ಜೆಗಳನ್ನಿಟ್ಟು ಆದ ದಾರಿ. ನನ್ನ ತಂದೆ ಆಚರಿಸಿದ್ದನ್ನು ನಾನು ಆಚರಿಸುವುದು. ಅದನ್ನು ನನ್ನ ಮಗ ಆಚರಿಸುವುದು. ಹಿಂದಿನ ತಲೆಮಾರು ಆಚರಿಸಿದ್ದನ್ನು ಮುಂದಿನ ತಲೆಮಾರು ಆಚರಿಸುವುದು.

ಬಾ: ಜಾತಿ ಪದ್ಧತಿಗೆ ಇದು ಅನ್ವಯಿಸುವುದಿಲ್ಲವಲ್ಲ? ಜಾತಿ ಪದ್ಧತಿಗೆ ಆಚರಣೆಯ ಸಾಮಾನ್ಯ ನಿಯಮಾವಳಿ ಎಂಬುದೆಲ್ಲಿದೆ ತೋರಿಸಿ.

ನಾ: ನೀವು ಯಾವ ಮಟ್ಟದ ಸಾಮಾನ್ಯ ನಿಯಮಾವಳಿ ಬಗ್ಗೆ ಮಾತಾಡುತ್ತೀದ್ದೀರೋ ತಿಳಿಯದು. System ಎಂಬ ನಿಮ್ಮ ಕಲ್ಪನೆಗನುಸಾರವಾದ ಸಾಮಾನ್ಯ ನಿಯಮಾವಳಿ ಇಲ್ಲದಿರಬಹುದು. ಆದರೆ ಜಾತಿ ಪದ್ಧತಿ, ಇತಿಹಾಸದಲ್ಲಿ ಕಾಲ-ದೇಶ-ರಾಜಕಾರಣಕ್ಕೆ ಅನುಸಾರವಾಗಿ ಹಲವು ರೂಪಗಳನ್ನು ಪಡೆದು ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಕೆಲಸ ಮಾಡುತ್ತಿದೆ. ಭಾರತದಾದ್ಯಂತ ಜಾತಿ ಪದ್ಧತಿಗೆ ಒಂದೇ ನಿಯಮಾವಳಿ ಇದೆ ಎಂದು ಯಾರೂ ಹೇಳುತ್ತಿಲ್ಲ.

ಬಾ: ಹಾಗಾದರೆ ಅದನ್ನು ಪದ್ಧತಿ ಅಂತಲಾದರೂ ಹೇಗೇ ಕರೀತೀರಿ?

ನಾ: ನಿಮ್ಮಲ್ಲಿ ಭಾರತ ಎನ್ನುವುದು ಒಂದು ಸ್ಥಿರ ಕಲ್ಪನೆ ಆದಾಗ ಇಂತಹ ಪ್ರಶ್ನೆಗಳು ಹುಟ್ಟುತ್ತವೆ. ಜಾತಿ ಅನ್ನುವುದು ಒಂದು ನಿರಂತರ ಆಚರಣೆಯಾಗಿ ಇಲ್ಲಿಯವರೆಗೆ ಮುಂದುವರೆದು ಬಂದಿದೆ ಎನ್ನುವ ಅರ್ಥದಲ್ಲಿ ಅದು ಪದ್ಧತಿ. ಅದು ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯಲ್ಲಿ ರೂಪಾಂತರವಾಗಿರಬಹುದು.

ಬಾ: ಹಾಗಾದರೆ, ಒಂದೇ ಪ್ರದೇಶದಲ್ಲಿ ಹಲವು ಜಾತಿಗಳು ಒಂದೇ ರೀತಿಯ ಆಚರಣೆಗಳನ್ನು ಮಾಡುತ್ತಾರಲ್ಲ? ಅದನ್ನು ಹೇಗೆ ವಿವರಿಸ್ತೀರಾ? ಉತ್ತರ ಕರ್ನಾಟಕ್ಕೆ ಹೋಗಿ. ಅಲ್ಲಿ ಎಲ್ಲ ಜಾತಿಯವರೂ ಗಣಪತಿ ಪೂಜೆ ಮಾಡ್ತಾರೆ! ನಿಮಗಿದು ಗೊತ್ತ?

ನಾ: ಮಾಡಬಹುದೇನೋ. ಅದರೆ ಅದಕ್ಕೂ ಜಾತಿ ಪದ್ಧತಿಯ ಆಚರಣೆಗೂ ಏನು ಸಂಬಂಧ?

ಬಾ: ಹಾಗಾದರೆ ಜಾತಿ ಎಂದರೆ ನಿಮ್ಮ ಪ್ರಕಾರ ಏನು?

ನಾ: ಹುಟ್ಟಿನಿಂದ ಕಸುಬು ಮತ್ತು ಸಾಮಾಜಿಕ ಸ್ಥಾನಮಾನಗಳ ನಿರ್ಧಾರ. ಅಂತಹ ಪದ್ಧತಿಯಿಂದ ಆದ ಸಾಮಾಜಿಕ ಅನಾಹುತಗಳು, ಸಮಾಜದ ಅಸಹಜ, ಅನ್ಯಾಯದ ವಿಭಾಗೀಕರಣ... ಕೆಲವರ ಕೈಯಲ್ಲೇ ಕೆಲವು ಅಧಿಕಾರಗಳು.... ಒಂದು ರೀತಿಯ heirarchy....

ಬಾ: ಯಾವ heirarchyರೀ? ಎಲ್ಲಿದೆ ಅದು ತೋರಿಸಿ ಮೊದಲು...

ನಾ: ಅದೆಲ್ಲ ಇಲ್ಲ ಅಂತ ನೀವು ತೀರ್ಮಾನಿಸಿಕೊಂಡು, ನೋಡೋಕ್ಕೇ ತಯಾರಿಲ್ಲದಿದ್ದರೆ ನಾವು ತೋರಿಸೋದಾದ್ರೂ ಹ್ಯಾಗೆ? ಜಾತಿಪದ್ಧತಿನೇ heirarchy... ಓದು-ಬರಹ-ಅಧ್ಯಯನ ಇಂತಹವರಿಗಷ್ಟೇ ಮೀಸಲು... ಮತ್ತೊಂದು ಮತ್ತೊಬ್ಬರಿಗೆ ಮೀಸಲು..... ಬೇರೆಯವರು ಅದನ್ನು ಮಾಡುವಂತಿಲ್ಲ ಅನ್ನೋ ವಿಧಿ-ನಿಷೇಧಗಳು... ಇದರ ಪರಿಣಾಮ ಏನಾಯ್ತು? ಕೆಲವರು ಶ್ರೇಷ್ಠರು ಅನ್ನಿಸಿಕೊಂಡ್ರು... ಇನ್ನು ಕೆಲವರು ಕೀಳು ಅನ್ನಿಸಿಕೊಂಡ್ರು... ಇದರಿಂದ ಅನೇಕ ತಾರತಮ್ಯಗಳು ಶುರುವಾದ್ವು.... ಹಾಗಾಗಿ ಇದೊಂದು ನಿಮ್ಮ ಅರ್ಥದಲ್ಲಲ್ಲದಿದ್ರೂ, ಸಾಮಾನ್ಯ ಅರ್ಥದಲ್ಲಿ ಒಂದು ವ್ಯವಸ್ಥೆಯಾಗಿಯೇ ಕೆಲಸ ಮಾಡಿದೆ ಅನ್ಸುತ್ತೆ.

ಬಾ: ಸುಮ್ಮನೆ ಮಾತಾಡಬೇಡಿ.....ಇದಕ್ಕೆಲ್ಲಿದೆ ಸಾಬೀತು? ಏನು ಮಾಹಿತಿ, ಸಂಶೋಧನೆ ಇದೆ ನಿಮ್ಮತ್ರ ಈ ಬಗ್ಗೆ? ಕೇಳಿ ಇಲ್ಲಿ, ಲೆಕ್ಕ ಯಾರಿಗೆ ಬೇಕಿತ್ತು? ವೈಶ್ಯರಿಗಲ್ವ? ಅವರು ವಿದ್ಯೆ ಕಲೀದೆ ಲೆಕ್ಕ ಬಂತಾ ಅವರಿಗೆ?

ನಾ: ನೋಡಿ, ಈ ಲೆಕ್ಕ-ಪಕ್ಕಕ್ಕೆ ಸಂಬಂಧಿಸಿದ ವಿದ್ಯೆ ಬಗ್ಗೆ ಅಲ್ಲ ನಾನು ಮಾತನಾಡ್ತಿರೋದು. ಧಾರ್ಮಿಕ ಅಧ್ಯಯನ, ಧಾರ್ಮಿಕ ಕಾನೂನು, ನಿಯಮಗಳ ರಚನೆಯ ವಿಷಯ ನಾನು ಮಾತನಾಡ್ತಿರೋದು. ಅಲ್ಲೇ ತಾನೇ ಯಜಮಾನಿಕೆ, ಅಧಿಕಾರ, ಶ್ರೇಷ್ಠತೆಗಳ ಪ್ರಶ್ನೆಗಳು ಹುಟ್ಟೋದು?

ಬಾ: ಏನೂ ಅಧ್ಯಯನ ಮಾಡದೆ ಸುಮ್ಮನೆ ಮಾತನಾಡಬೇಡಿ. ಧರ್ಮಪಾಲರ ’ದಿ ಬ್ಯೂಟಿಫುಲ್ ಟ್ರೀ’ ಓದಿ. ೧೮-೧೯ನೇ ಶತಮಾನದಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿದ್ದ ಶಾಲೆಗಳಲ್ಲಿ ಎಷ್ಟು ಜನ ಬ್ರಾಹ್ಮಣರಿದ್ದರು, ಎಷ್ಟು ಜನ ಇತರ ಜಾತಿಯವರಿದ್ದರು ಅನ್ನೋದು ಅದರಲ್ಲಿ ಇದೆ. ಅದನ್ನು ಓದಿಕೊಂಡು ಮಾತಾಡಿ.

ನಾ: ನಾನೂ ಅದನ್ನು ಓದಿದ್ದೇನೆ. ಆದರೆ ನಾನು ಮಾತನಾಡ್ತಿರೋದು ಹೊಸ ಕಾಲದ ಶಾಲೆಗಳಲ್ಲಿನ General education ಬಗ್ಗೆ ಅಲ್ಲ. ಆ ತರದ education ಎಲ್ಲರಿಗೂ ಸಾಧ್ಯವಾಗಿದ್ದಕ್ಕೇ ನಾನು ಇವೊತ್ತು ನಿಮ್ಮತ್ರ ಹೀಗೆ ಮಾತಾಡೋಕೆ ಸಾಧ್ಯವಾಗಿರೋದು...

ಬಾ: ಆಯ್ತು ಸ್ವಾಮೀ, ಎಲ್ಲ ತಿಳ್ಕೊಂಡಿದ್ದೀರಲ್ಲ... ನೀವಿನ್ನು ಎದ್ದು ಹೋಗಬಹುದು ಇಲ್ಲಿಂದ.... ನಾನೇನೂ ನಿಮ್ಮನ್ನ ಕರೀಲಿಲ್ಲ ನನ್ನತ್ರ ಬಂದು ಮಾತಾಡೀ ಅಂತ... ಅಥವಾ ನನ್ನ ವಿಚಾರಗಳನ್ನ ಒಪ್ಪಿಕೊಳ್ಳೀಂತ ನಿಮ್ಮತ್ರ ಬಂದು ಬೇಡಿಕೊಳ್ಳಲಿಲ್ವಲ್ಲ... ಏಳಿ ಸ್ವಾಮಿ... ಏಳಿ ಸಾಕು...

ನಾ: ಅಲ್ಲಾ ಸ್ವಾಮೀ, ಸಮಾಜಕ್ಕೆ ಸಂಬಂಧಿಸಿದಂತೆ ನಾವು ಮಾಡಿರೋ ಹೊಸ ಸಂಶೋಧನೆ ನೋಡಿ ಅಂತ ನೀವು ಎಲ್ಲ ಕಡೆ ಪ್ರಚಾರ ಮಾಡಬಹುದು, ಕೇಂದ್ರಗಳನ್ನ ಸ್ಥಾಪಿಸಬಹುದು, ವಿಚಾರ ಸಂಕಿರಣ-ಸಮ್ಮೇಳನಗಳನ್ನ ಏರ್ಪಡಿಸಬಹುದು... ಸಾರ್ವಜನಿಕರ ಹಣ ಖರ್ಚು ಮಾಡಬಹುದು... ಆದರೆ ಸಮಾಜ ಅದಕ್ಕೆ ಪ್ರತಿಕ್ರಿಯಿಸಬಾರದು, ಪ್ರಶ್ನೆ ಕೇಳಬಾರದು, ಅಲ್ವಾ?

ಬಾ: ರೀ ಪ್ರಶ್ನೆ ಕೇಳೋ ಮೊದಲು ಸಂಶೋಧನೆ ಅಂದ್ರೇನು ತಿಳ್ಕೊಳ್ರೀ... ಅದಕ್ಕೂ ಮೊದಲು ಅದಕ್ಕೊಂದು scientific way ಅಂತಾ ಇದೇಂತ ತಿಳ್ಕೋಳ್ರೀ... Science ಅಂದ್ರೆ ಏನೂಂತ ಗೊತ್ತೇನ್ರಿ ನಿಮಗೆ?

ನಾ: ಸ್ವಾಮಿ ಅದನ್ನೆಲ್ಲ ನನಗೆ ಹೇಳಬೇಡಿ. ನಾನು ವಿಜ್ಞಾನದ ವಿದ್ಯಾರ್ಥಿನೇ... I hold a Masters degree in Mathematics.

ಬಾ: ಏ ಹೋಗ್ರೀ ಬಹಳ ಜನ ನೋಡಿದ್ದೀನಿ ಈ ತರ ಮೂರು ಕಾಸಿನ ಡಿಗ್ರೀಗಳನ್ನು ತಗೊಂಡವರನ್ನ...

ನಾ: ಅಯ್ಯೋ ಹೋಗ್ರೀ ನಾನೂ ನೋಡಿದ್ದೀನೀ ನಿಮ್ಮ ಥರ ತರಕಲಾಂಡಿ ಸಂಶೋಧನೆ ಮಾಡಿರೋ ಬಹಳ ಜನರನ್ನ... ಅದೇನೋ ನಿನ್ನೆ ಅಂಬೇಡ್ಕರ್ ಬಗ್ಗೆ ಮಾತಾಡ್ತಾ, ಮೀಸಲಾತಿ ಅದಕ್ಷತೆಯನ್ನ ಸೃಷ್ಟಿಸಿದೆ ಅನ್ನೋ ನಿಮ್ಮ ಸಂಶೋಧನೆಗೆ ಆಧಾರವಾಗಿ; ಎಲ್ಲ ಒಳ್ಳೆಯ ವಿಚಾರಗಳೂ ಸಮಾಜದಲ್ಲಿ ಒಳ್ಳೆಯ ಪರಿಣಾಮಗಳನ್ನೇನೂ ಉಂಟುಮಾಡೋದಿಲ್ಲ; ಹಾಗೇ ಎಲ್ಲ ಕೆಟ್ಟ ವಿಚಾರಗಳೂ ಕೆಟ್ಟ ಪರಿಣಾಮಗಳನ್ನೇನೂ ಉಂಟು ಮಾಡೋದಿಲ್ಲ ಅನ್ನೋ ಪ್ರಮೇಯವನ್ನ ಮಂಡಿಸಿದಿರಂತಲ್ಲ... ಇಂತಹ ಇನ್ನಷ್ಟು ಅದ್ಭುತ ಸಂಶೋಧನೆಗಳನ್ನು ಮಾಡಿ ಪ್ರಚಾರ ಮಾಡಿಬಿಟ್ಟರೆ ಜಗತ್ತು ಬಹು ಬೇಗ ಉದ್ಧಾರವಾಗಿ ಬಿಡುತ್ತೆ ಬಿಡಿ...

ಬಾ: ಯಾರ್ರೀ ನಿಮ್ಮನ್ನ ಇಲ್ಲಿಗೆ ಕರೆದಿದ್ದು? ನಡೀರಿ ಇಲ್ಲಿಂದ...

ನಾ: ರೀ ಸ್ವಾಮೀ, I have come here on an Invitation from your Centre... Have some manners...

ಬಾ: ಆಯ್ತು, ಮೊದಲು ಆಚೆಗೆ ನಡೀರಿ ಇಲ್ಲಿಂದ...

ನಾ: ಏನು ಮಾತಾಡ್ತಿದ್ದೀರಿ ನೀವು? ಕುವೆಂಪು ಯೂನಿವರ್ಸಿಟಿ ಕ್ಯಾಂಪಸ್ ನಿಮ್ಮ ತಾತನ ಮನೆ ಆಸ್ತಿ ಅಲ್ಲ, ಹೀಗೆಲ್ಲ order ಮಾಡೋಕೆ.... ನಿಮ್ಮನ್ನು ನೋಡಿ ನನಗೆ ಜಾತಿ ಪದ್ಧತಿ ಅಲ್ಲ, ಜಾತಿ ವ್ಯವಸ್ಥೆ ಅನ್ನೋದೇ ಇದೆ; ಅದು ನಾವು ತಿಳಿದುಕೊಂಡಿದ್ದಕ್ಕಿಂತ dirty and dangerous ಆಗಿದೆ ಅನ್ನೋದು confirm ಆಗ್ತಾ ಇದೆ...

ಬಾ (ಹೊರಟ ನನ್ನತ್ತ ಕೈ ತೋರಿಸಿ ಕಿರುಚುತ್ತಾ): Send him out! ಹೊರಗೆ ಹಾಕ್ರೀ ಅವನನ್ನ...

ನಾ (ಎಲ್ಲರೂ ಗಾಬರಿಯಿಂದ ಸುಮ್ಮನೆ ನೋಡುತ್ತಿದ್ದಂತೆ, ಕಾರು ಹತ್ತುತ್ತಾ): ಏ ಹೋಗಯ್ಯಾ ........ ಕುವೆಂಪು ಯೂನಿವರ್ಸಿಟೀನ ಪೂರ್ತಿ ಕೊಂಡುಕೊಂಡ ಮೇಲೆ ಹೀಗೆ order ಮಾಡು... ಆಗ ಯಾರಾದರೂ ನಿನ್ನ ಮಾತು ಕೇಳಬಹುದು....

* * *

ಇವರ ಸಂಶೋಧನೆಗಳ ಬಗ್ಗೆ ಸದ್ಯಕ್ಕೆ, ಇನ್ನು ಯಾವ ವ್ಯಾಖ್ಯಾನವೂ ಬೇಡವೆಂದು ಕಾಣುತ್ತದೆ!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ತಮ್ಮ ಅಭಿಪ್ರಾಯ ತಿಳಿಸಿ:
1. ಏಕರೂಪ ಇರಬೇಕು/ ಇರಬಾರದು.
2. ಎಲ್ಲರೂ ಎಲ್ಲವನ್ನೂ ಕಲಿಯಬೇಕು / ಕಲಿಯಬಾರದು.

ಜಾತಿ ಪದ್ಧತಿ ಒನ್ದು ವ್ಯವಸ್ಥಿತ ಪಿತೂರಿಯೆಂಬುದಕ್ಕೆ ಪುರಾವೆಗಳಿವೆಯೇ? ಜಾತಿ ಪದ್ಧತಿ ಈಗ ಇರುವನ್ತೆಯೇ ಎಲ್ಲ ಕಾಲದಲ್ಲೂ ಇತ್ತೇ? ಕುರುಬನಾಗಿದ್ದ ಕಾಳಿದಾಸ ವಿದ್ಯೆ ಕಲಿತದ್ದು ಹೇಗೆ? ಅದು ಧಾರ್ಮಿಕ ವಿದ್ಯೆಯಲ್ಲವಾಗಿದ್ದರೆ ಧಾರ್ಮಿಕ ವಿದ್ಯೆಗಳ ಕಲಿಯಲು ಎಲ್ಲರಿಗೂ ಈಗ ಅವಕಾಶ ಇದೆಯೋ ಇಲ್ಲವೋ? ಮನುಸ್ಮೃತಿಯನ್ನು ಈಗ ಕಲಿಸಲಾಗುತ್ತಿದೆಯೇ? ಹೌದೆನ್ದರೆ ಎಲ್ಲಿ?

ನನ್ನ ಬರಹಕ್ಕೂ ನಿಮ್ಮ ಪ್ರಶ್ನೆಗಳಿಗೂ ಏನು ಸಂಬಂಧವೆಂದು ನನಗೆ ಅರ್ಥವಾಗುತ್ತಿಲ್ಲ. ಜಾತಿ ವ್ಯವಸ್ಥೆ ಎಂಬುದೇ ಇರಲಿಲ್ಲ ಅಥವಾ ಇಲ್ಲ ಎಂದು ಸಾಧಿಸಬಯಸುವವರಿಗಷ್ಟೇ ನನ್ನ ಪ್ರಶ್ನೆಗಳು, ಸಂದೇಹಗಳು. ನಿಮ್ಮ ಮಾತಿನ ಧಾಟಿ ನೋಡಿದರೆ, ಎಲ್ಲ ಜಾತಿಗಳಿಗೆ ಇವೊತ್ತಿನ ಎಲ್ಲ ಅನುಕೂಲಗಳು ನಿಮ್ಮಂಥವರ ದಯೆಯಿಂದ ಅನುಗ್ರಹಿಸಲ್ಪಟ್ಟಂತಿದೆ! ತುಂಬಾ ಥ್ಯಾಂಕ್ಸ್!
ಕಾಳಿದಾಸ ಕುರುಬನಾಗಿದ್ದ ಎಂದು ಹೇಳುವ ಕಥೆಯಲ್ಲೇ, ಅವನು ಹೇಗೆ ವಿದ್ಯೆ ಕಲಿತ ಎಂಬುದರ ವಿವರವಿದೆಯಲ್ಲ? ಕಾಳಿಕಾದೇವಿ ಅವನ ಕನಸಿನಲ್ಲಿ ಬಂದು ಅವನ ನಾಲಿಗೆಯ ಮೇಲೆ ವಿದ್ಯಾ ದೇವತೆಯನ್ನು ಅಧಿಷ್ಠಾನ ಮಾಡಿ ಹೋದಳಂತಲ್ಲ!

ನಮಸ್ಕಾರ!

[quote]ಕಾಳಿಕಾದೇವಿ ಅವನ ಕನಸಿನಲ್ಲಿ ಬಂದು ಅವನ ನಾಲಿಗೆಯ ಮೇಲೆ ವಿದ್ಯಾ ದೇವತೆಯನ್ನು ಅಧಿಷ್ಠಾನ ಮಾಡಿ ಹೋದಳಂತಲ್ಲ![/quote]

ಹಾಗೆನ್ನುತ್ತ ತಾವು ನಂಬುವಿರಾದರೆ ನಾನೂ ತಮ್ಮ ಜೊತೆಗೆನೇ.. :) ಕುರುಬನಾಗಿದ್ದುದು ಕಲ್ಪನೆಯೆಂಬನ್ತೆ ಅಧಿಷ್ಠಾನವೂ ಕಲ್ಪನೆಯೇಕೆ ಆಗಿರಬಾರದು? ಆತ ಕಲಿತುದು ಒನ್ದು ಜೀವಮಾನದಲ್ಲಿ ಕಲಿತು ಮುಗಿಸಲಾಗದ ವಿದ್ಯೆಯೇನೂ ಅಲ್ಲವಲ್ಲಾ?

[quote]ಜಾತಿ ಪದ್ಧತಿ ಈಗ ಇರುವನ್ತೆಯೇ ಎಲ್ಲ ಕಾಲದಲ್ಲೂ ಇತ್ತೇ?[/quote]
ಏಕರೂಪವಾಗಿಸಲು ಯತ್ನಿಸುವವರು ದೇಶವಿರೋಧಿಗಳೆಂಬ ತಮ್ಮ ಅಭಿಪ್ರಾಯ ಮೊದಲೇ ಗೊತ್ತಿದ್ದುದರಿನ್ದ ಹಾಗೆ ಕೇಳಿದೆನು. 'ಕೆಲವರು ಏಕರೂಪವ ತರಲು ಯತ್ನಿಸುತ್ತಿದ್ದಾರೆ' ಎನ್ನುವ ಅರ್ಥದ ತಮ್ಮ ಮಾತುಗಳಿನ್ದ ಒನ್ದು ತಿಳಿದುಕೊಣ್ಡೆನು - "ಏಕರೂಪವ ತರಲು ಯತ್ನಿಸುವವರು ಒಳ್ಳೆಯವರಲ್ಲ."

ವರ್ಣಾಶ್ರಮ ಧರ್ಮವೇ ಜಾತಿ ವ್ಯವಸ್ಥೆಗೆ ಮೂಲವಾಯಿತೆಂಬುದು ಹೊಸ ವಿಚಾರವಲ್ಲ.
ಜಾತಿ ಪದ್ಧತಿ ಒನ್ದು ವ್ಯವಸ್ಥಿತ ಪಿತೂರಿಯೇ ಯಾಕಾಗಿರಬೇಕು? ಈಗ ಇರುವ ವ್ಯವಸ್ಥೆ ಕಾಲಾನ್ತರದಲ್ಲಿ ಮಾರ್ಪಾಟುಗೊಣ್ಡ ಒನ್ದು ತಾತ್ವಿಕತೆಯೇಕೆ ಆಗಿರಬಾರದೆನ್ದು ಯೋಚಿಸಬಹುದಲ್ಲವೇ?

[quote]ಇವೊತ್ತಿನ ಎಲ್ಲ ಅನುಕೂಲಗಳು ನಿಮ್ಮಂಥವರ ದಯೆಯಿಂದ ಅನುಗ್ರಹಿಸಲ್ಪಟ್ಟಂತಿದೆ..[/quote]
ಇದು ವ್ಯಂಗ್ಯವಾಯಿತು, ಶ್ರೀ ನಾಗಭೂಷಣ. :) ನನ್ನ ಮತ್ತು ನನ್ನನ್ಥವರ ದಯೆಯಿನ್ದ ಏನೂ ಅನುಗ್ರಹಿಸಲ್ಪಡಲಿಲ್ಲವೆಂಬುದೇ ನಿಜ, ಆದರೆ 'ನನ್ನನ್ಥವರು' ಮಾರ್ಪಾಡುಗಳಿಗೆ ಒಗ್ಗಿಕೊಳ್ಳಲಾಪವರೂ(Xಒಗ್ಗಿಕೊಳ್ಳಲಾರದವರು) ಇರುವರೆನ್ನುವೆನು.

ಕಥೆಯನ್ನು ನಂಬುವುದಾದರೆ ಪೂರ್ತಿ ನಂಬಬೇಕು, ಇಲ್ಲಾ ನಂಬಬರದು! ಈ ಕಥೆಯ ಪ್ರಕಾರ ಕಾಳಿದಾಸನನ್ನು ಕುರುಬ ಎಂದು ನಂಬುವುದಾದರೆ ಕಾಳಿಕಾ ದೇವಿಯ ಪ್ರಸಂಗವನ್ನೂ ನಂಬಬೇಕಾಗುತ್ತದೆ. ಆದುದರಿಂದ ಪುರಾಣ ಕಥೆಗಳ ಆಧಾರದ ಮೇಲೆ ಇಂದಿನ ವಾಸ್ತವವನ್ನು ಪರಿಶೀಲಿಸಲಾಗುವುದಿಲ್ಲ. ಹಾಗಾಗಿ, ಮೊದಲಾಗಿ ನಿಮ್ಮ ಪ್ರಶ್ನೆಯೇ ಅಸಂಗತವಾಗುತ್ತದೆ.
ಹಿಂದೂ ಧರ್ಮದ ಶಕ್ತಿಯೇ ಅದರ ಬಹುಮುಖತ್ವ. ಇದನ್ನೊಪ್ಪಿಕೊಂಡೇ, ಇದರ ಆಧಾರದ ಮೇಲೇ ಬಾಲಗಂಗಾಧರರು,ಇಂತಹ ಬಹುಮುಖ ಧರ್ಮದಲ್ಲಿ ಜಾತಿ, ವ್ಯವಸ್ಥೆಯಾಗಿ ಇರಲಾರದು ಎಂದು ವಾದ ಮಾಡುತ್ತಿರುವುದು.ಅದಕ್ಕೆ ಪ್ರತಿಕ್ರಿಯೆಯಾಗಿ ನಾನು ಹಿಂದೂ ಧರ್ಮದ ಏಕರೂಪೀಕರಣದ ಪ್ರಯತ್ನಗಳು ನಡೆದಿವೆ ಎಂದು ಸೂಚಿಸಿದ್ದೆ. ಏಕರೂಪೀಕರಣ, ಒಂದು ಧರ್ಮದಲ್ಲಿ ಕ್ರಿಯಾಶೀಲವಾಗಿರುವ ಎಲ್ಲ ಸಂಸ್ಕ್ರತಿಗಳ ಅನುಸಂಧಾನವಾಗಿ ನಡೆಯದೆ, ಒಂದು ನಿರ್ದಿಷ್ಟ ಸಾಂಸ್ಕ್ರತಿಕ ಮಾದರಿಯನ್ನಷ್ಟೇ ಶ್ರೇಷ್ಥವೆಂದು ಹೇರತೊಡಗಿದರೆ, ಅದು ಕೆಟ್ಟ ರಾಜಕಾರಣ ಮಾತ್ರ ಎನ್ನಿಸಿಕೊಳ್ಳುತ್ತದೆ, ಸಮಾಜ ವಿರೋಧಿ ಎನ್ನಿಸಿಕೊಳ್ಳುತ್ತದೆ.ಇದು ನನ್ನ ಅಭಿಪ್ರಾಯ. ಇನ್ನಷ್ಟು ವಿಷದೀಕರಣಕ್ಕಾಗಿ ಮುಂದಿನ ವಾರದ ಲೇಖನ ನೋಡಿ.
ಜಾತಿ ವ್ಯವಸ್ಥೆ ಯಾರದೋ ಪಿತೂರಿ ಎಂದು ನಾನು ಎಲ್ಲಿ ಹೇಳಿರುವೆ? ಎಲ್ಲ ಕಾಲದಲ್ಲೂ ಒಂದು ಸಾಮಾಜಿಕ ವ್ಯವಸ್ಥೆ ಅನಿವಾರ್ಯ. ಅದು ಎಷ್ಟರ ಮಟ್ಟಿಗೆ ಸಮಾಜದ ಎಲ್ಲ ವರ್ಗಗಳಿಗೆ ನ್ಯಾಯ ಒದಗಿಸುವಂತಿರಬೇಕಷ್ಟೆ.ಆ ನಂತರ ಮೂಡುವ ತಾತ್ವಿಕತೆಯ ಬಗ್ಗೆ ಈಗಲೇ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ
ಕ್ಷಮಿಸಿ, ನಿಮ್ಮ ಪ್ರಶ್ನೆಗಳ ರಭಸ ಹಾಗಿತ್ತು!
-ಡಿ.ಎಸ್.ನಾಗಭೂಷಣ

"ಏಕರೂಪೀಕರಣ, ಒಂದು ಧರ್ಮದಲ್ಲಿ ಕ್ರಿಯಾಶೀಲವಾಗಿರುವ ಎಲ್ಲ ಸಂಸ್ಕ್ರತಿಗಳ ಅನುಸಂಧಾನವಾಗಿ ನಡೆಯದೆ, ಒಂದು ನಿರ್ದಿಷ್ಟ ಸಾಂಸ್ಕ್ರತಿಕ ಮಾದರಿಯನ್ನಷ್ಟೇ ಶ್ರೇಷ್ಥವೆಂದು ಹೇರತೊಡಗಿದರೆ, ಅದು ಕೆಟ್ಟ ರಾಜಕಾರಣ ಮಾತ್ರ ಎನ್ನಿಸಿಕೊಳ್ಳುತ್ತದೆ,"

ಬಹುಶಃ ಇದು ಬಾಲು ಅವರ ಉದ್ದೇಶವೂ ಅಲ್ಲ ಅನ್ನಿಸುತ್ತದೆ. ನಿಮ್ಮ ದ್ರುಷ್ಟಿಯಲ್ಲಿ ಯಾವ ಸಾಂಸ್ಕ್ರುತಿಕ ಮಾದರಿಯನ್ನು ಶ್ರೇಷ್ಟವೆಂದು ಹೇಳಿ ಹೇರುತ್ತಿದಾರೆ? ಸ್ವಲ್ಪ ಬಿಡಿಸಿ ಹೇಳಿ.

ನನ್ನ ಬರಹಕ್ಕೂ ನಿಮ್ಮ ಪ್ರಶ್ನೆಗಳಿಗೂ ಏನು ಸಂಬಂಧವೆಂದು ನನಗೆ ಅರ್ಥವಾಗುತ್ತಿಲ್ಲ. ಜಾತಿ ವ್ಯವಸ್ಥೆ ಎಂಬುದೇ ಇರಲಿಲ್ಲ ಅಥವಾ ಇಲ್ಲ ಎಂದು ಸಾಧಿಸಬಯಸುವವರಿಗಷ್ಟೇ ನನ್ನ ಪ್ರಶ್ನೆಗಳು, ಸಂದೇಹಗಳು. ನಿಮ್ಮ ಮಾತಿನ ಧಾಟಿ ನೋಡಿದರೆ, ಎಲ್ಲ ಜಾತಿಗಳಿಗೆ ಇವೊತ್ತಿನ ಎಲ್ಲ ಅನುಕೂಲಗಳು ನಿಮ್ಮಂಥವರ ದಯೆಯಿಂದ ಅನುಗ್ರಹಿಸಲ್ಪಟ್ಟಂತಿದೆ! ತುಂಬಾ ಥ್ಯಾಂಕ್ಸ್!
ಕಾಳಿದಾಸ ಕುರುಬನಾಗಿದ್ದ ಎಂದು ಹೇಳುವ ಕಥೆಯಲ್ಲೇ, ಅವನು ಹೇಗೆ ವಿದ್ಯೆ ಕಲಿತ ಎಂಬುದರ ವಿವರವಿದೆಯಲ್ಲ? ಕಾಳಿಕಾದೇವಿ ಅವನ ಕನಸಿನಲ್ಲಿ ಬಂದು ಅವನ ನಾಲಿಗೆಯ ಮೇಲೆ ವಿದ್ಯಾ ದೇವತೆಯನ್ನು ಅಧಿಷ್ಠಾನ ಮಾಡಿ ಹೋದಳಂತಲ್ಲ!

ನಿಮ್ಮ ಲೇಖನ ಓದಿ ಸಂಶೋಧಕರ ಕುರಿತಂತೆ ರೇಜಿಗೆಯಾಯಿತು. ಒಂದು ಕಾಲ ಘಟ್ಟದಲ್ಲಿ ಯಾವ್ಯಾವುದೋ ಕಾರಣಕ್ಕೆ ಆದ ಜಾತಿ ಪಹ್ಧತಿ ಮತ್ತು ಅದು ಮಾಡಿದ ಅನಾಹುತಗಳ ಬಗ್ಗೆ ಡಾಳಾಗಿ ಗೋಚರಿಸುತ್ತಿರುವಾಗ ಅದನ್ನು ಹೇಳಿದರೆ ಕೇಳುವ ಸೌಜನ್ಯತೆ ಒಪ್ಪುವ ಮನಸ್ಸು ಮಾಡದೇ ಅದನ್ನೆಲ್ಲ ಮುಚ್ಚುವ ಪ್ರಯತ್ನ ಮಾಡುವುದೇ ಗೊಂದಲಗಳಿಗೆ ಕಾರಣ. ಜಾತಿ ವ್ಯವಸ್ಥೆ ಹೋಗುವುದು ಪ್ರಾಯಶ: ಭಾರತದಂಥ ಬಹು ಸಂಸ್ಕೃತಿಯ ದೇಶದಲ್ಲಿ ಕನಸಿನ ಮಾತು. ಆದರೆ ಜಾತಿ ಜಾತಿಗಳ ನಡುವೆ ಇರುವ ಕಂದರಗಳು ಮುಚ್ಚುತ್ತ ಹೋಗಬೇಕಾದದ್ದು ವರ್ತಮಾನದ ಅಗತ್ಯ. ಅದಕ್ಕೆ ನಮ್ಮ ವೈಚಾರಿಕ ಪ್ರಜ್ಞೆ ಕಿಲುಬು ಹಿಡಿಯದಂತೆ ಎಚ್ಚರಿಕೆ ವಹಿಸಬೇಕು ಮತ್ತು ಪ್ರಜ್ಞಾಪೂರ್ವಕ ಪ್ರಯತ್ನ ನಡೆಸಬೇಕೆಂದು ಅನಿಸುತ್ತದೆ. ಪ್ರಶ್ನೆ ಕೇಳಿದೊಡನೆ ಅಲ್ಲಿಗೆ ಬಾಯಿ ಮುಚ್ಚಿಸುವ ಪ್ರಯತ್ನವನ್ನು ನಾನು ಬಹು ಹಿಂದೆ - ನಿಮ್ಮಂತಲ್ಲ - ತೀರ ಸಣ್ಣ ಬಗೆಯಲ್ಲಿ ಅನುಭವಿಸಿದ್ದೆ. ಇದೇ ಸಂಪದದಲ್ಲಿ ಆ ಕುರಿತು "ಪುನರ್ಜನ್ಮವೊಂದಿದ್ದರೆ" ಎಂಬ ಬರಹದಲ್ಲಿ ಆ ಕುರಿತು ಹೇಳಿಕೊಂಡಿದ್ದೆ.
ಎ.ಪಿ.ರಾಧಾಕೃಷ್ಣ

"ಪ್ರಶ್ನೆ ಕೇಳಿದೊಡನೆ ಅಲ್ಲಿಗೆ ಬಾಯಿ ಮುಚ್ಚಿಸುವ ಪ್ರಯತ್ನವನ್ನು ನಾನು ಬಹು ಹಿಂದೆ - ನಿಮ್ಮಂತಲ್ಲ - ತೀರ ಸಣ್ಣ ಬಗೆಯಲ್ಲಿ ಅನುಭವಿಸಿದ್ದೆ. "

>> ಇದನ್ನು ಎಲ್ಲರೂ ಅನುಭವಿಸಿದ್ದೇವೆ.. ಅನುಭವಿಸುತ್ತಿದ್ದೇವೆ.. ಕೆಲವರು ಇನ್ನು ಒಂದು ವರಸೆ ಮುಂದೆ ಹೋಗಿ, ಪ್ರಶ್ನೆ ಕೇಳಿದವರನ್ನೇ ಭಾಷೆ ಅಥವಾ ಇನ್ನಾವುದೋ ವಿಷಯದಲ್ಲಿ ಹೀಯಾಳಿಸಿ ತಲೆ ತಪ್ಪಿಸುಕೊಳ್ಳುತ್ತಾರೆ, ಉತ್ತರ ಕೊಡುವ ಬದಲು.. ಬಹುಶಃ ಇದು ಅವರು ಸೋಲೊ ತಪ್ಪಿಸಿ ಕೊಳ್ಲುವ ದ್ಯೋತಕ ಇರಬಹುದು..

ನಿಮ್ಮ ಲೇಖನದ ಬಗ್ಗೆ ಬರೆಯಲಿಕ್ಕೆ ಮೊದಲೂ ನನ್ನ ಚಿಕ್ಕ ಪ್ರೆಶ್ನೆ ...

ನಾವು ಸಮಾಜದ ಮದ್ಯ ಬದುಕು ನಡೆಸುತ್ತಿದ್ದೆವೆ ,ನಮ್ಮಲ್ಲಿ ಜಾತಿಯನ್ನು ಹುಟ್ಟುಹಾಕಿದವರು ಯಾರು ? ಜಾತಿ ಅನ್ನೊದನ್ನು ಮನುಷ್ಯ ಮಾಡಿಕೊಂಡಿದ್ದು ಅಂದರೆ ಅದನ್ನು ಮಾಡಿದವರು ನಾವುಗಳು ಅದು ಯಾವ ಕಾರಣಕ್ಕೆ ಅಥವಾ ನಮ್ಮ ಪುರಾಣಗಳಿಂದನಾ(ರಾಮಾಯಣ,ಮಹಾಭಾರತ ಕಾಲ) ?

ನಿಮ್ಮವ
ಗೌಡ್ರು

ಜಾತಿ ವ್ಯವಸ್ಥೆ ವರ್ಣ ವ್ಯವಸ್ಥೆಯ ಭ್ರಷ್ಟ ರೂಪ ಎಂದು ಹೇಳುತ್ತಾರೆ. ಈ ವ್ಯವಸ್ಥೆಯನ್ನು ಒಂದು ಕಾಲದ ಸಮಾಜ ನಿರ್ವಹಣೆಗಾಗಿ ಮಾಡಿಕೊಂಡಿದ್ದಿರಬಹುದು. ಆದರೆ ಅದನ್ನು -ಹುಟ್ಟಿನಿಂದ ಒಬ್ಬನ ಅಥವಾ ಒಬ್ಬಳ ಸಾಮಾಜಿಕ ಸ್ಥಾನಮಾನ ಮತ್ತು ಅಧಿಕಾರಗಳನ್ನು ನಿರ್ಧರಿಸುವುದು- ಈಗಲೂ ಮುಂದುವರೆಸಿಕೊಂಡು ಹೋಗುವುದೆಂದರೆ ಅದು ಅಸಂಬದ್ಧವೆನಿಸುತ್ತದೆ. ಅಷ್ಟೇ ಅಲ್ಲ, ಅದು ಅನೇಕ ಅನ್ಯಾಯಗಳಿಗೂ, ಸಾಮಾಜಿಕ ಅಶಾಂತಿಗೂ ಕಾರಣವಾಗುತ್ತದೆ. ಜಾತಿ ವ್ಯವಸ್ಥೆ ನಮ್ಮ ಭಕ್ತಿ ಪಂಥದ ಕಾಲದಿಂದಲೂ ವಿವಿಧ ರೀತಿಯ ಪ್ರತಿರೋಧವನ್ನು ಎದುರಿಸುತ್ತಾ ಬಂದಿದೆ. ಆಧುನಿಕ ಯುಗದ ಎಷ್ಟೋ ಹೋರಾಟಗಳ ಫಲವಾಗಿ ಜಾತಿ ವ್ಯವಸ್ಥೆ, ಹೊರ ರೂಪದಲ್ಲಿ ಸಾಕಷ್ಟು ದುರ್ಬಲವಾಗಿದೆಯಾದರೂ,ಒಳ ರೂಪದಲ್ಲಿ ಇನ್ನೂ ಕ್ರಿಯಾಶೀಲವಾಗಿಯೇ ಇದೆ. ಆದುದರಿಂದ ಜಾತಿ ವ್ಯವಸ್ಥೆಯ ವಿರುದ್ಧ ಅನ್ಯಾಯಕ್ಕೊಳಗಾದ ಜನರ ಹೋರಾಟ-ಒಮ್ಮೊಮ್ಮೆ ಅದು ದಿಕ್ಕು ತಪ್ಪುತ್ತದೆಯಾದರೂ- ಇನ್ನೂ ಮುಂದುವರಿದೇ ಇದೆ.
-ಡಿ.ಎಸ್.ನಾಗಭೂಷಣ

http://www.hindu.com/mag/2007/12/09/stories/2007120950090400.htm
ಮೇಲಿನ ಕೊಂಡಿಯಲ್ಲಿರುವ ಫ್ರೊ. ಬಾಲಗಂಗಾಧರ ರವರ ಮಾತುಗಳೂ ಗೊಂದಲದಿಂದ ಕೂಡಿದೆ. ಜಾತಿ ಪದ್ಧತಿ ಎಂಬುದಿಲ್ಲ ಎನ್ನುತ್ತಲೇ " nature of the caste system" ಅನ್ನು ಅವಲೋಕಿಸಬೇಕು ಎಂದು ಅವರೇ ಹೇಳುತ್ತಾರೆ!

ಜಾತಿ ಪದ್ಧತಿ ಬರೇ ಪಾಶ್ಚಿಮಾತ್ಯರ ಕೊಡುಗೆ ಎಂದು ವಿವರಿಸಲು ಪಾಶ್ಚಿಮಾತ್ಯ ಪರಿಭಾಷೆಯನ್ನೇ (framework/rethinking...) ಬಳಸುತ್ತಾರೆ.

ಪತಂಜಲಿಯ ಯೋಗಸೂತ್ರದ ವಿವರಣೆಗಳು "inadequate and unscientific" ಅಂದು ಮರುಕ್ಷಣವೇ "Indian insights in themselves are scientific in nature" ಅನ್ನುತ್ತಾರೆ.

ಅಷ್ಟು ಸಾಲದೆಂಬಂತೆ ನಿಮ್ಮೊಡನೆ ನಡೆದುಕೊಂಡದ್ದು ನೋಡಿದರೆ ಪ್ರೊಫೆಸರರ ಬಗ್ಗೆ ಹೆಚ್ಚು ಭರವಸೆ ಮೂಡುವುದಿಲ್ಲ!

ಮಾನ್ಯ ನಾಗಭೂಷಣರೆ,
ಈ ಬರಹ ಓದಿ ಕಳವಳವಾಯ್ತು. ನೀವು ಬರೆದದ್ದು ನಿಜವೆಂದು ತಿಳಿದು ನಡೆದರೆ ಹಿರಿಯರಿಬ್ಬರು ಒಂದು ಚರ್ಚೆಯನ್ನು ಪರ್ಸನಲ್ ಆಗಿ ತೆಗೆದುಕೊಂಡು ಚಿಕ್ಕ ಮಕ್ಕಳಂತೆ ವ್ಯವಹರಿಸಿದ್ದು ಕಾಣುತ್ತದೆ. Neutral point of viewನಿಂದ ನೋಡುತ್ತಿರುವ ಹಲವರಿಗೆ, ಈ ಬರಹ ಓದುತ್ತಿರುವ ನನ್ನಂತಹ ಹಲವರಿಗೆ ಜಾತಿ ವ್ಯವಸ್ಥೆಯ ಬಗ್ಗೆ ಆಲೋಚಿಸುವುದಿರಲಿ ಅದರ ಕುರಿತು ವಾದ ಮಾಡಲು ಹೋಗಿ ಜಗಳವಾಡಿದಂತೆ ಇಲ್ಲಿ ಪ್ರಸ್ತಾಪವಾಗಿರುವವರ ಬಗ್ಗೆ ಆಲೋಚಿಸುವಂತೆ ಮಾಡುತ್ತದೆ. ವಾದ ಮಾಡುತ್ತಿರುವ ಇಬ್ಬರಲ್ಲಿ ಯಾರ ಬಗ್ಗೆಯೂ ಒಳ್ಳೆಯ ಅಭಿಪ್ರಾಯ ಹುಟ್ಟುಹಾಕಲಿಕ್ಕಿಲ್ಲ, ಓದುಗರಲ್ಲಿ. ಅದರಲ್ಲೂ ಪ್ರಸ್ತಾಪವಾಗಿರುವ ಮತ್ತೊಂದು ಹೆಸರು ನಮಗೆ ಹೆಚ್ಚೇನೂ ಪರಿಚಿತವಲ್ಲದ್ದರಿಂದ ಈ ಬರಹ ಅವರ ಬಗ್ಗೆ ನಮಗೆ ಅಸಮಾಧಾನ ಹುಟ್ಟಿಸುವುದಕ್ಕಿಂತ ನಮಗೆ ಸಂಪದದ ಮೂಲಕ ಪರಿಚಿತರಾದ, ಬರಹದ ಶೈಲಿ, ವಿಭಿನ್ನ ವಿಚಾರಗಳಿಂದ ಆಪ್ತರಾದ ನಿಮ್ಮ ಬಗ್ಗೆ ಅಸಮಾಧಾನ ಹುಟ್ಟಿಸುವುದಂತೂ ನಿಜ.

ಪ್ರಿಯ ಹರಿ ಪ್ರಸಾದ್,
ನಿಮ್ಮ ಪ್ರತಿಕ್ರಿಯೆಯಲ್ಲಿ, ’ನೀವು ಬರೆದಿದ್ದು ನಿಜವೆಂದು ತಿಳಿದರೆ...’ ಎಂಬ ನಿಮ್ಮ ಮಾತು ನನಗೆ ನೋವನ್ನುಂಟು ಮಾಡಿದೆ. ನಿಮಗೆ ನನ್ನ ಬರಹದ ನಿಜತ್ವದ ಬಗ್ಗೆ ಸಂಶಯವಿದ್ದಲ್ಲಿ ದಯವಿಟ್ಟು ತಿಳಿಸಿಬಿಡಿ-ಇನ್ನು ಮುಂದೆ ಸಂಪದಕ್ಕೆ ನನ್ನ ಬರಹಗಳನ್ನು ಕಳಿಸುವುದನ್ನು ನಿಲ್ಲಿಸುವೆ. ಅಲ್ಲದೆ, ಈ ಬರಹದಲ್ಲಿ ನಿಮಗೆ ನನ್ನ ಬಗ್ಗೆ ಅಸಮಾಧಾನವನ್ನು ಉಂಟು ಮಾಡಿದ ಸಂಗತಿಗಳು ಯಾವುವು ಎಂಬುದನ್ನು ತಿಳಿಸಿದ್ದರೆ ನಿಮ್ಮ ಮಾತುಗಳ ಹಿಂದಿನ ಅಸಮಾಧಾನವನ್ನೂ ಅರ್ಥ ಮಾಡಿಕೊಳ್ಳಲೂ ನನಗೆ ಸಾಧ್ಯವಾಗುತ್ತಿತ್ತು. ಬಾಲು ಅವರೊಡನೆಯ ನನ್ನ ಸಂವಾದ ಪ್ರಯತ್ನಕ್ಕೆ ಪೀಠಿಕೆಯಾಗಿ ನಾನು ಬರೆದಿರುವುದನ್ನೂ ನೀವು ವಿವರವಾಗಿ ಓದಿದ್ದೀರಿ ಎಂದು ಭಾವಿಸುವೆ.
-ಡಿ.ಎಸ್.ನಾಗಭೂಷಣ

ನಾಗಭೂಷಣರೆ,
ಅದನ್ನು ಹೀಗೆ ಓದಿಕೊಳ್ಳಿ:
"when looking through this with a neutral point of view, if we take it that what you've written is true... then... "
ವಾಕ್ಯಗಳ ರಚನೆಯಲ್ಲಿ ಕೆಲವು ಪದಗಳು ಹಿಂದುಮುಂದಾದವು.

http://en.wikipedia.org/wiki/NPOV#Neutral_point_of_view

<ಈ ಲೆಕ್ಕ-ಪಕ್ಕಕ್ಕೆ ಸಂಬಂಧಿಸಿದ ವಿದ್ಯೆ ಬಗ್ಗೆ ಅಲ್ಲ ನಾನು ಮಾತನಾಡ್ತಿರೋದು...>
<ನಾನು ವಿಜ್ಞಾನದ ವಿದ್ಯಾರ್ಥಿನೇ... I hold a Masters degree in Mathematics....>

:D

ನಾಗಭೂಷಣ ಸಾರ್,

ನಿಮ್ಮ ಹಲವು ಬರಹಗಳ ಮೇಲಿನ ಅಭಿಮಾನಿಯಾಗಿ ಕೆಲ ವಿಷಯ ತಿಳಿಯಬಯಸುತ್ತೇನೆ ನಿಮ್ಮಿಂದ :

ಎಲ್ಲ ಜಾತಿಯವರಿಗೂ ಅನುಕೂಲ ಎಂದರೆ ಏನು ನಿಮ್ಮ ಪ್ರಕಾರ ? ಅನುಕೂಲ ಎಂದರೆ "Spoon feeding" ಅಲ್ಲ ಅಂದುಕೊಳ್ಳುತ್ತೇನೆ. ಅನುಕೂಲ ಎಂದರೆ "ಉದ್ಯೋಗ / ಶಿಕ್ಷಣ ಅವಕಾಶ" ಎಂದಾದರೆ ಅದು ಇಂದು ಎಲ್ಲಾ ಸ್ಥರದಲ್ಲೂ "ಜಾತಿ ಪದ್ಧತಿಯ" ಪ್ರಕಾರವೇ ಅನುಗ್ರಹಿಸಲ್ಪಟ್ಟಿದೆ. ಎಲ್ಲರಿಗೂ ತಿಳಿದಿರುವಂತೆ ಇದು ಶೇ. ೬೦ ರಷ್ಟು ಮೀಸಲಾತಿ ನೀಡಲ್ಪಟ್ಟಿದೆ. ಇದರಿಂದ ಆರ್ಥಿಕ ಸಮಾನತೆ ತಂದುಕೊಳ್ಳುವುದು ಆಯಾ ವರ್ಗಗಳಿಗೆ ಬಿಟ್ಟಿದ್ದು.

ಈ ದುರ್ಭರ ಪರಿಸ್ಥಿತಿಯಿಂದ ಬಿಡುಗಡೆಗಾಗಿ ಅನೇಕ ಮೇಲ್ವರ್ಗದ (ಅದೂ ಮಧ್ಯಮ ವರ್ಗದ) ಜನರು ದೇಶ / ವಿದೇಶಗಳಿಗೆ ಗುಳೆ ಹೂಡಿರುವುದೂ ಆಗಿದೆ. ಇಲ್ಲಿ ಅಳಿದುಳಿದ ಜನರೂ ಅದನ್ನೇ ಅನುಭವಿಸುತ್ತಿದ್ದಾರೆ. ಅವರೆಷ್ಟು ಸುಖವಾಗಿದ್ದಾರೆ ಎಂದರೆ "'ಬಂಗಾರದ ಪಂಜರ' ದೊಳಗೆ ಸಾಮಾಜಿಕವಾಗಿ ಮೂಲೆಗುಂಪಾದ / ಕಡೆಗಣಿಸಲ್ಪಟ್ಟ ಗಿಳಿಯಷ್ಟೇ" ಎಂದರೆ ಅತಿಶಯೋಕ್ತಿಯಾಗದು. ಬಂಗಾರದ ಪಂಜರದ ಗಿಳಿಗೆ ಕಷ್ಟವಿರಲಾರದು ಅಲ್ಲವೇ. ಇವರಲ್ಲೂ ಅನೇಕರು ಸಮಾಧಾನದಿಂದಿರುವುದು ಯಾವುದೋ ಕಾಣದ ದೇವರ ಧ್ಯಾನ, ಇತ್ಯಾದಿ ಅಗೋಚರ ಆಶ್ವಾಸನೆ / ಭರವಸೆಯಿಂದಲ್ಲದೆ ಈ ಸಮಾಜದ ಕೊಡುಗೆಯಿಂದ ಖಂಡಿತಾ ಅಲ್ಲ.

ಇನ್ನು ಅನುಕೂಲ ಎಂದರೆ "ಧಾರ್ಮಿಕ ಸಮಾನತೆ" ಎಂದಾದರೆ, ಇದೊಂದು ಮುಗಿಯಲಾರದ ಕತೆಯಂತೆ ತೋರುತ್ತದೆ. ಮಿತಿಮೀರುತ್ತಿರುವ ನಮ್ಮ ಜನಸಂಖ್ಯೆಯ ಈ ದಿನಗಳಲ್ಲಿ ನಮ್ಮ ನಮ್ಮ ಧರ್ಮ ನಾವು ತಿಳಿದುಕೊಂಡು ಹೋದರೆ ಸಾಕಾಗಿದೆ.

ಇದಕ್ಕಿಂತಲೂ ಹೆಚ್ಚು ಸಮಾನತೆಯು ಅದು ಭಾರತದಲ್ಲಷ್ಟೇ ಅಲ್ಲ, ಇನ್ನೆಲ್ಲೂ ಸಿಗದು.

ಇದು ನನ್ನ ಅನಿಸಿಕೆ, ಅನ್ಯಥಾ ಭಾವಿಸಬೇಡಿರಿ. ಇದಕ್ಕೆ ನಿಮ್ಮ ಕನಿಷ್ಟ ಉತ್ತರವಾದರೂ ಬಯಸುತ್ತೇನೆ.

ನಿಮ್ಮ ವಿಶ್ವಾಸಿ

ಅರವಿಂದ

ಪ್ರಿಯ ಅರವಿಂದ್,
ನಿಮ್ಮ ವಿಶ್ವಾಸದ ಮಾತುಗಳಿಗಾಗಿ ವಂದನೆಗಳು.
ಎಲ್ಲ ಜಾತಿಗಳಿಗೆ ಅನುಕೂಲ ಎಂದರೆ ಎಲ್ಲ ಜನ ವರ್ಗಗಳಿಗೆ ಅಭಿವ್ರದ್ಧಿಯ ಸಮಾನ ಅವಕಾಶಗಳು. ಆದರೆ,ಚರ್ಚೆ ಎಲ್ಲಿಂದ ಎಲ್ಲಿಗೋ ಹೋಗುತ್ತಿದೆ! ನನ್ನ ಮೂಲ ಲೇಖನ ಇದ್ದುದು ಈ ದೇಶದಲ್ಲಿ ಜಾತಿ ವ್ಯವಸ್ಥೆ ಎಂಬುದಿದ್ದಿತೋ ಇಲ್ಲವೋ ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಮಾತ್ರ. ನನ್ನ ಪ್ರತಿಕ್ರಿಯೆಗಳೂ ಆ ಸಂಬಂಧವಾಗಿಯೇ ಇದ್ದುದು. ಈಗ ನೀವು ಇಂದಿನ ಮೀಸಲಾತಿಯ ಪ್ರಶ್ನೆ ಎತ್ತಿದ್ದೀರಿ. ಇದಕ್ಕೆ ಇಲ್ಲಿ ಉತ್ತರ ಕೊಡಲು ಹೋದರೆ, ನಾನು ಬೇರೆ ಕೆಲಸ ಮಾಡಲಾಗದೆ ಜೀವನ ಪೂರ್ತಿ ಇಲ್ಲಿನ ಚರ್ಚೆಗೆ ಉತ್ತರ ಕೊಡುತ್ತಲೇ ಇರಬೇಕಾಗುತ್ತದೆ! ಏಕೆಂದರೆ, ಮೇಲ್ಜಾತಿಗಳ ಒಂದು ವರ್ಗ ಯಾರೇ -ನಮ್ಮ ಸುಪ್ರೀಂ ಕೋರ್ಟೂ ಸೇರಿದಂತೆ-ಏನೇ ಹೇಳಿದರೂ ಮೀಸಲಾತಿಯ ಅಗತ್ಯವನ್ನು ಒಪ್ಪಲು ನಿರಾಕರಿಸುತ್ತಿದೆ. ಅದು ತನ್ನ kith & kin ಬಗ್ಗೆ ಯೋಚಿಸಿದಷ್ಟು ಭಾವನಾತ್ಮಕವಾಗಿ ಬೇರೆಯವರ ಬಗ್ಗೆ ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡಿದೆ.ಇದು ಮತ್ತೆ ನಮ್ಮ ಜಾತಿ ವ್ಯವಸ್ಥೆ ಸ್ರಷ್ಟಿಸಿರುವ ಸಾಮಾಜಿಕ disconnect.
ನಾವು ಒಂದು ನೆಲೆಯಲ್ಲಿ ಸ್ವತಂತ್ರರು ಹೇಗೋ ಇನ್ನೊಂದು ನೆಲೆಯಲ್ಲಿ ಇತಿಹಾಸದ ಭಾಗ ಕೂಡ. ಅದರ ಭಾರವನ್ನು ಹೊರದೆ ಅನ್ಯ ಮಾರ್ಗವಿಲ್ಲ. ವಿದ್ಯೆಗೆ-ಓದು, ಬರಹ, ಅಧ್ಯಯನ, ಅಮೂರ್ತ ಆಲೋಚನೆ ಇತ್ಯಾದಿ-ಸಂಬಂಧಿಸಿದಂತೆ ಅಸಮಾನ ಅವಕಾಶಗಳ ಇತಿಹಾಸ ಹೊಂದಿರುವ ನಮ್ಮ ಸಮಾಜವನ್ನು ಸಮಾನ ಅವಕಾಶಗಳ ಸಮಾಜವನ್ನು ಮಾಡಲು-ಇದು ನಮ್ಮ ರಾಷ್ಟ್ರೀಯ ಹೋರಾಟದ ಆದರ್ಶ ಕೂಡ- ಮೀಸಲಾತಿ ಅಗತ್ಯವಾಗಿದೆ.ದೇಶ ಬಿಟ್ಟು ಹೋದವರ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಇನ್ನೂ ಸಮಾನ ಅವಕಾಶಗಳಿಂದ ವಂಚಿತರಾಗಿಯೇ ಉಳಿದಿರುವ ದೇಶದಲ್ಲಿನ ದೊಡ್ಡ ಜನವರ್ಗದ ಬಗ್ಗೆ ಯೋಚಿಸಿ. ಇತಿಹಾಸದ ಲಾಭ ಪಡೆದವರು ಸ್ವಲ್ಪ ಸಹನಶೀಲರೂ,ಉದಾರಿಗಳೂ ಆಗಿರಬೇಕಾಗುತ್ತದೆ.
ನಿಜ, ಮೀಸಲಾತಿ ಒಂದು ರಾಜಕೀಯ ಸಾಧನವಾಗಿದೆ, ದುರುಪಯೋಗವಾಗುತ್ತಿದೆ,ಸಲ್ಲದ ರೀತಿಯಲ್ಲಿ ವಿಸ್ತರಿಸುತ್ತಾ ಹೋಗುತ್ತಿದೆ. ಇದರ ವಿರುದ್ಧ -ಅದರ ವಿವರಗಳ ಜೊತೆಗೆ-ನಮಗೆ ಲಭ್ಯವಾಗುವ ಎಲ್ಲ ವೇದಿಕೆಗಳಲ್ಲಿ ಧ್ವನಿ ಎತ್ತೋಣ. ಆದರೆ ಮೀಸಲಾತಿಯನ್ನೇ ಒಂದು ನೀತಿಯಾಗಿ ಸಾರಾಸಗಟಾಗಿ ವಿರೋಧಿಸುವುದು ಅಥವಾ ಅಸಹನೆ ವ್ಯಕ್ತಪಡಿಸುವುದು ಅಥವಾ ವ್ಯಂಗ್ಯವಾಡುವುದು ಜಾತೀಯತೆ ಮಾತ್ರ ಆಗುತ್ತದೆ.ಮತ್ತು counter productive ಕೂಡ ಆಗುತ್ತದೆ. ಇದರ ವಿವರವಾದ ವಿಶ್ಲೇಷಣೆಗಾಗಿ- ನಿಮಗೆ ಲಭ್ಯವಾದರೆ- ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ ನನ್ನ ’ಲೋಹಿಯಾ ಸಮಾಜವಾದ ದರ್ಶನ’ ಎಂಬ ಪುಸ್ತಕದ ಅನುಬಂಧ ಓದಿರಿ.
-ಡಿ.ಎಸ್.ನಾಗಭೂಷಣ

ನಾಗಭೂಷಣ ಸರ್,

ಪ್ರತಿಕ್ರಿಯೆಗಾಗಿ ಧನ್ಯವಾದಗಳು.

[quote]ಏಕೆಂದರೆ, ಮೇಲ್ಜಾತಿಗಳ ಒಂದು ವರ್ಗ ಯಾರೇ -ನಮ್ಮ ಸುಪ್ರೀಂ ಕೋರ್ಟೂ ಸೇರಿದಂತೆ-ಏನೇ ಹೇಳಿದರೂ ಮೀಸಲಾತಿಯ ಅಗತ್ಯವನ್ನು ಒಪ್ಪಲು ನಿರಾಕರಿಸುತ್ತಿದೆ[/quote]
ಇಂದಿಗೆ ಕೆಳವರ್ಗದ "ಶ್ರೀಮಂತ ಮೇಲ್ಜಾತಿಯವರದ್ದೇ" (Creamy Layer) ಒಂದು ಪಂಗಡವು ಇದೆಯಷ್ಟೆ. ಇವರು ತಮ್ಮ ಹಿಂದುಳಿದ ವರ್ಗದ ಸ್ಥಾನ ಬಿಡಲು ತಯಾರದ್ದಾರೆಯೇ - ಇಲ್ಲ. ಈ ಸ್ಥಾನ ಬಿಟ್ಟುಕೊಟ್ಟು ತಮ್ಮ ವರ್ಗದ ಬಡ ಜನರ ಉದ್ಧಾರಕ್ಕೆ ತಾವೂ ಪಾಲ್ಗೊಳ್ಳಬೇಕೆಂದು ಇವರಿಗೇಕೆ ಅನ್ನಿಸುವುದಿಲ್ಲ ?ಇದೇ ಸಂದಿಗ್ಧತೆಯೋ / ಸ್ವಾರ್ಥವೊ ಮೇಲ್ಜಾತಿಯ ಶ್ರೀಮಂತರನ್ನೂ ಕಾಡುತ್ತಿರಬಹುದೇನೋ ಅಲ್ಲವೇ. ವಿಷಯ ಇಷ್ಟೇ ಸಾರ್ ಶ್ರೀಮಂತನಾದ ದಲಿತನೂ ಮತ್ತೆ ಜಾತೀಯತೆಯನ್ನೇ ಮಾಡುತ್ತಾನೆ. ಅದಕ್ಕೇ ಇರಬೇಕು ಟಿ. ಪಿ. ಕೈಲಾಸಂ ರವರು ಹೇಳಿದ್ದು ಇರೋದೆರಡೇ ಜಾತಿ - "ಶ್ರೀಮಂತ, ಬಡವ". ಈ ಅಪಾಯವು ಜಾತೀಯತೆಯಷ್ಟೇ ವಿನಾಶಕಾರಿ ಎಂಬುದು ನೀವೂ ತಿಳಿದಿರುವಿರಾದ್ದರಿಂದ ಒಂದು ಸಮಾಧಾನ ! ಲೋಹಿಯಾರ ಪುಸ್ತಕವ ಸೂಚಿಸಿದ್ದಕ್ಕೆ ವಂದನೆಗಳು.

- ಅರವಿಂದ

Creamy layerನ್ನು ಮೀಸಲಾತಿಯಿಂದ ಹೊರಗಿಡಬೇಕೆಂಬ ಸುಪ್ರೀಂ ಕೋರ್ಟಿನ ತೀರ್ಪಿನ್ನು ಒಪ್ಪಿ ಕೇಂದ್ರ ಸರ್ಕಾರ creamy layerನ್ನು ಪುನರ್ನಿರೂಪಿಸಿ ಸುಪ್ರೀಂ ಕೋರ್ಟಿನ ಮುಂದೆ ಪರಿಶೀಲನೆಗೆ ಇಟ್ಟಿರುವುದರಿಂದ, ಯಾರೇ ಒಪ್ಪಲಿ ಬಿಡಲಿ ಅದು ಜಾರಿಯಾಗುವುದು ಖಚಿತ. ಇದು ಮೀಸಲಾತಿ ನೀತಿಯನ್ನು ಸರಿ ದಾರಿಗೆ ತರಲು ನಮ್ಮ ನಿಮ್ಮಂಥವರು -ನಮ್ಮದೇ ಮಿತಿಗಳಲ್ಲಿಯೇ ಆಗಲಿ- ಮಾಡಿದ ಪ್ರಯತ್ನಗಳ ಒಟ್ಟಾರೆ ಫಲವೇ ಆಗಿದೆ ಎಂಬುದು ಮೀಸಲಾತಿ ಕುರಿತ ನಮ್ಮ ಮುಂದಿನ approachಗೆ ಮಾರ್ಗದರ್ಶಕವಾಗಬೇಕು.
-ಡಿ.ಎಸ್.ನಾಗಭೂಷಣ

ಸಾರ್,

Creamy layer ಹೊರಗಿಡುವ ನಮ್ಮ ಕನಸು ಬೇಗನೆ ನಿಜವಾಗಲಿ ಎಂದು ಹಾರೈಸೋಣ. ಅದು ಜಾರಿಯಾಗುವವರೆಗಂತೂ ಅಸಮಾಧಾನವೇ. ನಿಮ್ಮ ಪ್ರತಿಕ್ರಿಯೆಗೆ
ಧನ್ಯವಾದಗಳು ಸಾರ್

- ಅರವಿಂದ

"ಕ್ರೀಮೀ ಲೇಯರ್" ನಲ್ಲಿ ಬರುವ ಕುಟುಂಬಗಳನ್ನು ಮೀಸಲಾತಿ ಪದ್ಧತಿಯಿಂದ ಹೊರಗಿಡುವ ವ್ಯವಸ್ಥೆಗೂ, ನಾನು ಸೂಚಿಸಿರುವಂತೆ, (http://sampada.net/blog/asuhegde/01/02/2009/16356) ಕುಟುಂಬದ ವಾರ್ಷಿಕ ಆದಾಯವನ್ನು ಅವಲಂಬಿಸಿ ಮೀಸಲಾತಿ ನೀಡುವ ವ್ಯವಸ್ಥೆಗೂ ಸಾಮ್ಯತೆ ಇದೆ. ಅಲ್ಲದೆ ಇನ್ನೂ ಹೆಚ್ಚಿನ ಬಡವರಿಗೆ ಪ್ರಯೋಜನ ಸಿಗುವ ಸಾಧ್ಯತೆಯೂ ಇದೆ.
ಅಲ್ಲಿ ಜಾತಿಯ ಉಲ್ಲೇಖ ಇದೆ. ಇಲ್ಲಿ ಜಾತಿಯ ಉಲ್ಲೇಖ ಇಲ್ಲ. ನಾನು ಸೂಚಿಸುವ ವ್ಯವಸ್ಥೆಯಲ್ಲಿ ಮೇಲು ಕೀಳು, ಹಿಂದು ಮುಂದು ಎನ್ನುವ ಬೇಧವಿಲ್ಲದೇ ಸಮಾಜದ ಎಲ್ಲಾ ಜಾತಿಗಳನ್ನು ಸೇರಿಸಿಕೊಳ್ಳಬಹುದು. ಸುಪ್ರೀಂ ಕೋರ್ಟ ಹೇಳಿದ ಕೂಡಲೇ ಮೀಸಲಾತಿ ವ್ಯವಸ್ಥೆಯನ್ನು ನಾವು ವಿರೋಧಿಸಬಾರದು ಅಂತೇನೂ ಇಲ್ಲ. ನ್ಯಾಯಾಲಯ ಉಲ್ಲೇಖಿಸುವುದು ಸಂವಿಧಾನವನ್ನು ಮತ್ತು ಸಂಹಿತೆಗಳನ್ನು. ನಾನು ಹೇಳುವುದು ಸಂವಿಧಾನದಲ್ಲೇ ತಿದ್ದುಪಡಿ ತರಬೇಕೆಂದು. ಆಗ ನ್ಯಾಯಾಲಯಗಳು ಅದನ್ನು ಒಪ್ಪಲೇ ಬೇಕಾಗುತ್ತದೆ.

ಹೆಗಡೆಯವರೇ,

ತಮ್ಮ ಲೇಖನ, ಪ್ರತಿಕ್ರಿಯೆಗಳಿಗೆ ಧನ್ಯವಾದಗಳು. ಆದರೆ ಆರ್ಥಿಕ ಆಧಾರದ ಮೀಸಲಾತಿ ಬರುವುದು ಅಷ್ಟು ಸುಲಭವಲ್ಲ. ಏಕೆಂದು ನಿಮ್ಮ ಲೇಖನಕ್ಕೆ ಪ್ರತಿಕ್ರಿಯಿಸಿದ ಅರವಿಂದರು ತಿಳಿಸಿರುವಂತೆ "ಜಾತಿಭೇಧ ತಂದು ವೋಟ್ ಬ್ಯಾಂಕ್ ಲಾಭ ಪಡೆಯಲು ರಾಜಕಾರಣಿಗಳ, ಸಾಲು ಸಾಲೇ ನಿಂತಿವೆ".

ನಿಮ್ಮ ಆಂದೋಲನದ ಕರೆ ಒಳ್ಳೆಯದು. ಮತ್ತೆ ವಂದನೆಗಳು.

- ಅರವಿಂದ

ತುಂಬಾ ಜಿಗುಪ್ಸೆ ಹುಟ್ಟಿಸುವಂತಿದೆ ಈ ಸಂವಾದ , ಚರ್ಚೆ
ಸಾಮಾನ್ಯರಾದ ನಾವುಗಳೇ ಪರವಾಗಿಲ್ಲ ಒಂದು ಸಹ್ಯ ಮಟ್ಟದಲ್ಲಿ ಚರ್ಚೆಮಾಡುತ್ತೇವೆ.ಮಾತಾಡುತ್ತೇವೆ
ಆದರೆ ಹೆಸರುವಾಸಿಗಳಾದವರು ಹೀಗೆ ಎಲ್ಲೆ ಇರದೆ ಮಾತಾಡುವುದು ಸರಿ ಅಲ್ಲ
ದೊಡ್ಡವರು ಎನಿಸಿಕೊಂಡವರಿಗೆ ತಾಳ್ಮೆ ಇರುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾದಂತಾಯ್ತು
ತಾವಾದರೂ ತುಸು ತಾಳ್ಮೆ ವಹಿಸಿ ಅವರಿಗೆ ನೀವೇನು ಹೇಳ ಬಯಸಿದ್ದೀರಿ ಎಂಬುದನ್ನು ಸಹನೆಯುಂದಲೇ ವಿವರಿಸಬಹುದಿತ್ತು
ವಿಷಯ ಜಾತಿ ಪದ್ದತಿಯದಾದರೂ ಓದುಗರ ಗಮನ ಚರ್ಚೆ ಹಾಗು ಅದರ ಮಾತಿನ ರೀತಿಯತ್ತಲೇ ಹೋಗುವುದು ಖಂಡಿತಾ

ರೂಪಾ,
ಇದನ್ನು ನೀವು ಪೂರ್ತಿ ಓದುವಷ್ಟು ತಾಳ್ಮೆ ಉಳಿದಿತ್ತಾ ನಿಮ್ಮಲ್ಲಿ?
ಮೆಚ್ಚಿದ್ದೇನೆ.
ಜಾತಿ ವ್ಯವಸ್ಥೆ ಇಲ್ಲವಾಗಿದ್ದಲ್ಲಿ ಈ ಬರಹವೂ ಇರುತ್ತಿರಲಿಲ್ಲ, ಅಂತ ನನ್ನ ಎಣಿಕೆ.

ಜಾತಿ ಜಾತಿ ಅಂತಾ ಯಾಕೆ ಕೆಲವು ಮಹಾನುಭಾವರು ಒದ್ದಾಡುತ್ತಿದ್ದಾರೋ ಗೊತ್ತಿಲ್ಲ
ಜಾತಿ ವ್ಯವಸ್ಥೆ ಈಗಲೂ ಇದೆ ಅನ್ನೋದು ನಿಜ . ಆದರೂ ಅದನ್ನು ಕಟ್ಟುನಿಟ್ಟಾಗಿ ಆಚರಿಸುತ್ತಿರುವವರ ಸಂಖ್ಯೆ ಕಡಿಮೆಯಾಗಿದೆ.
ಆರ್ಥಿಕ ಸ್ವಾತಂತ್ರ ಅಂತಹ ಜಾತಿವ್ಯವಸ್ಥೆಯನ್ನ ನಿವಾರಿಸುತ್ತಿದೆ
ಆದರೂ ಕೆಲವರು ಇನ್ನೂ ಜಾತಿಯ ವ್ಯಾಖ್ಯೆ. ಅದರ ಮೂಲಗಳನ್ನು ಹಿಡಿದು ಜಗ್ಗಾಡುತ್ತಿರುವುದು ಯಾಕೆ ಅಂತ ತಿಳಿಯುತ್ತಾ ಇಲ್ಲ
ಜಾತಿ ಸಮಾನತೆ ಈಗಾಗಲೆ ಹರಡುತ್ತಿದ್ದೆ
ಬಡವರೆಲ್ಲಾ ಮೀಸಲು ವರ್ಗಕ್ಕೆ ಸೇರಿದವರಲ್ಲ
ಮೀಸಲೇತರ ವರ್ಗದವರೆಲ್ಲ್ಲ ಶ್ರೀಮಂತರಲ್ಲ
ನಮಗೆ ಈಗ ಬೇಕಿರುವುದು, ಆರ್ಥಿಕ ಸಮಾನತೆ
ಅದು ಇನ್ನೂ ಹುಟ್ಟಿಯೂ ಇಲ್ಲ. ಇನ್ನೂ ಕನಸಿನ ಕೂಸಾಗಿದೆ
ಅದನ್ನು ಸಾಧಿಸುವುದು ಹೇಗೆಂದು ಸಂಶೋಧನೆ, ಅಥವ ಚರ್ಚೆ ಮಾಡಿದರೆ ಅದು ಮೆಚ್ಚುವ ಕೆಲಸ,
ಅದು ಬಿಟ್ಟು ಗಣ್ಯರು ಜಾತಿ ಜಾತಿ ಜಾತಿ ಎಂಬ ಪದದ ಹಿಂದೆ ಬಿದ್ದು, ಸಮಾಜದಲ್ಲಿ ತಾರತಮ್ಯ ತರುವ ಕೆಲಸ ಮಾಡುವುದು ಒಳ್ಳೇದಲ್ಲ ಎನ್ನುವುದು ನನ್ನ ಅನಿಸಿಕೆ

ಜಾತಿ ವ್ಯವಸ್ಥೆ ಇದ್ದರೇನು - ಇಲ್ಲದಿದ್ದರೇನು?
ಆದರೆ ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯನ್ನು ಕೊನೆಗೊಳಿಸಬೇಕು. ಆಗ ಜಾತಿ ಅನ್ನುವುದು ವ್ಯಕ್ತಿಯ ಹೆಸರಿನಂತೆ ವೈಯಕ್ತಿಕ ವಿಷಯವಾಗಿ ಉಳಿದುಬಿಡುತ್ತದೆ ಅಂತ ನನ್ನ ಅನಿಸಿಕೆ.
http://sampada.net/blog/asuhegde/01/02/2009/16356

ರೂಪಾ ರವರೇ,

ನನಗೆ ಯಾರಿಗೂ ನೋವನ್ನುಂಟು ಮಾಡುವ ಉದ್ದೇಶ ಇಲ್ಲ. ಯಾರಿಗಾದರು ನೋವಾಗಿದ್ದರೆ ಕ್ಷಮೆ ಇರಲಿ. ಆದರೆ ಪದೇ ಪದೇ ಚರ್ಚಿಸುವ ಈ ವಿಷಯ ಎಲ್ಲರಿಗೂ ನೋವುಂಟು ಮಾಡುವುದು ಖಂಡಿತ. ಬೊಳಂಬುರ ಸಂಕ್ಷಿಪ್ತ ಪ್ರತಿಕ್ರಿಯೆ ನೋಡಿದ್ದೀರ ನೀವು. ಅದಕ್ಕಿಂತ ಸಮಾಧಾನವಾಗಿ ಇನ್ನೇನು ಬರೆಯಲು ಸಾಧ್ಯ ?

ಸರ್ವತೋಮುಖ ದೃಷ್ಟಿಕೋನವಿರುವ ನಾಗಭೂಷಣರೂ ಇದರ ಅರ್ಥ ಮಾಡಿಕೊಳ್ಳಬಹುದೆಂದು ನನಗೆ ವಿಶ್ವಾಸವಿದೆ (ಅವರ ಹಲವು ಲೇಖನಗಳ ಓದಿದ್ದಾಗಿ).

- ಅರವಿಂದ

ಅರವಿಂದ್‌ರವರೆ
ನಾನು ಮೇಲಿನ ಮಾತನ್ನು ಹೇಳಿದ್ದು
ಡಿ.ಎಸ್.ಎನ್ ಹಾಗು ಬಾಲಗಂಗಾಧರ್‌ರವರ ನಡುವಿನ ಸಂವಾದವನ್ನುಕುರಿತು
ನೀವು ಎತ್ತಿರುವ ಪ್ರಶ್ನೆಗಳನ್ನು ನಾನು ಪ್ರತಿಕ್ರಿಯಿಸಿದ ನಂತರ ನೋಡಿದೆ. ಅದರ ಉತ್ತರ ನನಗೂ ಬೇಕಿವೆ
ನೀವೇಕೆ ಕ್ಷಮೆ ಕೇಳುತ್ತಿದ್ದೀರಾ ಎಂದು ತಿಳಿಯಲಿಲ್ಲ

ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು. ದಯವಿಟ್ಟು ಮೇಲೆ ಗುರು ಬಾಳಿಗಾ ಅವರಿಗೆ ನಾನು ನೀಡಿರುವ ಉತ್ತರವನ್ನು ಗಮನಿಸಿ
-ಡಿ.ಎಸ್.ನಾಗಭೂಷಣ