ಪಕ್ಷಾಂತರ ಇರಲಿ! ಮತಾಂತರ ಬೇಡ!! ಯಾಕೆ?

To prevent automated spam submissions leave this field empty.

ಮಾನವ ಹುಟ್ಟಿದಾಗಿನಿಂದ ನಡೆಯುತ್ತಿರುವ ಮತಾಂತರದ ಬಗ್ಗೆ ಈಗ “ಚರ್ಚ್ ಗಳ ಮೇಲಿನ ದಾಳಿ” ನಡೆದಾಗಿನಿಂದ ಚರ್ಚೆಯಾಗುತ್ತಿದೆ. ಇದರ ಪರ-ವಿರೋಧ ಅಭಿಪ್ರಾಯಗಳನ್ನು ಕೆಲವು ಜನಪ್ರಿಯ ಲೇಖಕರು ವ್ಯಕ್ತಪಡಿಸುತ್ತಿದ್ದಾರೆ.

ಚುನಾವಣೆಗಳು ಪ್ರಾರಂಭವಾದಾಗಿನಿಂದ ಪಕ್ಷಾಂತರ ನಡೆಯುತ್ತಿದ್ದು, ತಮ್ಮ ಒಲವಿನ ಪಕ್ಷಕ್ಕೆ ಪಕ್ಷಾಂತರವಾದರೆ ಸರಿ, ಬೇರೆ ಪಕ್ಷಕ್ಕೆ ಹೋದರೆ ತಪ್ಪು ಎಂಬುದು ಸಾಮಾನ್ಯ ಅಭಿಪ್ರಾಯ.
ಇವೆರಡನ್ನು ಆಯ್ಕೆ, ನಡವಳಿಕೆ, ಇನ್ನಿತರ ರೀತಿಯಲ್ಲಿ ಹೋಲಿಸೋಣ.

ಆಯ್ಕೆ
ಮತ: ಹುಟ್ಟಿನಿಂದ ಆಕಸ್ಮಿಕ – ಪ್ರಥಮ ಬಾರಿಯ ಆಯ್ಕೆಗೆ ಅವಕಾಶವಿಲ್ಲ
ಪಕ್ಷ: ಸ್ವಇಚ್ಛೆಯಿಂದ ಆರಿಸುವುದು

ಜನರ ಪಾತ್ರ
ಮತ: ಜನರ ಪಾತ್ರವಿಲ್ಲ. ಆದರೆ ನಿಮ್ಮ ಮತ ಆಧರಿಸಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚುನಾವಣೆಯಲ್ಲಿ ಅಹ್ವಾನಿಸುತ್ತಾರೆ,
ಪಕ್ಷ: ನಿಮ್ಮ ಪಕ್ಷಾಧಾರಿತವಾಗಿ ಜನ ಮತ ಹಾಕಿ ಆರಿಸುತ್ತಾರೆ.

ಮತಾಂತರ/ಪಕ್ಷಾಂತರವಾದಾಗ
ಮತ: ನೀವು ಯಾರಿಗೂ ಮೋಸ ಮಾಡಿದಂತಾಗುವುದಿಲ್ಲ
ಪಕ್ಷ: ನೀವು ನಿಮ್ಮನ್ನು ಆರಿಸಿದ ಜನರಿಗೆ ವಂಚನೆ ಮಾಡಿದಂತಾಗುತ್ತದೆ.

ಹಣದ ಪ್ರಚೋದನೆ
ಮತ:ಕಾನೂನಿನ ಪ್ರಕಾರ ತಪ್ಪು, ಕೆಲವೊಮ್ಮೆ ನಡೆಯುತ್ತದೆ.
ಪಕ್ಷ: ಕಾನೂನಿನ ಪ್ರಕಾರ ತಪ್ಪು, ಆದರೆ ಹೆಚ್ಚಾಗಿನಡೆಯುತ್ತದೆ.

ಅಧಿಕಾರದ ಪ್ರಚೋದನೆ
ಮತ: ಸಾಮಾನ್ಯವಾಗಿ ಅವಕಾಶವಿಲ್ಲ.
ಪಕ್ಷ: ಈ ಪ್ರಚೋದನೆ ಮಹತ್ತರ ಪಾತ್ರ ವಹಿಸುತ್ತದೆ.

ಸ್ವಾತಂತ್ರ್ಯ
ಮತ: ಪ್ರತಿಯೊಬ್ಬನಿಗೂ ತನಗಿಷ್ಟವಾದ ಧರ್ಮವನ್ನು ಅನುಸರಿಸುವ ಅಥವಾ ಅನುಸರಿಸದೇ ಇರುವ ಸ್ವಾತಂತ್ರ ಇದೆ.
ಪಕ್ಷ: ಇದರಲ್ಲೂ ಇದೆ.

ನಿಷೇಧ ಕಾನೂನು
ಮತ:ನಿಷೇಧವಿಲ್ಲ
ಪಕ್ಷ:೧/೩ ಕ್ಕಿಂತ ಅಧಿಕವಿದ್ದರೆ ಚುನಾಯಿಸಲ್ಪಟ್ಟ ಪ್ರತಿನಿಧಿಗಳು ಪಕ್ಷಾಂತರ ಮಾಡಬಹುದು.

ನಾವು ಮೇಲಿನ ವ್ಯತ್ಯಾಸಗಳನ್ನು ನೋಡಿದರೆ ಪಕ್ಷಾಂತರವೇ ಮತಾಂತರಕ್ಕಿಂತ ಅಧಿಕ ಅಪರಾಧವೇನೋ ಎಂದೆನಿಸುತ್ತದೆ. ಪ್ರತಿಯೊಬ್ಬನೂ ಸ್ವಇಚ್ಛೆಯಿಂದ ತನ್ನ ಧರ್ಮವನ್ನು ಆರಿಸಿರುವುದಿಲ್ಲ. ಆದರಿಂದ ಅದು ಘೋರ ಅಪರಾಧವಲ್ಲವೆಂದೆನಿಸುತ್ತದೆ.

ಆದರೆ ತನ್ನ ಸ್ವಇಚ್ಛೆಯಿಂದ ಪಕ್ಷವೊಂದನ್ನು ಸೇರಿ ಜನಬೆಂಬಲ ಪಡೆದು ಚುನಾವಣೆಯಲ್ಲಿ ಗೆದ್ದ ಮೇಲೆ ಪಕ್ಷಾಂತರ ಮಾಡಿದಾಗ ತನ್ನ ಮತದಾರರಿಗೆ ವಂಚಿಸುತ್ತಾನೆ. ಮರುಚುನಾವಣೆಯಿಂದ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿಗಳ ನಷ್ಟವನ್ನುಂಟುಮಾಡುತ್ತಾನೆ.

ಪಕ್ಷಾಂತರದ ಗುಲ್ಲು ಎಬ್ಬಿಸದೇ ಖುಷಿ ಪಡುವ ಜನರೇ ಮತಾಂತರವನ್ನು ವಿರೋಧಿಸುತ್ತಿದ್ದಾರೆ.

ಪಕ್ಷಾಂತರವನ್ನು ಯಾವ ಚರ್ಚ್/ಮಂದಿರವನ್ನು ದಾಳಿ ಮಾಡಿ ವಿರೋಧಿಸುವುದು? ಅವರಿಗೆ ಸಾರ್ವಜನಿಕ ವೇದಿಕೆಯಲ್ಲಿ ಹಾರವನ್ನು ಹಾಕಿ ಸ್ವಾಗತಿಸುತ್ತಾರಲ್ಲವೇ? ಮತಾಂತರಿಗಳನ್ನು ಸ್ವಾಗತಿಸೋಣ. ಯಾಕೆ ಬೇಡ? ಪಕ್ಷಾಂತರವನ್ನು ಸಮರ್ಥಿಸುವವರು ಮತಾಂತರವನ್ನು ಹೇಗೆ ವಿರೋಧಿಸುತ್ತೀರಿ?

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನಡೆಯುತ್ತಿರುವ ಚರ್ಚೆ ಒಳ್ಳೆಯ ಬೆಳವಣಿಗೆ. ಯಾಕೆಂದರೆ ಒಂದು ಮತದ ಅಭಿಮಾನಿಗಳು ಪೂರ್ವಾಗ್ರಹ ಪೀಡಿತರಾಗಿ ಇನ್ನೊಂದು ಮತದ ಬಟ್ಟೆಯನ್ನು ಬಿಚ್ಚಿ ಬೆತ್ತಲಾಗಿಸುತ್ತಿದ್ದಾರೆ. ಓದಲು ಖುಷಿ ನೀಡುತ್ತಿದೆ.

ಬಡವರು ತಮ್ಮ ಕಷ್ಟಕಾರ್ಪಣ್ಯಗಳನ್ನು ದೇವರ ಮೇಲೆ ಹೊರಿಸಿ, ತಮಗೆ ಮುಂದೆ ದೇವರು ಸಹಾಯ ಮಾಡುತ್ತಾನೆಂದು ನಂಬಿಸಿ ಕ್ರತಕ ಮಾನಸಿಕ ನೆಮ್ಮದಿಯನ್ನು ನೀಡುವ ಮತ್ತು ಶ್ರೀಮಂತರಿಗೆ, ರಾಜಕಾರಣಿಗಳಿಗೆ, ಹಗಲುದರೋಡೆಕೋರರಿಗೆ ಅನ್ಯಾಯಗಳನ್ನು ನಡೆಸಲು ವೇದಿಕೆ ಒದಗಿಸುವ ಈ ಮತಗಳು ಕಚ್ಚಾಡಿ, ಪರಸ್ಪರ ಮಂದಿರಗಳನ್ನು ಕೆಡವಿ, ಧರ್ಮಾಂಧರನ್ನು ಪರಸ್ಪರ ಸಾಯಿಸಿ ಎಲ್ಲಾ ಮತಗಳು ಅರ್ಥಗಳನ್ನು ಕಳಕೊಂಡಾಗ ಮಾನವತೆಯು ಅರಳಬಹುದೇನೋ?

ಮತಾಂತರ ಬೇಡವೇ ಬೇಡ, ಪಕ್ಷಾಂತರ ಇರಲಿ ಬಿಡಿ ಎನ್ನುತ್ತೀರ? ಆಯ್ಕೆ ಸ್ವಾತಂತ್ರ ನಿಮ್ಮದು. ಹುಟ್ಟಿನಿಂದ ಆಕಸ್ಮಿಕವಾಗಿ ಪಡೆದ ಮತವನ್ನು ಬದಲಿಸುವ ಹಕ್ಕಿಲ್ಲ ಎನ್ನುತ್ತೀರಾ? ಆಯ್ಕೆ ಸ್ವಾತಂತ್ರ ನಿಮ್ಮದು. ಸ್ವಇಚ್ಛೆಯಿಂದ ಪಕ್ಷ ಆರಿಸಿ, ಜನಬೆಂಬಲ ಪಡೆದು ಗೆದ್ದು ಪಕ್ಷಾಂತರ ಮಾಡಲಿ ಬಿಡಿ ಎನ್ನುತ್ತೀರಾ? ಆಯ್ಕೆ ಸ್ವಾತಂತ್ರ ನಿಮ್ಮದು. ನಾವು ಸ್ವಾತಂತ್ರ್ಯವನ್ನು ಗೌರವಿಸೋಣವಲ್ಲವೇ? ಇದರಲ್ಲೂ ಭಿನಾಭಿಪ್ರಾಯವಿದೆಯೇ? ಆಯ್ಕೆ ಸ್ವಾತಂತ್ರ ನಿಮ್ಮದು.

ಕೊನೆಯ ಮಾತು: ಸಂತೋಷದ ವಿಚಾರವೆಂದರೆ ಈ ಧರ್ಮಾಭಿಮಾನಿಗಳು ಧರ್ಮವನ್ನು ಬದಲಿಸುವ ಬಗ್ಗೆ “ಧರ್ಮಾಂತರ” ಎಂದು ಕರೆಯದೇ “ಮತಾಂತರ” ಎಂದು ಕರೆಯುತ್ತಿರುವುದು. ಈ ಧರ್ಮಗಳು ಕೇವಲ ಮತಗಳಾಗಿವೆ. ನಿಜವಾದ ಅರ್ಥದಲ್ಲಿ ಧರ್ಮಗಳಲ್ಲ. ನಿಜವಾದ ಧರ್ಮ ಧ್ವೇಷವಲ್ಲ, ಪ್ರೀತಿ. ಅಲ್ಲಿ ಮಾನವತೆ ಅರಳುತ್ತದೆಯೇ ವಿನಹ ದ್ವೇಷವಲ್ಲ.

- ಶ್ರೀನಿವಾಸ ನಟೇಕರ್, ಶ್ರವಣಬೆಳಗೊಳ

ಲೇಖನ ವರ್ಗ (Category):