ಒಂದು ರೂಪಾಯಿ ಎಂದು ಹೀಗಳೆಯದಿರಿ

To prevent automated spam submissions leave this field empty.

ರಸ್ತೆಯಲ್ಲೇನೋ ಮಿಂಚುತ್ತದೆ.

ಅದು ಏನು ಎಂಬುದನ್ನು ಗುರುತಿಸಿದಾಗ ನಿಮ್ಮ ಕಣ್ಣುಗಳೂ ಮಿಂಚುತ್ತವೆ. ’ಅರೆ ವ್ಹಾ, ಒಂದು ರೂಪಾಯಿ!’ ಎಂದು ಮನಸ್ಸು ಅರಳುತ್ತದೆ. ಖುಷಿಯಿಂದ ನಾಣ್ಯವನ್ನು ಕೈಗೆತ್ತಿಕೊಂಡು ಪರೀಕ್ಷಿಸುತ್ತೀರಿ. ಅನುಮಾನವೇ ಇಲ್ಲ. ಅದು ಪಕ್ಕಾ ಒಂದು ರೂಪಾಯಿ.

ನೀವು ಎಷ್ಟೇ ಸಂಬಳ ಪಡೆಯುವವರಾಗಿರಿ, ಹೀಗೆ ಅನಾಯಾಸವಾಗಿ ದೊರೆತ ದುಡ್ಡು ತರುವ ಖುಷಿ ಗಳಿಕೆಯ ಖುಷಿಯನ್ನು ಮೀರಿಸುತ್ತದೆ. ಸಿಕ್ಕಿದ್ದು ಒಂದೇ ರೂಪಾಯಿಯಾದರೂ ಆ ಕ್ಷಣಗಳಲ್ಲಿ ಅದು ಕೊಡುವ ಖುಷಿಯೇ ವಿಚಿತ್ರ. ಅರೆ, ಒಂದು ರೂಪಾಯಿ ಬಗ್ಗೆ ಎಷ್ಟೊಂದು ಹೇಳ್ತಿದ್ದೀ ಎಂದು ಹೀಗಳೆಯದಿರಿ. ಅದಕ್ಕೆ ಅಪಾರ ಸಾಧ್ಯತೆಗಳಿವೆ.

ಹಳ್ಳಿಯ ಕಡೆ ಯಾವ ಅಂಗಡಿಗೇ ಹೋಗಿ, ಒಂದು ರೂಪಾಯಿಗೆ ನಿಮಗೆ ಅರ್ಧ ಕಪ್ ಚಹ ಖಂಡಿತ ಸಿಗುತ್ತದೆ. ಒಂದು ಮೆಣಸಿನಕಾಯಿ ಬಜ್ಜಿ ಗ್ಯಾರಂಟಿ. ಬೀಡಾ ಅಂಗಡಿಯಲ್ಲಿ ಒಂದು ರೂಪಾಯಿಗೆ ಸೊಗಸಾದ ತಾಂಬೂಲ (ಬೀಡಾ ಅಲ್ಲ!), ಅಥವಾ ಗುಟ್ಕಾ ಚೀಟು, ಅಥವಾ ಅಡಿಕೆ ಪುಡಿ ಚೀಟು ದೊರತೀತು. ಧೂಮಪಾನಿಗಳಾಗಿದ್ದರೆ ಎರಡು ಬೀಡಿ ಸಿಗುವುದಂತೂ ಖಾತರಿ. ಇವೇನೂ ಬೇಡ ಎಂದರೆ ಲವಂಗ, ಏಲಕ್ಕಿ ಅಥವಾ ಸೋಂಪು ಇರುವ ಪುಟ್ಟ ಚೀಟನ್ನಾದರೂ ತೆಗೆದುಕೊಳ್ಳಬಹುದು.

ಒಂದು ವೇಳೆ ನೀವು ಚಟಗಳೇ ಇಲ್ಲದ ಸಂಪನ್ನರಾಗಿದ್ದರೆ ಒಂದು ರೂಪಾಯಿಯನ್ನು ದಾರಿಯಲ್ಲಿ ಸಿಗುವ ಮುದಿ ಭಿಕ್ಷುಕಿಯ ತಟ್ಟೆಗೆ ಹಾಕಿದರೂ ಆಯಿತು. ಒಂದು ಕೃತಜ್ಞತೆಯ ದೃಷ್ಟಿ ನಿಮಗೆ ದಕ್ಕೀತು. ಒಂದು ರೂಪಾಯಿಗಿಂತ ಕಡಿಮೆ ಕಾಸು ಹಾಕೀರಿ ಜೋಕೆ. ನಿಮ್ಮ ಭಿಕ್ಷೆಯ ಜೊತೆಗೆ ಆಕೆ ನಿಮ್ಮನ್ನೂ ನಿಕೃಷ್ಟವಾಗಿ ಕಾಣುವ ಅಪಾಯವುಂಟು. ಒಂದು ವೇಳೆ ಆಕೆ ಸ್ವಾಭಿಮಾನಿಯಾಗಿದ್ದರೆ ನಿಮ್ಮ ಭಿಕ್ಷೆ ಮರಳಿ ನಿಮ್ಮ ಕೈ ಸೇರುವುದು ಖಂಡಿತ.

ಹೋಟೆಲ್-ಪಾನಂಗಡಿಗಳ ತಂಟೆಯೇ ಬೇಡ ಎಂದು ಕಿರಾಣಿ ಅಂಗಡಿ ಹೊಕ್ಕರೆ ನಿಮಗೆ ಒಂದು ರೂಪಾಯಿಯ ಅಪಾರ ಸಾಧ್ಯತೆಗಳು ಕಣ್ಣಿಗೆ ಬೀಳುತ್ತವೆ. ಹೊಕ್ಕಿದ್ದು ಚಿಕ್ಕ ಅಂಗಡಿಯಾಗಿದ್ದರೆ ಒಂದು ರೂಪಾಯಿಗೆ ನಾಲ್ಕು ಬಿಸ್ಕೀಟುಗಳ ಒಂದು ಪ್ಯಾಕ್ ಸಿಕ್ಕುತ್ತದೆ. ಇಲ್ಲದಿದ್ದರೆ ಒಂದು ಬನ್ನನ್ನಾದರೂ ತೆಗೆದುಕೊಳ್ಳಬಹುದು. ನೀವು ಆಸ್ತಿಕರಾಗಿದ್ದರೆ, ದೇವರಿಗೆ ಅರ್ಪಿಸಲೆಂದೇ ತಯಾರಾದ ಊದುಬತ್ತಿಯ ಪುಟ್ಟ ಕಟ್ಟು ಅಥವಾ ಕರ್ಪೂರ ಅಥವಾ ಹೂಬತ್ತಿಗಳಾದರೂ ಸಿಕ್ಕಾವು. ಧೂಪದ ಪುಟ್ಟ ಚೀಟಂತೂ ಖಂಡಿತ ಸಿಕ್ಕುತ್ತದೆ.

ಇವೇನೂ ಬೇಡ ಎಂದರೆ ಲೋಕಲ್ ಬ್ರ್ಯಾಂಡ್‌ನ ಎರಡು ಪುಟ್ಟ ಬೆಂಕಿಪೊಟ್ಟಣಗಳನ್ನು ಕೊಳ್ಳಬಹುದು. ಕಿವಿಯ ಗುಗ್ಗೆ ತೆಗೆಯಲು ನಾಲ್ಕು ಕಿವಿಗೊಳವೆಗಳಾದರೂ ಸಿಕ್ಕಾವು. ಒಂದು ರೂಪಾಯಿ ಕೊಟ್ಟು ಚಹಪುಡಿ ಅಥವಾ ಇನ್‌ಸ್ಟಂಟ್ ಕಾಫಿಪುಡಿ ಚೀಟನ್ನೊಯ್ದು ಬಟ್ಟಲು ತುಂಬ ಚಹ/ಕಾಫಿ ಮಾಡಿಕೊಂಡು ಕುಡಿಯಬಹುದು. ಇಲ್ಲವೆ ಬಬಲ್‌ಗಮ್ ಅಥವಾ ಮಿಂಟನ್ನಾದರೂ ಕೊಂಡು ಬಾಯಿಗೆ ಪರಿಮಳ ತಂದುಕೊಳ್ಳಬಹುದು.

ಇಲ್ಲ, ಒಂದು ರೂಪಾಯಿಯನ್ನು ಇನ್ನೂ ಭಿನ್ನವಾಗಿ ಬಳಸಬೇಕು ಎಂದೇನಾದರೂ ನೀವು ಯೋಚಿಸಿದರೆ ಒಂದು ಡಿಟರ್ಜೆಂಟ್ ಪೌಡರ್ ಚೀಟು ಖರೀದಿಸಿ, ಬಟ್ಟೆ ತೊಳೆದುಕೊಂಡು ಸೋಮಾರಿತನ ಕಡಿಮೆ ಮಾಡಿಕೊಳ್ಳಬಹುದು. ಇಲ್ಲವೇ ಒಂದು ಚೀಟು ಶ್ಯಾಂಪೂ ಕೊಂಡು ತಲೆ ಸ್ನಾನ ಮಾಡಿ ಹಗುರಾಗಬಹುದು. ಅವೆಲ್ಲ ಇವೆ ಎನ್ನುವುದಾದರೆ ಒಂದು ಚೀಟು ತೆಂಗಿನೆಣ್ಣೆ ಕೊಂಡು ಮೂರು ದಿನ ಮಜಬೂತಾಗಿ ಬಳಸಿ.

ಕಿರಾಣಿ ಅಂಗಡಿ ಬೇಡ ಎಂದಾದರೆ ಪಕ್ಕದ ತರಕಾರಿ ಅಂಗಡಿಗೆ ಬನ್ನಿ. ಕೊಂಚ ಚೌಕಾಸಿ ಮಾಡಿದರೆ ಅಥವಾ ತೀರ ಪರಿಚಯದವರಾಗಿದ್ದರೆ ಒಂದು ರೂಪಾಯಿಗೆ ಕೊತ್ತಂಬರಿ ಅಥವಾ ಕರಿಬೇವು ಅಥವಾ ಸೊಪ್ಪಿನ ಒಂದು ಸಣ್ಣ ಕಟ್ಟನ್ನು, ಮಸ್ತು ಮುಗುಳ್ನಗೆಯ ಜೊತೆ ಕೊಟ್ಟಾಳು ತರಕಾರಿ ಆಂಟಿ! ಅವೇನೂ ಬೇಡ ಎಂದರೆ ಸಾದಾ ಗಾತ್ರದ ನಿಂಬೆಹಣ್ಣಾದರೂ ಸಿಕ್ಕೀತು. ಎರಡು ದಿನಗಳಿಗಾಗುವಷ್ಟು ಹಸಿ ಮೆಣಸಿನಕಾಯಿಗಂತೂ ಮೋಸವಿಲ್ಲ. ಇಲದ್ದಿದರೆ ಒಂದು ಪುಟ್ಟ ಕ್ಯಾರೆಟ್ ಅಥವಾ ಸೌತೆ ಕಾಯಿ ಕೊಂಡು ಹಲ್ಲಿಗೆ ವ್ಯಾಯಾಮ ಮಾಡಿಕೊಳ್ಳಬಹುದು. ಒಂದು ಭರ್ಜರಿ ನುಗ್ಗೆಕಾಯಿ ಕೊಂಡು ರುಚಿಕಟ್ಟಾದ ಸಾರು ಮಾಡಿ ಉಂಡು ರಸಿಕತೆ ಹೆಚ್ಚಿಸಿಕೊಳ್ಳಬಹುದು.

ತಿನ್ನುವ ತೊಳೆಯುವ ರಗಳೆ ಬೇಡ ಎಂದಾದರೆ ಒಂದು ರೂಪಾಯಿ ಬಳಕೆಯ ಹೊಸ ಆಯಾಮಗಳು ತೆರೆದುಕೊಳ್ಳತೊಡಗುತ್ತವೆ. ಶಿವಾಜಿನಗರದಲ್ಲಿ ಸಿಟಿ ಬಸ್ ಹತ್ತಿ, ಕಂಡಕ್ಟರ್ ಕೈಗೆ ಒಂದ್ರುಪಾಯಿ ಇಟ್ಟು ಸುಮ್ಮನೇ ನಿಂತರೆ ಎಂ.ಜಿ. ರಸ್ತೆಯವರೆಗೆ ಅದು ಅವನನ್ನು ನಿಮ್ಮ ಋಣದಲ್ಲಿ ಇರಿಸುತ್ತದೆ. ಕಾಯಿನ್ ಬೂತಿಗೆ ತೂರಿಸಿ, ಮೊಬೈಲ್‌ ಅಥವಾ ಲ್ಯಾಂಡ್‌ಲೈನ್‌ ಮೂಲಕ ಮೆಚ್ಚಿದ ಜೀವಿಯೊಂದಿಗೆ ಮಾತಿನಲ್ಲೇ ಕಷ್ಟಸುಖ ಹಂಚಿಕೊಳ್ಳಬಹುದು. ಪೆಟ್ರೋಲ್ ಬಂಕ್‌ನ ಗಾಳಿಯಂತ್ರದವ ಒಂದು ರೂಪಾಯಿಗೆ ಟುಣ್ ಟುಣ್ ಎನ್ನುವ ಹಾಗೆ ನಿಮ್ಮ ವಾಹನದ ಚಕ್ರಗಳಿಗೆ ಗಾಳಿ ತುಂಬಿ ಕೊಟ್ಟಾನು. ತೂಕದ ಯಂತ್ರದ ಬಾಯಿಗೆ ಹಾಕಿದರೆ ಅದು ನಿಮ್ಮ ಶರೀರದ (ವ್ಯಕ್ತಿತ್ವದ್ದಲ್ಲ!) ತೂಕವನ್ನು ತಿಳಿಸೀತು.

ಕೆ.ಆರ್. ಮಾರ್ಕೆಟ್‌ಗೆ ಹೋದರೆ ರೂಪಾಯಿಗೊಂದು ಪೆನ್ನು ಸಿಗುತ್ತದೆ. ಹೇರ್‌ಬ್ಯಾಂಡ್ ದೊರೆಯುತ್ತದೆ. ಬೆಂಗಳೂರಿನ ಯಾವುದೇ ಝೆರಾಕ್ಸ್ ಅಂಗಡಿಗೆ ಹೋದರೂ ಒಂದು ನೆರಳಚ್ಚು ಪ್ರತಿ ಮಾಡಿಕೊಡುತ್ತಾರೆ. ಮಲ್ಲೇಶ್ವರಂನಲ್ಲಾದರೆ ಎರಡು ಪ್ರತಿ ದೊರೆತಾವು. ಇವೇನೂ ಬೇಡ ಎಂದಾದರೆ, ನ್ಯೂಸ್ ಸ್ಟಾಲ್‌ಗಳಿಗೆ ಹೋಗಿ ಲಕ್ಷಣವಾಗಿ ಒಂದು ಸಂಜೆಪತ್ರಿಕೆ ಕೊಂಡು ನಿಮ್ಮ ಜ್ಞಾನ ದಿಗಂತವನ್ನು ನಗರದ ಮಿತಿಯಾಚೆಗೆ ವಿಸ್ತರಿಸಿಕೊಳ್ಳಬಹುದು.

ಇನ್ನು ಮುಂದೆ ಒಂದು ರೂಪಾಯಿ ಎಂದರೆ ’ಛೀ, ಚಿಲ್ಲರೆ’ ಎಂಬ ಹೀಗಳಿಕೆ ಬೇಡ. ಏಕೆಂದರೆ ಅದಕ್ಕೆ ನೂರಾರು ಸಾಧ್ಯತೆಗಳಿವೆ,
ಈ ಬದುಕಿಗೆ ಇರುವಂತೆ!

- ಚಾಮರಾಜ ಸವಡಿ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸಕತ್ ಲೇಖನ ಚಾಮರಾಜರೆ :)
ಒಂದು ರುಪಾಯಿಗೇನು ಸಿಗತ್ತೆ? ಅನ್ನೋ ಮಂದಿಗೆ....ಏನೆಲ್ಲಾ ಸಿಗಲ್ಲ ಹೇಳಿ!! ಅಂತ ನೀವು ಕೊಟ್ಟಿರೋ ದೊಡ್ಡ ಲಿಸ್ಟ್ ಹೇಳಬಹುದು...
-ಸವಿತ

ದೊಡ್ಡ ದೊಡ್ಡ ಅಂಗಡಿಗೆ ಹೋದಾಗ ೯೯, ೪೯೯, ೯೯೯ ರೂಪಾಯಿಗಳ ದೊಡ್ಡ ಬೆಲೆ ತೆತ್ತು ಒಂದು ರೂಪಾಯಿ ಚೇಂಜು ಗೊತ್ತಿದ್ದೂ ಬಿಟ್ಟು ಬರೋವರು.....ಮನೆ ಬಳಿ ಸೊಪ್ಪು ತರಕಾರಿಯವರ ಹತ್ತಿರ ಒಂದೊಂದು ರೂಪಾಯಿಗೂ ಚೌಕಾಶಿ ಮಾಡೋದನ್ನ ನೋಡಿದ್ರೆ ಏನನ್ನಬೇಕೋ ಗೊತ್ತಾಗಲ್ಲ..ಚಾಮರಾಜರೆ.

>>ಒಂದೊಂದು ರೂಪಾಯಿಗೂ ಚೌಕಾಶಿ ಮಾಡೋದನ್ನ ನೋಡಿದ್ರೆ ಏನನ್ನಬೇಕೋ ಗೊತ್ತಾಗಲ್ಲ..

ಚೌಕಾಶಿ ಮಾಡೋರಿಗೆ ಒಂದು ರುಪಾಯಿ ಬೆಲೆ ಗೊತ್ತು ಅಂತನ್ನಿ ಸವಿತಾಜೀ :)
*ಅಶೋಕ್

ಚಾಮರಾಜರೇ, ಲೇಖನ ತುಂಬಾ ಇಷ್ಟ ಆಯ್ತು.. ಒಂದ್ರುಪಾಯಿ ಫೋಟೊ ಹಾಕಿದ್ರೆ ಇನ್ನು ಚೆನ್ನ..

ಸವಿತ,

ಕೆಲವ್ರಿಗೆ ಚೌಕಾಸಿ ಮಾಡೋದ್ರಲ್ಲೇ ಆನಂದ,, ಬಿಟ್ರೆ ದೊಡ್ಡ ಮಳಿಗೆಲೂ ಮಾಡ್ತಾರೆ, ಆದ್ರೆ ಅವಕಾಶ ಇಲ್ವಲ್ಲ ಅದಕ್ಕೆ ಮಾಡೊಲ್ಲ ಅಷ್ಟೆ. ನಿನ್ನೆ ತಾನೆ ಇದ್ರ ಮೇಲೆ ಒಂದು ಲೇಖನ ಓದಿದೆ: http://chaayakannadi.blogspot.com/2008/11/blog-post.html

:)

--
PaLa

MNS Rao
ನಾನು ಚಿಕ್ಕವನಿದ್ದಾಗ ಕೇವಲ ಅರ್ಧ ಆಣೆಗೆ ಕಡಲೆ ಕಾಯಿ ಕೊಂಡು ತಿಂದು ಆನಂದಿಸುತ್ತಿದ್ದೆ. ಈಗಿನ ಹಣದುಬ್ಬರ ಕಂಡು ಗಾಬರಿಯಾಗುತ್ತದೆ. ಒಂದು ಸಲ ನನಗೆ ಅನಿಸಿದ್ದು: ರುಪಾಯಿಯನ್ನು ಹಣದ ಮೂಲ ಮೌಲ್ಯದಿಂದ ತೆಗೆದು ನೂರು ರುಪಾಯಿಯನ್ನು ಇಡಬೇಕೋ ಏನೋ ಎಂದು. ಆಗ `ಚಿಲ್ಲರೆ' ಗಳನ್ನು ಠಂಕಸಾಲೆಯಲ್ಲಿ ತಯಾರಿಸುವುದೇ ಬೇಡ. ಆಗ ನಮ್ಮ ಮೂಲ ಕರೆನ್ಸಿ ಅಮೇರಿಕಾದ ಡಾಲರ್‍ಗಿಂತ ಹೆಚ್ಚು ಬೆಲೆಬಾಳುತ್ತದೆ. ನಮ್ಮ ಒಂದಕ್ಕೆ ಅಮೇರಿಕಾದ ಎರಡು ಡಾಲರ್! ಬೇಕಿದ್ದರೆ ಆ ನೂರು ರುಪಾಯಿಯನ್ನು `ಇಂದಿರಾ' ಎಂದು ಕರೆಯಿರಿ. ಇದು `ಇಂಡಿಯಾ' ಎಂಬುದಕ್ಕೆ ಹತ್ತಿರವಾಗಿದೆ. ಮತ್ತು ನಮ್ಮ ದೇಶದ ಜನರು ಆ ನೆಹರೂ ವಂಶದ ಹಿಡಿತದಿಂದ ಹೊರ ಬಂದಿಲ್ಲದಿರುವುದರಿಂದ `ಇಂದಿರಾ' ಹೆಸರು ಆಪ್ಯಾಯಮಾನವಾಗಬಹುದು. ಅವರ ಹೆಸರು, ಪ್ರಭಾವ, ನಮ್ಮ ದಾಸ್ಯ ಎಲ್ಲವನ್ನೂ ಶಾಶ್ವತವಾಗಿ ಕಾಪಾಡಿಕೊಳ್ಳಬಹುದು.

ವಸ್ತುವಿನ ಮೌಲ್ಯದ ಜೊತೆಗೆ ಹಣದ ಮೌಲ್ಯವೂ ಬದಲಾಗುತ್ತಿರುತ್ತದೆ. ಆಗಿನ ಒಂದಾಣೆಯ ಮೌಲ್ಯವೇ ಬೇರೆ, ಈಗಿನ ಹಣದ ಮೌಲ್ಯವೇ ಬೇರೆ ರಾವ್‌ ಸರ್‌. ಮುಂದೆಂದೋ ಒಂದಿನ ನಮ್ಮ ಮುಂದಿನ ಪೀಳಿಗೆಯವರು, ನೂರು ರೂಪಾಯಿಯ ಬಗ್ಗೆ ಹೀಗೇ ಬರೆಯಬಹುದೇನೋ. ಹಣದ ಮೌಲ್ಯ ಬದಲಾಗಬಹುದು, ಆದರೆ ಭಾವನೆ ಹಾಗೇ ಇರುತ್ತದಲ್ವೆ?

- ಪ್ರಶಾಂತ್‌‌. ಎಂ.ಸಿ
ಪ್ರಬಂಧ ತುಂಬಾ ಇಷ್ಟವಾಯ್ತು. ಹೌದು ಸಾರ್‍. ಒಂದು ರುಪಾಯಿ “ರುಪಾಯಿಗಳ ರಾಜ” ಎಷ್ಟೆಲ್ಲಾ ಸುತ್ತಾಡಿಸಿದ್ರಿ ಒಂದು ರುಪಾಯಿಯನ್ನಿಟ್ಟುಕೊಂಡು. ‘ಒಂದು ರುಪಾಯಿನಾ’...? ಅನ್ನೋರಿಗೆ ಒಳ್ಳೆಯ ಮಾಹಿತಿ.

- ಬಾಲರಾಜು ಡಿ.ಕೆ.
ಸೊಗ್ಸಾದ್ ನಿರೂಪ್ಣೆ. ಹನಿ ಹ್ನಿ ಸೇರಿದ್ರೆ ಏನು ಮಾವ್ಭುದು ಹೇಳಿ ಅದ್ಕ್ಫ಼್ಕೆಲ್ಫ಼್ಲಾ ಈ ಲೇಖ್ನ್ ಉದಾಹ್ರ್ಣೆ
ಯಾವುದ್ನ್ಫ಼್ನೂ ಹೀಯಾಳಿಸ್ಬಾರ್ದು ಅನ್ಫ಼್ನೋಕೆ, ಎಲ್ಫ಼್ಲಾ ಮುಖ್ಫ಼್ಯ್ ಅನ್ಫ಼್ನಿಸ್ದಿರ್ದು ಓದಿದ್ವ್ರಿಗೆ.
ತ್ಮಾ಼ಎಯಾಗಿ ಕ್ಂವ್ರೂ ಅಟ್ ಗ್ಭಿತ್ ಲೇಖ್ನ್

ರೀ ನಿಮಗೆ ಇನ್ನು ಒಂದು ರುಪಾಯಿಯ ಮಹಿಮೆ ಗೊತ್ತಿಲ್ಲಾರೀ. ಕೇವಲ ಒಂದು ರುಪಾಯಿಗಾಗಿ ಒಂದು ಕೌಟುಂಬಿಕ ಕಲಹಾನೇ ನಡೆದು ಹೋಗಿತ್ತು. ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಕಥೆ , ನನ್ನ ಹತ್ತಿರದ ಸಂಬಂಧಿಯೊಬ್ಬರು ಹಳ್ಳಿಯಲ್ಲಿ ಸಣ್ಣ ಹೋಟೇಲ್ ನಡೆಸುತ್ತಿದ್ದಾರೆ. ಅವರಲ್ಲಿ ಬಂದ ಗಿರಾಕಿಯೊಬ್ಬ ಒಂದು ರುಪಾಯಿ ಸಾಲ ಮಾಡಿ ತಲೆಮರೆಸಿ ಓಡಾಡುತಿದ್ದ. ಹೇಗೋ ಒಂದು ದಿನ ಆತ ಸಿಕ್ಕಿದ್ದೇ ತಡ, ಆತನ ಶರ್ಟ್ ಜಫ್ತಿ ಮಾಡಿ (ಅದು ಬಿಟ್ರೆ ಅವನಲ್ಲಿ ಬೇರೇನೂ ಇರಲಿಲ್ಲ! ) ಹೊಟೇಲಿನ ಎದುರಿನ ಮೊಳೆಗೆ ಸಿಕ್ಕಿಸಿ ಇಡಲಾಯ್ತು. ಹೋಟೇಲಿಗೆ ಬರುವ ಎಲ್ಲ ಗಿರಾಕಿಗಳ ಎದುರು ಆತನ ಶರ್ಟನ್ನು ಪ್ರದರ್ಶಿಸಿ, ಆತನ ಮಾನ ಮರ್ಯಾದೆ ಕಳೆದು, ಸಾಲ ವಸೂಲಿ ಮಾಡುವ ಐಡಿಯಾ ಇದು. ಆದ್ರೆ ಆದದ್ದೇ ಬೇರೆ. ಅದೇ ಹೊತ್ತಲ್ಲಿ ಅಲ್ಲಿಗೆ ಬಂದ ಹೋಟೇಲ್ ಮಾಲಕರ ಪತ್ನಿ ಹೋಟೆಲ್ ಎದುರಿನ ಈ "ದರಿದ್ರ"ವನ್ನು ನೋಡಿ ಕೆಂಡಾಮಂಡಲವಾದರು. "ಮೊದಲು ಈ ಗಬ್ಬುನಾತದ ಶರ್ಟನ್ನು ಆಚೆ ಎಸೆಯಿರಿ" ಆಕೆಯದ್ದು ಒಂದೇ ಅರ್ಭಟ . ಇವರಿಗೋ ದ್ವಂದ್ವ . "ಸಾಲಗಾರನೇನಾದರೂ ಸಾಲ ಮರಳಿ ಕೊಟ್ಟರೆ ಅವನ ಶರ್ಟನ್ನು ಮರಳಿಸಬೇಡವೆ?" ಸತಿ ಪತಿ ಜಗಳ ತಾರಕಕ್ಕೆ ಹೋಗಿ ಆ ಶರ್ಟ್ ಇನ್ನೊಂದು ಕ್ಷಣ ಅಲ್ಲಿದ್ದರೂ ಆಕೆ ತನ್ನ ತವರಿಗೆ ಹೋಗಲು ರೆಡಿಯಾದಳು. ಪತಿಗೊ ಗಾಭರಿ. ನೆರೆದಿದ್ದ ಮಂದಿಗೆಲ್ಲಾ ಪುಕ್ಕಟೆ ಮನರಂಜನೆ. ಕೊನೆಗೆ ಪತ್ನಿಯ ಹಟಕ್ಕೆ ಮಣಿದ ಪತಿರಾಯ ಸೈಕಲನ್ನೇರಿ ಆ ಗಬ್ಬುನಾತದ ಶರ್ಟನ್ನು ಆತನ ಮನೆಗೆ ಮರಳಿಸಿ ,ಪತ್ನಿಯ ಆಗ್ರಹದಿಂದ ಪಾರಾದರು. ಅದಾಗಿ ಇಪ್ಪತ್ತು ವರ್ಷ ಕಳೆದಿದೆ .ಇಂದಿಗೂ ಆ ಮಹಾನುಭಾವ ಒಂದು ರೂಪಾಯಿ ಸಲವನ್ನು ಮರಳಿಸಿಲ್ಲ. ಮಾತ್ರವಲ್ಲ ಮತ್ತೆಂದೂ ಆತ ತಲೆ ಮರೆಸಿ ಓಡಾಡಲಿಲ್ಲ!

ಟೈಮ್ಸ್ ಆಫ್ ಇಂಡಿಯಾದಲ್ಲಿ ಹಿಂದೊಮ್ಮೆ ಒಂದ್ರೂಪಾಯಿಗೆ ಏನೇನು ಮಾಡಬಹುದು ಅಂತ ಇತ್ತು .

ಪೋಸ್ಟ್ ಕಾರ್ಡ್ , ನಿರೋಧ್ ಕೂಡ ಆ ಪಟ್ಟಿಯಲ್ಲಿದ್ದವು .

ಮುಂಬೈನ ದಾದರ್ ನಲ್ಲಿ ಎಂಟಾಣೆಗೆ ಝುಣಕಾಭಾಕರ್ ಸಿಗುತ್ತದೆ . ಗುಲ್ಬರ್ಗಾದಲ್ಲೆಲ್ಲೋ ಒಂದ್ರೂಪಾಯಿಗೆ ಊಟ ಸಿಗುತ್ತದಂತೆ ... ಹೋದವರ್ಷ ಪ್ರಜಾವಾಣಿಯಲ್ಲಿ ನೋಡಿದ್ದೆ .

ಒಂದು ರೂಪಾಯಿಯ ಬೆಲೆ ಯಾವಾಗ ಗೊತ್ತಾಗುತ್ತೆ , ಅಂದ್ರೆ ಒಂದು ಕೋಟಿ ರೂಪಾಯಿಯಲ್ಲಿ ಒಂದು ಪೈಸೆ ತೆಗೆದರೂ ಅದು ಒಂದು ಕೋಟಿ ರೂಪಾಯಿ ಎನಿಸುವುದಿಲ್ಲ ,ಅಲ್ಲವೇ?
೯೯೯೯೯೯೯.೯೯ [ತೊಂಬತ್ತೊಂಬತ್ತು ಲಕ್ಷದ ತೊಂಬತ್ತೊಂಬತ್ತು ಸಾವಿರದ ಒಂಬೈನೂರ ತೊಂಬತ್ತೊಂಬತ್ತು ರೂ ತೊಂಬತ್ತೊಂಬತ್ತು ಪೈಸೆಗಳಾಗುತ್ತದೆಯೇ ಹೊರತು ಒಂದು ಕೋಟಿ ರೂಪಾಯಿ ಯಾಗುವುದಿಲ್ಲ. ಒಂದು ಪೈಸೆ ಗೇ ಮಹತ್ವ ವಿರುವಾಗ ಒಂದು ರೂಪಾಯಿಗೆ ಬೇಡವೇ?