ಬರಿದಾದ ನದಿ-ಕೆರೆ, ಮಳೆರಾಯನಿಗೆ ಕೇಳಿಸದೇ ಮೊರೆ?

To prevent automated spam submissions leave this field empty.

ಅದೊಂದು ದೊಡ್ಡಕೆರೆ, ಸುಮಾರು ೧೦ ಸಾವಿರ ಎಕರೆ ಪ್ರದೇಶದಲ್ಲಿ ತನ್ನನ್ನು ಆವರಿಸಿಕೊಂಡಿದೆ. ಸುತ್ತಲೂ ದೊಡ್ಡ ಏರಿ, ಅಲ್ಲಲ್ಲಿ ನೀರು ಹೊರಹೋಗಲು ನಿರ್ಮಿಸಿರುವ ತೂಬುಗಳು, ಕಣ್ಣಾಯಿಸಿದಷ್ಟೂ ದೂರ ಕಾಣುವ ನೀರು, ಅದೆಷ್ಟೋ ದೂರದಲ್ಲಿ ಚಿಕ್ಕದಾಗಿ ಕಾಣುವ ಕೆರೆಯ ದಡ, ಅಲ್ಲೇ ಸಾಲುಗಟ್ಟಿ ನಿಂತಿರುವ ತೆಂಗಿನಮರಗಳು, ಹಿಂದೆಯೇ ಚಿಕ್ಕದಾಗಿ ಕಾಣುವ ದೊಡ್ಡ ದೊಡ್ಡ ಬೆಟ್ಟ-ಗುಡ್ಡಗಳು, ಆಗಸ ಇಲ್ಲೇ ಎಲ್ಲೋ ಹತ್ತಿರದಲ್ಲಿ ಕೊನೆಯಾಗಿದೆಯೇನೋ ಎನ್ನುವ ಅನುಭವ!

ಎಷ್ಟೊಂದು ಸುಂದರ, ವರ್ಣಿಸಲಸಾಧ್ಯ ಅಲ್ಲ್ಲವೇ? ಒಮ್ಮೆ ನಮ್ಮ ಕ್ಯಾಮರಾದೊಳಗೆ ಸೆರೆಸಿಕ್ಕಿಸಿಕೊಳ್ಳೋಣ ಎಂದುಕೊಂಡರೆ ನೀವು ೧೦ ವರ್ಷ ಹಿಂದಕ್ಕೆ ಹೋಗಬೇಕಾಗುತ್ತದೆ ಜೋಕೆ!
ನಿಜ, ಅದೇ ದೊಡ್ಡಕೆರೆ ಇಂದು ನೀರಿಲ್ಲದೆ ಸೊರಗಿದೆ, ಹೂಳುತುಂಬಿಕೊಂಡು, ಕೆರೆಯೆಲ್ಲಾ ನುಂಗಣ್ಣರ ಹಾವಳಿಗೆ ತುತ್ತಾಗಿ ಬೇಸಾಯ ಭೂಮಿಯಾಗಿ ಮಾರ್ಪಾಟಾಗಿದೆ, ಕೆರೆ ಕೇವಲ ಕೆಲವೇ ಎಕರೆ ಪ್ರದೇಶವನ್ನು ತನ್ನದಾಗಿಸಿಕೊಂಡಿದೆ, ದಡದಲ್ಲಿ ಕಾಣುತ್ತಿದ್ದ ತೆಂಗಿನಮರಗಳು, ಬೆಟ್ಟಗುಡ್ಡಗಳು ಪಕ್ಕದಲ್ಲಿಯೇ ಇದೆಯಲ್ಲಾ ಎನ್ನುವಂತೆ ಭಾಸ! ಇದು ವಾಸ್ತವ.

ಬೆಳಗಾದೊಡನೆ ತನ್ನಿರುವಿಕೆಯ ಬಳಿ ಈಜಾಡಲು ಆಗಮಿಸುತ್ತಿದ್ದ ಹಳ್ಳಿಯ ಮಕ್ಕಳು, ಪಾತ್ರೆ-ಬಟ್ಟೆ ತೊಳೆಯಲು ಆಗಮಿಸುತ್ತಿದ್ದ ಹೆಂಗೆಳೆಯರು, ದನ-ಕರುಗಳನ್ನು ಸ್ವಚ್ಚಗೊಳಿಸಲು ಬರುತ್ತಿದ್ದ ಜನ, ತನ್ನ ವ್ಯಾಪ್ತಿಯ ಸಾವಿರಾರು ಎಕರೆ ಪ್ರದೇಶಕ್ಕೆ ಬೇಸಾಯಕ್ಕೆ ನೀರುಣಿಸುವ ಸಲುವಾಗಿ ಆಗಮಿಸುತ್ತಿದ್ದ ರೈತಾಪಿ ವರ್ಗ ಇವೆಲ್ಲಾ ನೆನಪುಗಳಲ್ಲಿ ಕಾಲಕಳೆಯುತ್ತಾ, ದಶಕಗಳ ಹಿಂದೆ ಪಕ್ಕದಲ್ಲಿಯೇ ಇದ್ದ ಹತ್ತಾರು ಹಳ್ಳಿಗಳ ಮಣ್ಣಿನಮಕ್ಕಳ ಹಿತ ಕಾದಿದ್ದ, ದಿನನಿತ್ಯದ ಬದುಕಿಗೆ ಆಸರೆಯಾಗಿದ್ದ ಕೆರೆ ಇಂದು ಮೂಕರೋಧನೆ ಅನುಭವಿಸುತ್ತಿದೆ.

ಬೇಸಾಯವನ್ನು ಬಿಟ್ಟು ಸೂರ್ಯ ಕಣ್ಣು ಬಿಡುವ ಮೊದಲೇ ತಮ್ಮ ಕೆಲಸ-ಕಾರ್ಯಗಳಿಗಾಗಿ ಪಟ್ಟಣದ ಕಡೆ ಧಾವಿಸುವ ಜನ, ಕೆರೆಗೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ಮನೆಯ ಬಳಿಯೇ ತಮ್ಮ ದಿನನಿತ್ಯದ ಕಾಯಕದಲ್ಲಿ ತೊಡಗುವ ಹೆಂಗೆಳೆಯರು, ಈಜಾಡುವುದನ್ನೇ ಮರೆತ ಮಕ್ಕಳು... ವಿಪರ್ಯಾಸ ಅಲ್ಲವೇ? ಕಾಲ ಮುಂದಕ್ಕೆ ಹೋದಂತೆ ಅನೇಕ ಬದಲಾವಣೆಗಳಾಗುತ್ತಿವೆ, ಜಗತ್ತು ಅಭಿವೃದ್ದಿಪಥದತ್ತ ಸಾಗುತ್ತಿದೆ ನಿಜ, ಆದರೆ ಈ ಪ್ರಕೃತಿ ಸೊಬಗು? ನಮ್ಮನ್ನು ಬಿಟ್ಟು ಬಹುದೂರ ಹೋಗುತ್ತಿದೆ!

ಏನಾದರೊಂದು ಪಡೆಯಲು ಇನ್ನೊಂದು ಕಳೆದುಕೊಳ್ಳಬೇಕು ಎನ್ನುವ ಮಾತು ಇಲ್ಲಿ ನಿಜ ಎನಿಸುತ್ತದೆ. ಇಲ್ಲಿ ಕೆರೆಯೊಂದೇ ಪ್ರಕೃತಿಯ ಸುಂದರ ಅನುಭವ ನೀಡುತ್ತದೆ ಎಂದಲ್ಲ, ಪ್ರಕೃತಿಯ ಎಲ್ಲಾ ಅನುಭವಗಳಿಂದಲೂ ನಾವು ವಂಚಿತರಾಗುತ್ತಿದ್ದೇವೆ. ಏಕೆ ಹೀಗಾಯ್ತು ಎಂದು ಯೋಚಿಸುವ ಮೊದಲು ನಮ್ಮಲೇ ಒಂದು ಅತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

ಆ ದಿನಗಳಲ್ಲಿ ಚೆನ್ನಾಗಿ ಮಳೆಯಾಗುತ್ತಿತ್ತು, ಕಾಲಕಾಲಕ್ಕೆ ಮಳೆಯಾಗುತ್ತಿದ್ದರಿಂದ ಕೆರೆ-ಕಟ್ಟೆಗಳು ತುಂಬಿ, ಸಮೃದ್ದಿಯಾಗಿ ಮುಂದಿನ ವರ್ಷದವರೆಗೆ ರೈತರನ್ನು ಕಾಯುತ್ತಿತ್ತು. ಆದರೆ ಈಗ? ಮಳೆಯಾಗಲು ಮಳೆಗಾಲವೇ ಬೇಕಾಗಿಲ್ಲ, ಯಾವ ಕಾಲವಾದರೂ ಸೈ. ಜಗತ್ತು ವೇಗವಾಗಿ ಓಡುತ್ತಿದೆ, ಇದರಿಂದ ಮಳೆಯೂ ಹೊರತಾಗಿಲ್ಲ, ಮಳೆಗಾಲ ಶುರುವಾಗಿ ೧೫ ದಿನಗಳಲ್ಲೇ ಕರೆ-ಕಟ್ಟೆಗಳು ಭರ್ತಿ! ಮುಂದಿನ ದಿನಗಳಲ್ಲಿ ಮುಳುಗಡೆ, ಪ್ರವಾಹ.... ಹೀಗೆ ಅನಾವೃಷ್ಟಿಯದ್ದೇ ಕಾರುಬಾರು. ಅಲ್ಲದೇ ಜಾಗತೀಕರಣದ ಬಿಸಿ ಪ್ರಕೃತಿಯ ಮೇಲೂ ತಟ್ಟಿದ್ದು, ಅದರ ಪರಿಣಾಮವನ್ನು ನಾವು ಇಂದು ಎದುರಿಸುತ್ತಿದ್ದೇವೆ.

ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ವಿಪರೀತವಾಗಿ ಬಳಸಿಕೊಂಡ ಮಾನವ, ಇಂದು ಅದಕ್ಕೆ ಬೆಲೆತೆರುತ್ತಿದ್ದಾನೆ ಎಂದರೆ ತಪ್ಪಾಗಲಾರದು. ಮಳೆಗೆ ಮೂಲ ಆಸರೆಯಾದ ಅರಣ್ಯಗಳನ್ನು ನಾಶ ಮಾಡಿದ, ಅದರಿಂದಾಗಿ ಈಗ ಮಳೆಯ ಆಗಮನವೇ ಅಪರೂಪವಾಗಿದೆ. ಮಳೆ ಬಿದ್ದರೂ ಅದರ ರುದ್ರನರ್ತನಕ್ಕೆ ಬಲಿಯಾದವರ ಸಂಖ್ಯೆ ಅದೆಷ್ಟೋ? ಇದರಿಂದ ಪಾರಾಗಲು ಗಿಡ ನೆಡಲು ರೂಪಿಸಿದ ವನಮಹೋತ್ಸವ ಕಾರ್ಯಕ್ರಮ ಕಾಟಾಚಾರಕ್ಕೆ ಎನ್ನುವಂತಾಗಿದೆ.

ಒಟ್ಟಾರೆ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮಳೆಯ ಒರತೆಗಳಾದ ಕೆರೆ-ಕಟ್ಟೆಗಳು ಹೇಳಹೆಸರಿಲ್ಲದಂತಾಗಿ, ಮುಂದಿನ ದಿನಗಳಲ್ಲಿ ಚಿತ್ರಗಳಲ್ಲಿ ಮಾತ್ರ ಅವುಗಳ ಸೊಬಗನ್ನು ವೀಕ್ಷಿಸಬೇಕಾದ ಅನಿವಾರ್ಯತೆ ನಮಗೆ ಎದುರಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಾದರೂ ಅರಣ್ಯಗಳನ್ನು ಬೆಳೆಸಿ, ಪರಿಸರವನ್ನು ಉಳಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕಾಗಿದೆ. ಮನೆಯಲ್ಲಿ ಒಂದು ಗಿಡ ನೆಟ್ಟು, ಅದನ್ನು ಪೋಷಿಸಿದರೆ, ಪ್ರಕೃತಿಗೆ ನಾವು ಕೊಡುಗೆ ನೀಡಿದಂತಾಗುತ್ತದೆ ಎಂಬ ಮಾತು ಅಕ್ಷರಷಹ ಸತ್ಯ.

ಹೀಗಾದಾಗ ಮುಂದಿನ ದಿನಗಳಲ್ಲಿ ಹತ್ತು ವರ್ಷಗಳ ಹಿಂದಿನ ವೈಭವ ಮರುಕಳಿಸುವುದರಲ್ಲಿ ಯಾವುದೇ ಸಂಶಯ ಇಲ್ಲ. ಆಗಾದಾಗ ಮಾತ್ರ ಮಳೆರಾಯನಿಗೆ ನಮ್ಮ ಮೊರೆ ಕೇಳಿಸಿ, ಇಳೆ ತಂಪಾಗಿಸುವುದರಲ್ಲಿ ಸಂಶಯವಿಲ್ಲ ಅಲ್ಲವೇ? ಹಾಗಾಗಿ ಇಂದೇ ಒಂದು ಸಸಿ ಬೆಳೆಸೋಣವೇ?

ಲೇಖನ ವರ್ಗ (Category):