ಗೋವಿಂದ ಸ್ವಾಮಿ ಎನ್ನುವ ಸಂತ -ಭಾಗ ೧

To prevent automated spam submissions leave this field empty.

ಸುಮಾರು ೫೦ ವರುಷಗಳ ಹಿಂದಿನ ವಿಷಯ. ಆಗ ನಾನು ಬರೆ ೧೦-೧೫ ರ ಒಳಗಿನ ಹುಡುಗ. ನಮ್ಮ ಮನೆಯು ಪೇಟೆಯಿಂದ ದೂರ ಹಳ್ಳಿಯಲ್ಲಿತ್ತು. ಪೇಟೆಯಲ್ಲಿ ನಡೆಯುವ ದೇವಳದ ಕಾರ್ಯಕ್ರಮಗಳಿಗೆ ಬರಬೇಕಾದರೆ ದಾರಿಯಲ್ಲಿ ಸ್ಮಶಾನ ಸಿಗುತ್ತದೆ. ಯಾವಾಗಲೂ ನಾವು ಮೂವರು ಅಣ್ಣ ತಮ್ಮಂದಿರು ಒಟ್ಟಿಗೆ ಈ ಕಾರ್ಯಕ್ರಮಗಳಿಗೆ ಬರುವುದು. ಸ್ಮಶಾನದ ಹತ್ತಿರ ಬರುವಾಗ ಅಲ್ಲಿ ಕೆಲವು ಹುಡುಗರು ನಿಂತು ಏನನ್ನೋ ನೋಡುವುದನ್ನು ಕಂಡು ನಾವು ಕುತೂಹಲದಿಂದ ಸ್ಮಶಾನದ ಒಳಗೆ ಹೋಗಿ ನೋಡಿದೆವು. ಅಲ್ಲಿ ಒಬ್ಬ ಹುಚ್ಚನಂತೆ ಕಾಣುವ ಮನುಷ್ಯ ಕಣ್ಣು ಮುಚ್ಚಿ ಕುಳಿತುಕೊಂಡಿದ್ದ. ಈ ಹುಡುಗರೆಲ್ಲಾ ಅವನಿಗೆ ಕಲ್ಲು ಹೊಡೆಯುತ್ತಿದ್ದರು. ಆಗ ನಮಗೆ ಹುಡುಗು ಬುದ್ಧಿ. ನಾವು ಒಂದು ಕಲ್ಲನ್ನು ಎತ್ತಿ ಹೊಡೆಯಲು ಹೋದೆವು. ಆಗ ಅಲ್ಲಿ ಬಂದ ನಮ್ಮ ಜಾತಿಯವರು ನಮ್ಮನ್ನು (ಎಲ್ಲರನ್ನೂ) ಅಲ್ಲಿಂದ ಓಡಿಸಿದರು. ಹಾಗೆ ನಾವು ಮುಂದಿನ ದಿವಸಗಳಲ್ಲಿ ಕೂಡಾ ಸ್ಮಶಾನದ ಹತ್ತಿರ ಬರುವಾಗ ಆ ಹುಚ್ಚ ಇದ್ದಾನೊ ಎಂದು ನೋಡುವ ಪರಿಪಾಟವನ್ನು ಇಟ್ಟುಕೊಂಡೆವು. ಕೆಲವು ಸಲ ಅವನು ಕಾಣ ಸಿಗುತ್ತಿದ್ದಾ. ಹೀಗೆ ಹಲವಾರು ವರುಷದ ನಂತರ ಅದೇ ನಾವು ಹುಚ್ಚ ಎಂದು ತಿಳಕೊಂಡ ವ್ಯಕ್ತಿ ಕಾವಿ ಬಟ್ಟೆ ಹಾಕಿ ಊರಿಗೆ ಬಂದಿದ್ದ. ಆ ಸಮಯದಲ್ಲಿ ನಮ್ಮ ಊರ ಹಲವಾರು ಪ್ರತಿಷ್ಟಿತ ವ್ಯಕ್ತಿಗಳು ಅವನನ್ನು ತಮ್ಮ ತಮ್ಮ ಮನೆಗಳಿಗೆ ಅಹ್ವಾನಿಸಿ ಸತ್ಕರಿಸತೊಡಗಿದರು. ಆದರೆ ಆ ಸನ್ಯಾಸಿಯು ಕರೆದ ಎಲ್ಲರ ಮನೆಗಳಿಗೂ ಹೋಗುತ್ತಿರಲಿಲ್ಲಾ. ಅವರಿಗೆ ಮನಸ್ಸಾದರೆ ಮಾತ್ರ ಕೆಲವರ ಮನೆಗಳಿಗೆ ಹೋಗಿ ಅವರ ಸತ್ಕಾರವನ್ನು ಸ್ವೀಕರಿಸುತ್ತಿದ್ದರು. ಈ ಸನ್ಯಾಸಿಯು ನಿತ್ಯಾನಂದ ಸ್ವಾಮಿಗಳನ್ನು ತಮ್ಮ ಗುರುಗಳೆಂದು ಸ್ವೀಕರಿಸಿದ್ದರು. ಇವರ ಹುಟ್ಟೂರು ಕೇರಳದ ಉತ್ತರ ಮಲಬಾರದ ಮಡಿಯಾಂಕಳಮ್. ಇವರು ನಂಬೂದ್ರಿ ಮನೆತನದವರು. ಇವರ ಜನ್ಮವು ೧೯೨೫ ನೇ ಮೇ ೧೫ ರಂದು ಆಯಿತು. ಇವರು ತಮ್ಮ ಎಳೆಪ್ರಾಯದಲ್ಲಿಯೇ ತಾಯಿಯನ್ನು ಕಳಕೊಂಡು ತಬ್ಬಲಿಯಾದರು. ಇವರಿಗೆ ಮಾತೃಪೇಮವು ಸಿಗಲೇ ಇಲ್ಲ. ಚಿಕ್ಕಂದಿನಿಂದಲೇ ದೇವರ ಪೂಜೆ ಪುನಸ್ಕಾರಗಳನ್ನು ತಮ್ಮ ನಂಬೂದ್ರಿ ಕುಟುಂಬದ ಸಂಪ್ರದಾಯದಂತೆ ಕಲಿತು ಜೀವನ ನೌಕೆ ಮುಂದೆ ಸಾಗುತ್ತಿತ್ತು. ಆಗ ಸ್ವಾಮಿ ನಿತ್ಯಾನಂದರೆಂಬ ಸಂತರು ಅಲ್ಲಿಯೇ ಸಮೀಪದ ಊರಿಗೆ ಬಂದ ವಿಷಯ ಇವರ ತಂದೆಗೆ ತಿಳಿದು ಅವರನ್ನು ಕಾಣಲು ಮಗ ಗೋವಿಂದನನ್ನು ಜತೆಯಲ್ಲಿ ಕರಕೊಂಡು ಹೋಗಿದ್ದರು. ನಿತ್ಯಾನಂದರಿಗೆ ಈ ಬಾಲಕನ ಮೇಲೆ ತುಂಬಾ ಪ್ರೀತಿ ಇತ್ತು. ಮುಂದೆ ಅವರ ೧೫ನೇ ವಯಸ್ಸಿನಲ್ಲಿ ಅವರ ತಂದೆಯವರು ಗತಿಸಿದರು. ಈ ದುಃಖದ ಘಟನೆಯ ನಂತರ ಈ ಹುಡುಗನಲ್ಲಿ ವೈರಾಗ್ಯ ತಲೆದೋರಿತು. ಊರೂರು ತಿರುಗಲು ಸುರುಮಾಡಿದರು. ಮನ:ಶಾಂತಿಗಾಗಿ ದೇವರ ಸೇವೆ ಮಾಡಲು ದೇವಸ್ಥಾನದಲ್ಲಿ ಅರ್ಚಕನಾಗಿಯೂ ಕೆಲಸಮಾಡಿದರು. ತನ್ನ ದೇಹವನ್ನು ಕಠಿನವಾಗಿ ದುಡಿಸಿಕೊಂಡು ಮನಃಶಾಂತಿಯನ್ನು ಅರಸಲು ಪ್ರಯತ್ನಿಸಿದರೂ ಅವರಿಗೆ ಅದು ಪ್ರಾಪ್ತವಾಗಲಿಲ್ಲಾ. ಅರುಣಾಚಲದ ರಮಣಾಶ್ರಮದಲ್ಲೂ ಕೆಲವು ಕಾಲ ನೆಲೆಸಿ ಪ್ರಯತ್ನಿಸಿದರು.

ಇನ್ನು ಮುಂದಿನ ವಿವರಗಳನ್ನು ಇನ್ನೊಂದು ದಿವಸ ಸೇರಿಸುತ್ತೇನೆ.

ಪ್ರೀತಿಯಿರಲಿ.

ಲೇಖನ ವರ್ಗ (Category):