ಚುಮುಚುಮು ಚಳಿಯ ಜತೆ ಕ್ರಿಸ್ ಮಸ್ ಸಂಭ್ರಮ

To prevent automated spam submissions leave this field empty.

ಡಿಸೆಂಬರ್ ತಿಂಗಳು ಬಂತೆಂದರೆ ಚಳಿ ಹೆಚ್ಚುತ್ತಿರುತ್ತದೆ. ಮಕ್ಕಳಿಗೆ ಶಾಲೆಗೆ ಹೋಗಲು ಇಷ್ಟವಿಲ್ಲ. ಬದಲಾಗಿ ಕ್ರಿಸ್ ಮಸ್ ತಯಾರಿ ನಡೆಸಲು ಎಲ್ಲಿಲ್ಲದ ಆಸಕ್ತಿ. ಉದ್ಯೋಗಿಗಳಂತೂ ಶಾಪಿಂಗ್ ಗಾಗಿ ಒಂದು ವಾರ ರಜೆ ಪಡೆಯುತ್ತಾರೆ. ವಿದೇಶದಲ್ಲಿದ್ದ ಸ್ನೇಹಿತರೆಲ್ಲಾ ಕ್ರಿಸ್ ಮಸ್ ಆಚರಣೆಗಾಗಿ ಹುಟ್ಟೂರಿಗೆ ಆಗಮಿಸುತ್ತಾರೆ.

ಕ್ರೈಸ್ತರಿಗೆ ಕ್ರಿಸ್ ಮಸ್ ಅಂದರೆ ಯೇಸುವಿನ ಜನನದ ಸಂಭ್ರಮವನ್ನು ತಮ್ಮ ಹುಟ್ಟೂರಿನಲ್ಲೇ ಆಚರಿಸುವ ತವಕ.
೨೦೪೧ ವರ್ಷಗಳ ಹಿಂದೆ ಜೆರುಸಲೇಮಿನ ಬೆತ್ಲೆಹೆಮ್ ಎಂಬ ಶಹರದ ಗೋದಲಿಯೊಂದರಲ್ಲಿ ಮೇರಿ ಹಾಗೂ ಸಂತ ಜೋಸೆಫ್ ಅವರ ಮಗುವಾಗಿ ಡಿ. ೨೫ ರಂದು ಯೇಸುವಿನ ಜನನವಾಯಿತು. ಅಂದು ದೇವದೂತರು, ದನಕಾಯುವವರು ಅಷ್ಟೇ ಅಲ್ಲ, ಎಲ್ಲ ಜೀವಿಗಳು ಸಂಭ್ರಮಪಟ್ಟವು. ಮುರು ಮಂದಿ ರಾಜರುಗಳು ತಮ್ಮ ಕಾಣಿಕೆಗಳೊಡನೆ ನಕ್ಷತ್ರದ ಸಹಾಯದಿಂದ ಯೇಸುವನ್ನು ನೋಡಲು ಹೋಗಿದ್ದರು.

ಈ ನೆನಪಿನಲ್ಲೇ ಕ್ರೈಸ್ತರು ಗೋದಲಿ ನಿರ್ಮಿಸುತ್ತಾರೆ. ನಕ್ಷತ್ರ ತೂಗುತ್ತಾರೆ, ಬಾಲ ಯೇಸುವಿನ ಶಿಲ್ಪವನ್ನಿಟ್ಟು ಅಕ್ಕ ಪಕ್ಕದಲ್ಲಿ ಸಂತ ಜೋಸೆಫ್, ಮೇರಿ ಮಾತೆಯ ಪ್ರತಿಮೆಯನ್ನಿಡುತ್ತಾರೆ. ‘ಕ್ರಿಸ್ ಮಸ್ ಟ್ರೀ’ ಕುರಿತಾಗಿ ಹೇಳುವುದಾದರೆ ಕ್ರಿಸ್ ಮಸ್ ಸಂಭ್ರಮವನ್ನು ಹೆಚ್ಚಿಸುವ ಉದ್ದೇಶದಿಂದ ಸಂತ ಫ್ರಾನ್ಸಿಸ್ ಅಸ್ಸಿಸಿ ಎಂಬವರು ಮೊದಲ ಬಾರಿಗೆ ಕ್ರಿಸ್ಮಸ್ ಟ್ರೀ ಮಾಡಿದರು. ಮುಂದೆ ಈ ಆಚರಣೆ ಪ್ರಪಂಚದಲ್ಲೆಡೆ ಪಸರಿಸಿತು.

ಸಂತ ನಿಕೋಲಸ್ ಎಂಬಾತ ಕ್ರಿಸ್ಮಸ್ ದಿನದಂದು ಬಡವರಿಗಾಗಿ ಕಾಣಿಕೆಗಳನ್ನು ಕೊಡುತ್ತಿದ್ದರು. ಅವರು ತಮ್ಮ ವಿಶಿಷ್ಟ ಉಡುಗೆಯಿಂದ ಮಕ್ಕಳ ಮನಗೆದ್ದರು. ಅವರ ನೆನಪಿಗಾಗಿ ಸಾಂತಾ ಕ್ಲಾಸ್ ಈಗಲೂ ಡಿಸೆಂಬರ್ ತಿಂಗಳಲ್ಲಿ ನಮ್ಮ ಮನೆಮುಂದೆ ಪ್ರತ್ಯಕ್ಷರಾಗುತ್ತಾರೆ.

ಕರಾವಳಿ ಕ್ರೈಸ್ತರು ತಯಾರಿಸುವ ಕ್ರಿಸ್ಮಸ್ ತಿಂಡಿಗೆ ‘ಕುಸ್ವಾರ್’ ಎಂದು ಹೆಸರು. ಕ್ರಿಸ್ಮಸ್ ಕೇಕ್ ಇಲ್ಲಿನ ಯಜಮಾನ. ಕಿಡಿಯೊ, ಗುಳಿಯೊ, ನಿವ್ರ್ಯೊ, ಕ್ಕೊಕ್ಕಿಸಾ, ಲಾಡು, ತುಕ್ಡಿ, ಚಕ್ಕುಲಿ, ಚಿಪ್ಸ್ ಇವೆಲ್ಲವನ್ನು ಮನೆಯಲ್ಲೇ ತಯಾರಿಸಿ ನಂತರ ನೆರೆಹೊರೆ ಹಾಗೂ ಸ್ನೇಹಿತರಿಗೆ ಹಂಚಿ ಸಂಭ್ರಮಿಸುವುದು ಪರಸ್ಪರರ ನಡುವೆ ಆತ್ನೀಯತೆ ಹೆಚ್ಚಿಸಲು ಸಹಕಾರಿ.

ಕ್ರಿಸ್ ಮಸ್ ಕುರಿತ ಸಂದೇಶ ನೀಡುವ ಗ್ರೀಟಿಂಗ್ಸ್ ಕಾರ್ಡ್ ಗಳನ್ನು ಪರಸ್ಪರ ರವಾನಿಸುವುದು, ಶಾಲಾ ಕಾಲೇಜುಗಳಲ್ಲಿ ‘ಕ್ರಿಸ್ ಮಸ್ ಫ್ರೆಂಡ್’ ಆಚರಿಸುವುದು ಇವೆಲ್ಲಾ ಕ್ರಿಸ್ ಮಸ್ ಸಡಗರವನ್ನು ಹೆಚ್ಚಿಸುತ್ತಿದೆ. ಉಳಿದಂತೆ ಹೊಸ ವಿನ್ಯಾಸದ ಹೊಸ ಉಡುಗೆ ತೊಡುಗೆ ಧರಿಸಿ ಡಿ. ೨೪ರ ರಾತ್ರಿ ಚರ್ಚ್ ಗಳಲ್ಲಿ ಪೂಜಾ ಸಮಾರಂಭದಲ್ಲಿ ಭಾಗಿಯಾಗುವುದು. ಪೂಜಾ ಬಲಿದಾನ ನಂತರ ಪರಸ್ಪರ ಕ್ರಿಸ್ಮಸ್ ಶುಭಾಶಯವನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಕ್ರಿಸ್ಮಸ್ ಹಾಡುಗಳಿಗೆ (ಕ್ಯಾರಲ್ಸ್) ಸಾಂತಾ ಕ್ಲಾಸ್ ಜತೆಗೆ ಕುಣಿಯುವುದು. ಡಿಸೆಂಬರ್ ೨೫ ರಿಂದ ಕ್ಯಾರಲ್ಸ್ ಜತೆಗೆ ಸಾಂತಾಕ್ಲಾಸ್ ಮನೆಮನೆಗೆ ಆಗಮಿಸಿ ಸಂತಸ ಹಂಚಿಕೊಳ್ಳುವುದು.

ಕುಸ್ವಾರ್, ಕ್ರಿಸ್ಮಸ್ ಟ್ರೀ, ಗೋದಲಿ ಮುಂತಾದವುಗಳನ್ನು ಚೆನ್ನಾಗಿ ಮಾಡಿದ್ದವರಿಗೆ ಬಹುಮಾನಗಳನ್ನು ವಿತರಿಸುವ ಕಾರ್ಯಕ್ರಮಗಳು ಇತ್ತೀಚೆಗೆ ಹೆಚ್ಚುತ್ತಿದೆ.
ಇದು ಕ್ರೈಸ್ತ ಬಾಂಧವರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಕ್ರಿಸ್ ಮಸ್ ದಿನಾಚರಣೆಯ ಮೌಲ್ಯಗಳನ್ನು ತಿಳಿಯಲು ಅನುವು ಮಾಡಿಕೊಡುತ್ತಿದೆ.

ಮಾರಾಟಗಾರರಿಗಂತೂ ಡಿಸೆಂಬರ್ ತಿಂಗಳು ಬಂತೆಂದರೆ ರಸದೌತಣ. ಬಹುಶ: ವರ್ಷದಲ್ಲಿ ಅತೀ ಹೆಚ್ಚು ವಸ್ತುಗಳಿಗೆ ಬೇಡಿಕೆ ಇರುವ ಏಕೈಕ ತಿಂಗಳು ಡಿಸೆಂಬರ್.

ಮನೆಗೆ ಮರು ಪೈಂಟ್ ಹಾಕಿ ಮನೆಯನ್ನು ಅಲಂಕರಿಸುವುದು, ಬಗೆಬಗೆಯ ನಕ್ಷತ್ರಗಳನ್ನು, ವಿದ್ಯುತ್ ದೀಪಗಳನ್ನು ಖರೀದಿಸುವುದು, ಮೊಬೈಲ್ ಗಳಲ್ಲಿ ಜಿಂಗಲ್ ಬೆಲ್ಸ್ ಕುರಿತ ರಿಂಗ್ ಟೋನ್ ಹಾಕುವುದು, ಕ್ರಿಸ್ಮಸ್ ಗಾಗಿಯೇ ರಚಿಸಿರುವ ಹಾಡುಗಳನ್ನು ಹಾಡುವುದು ಕ್ರಿಸ್ತ ಜಯಂತಿಯ ಸಂಭ್ರಮದಲ್ಲಿ ಸೇರಿದೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

>>೨೦೪೧ ವರ್ಷಗಳ ಹಿಂದೆ ಜೆರುಸಲೇಮಿನ ಬೆತ್ಲೆಹೆಮ್ ಎಂಬ ಶಹರದ ಗೋದಲಿಯೊಂದರಲ್ಲಿ ಮೇರಿ ಹಾಗೂ ಸಂತ ಜೋಸೆಫ್ ಅವರ ಮಗುವಾಗಿ ಡಿ. ೨೫ ರಂದು ಯೇಸುವಿನ >>ಜನನವಾಯಿತು.

ಒಂದು ತಿದ್ದುಪಡಿ ಹೇಳೋಣವೆನ್ನಿಸಿತು. ಕ್ರಿಸ್ತನನ್ನು ೩೩ನೇ ವಯಸ್ಸಿನಲ್ಲಿ ಶಿಲುಬೆಗೇರಿಸಿದ ಕ್ರಿಸ್ತಶಕದ ವರ್ಷಗಳನ್ನು ಎಣಿಸಲು ತೊಡಗಿದರೂ, ಅದನ್ನು ಒಂದನೇ ವರ್ಷದಿಂದ ಶುರುಮಾಡಲಿಲ್ಲ. ಹಾಗಾಗಿ ಇದು ೨೦೦೮+೩೩ = ೨೦೪೧ ಅನ್ನುವ ಲೆಕ್ಕ ತಪ್ಪಾಗುತ್ತೆ.

ಹೆಚ್ಚಿನವರ ಪ್ರಕಾರ ಕ್ರಿಸ್ತನು ಹುಟ್ಟಿದ್ದು ಕ್ರಿ.ಪೂ. ೪ನೇ ವರ್ಷದಲ್ಲಿ - ಅಥವಾ ಕ್ರಿಪೂ ೪ ರಿಂದ ಕ್ರಿ.ಶ ೧ ರ ಒಳಗೆ. ಅಂದರೆ ಸುಮಾರು ೨೦೧೨ ವರ್ಷ ಅಂದರೆ ಸರಿಹೋಗಬಹುದು.

ಮತ್ತೆ ಡಿಸೆಂಬರ್ ೨೫ರ ದಿನವನ್ನು ಯೇಸು ಹುಟ್ಟಿದ ದಿನವಾಗಿ ಆಯ್ದಿದ್ದು ೧೨೦೦ ನೇ ಇಸವಿಯ ಸುಮಾರಿಗಂತೆ. ಹಾಗಾಗಿ ಈ ದಿನವೇ ಅವನ ಜನ್ಮವಾಯಿತು ಎಂದು ಹೇಳುವುದು ಕಷ್ಟ. ಹುಟ್ಟನ್ನು ವರ್ಣಿಸುವ ಕಥೆಗಳ ವಿವರವನ್ನು ನೋಡಿದಾಗ ಅದು ವಸಂತ ಕಾಲದಲ್ಲಿ, ಅಥವಾ ಬೇಸಿಗೆಯಲ್ಲಿ ನಡೆದಿರಬೇಕು ಎನ್ನುವ ಊಹೆಯನ್ನು ಹಲವರು ಮಾಡಿದ್ದಾರೆ. ಡಿಸೆಂಬರ್ ನ ಚಳಿಯಲ್ಲಿ, ಜನಗಣತಿಗೆಂದು ಮೇರಿ, ಜೋಸೆಫ್ ( ಅವರಷ್ಟೇ ಅಲ್ಲ, ಸಾವಿರಾರು ಹಳ್ಳಿಗರು) ಪರ ಊರಿಗೆ ಹೋಗುವುದು, ಉಳಿದುಕೊಳ್ಳಲು ಜಾಗವಿಲ್ಲದೆ ಹಸುಕೊಟ್ಟಿಗೆಯಲ್ಲಿರಬೇಕಾದುದ್ದೂ, ಬೇಸಿಗೆಯಲ್ಲಷ್ಟೇ ಸಾಧ್ಯ ಎನ್ನುವುದು ಅವರ ವಾದ. ಮತ್ತೆ ಅಲ್ಲೇ ಕುರಿ ಕಾಯುವ ಹುಡುಗರು ರಾತ್ರಿಯ ಹೊತ್ತೂ ಗುಡ್ಡದ ಮೇಲೆ ಕುರಿಮೇಯಿಸುವ ವಿವರವೂ ಬಂದಿದೆಯಂತೆ. ಇದೂ ಕೂಡಾ ಯೇಸುವಿನ ಹುಟ್ಟು ಬೇಸಿಗೆಯಲ್ಲಿ ಆಗಿದ್ದಿರಬೇಕು ಎನ್ನುವುದಕ್ಕೆ ಒಂದು ಆಧಾರವೆಂದು ತಿಳಿದವರ ಅಭಿಪ್ರಾಯ.

-ಹಂಸಾನಂದಿ

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

’ಕ್ರಿಸ್ತಶಕ’ ಎನಿಸಿಕೊಳ್ಳುವ ಕಾಲಗಣನೆಗೆ ಚಾಲನೆ ದೊರೆತದ್ದು ಕ್ರಿಸ್ತ ಸತ್ತು ಬದುಕಿದ ಎಷ್ಟೋ ವರ್ಷಗಳ ನಂತರವೇ. ಹಾಗಾಗಿ ಕ್ರಿಸ್ತ ಜನಿಸಿದ ನಿಖರವಾದ ದಿನಾಂಕ ಯಾರಿಗೂ ತಿಳಿಯದು. ಆದರೆ ಅವರನ್ನು ಶಿಲುಬೆಗೇರಿಸಿದ್ದು ಯೆಹೂದ್ಯರ ಪವಿತ್ರಾಚರಣೆಯಾದ ’ಪಾಸ್ಕ’ ಸಂದರ್ಭದಲ್ಲಿ ಎಂಬುದನ್ನು ನೋಡಿದರೆ ಕ್ರಿಸ್ತಶಕ ೩೦ ರ ಏಪ್ರಿಲ್ ೭ ರಂದು ಶುಕ್ರವಾರ ಯೇಸುಕ್ರಿಸ್ತರು ಸಾವನ್ನು ಕಂಡರು ಎಂಬುದಾಗಿ ವಿದ್ವಾಂಸರು ಲೆಕ್ಕಿಸಿದ್ದಾರೆ.

ಪ್ರೀತಿಯಿಂದ
ಸಿ ಮರಿಜೋಸೆಫ್

ಒಹೋ! ಕ್ರಿಸ್ತನ ಕಾಲವಾದ ನಂತರದ ದಿನಗಳನ್ನು ಕ್ರಿಸ್ತಶಕೆ ಅಂತಾರೇಂತ ಈಗ ತಿಳೀತು...
ನನ್ನಿ ಮೇರಿಜೋಸೆಫರೆ..
ಮುಂಗಡ ಕ್ತಿಸ್ತ ಹಬ್ಬದ ಶುಭಾಶಯಗಳು..

ನಿಮ್ಮವ,
ಗಿರೀಶ ರಾಜನಾಳ
ಹಂತಾದು ಹಿಂತಾದು ಕೂಡಿ ಸಂತ್ಯಾಗ ಹೋದ್ರss..ಸಂತ್ಯಾಗೊಂದು ಹಂತಾದs ಸಿಕ್ಕಿತ್ತಂತ...!!!