ಸಕಲವೂ ಈಶ್ವರಮಯವಾದುದು

To prevent automated spam submissions leave this field empty.

ಆ ಮಗು ಪಿಸುದನಿಯಲ್ಲಿ ಉಲಿಯಿತು
'ದೇವರೇ ನನ್ನೊ೦ದಿಗೆ ಮಾತನಾಡು.'
ಆಗ ಹಾಡಿತು ಹಸಿರು ಮಾಮರದ ಕೋಗಿಲೆಯೊ೦ದು
ಕೇಳಿಸಿಕೊಳ್ಳಲಿಲ್ಲ ಮಗು.

ಮಗು ಮತ್ತೆ ಅರಚಿತು, 'ದೇವರೇ ನನ್ನೊ೦ದಿಗೆ ಮಾತನಾಡು.'
ಆಕಾಶದಲ್ಲಿ ಗುಡುಗೊ೦ದು ಗುಡುಗಿತು.
ಆದರೆ ಮಗು ಕೇಳಿಸಿಕೊಳ್ಳಲಿಲ್ಲ.

ಸುತ್ತ ಮುತ್ತ ನೋಡಿ ಮಗು ಮತ್ತೆ ಹೇಳಿತು.
'ದೇವರೇ ನಾನು ನಿನ್ನನ್ನು ನೋಡಬೇಕು.'
ಹಿ೦ದೆಯೇ ಒ೦ದು ನಕ್ಷತ್ರ ಪ್ರಚ೦ಡವಾಗಿ ಬೆಳಗಿತು.
ಗಮನಿಸಲಿಲ್ಲ ಮಗು ಅದನ್ನು.

ಮತ್ತೆ ಮಗು ಚೀರಿ ಹೇಳಿತು.
'ದೇವರೇ ನನಗೊ೦ದು ಪವಾಡವನ್ನು ತೋರಿಸು.'
ಆಗೊ೦ದು ಜೀವ ಜನ್ಮ ತಾಳಿತು.
ಆದರೆ ಅರಿವಾಗಲಿಲ್ಲ ಮಗುವಿಗೆ.

ಕೊನೆಗೆ ಗೋಳಿಟ್ಟಿತು ಮಗು ಹತಾಶೆಯಿ೦ದ
'ದೇವರೇ, ನನ್ನನ್ನು ಸ್ಪರ್ಶಿಸು, ಆಗಲಾದರೂ ನೀನೆಲ್ಲಿದ್ದೀಯೆ೦ದು ತಿಳಿಯುವೆ.'
ಮರುಕ್ಷಣವೇ ದೇವರು ಕೆಳಗಿಳಿದು ಬ೦ದ
ಹಾಗೆಯೇ ಮೈದಡವಿದ ಮಗುವ ನವಿರಾಗಿ,
ಆದರೆ ಮಗು ಆ ಚಿಟ್ಟೆಯನ್ನು ಆಚೆಗೆ ಕೊಡವಿತು.
ಕತ್ತಲಲ್ಲೆ ಮರೆಯಾಗಿ ಹೋಯಿತು ಮಗು
ಏನನ್ನೂ ಅರಿಯದೆ.......

ಆಧಾರ: ಹಿ೦ದೀ ಕವನ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಚೆನ್ನಾಗಿದೆ ಸಾರ್... ಇಲ್ಲಿ ಮಗು ಅಂದ್ರೆ ಮನುಷ್ಯ ಅಂತ ಅರ್ಥ ಮಾಡಬಹುದೋ ಏನೋ. ಯಾಕಂದ್ರೆ ಇದು ನಮ್ಮೆಲ್ಲರ ಸ್ಥಿತಿಯೂ ಕೂಡ..

ಹೌದು. ವಿಜೇ೦ದ್ರರವರೇ,
ಇಲ್ಲಿ ಮಗು ಮನುಷ್ಯನನ್ನು ಅಜ್ಞಾನಿಯಾಗಿ ಸ೦ಕೇತಿಸುತ್ತದೆ.

ಡಾ|| ಜ್ಞಾನದೇವ್ ಮೊಳಕಾಲ್ಮುರು

ಚೆನ್ನಾಗಿದೆ...

ನೀವು ಕೊಟ್ಟಿರುವ ತಲೆಬರಹ ನನಗೆ "ಎಲ್ಲಾ ಶಿವಮಯವು" ಎನ್ನುವ ಹಾಡು ನೆನಪಾಯಿತು... ಈ ಹಾಡು ಯಾವ ಚಿತ್ರದ್ದು ಅಂತ ನೆನಪಿಲ್ಲ...

-ಅನಿಲ್.

[quote=ಅನಿಲ]"ಎಲ್ಲಾ ಶಿವಮಯವು" ಎನ್ನುವ ಹಾಡು ನೆನಪಾಯಿತು... ಈ ಹಾಡು ಯಾವ ಚಿತ್ರದ್ದು ಅಂತ ನೆನಪಿಲ್ಲ...[/quote]
ಭಕ್ತ ಸಿರಿಯಾಳ

ಶ್ರೀಯುತ ಜ್ಞಾನದೇವ್ ಅವರೇ,
ತಮ್ಮ ಬರಹ ಟಾಲ್ಸ್ಟಾಯ್ ಅವರ ಒಂದು ಕಥೆಯನ್ನು ನೆನಪಿಸಿತು. ಒಬ್ಬ ಶ್ರೀಮಂತನಿಗೆ ದೇವರನ್ನು ಕಾಣಬೇಕೆಂದು ಬಹಳ ಹಂಬಲವಿತ್ತು. ಒಮ್ಮೆ ದೇವರು ಅವನಿಗೆ ಕನಸಿನಲ್ಲಿ ಬಂದು " ನಾನು ನಾಳೆ ನಿಮ್ಮ ಮನೆಗೆ ಬರುತ್ತೇನೆ" ಎಂದು ಹೇಳಿದಂತಾಗುತ್ತದೆ. ಮರುದಿನ ಆ ಶ್ರೀಮಂತನು ಪಂಚ ಭಕ್ಷ ಪರಮಾನ್ನಗಳನ್ನು ತಯಾರಿಸಿ ದೇವರಿಗಾಗಿ ಕಾಯುತ್ತಿರುತ್ತಾನೆ. ಮೊದಲು ಎಷ್ಟೋ ದಿನಗಳಿಂದ ಅನ್ನ ಕಾಣದೇ ಹಸಿದ ಹುಡುಗಿ ಬಂದು ತನಗೆ ಭಿಕ್ಷೆ ನೀಡುವಂತೆ ಬೇಡುತ್ತಾಳೆ. ಈದಿನ ದೇವರು ತನ್ನ ಮನೆಗೆ ಬರುವವನಿದ್ದಾನೆ. ಹೀಗಾಗಿ ಏನೂ ಕೊಡುವುದಿಲ್ಲ ಎಂದು ಅವಳನ್ನು ಹೊರಗಟ್ಟುತ್ತಾನೆ. ಹಾಗೆಯೇ ಆನಂತರ ಬಂದ ಕುರುಡನನ್ನ ಮತ್ತು ಒಬ್ಬ ವೃದ್ಧನನ್ನೂ ಹೊರಗಟ್ಟುತ್ತಾನೆ. ಆನಂತರ ಎಷ್ಟು ಹೊತ್ತು ಕಾದರೂ ದೇವರು ಬರುವುದೇ ಇಲ್ಲ.
ರಾತ್ರಿ ಕನಸ್ಸಿನಲ್ಲಿ ದೇವರು ಬರುತ್ತಾನೆ. ಆಗ ಶ್ರಿಮಂತನು ಕೇಳುತ್ತಾನೆ, " ದೇವರೇ, ನಿನಗಾಗಿ ನಾನು ಎಷ್ಟು ಕಾದೆ ಗೊತ್ತಾ? ನೀನು ಬರಲೇ ಇಲ್ಲ."
ಆಗ ದೇವರು ನಗುತ್ತಲೇ, " ನಾನು ಮೂರು ಸಲ ಬಂದೆ. ನೀನು ನನ್ನನ್ನು ಗುರುತಿಸಲೇ ಇಲ್ಲ. ಹೊರಗಟ್ಟಿಬಿಟ್ಟೆ. ನಾನೇನು ಮಾಡಲಿ?" ಎನ್ನುತ್ತಾನೆ.
ತಮ್ಮ ಕವನ ಇದನ್ನು ಹೋಲುತ್ತದೆ ಅಲ್ಲವೇ? ಚೆನ್ನಾಗಿದೆ. ಧನ್ಯವಾದಗಳು.
ಶೈಲಾಸ್ವಾಮಿ

ಸಹೋದರಿ ಶೈಲಾಸ್ವಾಮಿಯವರೇ,
ತಮ್ಮ ಮನೋಜ್ಞ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಜ, ನೀವು ಉಲ್ಲೇಖಿಸಿರುವ ಟಾಲ್ ಸ್ಟಾಯ್ ನ ಕಥೆಯ ಸ೦ದೇಶವೂ ಬಹುತೇಕ ನನ್ನ ಅನುವಾದಿತ ಕವನದಲ್ಲೂ ಹುದುಗಿದೆ. ಸತ್ಯ, ಸು೦ದರವಾದುದೆಲ್ಲವೂ ಮಹಾತ್ಮರ ದೃಷ್ಟಿಯಲ್ಲಿ ಹೇಗೆ ವೈವಿಧ್ಯಮಯವಾಗಿ ಅಭಿವ್ಯಕ್ತವಾಗುವುದು ಅಲ್ಲವೇ? ಇದು ಬಹುಶಃ ನಿಸರ್ಗದ ಸು೦ದರ ಸೋಜಿಗ. ||ಏಕ೦ ಸತ್ ವಿಪ್ರಾಃ ಬಹುದಾ ವದ೦ತಿ|| ಋಷಿವಾಣಿಯ೦ತೆ, "ಸತ್ಯ ಒ೦ದೇ ಆದರೆ ಜ್ಞಾನಿಗಳು ಅದನ್ನು ವಿವಿಧ ರೀತಿಯಲ್ಲಿ ಹೇಳುವರು". ನಾವು ಭಗವ೦ತನನ್ನು ಪ್ರಕೃತಿಯ ಎಲ್ಲ ಅಭಿವ್ಯಕ್ತಿಗಳಲ್ಲಿ ನಾವು ಕಾಣಬಹುದು, ಆದರೆ ನಾವು ಕುರುಡರಾಗಿದ್ದೇವೆ. ಇದೇ ಮನುಕುಲದ ದುರ೦ತ.

ಡಾ|| ಜ್ಞಾನದೇವ್ ಮೊಳಕಾಲ್ಮುರು

ನೀವು ಹೇಳಿದ ಟಾಲ್‌ಸ್ಟಾಯ್ ಕತೆಯನ್ನು ನೆನಪಿಸುವ ಪದ್ಯವೊಂದು ನಮ್ಮ ಪುಸ್ತಕದಲ್ಲಿತ್ತು. ನೆನಪು ಬಂದಿದ್ದರಿಂದ ಅದರ ಪೂರ್ಣಪಾಠ ಕೆಳಗೆ ಕೊಟ್ಟಿದ್ದೇನೆ.
ಪೂಜೆ
ಹರುಕುಬಟ್ಟೆ ತಿರುಕನಂತೆ ಮನೆಯಮುಂದಕೆ
ನೀನು ಬರಲು ನಾನೆಂದೆ ಹೋಗುಮುಂದಕೆ
ಹೊಳೆವ ಹೊನ್ನತಟ್ಟೆಯಲ್ಲಿ ಮುತ್ತುರತ್ನಗಳನು ಚೆಲ್ಲಿ
ಪೂಜೆಗೆಂದು ಸಂಜೆಯಲ್ಲಿ ಗುಡಿಗೆ ಹೋದೆನು.
ಅಯ್ಯೊ, ಗುಡಿಯ ಪೀಠದಲ್ಲಿ ಮೂರ್ತಿಯಿಲ್ಲ, ದೇವರೆಲ್ಲಿ?
ಹರುಕುಬಟ್ಟೆ ತಿರುಕನಲ್ಲಿ ಲೀನವಾದನು.

"ಏರಿದವನು ಚಿಕ್ಕವನಿರಬೇಕು"

ಅದ್ಭುತ ಪ್ರತಿಕ್ರಿಯೆ. ಬಹಳ ಪೂರಕವಾದ ಪ್ರತಿಕ್ರಿಯೆ.ರಮೇಶ ಬಾಲಗ೦ಚಿಯವರೇ. An apt and supplimentary reaction.

ಡಾ|| ಜ್ಞಾನದೇವ್ ಮೊಳಕಾಲ್ಮುರು