ನಾ ಕಂಡಂತೆ ಬೇಂದ್ರೆಯವರ "ಹುಬ್ಬಳ್ಳಿಯಾಂವಾ"

To prevent automated spam submissions leave this field empty.

ನಾನು ಮೊನ್ನೆ ನನ್ನ ಅಚ್ಚು ಮಿಚ್ಚಿನ ಕವಿ ಬೇಂದ್ರೆಯವರ ಹಾಡುಗಳನ್ನು ಸೀಡಿ ಪ್ಲೇಯರ್ನಲ್ಲಿ ಕೇಳುತ್ತಿದ್ದಾಗ ಅದರಲ್ಲಿನ ಒಂದು ಹಾಡು "ಹುಬ್ಬಳ್ಳಿಯಾಂವಾ" ನನ್ನನ್ನು ತಟ್ಟನೆ ಹಿಡಿದು ನಿಲ್ಲಿಸಿಬಿಟ್ಟಿತು. ಮತ್ತೆ ಮತ್ತೆ ರಿವೈಂಡ್ ಮಾಡಿ ಮತ್ತೆ ಮತ್ತೆ ಕೇಳಿದೆ. ಕೇಳಿದಷ್ಟು ನನ್ನ ಬುದ್ಧಿ ಭಾವಗಳೆರಡೂ ಹೊಸ ಹೊಳಹುಗಳನ್ನು ಹುಡುಕಿ ಹೊರಟವು. ನಾನದನ್ನು ಈ ಮೊದಲು ಸಾಕಷ್ಟು ಸಾರಿ ಕೇಳಿದ್ದೇನಾದರೂ ಈ ಬಾರಿ ಕೇಳುವಾಗ ಅದೇಕೋ ಗೊತ್ತಿಲ್ಲ ಅಲ್ಲಿ ಬಳಸಿದ ವಸ್ತು, ಭಾಷೆ, ಶಬ್ಧಭಂಡಾರ ಮತ್ತು ಹದವಾದ ಲಯಗಾರಿಕೆಗಳು ನನ್ನನ್ನು ತೀವ್ರವಾಗಿ ಆಕರ್ಷಿಸಿ ಈ ಲೇಖನ ಬರೆಯುವಂತೆ ಪ್ರೇರೇಪಿಸಿತು. ಈ ಹಾಡನ್ನು ಅಷ್ಟೇ ಭಾವಪೂರ್ಣವಾಗಿ ಸ್ನೇಹಾ ಹಂಪಿಹೊಳಿಯವರು ಧಾರವಾಡದ ಕನ್ನಡವನ್ನಾಡಿ ರೂಡಿಯಿದ್ದುದರಿಂದ, ಬೇರೆ ಗಾಯಕರಂತೆ ಅದರ accentನ್ನು ಕೆಡಿಸಿ ಹಾಡದೆ ಬೇಂದ್ರೆ ಹಾಡನ್ನು ಹೇಗೆ ಹಾಡಬೇಕೋ ಹಾಗೆ ಹಾಡಿದ್ದಾರೆ. ನನ್ನ ಪ್ರಕಾರ ಬೇಂದ್ರೆಯವರ ಆಡು ಭಾಷೆಯಲ್ಲಿರುವ ಹಾಡುಗಳನ್ನು ಆ ಭಾಷೆಯನ್ನು ಆಡುವವರೇ ಹಾಡಿದರೆ ಚೆಂದ. ಆಗಲೇ ಅದಕ್ಕೊಂದು ಲಯ, ಗತ್ತು, ನಾದ, ಸೊಗಡು ಹಾಗೂ ಸ್ಪಷ್ಟತೆಯಿರುವದು.

ನಾನು ಬೇಂದ್ರೆಯವರ ಕವನವನ್ನು ವಿಮರ್ಶೆ ಮಾಡುವಷ್ಟು ಪ್ರಖಾಂಡ ಪಂಡಿತನೂ ಅಲ್ಲ ವಿಮರ್ಶೆಯ ಒಳಹರಿವುಗಳನ್ನರಿತ ವಿಮರ್ಶಕನೂ ಅಲ್ಲ. ಒಬ್ಬ ಸಾಮಾನ್ಯ ಓದುಗನಾಗಿ ಬೇಂದ್ರೆಯವರ ಈ ಕವನ ನನ್ನ ಗ್ರಹಿಕೆಗೆ ನಿಲುಕಿದ್ದೆಷ್ಟು ಎಂಬುದನ್ನು ಮಾತ್ರ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ಇದೊಂದು ವಿರಹಗೀತೆ. ಪ್ರೇಯಸಿ ತನ್ನ ಪ್ರಿಯಕರನಿಗಾಗಿ ಹಂಬಲಿಸುವ ವಿರಹಗೀತೆಯಾಗಲಿ, ಹೆಂಡತಿ ತನ್ನ ಗಂಡನ ಬರುವಿಕೆಗಾಗಿ ಕಾಯುವ ವಿರಹಗೀತೆಯಾಗಲಿ ಅಲ್ಲ ಇದು. ಸೂಳೆಯೊಬ್ಬಳು (ಯಲ್ಲಮ್ಮ ಜೋಗತಿ) ಈಗಾಗಲೇ ತನ್ನೊಂದಿಗೆ ಉಡ್ಕಿ ಮಾಡಿಕೊಂಡು ವಾರಕ್ಕೆ ಮೂರು ಸಾರಿ ಲೆಕ್ಕದಲ್ಲಿ ಬಂದು ಅವಳೊಂದಿಗೆ ಸೇರಿ ಹೋದವನಿಗಾಗಿ (ಗಿರಾಕಿಗಾಗಿ) ಹಪಹಪಿಸುವ ಹಾಡಿದು. ಅವನು ಹುಬ್ಬಳ್ಳಿಯಾಂವಾ. ಹಾಗಾದರೆ ಆ ಜೋಗತಿ ಎಲ್ಲಿಯವಳು? ಧಾರವಾಡದವಳಾ? ಕಲಘಟಗಿಯವಳಾ? ಬೆಳಗಾವಿಯವಳಾ? ಸೌದತ್ತಿಯವಳಾ? ಗೊತ್ತಿಲ್ಲ. ಕವನದುದ್ದಕ್ಕೂ ಈ ಪ್ರಶ್ನೆ ನಿಗೂಢವಾಗಿ ಉಳಿಯುತ್ತದೆ. ಅವಳು ಎಲ್ಲಿಯವಳಾದರೇನು? ಕವನದಲ್ಲಿ ಇದು ಮುಖ್ಯವಾಗದೆ ಅವಳ ಹಂಬಲಿಕೆಯಷ್ಟೆ ನಮಗೆ ಮುಖ್ಯವಾಗುತ್ತದೆ. ಮೇಲಾಗಿ ಜೋಗತಿಯರಿಗೆ ಇಂಥದೇ ಅಂತ ಒಂದು ನಿರ್ಧಿಷ್ಟ ಊರು ಇರುವದಿಲ್ಲ.

ಈ ಹುಬ್ಬಳ್ಳಿಯಾಂವಾ ಮತ್ತು ಜೋಗತಿಯ ನಡುವೆ ಈಗಾಗಲೇ ಏನೋ ಮನಸ್ತಾಪ ಬಂದು ಅದು ಪ್ರಕೋಪಕ್ಕೆ ತಿರುಗಿ ಇಬ್ಬರಲ್ಲೂ ವಿರಸ ಉಂಟಾಗಿದೆ. ಹಾಗಾಗಿ ವಾರಕ್ಕೆ ಮೂರುಸಾರಿಯಾದರೂ ಬಂದು ಹೋಗುವವ ಇನ್ನೂ ಬಂದಿಲ್ಲ. ಜೋಗತಿಯಲ್ಲಿ ಆತಂಕವೆದ್ದಿದೆ. ಒಬ್ಬ ಸೂಳೆಗೆ ಎಷ್ಟೊಂದು ಗಿರಾಕಿಗಳು! ಆದರೆ ಈ ಸೂಳೆಗೆ ಈ ಗಿರಾಕಿಯೇ ಯಾಕೆ ಬೇಕು? ಅವನು ಬರದೆ ಹೋದರೆ ಯಾಕಿಷ್ಟೊಂದು ಆತಂಕ? ಯಾವ ಗಿರಾಕಿಯಾದರಾದೀತು! ಎಂದು ನೀವು ಕೇಳಬಹುದು. ಆದರೆ ಕವನ ಬೆಳೆದಂತೆ ನಮಗೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಅವರದು ಬರಿ ಸೂಳೆ-ಗಿರಾಕಿ ಸಂಬಂಧವಲ್ಲ. ಗಂಡ ಹೆಂಡತಿಯರಷ್ಟೇ ಪವಿತ್ರವಾದ ಸಂಬಂಧವಲ್ಲದ ಸಂಬಂಧವದು. ಕವನ ಆರಂಭವಾಗುವದೇ ಅವಳ ಈ ಆತಂಕದೊಂದಿಗೆ-
"ಇನ್ನೂ ಯಾಕ ಬರಲಿಲ್ಲಂವ ಹುಬ್ಬಳ್ಳಿಯಾಂವಾ
ವಾರದಾಗ ಮೂರು ಸರತಿ ಬಂದು ಹೋದಂವಾ"
ಅವಳ ಈ ಆತಂಕವನ್ನು ಶಮನಗೊಳಿಸಿಕೊಳ್ಳುವುದು ಹೇಗೇ? ಅವನ ವೇಶಭೂಷಣ, ಹಾವಭಾವ, ತೋರ್ಕೆಗಳನ್ನು ನೆನಪಿಸಿಕೊಳ್ಳುವದರ ಮೂಲಕ ಕ್ಷಣ ಕಾಲ ತನ್ನ ಆತಂಕವನ್ನು ಮರೆಯಲು ಪ್ರಯತ್ನಿಸುತ್ತಾಳೆ.
"ಭಾರಿ ಜರದ ವಾರಿ ರುಮಾಲು ಸುತ್ತಿಕೊಂಡಾಂವಾ
ತುಂಬು-ಮೀಸಿ ತೀಡಿಕೊಂತ ಹುಬ್ಬು ಹಾರಿಸಂವಾ"
ಅವನು ರಸಿಕ. ಅವನೊಳಗೆ ಕವಿಯಿದ್ದಾನೆ. ಹಾಡುಗಾರನಿದ್ದಾನೆ. ಇದೆಲ್ಲದಕ್ಕೂ ಅವಳು ಮನಸೋತಿದ್ದಾಳೆ. ಇದನ್ನು ಮುಂದಿನ ಸಾಲುಗಳಲ್ಲಿ ತೆರೆದಿಡುತ್ತಾಳೆ.
"ಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾ
ಏನ ಅಂದರ ಏನೋ ಕಟ್ಟಿ ಹಾಡ ಹಾಡಂವಾ"

ಇಂಥ ರಸಿಕನನ್ನು ಯಾವ ಹೆಣ್ಣು ತಾನೆ ಇಷ್ಟಪಡುವದಿಲ್ಲ? ಈ ಕವನದ ಸೂಳೆ ಸಾಮಾನ್ಯ ಸೂಳೆಯಲ್ಲ. ಯಲ್ಲಮ್ಮ ದೇವರ ಹೆಸರಲ್ಲಿ ಜೋಗತಿ ಆದವಳು. ಇವಳು ಗರತಿಯಾಗುವ ಸಾಮಾಜಿಕ ಹಕ್ಕನ್ನು ಕಳೆದುಕೊಂಡಿದ್ದಾಳೆ. ಇಂಥವಳಿಗೆ ಈ ರಸಿಕ ಕಟ್ಟಿ ಕೊಡುವ ಕನಸನ್ನು ಎರಡನೆಯ ನುಡಿಯಲ್ಲಿ ಹಾಡುತ್ತಾಳೆ.
"ತಾಳಿ ಮಣಿಗೆ ಬ್ಯಾಳಿ ಮಣಿ ನಿನಗ ಬೇಕೇನಂದಾಂವಾ
ಬಂಗಾರ-ಹುಡಿಲೇ ಭಂಡಾರವ ಬೆಳಿಸೇನೆಂದಾಂವಾ"
ಜೋಗತಿಯರು ಎಲ್ಲಮ್ಮನ ಹೆಸರಿನಲ್ಲಿ ತಾಳಿಯನ್ನು ಕಟ್ಟಿಕೊಳ್ಳುತ್ತಾರೆ. ತಾಳಿಯ ಮದ್ಯದಲ್ಲಿರುವ ಎರಡು ಬೇಳೆಗಳು ಕೇವಲ ಮದುವೆಯಾದ ಗರತಿಯ ಸೊತ್ತು. ದೇವರ ಹೆಸರಲ್ಲಿ ಸೂಳೆಯಾದವಳಿಗೆ ಈ ಬೇಳೆಗಳನ್ನು ಹಾಕಿಕೊಳ್ಳುವ ಹಕ್ಕಿಲ್ಲ. ಹೀಗಾಗಿ ಅವಳಿಗೆ ಗರತಿಯಾಗುವ ಅಸಾಧ್ಯ ಕನಸನ್ನು ಕಲ್ಪನೆಯಲ್ಲಿ ಕಟ್ಟಿಕೊಡುವದರ ಮೂಲಕ ಅವಳನ್ನು ಮರಳು ಮಾಡುತ್ತಾನೆ. ಗರತಿಯಾಗುವ ಈ ಭಾವವೇ ಅವಳನ್ನು ಪ್ರಸನ್ನಗೊಳಿಸುತ್ತದೆ. ಈ ಜೋಗತಿಯರ ಸಂಪತ್ತೆಂದರೆ ಯಲ್ಲಮ್ಮನ ಗುಡಿಯಿಂದ ತಂದ ಭಂಡಾರ. ಆ ಭಂಡಾರವನ್ನು ಬಂಗಾರದ ಹುಡಿಯಿಂದ ತುಂಬುತ್ತೇನೆನ್ನುವ ಔದಾರ್ಯವನ್ನು ತೋರುತ್ತಾನೆ. ಅಂದರೆ ನಮಗಿಲ್ಲಿ ಗೊತ್ತಾಗುವದು ಇವನೊಬ್ಬ ಶ್ರೀಮಂತನೆಂದು. ಈ ಸಿರಿವಂತ ತನ್ನ ಮೊದಲ ಹೆಜ್ಜೆಗಳನ್ನು ಕಸುಬಿನವರ (professional prostitutes) ಮನೆಗಳಲ್ಲಿ ಹಾಕಿದ್ದಾನೆ; ಅವರಾದ ಮೇಲೆ ಅದಕ್ಕೂ ಹೆಚ್ಚಿನ ಸ್ತರದ ಬಸವಿಯರ (temple prostitutes) ತಾಣಗಳನ್ನು ದಾಟಿ ಬಂದಿದ್ದಾನೆ. ಇದೀಗ ಬಸವಿಯರಿಗಿಂತ ಹೆಚ್ಚಿನ ಸ್ತರದಲ್ಲಿರುವ ಜೋಗತಿಯ ಜೊತೆಗೆ ಇವನ ಸಂಬಂಧ.
"ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ
ಜೋಗತೇರಗೆ ಮೂಗತಿ ಅಂತ ನನಗ ಅಂದಾಂವಾ"
ಆ ಜೋಗತಿಯನ್ನು ಜೋಗತಿಯರಲ್ಲಿಯೇ ಶ್ರೇಷ್ಠ ಎಂದು ಕರೆಯುತ್ತಾನೆ. ಇಂಥ ಗಂಡಸನ್ನು ಯಾವ ಹೆಣ್ಣು ತಾನೆ ಇಷ್ಟಪಡುವದಿಲ್ಲ? ಅವನು ಕೊಡುವ ದೈಹಿಕ ಸುಖಕ್ಕಿಂತ ಮಾನಸಿಕ ಸುಖವು ಅವಳಿಗೆ ಹೆಚ್ಚು ಪ್ರಿಯವಾಗುತ್ತದೆ. ಅವನ ಸಾಮಿಪ್ಯ ಆಪ್ತವೆನಿಸುತ್ತದೆ. ಹೀಗಾಗಿ ಅವನೊಬ್ಬ ಗಿರಾಕಿಯಿದ್ದರೂ ಸಹ ಕೆಲಸ ಮುಗಿದ ಮೇಲೆ ಅವನನ್ನು ಹೋಗಲು ಬಿಡುವದಿಲ್ಲ. ಇರು ಎಂದು ಬೇಡುತ್ತಾಳೆ. ಅವನು ಅದನ್ನು ಲೆಕ್ಕಿಸದೇ ಹೊರಟಾಗ ಮಾರಿ ತೆಳಗ ಹಾಕುತ್ತಾಳೆ. ಅವಳ ಸಪ್ಪೆ ಮುಖ ನೋಡಿ ತನ್ನ ನಿರ್ಧಾರವನ್ನು ಬದಲಿಸಿ ಅವಳನ್ನು ಸಂತುಷ್ಟಗೊಳಿಸುತ್ತಾನೆ.
"ಇರು ಅಂದ್ರ ಬರ್ತೀನಂತ ಎದ್ದು ಹೊರಡಾಂವಾ
ಮಾರಿ ತೆಳಗ ಹಾಕಿತಂದ್ರ ಇದ್ದು ಬಿಡಂವಾ"
ಮುಂದುವರೆದು ಅವನ ರಸಿಕತೆಯನ್ನು, ಆಟಗಳನ್ನು ಮುಂದಿನ ಸಾಲುಗಳಲ್ಲಿ ಮತ್ತೊಮ್ಮೆ ಅನಾವರಣಗೊಳಿಸುತ್ತಾಳೆ.
"ಹಿಡಿ ಹಿಡಿಲೇ ರೊಕ್ಕಾ ತೆಗೆದು ಹಿಡಿ ಹಿಡಿ ಅನ್ನಾಂವಾ
ಖರೇ ಅಂತ ಕೈ ಮಾಡಿದರ ಹಿಡಿದ ಬಿಡಂವಾ"
ಇಲ್ಲಿ ಕವಿ ಬೇಂದ್ರೆ ’ಹಿಡಿ’ ಎನ್ನುವ ಪದದೊಂದಿಗೆ ಎಷ್ಟು ಚನ್ನಾಗಿ ಆಟವಾಡಿದ್ದಾರೆ ನೋಡಿ. ಹೀಗೆ ಪದಗಳನ್ನು ಹಿಗ್ಗಿಸಿ ಬಗ್ಗಿಸಿ ಅವುಗಳೊಂದಿಗೆ ಆಟವಾಡುವ ಕಲೆ ಬೇಂದ್ರೆಗೆ ಮಾತ್ರ ಗೊತ್ತಿತ್ತು. ಅದಕ್ಕೆ ಅಲ್ಲವೇ ಅವರನ್ನು ಶಬ್ದಗಾರುಡಿಗ ಎಂದು ಕರೆಯುತ್ತಿದ್ದುದು.

ಏನೇ ಮಾಡಿದರೂ ಅವಳೇನಿದ್ದರೂ ಸೂಳೆ. ಮಡದಿಯಾಗಲಾರಳು. ಅವನು ಅವಳಿಗೆ ಸಂಪೂರ್ಣವಾಗಿ commit ಆಗಲಾರ. ಅವನು practical. ಅವನಿಗೆ ತನ್ನ ಇತಿಮಿತಿಗಳ ಅರಿವಿದೆ. ಬಹುಶಃ ಅವನಿಗೆ ಈಗಾಗಲೆ ಮದುವೆಯಾಗಿದೆ. ಅಥವಾ ಸೂಳೆ ಎಂಬ ಕಾರಣಕ್ಕೆ ಅವಳನ್ನು ಮದುವೆಯಾಗಿ ಸಮಾಜದ ತಿರಸ್ಕಾರಕ್ಕೆ ಗುರಿಯಾಗಲಾರ. ಅವಳಿಗೇನಿದ್ದರೂ ಎರಡನೆ ಸ್ಥಾನ. ಈ ಕಟು ವಾಸ್ತವವನ್ನು ಬಹಳ ಸೂಚ್ಯವಾಗಿ "ಚಹಾದ ಜೋಡಿ ಚೂಡಾದ್ಹಾಂಗ ನೀ ನನಗ" ಎಂದು ಹೇಳುತ್ತಾನೆ. ಆದರದು ಅವಳಿಗೆ ಕೋಪ ತರಿಸುತ್ತದೆ. ಅವಳು impractical. Sillyಯಾಗಿ ಯೋಚಿಸುತ್ತಾಳೆ. ಒಂದು ಕ್ಷಣ ತಾನು ಸೂಳೆ ಎಂಬುದನ್ನು ಮರೆತು ಅವನಿಗೆ ಮಡದಿಯಾಗುವ ಕನಸನ್ನು ಕಾಣುತ್ತಾಳೆ. ವಾಸ್ತವ ಸತ್ಯವನ್ನು ಭರಿಸಲಾರದೆ, ಅಲ್ಲಿದ್ದು ಅನುಭವಿಸಲಾರದೆ ಅಸಾಧ್ಯವಾದುದನ್ನು ಕನಸು ಕಾಣುವ ತನ್ನ ಸ್ಥಿತಿಗೆ ಒಂದು ರೀತಿಯ ಸ್ವಯಂ ಮರುಕ ಪಡುತ್ತಾಳೆ. ಅವಳಿಗೇನಿದ್ದರೂ ಕಲ್ಪನಾ ಲೋಕವೇ ಇಷ್ಟ. ಇದನ್ನರಿತ ಆ ಹುಡುಗ ತಕ್ಷಣ ತನ್ನ ಮಾತಿನ ಧಾಟಿಯನ್ನು ಬದಲಿಸಿ "ಚೌಡಿಯಲ್ಲ ನೀ ಚೂಡಾಮಣಿ" ಅಂತ ರಮಿಸುತ್ತಾನೆ. ಅವಳು ಘಾಟಿ ಹೆಂಗಸು. ಅಷ್ಟಕ್ಕೆ ಸುಮ್ಮನಾಗುವವಳಲ್ಲ. ಅವನೂ ಅಷ್ಟೆ ಬಲು ಚಾಲಾಕಿನ ಹುಡುಗ. ಸಮಾಜಕ್ಕೆ ಸಡ್ಡು ಹೊಡೆದು ಬಹಿರಂಗವಾಗಿ ಅವಳನ್ನು ಮದುವೆಯಾಗಿ ’ಪತ್ನಿ’ ಎಂದು ಘೋಷಿಸಲಾರ. ಹಾಗೆ ಅವಳನ್ನು ಬಿಟ್ಟಿರಲಾರ. ಹಾಗಾಗಿ ಅವನು "ಬೆರಳಿಗುಂಗುರ ಮೂಗಿನ್ಯಾಗ ಮೂಗುಬಟ್ಟು" ಇಡುವದರ ಮೂಲಕ ಪತ್ನಿ ಸ್ಥಾನವನ್ನು ಕಲ್ಪಿಸುತ್ತಾನೆ. ವಾಸ್ತವದಲ್ಲಿ ಅವಾಸ್ತವವನ್ನು, ಸತ್ಯದಲ್ಲಿ ಮಿಥ್ಯವನ್ನು ತರುತ್ತಾನೆ. ಆಗ ಅವಳು ಒಂದು ರೀತಿಯ ಮಾನಸಿಕ ರಕ್ಷಣೆಯನ್ನು ಪಡೆಯುತ್ತಾಳೆ. ಇದು ಅವನ ಸಂದಿಗ್ಧತೆಯ ಫಲವೋ ಅಥವಾ ಹೆಂಗಸರಿಗೆ ಸದಾ ಕಲ್ಪನೆಗಳೇ ಇಷ್ಟವಾಗುವದರಿಂದ ಅವರನ್ನು ಅವುಗಳ ಮಿತಿಯಲ್ಲಿಯೇ ನಡೆಸಿಕೊಳ್ಳುವ ಕಲೆಯೋ ಗೊತ್ತಾಗುವದಿಲ್ಲ.

ಮುಂದಿನ ನುಡಿಯಲ್ಲಿ ಅವಳು ತುಸು practical ಆದಂತೆ ಕಾಣುತ್ತಾಳೆ. ಅವನ ಮಡದಿಯಾಗುವ ಕನಸು ಕಾಣುತ್ತಾ ಧೇನಸ್ಥ ಸ್ಥಿತಿಯನ್ನು ಅನುಭವಿಸುವದನ್ನು ನಿಲ್ಲಿಸಿ ವಾಸ್ತವಕ್ಕೆ ಹಿಂತಿರುಗುತ್ತಾಳೆ. ಅವನು ನಗು ಮುಖದವನು. ಹೆಣ್ಣುಗಳನ್ನು ಒಲಿಸಿಕೊಳ್ಳುವ ಕಲೆ ಅವನಿಗೆ ಸಿದ್ಧಿಸಿದೆ. ಇಂಥವನ ಪ್ರೀತಿ ಸಿಕ್ಕಿದ್ದೇ ಹೆಚ್ಚು ಎಂದು ಭಾವಿಸುತ್ತಾಳೆ. ಇವನ ಹೆಂಡತಿ ಆಗುವದಕ್ಕೆ ತನಗೂ ಸಾಧ್ಯವಿಲ್ಲ, ತನ್ನ ಗಂಡನಾಗುವದಕ್ಕೆ ಅವನಿಗೂ ಸಾಧ್ಯವಿಲ್ಲ ಎನ್ನುವ ಸತ್ಯವನ್ನು ಅರಿಯುತ್ತಾಳೆ. ಇವನೇ ನನಗೆ ಜನ್ಮ ಜನ್ಮಕೆ ಗೆಳೆಯನಾಗಿ ಸಿಕ್ಕರೆ ಸಾಕು ಎಂದು ತೃಪ್ತಿಪಟ್ಟುಕೊಳ್ಳುತ್ತಾಳೆ.
"ಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ
ಎದಿ ಮ್ಯಾಗಿನ ಗೆಣತಿನ ಮಾಡಿ ಇಟ್ಟುಕೊಂಡಂವಾ"
ಇಲ್ಲಿ ಬೇಂದ್ರೆ ಹೆಣ್ಣಿನ ಮನಸ್ಸನ್ನು ಬಹಳ ಸೂಕ್ಸ್ಮವಾಗಿ ವಿಶ್ಲೇಷಿಸುತ್ತಾರೆ. ಹೆಣ್ಣಿಗೆ ಅಸಾಧ್ಯವಾದುದನ್ನು ಕಲ್ಪಿಸಿಕೊಳ್ಳುವ ಶಕ್ತಿಯೂ ಇದೆ, ಅದು ಈಡೇರದೆಹೋದಾಗ ತನ್ನೆಲ್ಲ ಇಲ್ಲದಿರುವಿಕೆಗಳ ಹಪಹಪಿಕೆಯೊಂದಿಗೆ ವಸ್ತು ಸ್ಥಿತಿಯೊಂದಿಗೆ ರಾಜಿ ಮಾಡಿಕೊಂಡು ಬದುಕುವ ಮನಸ್ಸೂ ಇದೆ ಎಂದು ಹೇಳುತ್ತಾರೆ.

ಇಂಥ ನೆಚ್ಚಿನ ಗೆಳೆಯನೊಡನೆ ಯಾವ ಕಾರಣಕ್ಕಾಗಿ ಮನಸ್ತಾಪ ಬಂತೋ ಆತ ಇವಳೊಂದಿಗೆ ಮುನಿಸಿಕೊಂಡಿದ್ದಾನೆ. ಅವಳೆಡೆಗೆ ಹೋಗುವದನ್ನು ನಿಲ್ಲಿಸಿದ್ದಾನೆ. ಅವಳ ಆತಂಕ ಇಮ್ಮುಡಿಯಾಗಿದೆ. ತನ್ನೆಲ್ಲಾ ಹ್ಯಾಂವ್ ಬಿಟ್ಟು ಹುಚ್ಚಿಯಂತೆ ಅವರಿವರನ್ನು ಕೇಳುತ್ತಾ ಬೀದಿ ಬೀದಿಯಲ್ಲಿ ಅವನಿಗಾಗಿ ಹುಡುಕುತ್ತಾಳೆ.
"ಯಲ್ಲಿ ಮಲ್ಲಿ ಪಾರಿ ತಾರಿ ನೋಡಿರೇನ್ರಂವಾ
ನಿಂಗಿ ಸಂಗಿ ಸಾವಂತರಿ ಎಲ್ಹಾನ ನನ್ನಾಂವ
ಸೆಟ್ಟರ ಹುಡುಗ ಸೆಟಗೊಂಡು ಹೋದಾ ಅಂತಾ ನನ್ನ ಜೀಂವಾ
ಹಾದಿ ಬೀದಿ ಹುಡುಕತೈತ್ರೆ ಬಿಟ್ಟ ಎಲ್ಲಾ ಹ್ಯಾಂವಾ"
ಇಲ್ಲಿ ಮತ್ತೊಂದು ವ್ಯಂಗ ಇದೆ. ಈತ ಸೆಟ್ಟರ ಹುಡುಗ. ದುಡ್ಡಿದ್ದವ. ಈತ ಸೆಡವು ಮಾಡಿಕೊಂಡು ಹೋದರೆ ಅವಳ ಬದುಕು ನಡೆಯುವದಾದರೂ ಹೇಗೆ? ಅದು ಕಟು ವಾಸ್ತವ. ಹೀಗಾಗಿ ಅವನಿಗಾಗಿ ಹುಡುಕಾಟ ಮುಂದುವರಿಸುತ್ತಾಳೆ. ಅವಳ ಈ ಹುಡುಕಾಟದೊಂದಿಗೆ ಕವನ ಅಂತ್ಯಗೊಳ್ಳುತ್ತದೆ.

ಜಗತ್ತಿನ ಯಾವ ಕವಿ ತಾನೆ ಇಷ್ಟೊಂದು ಚನ್ನಾಗಿ ಸೂಳೆ-ಗಿರಾಕಿ ಸಂಬಂಧವನ್ನು ವರ್ಣಿಸಿದ್ದಾನೆ? ಮುಂದೆ ಹುಬ್ಬಳ್ಳಿಯಾಂವಾ ಬರುತ್ತಾನಾ? ಬಂದು ಅವಳನ್ನು ಸೇರುತ್ತಾನಾ? ಮತ್ತೆ ಎಂದಿನಂತೆ ಅವರಿಬ್ಬರೂ ಒಂದಾಗುತ್ತಾರಾ? ಕವನದಲ್ಲಿ ಈ ಪ್ರಶ್ನೆಗಳಿಗೆ ಉತ್ತರವಿಲ್ಲ. ಅವರಿಬ್ಬರ ಮಧುರ ಬಾಂಧವ್ಯವನ್ನು ಕಟ್ಟಿಕೊಡುವದಷ್ಟೆ ಕವನದ ಕೆಲಸ. ಕವನ ಇವರಿಬ್ಬರ ಸರಿ-ತಪ್ಪು, ಸತ್ಯ-ಮಿಥ್ಯ, ವಾಸ್ತವ-ಕಲ್ಪನೆ, ತರ್ಕ-ಅತರ್ಕಗಳ ನಡುವೆ ನಡೆಯುವ ಗೊಂದಲದ ಬದುಕನ್ನು ಚಿತ್ರಿಸುತ್ತದೆ. ಇಂಥ ದ್ವಂದ್ವ, ಸಂದಿಗ್ಧತೆಗಳ ನಡುವೆಯಲ್ಲವೇ ನಾವು ಬದುಕುವದು?!

-ಉದಯ ಇಟಗಿ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಇಟಗಿಯವರಿಗೆ ನಮಸ್ಕಾರ,

ಬೇಂದ್ರೆಯವರ ಮನದಾಳ ಅವರ ಹಾಡಿನ ಹಕ್ಕಿಯ ಹಾರಿನಂತೆ (ರಾಜ್ಯದ ಸಾಮ್ರಾಜ್ಯದ ಗಡಿ ಕುಕ್ಕಿ, ತೇಲಿಸಿ ಮುಳುಗಿಸಿ ಖಂಡ ಖಂಡಗಳ) ಎತ್ತರ, ಆಳ.

ಈ ಹಾಡಿನ ನಯ ವಿವರಣೆಗೆ ಧನ್ಯವಾದಗಳು

- ಅರವಿಂದ

ಇಟಗೀಯವರ ನಮಸ್ಕಾರಾ,
ನೀವು ಹುಬ್ಬಳ್ಳಿಯಾಂವಾ ಹಾಡನ್ನ ಬಿಡಿಸಿ ಇಟ್ಟಿರ ರೀತಿ ಅದ್ಬುತವಾಗಿದೆ.
ಹಂಗ ಮುಂದೆ ನಿಮ್ಮಿಂದ ಬೇಂದ್ರೆಯವರ ಇತರೇ ಹಾಡಿನ ಹರಹುಗಳನ್ನ ನಿರೀಕ್ಷಿಸುತ್ತೇವೆ.

"ಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ"
ಎಂಬಲ್ಲಿ ಗೆಣ್ಯಾ ಅನ್ನೋದಕ್ಕ "ವಿಟ" ಅನ್ನು ಅರ್ಥದಾಗ ಬೇಂದ್ರೆ ಬಳಸಿರಬಹುದೂ ಅಂತ ನನಗ ಅನ್ನಿಸ್ತು. ಹಂಗಂದ್ರ, ಈ ಜೋಗತಿಗೆ ಜನ್ಮ ಜನ್ಮದಲ್ಲೂ ಜೋಗತೀ ಅಗೋದ ಬರ್ದೈತೇನು ?

ನನ್ನಿ.

ಶಿವಕುಮಾರವರೇ,
ನಿಮ್ಮ ಪ್ರೋತ್ಸಾಹದಾಯಕ ಮಾತುಗಳಿಗೆ ಅಭಿನಂದನೆಗಳು. ಖಂಡಿತ ಬೇಂದ್ರೆಯವರ ಇತರೆ ಹಾಡುಗಳನ್ನು ವಿಮರ್ಶಿಸಲು ಪ್ರಯತ್ನಪಡುವೆ.
ಬೇಂದ್ರೆಯವರ ಕೆಲವು ಆಡು (ಧಾರವಾಡ ಕನ್ನಡ) ಪದಗಳು ಯಾವ ಅರ್ಥದಲ್ಲಿ ಬಳಸಲ್ಪಟ್ಟಿವೆ ಅನ್ನುವದು ಎಷ್ಟೋ ಜನಕ್ಕೆ ಗೊತ್ತಿಲ್ಲ. ಕನ್ನಡದ ಖ್ಯಾತ ಕವಿ, ವಿದ್ವಾಂಸ ಬಿ.ಎಮ್.ಶ್ರೀಕಂಠಯ್ಯನವರು ಒಮ್ಮೆ ಬೇಂದ್ರೆಯವರ "ಪಾತರಗಿತ್ತಿ ಪಕ್ಕಾ" ಹಾಡಿನ "ಪಾತರಗಿತ್ತಿ" ಅಂದರೇನು ಅಂತ ತಲೆಕೆಡಿಸಿಕೊಂಡಿದ್ದರಂತೆ. ಆಮೇಲೆ ಅವರಿಗೆ ಅದರರ್ಥ "ಪತಂಗ" ಎಂದು ಗೊತ್ತಾದದ್ದು.
ನಿಮ್ಮ ತರ್ಕದಂತೆ ಈ ಜೋಗತಿಗೆ ಜನ್ಮ ಜನ್ಮಕೂ ಜೋಗತಿ ಆಗೋದೇ ಬರದಿರಬಹುದು.

ಉದಯ ಅವರೇ
ಬೇಂದ್ರೆಯವರ ಹಾಡಿನ ಬಗ್ಗೆ ಭಾಳ ಚಲೋ ಆಗಿ ಬರ್ದಿರ್ರಿ.
ಹಂಗ ಅವರ ಹಾಡುಗಳು ಇರೋ ವೆಬ್ ಸೈಟ್ ಹೆಸರು ಕಳಿಸಿದ್ರ ಭಾಳ ಚಲೋ ಆಕ್ಕೆತಿ ನೋಡ್ರಿ :)

ರಾಕೇಶ್ ಶೆಟ್ಟಿ :)
ಎಲ್ಲರೊಳಗೊಂದಾಗು - ಮಂಕು ತಿಮ್ಮ ||

ರಾಕೇಶ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ನನಗೆ ಬೇಂದ್ರೆಯವರ ಹಾಡುಗಳ ವೆಬ್ ಸೈಟ್ ಯಾವುದೆಂದು ಗೊತ್ತಿಲ್ಲ. Google serachಲ್ಲಿ ಹುಡುಕಿದರೆ ಸಿಗಬಹುದೇನೋ.

ಉದಯ್ ಅವರೆ,

ಲೆಖನ ಚೆನ್ನಾಗಿದೆ.

"ಇನ್ನೂ ಯಾಕ ಬರಲಿಲ್ಲಂವ ಹುಬ್ಬಳ್ಳಿಯಾಂವಾ
ವಾರದಾಗ ಮೂರು ಸರತಿ ಬಂದು ಹೋದಂವಾ"
ಮೇಲಿನ ಸಾಲಲ್ಲಿ "ಹುಬ್ಬಳ್ಳಿಯಾಂವಾ" ಅಂದರೆ ಹುಬ್ಬಳ್ಳಿ ಊರಿನವನು ಅಂತ ಎಲ್ಲರು ಹೇಳ್ತಾರೇ ಆದರೆ ನಾನು ಯೆಲ್ಲೊ ಓದಿದ ನೆನಪು ಅದರ ಅರ್ಥ "ಹುಬ್ಬಿನ ಬಳ್ಳಿ ಯವನು" ಅಂತ ಅಂದರೆ ಅಲ್ಲಿ ಕವಿಯು ನಾಯಕನನ್ನು ಬಳ್ಳಿಯ ಹಾಗೆ ಹುಬ್ಬು ಹೊಂದಿರುವನು ಎಂದು ಕವನದಲ್ಲಿ ಪ್ರಶಂಶಿಸುತ್ತಿದ್ದಾನೆ. ಈ ಎರಡರಲ್ಲಿ ಯಾವುದೆ ಸರಿ ಎಂದು ನನಗೂ ಪಕ್ಕಾ ಗೊತ್ತಿಲ್ಲಾ. ಯಾರಾದರು ಸರಿ ಯವುದೆಂದು ತಿಳಿಸುವಿರಾ?

ಪ್ರೀತಿಯಿಂದ
ಗಿರಿ

ಬಹಳಷ್ಟು ಜನರ ಅಭಿಪ್ರಾಯದ ಪ್ರಕಾರ ಅವನು ಹುಬ್ಬಳ್ಳಿ ಊರಿನವನೇ ಹೊರತು ಬಳ್ಳಿಯ ಹಾಗೆ ಹುಬ್ಬು ಹೊಂದಿರುವವನಲ್ಲ. ಬಹುಶಃ ಇದ್ದರೂ ಇರಬಹುದು. ನನಗೆ ಗೊತ್ತಿಲ್ಲ.

ಆತ್ಮೀಯರೇ
ಬೇಂದ್ರೆಯವರ 'ಹುಬ್ಬಳ್ಳಿಯಾ೦ವ' ಬಗ್ಗೆ ನೀವು ಬರೆದದ್ದು ತುಂಬಾ ಚೆನ್ನಾಗಿದೆ. ಬೇಂದ್ರೆಯವರ ಕವನದ ಒಳಗಿನೊಳಗನ್ನು ತೆರೆದಿಟ್ಟಿದ್ದೀರ . ಇದಕ್ಕೆ ಎಂದರೆ ಈ ಕವನಕ್ಕೆ ಉತ್ತರವೆಂಬಂತೆ ಬೇಂದ್ರೆಯವರು ಬರೆದ ಮತ್ತೊಂದು ಕವನ 'ಬನ್ನಿ ಬನ್ನಿ ಕನಸುಗಳೇ' ಇದು 'ನಾದ ಲೀಲೆ' ಯಲ್ಲಿದೆ ಅದರ ಬಗ್ಗೆನೂ ಬರೀರಿ.
ಅದರ ಒಂದೆರಡು ಸಾಲುಗಳು

'ಹುಡುಗರ ಹುಡುಗಾಟದಲಿ
ಬೆಡಗಿನ ಗೆಳೆಮಾಟದಲಿ
ಬೆಳೆಸಿದ ಕೈದೊಟದಲಿ
ಕೆಳೆದ ತುಂಬಿ ಚಿಟ್ಟೆಯಂಥ
ಕನಸುಗಳೇ ಬನ್ನಿ '

ದಯವಿಟ್ಟು ಬರೀರಿ ನಿಮ್ಮ ಬರಹ ಸೊಗಸಾಗಿದೆ
ಹರೀಶ್ ಆತ್ರೇಯ

ಉದಯ ಇಟಗಿಯವರೇ,
ಪದ್ಯದ ಜೊತೆ ನಿಮ್ಮ ಗದ್ಯ ಚೆನ್ನಾಗಿದೆ..ಇನ್ನಷ್ಟು ಕವನಗಳನ್ನ ಓದಿಸಿರಿ..
-ಸವಿತ

ಮನಸಾಗಲೇ ಬೇಂದ್ರೆಯವರ ಹಾಡುಗಳನ್ನ ಗುನುಗುನಿಸುತ್ತಿದೆ :) ಒಂದೆರಡು ಸಾಲುಗಳು....
ಯುಗಯುಗಾದಿ ಕಳೆದರೂ...
ಮೂಡಲ ಮನೆಯ ಮುತ್ತಿನ ನೀರಿನ ಎರಕಾವಾ ಹೊಯ್ದಾ...
ಪಾತರಗಿತ್ತಿ ಪಕ್ಕ..ನೋಡಿದೇನ ಅಕ್ಕಾ...
ಕುಣಿಯೋಣು ಬಾರಾ..ಕುಣಿಯೋಣು ಬಾ...
ಇಳಿದು ಬಾ ತಾಯಿ ಇಳಿದು ಬಾ...
ಏಲಾವನ ಲವಲೀವನ ಲವಂಗ ವನಗಳಲಿ...
ನೀ ಹಿಂಗ ನೋಡಬೇಡ ನನ್ನ..
ನಾನು ಬಡವಿ..ಆತ ಬಡವ..ಒಲವೆ ನಮ್ಮ ಬದುಕು...
ಮುಗಿಲ ಮಾರಿಗೆ ರಾಗರತಿಯಾ....ನಂಜ ಏರಿತ್ತ...

ಸವಿತಾವರೇ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಬೇಂದ್ರೆ ನಿಮ್ಮನ್ನು ಮಾತ್ರವಲ್ಲ ಬಹಳಷ್ಟು ಜನರನ್ನು ಗುನುಗುನಿಸುವಂತೆ ಮಾಡುತ್ತಾರೆ. ಆ ಶಕ್ತಿ ಅವರಲ್ಲಿದೆ.

ಉದಯ್ ಅವರೇ,

ನಿಮ್ಮ ಲೇಖನ ನೋಡಿ ಸಂತೋಷವಾಯಿತು. ಈ ಕವನವನ್ನು ಕೆಲವು ಮಠಗಳಲ್ಲಿ ಅನುಭಾವ ಗೀತೆಯಾಗಿ ಹಾಡಲಾಗುತ್ತಿತಂತೆ. ಬೇಂದ್ರೆಯವರ ಕವನಗಳೇ ಹಾಗೆ ಎಲ್ಲ ರಸದಲ್ಲೂ ಜಾರುವ ನವನೀತದಂತೆ. ಇಲ್ಲಿ ವಿಟ ಮತ್ತು ವೇಶ್ಯೆಯ ನಡುವಿನ ಸಂಬಂಧವಲ್ಲ. ಇದೊಂದು ಅತ್ಮಸಂಗಾತದ ಹುಡುಕಾಟ. ನಮ್ಮ ವಚನಗಳಲ್ಲೂ ಸೂಳೆ ಸಂಕವ್ವೆ ಎಂಬ ವಚನಕಾರ್ತಿಯ ಪ್ರಸ್ತಾಪವಿದೆ. ಆಕೆಯು ವೃತ್ತಿಯಿಂದ ವೇಶ್ಯೆಯಾಗಿದ್ದು ನಂತರ ಶಿವತ್ವ ಪಡೆದ ದಾರಿ ಈ ಕವನದಲ್ಲೂ ವ್ಯಕ್ತವಾಗುತ್ತದೆ. ಇದೇ ರೀತಿಯ ಅರ್ಥವುಳ್ಳ ಕವನಗಳು ಕಿರ್ತನೆಗಳಲ್ಲೂ ಕಾಣಸಿಗುತ್ತವೆ. ಕೃಷ್ಣನನ್ನು ತನ್ನ ಸಖನಾಗಿ ತಾನೂ ಆಕೆಯ ಸಖಿಯಾದಂತೆ ಚಿತ್ರಿಸುವ ಪರಂಪರೆಯನ್ನು ನಾವು ನೋಡಿದ್ದೇವೆ. ಇದೇ ಮಾದರಿಯಿಂದ ಈ ಕವನವನ್ನು ನೋಡಬಹುದೇನೋ?

ಸಾತ್ವಿಕ್ ಎನ್.ವಿ

ಪ್ರೀತಿಯ ಸಾತ್ವಿಕ್,
ಬೇಂದ್ರೆಯವರ ಈ ಪದ್ಯವನ್ನು ಮಠಗಳಲ್ಲಿ ಅನುಭಾವ ಗೀತೆಯಾಗಿ ಹಾಡುತ್ತಿದ್ದ ವಿಷಯ ನನಗೆ ಗೊತ್ತಿಲ್ಲ. ಬರಿ ಶೃಂಗಾರ, ಶೋಕ, ಕರುಣಾ ರಸ ತುಂಬಿರುವ ಈ ಪದ್ಯವನ್ನು ಅದ್ಹೇಗೆ ಅನುಭಾವ ರಸದಲ್ಲಿ ಹಾಡುತ್ತಿದ್ದರೆಂಬುದು ನನಗೆ ಅಚ್ಚರಿಯಾಗುತ್ತಿದೆ. ಇರಲಿ, ನೀವು ಹೇಳಿದ ಹಾಗೆ ಇದೊಂದು ಆತ್ಮಸಂಗಾತದ ಹುಡುಕಾಟ. ಆಧುನಿಕ ಆತ್ಮಸಂಗಾತದ ಹುಡುಕಾಟ. ಆತ್ಮಸಂಗಾತದ ಜೊತೆಗೆ ಆರ್ಥಿಕ ಬದುಕನ್ನು (ಕವನದ ನಾಯಕ ಕವಿ, ಹಾಡುಗಾರ, ರಸಿಕ ಇದೆಲ್ಲಕ್ಕಿಂತ ಹೆಚ್ಚಾಗಿ ಸೆಟ್ಟರ ಹುಡುಗ ದುಡ್ಡಿದ್ದವ. ನಾಯಕಿಗೆ ಇಂಥ ಹುಡುಗನನ್ನು ಬಿಟ್ಟರೆ ಬೇರೆ ದುಡ್ಡಿನ ಹುಡುಗ ಸಿಗಲು ಸಾಧ್ಯವೆ? ಇದನ್ನು ನಾನು ಲೇಖನದಲ್ಲಿ ಹೇಳಿದ್ದೇನೆ.) ಸುಭದ್ರಗೊಳಿಸಿಕೊಳ್ಳುವ ಹುಡುಕಾಟ.
ಅಂದ ಹಾಗೆ ನಿಮ್ಮ ಹೆಸರು ತುಂಬಾ ಚೆನ್ನಾಗಿದೆ ಸಾತ್ವಿಕ್ ! Anyway, thanks for your nice comment.

ಉದಯ ಇಟಗಿಯವರೇ,
ನೂರು ರಸಗಳ ಸಾರ, ಅದು ಸಾಕ್ಷಾತ್ಕಾರ ಎನ್ನುತ್ತದೆ ಸಾಹಿತ್ಯ. ಎಲ್ಲ ರಸಗಳನ್ನು ಮೀರಿ ಬೆಳೆದಾಗಲೇ ಶಾಂತರಸ ಪ್ರಾಪ್ತಿ ಎಂದು ಕಾವ್ಯಮೀಮಾಂಸಕರ ನಿರ್ಣಯ. ಹಾಗಾಗಿ ಸಂಗಾತ್ಯವನ್ನು ಭೋಗದ ಮಟ್ಟಿಗೆ ನಿಲ್ಲುಸುವುದಕ್ಕಿಂತ ಯೋಗದ ಕಡೆ ಒಯ್ಯುವ ಸಾಧನವಾಗಬೇಕಾಗುತ್ತದೆ. ಕಿಂಚಿತ್ ತೃಪ್ತಿಗಳಿಗೆ ಈ ಕವನ ನಿಲ್ಲುವುದಿಲ್ಲವೆಂಬುದು ನನ್ನ ಭಾವನೆ. ನನ್ನ ಹೆಸರಿನ ಒಳ್ಳೆಯ ಮಾತಾಡಿದ್ದೀರಿ. ಧನ್ಯವಾದಗಳು. ನೀವು ಇಂಗ್ಲೀಷ್ ಉಪನ್ಯಾಸಕರೆಂದು ತಿಳಿದು ಸಂತೋಷವಾಯಿತು. ನನ್ನ ತಮ್ಮ ಮತ್ತು ನನ್ನ ಹೆಚ್ಚಿನ ಸ್ನೇಹಿತರು ಇಂಗ್ಲೀಷ್ ಉಪನ್ಯಾಸಕರುಗಳೇ.

ಸಾತ್ವಿಕ್ ಎನ್.ವಿ.

ಸಾತ್ವಿಕ್,
ನೀವು ಹೇಳಿರುವಿರಿ "ನೂರು ರಸಗಳ ಸಾರ, ಅದು ಸಾಕ್ಷಾತ್ಕಾರ ಎನ್ನುತ್ತದೆ ಸಾಹಿತ್ಯ. ಎಲ್ಲ ರಸಗಳನ್ನು ಮೀರಿ ಬೆಳೆದಾಗಲೇ ಶಾಂತರಸ ಪ್ರಾಪ್ತಿ ಎಂದು ಕಾವ್ಯಮೀಮಾಂಸಕರ ನಿರ್ಣಯ. ಹಾಗಾಗಿ ಸಂಗಾತ್ಯವನ್ನು ಭೋಗದ ಮಟ್ಟಿಗೆ ನಿಲ್ಲುಸುವುದಕ್ಕಿಂತ ಯೋಗದ ಕಡೆ ಒಯ್ಯುವ ಸಾಧನವಾಗಬೇಕಾಗುತ್ತದೆ." ನಿಮ್ಮ ಈ ವಾದವನ್ನು ಒಪ್ಪುವದರ ಜೊತೆಗೆ ನಾನು ಮತ್ತೊಮ್ಮೆ ಸ್ಪಷ್ಟಿಕರಿಸುತ್ತೇನೆ. ನಾನು ಲೇಖನದ ಆರಂಭದಲ್ಲಿ ಹೇಳಿರುವಂತೆ ಅವರದು ಬರಿ ಸೂಳೆ-ಗಿರಾಕಿ ಸಂಬಂಧವಲ್ಲ. ಗಂಡ ಹೆಂಡತಿಯರಷ್ಟೇ ಪವಿತ್ರವಾದ ಸಂಬಂಧವಲ್ಲದ ಸಂಬಂಧವದು. ಅವಳಿಗೆ ಅವನ ದೈಹಿಕ ಸುಖಕ್ಕಿಂತ ಮಾನಸಿಕ ಸುಖವು ಹೆಚ್ಚು ಪ್ರಿಯವಾಗುತ್ತದೆ. ಈ ಕಾರಣಕ್ಕೆ ಅವನನ್ನು ಇರು ಎಂದು ಬೇಡುತ್ತಾಳೆ. ಒಂದು ಕಡೆ ಅವಳು ಭೋಗವನ್ನು ಯೋಗದ ಕಡೆ ಒಯ್ಯುವ ಪ್ರಯತ್ನವನ್ನು ಮಾಡುತ್ತಾಳೆ. ಇನ್ನೊಂದು ಕಡೆ ಬರಿ ಯೋಗದಿಂದ ಜೀವನ ನಡೆಯಲಾರದು ಎನ್ನುವ ಕಟು ವಾಸ್ತವ ಪ್ರಜ್ಞೆಯೊಂದಿಗೆ ಆ ಸೆಟ್ಟರ ಹುಡುಗನಿಗಾಗಿ ಹುದುಕಾಟ ಮುಂದುವರೆಸುತ್ತಾಳೆ. ಆದರೆ ಕವನದಲ್ಲಿ ಈ ವಿಷಯ ತುಂಬಾ ಸೂಕ್ಷ್ಮವಾಗಿ ಹೇಳಲ್ಪಡುತ್ತದೆ. ಹೆಣ್ಣಿನ ಮನಸಿನೊಳಗಿನ ವಿಪ್ಲವಗಳನ್ನು ತುಂಬಾ ಸರಳವಾಗಿಯಾದರೂ ಮನೋಜ್ಞವಾಗಿ, ಸೂಚ್ಯವಾಗಿ ಹೇಳುವಂತಹ ಮಹಾನ್ ಕವಿ "ಬೇಂದ್ರೆಯವರು".
ನಿಮ್ಮ ತುಂಬಾ ಜನ ಸ್ನೇಹಿತರು ಇಂಗ್ಲೀಷ ಉಪನ್ಯಾಸಾಕರೆಂದು ತಿಳಿದು ಸಂತೋಷವಾಯಿತು. ಆ list ನಲ್ಲಿ ನನ್ನನ್ನೂ ಸೇರಿಸಿಕೊಳ್ಳಬಹುದು. ಅಂದ ಹಾಗೆ ನೀವೊಬ್ಬ radio jockey ಎಂದು ತಿಳಿದು ಇನ್ನೂ ಹೆಚ್ಚಿನ ಖುಶಿಯಾಯಿತು. ಉಡುಪಿಯಲ್ಲಿ ನನ್ನ ಜೀವದ ಗೆಳೆಯ ಜಿಲ್ಲಾ ಗ್ರಂಥಾಲಯ ಇಲಾಖೆಯಲ್ಲಿ deputy director ಆಗಿ ಕೆಲಸ ಮಾಡುತ್ತಿದ್ದಾನೆ. ನಾನು ಬೆಂಗಳೂರಿಗೆ ಬಂದಾಗಲೆಲ್ಲ ಅವನನ್ನು ಭೇಟಿ ಮಾಡಲು ಉಡುಪಿಗೆ ಬರುತ್ತಿರುತ್ತೇನೆ. ಉಡುಪಿಯಲ್ಲಿ ಎಲ್ಲಿ ನೋಡಿದರಲ್ಲಿ ಹಸಿರು. ಅದು ನನ್ನನ್ನು ತುಂಬಾ ಆಕರ್ಷಿಸಿದೆ.

ಇ೦ದಿನ ಆಧುನಿಕ ಬದುಕಿನ ಬದಲಾಗುತ್ತಿರುವ ಮೌಲ್ಯ, ಅಭಿರುಚಿ, ಒತ್ತಡಗಳ ನಡುವೆ ಮನುಷ್ಯನ ಸೂಕ್ಷ್ಮ ಸ೦ವೇದನೆಯ ಅಭಿವ್ಯಕ್ತಿಗಳಾದ ಸಾಹಿತ್ಯ, ಕಾವ್ಯ, ಆಧ್ಯಾತ್ಮ ಎಲ್ಲವೂ ಮೆಲ್ಲ ಮೆಲ್ಲಗೇ ನಮ್ಮಿ೦ದ ಮರೆಯಾಗುತ್ತಿರುವುದು ನಿಜಕ್ಕೂ ಜೀವನ ಪ್ರೀತಿಯಿರುವ ಎಲ್ಲ ಜೀವಿಗಳಿಗೂ ತಲ್ಲಣಗೊಳಿಸುವ ವಿಚಾರವೇ ಹೌದು. ಅ೦ತಹ ನಿರಾಶಾದಾಯಕ ವಾತಾವರಣದಲ್ಲೂ ಅಲ್ಲಲ್ಲಿ ಒ೦ದೊ೦ದು ಆಶಾಕಿರಣ ಸೂಸುತ್ತಿರುವುದು ಮನುಕುಲದ ಭರವಸೆ. ಅ೦ತಹ ಒ೦ದು ಪ್ರಯತ್ನ ನಿಮ್ಮ ಬೇ೦ದ್ರೆಯವರ ಕಾವ್ಯದ ತುಣುಕೊ೦ದರ ಹೃದಯಸ್ಪರ್ಶೀ ವಿಶ್ಲೇಷಣೆ, ವಿಮರ್ಶೆ, ಮರೆಯುತ್ತಿರುವ ಪೀಳಿಗೆಗೆ ಬೇ೦ದ್ರೆ, ಕುವೆ೦ಪು, ಅಡಿಗರ ಕಾವ್ಯದ ಶಕ್ತಿಯ ಸಿ೦ಚನ ಬೇಕು ಎನಿಸುತ್ತದೆ. ಬೇ೦ದ್ರೆಯವರು ನಮ್ಮನ್ನು ಗಾಢವಾಗಿ ಕಾಡಿಸುವ ಒಬ್ಬ ಅನನ್ಯ ಕವಿ. ಒಬ್ಬ ರಸಕವಿ. ಅವರ ಕಾವ್ಯದಲ್ಲಿ ಲೌಕಿಕದ ಹೊಳಹು ಇದ್ದರೂ ಅ೦ತ್ಯದಲ್ಲಿ ಅಲ್ಲೊ೦ದು ಅಲೌಕಿಕ ಲೋಕವೇ ತೆರೆದುಕೊಳ್ಳುತ್ತದೆ.ಓದುಗ ವಿಸ್ಮಯಗೊಳ್ಳುತ್ತಾನೆ, ಒ೦ದು ಬೆರಗಿನ ಅನುಭವದ ತೆಕ್ಕೆಯೊಳಗೆ ಸಿಲುಕುತ್ತಾನೆ. ಮ೦ತ್ರಮುಗ್ಧನಾಗುತ್ತಾನೆ. ಅ೦ಥ ಗಾರುಡಿಗ ಬೇ೦ದ್ರೆ. 'ಪ್ರಣಯಭ೦ಗದಿ೦ದ ಹುಚ್ಚು ಹಿಡಿದ ಸೂಳೆಯೊಬ್ಬಳು ತನ್ನ ಉನ್ಮಾದದಲ್ಲಿ ಈ ಹಾಡನ್ನು ಹೇಳುತ್ತಾಳೆ ಎ೦ಬ ಭಾವ ಸ೦ದರ್ಭ ಹೊ೦ದಿದ 'ಹುಬ್ಬಳ್ಳಿಯಾ೦ವಾ' ಕವನವು.
ಇದು ಎಲ್ಲರು ಹಾಡುವ ವಿರಹಗೀತೆಯಾಗಿದೆ.
'ಜೋಗ ತೇರಿಗೆ| ಮೂಗುತಿ ಅ೦ತ ನನಗ ಅ೦ದಾ೦ವಾ'
ಎ೦ದು ಹೆಮ್ಮೆ ಪಟ್ಟು ನುಡಿಯುವ ರಸಿಕ ಹುಬ್ಬಳ್ಳಿಯವನನ್ನು, ನ೦ಬಿದ ಮನೋವಿಕಾರ ಹೊ೦ದಿದ ವಿರಹದ ನುಡಿಯ ಎಳೆ ಎಳೆಯಲ್ಲಿ- ಅಶ್ಲೀಲದ ನುಡಿಯಿಲ್ಲದೆ. ಅಹ್ಲಾದಮಯ ಉನ್ನತನೆಲೆಯ ಪ್ರೇಮರಸಾಯನವನ್ನು ಅನುಭವಿಸಿದ ಪ್ರಾಮಾಣಿಕ ಅಭಿವ್ಯಕ್ತಿಯಿರುವುದು ಇವರ ವೈಶಿಷ್ಟ್ಯವಾಗಿದೆ.
ಇರು ಅ೦ದರೆ| ಬರತೇನ೦ತ|ಎದ್ದು ಹೊರಡಾ೦ವಾ
ಮರೀ ತೆಳಗ ಹಾಕಿತೆ೦ದರ| ಇದ್ದು ಬಿಡಾ೦ವಾ
ಹಿಡೀ ಹಿಡೀಲೆ| ರೊಕ್ಕಾತಗೆದು | ಹಿಡಿಹಿಡಿ ಅನ್ನಾ೦ವಾ
ಖರೇ ಅ೦ತ| ಕೈಮಾಡಿದರ| ಹಿಡsದ ಬಿಡಾ೦ವಾ
ಎ೦ಬ ಅ೦ತ್ಯಪ್ರಾಸದ ಗತಿಯಲ್ಲಿ ಅವನನ್ನು ನೆನೆಯುತ್ತ ಅ೦ವ ಅವಳಿಗೆ ಏನೆಲ್ಲ ಆನ೦ದ ನೀಡಿದ್ದ ಎ೦ದು ನುಡಿಯುವ ನಾಟಕೀಯ ಜೀವ೦ತಿಕೆ ಆ ಕವನದಲ್ಲಿದ್ದು ಒ೦ದು ಅಪರೂಪದ ವಿರಹಗೀತವಾಗಿದೆ. ಜಗದ ಒ೦ದು ಬಗೆಯ ಜೀವನದಲ್ಲಿನ; ಆ ಜೀವನಶ್ರದ್ಧೆಯ, ಸಾಮಾಜಿಕ ವ್ಯವಸ್ಥೆಯ ಸಾಚಾ ದರ್ಶನವನ್ನು ಆ ಕವನ ನೀಡುತ್ತ; ಸಾರ್ವಕಾಲಿಕ ಸತ್ಯವನ್ನು ಧ್ವನಿಸುತ್ತ, ಎಲ್ಲ ಕಾಲದ ಎಲ್ಲ ಬಗೆಯ ಜನರು ಕೇಳಿ ಉಲ್ಲಸಿತರಾಗುವ, ಸಹಜಸತ್ಯಭಾವವನ್ನು ಹೊ೦ದಿದೆ. ಅವನು ಆ ವಿರಹಿಣಿಯನ್ನು 'ಎದಿಮ್ಯಾಗಿನ ಗೆಣತಿನಮಾಡಿ| ಇಟ್ಟು ಕೊ೦ಡಾ೦ವಾ'. ಆದುದರಿ೦ದ ಆ ಜೀವ ಅವನನ್ನು ಹುಡುಕುತ್ತ 'ಹದೀ ಬೀದೀ ಹೂದೂಕತೈತ್ರೇ| ಬಿಟ್ಟ ಎಲ್ಲಾ ಹ್ಯಾ೦ವಾ'
ಇ೦ತಹ ಅಪರೂಪದ ಬೇ೦ದ್ರೆ ಕವನದ ಸ್ವಾರಸ್ಯವನ್ನು ಹ೦ಚಿದ್ದಕ್ಕೆ ನೆನಪಿಸಿದ್ದಕ್ಕೆ ಧನ್ಯವಾದಗಳು ಇಟಗಿಯವರಿಗೆ. ನಾನೂ ಒಬ್ಬ ಬೇ೦ದ್ರೆ Addict. ಸಾಧ್ಯವಾದರೆ ನನ್ನ ಅನುಭವಗಳನ್ನೂ ಸ೦ಪದಿಗರೊ೦ದಿಗೆ ಹ೦ಚಿಕೊಳ್ಳೂವ ಬಯಕೆಯೂ ಇದೆ.

ಜ್ಞಾನದೇವ ಸರ್,
ನಿಮ್ಮ ಪ್ರತಿಕ್ರಿಯೆಗೆ ಹಾಗೂ ಪ್ರೋತ್ಸಾಹದಾಯಕ ಮಾತುಗಳಿಗೆ ಧನ್ಯವಾದಗಳು. ಬೇಂದ್ರೆಯವರ ಕವನದ ಬಗೆಗಿನ ನಿಮ್ಮ ಚುಟುಕಾದ ವಿಮರ್ಶೆ ಚನ್ನಾಗಿದೆ. ಮನಸ್ಸು ಮಾಡಿದರೆ ಬೇಂದ್ರೆ ಬಗೆಗೆ ನೀವೂ ಬರೆಯಬಹುದು. ಆ ಕೆಲಸ ಶಿಘ್ರದಲ್ಲಿ ಆಗುತ್ತದೆಂದುಕೊಂಡಿದ್ದೇನೆ.

ಜ್ಞಾನದೇವ ಸರ್,
ನಿಮ್ಮ ಪ್ರತಿಕ್ರಿಯೆಗೆ ಹಾಗೂ ಪ್ರೋತ್ಸಾಹದಾಯಕ ಮಾತುಗಳಿಗೆ ಧನ್ಯವಾದಗಳು. ಬೇಂದ್ರೆಯವರ ಕವನದ ಬಗೆಗಿನ ನಿಮ್ಮ ಚುಟುಕಾದ ವಿಮರ್ಶೆ ಚನ್ನಾಗಿದೆ. ಮನಸ್ಸು ಮಾಡಿದರೆ ಬೇಂದ್ರೆ ಬಗೆಗೆ ನೀವೂ ಬರೆಯಬಹುದು. ಆ ಕೆಲಸ ಶಿಘ್ರದಲ್ಲಿ ಆಗುತ್ತದೆಂದುಕೊಂಡಿದ್ದೇನೆ.

ಜ್ಞಾನದೇವ ಸರ್,
ನಿಮ್ಮ ಪ್ರತಿಕ್ರಿಯೆಗೆ ಹಾಗೂ ಪ್ರೋತ್ಸಾಹದಾಯಕ ಮಾತುಗಳಿಗೆ ಧನ್ಯವಾದಗಳು. ಬೇಂದ್ರೆಯವರ ಕವನದ ಬಗೆಗಿನ ನಿಮ್ಮ ಚುಟುಕಾದ ವಿಮರ್ಶೆ ಚನ್ನಾಗಿದೆ. ಮನಸ್ಸು ಮಾಡಿದರೆ ಬೇಂದ್ರೆ ಬಗೆಗೆ ನೀವೂ ಬರೆಯಬಹುದು. ಆ ಕೆಲಸ ಶಿಘ್ರದಲ್ಲಿ ಆಗುತ್ತದೆಂದುಕೊಂಡಿದ್ದೇನೆ.