ಇಂಥಹಾ ಸರ್ಕಾರಗಳು, ರಾಜಕಾರಣಿಗಳು, ಅಧಿಕಾರಿಗಳು ನಮಗೆ ಬೇಕೆ?

To prevent automated spam submissions leave this field empty.

ದೇಶದ ರಾಜಕಾರಣ, ಆಳುವ ಸರ್ಕಾರಗಳು, ರಾಜಕೀಯ ವ್ಯವಸ್ಥೆ ಸ್ವಾತಂತ್ರ ಬಂದ ೬೧ ವರ್ಷಗಳಲ್ಲೇ ತನ್ನ ಮೂಲ ಧ್ಯೇಯ, ತತ್ವ ಸಿದ್ದಾಂತಗಳನ್ನು ಕಳೆದುಕೊಂಡು ಅಧೋಗತಿಗೆ ಇಳಿಯುತ್ತಿದ್ದು, ಜನಸಮಾನ್ಯರ ಟೀಕೆಗೆ ಗುರಿಯಾಗುತ್ತಿದೆ.

ರಾಜಕಾರಣಿಗಳು ಸ್ವಾರ್ಥಿಗಳಾಗುತ್ತಿದ್ದಾರೆ, ದೇಶದ ಹಿತ, ರಕ್ಷಣೆಗಿಂತ, ಸ್ವಹಿತ, ಸ್ವರಕ್ಷಣೆಯೇ ರಾಜಕಾರಣಿಗಳಿಗೆ ಮೇಲಾಗುತ್ತಿದೆ ಎಂಬ ಮಾತುಗಳು ಎಲ್ಲೆಡೆ ಕೇಳಲಾರಂಭಿಸಿವೆ. ದೇಶವನ್ನು ಅಭಿವೃದ್ದಿ ಪಥದತ್ತ ಮುನ್ನಡೆಸಿ, ವಿಶ್ವದಲ್ಲೇ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಶ್ರಮಿಸಬೇಕಾಗಿರುವ ನಮ್ಮನ್ನು ಆಳುವ ಸರ್ಕಾರಗಳು, ರಾಜಕೀಯ ಪಕ್ಷಗಳು, ರಾಜಕಾರಣಿಗಳು ದೇಶವನ್ನು ಮುನ್ನಡೆಸುವಲ್ಲಿ ವಿಫಲರಾಗಿದ್ದಾರೆ. ಪರಸ್ಪರ ದ್ವೇಷ, ಅಸೂಯೆಗಳಿಂದ , ಕೆಸರೆರಚಾಟದಿಂದ ಸದಾ ಒಂದಲ್ಲಾ ಒಂದು ವಿವಾದದಲ್ಲಿ ಸಿಲುಕುತ್ತಿರುವ ನಮ್ಮ ರಾಜಕೀಯ ಪಕ್ಷಗಳು, ರಾಜಕಾರಣಿಗಳು ದೇಶವನ್ನು ಇನ್ನೇನು ಅಭಿವೃದ್ದಿ ಮಾಡಿಯಾವು?

ತಮಗಿಷ್ಟ ಬಂದಂತೆ ಕಾನೂನನ್ನು ಬದಲಿಸಿಕೊಂಡು, ಬೃಷ್ಟಾಚಾರ, ಅರಾಜಕತೆ, ಸ್ವಾರ್ಥತೆಯನ್ನು ಅಸ್ತ್ರವನ್ನಾಗಿ ಮಾಡಿಕೊಂಡಿರುವ ಈ ರಾಜಕಾರಣಿಗಳಿಗೆ ರಾಷ್ಟ್ರದ ಅಭಿವೃದ್ದಿ ಬೇಕಾಗಿಲ್ಲ. ತಮ್ಮ ಅಭಿವೃದ್ದಿಯಾದರೆ ಸಾಕು!. ಚುನಾವಣೆ ಸಂದರ್ಭದಲ್ಲಿ ಮಾತ್ರ ಜನಸಾಮಾನ್ಯರ ಬಳಿ ಬರುವ ಇವರು, ಚುನಾವಣೆ ಬಳಿಕ ಅವರನ್ನೇ ಮರೆತುಬಿಡುವ ಗೋಸುಂಬೆಗಳು.

ಇದರ ಪರಿಣಾಮವನ್ನು ಇಂದು ನಮ್ಮ ದೇಶ ಎದುರಿಸುತ್ತಿದ್ದು, ಜಗತ್ತಿನ ಎಲ್ಲೆಡೆ ಶಾಂತಿಧಾಮವಾಗಿ ಕಂಗೊಳಿಸುತ್ತಿದ್ದ ಭಾರತ, ಇಂದು ಹಾಡು ಹಗಲಲ್ಲೇ ಕೊಲೆ, ದರೋಡೆ, ಭಯೋತ್ಪಾದನೆಯಂತಹಾ ಕುಕೃತ್ಯಗಳ ತಾಣವಾಗಿ ಮಾರ್ಪಾಟಾಗಿದೆ.ಸರ್ವಧರ್ಮದ ನಾಡೆಂದು ಹೆಸರುವಾಸಿಯಾಗಿದ್ದ ನಮ್ಮ ದೇಶ ಇಂದು ಕೋಮುವಾದಿಗಾಳ ಬೀಡಾಗಿ ಮಾರ್ಪಾಡಾಗುತ್ತಿದೆ!

ದೇಶಕ್ಕೆ ಇಂದು ಮಾರ್ಗದರ್ಶಿಗಳ ಕೊರತೆ ಹೆಚ್ಚಾಗಿದ್ದು, ದೇಶವನ್ನು ಮುನ್ನಡೆಸುವಲ್ಲಿ ರಾಜಕಾರಣಿಗಳ ನಿರ್ಲ್ಯಕ್ಷ, ಆಳುವ ಸರ್ಕಾರಗಳ ಅನನುಭವದ ಕೊರತೆ ಎದ್ದುಕಾಣುತ್ತಿದೆ. ಈ ದುರ್ಬಲ ಆಡಳಿತದ ಸದುಪಯೋಗ ಪಡೆದುಕೊಳ್ಳುತ್ತಿರುವ ಪಾಕಿಸ್ತಾನದಂತಹಾ ಸಣ್ಣ ರಾಷ್ಟ್ರಗಳು ನಮ್ಮ ದೇಶದಲ್ಲಿ ಭಯೋತ್ಪಾದನೆ ಸೃಷ್ಟಿಸುತ್ತಿವೆ.
೨೦೦೧ರಿಂದೀಚೆಗೆ ದೇಶದಲ್ಲಿ ಭಯೋತ್ಪಾದನೆ ಪ್ರಕರಣಗಳು ಹೆಚ್ಚುತ್ತಿದ್ದರೂ, ಅದನ್ನು ನಿಯಂತ್ರಿಸುವಲ್ಲಿ ನಮ್ಮ ಸರ್ಕಾರಗಳು ವಿಫಲವಾಗಿವೆ. ಘಟನೆ ನಡೆದ ವಾರದವರೆಗೆ ಮಾತ್ರ ಘಟನೆಗೆ ಕಾರಣರಾದವರ ವಿರುದ್ದ ಖಂಡಿಸುವ ಮಾತುಗಳನ್ನಾಡುವ ನಮ್ಮ ರಾಜಕಾರಣಿಗಳು, ಘಟನೆ ಮಾಸುವುದಕ್ಕೂ ಮುನ್ನ ಅದನ್ನು ಮರೆತು ತಮ್ಮ ಎಂದಿನ ಕಾರ್ಯ ನಿರ್ವಹಿಸುವ ಕೆಲಸದಲ್ಲಿ ತೊಡಗುತ್ತವೆ.

ಇನ್ನು ವಿರೋಧ ಪಕ್ಷಗಳು ಆಳುವ ಪಕ್ಷಗಳ ಕಾವಲು ನಾಯಿ ಇದ್ದಂತೆ ಎಂದು ಹೆಸರು ಪಡೆದುಕೊಂಡಿದ್ದಾವಾದರೂ ಆ ಹೆಸರು ಬಹಳ ವರ್ಷಗಳ ಹಿಂದೆಯೇ ಮರೆತುಹೋಗಿದೆ. ಕೇವಲ ಆಡಳಿತ ಪಕ್ಷವನ್ನು ಪರಾಭವಗೊಳಿಸುವ ತಂತ್ರಗಳನ್ನು ಹೆಣೆಯುವಲ್ಲಿ ತಲ್ಲೀನವಾಗಿರುವ ಇವು, ದೇಶದ ಅಬಿವೃದ್ದಿಯ ಬಗ್ಗೆ ಚಿಂತಿಸದಿರುವುದು ನಿಜಕ್ಕೂ ವಿಷಾಧನೀಯ.

ನಮ್ಮ ಅಧಿಕಾರಿಗಳ ಬಗ್ಗೆ ಹೇಳುವಂತೆಯೇ ಇಲ್ಲ. ರಾಜಕಾರಣಿಗಳ ಕ್ಯಗೊಂಬೆಗಳಾಗಿ ಅವರ ಮಾತನ್ನು ಶಿರಶಹಾ ಪಾಲಿಸುತ್ತಾ, ದೇಶದ ಅಭಿವೃದ್ದಿ ಬಗ್ಗೆ ಚಿಂತಿಸುವುದನ್ನೇ ಬಿಟ್ಟಿದ್ದಾರೆ. ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿರುವ ಇವರನ್ನು ಜನಸಾಮಾನ್ಯರು ದೂರವಿಡಬೇಕಾಗಿದೆ.

ಒಟ್ಟಾರೆ, ನಮ್ಮ ದೇಶಕ್ಕೆ ಇಂದು ಸರಿಯಾದ ಮಾರ್ಗದರ್ಶಕರ ಅವಶ್ಯಕತೆ ಇದೆ. ದಕ್ಷ ಸರ್ಕಾರ, ಎಂಥಹಾ ಸಮಸ್ಯೆ ಬಂದರೂ ಪಕ್ಷಬೇಧ ಮರೆತು ಚರ್ಚಿಸಿ, ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಆಲೋಚಿಸುವ ರಾಜಕೀಯ ಪಕ್ಷಗಳ ಅವಶ್ಯಕತೆ ಇದೆ. ಹಾಗಾದಲ್ಲಿ ದೇಶ ಅಭಿವೃದ್ದಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗುವುದೇ?

ಲೇಖನ ವರ್ಗ (Category):