ಕೆಂಡ-ಕೊಂಡ

To prevent automated spam submissions leave this field empty.

ಚಿತ್ರವನ್ನು ನೋಡಿದಿರಾ?
ಚೋಮ ಹೊತ್ತ ವ್ಯಕ್ತಿ ಕೆಂಡದ ಮೇಲೆ ನಡೆಯುತ್ತಿರುವುದನ್ನು ಗಮನಿಸ ಬಹುದು.ಇದು ಹಾಸನ ಜಿಲ್ಲೆಯ ಹೊಳೇನರಸೀಪುರ ಸಮೀಪವಿರುವ ಹರಿಹರಪುರ ಜಾತ್ರೆಯ ಒಂದು ದೃಷ್ಯ.ಅದೇ ಊರಿನವನಾಗಿ ಮೂರು ನಾಲ್ಕು ಭಾರಿ ಕೆಂಡ ತುಳಿದಿರುವೆ. ಪ್ರತಿ ವರ್ಷ ನಡೆಯುವ ಈ ಕೆಂಡಕೊಂಡ ಜಾತ್ರೆಯಲ್ಲಿ ದೇವಿ ಉಡುಸಲಮ್ಮನವರ ದೇವಾಲಯದ ಮುಂದೆ ರಾಶಿ ಹಾಕಿದ ಸೌದೆ ಉರಿದು ಕೆಂಡವಾದಾಗ ಅದನ್ನು ಸುಮಾರು ನಾಲ್ಕು ಮೀಟರ್ ವ್ಯಾಸದ ವೃತ್ತಾಕಾರದಲ್ಲಿ ಹರಡುತ್ತಾರೆ. ಕೆಂಡ ತುಳಿಯುವುದು ಆರಂಭವಾಗುವುದಕ್ಕೆ ಮುಂಚೆ ಒಂದೆರಡುಗಂಟೆ ಅದರಸುತ್ತ ಭಕ್ತಾದಿಗಳು ನಿಂತಿರುತ್ತಾರೆ. ಸಹಸ್ರಾರು ಜನ ಭಕ್ತರು ಸೇರುವ ಈ ಜಾತ್ರೆಯಲ್ಲಿ ಜನರ ನೂಕುನುಗ್ಗಲಿನಲ್ಲಿ ಕೆಂಡದಸುತ್ತಾ ನಿಂತ ಭಕ್ತರು ಬೆಂಕಿಯ ಶಾಖದಿಂದ ಬಸಳಿ ಹೋಗಿರುತ್ತಾರೆ.ಸಾಮಾನ್ಯವಾಗಿ ಕೆಂಡದಿಂದ ಎಂಟುಹತ್ತು ಅಡಿಗಳವರಗೆ ಬೆಂಕಿಯ ಕಾವು ಅಸಾಧ್ಯವಾಗಿರುತ್ತದೆ. ಅದನ್ನು ಕಂಡ ನಾನಂತೂ ಇತ್ತೀಚಿನ ದಿನಗಳಲ್ಲಿ ಕೆಂಡದ ಮೇಲೆ ನಡೆಯುವ ಸಾಹಸಕ್ಕೆ ಕೈ ಹಾಕುವುದಿಲ್ಲ. ಚಿಕ್ಕ ವಯಸ್ಸಿನಲ್ಲಿ ನಾಲ್ಕಾರು ಭಾರಿ ಕೆಂಡದ ಮೇಲೆ ನಿರ್ಭಯನಾಗಿ ನಡೆದಿರುವೆ. ಆ ಒಂದು ಅನುಭವದಲ್ಲಿ ಹೆಳುವುದಾದರೆ ಕೆಂಡದ ಸುತ್ತ ನಿಂತಿದ್ದಾಗ ಅಸಾಧ್ಯವಾದ ಶಾಖದಿಂದ ಬೆವರು ಸುರಿದು ಸಾಕಾಗಿ ಹೋಗಿರುತ್ತಿತ್ತು, ಆದರೆ ಕೆಂಡದ ಮೇಲೆ ನಡೆದಾಗ ಆಗುವ ಆನಂದ ಅಷ್ಟಿಷ್ಟಲ್ಲ. ಮರಳಿನ ಮೇಲೆ ನಡೆದಂತೆ. ಒಂದು ಮಾತು ಹೇಳಲೇ ಬೇಕು. ಸಾಮಾನ್ಯ ಹಳ್ಳಿಗರು, ತುಂಬಾ ಓದಿಲ್ಲ ದವರು. ಕೃಷಿಕರು ಕೆಂಡದಮೇಲೆ ನಿಧಾನವಾಗಿ ಹೆಜ್ಜೆ ಹಾಕುವ ದೃಷ್ಯ ನಿಜವಾಗಿ ಕಣ್ತುಂಬಿಬರುತ್ತದೆ.ಆದರೆ ಮುಂದುವರೆದವರು, ಡಿಗ್ರಿ ಓದಿರುವವರು, ವಿಚಾರವಂತರು-ಇವರೆಲ್ಲಾ ಮೊದಲನೆಯದಗಿ ಕೆಂಡ ತುಳಿಯುವುದಿಲ್ಲ. ಒಂದು ವೇಳೆ ತುಳಿದರೂ ಬಹಳ ಹೆದರಿಕೆಯಿಂದ ಎರಡು ಹೆಜ್ಜೆಗೆ ಹಾರಿ ಓಡುವಾಗ, ಆನಂತರ ಕಿಡಿ ಹಾರಿ ಚುರುಗುಟ್ಟಿದಾಗ ಪರದಾಡುವ ದೃಷ್ಯವೂ ಕೂಡ ಮೋಜು ಕೊಡುತ್ತದೆ. ಏನೇ ಆಗಲೀ ನಮ್ಮ ಹಳ್ಳಿಗರಿಗಿರುವ ವಿಶ್ವಾಸ, ಭಕ್ತಿ, ಶ್ರದ್ಧೆ ನಗರದ ವಿಚಾರವಂತರೆಂದು ಕೊಂಡವರಲ್ಲಿ ಕಾಣಬರುವುದಿಲ್ಲ.ಇಷ್ಟವಿಲ್ಲದಿದ್ದರೂ ಈ ಸಂದರ್ಭದಲ್ಲಿ ಜಾತಿಯ ಪ್ರಸ್ತಾಪ ಮಾಡಬೇಕಾಗುತ್ತದೆ. ಚೋಮನನ್ನು ಹೊತ್ತ ಈ ವ್ಯಕ್ತಿ ಜಾತಿಯಲ್ಲಿ ಹರಿಜನ. ಈತನೇ ಕೆಂಡವನ್ನು ಪ್ರಥಮನಾಗಿ ತುಳಿಯುವುದು ನಡೆದು ಬಂದ ಪರಂಪರೆ. ಚೋಮವು ಕೆಂಡದ ಮೇಲೆ ಹೋಗುವ ದೃಷ್ಯವನ್ನು ಬಣ್ಣಿಸಲು ಅಕ್ಷರ ಸಾಲದು.ಚೋಮವು ನಿಧಾನವಾದ ಹೆಜ್ಜೆ ಇಡುತ್ತಾ ಕೆಂಡದ ಮೇಲೆ ನಡೆಯುವಾಗ ಅದ್ಭುತವೆನಿಸದೆ ಇರದು. ಚೋಮನ ಹಿಂದೆ ಬಾಯಿ ಬೀಗ ಚುಚ್ಚಿಕೊಂಡಿರುವ ವಕ್ಕಲಿಗ ಸಮುದಯದ ಸ್ತ್ರೀಯರು ಹಾಗೂ ಇಚ್ಛಿತ ಭಕ್ತರು.ಅತಿ ಕಡಿಮೆ ಸಂಖ್ಯೆಯ ಬ್ರಾಹ್ಮಣ ಸಮುದಾಯದ ಭಕ್ತರು.ಕೆಂಡ ತುಳಿಯುವುದರ ಬಗ್ಗೆ ಏನೇ ಚರ್ಚೆಗಳು ನಡೆಯಬಹುದು, ಆದರೆ ಆದಿನಕ್ಕಾಗಿ ಕಾಯುವ ಭಕ್ತಾದಿಗಳ ಸಂಖೆ ಸಾವಿರಾರು. ವರ್ಷಕ್ಕೊಮ್ಮೆ ಇದು ಸಡಗರದ ದಿನ. ಹಳ್ಳಿಗರಿಗೆ ಅತೀ ಮಹತ್ವದ ದಿನ. ನಿಮಗೆ ನೋಡಬೇಕೆಂಬ ಆಸೆ ಇದ್ದರೆ ನಿಮಗೆ ನಮ್ಮೂರಿಗೆ ಸ್ವಾಗತ.

ಲೇಖನ ವರ್ಗ (Category):