ಅಮ್ಮ ಹೇಳಿದ್ದೆಲ್ಲಾ ಸತ್ಯ:

To prevent automated spam submissions leave this field empty.

ಮನೆಯಲ್ಲಿ ತಂದೆ ತಾಯಿ ಆಡುವ ಮಾತುಗಳು ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆಂಬುದಕ್ಕೆ ಒಂದು ಸತ್ಯ ಘಟನೆಯನ್ನು ಓದಿ. ಆಕಾಶದಲ್ಲಿ ಮೋಡಕವಿದ ವಾತಾವರಣವಿರುತ್ತದೆ, ತಾಯಿ ಮಗುವಿಗೆ ಹೇಳುತ್ತಾಳೆ "ಮಳೆ ಬರುತ್ತೆ,ಹೊರಗೆ ಹರವಿರುವ ಬಟ್ಟೆಯನ್ನುತೆಗೆದುಕೊಂಡು ಬಾ" ಎಂದು. ಬಟ್ಟೆ ತಂದ ಸ್ವಲ್ಪ ಸಮಯದಲ್ಲಿಯೇ ಮಳೆ ಬಂದು ಬಿಡುತ್ತೆ.ಮಗುವಿಗೆ ಅನ್ನಿಸುತ್ತೆ-ತನ್ನ ತಾಯಿ ಹೇಳಿದಂತೆ ಆಗುತ್ತೆ. ಇನ್ನೊಂದು ದಿನ ಅಪ್ಪ ಕಛೇರಿಯಿಂದ ಫೋನ್ ಮಾಡುವುದಾಗಿ ಮನೆಯಲ್ಲಿ ಹೇಳಿ ಹೋಗಿರುತ್ತಾನೆ.ಫೋನ್ ರಿಂಗಣಿಸುತ್ತದೆ, ತಾಯಿ ಮಗುವಿಗೆ ಹೇಳುತ್ತಾಳೆ " ಅಪ್ಪ ಫೋನ್ ಮಾಡಿರ ಬಹುದು ಫೋನ್ ತೆಗೆದುಕೋ"-ಮಗು ಫೋನ್ ತೆಗೆದುಕೊಳ್ಳುತ್ತೆ. ಹೌದು ಅಪ್ಪನೇ ಫೋನ್ ಮಾಡಿರುವುದು. ಈಗಲೂ ಮಗುವಿಗೆ ಅನ್ನಿಸುತ್ತೆ ನಮ್ಮ ಅಮ್ಮ ಹೇಳೋದೆಲ್ಲಾ ನಿಜ.ಕಾಲಿಂಗ್ ಬೆಲ್ ಆಗುತ್ತೆ.ಬೆಲ್ ಶಬ್ಧ ತಾಯಿಗೆ ಮಾತ್ರ ಕೇಳಿಸಿರುತ್ತೆ, ತಾಯಿ ಮಗುವಿಗೆ ಹೇಳ್ತಾಳೆ " ಹೋಗಿ ಬಾಗಿಲು ತೆಗೆ, ಯಾರೋ ಬಂದಿದ್ದಾರೆ". ಮಗು ಬಾಗಿಲು ತೆಗೆಯುತ್ತೆ. ಹೌದು ಯಾರೋ ಬಂದಿದ್ದಾರೆ. ಮಗುವಿಗೆ ಒಂದು ಸಂಗತಿ ಗ್ಯಾರಂಟಿಯಾಯ್ತು. ಅಮ್ಮ ಹೇಳೋದೆಲ್ಲಾ ನಿಜವಾಗುತ್ತೆ. ಮಗುಸ್ವಲ್ಪ ದೊಡ್ಡದಾಯ್ತು, ಶಾಲೆಗೆ ಹೋಗುವಾಗ ಹಠ ಮಾಡ್ತು, ಆಗ ತಾಯಿ ಹೇಳಿದಳು "ನೀನು ಮೂರ್ಖ, ಶಾಲೆಗೆ ಹೋಗಬೇಡ, ಹಸು ಮೇಯಿಸಲು ಹೋಗು" ಅಮ್ಮ ಹೇಳಿದ್ದೆಲ್ಲಾ ನಿಜವಾಗುತ್ತದೆಂಬುದು ಈಗಾಗಲೇ ಮಗುವಿನ ಮನಸ್ಸಿನಲ್ಲಿ ಇದೆ, ಆಮಗು ತಾನು ಮೂರ್ಖನೇ ಇರಬೇಕು, ಅಂತಾ ಅಂದು ಕೊಂಡ.ಬರಬರುತ್ತಾ ದಡ್ದನೇ ಆಗಿಬಿಟ್ಟ.ಮನ:ಶಾಸ್ತ್ರದಲ್ಲಿ ಸಂಶೋಧನೆ ಮಾಡಿರುವ ಘಟನೆ ಇದೆಂಬುದನ್ನು ಕೇಳಿದ್ದೇನೆ.
[ ನನ್ನ ಉದ್ದನೆಯ ಬರಹ ಒಂದರಲ್ಲಿ ಈಗಾಗಲೇ ಪ್ರಕಟಿಸಿರುವ ಘಟನೆ]

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹೌದು ಮಕ್ಕಳನ್ನು ಹೀಯಾಳಿಸಿ,ಮೂದಲಿಸಿ ಅವರನ್ನು ದಾರಿಗೆ ತರುತ್ತೇನೆಂಬುದು ತಪ್ಪು ನಕಾರಾತ್ಮಕ ಬೈಗುಳ ಅವರಲ್ಲಿ ನಕಾರಾತ್ಮಕ ಧೋರಣೆಯನ್ನೇ ತರುತ್ತೆ
ಹೋದ ವರ್ಷ ನನ್ನ ಮಗಳನ್ನು ಪ್ರಿ-ಸ್ಕೂಲಿಗೆ ಸೇರಿಸಿದ್ದೆ . ಒಂದು ತಿಂಗಳು ಚೆನ್ನಾಗಿಯೇ ಹೋಗುತ್ತಿದ್ದವಳು
ಒಮ್ಮೆ ಸ್ಕೂಲಿಗೆ ಹೋಗೋದಿಲ್ಲ ಎಂದು ಹಠ ಹಿಡಿದಳು
ನಂತರ ವಿಚಾರಿಸಿದರೆ ಹಿಂದಿನ್ ದಿನ ಅವರ ಮಿಸ್ ಏನೋ ಬೈದಿದ್ದರು (ಬರ್ದಿರೋದು ನೀಟ್ ಆಗಿ ಇಲ್ಲ ಎಂದು ಬೇರೆ ಮಗುವಿನ ನೋಟ್‌ಬುಕ್ ಹೋಲಿಸಿದ್ದರು) ಎಂದು ತಿಳಿಯಿತು. ಒಂದಷ್ಟು ದಿನ ಮಂಕಾಗಿ ಇದ್ದಳು.
ನಾನು ಮಗೂಗೆ ಸ್ಕೂಲಿಗೆ ಹೋಗಲು ಬಲವಂತ ಮಾಡಲಿಲ್ಲ
ಈಗ ಮನೆಯಲ್ಲಿಯೆ ಸಿಡಿ,ಡಿವಿಡಿಗಳ ಮುಖಾಂತರ ರೈಮ್ಸ್, ಹಾಡುಗಲು, ಕಲಿಸಿದ್ದೇವೆ.ಕನ್ನಡಾ ವರ್ಣಮಾಲೆಯನ್ನು ಗುರುತಿಸುತಾಳೆ, ಇಂಗ್ಲೀಷ್ ಆಲ್ಫಾಬಿಟ್ಸ್ ಓದುತ್ತಾಳೆ
ಈಗ ಸ್ಕೂಲಿಗೆ ಹೋಗಲು ಮಾನಸಿಕವಾಗಿ ಸಿದ್ದವಾಗಿಯೂ ಇದ್ದಾಳೆ

ರೂಪ

http://www.hariharapurasridhar.blogspot.com

ರೂಪ, ನಮಸ್ತೆ.
ನಿಮ್ಮ ಮಗುವಿನ ಬಗೆಗೆ ಹೇಳಿದಿರಲ್ಲಾ; ಈಗ ನನ್ನ ಮಗನ ಬಗ್ಗೆ ಹೇಳಿದರೆ ನಿಮಗೆ ನಿಜಕ್ಕೂ ಆಶ್ಚರ್ಯ ವಾಗುತ್ತೆ. ನಾನು ಆಗ ಹೊಳೇನರಸೀಪುರದಲ್ಲಿದ್ದೆ. ನನ್ನ ಮಗ ಆಗ ಪ್ರೈಮರಿ ಮೊದಲ ವರ್ಷ. ಶಾಲೆಗೆ ಕರೆದುಕೊಂಡು ಹೋಗಲು ಶಾಲೆಯ ಆಯಾ ಮನೆಗೇ ಬರುತ್ತಿದ್ದಳು. ಆಯಾ ಮನೆಗೆ ಬರುವ ಹೊತ್ತಿಗೆ ಸರಿಯಾಗಿ ಮಗ ಮನೆಯಲ್ಲಿ ನಾಪತ್ತೆ. ಕತ್ತಲಿನ ಒಂದು ರೂಮು. ಅದರಲ್ಲಿ ಮಂಚದ ಕೆಳಗೆ ಹೋಗಿ ಅವಿತುಕೊಂಡುಬಿಡುತ್ತಿದ್ದ. ಹಿಡಿದು ದಬ್ಬಿದರೂ ಆಯಾ ಜೊತೆ ಹೋಗುತ್ತಿರಲಿಲ್ಲ. ಅತ್ತು ಅತ್ತು ಸುಸ್ತಾಗಿಬಿಡುತ್ತಿದ್ದ. ಪ್ರತಿ ದಿನವೂ ಇದೇ ಗೋಳು. ಮೂರನೇ ತರಗತಿಯ ವರೆಗೂ ಶಾಲೆಗೂ ಹೋಗಲಿಲ್ಲ. ಅಕ್ಷರವನ್ನೂ ಕಲಿಯಲಿಲ್ಲ. ನನ್ನ ಪತ್ನಿಯಂತೂ ಹೆದರಿ ಹೋಗಿದ್ದಳು. ನನಗೆ ಒಂದು ಧೈರ್ಯವಿತ್ತು. ಮಕ್ಕಳಿಗೆ ಸರಿಯಾದ ತಿಳುವಳಿಕೆ ಬರುವುದು ಹನ್ನೊಂದು ವರ್ಷಕ್ಕೆಂದು ಯಾರೋ ಸಮಾಧಾನ ಹೇಳಿದ್ದರು.ಭಗವಂತ ಮಾಡಿಸಿದ ಹಾಗಾಗುತ್ತದೆ, ಎಂದು ಎಷ್ಟು ಪ್ರೀತಿಯಿಂದ ಹೇಳಲು ಸಾಧ್ಯವೋ ಅಷ್ಟು ಹೇಳಿ ಮನದೊಳಗೆ ಅಳುಕಿದ್ದರೂ ಅದನ್ನು ತೋರಗೊಡದೆ ಮೂರ್ನಾಲ್ಕು ವರ್ಷ ಕಳೆದಿದ್ದಾಯ್ತು. ನನಗೆ ಹಾಸನಕ್ಕೆ ವರ್ಗವಾಯ್ತು. ಅಲ್ಲಿ ಶ್ರೀರಾಮಕೃಷ್ಣ ವಿದ್ಯಾಶಾಲೆಯಲ್ಲಿ ಕನ್ನಡ ಮಾಧ್ಯಮಕ್ಕೆ ಮೂರನೆಯ ತರಗತಿಗೆ ಸೇರಿಸಿದೆ. ಮೊದಲು ನಾಲ್ಕು ತಿಂಗಳ ಪರೀಕ್ಷೆಯಲ್ಲಿ ತೆಗೆದ ಅಂಕಗಳು ಶೂನ್ಯ. ಐದನೆಯ ತಿಂಗಳ ಪರೀಕ್ಷೆಯಿಂದ ಶುರುವಾಯ್ತು ನೋಡಿ ಇವನ ಓಟ. ಐದನೆಯ ತಿಂಗಳ ಪರೀಕ್ಷೆಯಲ್ಲಿ " ಡಿ" ನಂತರ"ಸಿ" ಮುಂದಿನ ತಿಂಗಳು "ಬಿ" ಅಂತಿಮವಾಗಿ ಆವರ್ಷ ಅವನ ತರಗತಿಗೆ ಅವನೇ ಪ್ರಥಮ. ಮುಂದೆ ಅವನು ಇಂಗ್ಳೀಷ್ ಕಲಿತದ್ದು ಕೇಳಿದರೆ ನಿಮಗೆ ಇನ್ನೂ ಆಶ್ಚರ್ಯ ವಾಗದಿರದು. ಒಂದೇ ದಿನದಲ್ಲಿ ಅಷ್ಟೂ ಅಕ್ಷರ ಕಲಿತನೆಂದರೆ ನಂಬುವಿರಾ? ಅದು ಸತ್ಯ. ಮುಂದೆ ಎಲ್ಲಾ ತರಗತಿಗಳಲ್ಲೂ ಅವನೇ ಪ್ರಥಮನಾಗಿ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಅವನ ಶಾಲೆಗೇ ಪ್ರಥಮನಾದ. ಅಲ್ಲಿಂದ ಮುಂದೆ ಹಿಂದುರುಗಿ ನೋಡಲೇ ಇಲ್ಲ. ಇನ್ ಸ್ಟ್ರಮೆಂಟೇಶನ್ ಟೆಕ್ನಾಲಜಿಯಲ್ಲಿ ಬಿ.ಇ. ಮಾಡಿ ಈಗ ಎಮ್.ಬಿ.ಎ. ಮಾಡುತ್ತಿದ್ದಾನೆ. ಐ.ಎ.ಎಸ್ ಕೂಡ ತೆಗೆದುಕೊಳ್ಳಲಿದ್ದಾನೆ. ಈ ಪುರಾಣದಿಂದ ಬೇಸರವಿಲ್ಲ ತಾನೆ? ಬೇರೆ ತಂದೆ ತಾಯಿಯರಿಗೂ ತಿಳಿಯಲಿ -ಎಂದು ಬರೆದೆ ಅಷ್ಟೆ.

ಸರ್‌, ನಿಮ್ಮ ಹಾಗೂ ರೂಪಾ ಅವರ ಪ್ರತಿಕ್ರಿಯೆಗಳೆರಡೂ ನನ್ನ ಅನುಭವಕ್ಕೆ ಬಂದ ವಿಷಯಗಳು. ನೀವಿಬ್ಬರೂ ಹೇಳಿದ್ದು ನಿಜ: ಸಕಾರಾತ್ಮಕ ಹಾಗೂ ನಕಾರಾತ್ಮಕ ಸೂಚನೆಗಳೆರಡನ್ನೂ ಮಗು ಜೀರ್ಣಿಸಿಕೊಂಡು ಅದರಂತೆ ರೂಪುಗೊಳ್ಳುತ್ತದೆ. ಹೀಗಾಗಿ, ಮಕ್ಕಳನ್ನು ಬೆಳೆಸುವುದು ತುಂಬಾ ಜವಾಬ್ದಾರಿಯ ಕೆಲಸ. ಮಕ್ಕಳು ತಮ್ಮ ಪಾಡಿಗೆ ತಾವು ಬೆಳೆಯುತ್ತವೆ ಅಂತ ಅಂದುಕೊಳ್ಳುತ್ತಿದ್ದೆ ಮುಂಚೆ. ಈಗ ಆ ಭಾವನೆ ಬದಲಾಗಿದೆ. ನ್ಯೂಕ್ಲಿಯರ್‌ ಸಂಸಾರದಲ್ಲಿ ಮಕ್ಕಳಿಗೆ ತಕ್ಷಣ ಸಿಗುವ ಮಾದರಿ ಎಂದರೆ ಅಪ್ಪ-ಅಮ್ಮ. ಹೀಗಾಗಿ, ನಮ್ಮ ಹಲವಾರು ನಡವಳಿಕೆಗಳನ್ನು ಬದಲಿಸಿಕೊಳ್ಳುವುದು ಅನಿವಾರ್ಯ. ಅಷ್ಟೇ ಅಲ್ಲ ಉಪಯುಕ್ತವೂ ಹೌದು.

ಲೇಖನ ಚೆನ್ನಾಗಿದೆ.

- ಚಾಮರಾಜ ಸವಡಿ
http://chamarajsavadi.blogspot.com

ನನ್ನ ಪ್ರಿತಿಯ ಗೆಳೆಯ ಹರಿಹರ ರವರೆ,ಗುರು , ಚಾಮರಾಜ್ ಮತ್ತು ಗೆಳೆತಿಯಾದ ರೂಪಾ ರವರೆ ನಿಮ್ಮ ಮಾತುಗಳು ತುಂಬ ಅರ್ಥಪೂರ್ಣವಾಗಿದೆ.
ಅಮ್ಮ ಹೇಳುವ ಸತ್ಯ ಮತ್ತು ಸುಳ್ಳುಗಳ ನಡುವೆನೆ ಮಗುವಿನ ಜೀವನ ಪ್ರಾರಂಭ ಏಕೆಂದರೆ "ಮನೆಯೆ ಮೊದಲ ಪಾಠ ಶಾಲೆ ,ತಾಯಿಯೆ ಮೊದಲ ಗುರು"

ಇಂತಿ ನಿಮ್ಮ ಗೆಳೆಯ

ಮಧುಸೂದನ್ ಗೌಡ