ಹಿರಿಯ ಕನ್ನಡ ವಿದ್ವಾಂಸ, ಸಮರ್ಥ-ಇಂಗ್ಲೀಷ್ ಬೋಧಕ, ಖ್ಯಾತ ಚರಿತ್ರಕಾರ, ಡಾ. ಶ್ರೀನಿವಾಸ ಹಾವನೂರ್ ರವರಿಗೆ, 'ನಾಡೋಜ ಪ್ರಶಸ್ತಿ' !

To prevent automated spam submissions leave this field empty.

ಡಾ. ಶ್ರೀನಿವಾಸ ಹಾವನೂರರ ೮೦ ರ ಹುಟ್ಟುಹಬ್ಬದ ಶುಭ-ದಿನದಂದು ಈ ಪ್ರಶಸ್ತಿ ಪ್ರದಾನಮಾಡಿ ಗೌರವಿಸಲಾಯಿತು. ಈ ಸಂದರ್ಭವನ್ನು ಕುರಿತು 'ಉದಯವಾಣಿ' ಪತ್ರಿಕೆಯ 'ಸಾಪ್ತಾಹಿಕ ಸಂಪದ' ವಿಭಾಗದಲ್ಲಿ, ಡಾ. ಬಿ. ಶಿವರಾಮ ಶೆಟ್ಟಿಯವರು, ಬರೆದ ಲೇಖನ, ( ಶ್ರೀನಿವಾಸ ಹಾವನೂರ-'ಮೊದಲುಗಳನ್ನು ದಾಖಲಿಸುವ ಚರಿತ್ರೆಕಾರ' ಪುಟ-೮, ಡಿಸೆಂಬರ್, ೨೮, ೨೦೦೮.) ಹಾವನೂರ್ ರವರ ಸಮಗ್ರ ಕನ್ನಡ ಸಾಹಿತ್ಯಿಕ ಕೃಷಿಗಳಮೇಲೆ ಬೆಳಕು ಚೆಲ್ಲುತ್ತದೆ. ಈ ಲೇಖನವನ್ನು ಓದಲು ಸಾಧ್ಯವಾಗದ ಕನ್ನಡ ಜನತೆಗೆ ನೆರವಾಗುವಂತೆ, ಲೇಖನದ ಕೆಲವು ಆಯ್ದ ಭಾಗಗಳನ್ನು ಕೆಳಗೆ ವರದಿಮಾಡಿದ್ದೇನೆ. ಲೇಖನದ ಉಳಿದ ಭಾಗ, ಅತ್ಯಂತ ರೋಚಕವಾಗಿ ಮೂಡಿಬಂದಿದೆ. ಅವನ್ನು ಓದಿ...

ಡಾ. ಶ್ರೀನಿವಾಸ ಹಾವನೂರ್ ರವರಿಗೆ ಸಂದ ಪ್ರಶಸ್ತಿಗಳು ಹಲವಾರು.

* 'ಕನ್ನಡರಾಜ್ಯೋತ್ಸವ' ಪ್ರಶಸ್ತಿ,
* ಸಂದೇಶ,
* 'ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ'
* 'ಆಳ್ವಾಸ್ ನುಡಿಸಿರಿ',
* 'ಕನ್ನಡ ಗಣಕ ಪರಿಶತ್ತಿನಿಂದಲೂ ಪುರಸ್ಕೃತರು'.
* ೧೩ ನೆಯ 'ಅಖಿಲಕರ್ನಾಟಕ ಇತಿಹಾಸ ಸಮ್ಮೇಳನ ದ ಅಧ್ಯಕ್ಷತೆ',
* 'ಅಖಿಲ ಕರ್ನಾಟಕ ಇತಿಹಾಸ ಸಮ್ಮೆಳನದ ಅಧ್ಯಕ್ಷತೆ'

ಡಾ. ಹಾವನೂರರನ್ನು ಕನ್ನಡ ವಿಶ್ವವಿದ್ಯಾಲಯದ 'ನಾಡೋಜಾ ಪ್ರಶಸ್ತಿ' ಯಿಂದ ಸನ್ಮಾನಿತರಾಗಿರುವುದು, ನಮ್ಮನ್ನು ನಾವು ಗೌರವಿಸಿಕೊಂಡಂತೆ ! ೮೦ ರ ಹರಯದಲ್ಲೂ, ಶ್ರೀನಿವಾಸ ಹಾವನೂರರು ಅತ್ಯಂತೆ ಶ್ರಧ್ಧೆಯಿಂದ ತಮ್ಮ ಸಾಹಿತ್ಯಕೃಷಿಯ ಕೆಲಸದಲ್ಲಿ ತೊಡಗಿದ್ದಾರೆ. ದಣಿವರಿಯದ ಮಹಾಚೇತನ ಅವರು ! ಕರ್ನಾಟಕ ಸಾಹಿತ್ಯದ ಇತಿಹಾಸದಲ್ಲಿ ಹಲವಾರು ಪ್ರಥಮಗಳನ್ನು ಕಂಡುಹಿಡಿದು, ಅವುಗಳನ್ನು ಅತ್ಯಂತ ಸಮರ್ಥವಾಗಿ ಪ್ರಸ್ತುತಪಪಡಿಸುವುದು, ಮತ್ತು ಮೊದಲುಗಳ ಪಟ್ಟಿಯನ್ನು ಬೇರೆಯವರು ಮುಂದುವರೆಸಲು ಅನುವುಮಾಡಿಕೊಡುವುದು, ಹಿರಿಯ-ಸಂಶೋಧಕ, (Senior Litterateur) ರವರ ರಕ್ತದಲ್ಲಿ ಬೆರೆತುಹೋಗಿದೆ. ಅವರ ಸಂಶೋಧನಾ ಸಾಮರ್ಥ್ಯ, ಹಾಗೂ ಅದರಲ್ಲಿನ ಅತೀವ ಆಸ್ಥೆ, ಹಾಗೂ ನಿರಂತರ ಕಾಳಜಿಗಳೇ ಅವರ 'ಹಾವನೂರುತನ' ವನ್ನು ಪ್ರದರ್ಶಿಸುತ್ತವೆ. ಖಂಡಿತವಾಗಿಯೂ ಅವರೊಬ್ಬ ಅಸಮಾನ್ಯ- ಚರಿತ್ರಕಾರರೆಂಬುದರಲ್ಲಿ ಎರಡುಮಾತಿಲ್ಲ !

ಡಾ. ಹಾವನೂರರು, ಕನ್ನಡ ಸಾಹಿತ್ಯದ ಹಲವಾರು ಹಸ್ತಪ್ರತಿಗಳು 'ತಾಡವೋಲೆ' ಗಳನ್ನು ಸಂಗ್ರಹಿಸಿ, ಅವುಗಳು ಸಾರುವ ಸಾರಗಳ, ಕ್ಷ-ಕಿರಣಗಳನ್ನು ಸಾಹಿತ್ಯಾರಾಧಕರ ಗಮನಕ್ಕೆ ತಂದಿದ್ದಾರೆ. ಮೊಟ್ಟಮೊದಲನೆಯದಾಗಿ, ಅವರು ಮಾಡಿದ, ಕನ್ನಡ ನಾಡು-ನುಡಿಯ ಹಲವಾರು ಸಂಗತಿಗಳ ಅತ್ಯಪೂರ್ವ ಆಕರಗಳ ಸಂಗ್ರಹ- ಇದಕ್ಕಾಗಿ ಹಾವನೂರರರು ಪಡದ ಶ್ರಮವಿಲ್ಲ. ಅವು ಭಾರತದಲ್ಲಿನ, ಹಳೆ-ಮನೆಗಳ ಅಟ್ಟ, ಅಥವಾ ಅಲ್ಲಿ ಇಲ್ಲಿ ಸಿಕ್ಕ ರಸ್ತೆಯ ಮೌಲಿಕ ಧೂಳುಹತ್ತಿದ ಕಾಗದದ ತುಂಡುಗಳು ಸಿಕ್ಕರೂ ಸಾಕು, ಅವು ಸಾವನೂರರ ಗಮನ ಥಟ್ಟನೆ ಸೆಳೆಯುತ್ತವೆ ; ಅಥವಾ ಅವುಗಳ ಬಗ್ಗೆ ಸೇರಿಸಲು ಅನುಕೂಲಕರವಾದ ವಿವರಗಳು ವಿದೇಶಗಳಲ್ಲಿ ಲಭ್ಯವಾಗುವುದಾದರೆ ಅಲ್ಲಿಗೆ ಹೋಗಲೂ ಅವರು ಸಿದ್ಧ. ಕನ್ನಡನಾಡು ನುಡಿಯ ಹಲವಾರು ಸಂಗತಿಗಳನ್ನು, ಆಕರಗಳ ಮೂಲಕ ಬೆಳಕು ಕಾಣಿಸಿರುವ ಒಬ್ಬ ವಿಶೇಷ ಅಧ್ಯಯನಶೀಲ ವ್ಯಕ್ತಿ. ಅವರು ತತ್ಕಾಲದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಕನ್ನಡಭಾಷೆಯ ಜೊತೆ ಸೇರಿಸಿ ತಮ್ಮ ಅಧ್ಯಯನದಲ್ಲಿ ಅನೇಕ ದಶಕಗಳ ಮೊದಲೇ ಪ್ರಾರಂಭಿಸಿ ಕನ್ನಡ, ತುಳು, ಕೊಡವಭಾಷೆಗಳಲ್ಲಿ, ಅಧ್ಯಯನ ನಡೆಸಲು ಒಂದು 'ಮಾಹಿತಿ ಕೇಂದ್ರ' ವನ್ನು ಹುಟ್ಟುಹಾಕಿದ್ದಾರೆ. 'ವಿಭಾಗೀಯ ಗ್ರಂಥಾಲಯ' ದ ಸ್ಥಾಪನೆ, ದಕ್ಷಿಣ ಕನ್ನಡ, ಮತ್ತು ಕೊಡಗು, ಪ್ರಾಂತ್ಯಗಳ ಸಾಂಸ್ಕೃತಿಕ ವಸ್ತುಸಂಗ್ರಹಾಲಯ' ದ ಸ್ಥಾಪನೆ, ಅವರ ಕ್ರಿಯಾಶೀಲತೆಯನ್ನು ಪ್ರಸ್ತುತಪಡಿಸುವ, ನಮಗೆ ತಿಳಿದ ಕೆಲವೇ ಉದಾಹರಣೆಗಳು.

ಕೊಡವ ಭಾಷೆ, ಸಂಸ್ಕೃತಿ,ಇತಿಹಾಸ, ಸಾಹಿತ್ಯಗಳನ್ನು ಪ್ರತಿಪಾದಿಸುವ ಐಚ್ಛಿಕ ವಿಷಯದ ಪತ್ರಿಕೆಯೊಂದನ್ನು, ಸ್ನಾತಕೋತ್ತರ ಶಿಕ್ಷಣ ಮಟ್ಟದಲ್ಲಿ ಆರಂಭಿಸಿದ್ದಲ್ಲದೆ, ವೆಂಕಟಾರಾಜ ಪುಣಿಂಚಿತ್ತಾಯರು ಸಂಪಾದಿಸಿದ, ತುಳು-ಭಾಷೆ, ಲಿಪಿಯಲ್ಲಿ ಬರೆದಿರುವ ತುಳುಭಾಷೆಯ ಮೊತ್ತಮೊದಲ ಕಾವ್ಯವೆಂದು ಪರಿಗಣಿಸಲ್ಪಟ್ಟಿರುವ, 'ಶ್ರೀ ಭಾಗವತೋ ಮಹಾಕಾವ್ಯ' ದ ಪ್ರಕಟಣೆಯ ಯೋಜನೆ ಕೈಗೊಂಡಿದ್ದಾರೆ. 'ಬಸೆಲ್ ಮಿಶನ್' ನವರು ೧೯ ನೆಯ ಶತಮಾನದಲ್ಲೇ ಮಾಡಿದ ಸಂಗತಿಗಳ ಆಧಾರದಮೇಲೆ, ತುಳು ಪಠ್ಯ ಪುಸ್ತಕ ಪ್ರಕಟಣೆ, ತುಳುವಿನಲ್ಲಿ ಶಿಕ್ಷಣದ ಅಗತ್ಯತೆ, ಮತ್ತು ಸಾಧ್ಯತೆಗಳ ಬಗ್ಗೆ, ಬರೆದರು. ಅವರು ನಡೆಸಿದ ವಿಚಾರ ಸಂಕಿರಣಗಳು, ಕಮ್ಮಟಗಳು, ಜ್ಞಾನೋತ್ಪತ್ತಿಯ ಕೇಂದ್ರವಾಗಿ ಮಾರ್ಪಾಡು ಬೌದ್ಧಿಕಚರ್ಚೆಗಳ ಮೂಲಕ, ಕನ್ನಡ ಸಂಶೋಧನೆಯ, ವಿಧಿ-ವಿಧಾನಗಳು, ಹಾಗೂ ಅದರ ಪಥ, ಇವುಗಳೆಲ್ಲಾ ಒಂದು ಅತ್ಯುತ್ತಮ ಉದಹರಣೆಗಳರೂಪವಾಗಿವೆ. ಕನ್ನಡ ಸಾಹಿತ್ಯ ಸಂಶೋಧನೆಯ ಇತಿಹಾಸದಲ್ಲಿ, ಅಭೂತಪೂರ್ಣ ಸ್ಮರಣೆಯಾಗಿ ಉಳಿದಿವೆ.

ಕನ್ನಡ ನಾಡಿನ ಹಲವಾರು ಪ್ರಥಮಗಳ ಪಟ್ಟಿಗಳು ಅವರ ಬತ್ತಳಿಕೆಯಲ್ಲಿವೆ :

* ಕನ್ನಡದ ಪ್ರಪ್ರಥಮ ಪತ್ರಿಕೆ, 'ಮಂಗಳೂರು ಸಮಾಚಾರ', ಪ್ರಕಟವಾದದ್ದು, ೧೮೪೩ ರಲ್ಲಿ. ಹೊಸಕನ್ನಡ ಕವಿತೆಯ ಆರಂಭವು ಸುಮಾರು ೧೮೪೮ ರಷ್ಟು ಹಳೆಯದೆಂಬ ತೋರಿಸಿದ್ದು, ಕನ್ನಡ ಪತ್ರಿಕೋದ್ಯಮದ ಬೆಳವಣಿಗೆ, ಸುಮಾರು ೧೪೦೦ ಪತ್ರಿಕೆಗಳ ದಾಖಲೆಗಳ ಆಧಾರದಮೇಲೆ, ವಿಶದಗೊಳಿಸಿದ್ದು. ಕಾದಂ-ಕಥನವೆಂಬ ಸೃಜನಶೀಲ ಪ್ರಾಕಾರವನ್ನು ರೂಢಿಸಿ, ಕಾದಂಬರಿಕಾರರ ಭಾಷೆಯಲ್ಲಿಯೇ ಇಡಿಯ ಕಥಾನಕವನ್ನು ಕೊಡುವ ಕ್ರಮವನ್ನು ಕನ್ನಡದ 'ಕಸ್ತೂರಿ' ಮಾಸ-ಪತ್ರಿಕೆಯಲ್ಲಿ ಆರಂಭಿಸಿದ್ದು. ಇತ್ಯಾದಿ.

* 'ಕಂಪ್ಯೂಟರ್' ಗಳ ಬಳಕೆಯನ್ನು ಸುಮಾರು ೩೦ ವರ್ಷಗಳ ಹಿಂದೆಯೇ, ಕನ್ನಡ ಸಾಹಿತ್ಯ, ಮತ್ತು, ಕರ್ನಾಟಕ ಸಾಹಿತ್ಯದ ಇತಿಹಾಸದ ಅಭ್ಯಾಸಕ್ಕೆ ಮೊದಲಬಾರಿ ಬಳಕೆಗೆ ತಂದರು.

ಡಾ. ಶ್ರೀನಿವಾಸ ಹಾವನೂರರ ಬಗ್ಗೆ, ಸಂಕ್ಷಿಪ್ತ ಪರಿಚಯ :

ಜನನ, ಕರ್ನಾಟಕದ ಹಾವನೂರಿನಲ್ಲಿ, ಜನವರಿ, ೧೨, ೧೯೨೮ ರಲ್ಲಿ. ಅವರ ಪ್ರಾಥಮಿಕ ಶಿಕ್ಷಣವೆಲ್ಲಾ ಹಲವಾರು ಕಡೆಗಳಲ್ಲಿ ನಡೆಯಿತು. ೧೯೫೩ ರಲ್ಲಿ 'ಡಿಪ್ಲೊಮ ಇನ್ ಲೈಬ್ರರಿಯನ್ ಶಿಪ್' ನಲ್ಲಿ ತರಬೇತಿ. ಈ ಪ್ರಶಿಕ್ಷಣದ ನಂತರವೇ ೧೯೫೬ ರಲ್ಲಿ ' book on library techniques' ಎಂಬ ಒಂದು ಪುಸ್ತಕ ಹೊರಬಂತು. ಹಾವನೂರರು ಸ್ವಲ್ಪಕಾಲ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನೌಕರಿಗೆ ಸೇರಿಕೊಂಡರು. ೫ ವರ್ಷ ಸತತವಾಗಿ ದುಡಿದರು. ಅಲ್ಲಿಂದ ೧೯೬೧ ರಲ್ಲಿ ಟಿ. ಐ. ಎಫ್ ಆರ್. ಮುಂಬೈ, ಸೇರಿದರು. ೧೯೬೯ ರಲ್ಲಿ ಗ್ರಂಥಪಾಲಕರ ನೌಕರಿ ಖಾಯಂ ಆಯಿತು. 'ವಿಲಿಂಗ್ಟನ್ ಕಾಲೇಜ್' ನಲ್ಲಿ, ೧೯೭೬-೮೨ ರತನಕ, 'ಇಂಗ್ಲೀಷ್ ಭಾಷಾ ಬೋಧಕ' ರಾಗಿದ್ದರು. ಅವರು ತಮ್ಮ ಪಿ.ಎಚ್. ಡಿ. ಗೆ ಮಂಡಿಸಿದ ಮಹಾಪ್ರಬಂಧ, ಹೊಸಗನ್ನಡ ಅರುಣೋದಯಕೃತಿ, 'ತತ್ಕಾಲದ ಆಧುನಿಕೋತ್ತರ', 'ಸಂರಚನೋತ್ತರ ಚಿಂತನಾಕ್ರಮ', ಬಹಳ ಮಹತ್ವದ ಸಂಗತಿಗಳನ್ನು ಅನಾವರಣಮಾಡಿಕೊಳ್ಳುತ್ತಾ ಹೋಗುತ್ತದೆ. 'Computerazitation and Resource sharing' ನ್ನು ಮನಸ್ಸಿನಲ್ಲಿಟ್ಟುಕೊಂಡ ಅವರು, ಹಾಗೂ ಗೆಳೆಯರೆಲ್ಲಾ ಸೇರಿ, ' BSLA ' ('Bombay Science Special Librarians' Association') ಸಂಸ್ಥೆಯನ್ನು ಹುಟ್ಟುಹಾಕಿದರು. ೧೯೬೯ ರಿಂದ ೧೯೮೨ ರವರೆಗೆ, ಮುಂಬೈ ನ 'ಟಿ. ಐ. ಎಫ್. ಆರ್' ನಲ್ಲಿ 'ಗ್ರಂಥಪಾಲಕ' ರಾಗಿದ್ದರು. ಬಿ. ಎ. ಆರ್,ಸಿ ; ಐ. ಐ. ಟಿ. ಮುಂಬೈ, ನ ಗ್ರಂಥಪಾಲಕರೆಲ್ಲಾ ಅವರಜೊತೆಯಲ್ಲಿ ಸೇರಿ, ಗ್ರಂಥ ನಿರ್ಮಾಣದ ಹಲವು ಸಮಸ್ಯೆಗಳನ್ನು ಚರ್ಚಿಸುತ್ತಿದ್ದರು. ೧೯೮೨ ರಲ್ಲಿ ಸ್ವ- ಇಚ್ಛೆಯಿಂದ ನಿವೃತ್ತರಾಗಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಾದಾರ್ಪಣೆಮಾಡಿದರು. ಅವರಿದ್ದ ಅಲ್ಪಕಾಲಾವಧಿಯಲ್ಲಿ ಮಾಡಿದ ಕಾರ್ಯಗಳು ಶ್ಲಾಘನೀಯವೆಂದು ಅವರ ಸಹೋದ್ಯೊಗಿಗಳು ಇಂದಿಗೂ ಸ್ಮರಿಸುತ್ತಾರೆ.

* ೧೯೮೨-೮೪ ರಲ್ಲಿ, ಕನ್ನಡ ಪ್ರಾಧ್ಯಾಪಕ, ಹಾಗೂ ಮುಖ್ಯಸ್ಥರಾಗಿ. ಅದೇ ತರಹ ಮುಂಬೈ ವಿಶ್ವವಿದ್ಯಾಲಯದ ೮೪-೮೯ ರಲ್ಲಿ ಮುಂಬೈ ವಿಶ್ವವಿದ್ಯಾಲಯದ ವಿದ್ಯಾಪೀಠದಲ್ಲೂ 'ಕನ್ನಡ ವಿಭಾಗದ ಮುಖ್ಯಸ್ಥ' ನಾಗಿ, ಕೆಲಸಮಾಡಿದರು.

* 'ಮುಂಬೈ ವಿಜ್ಞಾನ ಗ್ರಂಥಪಾಲರ ಸಂಘದ ಸ್ಥಾಪಕ ಕಾರ್ಯದರ್ಶಿ', ('Bombay Science Special Librarians' Association')

* ’ಯೂ. ಕೆ . ಯ ಲಿಟರರಿ ಹಾಗೂ ಲಿಂಗ್ವಿಸ್ಟಿಕ್ ಅಸೋಸಿಯೇಷನ್ ನ ಭಾರತೀಯ ಪ್ರತಿನಿಧಿ' ಯಾಗಿ,

* ಮಹಾರಾಷ್ಟ್ರ ಸರ್ಕಾರದ 'ಬಾಲಭಾರತಿಯ ಅಧ್ಯಕ್ಷ' ರಾಗಿ,

* 'ಮರಾಠಿ ಕನ್ನಡ ಸೇವಾವರ್ಧನ ಕೇಂದ್ರ' ದ ಉಪಾಧ್ಯಕ್ಷರಾಗಿ,

* ಮಿಥಿಕ್ ಸೊಸೈಟಿ, ಬೆಂಗಳೂರಿನ ಗೌರವ ನಿರ್ದೇಶಕ' ರಾಗಿ,

* ಕರ್ನಾಟಕ ಸರ್ಕಾರದ ಸಮಗ್ರ ದಾಸಸಾಹಿತ್ಯ ಯೋಜನೆಯ ಕಾರ್ಯಕಾರಿ ಸಂಪಾದಕರಾಗಿ,

*'ಮಂಗಳೂರಿನ ಕ್ರಿಶ್ಚಿಯನ್ ಸೊಸೈಟಿಯ ಗೌರವ ಸಂಶೋಧಕ' ರಾಗಿ, ಸಂಸ್ಥೆಗಳಲ್ಲಿ ತಮ್ಮ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಕನ್ನಡದಲ್ಲಿ ಬಹು-ಮೌಲಿಕ ಕೆಲಸಗಳು ನಡೆದಾಗ, ಅವನ್ನು ಮುಕ್ತವಾಗಿ ಅಭಿನಂದಿಸಿ, ಪ್ರೋತ್ಸಾಹಿಸುವ ಶ್ರೇಷ್ಟಗುಣ ಅವರದು :

ಇತ್ತೀಚೆಗಷ್ಟೇ ವಿಶ್ವಾರ್ಪಣೆ' ಗೊಂಡ 'ಕರ್ಣಾಟಕ ಭಾಗವತ' ವೆಂಬ ಉದ್ಗ್ರಂಥವನ್ನು ಡಾ. ಹಾವನೂರ್ ರವರಿಗೆ ತೋರಿಸಿದಾಗ, ಅದನ್ನು ಆಮೂಲಾಗ್ರದಿಂದ ಅಭ್ಯಸಿಸಿ, ಅದರಬಗ್ಗೆ ತಮ್ಮ ಪ್ರಾಮಾಣಿಕ ಹಾಗೂ ವಿದ್ವತ್ಪೂರ್ಣ ಅನಿಸಿಕೆಗಳನ್ನು, ’ಉದಯವಾಣಿ” ಪತ್ರಿಕೆಯಲ್ಲಿ ಪ್ರಕಟಿಸಿದ್ದನ್ನು ಇಲ್ಲಿ ಉದಾಹರಿಸಬಹುದು.

ಕ್ರಿ. ಶ. ೧೭೫೫ ರಲ್ಲಿ ರಾಮಣ್ಣಯ್ಯ ನೆಂಬ ವಿದ್ವಾಂಸರು, ಕನ್ನಡದಲ್ಲಿ ತಾಡಾವೋಲೆಗಳಮೇಲಿ ಕೆತ್ತಿದ, 'ನಿತ್ಯಾತ್ಮ ಶುಕಯೋಗಿ' ವಿರಚಿತ, ಭಾಮಿನೀಶಟ್ಪದಿಯಲ್ಲಿ ಬರೆದ 'ಕರ್ಣಾಟಕ ಭಾಗವತ'ವನ್ನು, ೧೯೯೨ ರಲ್ಲಿ ಅಕಸ್ಮತ್ತಾಗಿ ಕಂಡ, ರಾಮಣ್ಣಯ್ಯನವರ ಮರಿ-ಮರಿಮೊಮ್ಮಗ, ಡಾ. ಎಚ್. ಆರ್. ಚಂದ್ರಶೇಖರ್ ರವರು, 'ಕಂಪ್ಯೂಟರಿಕರಿಸಿ', ಅವನ್ನು ಚೆನ್ನಾಗಿ ಪಠಿಸಿ ಅರ್ಥಮಾಡಿಕೊಂಡು, ೧೫೦೦ ಪುಟಗಳ, ಸುಮಾರು ೧೨,೦೦೦ ಪದ್ಯಗಳನ್ನೊಳಗೊಂಡ ಬೃಹತ್ ಸಂಪುಟದ್ವಯಗಳನ್ನು ೧೫ ವರ್ಷಗಳ ಸತತ ಪರಿಶ್ರಮದಿಂದ ಹೊರತಂದು, 'ಲೋಕಾರ್ಪಣ' ಮಾಡಿರುವುದನ್ನು, ಡಾ. ಹಾವನೂರರು ಹೀಗೆ ಬಣ್ಣಿಸಿದ್ದಾರೆ. " ಈ ಕರ್ಣಾಟಕ ಭಾಗವತದ ಆವಿಷ್ಕಾರವು ಆಶ್ಚರ್ಯದ ಪರಮಾವಧಿಯಾಗಿದೆ." ಭಾಗವತವನ್ನು ೧೯೧೧ ರಲ್ಲಿ ಶೀ. ವೆಂಕಟರಾಮಪ್ಪನವರು ಪ್ರಕಟಿಸಿದ್ದರು. ಆದರೂ ಇದು ಅಪೂರ್ಣವಾಗಿಯೇ ಉಳಿದಿತ್ತು. ಸಮಗ್ರವಾಗಿ ಕೆಲಸ ನಡೆದಿರಲಿಲ್ಲ.

ಅದರತರುವಾಯ, ಸುಮಾರು ೧೦೦ ವರ್ಷಗಳವರೆಗೆ, ಇಷ್ಟು ಸಮಗ್ರವಾದ ಪರಿಷ್ಕೃತವಾದ, ವಿಸ್ತೃತವಾದ ಮುನ್ನುಡಿ, ಇಂಗ್ಲೀಷ್ ಭಾಷೆಯಲ್ಲಿ ವಿವರಣೆಗಳಿಂದ ಕೂಡಿದ ಸುಂದರ ಪ್ರತಿದ್ವಯಗಳು, ಸಮಗ್ರವಾಗಿ ಮೂಡಿಬಂದದ್ದು ಈಗಲೇ ! ಡಾ. ಚಂದ್ರಶೇಖರ್ ರವರಿಗೆ, ಗ್ರಂಥ ಪರಿಷ್ಕರಣೆಯಲ್ಲಿ ಸಹಾಯಕರಾಗಿ, ಡಾ. ವೆಂಕಟಾಚಲಶಾಸ್ತ್ರಿಯವರು, ಮುಂದಾಳತ್ವವಹಿಸಿ, ಒಂದು ಸಮಿತಿಯನ್ನು ರಚಿಸಿದ್ದಾರೆ. ಮುಖ್ಯತಃ ಪದಚ್ಛೇದ, ಪಾಠಭೇದ, ಗುರುತಿಸುವಿಕೆ, ಮಾತ್ರೆಗಳ ಲೆಕ್ಕ ಸರಿಹೊಂದಿಸುವಿಕೆ, ಇತ್ಯಾದಿ (Textual Editing) ಮಾಡಿ ಸಹಕರಿಸಿದ್ದಾರೆ.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು, ಮೂಲಭೂತ ವಿಜ್ಞಾನಿಯೊಬ್ಬರು, ಹಳಗನ್ನಡದಲ್ಲಿ ಬರೆಯಲ್ಪಟ್ಟ ಪುರಾತನವಾದ, ಅದುವರೆಗೆ ಹೆಸರೇ ಕೇಳಿರದ ತಾಳೆಗರಿ ಬರಹದ ಹಸ್ತಪ್ರತಿಯನ್ನು ಕೈಗೆತೆಗೆದುಕೊಂಡು, ಕಂಪ್ಯೂಟರೀಕರಿಸಿದನಂತರ, ಅದು ಮೌಲ್ಯಯುತವಾದ ಭಾಗವತವೆಂದು ಖಚಿತಪಡಿಸಿಕೊಂಡು, ಅದರ ಆಳ, ಉದ್ದ-ಗಲಗಳನ್ನು ಅತ್ಯಂತ ವೈಜ್ಞಾನಿಕವಾಗಿ ಪರಿಶೀಲಿಸಿ, ವಿಶೇಷಕಾಳಜಿಯಿಂದ ಅಧ್ಯಯನಮಾಡಿ, ಅನಂತರ ಮುದ್ರಿಸಿ, ಪ್ರೀತಿಪೂರ್ವಕವಾಗಿ ಪ್ರಕಟಿಸುವ 'ಅದಮ್ಯ ಛಲ, ಹೇಗೆ ಬಂದಿತೋ' ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಒಬ್ಬ ಶ್ರೇಷ್ಠ ಪಂಡಿತನಿಗಷ್ಟೇ ಮತ್ತೊಬ್ಬ ಬರಹಗಾರನ ಪರಿಶ್ರಮವನ್ನು ಗುರುತಿಸುವ ಶಕ್ತಿ ಇರುತ್ತದೆ. ’ಕರ್ಣಾಟಕ ಭಾಗವತ” ಗ್ರಂಥದ ಪ್ರಕಟಣೆಯಿಂದಾಗಿ, ಈಗ, ಭಾಗವತದ ಮೇಲೆ ಅಧ್ಯಯನವನ್ನು ಮುಂದುವರೆಸುವ ವಿಧ್ಯಾರ್ಥಿಗಳಿಗೆ ಪಿ. ಎಚ್. ಡಿ ಮಟ್ಟದಲ್ಲಿ ಸಹಾಯಕವಾಗಿದೆ, ಎಂದು ಮುಕ್ತಕಂಠದಿಂದ ಅಭಿನಂದಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ, ' ಅಬ್ಬಾ,' ಎನ್ನಿಸುವಷ್ಟು ಅಶ್ಚರ್ಯಕರವಾದ ಘಟನೆಯಿದು " ಎಂದು ನುಡಿದು, ಆಶೀರ್ವದಿಸಿದ್ದಾರೆ.

ಚಿತ್ರ : ಪ್ರಜಾವಾಣಿ ಪತ್ರಿಕೆಯ ಫೋಟೋ ಗ್ಯಾಲರಿಯವಿಭಾಗದಲ್ಲಿ ಪ್ರಕಟಿತ. ಡಿಸೆಂಬರ್, ೨೮, ೨೦೦೮ ರಂದು, ಡಾ. ಶ್ರೀನಿವಾಸ ಹಾವನೂರರಿಗೆ, 'ನಾಡೋಜ ಪ್ರಶಸ್ತಿ' ಯನ್ನು ವಿತರಿಸಿದ ಸಂದರ್ಬದಲ್ಲಿ ತೆಗೆದ ಚಿತ್ರ.

ಚಿತ್ರದಲ್ಲಿ, ಡಾ. ವಿವೇಕ ರೈ, ಡಾ. ಕಲಬುರ್ಗಿ, ಡಾ. ವೆಂಕಟಾಚಲ ಶಾಸ್ತ್ರಿ, ಡಾ. ನರಹಳ್ಳಿ ಸುಬ್ರಮಣ್ಯ, ಮುಂತಾದವರನ್ನು ಕಾಣಬಹುದು.

ಲೇಖನ ವರ್ಗ (Category):