ಇಪ್ಪತ್ತರಲ್ಲೇ ಎಪ್ಪತ್ತರಂತೆ ಕಾಣುವ ಯುವಜನಾಂಗ ಹಾದಿತಪ್ಪುತ್ತಿರುವುದೆಲ್ಲಿ?

To prevent automated spam submissions leave this field empty.

ನೀರು ಸೇದಿ ಸೇದಿ
ನೆಲವ ಅಗೆದು, ಅಗೆದು
ಎಪ್ಪತ್ತಾದರೂ ಇಪ್ಪತ್ತರಂತೆ ಕಾಣುತ್ತಿದ್ದರು ಅಂದಿನವರು!
ಬೀಡಿ, ಸಿಗರೇಟ್ ಸೇದಿ ಸೇದಿ
ಗುಟ್ಕಾ, ಪಾನ್ ಪರಾಗ್ ಅಗಿದು, ಅಗಿದು
ಇಪ್ಪತ್ತರಲ್ಲೇ ಎಪ್ಪತ್ತರಂತೆ ಕಾಣುತ್ತಾರೆ ಇಂದಿನವರು!

ಈ ಚುಟುಕು ಕವನ ಎಷ್ಟೊಂದು ಅರ್ಥಗರ್ಭಿತ ಅಲ್ಲವೇ? ಇಂದಿನ ಯುವ ಸಮುದಾಯ ಎಲ್ಲಿ ದಾರಿ ತಪ್ಪುತ್ತಿದೆ ಎಂಬ ಪ್ರಶ್ನೆಗೆ ನಿಖರವಾಗಿ ಉತ್ತರ ಹೇಳಿಬಿಡುವ ಈ ಚುಟುಕು, ಮೂರ್ತಿ ಚಿಕ್ಕದು, ಕೀರ್ತಿ ದೊಡ್ಡದು ಎಂಬ ಗಾದೆಯನ್ನು ನೆನಪಿಸುತ್ತದೆ.
ಇಸ್ಪೀಟ್ ಗೊತ್ತಿಲ್ಲ, ನೀರು ಕುಡಿದದ್ದು ಬಿಟ್ಟರೆ ಬೇರೇನನ್ನೂ ಕುಡಿದಿಲ್ಲ, ಹುಡುಗಿಯರೆಂದರೆ ಅಲರ್ಜಿ, ಲಾಟರಿಯಿಂದ ಬಲುದೂರ, ಸಿಗರೇಟ್ ಹೊಗೆ ಕಂಡರೆ ಮಾರುದ್ದ, ಗಾಂಜಾ, ಡ್ರಗ್ಸ್ ಎಂದರೇನು? ಎನ್ನುವ ಯುವಕ ಎಂದರೆ ತನ್ನ ಸಹಪಾಟಿಗಳ ದೃಷ್ಟಿಯಲ್ಲಿ ‘ಗಾಂಧಿ’ ಎಂದೇ ಬಿಂಭಿತ.
ಬರೇ ಓದಿಕೊಂಡು ಕಾಲ ಕಳೆಯುವ, ಬೇರೆ ಯಾವುದರಲ್ಲೂ ಆಸಕ್ತಿಯನ್ನೇ ತೋರದ ವಿದ್ಯಾರ್ಥಿಗಳು, ತಾವು ಓದುವ ಶಾಲೆ, ಕಾಲೇಜುಗಳಲ್ಲೇ ಅಸ್ಪೃಷ್ಯರು. ವಿದ್ಯಾರ್ಥಿ ಜೀವನವೆಂದರೆ ಎಂಜಾಯ್ ಮಾಡುವುದು ಎಂದೇ ತಿಳಿದಿರುವ ಮಂದಿ ಓದುವ ವಿದ್ಯಾರ್ಥಿಗಳಿಂದ ದೂರವೇ ಉಳಿಯುವುದು ಇಂದಿನ ವಿಶೇಷ. ಯಾರದೋ ದುಡ್ಡಿನಲ್ಲಿ ಯೆಲ್ಲಮ್ಮನ ಜಾತ್ರೆ ಮಾಡುತ್ತಾ, ಸಿನಿಮಾ, ಟಾಕೀಸ್, ಬಸ್ ನಿಲ್ದಾಣ, ತಮ್ಮ ಮಾಮೂಲಿ ಅಡ್ಡಗಳಲ್ಲಿ ಕಾಲ ಕಳೆಯುತ್ತಾ ಇರುವುದು ಇವರ ಟ್ರೆಂಡ್.
ಇಂಥಹ ಆಲೋಚನೆಯಲ್ಲಿ ಯುವತಿಯರೂ ಹಿಂದೆ ಬಿದ್ದಿಲ್ಲ. ಕಾಲೇಜು ಮೆಟ್ಟಿಲು ಹತ್ತಿದ ದಿನದಿಂದಲೇ ಲೋಕವೆಲ್ಲಾ ಸುಂದರವಾಗಿ ಕಾಣುವಾಗ ತಾವೂ ಇನ್ನಷ್ಟು ಸುಂದರ ಕೊಡುಗೆ ನೀಡಲು ಮುಂದಾಗುತ್ತಾರೆ. ಪೆಪ್ಸಿ, ಕೋಕ್ ನಂತಹಾ ಪಾನೀಯಗಳು ಇವರ ಕ್ಯನಲ್ಲಿ ಫ್ಯಾಷನ್ ಆಗಿಬಿಡುತ್ತವೆ. ಪಾಸಾದ್ರೆ ಕಾಲೇಜು, ಫೇಲಾದ್ರೆ ಮ್ಯಾರೇಜು ಇದ್ದೇ ಇದೆಯಲ್ಲ ಎಂಬ ಭರವಸೆ ಫ್ಯಾಷನ್ ಲೋಕದ ಕದ ತಟ್ಟಲು ಪ್ರೇರೇಪಿಸಲೂಬಹುದು. ಇದರರ್ಥ ಫ್ಯಾಷನ್ ಗೆ ಹೊರತಾದ ಯುವತಿಯರು ಇಲ್ಲವೆಂದೇನಿಲ್ಲ.
ಯುವಕರಲ್ಲಿ ಇಂದು ಹೆಚ್ಚಾಗಿ ಕಂಡುಬರುವುದು ಸಿಗ್ರೇಟ್ ಸೇವನೆ. ಇದೊಂದು ಫ್ಯಾಷನ್. ಕಾಲೇಜು ವಿದ್ಯಾರ್ಥಿಗಳಲ್ಲಿ ಸಿಗ್ರೇಟ್ ಸೇದುವವರಿಗೆ ಒಂದು ಉನ್ನತ ಸ್ಥಾನ! ಅದೂ ವಿಲನ್ ಪಟ್ಟ. ಸಿಗರೇಟ್ ಜೊತೆಗೆ ಪಾನ್ ಪರಾಗ್ ಇದ್ದರೆ ಮಜಾ ಎಂದು ಯಾರೋ ಅಂದ್ರೆ ಅದನ್ನು ಶಿರಷಹಾ ಇವ್ರು ಪಾಲಿಸುತ್ತಾರೆ. ಇವೆರೆಡೂ ಇದ್ದರೆ ಒಂದು ಸೀನ್ ಕ್ರಿಯೇಟ್ ಮಾಡಲು ಆಗೊಲ್ಲ, ಜೊತೆಗೆ ಬೀಯರ್ ಇದ್ದರೆ ಅದರ ಮಜಾನೇ ಬೇರೆ ಎಂದು ಮುಂದುವರೆಯುತ್ತಾರೆ.
ಕಾಲೇಜಿನ ಕ್ಯಾಂಪಸ್ ನಲ್ಲಿ ಕಿಡಿಗೇಡಿಗಳು ಗಾಂಜಾ, ಅಫೀಮು ಮಾರಾಟ ಮಾಡುವ ಸುದ್ದಿ ಇವರ ಕಿವಿಗೆ ಸೋಕಿದರೆ ಸಾಕು, ತಕ್ಶಣ ಅದರ ರುಚಿಯನ್ನೂ ನೋಡೋಣ ಎಂದು ಅಲ್ಲಿಗೆ ಹಾಜರಿ ಕಡ್ಡಾಯವಾಗುತ್ತದೆ.
ಇದರ ಪ್ರಭಾವದಿಂದ ಇವರು ಹಾಳಾಗುವುದಲ್ಲದೆ ತಮ್ಮ ಪಡೆಯನ್ನೇ ಹಾಳುಮಾಡುತ್ತಾರೆ. ಒಬ್ಬರನ್ನು ನೋಡಿ ಮತ್ತೊಬ್ಬರು ಕಲಿತು, ತಮ್ಮ ಭವಿಷ್ಯದ ಹಾದಿಯನ್ನು ದುರ್ಗಮ ಮಾಡಿಕೊಳ್ಳುತ್ತಾ ಸಾಗುವ ಇವರು, ತಮ್ಮ ಅವನತಿಯ ಹಾದಿ ತುಳಿಯುತ್ತಾರೆ ಎಂಬುದು ಕಟುವಾದ ಸತ್ಯ!
ಇನ್ನು ಇಂದಿನ ದಿನಗಳಲ್ಲಿ ನಡೆಯುತ್ತಿರುವ ಬಹುಪಾಲು ಭಯೋತ್ಪಾದನೆ ಇರಬಹುದು, ಕೊಲೆ, ಸುಲಿಗೆ, ದರೋಡೆ ಮುಂತಾದ ಚಟುವಟಿಕೆಗಳಲ್ಲಿ ಯುವಕರದೇ ಸಿಂಹಪಾಲು.
ಅಂದರೆ ಯುವಕರನ್ನು ಸರಿದಾರಿಗೆ ತರಲು ಆಗುವುದಿಲ್ಲವೇ?
ಖಂಡಿತಾ ಆಗುತ್ತದೆ. ದಾರಿತಪ್ಪಿ ನಡೆಯುತ್ತಿರುವ ಯುವಜನತೆಯಲ್ಲಿ ಚಿಂತನೆ, ದೂರದೃಷ್ಟಿ, ಕುತೂಹಲ, ಸಂಶೋಧನೆ, ಆತ್ಮವಿಶ್ವಾಸ, ವ್ಯಚಾರಿಕ ದೃಷ್ಟಿಕೋನ ಮುಂತಾದವುಗಳನ್ನು ಭಿತ್ತಿ ಬೆಳೆಸಿದರೆ ಮಾತ್ರ ಸರಿದಾರಿಗೆ ತರಲು ಸಾಧ್ಯ ಅಲ್ಲವೇ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮಕ್ಕಳಿಗೆ ಬಾಲ್ಯದಿಂದಲೇ ಓಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಶಾಲೆಯಲ್ಲಿ ಶಿಕ್ಷಕರು ಬೆಳೆಸಬೇಕು..... ಆಗ ಇಂಥ ಕೆಟ್ಟ ವಿಚಾರಗಳಲ್ಲಿ ಬೇರೆಯವರ ಪ್ರಭಾವ ಯುವಕರಲ್ಲಿ ಬೀಳುವುದು ತಪ್ಪುತ್ತದೆ......

ನಾಗೇಂದ್ರರವರೇ

ಬರೇ ಪುಸ್ತಕದಿಂದ ಅಥವಾ ಶಿಕ್ಷಕರಿಂದ ಈ ಕೆಲಸ ಸಾಧ್ಯವಿಲ್ಲ, ಮನೆಯೇ ಮೊದಲ ಪಾಠ ಶಾಲೆ ಅಂತಾರೆ, ನಾನು ಹೇಳುವ ವಿಚಾರ ಎಲ್ಲ ಮನೆಯಲ್ಲೂ ಇರಬಹುದು, ಅಥವಾ ಇರದಿರಬಹುದು :.............

ನಮ್ಮಗಳ ಮನೆಗಳಲ್ಲಿ ತಂದೆ, ತಾತ, ಚಿಕ್ಕಪ್ಪ, ದೊಡ್ಡಪ್ಪ, ಮಾವ ಮತ್ತಿನ್ಯಾರೋ ಸಿಗರೇಟು, ತಂಬಾಕು, ಮುಂತಾದ ಚಟಗಳಿಗ ದಾಸರಾಗಿರುತ್ತಾರೆ, ಆ ಮನೆಯಲ್ಲಿ ಹುಟ್ಟುವ ಪುಟ್ಟ ಮಗು ಎಲ್ಲರೊಂದಿಗೆ ಬೆರೆತು ತನ್ನತನವನ್ನ ರೂಢಿಸಿಕೊಳ್ಳುತ್ತಿರುತ್ತದೆ, ಉದಾ: ನಮ್ಮ ಮನೆಯಲ್ಲಿ ನಮ್ಮ ಚಿಕ್ಕಪ್ಪ ನನ್ನನ್ನು ಬಹಳ ಪ್ರೀತಿಸುತ್ತಿದ್ದು, ಮನೆಗೆ ಒಬ್ಬನೆ ಮಗುವೆಂದು ಎಲ್ಲೆಡೆಯೂ ನನ್ನನ್ನು ಕರೆದುಕೊಂಡು ಹೋಗುತ್ತಿದ್ದಾನೆ ಅಂದುಕೊಳ್ಳಿ, ಆತನಿಗೆ ಸಿಗರೇಟು ಅಥವಾ ಇನ್ನಿತರ ದುರಭ್ಯಾಸಗಳಿದ್ದು, ಆತ ಅದನ್ನು ಕದ್ದು ಮುಚ್ಚಿಯೋ ಅಥವಾ ಮನೆಯವರಿಗೆ ಗೊತ್ತಿದ್ದೊ ಅನುಸರಿಸುತ್ತಿದ್ದರೆ, ಈತನ ನಡೆ ನುಡಿ ಹಾವ ಭಾವಗಳನ್ನು ದೂರದಿಂದ ನೋಡುತ್ತಿದ್ದ ಮಗು ಕ್ರಮೇಣ ತಾನು ಹೀಗೆ ಮಾಡಿದರೆ ಹೇಗೆಂಬ ಹುಮ್ಮಸ್ಸು ಬೆಳೆಸಿಕೊಳ್ಳುತ್ತದೆ, ಬಹುಶಃ ಮನೆಯಲ್ಲಿರುವ ಎಲ್ಲರೂ ಇಂತಹ ದುರಭ್ಯಾಸಗಳಿಂದ ದೂರವಿರಬಹುದು. ಆ ಕ್ಷಣಕ್ಕೆ ಆ ಮಗುವಿನ ಕಣ್ಣಿಗೆ ಚಿಕ್ಕಪ್ಪನೇ ಹೀರೊ. ಆತ ಮನೆಯಲ್ಲಿ ಯಾರೂ ಮಾಡದ ಕೆಲಸಗಳನ್ನ, ಮತ್ತು ಅವನ ರೀತಿನೀತಿಗಳನ್ನ ಅನುಸರಿಸುತ್ತದೆ, ಇದು ಎಲ್ಲರ ಮನೆಯಲ್ಲಿ ಹೀಗೆ ಎಂದು ಹೇಳುತ್ತಿಲ್ಲ,

ಕೆಲವು ಮನೆಗಳಲ್ಲಿ, ಯಾರೂ ದುರಾಭ್ಯಾಸಗೊಳಗಾಗದೆ ಇದ್ದರೂ ಬೆಳೆಯುತ್ತಿರುವ ಮಗು ತನ್ನ ಸಹವಾಸದಿಂದ ಕಲಿಯಬಹುದು,

ಇದು ಮಕ್ಕಳಿಗೆ ತಪ್ಪು ಸರಿ ಎಂದು ಹೇಳುವುದಕ್ಕಿಂತ ಇದರ ದುಷ್ಪರಿಣಾಮಗಳ ಬಗ್ಗೆ, ಮತ್ತು ಅದರಿಂದ ಆಗುವ ತೊಂದರೆಯ ಬಗ್ಗೆ ಮನಮುಟ್ಟೂವಂತೆ ತಿಳಿಸಿದರೆ ಉತ್ತಮ ಎಂದು ನನ್ನ ಅಭಿಪ್ರಾಯ

ಯಾರು ಏನೆ ಹೇಳಿದರೂ ನಿನ್ನ ಮನಸ್ಸಿನಂತೆ ನಡೆ
ಅರವಿಂದ್
http://aravindnimmava.wordpress.com
http://abhimanihuduga.blogspot.com

http://www.hariharapurasridhar.blogspot.com

ತಿಲಕ್,
ಇದೆಲ್ಲಾ ಬರೆಯೋರಿಗೆ " ಲೋಕದಾ ದೋಂಕ ನೀವೇಕೆ ತಿದ್ದುವಿರಿ" ಅಂತಾ ಗುಟುರು ಹಾಕೋರು ಇದ್ದಾರೆ. ಏನು ಮಾಡೋದು? ಇಂದಿನ ಯುವಜನತೆ ಕಂಡಾಗ ಅಯ್ಯೋ ಅನಿಸುತ್ತೆ. ಆದರೆ ಒಂದು ಸಮಾಧಾನವೂ ಇದೆ. ಸುಸಂಸ್ಕೃತ ಪರಿಸರದೊಡನೆ ಆರೋಗ್ಯಕರವಾಗಿ ಬೆಳೆಯುತ್ತಿರುವ ಮಕ್ಕಳೂ ಇದ್ದಾರೆ. ಹೀಗೆ ಮಕ್ಕಳನ್ನು ಬೆಳೆಸುತ್ತಿರುವ ತಂದೆತಾಯಿಯರ ಸಂಖ್ಯೆ ಜಾಸ್ತಿಯಾಗಲಿ, ಎಂದು ಆಶಿಸುವೆ. ಒಂದು ಆರೋಗ್ಯಪೂರ್ಣ ಸಮಾಜದ ನಮ್ಮದಾಗಲೀ ಎಂಬ ಚಿಂತನೆಯೊಡನೆ ಸಾಗುತ್ತಿರುವವರ ಜೊತೆ ನಾನೂ ಹೆಜ್ಜೆ ಹಾಕುವೆ.

ತುಂಬಾ ಧನ್ಯವಾದಗಳು ಸಾರ್,

ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ಯಲು ಶ್ರಮಿಸಬೇಕಾಗಿರುವ ಯುವಜನಾಂಗ, ತಮ್ಮಲ್ಲೇ ಒಮ್ಮೆ ಯೋಚಿಸಿ ಸರಿದಾರಿಯತ್ತ ನಡೆಯಲು ಪ್ರಯತ್ನಿಸಿದರೆ ಎಷ್ಟು ಚನ್ನ!