ನಮ್ಮ ಕನ್ನಡದ ಆಶುಕವಿ, ನಾಡ ಕವಿ, - 'ಸರ್ವಜ್ಞ' !

To prevent automated spam submissions leave this field empty.

ನಮ್ಮ ಕನ್ನಡದ ಆಶುಕವಿ, ನಾಡ ಕವಿ, - 'ಸರ್ವಜ್ಞ' !

ಅವನ ಹೆತ್ತಮ್ಮ ಕುಂಬಾರ ಮಾಳೆ, ಪ್ರೀತಿಯಿಂದ ನಾಮಕರಣ ಮಾಡಿದ ಹೆಸರು -ಪುಶ್ಪದತ್ತ. ಸಾಕುತಾಯಿ ಮಲ್ಲಕ್ಕ. ತಂದೆ ಬಸವರಸ. ಧಾರವಾಡ ಜಿಲ್ಲೆಯ ಮಾಸೂರಿನಲ್ಲಿ ವಾಸವಾಗಿದ್ದ ಆರಾಧ್ಯ ಬ್ರಾಹ್ಮಣ, ಬಸವರಸ, ಎಶ್ಟುದಿನಗಳಾದರೂ ಮಕ್ಕಳಾಗದಿದ್ದಾಗ ಮಲ್ಲಮ್ಮನನ್ನು ಸಮಾಧಾನ ಮಾಡಿ, ಪುತ್ರಸಂತಾನದ ವರ ಪಡೆಯಲು ಕಾಶೀ ಕ್ಷೇತ್ರಕ್ಕೆ ಹೊರಡುತ್ತಾನೆ. ಭಕ್ತಿಯಿಂದ ಸೇವೆ ಮಾಡಿದ ಬಸವರಸನಿಗೆ ಕಾಶಿ ವಿಶ್ವನಾಥನು ಕನಸಿನಲ್ಲಿ ಪ್ರತ್ಯಕ್ಷನಾಗಿ, 'ನಿನಗೆ ಪುತ್ರ ಪ್ರಾಪ್ತಿಯಾಗುವುದು. ಹುಟ್ಟುವ ಮಗನು ನನ್ನ ಪ್ರಸಾದದಿಂದ ಮಹಾಜ್ಞಾನಿಯಾಗುವನು' ಎಂದು ಹೇಳಲು ಆನಂದಭರಿತನಾದ ಬಸವರಸನು, ಪ್ರಾತಃಕಾಲದಲ್ಲಿ ಎದ್ದು, ಪವಿತ್ರ ಗಂಗಾಸ್ನಾನ ಮಾಡಿ, ವಿಶ್ವನಾಥನನ್ನು ಅರ್ಚಿಸಿ, ಪ್ರಸಾದಗಳೊಂದಿಗೆ ತನ್ನ ಗ್ರಾಮದ ಹಾದಿ ಹಿಡಿದನು. ಹಗಲಿರುಳು ಪ್ರಯಾಣ ಮಾಡಿ ಅನೇಕ ಗ್ರಾಮಗಳಲ್ಲಿ ವಿಶ್ರಮಿಸಿ, ದಾರಿಯಲ್ಲಿ ಸಿಕ್ಕ 'ಅಂಬಲೂರ' ಎಂಬ ಗ್ರಾಮಕ್ಕೆ ಬರುವಾಗ ಭಯಂಕರ ಗುಡುಗು, ಸಿಡಿಲುಗಳಿಂದ ಮಳೆ ಸುರಿಯುತ್ತಿತ್ತು. ಸಮೀಪದಲ್ಲಿದ್ದ ಕುಂಬಾರಸಾಲೆ ಯಲ್ಲಿ ಕುಂಬಾರ ಮಾಳೆ ಎಂಬುವಳ ಮನೆಯಲ್ಲಿ ವಸತಿ ಮಾಡಿದನು. ಕಾಲಧರ್ಮ ಸಂಯೋಗದಿಂದ ಮಾಳಿಯಲ್ಲಿ ವ್ಯಾಮೋಹಗೊಂಡ ಬಸವರಸನಿಗೆ ಕಾಮ ವಿಕಾರವಾಯಿತು. ಕಾಶಿಯಿಂದ ತಂದ ತೀರ್ಥ ಪ್ರಸಾದಗಳನ್ನು ಕೊಟ್ಟು ಅವಳ ಸಂಗ ಮಾಡಿದನು. ೯ ತಿಂಗಳನಂತರ ಮಾಳಿ ದಿವ್ಯ ತೇಜಸ್ಸಿನ ಗಂಡು ಕೂಸಿಗೆ ಜನ್ಮವಿತ್ತಳು. 'ಪುಶ್ಪದತ್ತ'ನೆಂದು ನಾಮಕರಣವೂ ಆಯಿತು. ಮುಂದೆ ಈ ಮಗುವೇ ಜಗತ್ತಿಗೆ ಸರ್ವಜ್ಞ ನೆಂದು ಪ್ರಸಿದ್ಧಿಯಾಯಿತು. ಬಾಲ್ಯದಲ್ಲಿಯೆ ಅಗಾಧವಾದ ಪಾಂಡಿತ್ಯವನ್ನು ಶಿವನ ವರಪ್ರಸಾದದಿಂದ ಪಡೆದಿದ್ದನು. ತಂದೆ ತಾಯಿಗಳಿಂದ ಅಗಲಿ ಪುಣ್ಯಕ್ಷೇತ್ರಗಳನ್ನೂ ಗುರುಮಠಗಳನ್ನೂ ಭೇಟಿಮಾಡಿ ಜ್ಞಾನಾರ್ಜನೆ ಮಾಡಿದನು. ಎಲ್ಲಾ ಶಾಸ್ತ್ರಗಳ ಜ್ಞಾನವನ್ನು ಸಂಪಾದಿಸಿದನು.

ಅವನ ಜನಪ್ರಿಯ ವಚನಗಳು ಅವನ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಒದಗಿಸಿವೆ. ಅವನು ರಚಿಸಿದ ಕವನಗಳಿಗೆ ಲೆಖ್ಖವಿಲ್ಲ. ಅವನು ಆಶುಕವಿಯಾದ್ದರಿಂದ, ಎಶ್ಟೋ ಕವನಗಳು ಅವನ ಸ್ಮೃತಿಯಲ್ಲೇ ಉಳಿದಿರಬಹುದು. ಸುಮಾರು ೭,೦೭೦ ವಚನಗಳು ಲಭ್ಯವಾಗಿದೆಯೆಂದು ತಜ್ಞರ ಅಭಿಪ್ರಾಯ. ಏಳು ಕೋಟಿಯೇ ಕೋಟಿ ಏಳು ಲಕ್ಷವೆ ಲಕ್ಷ ! ಏಳುಸಾವಿರದ ಎಪ್ಪತ್ತು ವಚನಗಳು ! ಹೇಳಿದೆನು ಕೇಳೋ ಸರ್ವಜ್ಞ. ಮೇಲಿನ ವಚನದಲ್ಲಿ ಅವನೇ ಹೇಳಿರುವಂತೆ ಏಳು ಸಾವಿರದ ಎಪ್ಪತ್ತು ವಚನಗಳನ್ನು ರಚಿಸಿದ್ದಾನೆ. ಪ್ರಕಟವಾದ ವಚನಗಳಲ್ಲಿ ಆಯ್ದ ಕೆಲವನ್ನು ಕೊಟ್ಟಿದ್ದೇನೆ.

ಸರ್ವಜ್ಞನಿಗೆ ಎಕೋ ತಂದೆ ತಾಯಿಗಳಲ್ಲಿ ವಿಶೇಷ ಒಲವಿರಲಿಲ್ಲ. ಅವನು ಕಂಡಿದ್ದೆಲ್ಲಾ ಕಂಡಂತೆ ನೇರವಾಗಿ ಹೇಳುವ ಕಟು ಸತ್ಯಗಳು ಅವರಿಗೆ ಹಿಡಿಸಲಿಲ್ಲ. ಅವನನ್ನು ಮನೆಯಿಂದ ಹೊರಗೆ ಹಾಕುತ್ತಾರೆ. ಮಾಳನೂ ಮಾಳಿಯೂ ! ಕೂಳಿತ್ತ ಹೆಮ್ಮೆಯಲ್ಲಿ ! ಕೇಳಲೆನ್ನಾರ ಮಗನೆಂದು ನಾ ಶಿವನ ಮೇಳದವನೆಂದೆ, ಸರ್ವಜ್ಞ. ಬಸವರಸನೂ, ಮಾಳಿಯೂ ತನ್ನ ತಂದೆ ತಾಯಿಗಳಲ್ಲ. ನಾನು ಶಿವಪ್ರಸಾದದಿಂದ ಹುಟ್ಟಿದವನು. ತಂದೆ ವಿಪ್ರನು ಅಲ್ಲ ತಾಯಿ ಮಾಳಿಯೂ ಅಲ್ಲ ಚಂದ್ರ ಶೇಖರನ ವರದಿಂದ ಪುಟ್ಟಿದಾ ಕಂದನಾನೆಂಬೆ ಸರ್ವಜ್ಞ. ನನ್ನ ತಂದೆ ಬ್ರಾಹ್ಮಣನಾದ ಬಸವರಸನೂ ಅಲ್ಲ. ಮಾಳೆ ತಾಯಿಯೂ ಅಲ್ಲ. ನಾನು ಚಂದ್ರಶೇಖರನ ವರಪ್ರಸಾದದಿಂದ ಹುಟ್ಟಿದವನು. ಈ ಘಟನೆ ಅವನ ಜೀವನದಲ್ಲಾದ ಒಂದು ಮಹತ್ವದ ತಿರುವು ! ಅತಿಚಿಕ್ಕ ವಯಸ್ಸಿನಲ್ಲೇ ದೇಶ ಪರ್ಯಟನೆ ಮಾಡುತ್ತಾ ವಿದ್ಯಾರ್ಜನೆ ಮಾಡುತ್ತಾ ಜ್ಞಾನ ಸಂಪತ್ತನ್ನು ಬೆಳಸಿಕೊಂಡನು. ಸರ್ವಜ್ಞನ ವಚನಗಳಿಂದ ಅವನಿಗೆ ಶಿವದೀಕ್ಷೆಯಾಗಿತ್ತೆಂದು ತಿಳಿದುಬರುತ್ತದೆ. ಅವನ ಗುರು ಸೋಮಶಂಕರ. ಹೋದೆಡೆಗಳಲ್ಲಿ ಸಾಂದರ್ಭಿಕವಾಗಿ ಅವನ ಬಾಯಿನಿಂದ ಪುಂಖಾನು ಪುಂಖವಾಗಿ ಬಂದ ವಾಗ್ಧಾರೆಗಳು ಅನನ್ಯ. ಅವೆಲ್ಲಾ ಅವನ ಸ್ಮೃತಿಪಟಲದಲ್ಲೇ ಸಂಗ್ರಹ ವಾಗಿದ್ದರೂ, ಸಾವಿರಾರು ವಚನಗಳನ್ನು ತ್ರಿಪದಿಯಲ್ಲೇ ಬರೆದಿರುವುದೂ ಇವನ ಹೆಗ್ಗಳಿಕೆ ! ಕೇವಲ ೩ ವಾಕ್ಯಗಳಲ್ಲಿ ನುಡಿದ ಅನುಭವಾಮೃತದ ಆಣಿಮುತ್ತುಗಳು ವೇದೋಪನಿಷತ್ತಿನ ಶಾಸ್ತ್ರಗಳಂತೆ ನಿತ್ಯನೂತನ, ಸಾರ್ವಕಾಲಿಕ ಮೌಲ್ಯಗಳು (ಕೇವಲ ಕೆಲವನ್ನು ಬಿಟ್ಟು.) ಇಂತಹ ಜ್ಞಾನ ಕೇವಲ ಋಷಿ ಮುನಿ ಸಂಜಾತರಿಗೆ ಲಭ್ಯ ಎನ್ನುವ ಅಭಿಪ್ರಾಯ ಅಂದಿನ ದಿನಗಳಲ್ಲಿತ್ತು.

ಪುಶ್ಪದತ್ತನಿಗೆ ವೇದೋಪನಿಷತ್ತು, ಶಾಸ್ತ್ರಗಳು, ಕಾವ್ಯ, ಮಹಾಕಾವ್ಯಗಳ ಅಧ್ಯಯನ ಲಭ್ಯವಾಗಿತ್ತು. ಅವನು ವಿಜ್ಞಾನ, ರಾಶ್ಟ್ರವಿಚಾರ ಹಾಗೂ ಸಾಮಜಿಕ ವಿಚಾರಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದನು. ಅವನ ಜಾಪಕಶಕ್ತಿಯೋ ಅಪಾರ ! ಅಂದಿನ ಕಾವ್ಯಗಳೆಲ್ಲಾ ಸಂಸ್ಕೃತದಲ್ಲೇ ಇರುತ್ತಿದ್ದವು. ಎಲ್ಲಾ ಪಂಡಿತರಿಗೇ ಮೀಸಲು. ಕನ್ನಡದ ಕವಿಗಳೂ ಅವರ ರಚನೆಗಳನ್ನು ಅತ್ಯಂತ ಕ್ಲಿಶ್ಟ ರೀತಿಯಲ್ಲಿ ರಚಿಸಿದರೆ ಮಾತ್ರ ವಿದ್ವಂಸರ, ಅಥವಾ ರಾಜರ ಮನ್ನಣೆಗೆ ಪಾತ್ರರಾಗುತ್ತಿದ್ದರು. ಸರಳವಾಗಿ ಹೇಳಿದರೆ ಅದು ಜೊಳ್ಳು ಎನ್ನುವ ನಂಬಿಕೆ ಅಂದಿನದು. 'ಇದೋ, ಹಳ್ಳಿಗಮಾರನಿಗೂ ಅರ್ಥವಾಗುತ್ತೆ' ಈ ತರಹದ ಮಾತುಗಳು ಕೇಳಿಬರುತ್ತಿದ್ದವು! ಅದರೆ ಪುಶ್ಪದತ್ತ ಇದಕ್ಕೆ ಅಪವಾದ. ತನ್ನ ಎಲ್ಲಾ ತ್ರಿಪದಿಗಳನ್ನು ಸರಳವಾದ ಕನ್ನಡದಲ್ಲೇ ರಚಿಸಿದನು. ಇದು ಸಾಮಾನ್ಯ ಜನರ ಮನರಂಜನೆ ಹಾಗು ಜ್ಞಾನವರ್ಧನೆಗೆ ಸಹಾಯಕವಾಯಿತು. ಅವನ ನುಡಿಮುತ್ತುಗಳು ಅತ್ಯಂತ ಸರಳ, ನೇರ, ಸ್ಪಶ್ಟ, ದಿಟ್ಟ, ನಿರ್ದಾಕ್ಷಿಣ್ಯ. ಅವೆಲ್ಲಾ ಬಹುಉಪಯೋಗಿಯಾಗಿದ್ದು ಪಂಡಿತರಾದಿಯಾಗಿ ಸರ್ವರೂ ಅವನ್ನು ಸ್ವಾಗತಿಸಿದರು. ಅದಕ್ಕಾಗಿಯೇ ಅವನಿಗೆ ಸರ್ವಜ್ಞನೆಂಬ 'ಉಪಾಧಿ' ದೊರೆಯಿತು. ಸರ್ವಜ್ಞಾನ ಸಂಪನ್ನರಿಗೇ ಮೀಸಲಾದ ಅತಿ ಹಿರಿಯ ಮನ್ನಣೆ ಎಂದಿದ್ದ ಕಾಲದಲ್ಲಿ ಆಗ ದೊರೆತ ಈ ಪ್ರಶಸ್ತಿ ಅವನ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಇತಿಹಾಸಕಾರರ ಪ್ರಕಾರ ಅವನು ೧೬ ನೇ ಶತಮಾನದಲ್ಲಿದ್ದನೆಂದು ತಿಳಿದುಬರುತ್ತದೆ. ೬೦-೭೦ ವರ್ಷ ಜೀವಿಸಿರಬಹುದು. ಅವನು ನೋಡದಿದ್ದ ಜಾಗವಿಲ್ಲ. ಇಹಲೋಕದ ಎಲ್ಲಾ ವ್ಯಾಪಾರವನ್ನೂ ತೀರ ಹತ್ತಿರದಿಂದ ಕಂಡು ಅವುಗಳಿಗೆ ನಿರೂಪಣೆ ಕೊಟ್ಟಿದ್ದಾನೆ. ಅವನ ಪದ್ಯದ ೩ ಸಾಲುಗಳಲ್ಲಿ ಅಂದಿನ ಇತಿಹಾಸ, ಜೀವನ, ವ್ಯವಹಾರಗಳೆಲ್ಲವೂ ತಿಳಿದುಬರುತ್ತದೆ. ಸರ್ವಜ್ಞನ ವಚನಗಳಲ್ಲಿ ಹಾಸ್ಯ ಪ್ರಧಾನತೆ ಹೆಚ್ಚಾಗಿ ಕಂಡರೂ, ಶೃಂಗಾರ, ಭೀಭತ್ಸಗಳಂತಹ ಅದ್ಭುತ ರಸಗಳ ಬಳಕೆಯನ್ನೂ ನಾವು ಕಾಣಬಹುದು ! ಹೆಣ್ಣು, ಹೊನ್ನು ಮಣ್ಣುಗಳ ಬಗ್ಯೆ ಸವಿಸ್ತಾರವಾಗಿ ಅವನ ಕವನಗಳು ಎಚ್ಚರಿಕೆ ನೀಡುತ್ತವೆ. ಸರ್ವಜ್ಞ ರಚಿಸಿದ ಒಗಟುಗಳು ಆಗಿನಕಾಲದಲ್ಲೇ ಬಹಳ ಜನಪ್ರಿಯವಾಗಿತ್ತು.

೧) ನೆತ್ತಿಯಲಿ ಉಂಬುವುದು ಸುತ್ತಲೂ ಸುರಿಸುವುದು

ಎತ್ತಿದರೆ ಎರಡು ಹೋಳಹುದು

ಕವಿಗಳಿದ ಕುತ್ತರವ ಪೇಳಿ ಸರ್ವಜ್ಞ

ನೆತ್ತಿಯಿಂದ ಊಟಮಾಡಿ

ಸುತ್ತಲೂ ಸುರಿಸುವುದು

ಅದನ್ನು ಎತ್ತಿದರೆ ಎರಡು ಭಾಗಗಳಾಗುವುದು.

ತಿಳಿದವರು ಇದ್ದರೆ ದರಥವನ್ನು ಹೇಳಿರಿ. (ಬೀಸುವ ಕಲ್ಲು)

 

೨) ಹರೆಯಲ್ಲಿ ಹಸುರಾಗಿ

ನೆರೆಯಲ್ಲಿ ಕಿಸುವಾಗಿ

ಸುರರರಿ ಯದಮೃತವು

ನರರಿಂಗೆ ದೊರೆತಿಹುದು

ಅರಿತವರು ಹೇಳಿ ಸರ್ವಜ್ಞ.

 

ಸುಗ್ಗಿಯ ಕಾಲದಲ್ಲಿ ಹಸಿರು ಬಣ್ಣ.

ದಿನಕಳೆದಂತೆ ಮೆತ್ತಗಾಗುವುದು.

ದೇವತೆಗಳಿಗೂ ತಿಳಿಯದ ವಸ್ತು

ಮಾನವರಿಗೆ ಸಿಕ್ಕಿದೆ. ಅದೇನು ಹೇಳಿ.

(ಮಾವಿನಹಣ್ಣು) ಜ್ಞಾನದ ಬಲವನ್ನು ತಿಳಿಸುತ್ತಾನೆ.

 

೩) ಜ್ಞಾನದಿಂ ಮೇಲಿಲ್ಲ

ಶ್ವಾನನಿಂ ಕೀಳಿಲ್ಲ

ಭಾನುಮಂಡಲದಿಂ ಬೆಳಗಿಲ್ಲ

ಜಗದೊಳಗೆ ಜ್ಞಾನವೇ

ಅಧಿಕ ಸರ್ವಜ್ಞ.

ಈ ಜಗತ್ತಿನಲ್ಲಿ ಜ್ಞಾನವೇ ಪ್ರಾಮುಖ್ಯ.

ನಾಯಿಯಂಥ ಕೀಳು ಪ್ರಾಣಿಯೇ ಇಲ್ಲ

ಜ್ಞಾನದ ಬೆಳಕಿನ ಮುಂದೆ ಸೂರ್ಯಮಂಡಲದಿಂದ ಹೊಮ್ಮಿದ ಬೆಳಕೂ ಅಲ್ಪ. ದಾನವನ್ನು ಹೇಗೆ ಕೊಡಬೇಕು ಎನ್ನುವ ತಿಳುವಳಿಕೆ.

೪) ಆಡದಲೆ ಕೊಡುವವನು

ರೂಢಿಯೊಳಗುತ್ತಮನು

ಆಡಿಕೊಡುವವನು ಮಧ್ಯಮ

ಅಧಮ ತಾ ನಾಡಿ ಕೊಡದವನು ಸರ್ವಜ್ಞ

 

ಏನೂ ಆಡದೇ ತನ್ನ ವರ್ಣನೆಯನ್ನು ಮಾಡಿಕೊಳ್ಳದೇ ದಾನ ಮಾಡುವವನು ರೂಡಿಯಲ್ಲಿ ಉತ್ತಮ ಮಾನವನೆನ್ನಿಸಿ ಕೊಳ್ಳುವನು. ಆಡಿಕೊಂಡು ದಾನಮಾಡುವವನು ಮಧ್ಯಮ ಅಂದರೆ ಸಾಧಾರಣ ದಾನಿ ಎನ್ನಿಸಿಕೊಳ್ಳುವವನು. ತನ್ನನ್ನು ವರ್ಣಿಸಿಕೊಂಡು ಆಡಿದಂತೆ ದಾನಮಾಡದೇ ಇದ್ದ ಮನುಷ್ಯನು ಅಧಮ, ಪಾಪಿ ಎನ್ನಿಸಿಕೊಳ್ಳುವನು. ಆಹಾರ ಸೇವನೆ ಹೇಗಿರಬೇಕು ಎನ್ನುವುದರ ಬಗ್ಯೆ.

೫) ಹಸಿಯದಿರೆ ಉಣಬೇಡ

ಹಸಿದು ಮತ್ತಿರಬೇಡ

ಬಿಸಿ ಗೂಡಿ ತಂಗುಳುಣಬೇಡ

ವೈದ್ಯನಾಗಸಣೆಯೇ ಬೇಡ ಸರ್ವಜ್ಞ

ಹಸಿವಾದಾಗ ಮಾತ್ರ ಊಟಮಾಡಬೇಕು. ಹಾಗೇ ಹಸಿದುಕೊಂಡಿರ ಬಾರದು. ಬಿಸಿ, ತಂಗಳು ಆಹಾರಗಳನ್ನು ಕೂಡಿಸಿ ಉಣಬಾರದು. ವೈದ್ಯರನ್ನು ದೂರವಿಡಲು ಇದು ಉಪಾಯ.

 

೬) ರಾಗಿ ಕಪ್ಪಾಗಿದ್ದರೂ

ಅದರ ವಿಶೇಶಗುಣಗಳ ವಿವರ.

ರಾಗಿಯನು ಉಂಬುವನಿ ರೋಗಿ

ಎಂದೆನಿಸುವನು

ರಾಗಿಯು ಭೋಗಿಗಳಿಗಲ್ಲ

ಬಡಜನರಿ ಗಾಗಿ ಬೆಳೆದಿಹುದು ಸರ್ವಜ್ಞ.

ರಾಗಿಯನ್ನು ಊಟಮಾಡುವವನು ನಿರೋಗಿ ಎಂದು ಎನ್ನಿಸಿಕೊಳ್ಳುವನು. ರಾಗಿಯ ಊಟವು ವಿಲಾಸ ಪ್ರಿಯರಿಗೆ ಬೇಕಾಗಿಲ್ಲ ಅದು ಅರಿಗಾಗಿಯೆ ಬೆಳೆಯುತ್ತದೆ. ಪ್ರಕೃತಿಯಲ್ಲಿ ಎಶ್ಟೊಂದು ಸುವ್ಯವಸ್ಥೆ ಇದೆ ಎನ್ನುವ ವಿಷಯ.

೭) ಇಂಗಿನೊಳು ನಾತವನು

ತೆಂಗಿನೊಳಗೆ ನೀರ

ಭೃಂಗ ಕೋಕಿಲೆಯ ಕಂಟದೊಳು

ಗಾಯನವ ತುಂಬಿದವರಾರು ಸರ್ವಜ್ಞ.

ಇಂಗಿನಲ್ಲಿ ವಾಸನೆ, ತೆಂಗಿನಲ್ಲಿ ಎಳನೀರು, ಕಪ್ಪಾದ ಕೋಗಿಲೆಗೆ ಮಧುರ ಕಂಠ ದಯಪಾಲಿಸಿದವನು ಯಾರು ?ಶಿವನಲ್ಲವೇ! ಲೋಕದಲ್ಲಿ ಮನುಶ್ಯನಿಗೆ ಹೇಗಿದ್ದರೆ ಹಿತವೆನಿಸುತ್ತದೆ

 

೮) ನಾರಿ ಧರೆಗುಪಕಾರಿ

ನಾರಿಸವಿಸುಖಕಾರಿ

ನಾರಿಹರ ಗಿಂತ ಹಿತಕಾರಿ

ಮುನಿದರೆ ಮಾರಿಗೆ ಮೀರಿ ಸರ್ವಜ್ಞ.

ಸ್ತ್ರೀಯಿಂದ ಜಗಕ್ಕೆ ಸುಖವಿದೆ.

ಭೂಮಂಡಲಕ್ಕೂ ಅವಳಿಂದಲೇ ಉಪಕಾರ.

ಪರವೇಶ್ವರನಿಗಿಂತ ಹೆಚ್ಚು ಹಿತವಾದವಳು.

ಆದರೆ ಸಿಟ್ಟಿಗೆದ್ದರೆ ಮಾರಿಗಿಂತ ಹೆಚ್ಚು ಕ್ರೂರಳು.

ಸ್ತ್ರೀಯನ್ನು ಹೆಚ್ಚಾಗಿ ನಂಬಬೇಡಿ ಎಂದು ಎಚ್ಚರಿಸುತ್ತಾನೆ.

 

೯) ನಂಬಿದಂತಿರಬೇಕು

ನಂಬದಲೆ ಇರಬೇಕು

ಇಂಬರಿದು ಎಚ್ಚರಿರಬೇಕು

ಹೆಣ್ಣನ್ನು ನಂಬಿದವ ಕೆಟ್ಟ ಸರ್ವಜ್ಞ.

ಸ್ತ್ರೀಯನ್ನು ನಂಬಿದಂತೆಯೂ ಇರಬೇಕು ನಂಬಲಾರದಂತೆಯೂ ಇರಬೇಕು ಯೋಗ್ಯತೆ ತಿಳಿದು ಎಚ್ಚರದಿಂದಿರಬೇಕು. ಹೆಣ್ಣನ್ನು ಸಂಪೂರ್ಣವಾಗಿ ನಂಬಿದವನು ಸಂಪೂರ್ಣವಾಗಿ ಕೆಡುವನು.

ತಾ ! ಯೆಂಬೆನಲ್ಲದೇ ತಾಯಿ!

ನಾನೆಂಬೆನೆ ? ತಾಯಿ ಎಂದಾನು ನುಡಿದೇನು,

ಪರಸ್ತ್ರೀಯ ತಾಯಿಯೆಂದೆಂಬೆ,

ಸರ್ವಜ್ಞ ಲೋಕದ ಎಲ್ಲಾ ಪರಸ್ತ್ರೀಯರೆಲ್ಲ ತನಗೆ ತಾಯಿಯರೆ.

೧೦) ವಚನದೊಳಗೆಲ್ಲವರು ಶುಚಿ ವೀರ ಸಾಧುಗಳು

ಕುಚ ಹೇಮ ಶಸ್ತ್ರ ಸೋಂಕಿದರೆ

ಲೋಕದೊಳ ಗಚಲರಾಗದವರಾರು ಸರ್ವಜ್ಞ.

 

ಮಾತಿನಿಂದ ಮಾತ್ರ ಎಲ್ಲರೂ ಪವಿತ್ರ ಮಹಾ ತ್ಯಾಗಿಗಳೆ ಆದರೆ ಸ್ತ್ರೀಯರ ಕುಚ, ಹೊನ್ನು ಹರಿತವಾದ ಖಡ್ಗ ಸ್ಪರ್ಶವಾದರೆ ಚಂಚಲರಾಗದ ಅಣ್ಣಗಳು ಭೂಲೋಕದಲ್ಲಿ ಇದ್ದಾರೆಯೇ ?

೧೧) ಗಿಡ್ಡ ಹೆಂಡತಿ ಲೇಸು

ಮಡ್ಡಿ ಗುದುರೆಗೆ ಲೇಸು

ಬಡ್ಡಿಯಾ ಸಾಲ ಕೊಡಲೇಸು

ಹಿರಿಯರಿಗೆ ಗಡ್ಡ ಲೇಸೆಂದ ಸರ್ವಜ್ಞ.

 

ಹೆಂಡತಿ ಸ್ವಲ್ಪ ಕುಳ್ಳಕ್ಕಿದ್ದರೇ ಒಳ್ಳೆಯದು. ರಾಡಿಯಲ್ಲಿ ತಿರುಗುವುದು ಕುದುರೆಗೆ ಇಶ್ಟ. ಬಡ್ಡಿಯಂತೆ ಸಾಲಕೊಡುವುದು ಲಾಭದಾಯಕ. ಯಜಮಾನನ ಮುಖಕ್ಕೆ ಗಡ್ಡವೇ ಶೋಭೆ. ಕವಿತಾರಚನೆಯ ಬಗ್ಯೆ. ಛಂದಸ್ಸಿನ ಜ್ಞಾನವೂ ಇರಬೇಕು

೧೨) ಪ್ರಾಸವಿಲ್ಲದ ಪದವ ತಾಸು ಹಾಡಿದರೇನು

ಸಾಸುವೆಯ ಎಣ್ಣೆ ಹದಮಾಡಿ

ಕಣ್ಣಿಂಗೆ ಹೂಸಿ ಕೊಂಡಂತೆ ಸರ್ವಜ್ಞ.

ಪ್ರಾಸವಿಲ್ಲದ ಹಾಡು ಹೇಗೆ ರಂಜಿಸೀತು ?

ಸಾಸುವೆ ಎಣ್ಣೆಯನ್ನು ಹದಮಾಡಿ ಕಣ್ಣಿಗೆ ಹಚ್ಚಿಕೊಂಡರೆಯಾವ ಗುಣವೂ ಕಾಣದು. ಮಹಾಕಾವ್ಯಗಳ ಬಗ್ಗ್ಯೆ ಅವನ ಅಭಿಪ್ರಾಯ ಕೆಳಗೆ ಕಂಡಂತಿದೆ. ಮಹಾಭಾರತಗಳಂತಹ ಮಹಾಕಾವ್ಯಗಳನ್ನು ಗೌರವಿಸಿ ಬೇರೆಯವರಿಗೆ ಬೋಧಿಸುವುದನ್ನು ಖಂಡಿಸುತ್ತಾನೆ

 

೧೩) ಹಾದರದ ಕಥೆಯನ್ನು

ಸೋದರರ ವಧೆಯನ್ನು. ಆದರಿಸಿ

ಪುಣ್ಯ ಕಥೆಯೆಂದು ಕೇಳುವರು

ಮಾದಿಗರು ನೋಡಾ ಸರ್ವಜ್ಞ.

ಕೃಷ್ಣಾವತಾರದ ಕಥೆ, ಸರ್ವಜ್ಞನ ಪ್ರಕಾರ ಹಾದರದ ಕಥೆ ! ಸೋದರರಲ್ಲಿ ಕಲಹ ಅವರ ಮರಣದ ಕಥೆಯನ್ನು ಪೂಜಿಸಿ(ಮಹಾಭಾರತ) ಅವನ್ನು ಪುಣ್ಯಕಥೆಗಳೆಂದು ತಿಳಿದು ಹೇಳುವ ಜನರು ನೀಚರು ! ಇಂದ್ರಿಯ ನಿಗ್ರಹ, ಮನೋಕಾಮನಗಳಮೇಲೆ ಹತೋಟಿ, ಸರ್ವರಿಗೂ ಅಗತ್ಯವೆನ್ನುವ ಮಾತು ಸರ್ವಜ್ಞ ಪದೇ ಪದೇ ಹೇಳುತ್ತಾನೆ. ಮಾತಿನ ಇತಿ ಮಿತಿಗಳನ್ನು ವಿವರಿಸುತ್ತಾನೆ.

೧೪. ಮಾತುಬಲ್ಲಾತನಿಗೆ ಏತವದು ಸುರಿದಂತೆ

ಮಾತಾಡಲರಿಯದವನಿಗೆ

ಬರಿ ಏತ ನೇತಾಡಿದಂತೆ ಸರ್ವಜ್ಞ.

 

ಶ್ರದ್ಧೆ, ಭಕ್ತಿಗಳಿಲ್ಲದೆ ಮಾಡಿದ ಕೆಲಸಗಳು ಹೇಗೆ ವ್ಯರ್ಥ, ಎನ್ನುವ ಮಾತು.

 

೧೫. ಚಿತ್ತವಿಲ್ಲದೆ ಗುಡಿಯ

ಸುತ್ತಿದೊಡೆ ಫಲವೇನು

ಎತ್ತು ಗಾಣವನು ಹೊತ್ತು ತಾ

ನಿತ್ಯದಲಿ ಸುತ್ತಿಬಂದಂತೆ ಸರ್ವಜ್ಞ.

೧೬) ಕಚ್ಚೆ ಕೈ ಬಾಯಿಗಳು

ಇಚ್ಛೆಯಲಿ ಇಲ್ಲದಿದ್ದರೆ

ಅಚ್ಯುತನ ಅಪ್ಪ ಅಜನಪ್ಪ ಲೋಕದಲಿ

ನಿಶ್ಚಿಂತನಪ್ಪ ಸರ್ವಜ್ಞ.

ಕಚ್ಚೆ ಕೈ ಬಾಯಿಗಳು ನಮ್ಮ ಅಧೀನದಲ್ಲಿದ್ದರೆ ನಾವು ವಿಷ್ಣುವಿಗಿಂತ ಪರಾಕ್ರಮಶಾಲಿಗಳಾಗುತ್ತೇವೆ. ಮತ್ತು ಅಜನಿಗಿಂತ ಉತ್ತಮರು ಹಾಗೂ ಲೋಕದಲ್ಲಿ ನಿಶ್ಚಿಂತೆಯಿಂದಿರಬಹುದು. ಕಲಿಗಾಲದಲ್ಲಿ ಜನರು ಜೀವನ ಮೌಲ್ಯಗಳನ್ನು ಬಿಟ್ಟೋ, ಕಳೆದುಕೊಂಡೋ ಹೇಗೆ ಜೀವನ ನಡೆಸುತ್ತಾರೆ ಎಂಬ ಕಲ್ಪನೆ ಸರ್ವಜ್ಞ ಶತಮಾನಗಳ ಹಿಂದೆಯೇ ಗ್ರಹಿಸಿರುವುದು ತಿಳಿದುಬರುತ್ತದೆ

 

೧೭. ಮತಿಗೆಟ್ಟು ಮಾನವರು

ಗತಿಗೆಟ್ಟು ತಿರುಗುವರು

ಋತು ಮಾನ ಕದಲಿ ಬರುವಾಗ

ಲೋಕಕ್ಕೆ ಹಿತವಿಲ್ಲ

ನೋಡೋ ಸರ್ವಜ್ಞ.

ಮನುಷ್ಯರೆಲ್ಲಾ ತಲೆಕೆಟ್ಟು ಅಧರ್ಮಿಗಳಾಗಿ ನಡೆದು ಕೊನೆಗೆ ಯಾವುದಕ್ಕೂ ಗತಿ ಇಲ್ಲದಂತೆ ತಿರುಗುವರು. ಮಳೆ, ಬೆಳೆ ಸರಿಯಾಗಿ ಕಾಲಕಾಲಕ್ಕೆ ಬರದೆ ಭೂಮಿ ಕೆಟ್ಟುಹೋಗುವುದು. ಲೋಕಕ್ಕೆ ಹಿತವೆಲ್ಲಿ. ಅತ್ಯಂತ ಮೇಧಾವಿಯಾದ ಸರ್ವಜ್ಞನು ಕೆಲವು ಹೀನ ಉಪಮೇಯಗಳನ್ನೂ ಬರೆದಿದ್ದಾನೆ. ಇದನ್ನೂ ಒಂದು ಪ್ರತ್ಯೇಕ ವರ್ಗಕ್ಕೇ ಬರೆದಿರಲೂ ಸಾಕು ! ಬಹುಶಃ ಅವು ಅವನ ವೈಯಕ್ತಿಕ ಅನುಭವಗಳೇ ಆಗಿರಬಹುದು.

ಈ ವಿಚಾರಧಾರೆಗಳು ಸರ್ವಜ್ಞನ ವಿಚಾರಗಳೇ ? ಎಂದು ನಂಬಿಕೆ ಬರುವುದೂ ಕಶ್ಟ.

ಉದಾ; ೧.

ಕೃಶ್ಣಾವತಾರದ ಕಥೆಯನ್ನು ಆಳವಾಗಿ ವಿಶ್ಲೇಶಿಸದೆ,(ಅವನು ಬರೆದದ್ದು ತ್ರಿಪದಿಯಲ್ಲವೇ ? ಕಾರಣಗಳನ್ನು ಇನ್ನೂ ವಿಸ್ತಾರವಾಗಿ ಹೇಳಬಹುದಿತ್ತು!) ಕೇವಲ ಹಾದರದ ಕಥೆ, ಎಂದು ಮೂಗು ಮುರಿಯುತ್ತಾನೆ. ಮಹಾಭಾರತದ ಬಗ್ಯೆ ಒಳ್ಳೆಯ ಅಭಿಪ್ರಾಯವಿಲ್ಲ. ಒಂದೇ ಮಾತಿನಲ್ಲಿ ಅದನ್ನು ನಿರಾಕರಿಸುವುದನ್ನು ಜೀರ್ಣಿಸಿಕೊಳ್ಳುವುದು ಬಹಳ ಕಶ್ಟ. ಈ ಹಿನ್ನೆಲೆಯಲ್ಲಿ ಸರ್ವಜ್ಞನನ್ನು ದೂಶಿಸುವುದರ ಬದಲು ಮೇಲ್ಜಾತಿಯ ಜನರಿಂದ ಜ್ಞಾನಾರ್ಜನೆಗೆ ಅವನು ಪಟ್ಟ ಶ್ರಮದ 'ಕ್ಲೇಶಾಲಾಪ'ದ ಅರಿವಾಗುತ್ತದೆ !

೨. ಸ್ತ್ರೀಯನ್ನು ಪೂರ್ಣವಾಗಿ ನಂಬಬೇಡಿ. ಇದು ಸರ್ವಜ್ಞನ ಅನುಭವ. ಮನುಷ್ಯರೆಲ್ಲಾ ನಂಬಿಕಾರ್ಹರೆಂಬ ಗ್ಯಾರಂಟಿ ಎಲ್ಲಿದೆ. ಪುರುಷರನ್ನು ಕಣ್ಣುಮುಚ್ಚಿಕೊಂಡು ನಂಬಬಹುದೇ ?

೩. ನಾಯಿಯಶ್ಟು ಹೀನಪ್ರಾಣಿ ಇಲ್ಲ. ನಾಯಿಯ ಸ್ವಭಾವವೇ ಹಾಗೆ. ತನ್ನ ಉದರ ಪೋಷಣೆ ಮಾಡಲಾಗದಷ್ಟು ಕಳಪೆಯ ಪ್ರಾಣಿ ಅದಲ್ಲ. ಅದೊಂದು ಸ್ನೇಹಮಯಿ ಪ್ರಾಣಿ ! ಹಾಗೆ ಹೇಳದೆ, ನಾಯಿಯ ಪ್ರಾಮಾಣಿಕತೆ, ಸ್ವಾಮಿನಿಷ್ಟೆಗಳನ್ನು ಎತ್ತಿ ತೋರಿಸುವುದರ ಮೂಲಕ ಒಂದು ಹೊಸ ವಿಚಾರಧಾರೆಯನ್ನು ನಿರ್ಮಾಣಮಾಡಬಹುದಾಗಿತ್ತು !

೪. ಒಂದು ಜಾತಿಯ, ಪ್ರದೇಶದ ಜನರನ್ನು ನಂಬಿ ಅಥವ ನಂಬಬೇಡಿ ಎನ್ನುವ ರೀತಿ ಸರಿಯೆ ? ಇತ್ಯಾದಿ, ಇತ್ಯಾದಿ. ಪ್ರಪಂಚವೇ ನಮ್ಮ ಬದುಕುವ ತಾಣವಾಗಿರುವ ಇಂದಿನ ವಿಶ್ವದಲ್ಲಿ ಈ ಮಾತುಗಳು ಎಶ್ಟು ಅರ್ಥಹೀನವಲ್ಲವೇ ? ಮೇಲೆ ತಿಳಿಸಿದ ವಿರೋಧಾಭಾಸಗಳು ಈಗಾಗಲೇ ದಾಖಲಾದ ವಿಶಯಗಳು. ಅನೇಕರು ಇದನ್ನು ವ್ಯಕ್ತಪಡಿಸಿದ್ದಾರೆ. ಲಿಖಿತ ರೂಪದ ಸಿಧ್ಧವಸ್ತುಗಳೇ ಸುಲಭವಾಗಿ ದೊರೆಯದಿದ್ದಕಾಲದಲ್ಲಿ ಸರ್ವಜ್ಞನ ವಚನಗಳು ಜನಸಮುದಾಯದ ಮಹತ್ವದ ದೈನಿಂದಿಕ ಚಿಂತನೆಯ ವಿಶಯಗಳಾಗಿದ್ದವು. ಗಾದೆಗಳಶ್ಟೇ ಪ್ರಭಾವಿತವಾಗಿದ್ದವು ಎನ್ನುವುದು ಇಲ್ಲಿ ಅತಿ ಮುಖ್ಯ. ಈಗಲೂ ನಮಗೆ ಸರ್ವಜ್ಞನ ವಚನಗಳು ಬಹಳ ಪ್ರಿಯವಾಗಿವೆ.

ಇಂದಿನ ಪ್ರಸಕ್ತ ವಿಶ್ವದಲ್ಲಿ ಅವನು ಹೇಳುವುದೆಲ್ಲಾ ಸತ್ಯವಲ್ಲದಿದ್ದರೂ ಬಹುತೇಕ ವಚನಗಳು ಬಹುಜನರ ಮನ್ನಣೆಗೆ ಪಾತ್ರವಾಗಿವೆ ಎನ್ನುವುದು ಸತ್ಯದ ಸಂಗತಿ. ಏಕೆಂದರೆ ಸರ್ವಜ್ಞನ ವಚನಗಳು ಇಂದಿಗೂ ಜೀವಂತವಾಗಿರುವುದು !

 

-(ಸರ್ವಜ್ಞನ ವಚನಗಳು ಹಾಗೂ ಅನೇಕ ಆಧಾರಗಳಿಂದ.)

ಲೇಖನ ವರ್ಗ (Category):