ರಥ ಸಪ್ತಮಿ

To prevent automated spam submissions leave this field empty.

ಓಂ ಭದ್ರಂ ಕರ್ಣೇಭಿಶೃಣುಯಾಮ ದೇವಾ:|
ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾ:|
ಸ್ಥಿರೈರಂಗೈಸ್ತುಷ್ಟುವಾಗ್ಂ‍ಸಸ್ತನೂಭಿ:|
ವ್ಯಶೇಮ ದೇವಹಿತಂ ಯದಾಯು:|
ಸ್ವಸ್ತಿ ನ ಇಂದ್ರೋ ವೃದ್ಧಶ್ರವಾ:|
ಸ್ವಸ್ತಿ ನ: ಪೂಷಾ ವಿಶ್ವವೇದಾ:|
ಸ್ವಸ್ತಿನಸ್ತಾರ್ಕ್ಷ್ಯೋ ಅರಿಷ್ಟನೇಮಿ:|
ಸ್ವಸ್ತಿನೋ ಬೃಹಸ್ಪತಿರ್ದಧಾತು|

ಓಂ ಶಾಂತಿ: ಶಾಂತಿ: ಶಾಂತಿ:||

ಇಂದು ರಥ ಸಪ್ತಮಿ. ಮಾರ್ಗಶೀರ್ಷ ಮಾಸ ಶುಕ್ಲಪಕ್ಷದ ಏಳನೆಯದಿನ. ಜಗತ್ತಿನ ಮುಂದುವರಿಕೆಗೆ ಚಾಲಕನಾದ ಶ್ರೀ ಸೂರ್ಯ ಭಗವಾನನು ಸಿಂಹ ರಾಶಿಯಿಂದ ಮಕರ ರಾಶಿಗೆ ತನ್ನ ರಥವನ್ನೇರಿ ಹೋಗುತ್ತಾನೆ. ಅಂದರೆ ಇಂದಿಗೆ ಛಳಿಗಾಲವು ಮುಗಿದು ಬೇಸಗೆಯ ಕಾಲವು ಪ್ರಾರಂಭವಾಗುವುದು. ಸೂರ್ಯನು ತನ್ನ ಏಳು ಕುದುರೆಗಳ ರಥವನ್ನೇರುವನು. ಅವನ ರಥದ ಸಾರಥಿ ಅರುಣ. ಇಂದು ವೇದ ಮಂತ್ರಗಳ ಭಾಗವಾದ ಕೃಷ್ಣ ಯಜುರ್ವೇದ ತೈತ್ತಿರೀಯಾರಣ್ಯಕದಲ್ಲಿ ಪ್ರಸ್ತಾಪಿಸಿರುವ ಅರುಣಪ್ರಶ್ನ ರೀತ್ಯಾ ಸೂರ್ಯ ನಮಸ್ಕಾರಗಳನ್ನು ಮಾಡುವುದು ಪದ್ಧತಿ.

ಸೂರ್ಯನ ರಥಕ್ಕೆ ಏಳು ಕುದುರೆಗಳು. ಅವುಗಳ ಹೆಸರುಗಳು ಗಾಯತ್ರಿ, ಬೃಹತೀ, ಉಷ್ಣಿಕ್, ಜಗತೀ, ತ್ರಿಷ್ಟುಪ್, ಅನುಷ್ಟುಪ್ ಮತ್ತು ಪಂಕ್ತಿ.

ಬೆಳಗಿನ ಜಾವದಲ್ಲಿ ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದ ಇತ್ಯಾದಿಗಳ ಮೇಲೆ ಎಕ್ಕದ ಎಲೆಯನ್ನು ಇಟ್ಟುಕೊಂಡು ಸ್ನಾನ ಮಾಡಿ, ಪೂರ್ವಾಭಿಮುಖವಾಗಿ ಸೂರ್ಯನಿಗೆ ನಮಸ್ಕರಿಸುವುದು ರೂಢಿಯಲ್ಲಿದೆ. ಸೂರ್ಯನ ೧೦೮ ಹೆಸರುಗಳನ್ನು ಉಚ್ಚರಿಸಿ ನಮಸ್ಕಾರಗಳನ್ನು ಮಾಡುವರು. ಮನೆಯ ಒಂದು ಕೋಣೆಯಲ್ಲಿ ಪೂರ್ಣವಾಗಿ ಒಂದು ಸುತ್ತು ಪ್ರದಕ್ಷಿಣೆ ಹಾಕುತ್ತಾ ಅರುಣ ಪ್ರಶ್ನದ ಮಂತ್ರ ಪಠಿಸಿ ನಮಸ್ಕಾರ ಮಾಡುವರು. ಹೀಗೆ ೧೦೮ ನಮಸ್ಕಾರಗಳನ್ನು ಮಾಡುವರು. ೧೦೮ ಆಗದಿದ್ದವರು ೧೨ ನಾಮಗಳನ್ನು ಜಪಿಸಿ ನಮಸ್ಕಾರ ಮಾಡುವರು. ಅವಾವುದೆಂದರೆ ಇಂದ್ರ, ಧಾತ, ಪರ್ಜನ್ಯ, ತ್ವಷ್ಟ, ಪುಷ, ಆರ್ಯಮ, ಭಾಗ, ವಿವಸ್ವನ, ವಿಷ್ಣು, ಅಂಶುಮಾನ, ವರುಣ ಮತ್ತು ಮಿತ್ರ. ಈ ಹನ್ನೆರಡು ಹೆಸರುಗಳು ಹನ್ನೆರಡು ತಿಂಗಳುಗಳ ಸೂಚಕ. ಇದೇ ತರಹ ಸೂರ್ಯನಿಗೆ ಇನ್ನೂ ಹನ್ನೆರಡು ಹೆಸರುಗಳಿವೆ. ಅವುಗಳು ಯಾವುವೆಂದರೆ, ಆದಿತ್ಯ, ಸವಿತಾ, ಸೂರ್ಯ, ಮಿಹಿರ, ಅರ್ಕ, ಪ್ರಭಾಕರ, ಮಾರ್ತಾಂಡ, ಭಾಸ್ಕರ, ಭಾನು, ಚಿತ್ರಭಾನು, ದಿವಾಕರ ಮತ್ತು ರವಿ. ೧೨ ಜನ ಋತ್ವಿಕರನ್ನು ಮನೆಗೆ ಕರೆಯಿಸಿ ನಮಸ್ಕಾರ ಮಾಡಿಸುವುದೂ ರೂಢಿಯಲ್ಲಿದೆ. ಆ ಹನ್ನೆರಡು ಜನ ಋತ್ವಿಕರ ಅರುಣ ಪ್ರಶ್ನ್ಯ ರೀತ್ಯಾ ಒಂದು ನಮಸ್ಕಾರವನ್ನು ೧೨ ಎಂದು ಲೆಕ್ಕಕ್ಕೆ ತೆಗೆದುಕೊಳ್ಳುವರು. ಆ ಸಂದರ್ಭದಲ್ಲಿ ಸೂರ್ಯನಿಗೆ ಪ್ರಿಯವಾದ ರವೆಯ ಪಾಯಸವನ್ನು ನೈವೇದ್ಯಕ್ಕಿರಿಸಿ, ಅದನ್ನು ಪ್ರಸಾದವಾಗಿ ಋತ್ವಿಕರಿಗೆ ಕೊಡುವರು ಮತ್ತು ಇತರರೂ ಸೇವಿಸುವರು.

ಒರಿಸ್ಸಾ ರಾಜ್ಯದಲ್ಲಿನ ಕೊನಾರ್ಕದ ಸೂರ್ಯನ ದೇವಸ್ಥಾನ, ಗಯಾದ ದಕ್ಷಿಣಾರ್ಕ ದೇವಸ್ಥಾನ, ರಾಜಸ್ಥಾನದ ರಾನಕ್ಪುರ, ಗುಜರಾತ್ ರಾಜ್ಯದ ಮೊಧೆರಾ, ಮಧ್ಯಪ್ರದೇಶದ ಉನಾವು (ಚರ್ಮ ರೋಗಗಳ ನಿವಾರಣೆಗಾಗಿ ಜನರು ಇಲ್ಲಿಗೆ ಹೋಗುವರು), ಅಸ್ಸಾಮಿನ ಗೋಲ್ಪರ, ಆಂಧ್ರಪ್ರದೇಶದ ಅರಸವಲ್ಲಿ, ತಮಿಳುನಾಡಿನ ಕುಂಭಕೋಣಂನ ಸೂರ್ಯನ ದೇವಸ್ಥಾನ ಇವುಗಳು ಭಾರತದಲ್ಲಿರುವ ಪ್ರಮುಖ ದೇವಸ್ಥಾನಗಳು.

ಪುರಾಣಗಳ ಪ್ರಕಾರ ಸೂರ್ಯನಿಗೆ ಇಬ್ಬರು ಪತ್ನಿಯರು - ಸಂಜನಾ ಮತ್ತು ಛಾಯಾ. ಅವನ ಮಕ್ಕಳಲ್ಲಿ ಪ್ರಮುಖರೆಂದರೆ, ಮನು, ಯಮ, ಯಮುನಾ, ಕರ್ಣ, ಸುಗ್ರೀವ ಇತ್ಯಾದಿ. ಶ್ರೀ ರಾಮನು ಸೂರ್ಯನ ವಂಶಸ್ತನು.
ಆಧಾರ:
http://www.templenet.com/surya.html
http://www.hinduism.co.za/sun-.htm

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ರಥಸಪ್ತಮಿಯ ಬಗ್ಗೆ ಬರೆಯುವ ನೆವದಲ್ಲಿ ಸೂರ್ಯಾರಾಧನೆಯ ವಿವರಗಳನ್ನು ಒದಗಿಸಿದ್ದಕ್ಕೆ ತವಿಶ್ರೀಯವರಿಗೆ ಧನ್ಯವಾದಗಳು.

ಸೂರ್ಯನ ಬಗ್ಗೆ ನನ್ನ ಬ್ಲಾಗಿನಲ್ಲಿ ಚುಟುಕು ಲೇಖನವನ್ನು ಇತ್ತೀಚಿಗೆ ಬರೆದಿದ್ದೇನೆ.

ಸುಮಾರು ಸಾಮಾನ್ಯ ಶಕೆಯ ೧೦-೧೧ನೆ ಶತಕಗಳವರೆಗೂ ಸೂರ್ಯಾರಾಧನೆ ಸಾಕಷ್ಟು ವ್ಯಾಪಕವಾಗಿತ್ತು. ಬೆಂಗಳೂರಿನ ಬಳಿಯ ಬೇಗೂರಿನ ಗಂಗರ ಕಾಲದ ಗುಡಿ ಈಗ ಶಿವಾಲಯವಾಗಿದೆ ಆದರೆ ಹಿಂದೆ ಸೂರ್ಯನ ಗುಡಿಯಾಗಿರಲಿಕ್ಕೆ ಸಾಧ್ಯ. ಪ್ರಾಕಾರದಲ್ಲಿ ಹಳೆಯ ಸೂರ್ಯ ಮೂರ್ತಿಯನ್ನು ನಿಲ್ಲಿಸಿದ್ದಾರೆ. ಅಲ್ಲದೆ ಬೇಗೂರನ್ನು "ಭಾಸ್ಕರ ಕ್ಷೇತ್ರ"ವೆಂದೂ ಕರೆಯುತ್ತಾರೆ.

ತ್ಯಾಮಗೊಂಡಲಿನ ಬಳಿಯ ಮಣ್ಣೆಯಲ್ಲಿಯೂ (ನೆಲಮಂಗಲ ತಾ.) ಹಳೆಯ "ಅರ್ಕೇಶ್ವರ" ದೇವಾಲಯವಿದೆ (ಈಗಿನವರು ಅದನ್ನು ಕಪಿಲೇಶ್ವರ ದೇವಾಲಯವೆಂದು ಕರೆಯುವುದು ವಾಡಿಕೆ, ಆದರೆ ಶಾಸನಗಳಲ್ಲಿ 'ಅರ್ಕೇಶ್ವರ'ವೆಂದು ಕರೆದಿದೆ). ಇಲ್ಲಿದ್ದಿರಬಹುದಾದ ಮೂಲಮೂರ್ತಿಯನ್ನು ಊರಾಚೆಯ ಕೆರೆಯು ಏರಿಯ ಮೇಲೆ ಇರಿಸಿದ್ದಾರೆ.

[ ಈ ಎರಡೂ ಸೂರ್ಯಮೂರ್ತಿಗಳ ಚಿತ್ರಗಳೂ ನನ್ನಲ್ಲಿವೆ ಆದರೆ ಎಟುಕಿನಲ್ಲಿಲ್ಲ; ಇದ್ದಿದ್ದರೆ ಲೇಖನದಲ್ಲಿ ಹಾಕುತ್ತಿದ್ದೆ. ]

ಮೂಲಸ್ಥಾನಪುರಿ (ಇಂದಿನ ಮುಲ್ತಾನ, ಪಾಕಿಸ್ತಾನದಲ್ಲಿದೆ) ಸೂರ್ಯಾರಾಧನೆಯ ಕೇಂದ್ರವಾಗಿತ್ತು [ಹಿರಣ್ಯಕಶಿಪು ಪ್ರಹ್ಲಾದರ ರಾಜಧಾನಿಯೂ ಸಹ ! ]

ಸೌರಪಂಥ ಅಳಿದರೂ ಅದರ ಕೆಲವಾದರೂ ಅಂಶಗಳು ಬೇರೆ ಪದ್ಧತಿಗಳಲ್ಲಿ ಸೇರಿ ಬೆರೆತು ಇನ್ನೂ ಒಂದಲ್ಲ ಒಂದು ಬಗೆಯಲ್ಲಿ, ನೆವದಲ್ಲಿ ನಡೆದುಕೊಂಡು ಬರುತ್ತಿವೆ. ಇದಲ್ಲವೆ ಭಾರತದ ರಿಲಿಜಿಯನ್ನುಗಳ ವೈಶಿಷ್ಟ್ಯ? ಬರೆದರೆ ಅದೇ ಕೆಲವಾರಾದರೂ ಲೇಖನಗಳಾದೀತು.

ವೆಂ.

namaskara,

ratha sapthami bagge bahalashtu mAhitigaLannu odagisiddakke dhanyavadagaLu.

vishvasi,
vAni
singapore

ವೆಂಕಟೇಶ ಮೂರ್ತಿಗಳಿಗೆ ಮತ್ತು ವಾಣಿಯವರಿಗೆ ವಂದನೆಗಳು.

ವಾಣಿಯವರೇ, ನಿಮ್ಮ ಬರಹವನ್ನು ಕನ್ನಡೀಕರಿಸಿರುವೆ. ಅಧಿಕಪ್ರಸಂಗತನಕ್ಕೆ ತಪ್ಪು ತಿಳಿಯುವುದಿಲ್ಲವೆಂದು ಭಾವಿಸುವೆ.
>ನಮಸ್ಕಾರ,

ರಥ ಸಪ್ತಮಿ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ಒದಗಿಸಿದ್ದಕ್ಕೆ ಧನ್ಯವಾದಗಳು.

ವಿಶ್ವಾಸಿ,
ವಾಣಿ
ಸಿಂಹಪುರ

ವಂದನೆಗಳೊಂದಿಗೆ
---
ತವಿಶ್ರೀನಿವಾಸ
[:http://asraya.net]