ನಾನು ಮಾಡಿದ ಪುಸ್ತಕಗಳ ವಿಲೇವಾರಿ .

To prevent automated spam submissions leave this field empty.

ಅಂತೂ ಭಾರೀ ವಿವಾದಾಸ್ಪದವಾಗಿದ್ದ ನನ್ನ ಪುಸ್ತಕಗಳ ವಿಲೇವಾರಿ ಅಂತೂ ಮೊನ್ನೆ ಶನಿವಾರ ಇಲ್ಲಿ (ಮುಂಬೈ) ಯ ವಿಲೇಪಾರ್ಲೆಯ ಅಂಗಡಿಯೊಂದರಲ್ಲಿ ಮಾಡಿದೆ. ಸುಮ್ಮನೆ ಕೊಟ್ಟು ಬಿಟ್ಟೆ. ದಾನವೆಂದು ಕರೆಯಲಾಗದು. ನನಗೆ 'ಬೇಡವಾದ' , ಅಂಗಡಿಯವರಿಗೂ 'ಬೇಡವಾದ' ( 'ಬೇಡವಾದ' - pun not intended - ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ) ಪುಸ್ತಕಗಳನ್ನು ಕೊಟ್ಟರೆ , ದಾನ ಹೇಗೆ ಆದೀತು ? . ಏನೇ ಇರಲಿ . ನನ್ನ ಪುಸ್ತಕದ ಹೊರೆ ಸ್ವಲ್ಪ ಕಡಿಮೆಯಾಯಿತು. ಸಲಹೆ ಕೊಟ್ಟ ಪವನಜರಿಗೆ ಧನ್ಯವಾದಗಳು.

ಆಶ್ಚರ್ಯವೆಂದರೆ ಈ ಪುಟವನ್ನು ೬೦೦ ಕ್ಕೂ ಬಾರಿ ಸಂದರ್ಶಿಸಲಾಗಿದ್ದರೂ ಯಾರೊಬ್ಬರಿಗೂ ನನಗೆ ಬೇಡವಾದ ಪುಸ್ತಕಗಳು ಯಾವುವು ಇರಬಹುದೆಂಬ ಕುತೂಹಲ ಇದ್ದ ಹಾಗೆ ಕಾಣಲಿಲ್ಲ .
ಏನೇ ಇರಲಿ ನಾನು ಇಲ್ಲಿ ಪಟ್ಟಿ ಮಾಡುತ್ತಿರುವೆ.
೧. ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ . ( ಇದರಲ್ಲಿ ಕನ್ನಡದಲ್ಲಿ ಸಂಸ್ಕೃತದ ವ್ಯಾಕರಣವನ್ನು ಕಲಿಸಲಾಗುತ್ತದೆ. ಅದು ತಪ್ಪು. ಎಂದು ವಿವರಿಸಲಾಗಿದೆ. - ಇನ್ನೊಂದು ವಿಚಾರ ಎಂದರೆ. ಕರ್ಮಣೀ ಪ್ರಯೋಗ ಕನ್ನಡದಲ್ಲಿಲ್ಲ ; ಎಂಬ ವಿಚಾರ . )
೨. ಕನ್ನಡ ವಾಕ್ಯ ರಚನೆ. ( ಕನ್ನಡ ವಾಕ್ಯಗಳ ರಚನೆಯ ಬಗ್ಗೆ ಮಾಹಿತಿ ಇದೆ. ನನಗೇನೂ ಹೊಸತೇನೂ ಕಾಣಲಿಲ್ಲ)
ಇವೆರಡೂ ಶಂಕರ ಭಟ್ಟರದು. ಇನ್ನೊಂದು ಪುಸ್ತಕ - ಕನ್ನಡ ಶಬ್ದ ರಚನೆ - ಇನ್ನೂ ಇಟ್ಟುಕೊಂಡಿದ್ದೇನೆ. ' ಬನ್ನಿ ಕನ್ನಡ ಬರಹವನ್ನು ಸರಿಪಡಿಸೋಣ' ಕೊಳ್ಳಲೇ ಇಲ್ಲ . ಕಣ್ಣಾಡಿಸಿದೆ. ಕನ್ನಡದಲ್ಲಿ ಮಹಾಪ್ರಾಣ ಅಕ್ಷರಗಳನ್ನು ಕೈ ಬಿಡಬೇಕು ಎಂಬ ವಾದ ಅದರಲ್ಲಿದೆ . ನನಗಂತೂ ಇದ್ದ ಹಾಗೆ ಕನ್ನಡ ಸುಂದರವಾಗೇ , ಸರಿಯಾಗೇ ಇದೆ. ನಾನೇನೂ ವೈಯಾಕರಣಿಯೂ ಅಲ್ಲ, ಸಾಹಿತಿಯೂ ಅಲ್ಲ, ಸುಧಾರಕನೂ ಅಲ್ಲ . ಸ್ವಂತದ ಖುಶಿಗಾಗಿ ಓದುವವನು. ಹಾಗಾಗಿ ಕೊಳ್ಳಲೇ ಇಲ್ಲ ಸುಮಾರು ನೂರು ರೂಪಾಯಿ ಉಳಿಸಿದೆ. ಗಳಿಸಿದೆ ! - ಯಾಕಂದರೆ 'ಉಳಿಸಿದ ಹಣ ಗಳಿಸಿದ ಹಣ' ಅಲ್ಲವೇ?)
೩. ನೋಬೆಲ್ ಸಾಹಿತಿ ಸಿಂಗರ್ ನ ವಾಚಿಕೆ. - ಒಂದು ಕಥೆ- ಒಬ್ಬ ಕಳ್ಳನ ಕಥೆ - ಹಿಂದೊಮ್ಮೆ ಸಂಪದದಲ್ಲಿ ಬರೆದಿದ್ದೇನೆ. ಇವತ್ತೇ ಇನ್ನೊಂದು ಕಥೆ- ಅಮೇರಿಕಾದಿಂದ ಬಂದವನು- ಕುರಿತು ಸಂಪದಕ್ಕೆ ಕಳಿಸಿದ್ದೇನೆ.
೪. ಗಿಲ್ಗಮೇಶ್- ಸಾವಿರ್‍ಆರು ವರ್ಷಗಳ ಹಿಂದಿನ , ಸುಮೇರಿಯಾದ ಪುರಾಣ. - ದೇವತೆಗಳು ಅಮರರು . ಇದರ ಕಥಾನಾಯಕನಿಗೆ ತಾನೂ ದೇವತೆಗಳ ಹಾಗೆ ಅಮರನಾಗುವ ಬಯಕೆ . ಅದಕ್ಕಾಗಿ ಅವನ ಪ್ರಯತ್ನದ ಕುರಿತಾಗಿ ಇದೆ. ( ಒಂದು ದಿನ ಇದರ ಬಗ್ಗೆ ಹೆಚ್ಚಿನ ವಿವರ ಕೊಡುವೆ)
೪. ವ್ಯಾಸರಾಯ ಬಲ್ಲಾಳರ ವೈದ್ಯಕೀಯ ಹಿನ್ನೆಲೆಯ ಕಾದಂಬರಿ . ಓದಿಸಿಕೊಳ್ಳಲಿಲ್ಲ (!). ನಾನು ಓದಬೇಕೋ ? ಅದು ಓದಿಸಿಕೊಳ್ಳಬೇಕೋ?
೫. ಎನ್ಕೆಯವರ ಅಶ್ವತ್ಥಮರ . ಇತ್ತೀಚೆಗೆ ಶ್ರೀನಿವಾಸ ವೈದ್ಯರ 'ಹಳ್ಳ ಬಂತು ಹಳ್ಳ'ದ ಜತೆ ಹೋಲಿಕೆಯ ಕುರಿತು ಬರೆದಿದ್ದೇನೆ. ಕೊಟ್ಟ ಮೇಲೆ ಒಂದು ವಿಚಾರ ಬಂತು. ಕನ್ನಡದಲ್ಲಿ ಶಬ್ದಕೋಶಗಳು ಪ್ರ್‍ಆದೇಶಿಕ ಆಡುಭಾಷೆಯ ಶಬ್ದಗಳನ್ನು ಒಳಗೊಂಡಿರುತ್ತವೆಯೇ ? ಇಲ್ಲದಿದ್ದರೆ ಇದೂ ಕನ್ನಡದಲ್ಲಿ ಆಗಬೇಕಾದ ಕೆಲಸವಲ್ಲವೇ ? ಇದೂ ಭಾಷೆಯನ್ನು ಬೆಳೆಸುವ ಕೆಲಸ ಅಲ್ಲವೇ ? ಅಂಥ ಕೆಲಸವನ್ನು ನಾನೇಕೆ ಶುರು ಮಾಡಬಾರದು ? ಹಾಗೆ ಮಾದುವದಕ್ಕೆ ಇದೂ ಒಂದು ಆಕರವಾಗುತ್ತಿತ್ತಲ್ಲ ? ಇರಲಿ ಇನ್ನೂ ಕಾಲ ಮಿಂಚಿಲ್ಲ . -- ನಿಮ್ಮ ಅಭಿಪ್ರ್‍ಆಯ , ತಿಳಿಸಿ .

೬. ರಸ್ಕಿನ್ ಬಾಂಡ್ ರವರ ಅನೇಕ ಪುಸ್ತಕಗಳು ಇಂಗ್ಲೀಷನಲ್ಲಿವೆ . ಚೆನ್ನಾಗಿರುತ್ತವೆ. ಅಂಥ ಅವರ ಒಂದು ಪುಸ್ತಕ - ಕನ್ನಡದಲ್ಲಿ 'ರಶ್ದಿಯ ಸಾಹಸಗಳು'- ಸಲ್ಮಾನ್ ರಷ್ದಿ ಅಲ್ಲ! ರಷ್ದಿ ಎಂಬ ಒಬ್ಬ ಹುಡುಗನ ಸಾಹಸ. ಮಕ್ಕಳಿಗಾಗಿ . ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ.

೭. ಜಗತ್ತಿನ ಬಾಲ್ಯದ ಕಥೆಗಳು - ಪಾದ್ರಿಯೊಬ್ಬರು ಭಾರತದಲ್ಲಿದ್ದಾಗ ಬೇರೆ ಬೇರೆ ಹಳ್ಳಿಗಾಡು ಜನರಿಂದ ಸಂಗ್ರಹಿಸಿದ ಕಥೆಗಳು , ಜಗದ ಹುಟ್ಟಿನ ಬಗ್ಗೆ ವಿವಿಧ ಸಂಶೋಧನೆಗಳ ಬಗ್ಗೆ ಜನಪದ ಕಥೆಗಳು. - ವಿಶೇಷವೇನಿಲ್ಲ.

೮. ಏಷ್ಯದ ಜನಪದ ಕಥೆಗಳು. ಏಷ್ಯದ ಪ್ರತಿ ದೇಶದಿಂದ ಒಂದೊಂದು ಜನಪದ ಸಾಹಿತ್ಯದಿಂದಾಯ್ದ ಮಕ್ಕಳ ಕಥೆಗಳು . ಅದರಲ್ಲಿ ಒಂದು 'ವಿನ್-ವಿನ್' ತತ್ವವನ್ನು ಪ್ರತಿಪಾದಿಸುವ ಕಥೆ. ನನಗೆ ಸೇರಿತು.

೯. ಮೂವತ್ತು ಮಳೆಗಾಲ - ಸಂಪುಟ - ೧. ಸಂಪದದಲ್ಲಿ ಬರೆದಿದ್ದೇನೆ. ಇದರಲ್ಲಿ ಒಂದು ಕವನ - ಕವಿತೆಯ ಬಗ್ಗೆ ಇದೆ. ಕವಿತೆ ಕಾವ್ಯ ಅರ್ಥ ಮಾಡಿಕೊಳ್ಳುವ ಬಗೆ ಕುರಿತು ಒಂದು ಲೇಖನ ಬರೆದಿದ್ದೆ . ಇನ್ನೊಂದು ಲೇಖನ ಈ ಕವಿತೆಯನ್ನು ಉಲ್ಲೇಖಿಸಿ ಬರೆಯಲಿದ್ದೇನೆ.

ಕೆಲವು ಕವಿತೆಗಳನ್ನು ತಿಳಿದೆನು , ಕೆಲವು ಇಲ್ಲ. ( ಇದೇ ತಾನೆ ಕಾವ್ಯಕ್ಕೂ ಶಾಸ್ತ್ರಕ್ಕೂ ವ್ಯತ್ಯಾಸ? )

ಕೆಲವು ಸಾಲುಗಳನ್ನು ಬರೆದಿಟ್ಟುಕೊಂಡೆ.

ಇನ್ನು ಕೆಲವು ಪುಸ್ತಕಗಳು ನೆನಪಿಲ್ಲ .

(ಪ್ರ್‍ಆದೇಶಿಕ ಆಡು ಬಾಷೆಯ ಶಬ್ದಕೋಶ ಕುರಿತು ನಿಮ್ಮ ಅಭಿಪ್ರ್‍ಆಯ ತಿಳಿಸಿ)

ಒಂದು ಸೂಚನೆ. ಹಿಂದಿನ ಚರ್ಚೆಯ ಪುಟವನ್ನು ಓದಲಾಗದಷ್ಟು ದೀರ್ಘವಾಗಿದೆ. ನಿರ್ವಾಹಕರು ಮುಂದಿನ ಟಿಪ್ಪಣಿಗಳನ್ನು ಬೇರೆಡೆಗೆ ಅಥವಾ ಇಲ್ಲಿಗೆ ವರ್ಗಾಯಿಸಬಹುದೆ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

[quote=shreekant.mishrikoti]
ಅಂತೂ ಭಾರೀ ವಿವಾದಾಸ್ಪದವಾಗಿದ್ದ ನನ್ನ ಪುಸ್ತಕಗಳ ವಿಲೇವಾರಿ... [/quote]
ವಿವಾದಾಸ್ಪದವಾಗಿದ್ದದ್ದು

ಅ) ನೀವು?

ಆ) ನಿಮ್ಮ ಪುಸ್ತಕಗಳು ?

ಇ) ಅವುಗಳ ವಿಲೇವಾರಿ ?

misplaced modifiers ಗೆ ಒಳ್ಳೆಯ ಉದಾಹರಣೆ. ಬಹುಶಃ
"ನನ್ನಲ್ಲಿದ್ದ ಪುಸ್ತಕಗಳ ವಿಲೇವಾರಿಯ ವಿಷಯ ತುಂಬ ವಿವಾದಾಸ್ಪದವಾಗಿತ್ತು, ಕೊನೆಗೂ ಮೊನ್ನೆ ಅದರ ಇತ್ಯರ್ಥವಾಯಿತು" ಎಂದಿದ್ದರೆ ಮೇಲಿನ ಸಂದೇಹ ಬರುತ್ತಿರಲಿಲ್ಲವೇನೊ. ಇದು ನನ್ನ ಅನಿಸಿಕೆ.

ಪುಸ್ತಕಗಳ ಸೂಕ್ತ ವಿಲೇವಾರಿ ಮಾಡಿದ್ದಕ್ಕಾಗಿ ನಿಮಗೆ ಅಭಿನಂದನೆಗಳು!

- ಶ್ರೀವತ್ಸ ಜೋಶಿ

ಶ್ರೀಕಾಂತಣ್ಣ, ನೀನೇ ಖರೀದಿ ಮಾಡಿ, ಓದಿ, ಕೂಡ್ಸಿಟ್ಟಿದ್ದ ಪುಸ್ತ್ಕ ಎಲ್ಲ ನಿಂದೇ ಆಸ್ತಿ ಅಲ್ವಾ. ನಿಂಗೆ ಇವು ಬೇಡ ಅನ್ಸಿದಾಗ ಹೆಂಗೆ ಬೇಕೋ ಹಂಗೆ ಇದನ್ನ ವಿಲೇವಾರಿ ಮಾಡಿದ್ರೆ ಆಯ್ತಪ್ಪ. ಇದ್ರಲ್ಲಿ ವಿವಾದ ಎಲ್ಲಿಂದ ಬಂತು. ಮೋಸ್ಟ್ಲಿ "ಒಳ್ಳೆಯ ಚರ್ಚೆಗೆ ಗ್ರಾಸವಾಗಿದ್ದ" ಎನ್ನುವುದು ನಿನ್ನ ಉದ್ದೇಶ ಇತ್ತೇನೊ ಅನ್ಸುತ್ತೆ. ನಾನು ದಿಲ್ಲಿಯಲ್ಲಿದ್ದೀನಿ. ಒಂದು ಲೈಬ್ರರಿ ಕೂಡ ಮಾಡ್ಬೇಕು ಅನ್ಕೊಂಡಿದೀನಿ. ಇನ್ನು ಮುಂದೆ ಪುಸ್ತ್ಕ ಏನಾದ್ರೂ ಮಾರೋದು ಅಥವಾ ದಾನ ಅಥವಾ ಇನ್ನೇನಾದ್ರೂ ಮಾಡ್ಬೇಕಿದ್ರೆ ದಯವಿಟ್ಟು ನಮಗೆ ಕೊಟ್ರೆ ಅನ್ಕೂಲವಾಗುತ್ತೆ. ಅದನ್ನ ಇಲ್ಲಿಗೆ ತರ್ಸ್ಕೊಳ್ಳೋ ವ್ಯವಸ್ಥೆನ ನಾನೇ ಮಾಡ್ಕೋತೀನಿ ಕೂಡ. ಮುಂಚೆನೆ ನನ್ಗ್ಯಾಕೆ ಈ ತಿಳುವಳಿಕೆ ಮೂಡ್ಲಿಲ್ವೋ ಏನೋ?

ನೀವು ಹೇಳುವದು ಸರಿ , 'ವಿವಾದಾಸ್ಪದ' ಎಂಬುದು ನನ್ನ ಉದ್ದೇಶವಾಗಿರಲಿಲ್ಲ. ಚರ್ಚೆಗೆ ಗ್ರಾಸವಾಗಿರುವದು ಎಂಬುದು ಸರಿ.

ಈ ಚರ್ಚೆಗಳಿಂದ ನನಗೆ ಅನುಕೂಲವೇ ಆಗಿದೆ . ಬರೆಯುವಾಗ ಹೆಚ್ಚು ಎಚ್ಚರವಹಿಸುವದನ್ನು ಕಲಿತಿದ್ದೇನೆ.
ಎಲ್ಲರಿಗೂ ಧನ್ಯವಾದಗಳು.
( ಮಹಾತ್ಮ ಗಾಂಧಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿದ್ದಾರೆ. ' ನನಗೆ ಸಂಕೋಚ ಸ್ವಭಾವ ಇದ್ದದ್ದರಿಂದ ಭಾಷಣ ಮಾಡುವದು ಆಗುತ್ತಿರಲಿಲ್ಲ. ಆದ್ದರಿಂದ ಬರೆದು ಸಿದ್ಧಪಡಿಸಿದ ಭಾಷಣಗಳನ್ನು ಓದುತ್ತಿದ್ದೆ. ಹೀಗಾಗಿ ಒಂದು ರೀತಿ ಒಳ್ಳೆಯದೇ ಆಯಿತು. ನಂತರ ಪಶ್ಚಾತ್ತಾಪಪಡುವಂಥದ್ದನ್ನು ನಾನು ಯಾವಾಗಲೂ ಸಾರ್ವಜನಿಕವಾಗಿ ಹೇಳಲಿಲ್ಲ.)