ಸಿಡ್ನಿ ಮಾರ್ನಿಂಗ್ ಹೆರಾಲ್ಡ್ - ೨೦೦೮ರ ಟೆಸ್ಟ್ ತಂಡ

To prevent automated spam submissions leave this field empty.

ಸಿಡ್ನಿ ಮಾರ್ನಿಂಗ್ ಹೆರಾಲ್ಡ್ (ಸಿಮಾಹೆ) ಪ್ರತಿ ವರ್ಷದ ಕೊನೆಗೆ ಒಂದು ವಿಶ್ವ ಟೆಸ್ಟ್ ತಂಡವನ್ನು ಪ್ರಕಟಿಸುತ್ತದೆ. ಈ ತಂಡವು ಆ ವರ್ಷದಲ್ಲಿ ನಡೆದ ಎಲ್ಲ ಟೆಸ್ಟ್ ಪಂದ್ಯಗಳಲ್ಲಿನ ಎಲ್ಲ ಆಟಗಾರರ ಸಾಧನೆಯ ಮೇಲೆ ಅವಲಂಬಿತವಾಗಿರುತ್ತದೆ. ಈ ವರ್ಷದ ಪಟ್ಟಿ ನಿನ್ನೆ ಪ್ರಕಟಗೊಂಡಿದೆ, ಈ ವರ್ಷದಲ್ಲಿ ಇನ್ನೂ ಒಂದು ಒಳ್ಳೆಯ ಪಂದ್ಯ ಬಾಕಿಯಿದ್ದರೂ ಆ ಪಂದ್ಯದ ಫಲಿತಾಂಶ ಈ ಪಟ್ಟಿಯ ಮೇಲೆ ಪರಿಣಾಮ ಬೀರುವದಿಲ್ಲವೆನ್ನುವದು ಪಟ್ಟಿಯನ್ನು ನೋಡಿದೊಡನೆ ತಿಳಿಯುವದು. ಬಾಂಗ್ಲಾದೇಶದ ವಿರುದ್ಧದ ಸಾಧನೆಯನ್ನು ಪರಿಗಣಿಸಲಾಗಿಲ್ಲ, ಜಿಂಬಾವ್ವೆಯಂತೂ ಟೆಸ್ಟ್ ಪಂದ್ಯಗಳಿಂದ ದೂರವಿದೆ.  ಈಗ ತಂಡವನ್ನು ನೋಡೊಣ:

ಈ ವಿಶ್ವ ಟೆಸ್ಟ್ ತಂಡದ ಆರಂಭಿಕರು ಭಾರತದ ಗೌತಮ್ ಗಂಭೀರ್ ಮತ್ತು ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ . ಗಂಭೀರ ತಾವಾಡಿದ ೧೦ ಪಂದ್ಯಗಳಲ್ಲಿ ೮ನ್ನು ಕಠಿಣ ಎದುರಾಳಿಗಳ ವಿರುದ್ಧ ಆಡಿ ೩ ಶತಕಗಳ ಜೊತೆಗೆ ೭೦ರ ಸರಾಸರಿಯಲ್ಲಿ ರನ್ನುಗಳನ್ನು ಬಾರಿಸಿದ್ದಾರೆ. ಸ್ಮಿತ್ ಅಂತೂ ಈ ವರ್ಷ ಭರ್ಜರಿ ಫಾರ್ಮನಲ್ಲಿದ್ದಾರೆ, ಬ್ಯಾಟಿಂಗ್ ಮತ್ತು ನಾಯಕತ್ವಗಳೆರಡರಲ್ಲೂ. ಇತ್ತೀಚೆಗೆ ಸಾಧಿಸಿದ ಎರಡು ನಾಲ್ಕನೇ ಇನ್ನಿಂಗ್ ಗುರಿಗಳೆರಡರಲ್ಲಿ ಇವರು ಶತಕ ಗಳಿಸಿ ಉತ್ತಮ ಆರಂಭವನ್ನೇ ಕೊಟ್ಟಿದ್ದಾರೆ. ಹೀಗಾಗಿ ಇವರು ಭಾರತದ ವಿರೇಂದ್ರ ಸೆಹವಾಗ್ (೧೪೬೨ ರನ್ನುಗಳು, ಸರಾಸರಿ ೫೬) ಅವರನ್ನು ಹಿಂದಿಕ್ಕಿದ್ದಾರೆ. ಇಬ್ಬರೂ ಆರಂಭಿಕರು ಆಕ್ರಮಣಕ್ಕೆ ಇಳಿದರೆ ಎದುರಾಳಿ ಬೌಲರಗಳು ಹೆದರಬಹುದೆಂಬ ಲೆಕ್ಕಾಚಾರದಿಂದಲೂ ಇವರನ್ನು ಹೊರಗಿಟ್ಟಿರಬಹುದು!

ಇನ್ನು ಮೂರನೆಯ ಕ್ರಮಾಂಕದಲ್ಲಿ ದಕ್ಷಿಣ ಆಫ್ರಿಕಾದ ಹಾಶಿಮ್ ಆಮ್ಲಾ, ಈ ವರ್ಷ ಈ ಕ್ರಮಾಂಕದ ಘಟಾನುಘಟಿಗಳು(ದ್ರಾವಿಡ್ ಮತ್ತು ಪಾಂಟಿಂಗ್) ತಮ್ಮ ಹಿಂದಿನ ಸಾಧನೆಯನ್ನು ಪುನರಾವರ್ತಿಸಿಲ್ಲ, ಮೇಲಾಗಿ ಆಮ್ಲಾ ೫೧ರ ಸರಾಸರಿಯಲ್ಲಿ ೮೨೦ ರನ್ನು ಗಳಿಸಿದ್ದಾರೆ.

ನಾಲ್ಕನೆಯ ಕ್ರಮಾಂಕಕ್ಕೆ ಇಬ್ಬರ ನಡುವೆ ಪೈಪೋಟಿಯಿತ್ತು, ಇಂಗ್ಲೆಂಡ್ ತಂಡದ ಕೆವಿನ್ ಪೀಟರ್ಸನ್ ಮತ್ತು ಭಾರತದ ತೆಂಡುಲ್ಕರ್. ಪೀಟರ್ಸನ್ ೫೦ರ ಸರಾಸರಿಯಲ್ಲಿ ೧೦೧೫ ರನ್ನು ಗಳಿಸಿದರೆ, ತೆಂಡುಲ್ಕರ್ ೪೮ರ ಸರಾಸರಿಯಲ್ಲಿ ೧೦೬೩ ರನ್ ಗಳಿಸಿದರು, ಹೀಗಾಗಿ ಪೀಟರ್ಸನ್ ಈ ಸ್ಥಾನಕ್ಕೆ ಆಯ್ಕೆಗೊಂಡರು, ಅವರು ನಾಯಕರಾಗಿ ಹೆಚ್ಚಿನ ಒತ್ತಡದ ನಡುವೆ ರನ್ ಗಳಿಸಿದ್ದೂ ಅವರ ಸಹಾಯಕ್ಕೆ ಬಂತು.

ಐದನೆಯ ಕ್ರಮಾಂಕಕ್ಕೆ ವೆಸ್ಟ್ ಇಂಡೀಜ್ ತಂಡದ ಶಿವನಾರಾಯಣ್ ಚಂದ್ರಪಾಲ್, ಇವರು ಈ ವರ್ಷ ೧೦೧ರ ಸರಾಸರಿಯಲ್ಲಿ ೯೦೯ ರನ್ ಗಳಿಸಿದ್ದಾರೆ. ಇವರ ದೂರದ ಪ್ರತಿಸ್ಪರ್ಧಿ ಆಶ್ವೆಲ್ ಪ್ರಿನ್ಸ್ ೫೬ರ ಸರಾಸರಿಯಲ್ಲಿ ೬೨೯ ರನ್ ಮಾಡಿದ್ದಾರೆ.

ಆರನೆಯ ಕ್ರಮಾಂಕದ ಬ್ಯಾಟ್ಸಮನ್ ದಕ್ಷಿಣ ಆಫ್ರಿಕಾದ ಅಬ್ರಹಾಂ ಡಿ'ವಿಲಿಯರ್ಸ್. ೨೦೦೮ರಲ್ಲಿ ೭೫ರ ಸರಾಸರಿಯಲ್ಲಿ ೯೮೫ ರನ್ ಜೊತೆಗೆ ೪೧೪ ರನ್ ಗುರಿ ಮುಟ್ಟುವಲ್ಲಿನ ಇವರ ಶತಕ ಇವರ ಆಯ್ಕೆಯಣು ಸುರಳಿತಗೊಳಿಸಿತು. ಇವರ ಪ್ರತಿಸ್ಪರ್ಧಿ ಬ್ಯಾಟಿಂಗ್ ಗಿಂತ ಮೀನು ಹಿಡಿಯುವಲ್ಲಿ ಹೆಚ್ಚಿನ ಹಮನವಿಟ್ಟಿದ್ದು ಇವರ ಹಾದಿ ಮತ್ತಷ್ಟು ಸುಗಮ ಮಾಡಿತು.

ತಂಡದ ವಿಕೆಟ್ ಕೀಪರ್ ಮತ್ತು ನಾಯಕ, ಹೌದು ನಿಮ್ಮ ಊಹೆ ಸರಿ ಭಾರತದ ಧೋನಿ. ಕೀಪಿಂಗ್ ನಲ್ಲಿ ಕೆಲವು ಸುಧಾರಣೆ ಬೇಕಿದ್ದರೂ ಇವರ ಬ್ಯಾಟಿಂಗ್ ಮತ್ತು ನಾಯಕತ್ವ ಇವರ ಆಯ್ಕೆಯನ್ನು ಸುಗಮ ಮಾಡಿತು.

ಬೌಲಿಂಗ್ ಮುಂದಾಳುಗಳು ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್ ಮತ್ತು ಇಂಗ್ಲೆಂಡನ ರೈನ್ ಸೈಡಬಾಟಮ್. ಸ್ಟೈನ್ ತಮ್ಮ ಆಕ್ರಮಣಕಾರಿ ಬೌಲಿಂಗ್ ಮೂಲಕ ೨೨ರ ಸರಾಸರಿಯಲ್ಲಿ ೪೨ ವಿಕೆಟ್ ಕಬಳಿಸಿದರೆ, ಸೈಡಬಾಟಮ್ ೨೦ರ ಸರಾಸರಿಯಲ್ಲಿ ೪೭ ವಿಕೆಟ್ ಉರುಳಿಸಿದ್ದಾರೆ.

ನಂಬರ್ ಒಂದು ತಂಡದ ಸದಸ್ಯರೊಬ್ಬರೂ ಮೊದಲೊಂಬತ್ತರಲ್ಲಿ ಇರದಿರುವದು ಆಶ್ಚರ್ಯಕರವಲ್ಲವೇ, ಅದಕ್ಕೆಂದೇ ಹತ್ತನೆಯ ಸದಸ್ಯ ಆಸ್ಟ್ರೇಲಿಯಾದ ಮಿಷೆಲ್ ಜಾನ್ಸನ್. ಇವರು ಈ ವರ್ಷ ೨೭ರ ಸರಾಸರಿಯಲ್ಲಿ ೬೧ ವಿಕೆಟ್ ಉರುಳಿಸಿದ್ದಾರೆ, ಇವರಿಗೆ ಪೈಪೋತಿ ಕೊಟ್ಟವರು ಭಾರತದ ಹರಭಜನ್ (೬೩ ವಿಕೆಟ್). ಇಶಾಂತ್ ಶರ್ಮಾರನ್ನು ಪರಿಗಣಿಸಿದರೂ ಅವರು ೩೧ರ ಸರಾಸರಿಯಲ್ಲಿ ವಿಕೆಟ್ ಉರುಳಿಸಿದ್ದು ಅವರಿಗೆ ಸಹಾಯಕಾರಿಯಾಗಲಿಲ್ಲ.

ತಂಡಕ್ಕೊಬ್ಬ ಸ್ಪಿನ್ನರ್ ಬೇಡವೆ, ಅವರು ಶ್ರೀಲಂಕಾದ ಮುರಳಿಯಲ್ಲ ಅಜಂತಾ ಮೆಂಡಿಸ್, ತಮ್ಮ ವಿಶಿಶ್ಟ ಬೌಲಿಂಗನಿಂದ ಭಾರತೀಯ ದಾಂಡಿಗರನ್ನು ಮೋಡಿಗೆ ಸಿಲುಕಿಸಿದ ಈತನಿಗೆ ಈ ಸ್ಥಾನ ಸಿಕ್ಕಿದ್ದು ಆಶ್ಚರ್ಯವೇನಲ್ಲ. ಈ ಸ್ಥಾನಕ್ಕೆ ಬರಲು ಮುರಳಿಯ ವಿಕೆಟ್ ಕೂಡ ಉರುಳಿಸಬೇಕಾದ್ದು ಅನಿವಾರ್ಯ.

ಹನ್ನೆರಡನೆಯ ಆಟಗಾರ, ಯಾವುದೇ ವಿವಾದಾತ್ಮಕ ಹೇಳಿಕೆ ಕೊಡದಿದ್ದರೆ, ಮೀನು ಹಿಡಿಯುವುದನ್ನು ಬಿಟ್ಟರೆ ಮತ್ತು ಆರೋಗ್ಯವಂತರಾಗಿದ್ದರೆ ಆಂಡ್ರ್ಯೂ ಸೈಮಂಡ್ಸ್!!

ಕೆಲವು ಸ್ಥಾನಗಳಿಗೆ ಜಾಸ್ತಿ ಪೈಪೋಟಿ ಕಂಡುಬರದಿರುವದು ಈ ಸಲದ ವಿಶೇಷ.

ಮುಂದಿನ ವರ್ಷವೂ ಈ ವರ್ಷದ ಹಾಗೆಯೇ ಉತ್ತಮ ಟೆಸ್ಟ್ ಪಂದ್ಯಗಳು ನಡೆಯಲೆಂಬ ಹಾರೈಕೆಯೊಂದಿಗೆ ಈ ಲೇಖನಕ್ಕೆ ಮುಕ್ತಾಯ.

ಲೇಖನ ವರ್ಗ (Category):