ದೀಪಾವಳಿಯಲ್ಲಿ ಉತ್ತರ ಕರ್ನಾಟಕದಲ್ಲಿ ಆಚರಿಸುವ ವಿಶೇಷ ಆಚರಣೆ ನೋಡಿ, ಇದೇ 'ಹಟ್ಟಿ ಹಬ್ಬ!'

To prevent automated spam submissions leave this field empty.

ಉತ್ತರ ಕರ್ನಾಟಕದಲ್ಲಿ ದೀಪಾವಳಿ ಹಬ್ಬಕ್ಕೆ 'ಹಟ್ಟಿ ಹಬ್ಬ' ಎಂದೂ ಕರೆಯುತ್ತಾರೆ. ಈ ಸಂದರ್ಭದಲ್ಲಿ 'ಹಟ್ಟೆವ್ವನ ಪೂಜೆ' ಎಂಬ ವಿಶಿಷ್ಟ ಆಚರಣೆ ಇರುತ್ತದೆ. ದೀಪಾವಳಿ ಅಮಾವಾಸ್ಯೆಯ ಮರುದಿನ ಪಾಡ್ಯದಂದು ಜರಗುತ್ತದೆ ಈ ಹಟ್ಟಿ ಹಬ್ಬ.
ಹಟ್ಟಿ ಎಂದರೆ ದನಕರುಗಳನ್ನು ಕಟ್ಟುವ ಸ್ಥಳ ಅಥವಾ ಕೊಟ್ಟಿಗೆ. ಇದನ್ನು ಕಾಯುವ ದೇವತೆಯೇ ಹಟ್ಟೆವ್ವ. ಹಟ್ಟೆವ್ವನ ಸಾಂಕೇತಿಕ ಪ್ರತಿಮೆಗಳನ್ನು ತಯಾರಿಸಲು ಸೆಗಣಿಯನ್ನು ಬಳಸುತ್ತಾರೆ. ಎರಡು ದೊಡ್ಡ ಹಾಗೂ ೪೦ ರಿಂದ ೫೦ ಸಣ್ಣ ಹಟ್ಟೆವ್ವಗಳನ್ನು ಹೀಗೆ ತಯಾರಿಸಿಡುತ್ತಾರೆ. ಸಣ್ಣ ಸಣ್ಣ 'ಹಟ್ಟೆವ್ವ'ಗಳನ್ನು ವರ್ತುಲಾಕಾರದಲ್ಲಿ ಎರಡು ಸಾಲುಗಳಲ್ಲಿ ಇಡುತ್ತಾರೆ. ನಡುವೆ ದಾರಿಯ ರೀತಿಯಲ್ಲಿ ಜಾಗ ಬಿಡುತ್ತಾರೆ. ವರ್ತುಲದ ನಡುವೆ ದೊಡ್ಡ ಹಟ್ಟೆವ್ವಗಳನ್ನು ಇಡುತ್ತಾರೆ. ದೊಡ್ಡ ಹಟ್ಟೆವ್ವನನ್ನು 'ಹಿರೇ ಹಟ್ಟೆವ್ವ' ಎಂದು ಕರೆಯುತ್ತಾರೆ. ಹಿರೇ ಹಟ್ಟೆವ್ವನ ನೆತ್ತಿಯಲ್ಲಿ ಅರಳಿನ ಜೋಳದ ತೆನೆ, ಉತ್ತರಾಣಿ ಕಡ್ಡಿ ಹಾಗೂ ಮಾನಿ ಹುಲ್ಲಿನಲ್ಲಿ ಕಡ್ಡಿಗಳಿಂದ ಹೆಣೆದು ತಯಾರಿಸಿದ ನಾಗರ ಹೆಡೆಯನ್ನು ಚುಚ್ಚಿ ಇರಿಸುತ್ತಾರೆ. ಚೆಂಡು ಹೂವು, ಗುರೆಳ್ಳಿನ ಹೂಗಳಿಂದ ಶೃಂಗರಿಸುತ್ತಾರೆ.
ಈ ಹಟ್ಟೆವ್ವಗಳನ್ನು ಅಡುಗೆಮನೆಯ ಬಾಗಿಲಿಗೆ, ದೇವರಮನೆ ಬಾಗಿಲಿಗೆ, ಹಿತ್ತಿಲ ಬಾಗಿಲಿಗೆ ಮತ್ತು 'ಮುಚ್ಚಿ' ಬಾಗಿಲಿಗೆ (ತ್ರಿಕೋನಾಕಾರದಲ್ಲಿ) ಮೂರು ಮೂರರಂತೆ ಇರಿಸುತ್ತಾರೆ. ಹೂಗಳಿಂದ ಶೃಂಗರಿಸುತ್ತಾರೆ. ಹಗೇವಿನ ಮೇಲೆ, ಚಕ್ಕಡಿಯ ಮೇಲೆ, ಒಲೆಯ ಮೇಲೆ, ಒಂದೊಂದರಂತೆ ಕ್ರಮವಾಗಿ ಇರಿಸುತ್ತಾರೆ.
ಈ ಎಲ್ಲ ಹಟ್ಟೆವ್ವಗಳ ಮೇಲೆ ಸುಣ್ಣದಲ್ಲಿ ಅದ್ದಿದ ಬೆರಳಿನ ಗುರುತುಗಳನ್ನು ಮಾಡುತ್ತಾರೆ. ಹಟ್ಟಿಯಲ್ಲಿಟ್ಟ ವರ್ತುಲಾಕಾರದ ಹಟ್ಟೆವ್ವನ ಸಾಂಕೇತಿಕ ಪ್ರತಿಮೆಗಳ ಮೇಲೆ ಸುಣ್ಣದ ನೀರು ಅದ್ದಿದ ಅಂಗೈ ಗುರುತು ಮಾಡುತ್ತಾರೆ. ಆಕಳ ಹಜ್ಜೆಯ ಗುರುತನ್ನೂ ಮಾಡುವುದುಂಟು. ಹಟ್ಟಿಯಲ್ಲಿಟ್ಟ ವರ್ತುಲಾಕಾರದ ಹಟ್ಟೆವ್ವಗಳ ನಡುವೆ ಹಿರೇ ಹಟ್ಟೆವ್ವನ ಮುಂದೆ ಕುಂಬಳಕಾಯಿ, ಹೊಸ ಕಸಬರಿಗೆ, ಹೊಸ ಹಗ್ಗ 'ಅರಿ' ಗಿಡದ ಗೆಲ್ಲನ್ನು ಇರಿಸುತ್ತಾರೆ. ಇದರಲ್ಲಿ ದೀಪಗಳನ್ನು ಇಡುತ್ತಾರೆ. ವರ್ತುಲಾಕಾರದಲ್ಲಿ ಇರಿಸಲಾದ ಹಟ್ಟೆವ್ವಗಳ ಮೇಲೆ ಮೇಲೆ ಕೊಡೆಯ ಆಕಾರದಲ್ಲಿ ಜೋಳದ ದಂಟುಗಳನ್ನು ಇಲ್ಲವೆ ಐದು ಕಬ್ಬಿನ ಗಳಗಳನ್ನು ನಿಲ್ಲಿಸುತ್ತಾರೆ. ಎಲ್ಲಾ ಹಟ್ಟೆವ್ವಗಳಿಗೂ ಕುಂಕುಮ, ಮೊಸರು, ಹೂವುಗಳನ್ನು ಮುಡಿಸಿ ಪೂಜಿಸುತ್ತಾರೆ. ಹೋಳಿಗೆ, ಅನ್ನ, ಸಾರು, ತುಪ್ಪ ಇತ್ಯಾದಿಗಳನ್ನು ಅರ್ಪಿಸಿ ತೆಂಗಿನಕಾಯಿ ಒಡೆದು ಹಿರೇ ಹಟ್ಟೆವ್ವನ ಮುಂದೆ ಇಡುತ್ತಾರೆ.
ಸಂಜೆಯ ವೇಳೆಗೆ ಈ ಹಟ್ಟೆವ್ವಗಳನ್ನು ಮನೆಯ ಮಾಳಿಗೆ ಕುಂಬಿಯ ಮೇಲೆ ಹಿತ್ತಲ ಬಾಗಿಲ ಮತ್ತು 'ಮುಚ್ಚಿ' ಬಾಗಿಲ ಮೇಲೆ ಸಾಲಾಗಿ ಇರಿಸುತ್ತಾರೆ. ಹಿರೇ ಹಟ್ಟೆವ್ವಗಳನ್ನು ಬಾಗಿಲ ಮೇಲೆ, ಸಣ್ಣ ಹಟ್ಟೆವ್ವಗಳ ನಡುವೆ ಇರಿಸುತ್ತಾರೆ. ಮತ್ತೊಮ್ಮೆ ಹೂವುಗಳಿಂದ ಅಲಂಕರಿಸುತ್ತಾರೆ. ಇದಿಷ್ಟು ಹಟ್ಟಿ ಹಬ್ಬದ ಆಚರಣೆ.
ನಮ್ಮ ಗ್ರಾಮೀಣರು ವಿದೇಶೀ ವಿಕೃತಿಯ ಆಕ್ರಮಣದ ನಡುವೆಯೂ ಹಟ್ಟೆವ್ವನ ಪೂಜೆಯನ್ನು ಪ್ರತಿ ವರ್ಷವೂ ಆಚರಿಸುತ್ತ ಬಂದಿದ್ದಾರೆ. ಈ ಹಟ್ಟೆವ್ವನ ಪೂಜೆ ಮಾಡುವವರು ಮಹಿಳೆಯರೇ. ಹಳ್ಳಿಯ ಮನೆ ಮನೆಯ ಹಟ್ಟಿ ಕೊಟ್ಟಿಗೆಗಳಲ್ಲಿ ಹಟ್ಟೆವ್ವ ಪೂಜೆಗೊಂಡು ಮನೆ ಮಾಳಿಗೆ ಶೃಂಗಾರಗೊಳ್ಳುತ್ತಿರುವುದು ಕೇವಲ ಅಂಧಾನುಕರಣೆ ಎಂದು ಮೂಗು ಮುರಿಯುವವರು ಇಂದು ಅನೇಕರಿರಬಹುದು. ಆದರೆ ದನಕರುಗಳ ಸೆಗಣಿಯ ಮಹತ್ವವನ್ನು ಸಾರುವ ಮತ್ತು ಸೆಗಣಿಯ ಗೊಬ್ಬರದ ಶ್ರೇಷ್ಠತೆಯನ್ನು ಗೌರವಿಸುವ ರೀತಿಯಲ್ಲಿ ಸೆಗಣಿಯ ಹಟ್ಟೆವ್ವ ದೇವತೆಯಾಗಿ ಪೂಜೆಗೊಳ್ಳುತ್ತಿದ್ದಾಳೆ ಎನ್ನುವುದು ನಮ್ಮ ಕೃಷಿ ಸಂಸ್ಕೃತಿಯ ಹಿರಿಮೆಯ ಸಂಕೇತ.

ದೀಪಾವಳಿಯಲ್ಲಿ ಮರ ಹಾಕುವುದು :-ತುಳುನಾಡ ವಿಶೇಷ ಆಚರಣೆ. ಇಂತಹದೇ ಇನ್ನೊಂದು ಆಚರಣೆ.
ಇದು ಉತ್ತರ ಕರ್ನಾಟಕದ ಗ್ರಾಮೀಣ ಭಾಗಳಲ್ಲಿ ಶ್ರದ್ಧೆಯಿಂದ ಆಚರಿಸುತ್ತಾರೆ ಎಂದು ಈರಯ್ಯ ಕಿಲ್ಲೇದಾರ ಎಂಬವರು ತರಂಗದ ನವೆಂಬರ್ ೬ ೨೦೦೮ರ ಸಂಚಿಕೆಯಲ್ಲಿ ಬರೆದಿರುತ್ತಾರೆ.
ದೀಪಾವಳಿ ಹಬ್ಬವು ಇಡೀ ಭಾರತ ದೇಶದಲ್ಲಿ ಆಚರಿಸುತ್ತಾರೆ. ಆಚರಣೆಯ ವಿಧಾನ ಬೇರೆ ಬೇರೆಯಾಗಿರಬಹುದು.

ಇಂತಹವೇ ಬೇರೆ ಬೇರೆ ವಿಧಾನಗಳಿದ್ದರೆ ಸಂಪದದ ಓದುಗರಿಗೆ ತಿಳಿಯುವ ಸಲುವಾಗಿ ಗೊತ್ತಿದ್ದವರು ಹಾಕಿದರೆ ನಮ್ಮ ಸಂಸ್ಕೃತಿಯ ಪರಿಚಯವಾದೀತು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ವೆಂಕ ಟ್ರಾಯರೇ

ಈ ಜನಪದ ಸಂಸ್ಕೃತಿಯ ಬಗ್ಗೆ ಬರೆದಿದ್ದಕ್ಕೆ ನನ್ನೀ!

ದೀಪ ಹಚ್ಚುವುದು.. ಪಟಾಕಿ ಹೊಡೆಯುವುದು ....ಬಹುಶ ಇದಷ್ಟೇ ದೀಪಾವಳಿ ಆಚರಿಸುವ ಎಲ್ಲರಲ್ಲೂ ಸಾಮನ್ಯವಾಗಿರುವುದು ಅನ್ನಿಸುತ್ತೆ. ಕರ್ನಾಟಕದಲ್ಲಿಯಾದರೆ ( ಹಿಂದೂಗಳು?) ಲಕ್ಷ್ಮಿ ಪೂಜೆಯನ್ನೂ ಈ ಸಾಲಿಗೆ ಸೇರಿಸಿಕೊಳ್ಳಬಹುದೇನೋ?!.

ಉಳಿದ ಆಚರಣೆಗಳು ಆಯಾ ಪಂಗಡಗಲಿಗಷ್ಟೇ ಸೀಮಿತ.
ಉದಾಹರಣೆಗೆ ನಮ್ಮಲ್ಲಿ ಬಲಿ ಪಾಡ್ಯಮಿ ಮತ್ತು ನರಕ ಚತುರ್ದಶಿ ಆಚರಣೆಗೆ ಏನೂ ಅರ್ಥ ಇದ್ದ ಹಾಗೆ ಕಾಣಲಿಲ್ಲ. "ಕೆರ್ಕ" ಹಾಕುವುದು ನಮ್ಮಲ್ಲಿಯ ವಿಶೇಷ!.

ಕೆಲ ಮನೆಯಲ್ಲಿ ಕೆಲವರು ಪಿತೃ ಪಕ್ಷದಲ್ಲಿ ಮಾಡುವ ಕೆಲಸವನ್ನು ಈಗ ಮಾಡುತ್ತಾರೆ.

....

ಅಷ್ಟಕ್ಕೂ ಅದ್ಯಾವ ಮಹಾನುಭಾವ .. ನಮ್ಮ ಜನಪದ ಸಂಸ್ಕೃತಿ ಯನ್ನರಿಯದೆ-ಪುರಾಣಗಳಲ್ಲೇ ಮುಳುಗಿದವ ...ನರಕ ಚತುರ್ದಶಿ - ಬಲಿ ಪಾಡ್ಯಮಿ ಅನ್ನೋ ಹೆಸರನ್ನು ಸರ್ಕಾರಿ ಕ್ಯಾಲೆಂಡರ್ ಗಳಲ್ಲಿ ನಮೂದಿಸಲು ಕಾರಣಕರ್ತನಾದನೋ ಆ ಬಲಿ/ನರಕಾಸುರರೇ ಬಲ್ಲರು! :)

ಸವಿತೃ

[quote] ಅಷ್ಟಕ್ಕೂ ಅದ್ಯಾವ ಮಹಾನುಭಾವ .. ನಮ್ಮ ಜನಪದ ಸಂಸ್ಕೃತಿ ಯನ್ನರಿಯದೆ-ಪುರಾಣಗಳಲ್ಲೇ ಮುಳುಗಿದವ ...ನರಕ ಚತುರ್ದಶಿ - ಬಲಿ ಪಾಡ್ಯಮಿ ಅನ್ನೋ ಹೆಸರನ್ನು ಸರ್ಕಾರಿ ಕ್ಯಾಲೆಂಡರ್ ಗಳಲ್ಲಿ ನಮೂದಿಸಲು ಕಾರಣಕರ್ತನಾದನೋ ಆ ಬಲಿ/ನರಕಾಸುರರೇ ಬಲ್ಲರು!

:)

- ಚಾಮರಾಜ ಸವಡಿ
http://chamarajsavadi.blogspot.com