ನಮ್ಮೂರಿನಲ್ಲಿ ಹೀಗೊಂದು ರಸದೌತಣ

To prevent automated spam submissions leave this field empty.

ನಮ್ಮೂರಿನಲ್ಲಿ ಹೀಗೊಂದು ರಸದೌತಣ
ದರ್ಶನೇ ಸ್ಪರ್ಶನೇ ಚಾಸ್ಯ ಭೋಗ ಸ್ವರ್ಗಾಪವರ್ಗದೇ
ಪುನೀತೋ ವಿಪ್ರ ಹತ್ಯಾದಿ ಪಾತಕೇ ಪತಿತಂಜನಂ
ದಂಡಶ್ಶಂಬುರುಮಾ ತಂತ್ರೀ ಕಕುಭಿಃ ಕಮಲಾಪತಿಃ
ಇಂದಿರಾ ಪತ್ರಿಕಾ ಬ್ರಹ್ಮ ತುಂಬು ನಾಭಿ ಸರಸ್ವತೀ
ದೋರಕೋ ವಾಸುಕೀರ್ಜೀವಾ ಸುಧಾಂಶುಸ್ಸಾರಿಕಾ ರವಿಃ
ಸರ್ವದೇವಮಯೀ ತಸ್ಮಾತ್ ವೀಣೀಯಂ ಸರ್ವಮಂಗಳಾ||
ಶಾರ್ಙ್ಗದೇವ
ತಾತ್ಪರ್ಯ:- ದಂಡದಲ್ಲಿ ಈಶ್ವರನೂ, ತಂತಿಯಲ್ಲಿ ಪಾರ್ವತಿದೇವಿಯೂ, ಕಕುಭದಲ್ಲಿ ವಿಷ್ಣುವೂ, ತಂತಿಗಳು ಹಾದು ಹೋಗುವ ವೀಣೆಯ ಭಾಗದಲ್ಲಿ ಲಕ್ಷ್ಮಿಯೂ, ಸೋರೆ ಬುರುಡೆ ಬ್ರಹ್ಮ ಸ್ವರೂಪವಾಗಿಯೂ, ನಾಭಿಯಲ್ಲಿ ಸರಸ್ವತಿದೇವಿಯೂ, ದೋರಕದಲ್ಲಿ (ತಂತಿಯನ್ನು ಕಟ್ಟುವ ಬಿರಟೆಗಳು) ವಾಸುಕಿಯೂ, ಜೀರುನಾದಕ್ಕೆ ಉಪಯೋಗಿಸಲ್ಪಡುವ ದಾರವು ಚಂದ್ರ ಸ್ವರೂಪ ಎಂದೂ, ಸಾರಿಕಾ ಸೂರ್ಯಾಂಶವಾಗಿಯೂ, ಹೀಗೆ ವೀಣೆಯಲ್ಲಿ ದೇವಾನುದೇವತೆಗಳೆಲ್ಲಾ ಇರುತ್ತಾರೆ. ಆದಕಾರಣ ದರ್ಶನ ಮತ್ತು ಸ್ಪರ್ಶ ಮಾತ್ರದಿಂದಲೇ ಮಾಡಿದ ಪಾಪವೆಲ್ಲವೂ ನಾಶವಾಗಿ ಪುನೀತರನ್ನಾಗಿ ಮಾಡುವ ವೀಣೆ ಸರ್ವ ಮಂಗಳೆ.
ಹೀಗೆ ವೀಣೆ ಎಂದರೆ ಸಕಲ ದೇವತೆಗಳ ಆವಾಸ ಸ್ಥಾನ ಎಂಬಂತೆ ಆ ವಾದ್ಯವು ಪೂಜನೀಯ ಸ್ಥಾನ ಪಡೆದಿದೆ. ಇಂತಹಾ ಮಹಾನ್ ವೀಣಾ ನಾದಸುಧೆಯನ್ನು “ನವರಾತ್ರಿ ವೀಣಾ ಮಹೋತ್ಸವ ಸಪ್ತಾಹ” ಎಂಬ ಹೆಸರಿನಡಿಯಲ್ಲಿ 7ದಿನಗಳ ಕಾಲ ಶಿವಮೊಗ್ಗೆಯ ಜನತೆಗೆ ಉಣಬಡಿಸಿದ ಶಿವಮೊಗ್ಗೆಯ ಜನಪ್ರಿಯ ವಿದ್ವಾಂಸರಾದ ಶ್ರಿಯುತ ಹೆಚ್. ಎಸ್. ನಾಗರಾಜ್ ಅವರಿಗೆ ಮೊದಲು ನನ್ನ ಕೃತಜ್ಞತೆಗಳು. ಅಕ್ಟೋಬರ್ 19ರಿಂದ 25ರ ವರೆಗೆ ಶಿವಮೊಗ್ಗೆಯ ಜಯನಗರದ ರಾಮಮಂದಿರದಲ್ಲಿ ನಡೆದ ವೀಣಾ ಸಪ್ತಾಹದಲ್ಲಿ ಸಂಗೀತದ ಪ್ರವಾಹ ಉಕ್ಕಿತ್ತು. ಸಂಗೀತ ಪ್ರಿಯರು ಅದರಲ್ಲಿ ಮುಳುಗಿ ಅನುಭವಿಸಿದ ಆನಂದ ಪದಗಳಿಗೆ ಮೀರಿದ್ದು.
ನಮ್ಮೂರಿನ ಸಂಗೀತ ವಿದ್ವಾಂಸರಾದ ಕೀರ್ತಿಶೇಷ ವಿದ್ವಾನ್ ಶ್ರೀ ಹೆಚ್. ಆರ್. ಪ್ರಸನ್ನ ವೆಂಕಟೇಶ್ ಅವರಿಗೆ ಸಮರ್ಪಿತವಾದ ಈ ವೀಣಾ ಸಪ್ತಾಹ, ಸಂಗೀತ ಪ್ರೇಮಿಗಳಿಗೆ ರಸದೌತಣವನ್ನೇ ನೀಡಿತು. ಶ್ರೀ ಗುರುಗುಹ ವಾಗ್ಗೇಯ ಪ್ರತಿಷ್ಟಾನ ಟ್ರಸ್ಟ್ (ರಿ), ಶಿವಮೊಗ್ಗ ಹಾಗೂ ಗುರುಗುಹ ಸಂಗೀತ ಮಹಾವಿದ್ಯಾಲಯ, ಶಿವಮೊಗ್ಗ, ಇವರ ಸಂಯುಕ್ತ ಆಶ್ರಯದ್ಲದಲ್ಲಿ ನಡೆದ ಈ ಒಂದು ಅದ್ಭುತ ಕಾರ್ಯಕ್ರಮದಲ್ಲಿ ಶ್ರೋತೃಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿಲ್ಲವಲ್ಲ ಎಂಬ ಕೊರಗು ಮಾತ್ರ ಅಲ್ಲಿ ನೆರೆದಿದ್ದ ಎಲ್ಲಾ ಸಂಗೀತ ಪ್ರೇಮಿಗಳ ಮನಸ್ಸನ್ನು ಕೊರೆಯುತ್ತಿತ್ತು. ಅತ್ಯಂತ ಹೆಚ್ಚಿನ ಪರಿಶ್ರಮ ಹಾಕಿ ಅನೇಕ ವೀಣಾ ವಿದ್ವಾಂಸರ ಕಲೆ ಹಾಕಿ ನಡೆಸಿದ ಇಂತಹ ಒಂದು ಅಪರೂಪದ ಕಾರ್ಯಕ್ರಮಕ್ಕೆ ಬರಲು ಶಿವಮೊಗ್ಗೆಯ ಜನತೆಗೆ ಸಮಯವಿಲ್ಲದಂತಾಯಿತಲ್ಲ ಎಂಬ ಬೇಸರ.
ಈ ತಿಂಗಳ 19ರಂದು ಪರಮಪೂಜ್ಯ ಶ್ರೀಮತ್ ಜಗದ್ಗುರು ಕೂಡಲಿಯ ಶ್ರೀ ಶ್ರೀ ಶ್ರೀ ಡಾ|| ವಿದ್ಯಾಭಿನವ ವಿದ್ಯಾರಣ್ಯ ಭಾರತಿಯವರ ಅಧ್ಯಕ್ಷತೆ ಹಾಗೂ ಆಶೀರ್ವಚನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮೊದಲನೆಯ ದಿನ ‘ನಾದ ಸಂಭ್ರಮ’ ಎಂಬ ಹೆಸರಿನಡಿಯಲ್ಲಿ ವಿ|| ಶ್ರೀಮತಿ ಎಲ್. ಲೀಲಾರವರಿಂದ ಶಂಕರಾಭರಣ ಅಟ್ಟತಾಳದ ವರ್ಣದೊಂದಿಗೆ ಪ್ರಾರಂಭಿಸಿ, ಕಾರ್ಯಕ್ರಮ ಕಳೆ ಕಟ್ಟುವಂತೆ ಮಾಡಿದರು. ಪ್ರಮುಖ ರಾಗವಾಗಿ ಹೇಮಾವತಿಯ ರಾಗ ಆಲಾಪನೆ ಮಾಡಿ ರಾಗಮಾಲಿಕೆಯಲ್ಲಿ ತಾನ ನುಡಿಸಿ ನಂತರ ಶ್ರೀ ಕಾಂತಿಮತಿಂ ನುಡಿಸಿ ‘ನಾದ ಸಂಭ್ರಮ’ ಎಂಬ ಹೆಸರನ್ನು ಸಾರ್ಥಕಗೊಳಿಸಿದರು.
ಎರಡನೆಯ ದಿನ ಅಂದರೆ 20ರಂದು ‘ನಾದಾಮೋದ’ ಎಂಬ ಹೆಸರಿನಡಿಯಲ್ಲಿ ಮೈಸೂರಿನ ವಿ|| ಡಾ|| ಎಸ್. ವಿಜಯರಾಘವನ್ M.B.B.S.,M.D. ಅವರ ವೀಣಾ ವಾದನವಿತ್ತು. ಈ ದಿನದಿಂದ ಮತ್ತೊಂದು ವಿಶೇಷ ಎಂದರೆ ವೀಣೆಯ ಬಗ್ಗೆ ದಿನಕ್ಕೊಂದು ವಿಷಯದಂತೆ ಪ್ರಾತ್ಯಕ್ಷಿಕೆಯನ್ನೂ ಸಹಾ ವೀಣಾ ವಿದ್ವಾಂಸರು ನೀಡಿದರು. ಪ್ರತಿಯೊಬ್ಬ ವಿದ್ವಾಂಸರೂ ವೀಣೆಯ ವಿವಿಧ ವಿಚಾರಗಳ ಮೇಲೆ ಬೆಳಕು ಚೆಲ್ಲಿದರು. ಡಾ|| ವಿ. ವಿಜಯರಾಘವನ್ ಅವರು ‘ವೀಣೆಯ ವಿಶೇಷ ತಾಂತ್ರಿಕ ಕೌಶಲ್ಯಗಳು’ ಎಂಬ ವಿಷಯದ ಬಗ್ಗೆ ವಿವರಣೆ ನೀಡಿದರು. ವೀಣೆಯ ವಿವಿಧ ಭಾಗಗಳ ಜೋಡಣೆ ಮತ್ತು ಅವುಗಳ ವಿಶೇಷತೆ ಬಗ್ಗೆ ತಿಳಿಸಿಕೊಟ್ಟರು. ಅವರ ವೀಣಾ ವಾದನ ಸೊಗಸಾದ ಅನುಭವವನ್ನು ನೀಡಿತು. ಅದರಲ್ಲೂ ಚಾರುಕೇಶಿ ರಾಗ ಒಂದು ಮಧುರವಾದ ಅನುಭೂತಿಯನ್ನು ಉಂಟುಮಾಡಿತು.
ಮೂರನೆಯ ದಿನ ಅಂದರೆ 21ರಂದು ವಿ||ಶ್ರೀಮತಿ ಭಾಗ್ಯಲಕ್ಷ್ಮಿ ಚಂದ್ರಶೇಖರನ್‍ರವರ ‘ನಾದ ಸಿಂಚನ’ ಅಮೋಘವಾಗಿ ಶ್ರೋತೃಗಳ ಕಿವಿಗಳನ್ನು ತಂಪುಗೊಳಿಸಿತು. ಅವರಿಗೆ ಪ್ರಾತ್ಯಕ್ಷಿಕೆಗೆ ಇದ್ದ ವಿಷಯವೆಂದರೆ ‘ವೀಣಾ ವಾದನದಲ್ಲಿ ಗಮಕಗಳ ವಿಶೇಷತೆ’. ಅವರು ಅದರ ಬಗ್ಗೆ ಹೇಳಿದ ಮಾತೊಂದು ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಉಳಿಯಿತು. “ಗಮಕ ಎಂದರೆ ಸ್ವರಗಳನ್ನು ವಿವಿಧ ರೀತಿಯಲ್ಲಿ ಮಿಶ್ರಣ ಮಾಡಿ ರಂಜಿಸುವುದಷ್ಟೇ ಅಲ್ಲ. ಸ್ವರಗಳು ಪ್ರತಿಯೊಂದು ರಾಗದ ಭಾವದೊಂದಿಗೆ ಬೆರೆತು ಆ ರಾಗದ ಅನುಭವವನ್ನು ತುಂಬಿಕೊಡುವಂತಿರಬೇಕು. ಪ್ರತಿ ರಾಗದ ವಾದಿ ಸಂವಾದಿ ಸ್ವರಗಳು ಜೀವಸ್ವರಗಳು ಆಯಾ ರಾಗದ ರಸವನ್ನೂ, ವಿಸ್ತಾರವನ್ನೂ ತೋರಿಸಿ ಜೀವ ತುಂಬುವಂತಿರಬೇಕು.” ಅದರಲ್ಲೂ ವೀಣೆಯಲ್ಲಿ ಮುಂದಿನ ಸ್ವರಗಳನ್ನು ಹಿಂದಿನ ಮನೆಯಲ್ಲಿ ಎಳೆದು ನಿಲ್ಲಿಸುವಾಗ ಅಥವಾ ಒಂದೇ ಮನೆಯಲ್ಲಿ ಎರಡು ಮೂರು ಸ್ವರಗಳನ್ನು ಎಳದು ತರುವಾಗ ಸ್ವರಜ್ಞಾನದ ಅವಶ್ಯಕತೆಯ ಬಗ್ಗೆ ಒತ್ತಿ ಹೇಳಿದರು. ಹಾಗೆ ಖಚಿತವಾದ ಸ್ವರಜ್ಞಾನವಿಲ್ಲದಿದ್ದರೆ ವೀಣೆ ನುಡಿಸುವಾಗ ಗಮಕಗಳ ಬದಲಿಗೆ ಅಪಸ್ವರಗಳು ಹೊರಡುವ ಅಪಾಯವಿದೆ. ಹೀಗಾಗಿ ಕಲಿಯಲು ಬಯಸುವವರು ಬಾಯಲ್ಲಿ ಹಾಡುವುದನ್ನೂ ಕಲಿಯಲೇಬೇಕು ಎನ್ನುವುದು ಅವರ ವಾದ. ಮುಂದಿನ ಸ್ವರವನ್ನು ಹಿಂದಿನ ಮನೆಯಲ್ಲಿ ಎಳೆಯಲು ಎಷ್ಟು ಎಳೆಯಬೇಕು ಎಂದು ಅವರನ್ನು ಯಾರೋ ಕೇಳಿದರಂತೆ. ಅದಕ್ಕೆ ಅವರ ಉತ್ತರ, “ಅದನ್ನೇನು ಅಳತೆ ಟೇಪ್ ಇಟ್ಟು ಅಳೆಯಲು ಸಾಧ್ಯವೇ? ಅದು ನಮ್ಮ ಸ್ವರಜ್ಞಾನದ ಮಟ್ಟದ ಮೇಲೆ ಅವಲಂಬಿತವಾಗಿದೆ.” ಎಂಬುದೇ ಆಗಿದೆ. ಹಾಡುತ್ತಾ ವೀಣೆಯನ್ನು ನುಡಿಸಿದರೆ ಆಗ ವೀಣೆಯ ಗಮಕಗಳು ಕರಗತವಾಗುತ್ತವೆ ಎನ್ನುತ್ತಾರೆ ಅವರು ಮತ್ತು ವೀಣೆ ಕಲಿಯುವಾಗ ಪ್ರಾರಂಭದಿಂದಲೇ ಅಂದರೆ ಗೀತೆ ಕಲಿಯುವಾಗಲೇ ಗಮಕಗಳನ್ನು ಪ್ರಾರಂಭಿಸಬೇಕು ಎಂದು ಸಲಹೆ ನೀಡಿದರು. ನಂತರದ ಅವರ ಗಮಕಪೂರ್ಣವಾದ ವೀಣಾವಾದನ ಶ್ರೋತೃಗಳನ್ನೆಲ್ಲಾ ಸ್ವರ್ಗಲೋಕಕ್ಕೇ ಕರೆದೊಯ್ದಿತ್ತು. 3ಗಂಟೆಗಳ ಕಾಲ ಕಳೆದದ್ದೇ ಅರಿವಿಗೆ ಬರಲಿಲ್ಲ.
ನಂತರ 4ನೆಯ ದಿನ ಅಂದರೆ 22ರಂದು ವಿ||ಶ್ರೀಮತಿ ಬಿ.ಕೆ. ವಿಜಯಲಕ್ಷ್ಮಿ ರಘು ಅವರ ವೀಣೆಯ ‘ನಾದ ಸೊಬಗು’ ಎಲ್ಲರನ್ನೂ ಉಲ್ಲಾಸಗೊಳಿಸಿತು. ಅವರ ಸೌಮ್ಯವಾದ ವಾದನದಲ್ಲಿ ಕೀರವಾಣಿ ರಾಗವು ಸೊಗಸಾಗಿ ಮೂಡಿ ಬಂತು. ವೇದ ಸಂಸ್ಕೃತಿಯ ಕಾಲದಿಂದ ಹಿಡಿದು ‘ವೀಣಾ ಇತಿಹಾಸ’ವನ್ನು ಅಚ್ಚುಕಟ್ಟಾಗಿ ವಿವರಿಸಿದರು.
5ನೆಯ ದಿನ ವಿ|| ಶ್ರೀಮತಿ ಮಂಜುಳಾ ನಾಗೇಶ್ ಅವರ ವೀಣಾ ವಾದನ ‘ನಾದೋಲ್ಲಾಸ’ ಎಂಬ ಹೆಸರಿನಡಿಯಲ್ಲಿ ನಡೆಯಿತು. ಅವರ ಪ್ರಾತ್ಯಕ್ಷಿಕೆ ‘ವೀಣಾ ವಾದನದಲ್ಲಿ ವಿಭಿನ್ನ ಶೈಲಿಗಳು’ ಎಂಬ ವಿಚಾರವಾಗಿತ್ತು. ಸಾಧಾರಣವಾಗಿ ವೀಣೆಯನ್ನು ನುಡಿಸುವಿಕೆಯಲ್ಲಿ 3 ಶೈಲಿಗಳಿವೆ. ಅವು ಮೈಸೂರು ಶೈಲಿ, ತಂಜಾವೂರು ಶೈಲಿ ಹಾಗೂ ಆಂದ್ರ ಶೈಲಿ. ಮೂರು ಶೈಲಿಗಳಲ್ಲೂ ಸರಳೆ, ಜಂಟಿ ಸರಳಗಳನ್ನು ಹೇಗೆ ನುಡಿಸುತ್ತಾರೆ, ಗಮಕಗಳು ಹೇಗೆ ಬೇರ್ಪಡುತ್ತವೆ ಮತ್ತು ಬೆರಳುಗಳನ್ನು ಉಪಯೋಗಿಸುವ ರೀತಿಗಳ ಬಗ್ಗೆ ಸವಿಸ್ತಾರವಾಗಿ ನುಡಿಸಿ ತೋರಿಸಿದರು. ಅವರ ವೀಣಾ ವಾದನವೂ ಮನೋಜ್ಞವಾಗಿತ್ತು. ಅವರು ಶಂಕರಾಭರಣ ರಾಗದ ವರ್ಣದಿಂದ ಪ್ರಾರಂಭಿಸಿ ಶಂಕರಾಭರಣವನ್ನೇ ಪ್ರಮುಖ ರಾಗವಾಗಿ ನುಡಿಸಿ ರಂಜಿಸಿದರು.
6ನೆಯ ದಿನ ವಿ|| ಶ್ರೀಮತಿ ವಾಣಿಯದುನಂದನ್ ಅವರ ಮಧುರವಾದ ವೀಣಾವಾದನ ‘ನಾದಸಿರಿ’ಯನ್ನು ತುಂಬಿಕೊಟ್ಟು ನುಡಿಸಿದ್ದು ಹಿತವಾಗಿತ್ತು. ಅವರು ‘ವೀಣಾವಾದನದಲ್ಲಿ ಮನೋಧರ್ಮ’ದ ವಿಚಾರವಾಗಿ ಮಾತನಾಡಿದರು. ಆಲಾಪನೆ, ಕಲ್ಪನಾ ಸ್ವರ, ನೆರವಲ್, ತಾನ ಹಾಗೂ ಪಲ್ಲವಿ. ಇವುಗಳಲ್ಲಿ ರಾಗಾಲಾಪನೆ, ಕಲ್ಪನಾ ಸ್ವರ ಹಾಗೂ ತಾನವನ್ನು ಎಲ್ಲಾ ವಾದ್ಯಗಳಲ್ಲೂ ನುಡಿಸುವಂತೆ ವೀಣೆಯಲ್ಲೂ ವಿಸ್ತಾರವಾಗಿ ನುಡಿಸಬಹುದು. ಆದರೆ ಕೆಲವು ವಿಚಾರಗಳಲ್ಲಿ ವೀಣೆಗೆ ಅದರದ್ದೇ ಆದ ಮಿತಿಗಳೂ ಇವೆ ಎಂದರು. ಕೃತಿಯ ಒಂದು ಸಾಲಿನ ನೆರವಲ್ಲನ್ನು ಗಾಯಕರು ಮಾಡುವಂತೆ ವೈಣಿಕರೂ ಮಾಡಬಹುದು. ಆದರೆ ಕೇಳುಗರಿಗೆ ಆ ಕೃತಿಯ ಪರಿಚಯ ಇದ್ದರೆ ಮಾತ್ರ ಇವರು ನೆರವಲ್ ಮಾಡುತ್ತಿದ್ದಾರೆ ಎಂಬುದು ತಿಳಿಯಬಹುದೇನೋ. ಅನೇಕರು ಅದು ನೆರವಲ್ ಎಂದು ಅರಿಯದೇ ಕಲ್ಪನಾ ಸ್ವರ ಹಾಕುತ್ತಿದ್ದಾರೆ ಎಂದುಕೊಳ್ಳಬಹುದು. ಹಾಗೆಯೇ ಪಲ್ಲವಿಯೂ ಸಹಾ ಕೇಳುಗರಿಗೆ ಏನು ನುಡಿಸುತ್ತಿದ್ದಾರೆ ಎಂಬುದು ತಿಳಿಯದಂತಹಾ ಪರಿಸ್ಥಿತಿ ಬರಬಹುದು ಅದಕ್ಕೆ ಸಾಧಾರಣವಾಗಿ ವೈಣಿಕರು ತಾನವಾದ ಕೂಡಲೇ ತಾವು ಆಲಾಪನೆ ಮಾಡಿದ ರಾಗದ ಕೃತಿಯೊಂದನ್ನು ನುಡಿಸಿಬಿಡುತ್ತಾರೆ. ಆದರೆ ತಾನ ಮಾತ್ರ ಗಾಯಕರ ಧ್ವನಿಗಿಂತಲೂ ಅಥವಾ ಇನ್ನಾವುದೇ ವಾದ್ಯಗಳಿಗಿಂತಲೂ ವೀಣೆಯಲ್ಲಿ ಅತ್ಯದ್ಭುತವಾಗಿ ನುಡಿಯುತ್ತದೆ ಎಂದರು. ರಾಗಾಲಾಪನೆ, ತಾನ ಮತ್ತು ಉಗಾಭೋಗಗಳಿಗೆ ತಾಳದ ಬಂಧನವಿಲ್ಲ, ಆದರೆ ತ್ರಿಕಾಲ ಕಲ್ಪನಾ ಸ್ವರಗಳನ್ನು ಹಾಕುವಾಗ, ನೆರವಲ್ ಮಾಡುವಾಗ, ಪಲ್ಲವಿ ಹಾಡುವಾಗ ಅವು ಮನೋಧರ್ಮಕ್ಕೆ ಒಳಪಟ್ಟವಾದರೂ ತಾಳದ ಕಟ್ಟಿನೊಳಗೇ ಸಂಚಾರವಿರಬೇಕು ಎಂದರು.
ಇನ್ನು ಕೊನೆಯ ದಿನವಾದ 7ನೆಯ ದಿನ ಚೆನ್ನೈನಿಂದ ಆಗಮಿಸಿದ ವಿ|| ಶ್ರೀಯುತ ಮುಡಿಕೊಂಡನ್ ಎಸ್. ರಮೇಶ್‍ರವರು ತನ್ಮಯತೆಯಿಂದ ನುಡಿಸಿದ ಆ ದಿನದ ಕಾರ್ಯಕ್ರಮಕ್ಕೆ ‘ನಾದ ತನ್ಮಯಿ’ ಎಂಬ ಹೆಸರು ಸೂಕ್ತವೆನಿಸಿತು. ಇವರು ನಾಟಕುರಿಂಜಿ ವರ್ಣದೊಂದಿಗೆ ತಮ್ಮ ವಾದನವನ್ನು ಪ್ರಾರಂಭಿಸಿದರು. ಇವರು ನುಡಿಸಿದ ಲಲಿತ ರಾಗದ ‘ಹಿರಣ್ಮಯೀಂ’ ಹಾಗೂ ಪ್ರಮುಖ ರಾಗವಾಗಿ ತೆಗೆದುಕೊಂಡ ತೋಡಿ ರಾಗದ ಆಲಾಪನೆ, ತಾನ ಹಾಗೂ ‘ತಾಯೇ ಯಶೋದಾ ಉಂದನ್’ ಎಂಬ ಊತ್ತುಕ್ಕಾಡು ವೆಂಕಟಸುಬ್ಬಯ್ಯರ್ ಅವರ ಕೃತಿ ಮನಮುಟ್ಟುವಂತಿತ್ತು.
ಈ 7ದಿನಗಳ ಕಾರ್ಯಕ್ರಮದಲ್ಲಿ ಎಲ್ಲಾ ವೀಣಾಮೃತಗಳೂ ಶೋಭಿಸಲು ಮುಖ್ಯ ಕಾರಣಕರ್ತರು ಎಂದರೆ ಪಕ್ಕ ವಾದ್ಯಗಳನ್ನು ನುಡಿಸಿದ ಕಲಾವಿದರು ಎಂದರೆ ತಪ್ಪಾಗಲಾರದು. ಅವರವರ ವಾದನಕ್ಕೆ ತಕ್ಕ ಹಾಗೆ ಮೃದಂಗದಲ್ಲಿ ಹಿತಮಿತವಾಗಿ ಕಿವಿಗಿಂಪಾಗುವಂತೆ ನುಡಿಸಿ ಸಂಗೀತಕ್ಕೆ ಕಳೆ ಕೊಟ್ಟವರು ಮೈಸೂರಿನ ವಿದ್ವಾನ್ ಶ್ರೀಯುತ ಪಿ.ಎಸ್. ಶ್ರೀಧರ್ ಹಾಗೂ ಶಿವಮೊಗ್ಗೆಯ ವಿದ್ವಾನ್ ಬಿ.ಆರ್ ಶ್ರೀಧರ್ ಅವರು ಹಾಗೂ 7ದಿನಗಳಲ್ಲೂ ಘಟ ಸಹಕಾರ ನೀಡಿದವರು ಮೈಸೂರಿನ ವಿದ್ವಾನ್ ಶ್ರೀಯುತ ಜಿ.ಎಸ್. ಕುಮಾರ್ ಅವರು. ಹೀಗೆ ಒಂದು ಉತ್ತಮ ಅಭಿರುಚಿಯ ಕಾರ್ಯಕ್ರಮ ಶಿವಮೊಗ್ಗೆಯ ಜನತೆಗೆ ನೀಡಿದ ವಿದ್ವಾನ್ ಶ್ರೀಯುತ ನಾಗರಾಜ್ ಅವರಿಗೆ ನನ್ನ ಹೃತ್ಪೂರ್ವಕ ನಮನಗಳು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಶೈಲಾಸ್ವಾಮಿ ಅವರೆ,

ಒಳ್ಳೇ ಕಾರ್ಯಕ್ರಮದ ವರದಿ ಕೊಟ್ಟಿದ್ದೀರಿ! ವೀಣೆಗೆಂದೇ ಒಂದು ವಾರ ಮೀಸಲಿಟ್ಟು ಕಾರ್ಯಕ್ರಮ ನಡೆಸುವುದು ಹೆಚ್ಚಾಯವೇ ಸರಿ.

ಮೈಸೂರು-ಆಂಧ್ರೆ-ತಂಜಾವೂರು ಶೈಲಿಗಳ ಹೋಲಿಕೆ-ವ್ಯತ್ಯಾಸಗಳನ್ನು ಒಮ್ಮೆ ಬರೆಯಿರಿ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ನಿಮ್ಮ ಲೇಖನ, ಸಂಗೀತಾಸಕ್ತರಿಗೆ ರಸದೌತಣವೆನ್ನಲು ಅಡ್ಡಿಯಿಲ್ಲ. ನಾನು ಸಂಗೀತ ಜ್ಞಾನವಿಲ್ಲದ ನಿರಕ್ಷರಕುಕ್ಷಿ. ಆದರೆ, ಒಳ್ಳೇ ಸಂಗೀತ ಕೇಳಿದಾಗ ತಲೆಹಾಕುತ್ತೇನೆ. ಬೆಂಗಳೂರಿನಲ್ಲಿ ರಾಮನವಮಿ ಸಂಗೀತೋತ್ಸವವನ್ನು ತಪ್ಪದೆ ಅಟೆಂಡ್ ಮಾಡುತ್ತಿದ್ದೆ. ಗಾಯನಸಮಾಜ, ಹಾಗೂ ಶೇಶಾದ್ರಿಪುರಂ ಹೈಸ್ಕೂಲಿನ ಹೊರಗಡೆಯ ಮೈದಾನದಲ್ಲಿ ಕುಳಿತು ಗಂಟೆಗಟ್ಟಲೆ ಸಂಗೀತ ಕಛೇರಿಗಳನ್ನು ಆಲಿಸಿದ್ದೇನೆ. [ ಜಿ. ಎನ್. ಬಿ. ಟಿ. ಆರ್. ಮಹಾಲಿಂಗಂ, ಶೂಲಮಂಗಳಂ ಸೋದರಿಯರು, ಮಧುರೆ ಮಣಿ ಅಯ್ಯರ್], ಇಷ್ಟು ಸಾಕು ನನ್ನ ಬಗ್ಗೆ.

H.R.Laxmivenkatesh

ಕನ್ನಡ ನನ್ನ ತಾಯ್ನುಡಿ; ನನ್ನುಸಿರು.