ಧಾರವಾಡದಲ್ಲಿ ಹುಟ್ಟಿ ಬಾಲ್ಟಿಮೋರ್‌ನಲ್ಲಿ ಹರಿದ ನಮ್ಮೆಲ್ಲರ ಶಾಲ್ಮಲಾ!

To prevent automated spam submissions leave this field empty.

("ಅಕ್ಕ 2006" ರ ಸಮಯದಲ್ಲಿ ಬರೆದದ್ದು. "ವಿಕ್ರಾಂತ ಕರ್ನಾಟಕ" ವಾರಪತ್ರಿಕೆಯ ಸೆಪ್ಟೆಂಬರ್ 22, 2006ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಈ ಲೇಖನವನ್ನು "ಅಕ್ಕ-2008" ರ ಸಮಯದಲ್ಲಿ ಇಲ್ಲಿ.)

ಅದು 1994. ಧಾರವಾಡ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ಸ್ನೇಹಿತರೊಬ್ಬರ ರೂಮಿನಲ್ಲಿ ಒಂದು ರಾತ್ರಿ ತಂಗಿದ್ದೆ. ಅಂದು ಅವರು ಕ್ಯಾಂಪಸ್‌ನ ಬಗ್ಗೆ ಮಾತನಾಡುತ್ತ ಅಲ್ಲಿ ಹರಿಯುವ ಶಾಲ್ಮಲ ನದಿಯ ಬಗ್ಗೆ ಹೇಳಿದ್ದರು. ಅದೇ ಮೊದಲ ಸಲ ಆ ಮುದ್ದಾದ ಹೆಸರನ್ನು ಕೇಳಿದ್ದು. ಇಲ್ಲಿಯವರೆಗೂ ನೋಡಿಲ್ಲದ ಆ ಗುಪ್ತಗಾಮಿನಿ ನನಗೆ ಅಂದೇ ಆಪ್ತವಾಗಿಬಿಟ್ಟಿತು.

ನಾಲ್ಕೈದು ವರ್ಷಗಳ ಹಿಂದೆ ಹೀಗೆ ಅಂತರ್ಜಾಲದಲ್ಲಿ ಕನ್ನಡ ಭಾವಗೀತೆಗಳನ್ನು ಕೇಳುತ್ತಿದ್ದಾಗ ಅಚಾನಕ್ಕಾಗಿ ಶಾಲ್ಮಲಾ ಎಂಬ ಪದ ಸಿ.ಅಶ್ವಥ್‌ರ ಕಂಚಿನ ಕಂಠದಿಂದ ಹೊಮ್ಮಿ ನನ್ನ ಕಿವಿ ಮುಟ್ಟಿತು.

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
ಒಳಗೊಳಗೇ ಹರಿಯುವವಳು
ಜೀವ ಹಿಂಡಿ ಹಿಪ್ಪೆ ಮಾಡಿ
ಒಳಗೊಳಗೇ ಕೊರೆಯುವವಳು
ಸದಾ... ಗುಪ್ತಗಾಮಿನಿ
ನನ್ನ ಶಾಲ್ಮಲಾ

ತಕ್ಷಣ ಕವಿಯ ಹೆಸರು ಹುಡುಕಿದೆ. ಚಂದ್ರಶೇಖರ ಪಾಟೀಲ ಎಂದಿತ್ತು. ಅಂದರೆ, ಚಂಪಾ ಅಲ್ಲವಾ? ಎಂತಾ ಅದ್ಭುತ ಕವಿತೆ ಬರೆದಿದ್ದಾರೆ ಮಾರಾಯ ಎಂದುಕೊಂಡೆ. ಅಲ್ಲಿಂದ ಇಲ್ಲಿಯವರೆಗೆ ಮನಸ್ಸು ಶಾಂತವಾಗಿರಲಿ ಇಲ್ಲದಿರಲಿ, ಕಂಪ್ಯೂಟರ್ ಮುಂದೆ ಇದ್ದರೆ ಸಾಕು ಆ ಹಾಡನ್ನು ಅನಂತ ಸಲ ಕೇಳಿದ್ದೇನೆ; ಕೇಳುತ್ತಲೇ ಇದ್ದೇನೆ. ಹಾಡು ಪ್ರಾರಂಭವಾಗುತ್ತಲೆ ಮನಸ್ಸು ಪ್ರಶಾಂತತೆಗೆ ಜಿಗಿದಿರುತ್ತದೆ.

ನಾನು ಚಂಪಾರವರನ್ನು ಮೊದಲ ಬಾರಿ ಭೇಟಿಯಾಗಿದ್ದು ಕಳೆದ ವರ್ಷ. ಸಾಹಿತ್ಯ ಪರಿಷತ್ತಿನ ಅವರ ಕಛೇರಿಯಲ್ಲಿ. ಮತ್ತೆ ಈ ವರ್ಷ ನಮ್ಮ ಸಂಪಾದಕರೊಡನೆ ಹೋಗಿ ಭೇಟಿಯಾಗಿದ್ದೆವು. ನಾನು ಕಳೆದ ವರ್ಷ ಭೇಟಿಯಾಗಿದ್ದಿದ್ದು ಇನ್ನೂ ನೆನಪಿತ್ತು ಅವರಿಗೆ. ಪತ್ರಿಕೆಯ ವಿಷಯ ಕೇಳಿ ಸಂತೋಷ ವ್ಯಕ್ತಪಡಿಸಿದರು.

ಅಕ್ಕ ಸಮ್ಮೇಳನದ ಸರ್ಕಾರಿ ಪಟ್ಟಿಯಲ್ಲಿ ಈ ಬಾರಿ ಚಂಪಾರವರೂ ಇದ್ದರು. ಸಮ್ಮೇಳನದ ಎರಡನೆಯ ದಿನ ಅವರನ್ನು ಕಂಡು ಮಾತನಾಡಿಸಿದೆ. ನನ್ನನ್ನು ಕಂಡಾಗ ಪರಿಚಯದ ನಗು ಬೀರಿದರು. ಅಂದು ಮತ್ತು ಮಾರನೆಯ ದಿನ ಅವರು ದ್ವಾರಕಾನಾಥ್ ಮತ್ತು ಹನುಮಂತರೆಡ್ಡಿಯವರೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಜೊತೆಯಾಗಿ ವೀಕ್ಷಿಸಿದರು. ಜಾನಪದ, ತತ್ವಪದ ಹಾಡುಗಾರ ಜನ್ನಿಯವರ ಹಾಡುಗಳನ್ನು ಮುಂದಿನ ಸಾಲಿನಲ್ಲಿಯೆ ಕುಳಿತು ನಾವೆಲ್ಲ ಕೇಳಿದೆವು. "ಯಾರಿಗೆ ಬಂತು ಎಲ್ಲಿಗೆ ಬಂತು 47 ರ ಸ್ವಾತಂತ್ರ್ಯ" ಮತ್ತು "ಓ ನನ್ನ ಚೇತನ ಆಗು ನೀ ಅನಿಕೇತನ" ಕವನಗಳು ಜನ್ನಿಯವರ ಕಂಚಿನ ಕಂಠದಲ್ಲಿ ಅಮೇರಿಕದಲ್ಲಿ ಮೊಳಗಿದಾಗ ಅನೇಕರಿಗೆ ಅದು ಸಾಂಕೇತಿಕವಾಗಿ ಅನೇಕ ಅರ್ಥಗಳನ್ನು ಕೊಟ್ಟಿತು. ಅಂದೇ ರಾತ್ರಿ ರೆಡ್ಡಿಯವರ ರೂಮಿನಲ್ಲಿ ಚಂಪಾ, ದ್ವಾರಕಾನಾಥ್, ಜನ್ನಿಯೊಂದಿಗೆ ಮಾತುಕತೆ 2-3 ಗಂಟೆಗಳ ಕಾಲ ಹೊಳೆಯಾಗಿ ಹರಿಯಿತು. ಇನ್ನೇನು ಊಟಕ್ಕೆ ಹೋಗಬೇಕು ಎನ್ನುವಾಗ ನಾನು ಚಂಪಾರವರಿಗೆ ನನ್ನ ಮತ್ತು ಅವರ ಶಾಲ್ಮಲ ಕವಿತೆಯ ಸಂಬಂಧದ ಬಗ್ಗೆ ಹೇಳಿದೆ. "ಕಂಪ್ಯೂಟರ್‌ನಲ್ಲಿ ಬರುತ್ತದೆ, ಕೇಳ್ತೀರ್ರೀ ಸರ?" ಎಂದೆ. "ಹ್ಞೂಂ, ಹಾಕ್ರಿ," ಎಂದರು. ಅಶ್ವಥ್‌ರ ಅಪ್ರತಿಮ ಕಂಠದಲ್ಲಿ, ರಚಯಿತನ ಸಮ್ಮುಖದಲ್ಲಿ, ಧಾರವಾಡದ ಶಾಲ್ಮಲ ಬಾಲ್ಟಿಮೋರ್‌ನಲ್ಲಿ ಗುಪ್ತಗಾಮಿನಿಯಾಗಿ, ತಪ್ತಕಾಮಿನಿಯಾಗಿ, ಸುಪ್ತಮೋಹಿನಿಯಾಗಿ ಕೊರೆಕೊರೆದು ಐದು ನಿಮಿಷಗಳ ಕಾಲ ಹರಿದೊ ಹರಿದಳು. ಹಾಡು ಮುಗಿದ ನಂತರ ನಮ್ಮೈವರಲ್ಲಿ ಭಾವಪರವಶರಾಗಿರದಿದ್ದವರು ಯಾರೂ ಇರಲಿಲ್ಲ! ಸ್ವಲ್ಪ ಹೊತ್ತು ಮಾತು ಭೂಗರ್ಭದ ಮೌನ ಧರಿಸಿತ್ತು.

ನನ್ನ ಬದುಕ ಭುವನೇಶ್ವರಿ
ನನ್ನ ಶಾಲ್ಮಲಾ
ನನ್ನ ಹೃದಯ ರಾಜೇಶ್ವರಿ
ನನ್ನ ಶಾಲ್ಮಲಾ!
ಸದಾ... ಗುಪ್ತಗಾಮಿನಿ
ನನ್ನ ಶಾಲ್ಮಲಾ

ಲೇಖನ ವರ್ಗ (Category):