ಭಳಿರೇ ಬನವಾಸಿ ಭತ್ತೋತ್ಸವ !

To prevent automated spam submissions leave this field empty.

ಭಳಿರೇ ಬನವಾಸಿ ಭತ್ತೋತ್ಸವ ! ಜೂನ್ ಮೊದಲ ವಾರ ಮಲೆನಾಡಿನ ನಮ್ಮೂರಿಗೆ ಹೊರಟಿದ್ದೆನಾದ್ದರಿಂದ ಬನವಾಸಿಯಲ್ಲಿ ಜರುಗಿದ 'ಭತ್ತ ಉತ್ಸವ'ಕ್ಕೆ ಹೋಗುವ ಅವಕಾಶ ತಾನೇತಾನಾಗಿ ಒದಗಿಬಂದಿತ್ತು. ಏಳರ ಮುಂಜಾವು ಒಂಭತ್ತು ಘಂಟೆಗೇ ಬನವಾಸಿಯನ್ನು ತಲುಪಿದೆ. ಸಮಾರಂಭ ಪ್ರಾರಂಭವಾಗಲು ಇನ್ನೂ ತಡವಿರಬಹುದೆಂದುಕೊಂಡು ಸಮೀಪದಲ್ಲಿಯೇ ಇದ್ದ ಸ್ನೇಹಿತೆ ವಿಜಯಕ್ಕಳ ಊರಿಗೆ ಹೊರಟೆ. ಬನವಾಸಿಯಿಂದ ಒಳಹಾದಿಯಲ್ಲಿ ಬರೀ ಐದಾರು ಕಿಮೀ ದೂರದಲ್ಲಿರುವ ಬೆಂಗ್ಳೆ, ಓಣೀಕೇರಿ ಹಾಗೂ ಹುಲೇಮಳಗಿ ಈ ಮೂರು ಹಳ್ಳಿಗಳು ಒಂದಕ್ಕೊಂದು ತಾಗಿದಂತೆಯೇ ಇದ್ದು ಒಟ್ಟಾರ್‍ಎಯಾಗಿ ಬೆಂಗ್ಳೆ ಗ್ರಾಮ ಎನಿಸಿಕೊಂಡಿವೆ. ಗ್ರಾಮದಲ್ಲಿ ಸುಮಾರು ಎಪ್ಪತ್ತು ಮನೆಗಳು. ರಸ್ತೆ, ಶಾಲೆ, ವಾಚನಾಲಯ, ಹಾಲು ಡೈರಿ ಇತ್ಯಾದಿ ಅನುಕೂಲಗಳನ್ನು ಹೊಂದಿರುವ ಮುಂದುವರೆದ ಗ್ರಾಮ ಇದು. ಊರಿನ ಹೆಂಗಳೆಯರು ಮುರಿಯಾಳಿನ ಲೆಕ್ಕದಲ್ಲಿ ಅಡಿಕೆ ಹಾಗೂ ಚಾಲಿ ಸುಲಿದುಕೊಳ್ಳುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಈ ಪ್ರದೇಶದ ವೈಶಿಷ್ಟ್ಯವಾದ ಒತ್ತುಶಾವಿಗೆ, ಹಪ್ಪಳ, ಸಂಡಿಗೆಗಳನ್ನು ತಯಾರಿಸುತ್ತಾರೆ. ಮನೆಯಂಗಳದಲ್ಲಿ ಈ ಮಹಿಳೆಯರು ತರಕಾರಿಗಳ ಜೊತೆಗೆ ತರಹಾವರಿ ಸೇವಂತಿಗೆ, ಡೇರೆಗಳನ್ನೂ ಮುತುವರ್ಜಿವಹಿಸಿ ಬೆಳೆಸುತ್ತಾರೆ. ನಾನು ಹೋದಾಗ ಪ್ರತಿಯೊಬ್ಬರ ಮನೆಯ ಸೂರಂಚಿನಲ್ಲೂ ಕೊಟ್ಟಿಗೆ ಗೊಬ್ಬರ, ಸೋಗೆ ಪುಡಿ ತುಂಬಿದ ಕುಂಡಗಳಲ್ಲಿ ಸೇವಂತಿಗೆಯ ಚಿಗುರುಗಳು ಹೊರಗಿಣುಕುತ್ತಿದ್ದವು. ಅಡಿಕೆ, ಭತ್ತ ಇಲ್ಲಿಯ ಪ್ರಮುಖ ಬೆಳೆಗಳು. ಅಡಿಕೆಯ ಬೆಲೆ ಗಗನಕ್ಕೇರಿದಾಗಲೂ ಉಣ್ಣುವ ಅನ್ನ ನೀಡುವ ಭತ್ತದ ಗದ್ದೆಗಳನ್ನು ಇಲ್ಲಿನವರು ಮರೆತಿಲ್ಲ. ಅನೇಕರು ಮನೆಯ ಖರ್ಚಿಗಾಗಿ ಮಾರಾಟಮಾಡುವಷ್ಟು ಭತ್ತವನ್ನು ಬೆಳೆಯುತ್ತಾರೆ. ಇನ್ನೂ ಒಂದು ವಿಶೇಷವೆಂದರೆ ನಾಲ್ಕೈದು ವರ್ಷಗಳ ಹಿಂದೆ ಇಲ್ಲಿ ಪ್ರಾರಂಭಗೊಂಡ ಮಳೆಕೊಯ್ಲು ಅಭಿಯಾನ ಪ್ರತಿ ಮುಂಗಾರಿನ ಪ್ರಾರಂಭದಲ್ಲೂ ಹೊಸ ಚೈತನ್ಯ ಪಡೆಯುತ್ತದೆ. ಮಳೆಗಾಲದಲ್ಲಿ ಪ್ರತಿ ಭಾನುವಾರ ಮನೆಗೊಬ್ಬರಂತೆ ಸೇರಿ ಇಂಗುಗುಂಡಿಗಳನ್ನು ಪರೀಕ್ಷಿಸಿ ನೀರಿಂಗುವಿಕೆ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ. ಇಷ್ಟಾಗಿಯೂ ಈ ಊರು ಸಮಸ್ಯೆಗಳಿಂದ ಮುಕ್ತವಾಗೇನಿಲ್ಲ. ಇತರೆಲ್ಲಾ ಹಳ್ಳಿಗಳಂತೆ ಇಲ್ಲಿಯೂ ಓದು, ನೌಕರಿ ಎಂದು ಹೊರಜಿಗಿಯುವ ಪಟ್ಟಣಮುಖಿ ಯುವಕರೇ ಹೆಚ್ಚು. ಊರಲ್ಲುಳಿದ ಯುವಕರು ಸದೃಢ, ಅನುಕೂಲಸ್ಥರಾಗಿದ್ದರೂ ಅವರಿಗೆ ಹೆಣ್ಣು ಕೊಡುವವರಿಲ್ಲ. ಕೃಷಿಕಾರ್ಯಗಳಲ್ಲಿ ಕೂಲಿಕಾರರ ಕೊರತೆಯೂ ಸೇರಿದಂತೆ ನಿರ್ವಹಣಾ ವೆಚ್ಚವೂ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ಕೆಲವರು ತಮ್ಮ ಭತ್ತದ ಗದ್ದೆಗಳನ್ನು ಗೇಣಿಗೆ ಕೊಟ್ಟಿದ್ದಾರೆ. ಇಲ್ಲಿ ಕೃಷಿಯಲ್ಲಿ ಸಾವಯವ ಗೊಬ್ಬರದ ಜೊತೆಜೊತೆಗೆ ಮಿತವಾಗಿ ರಾಸಾಯನಿಕ ಗೊಬ್ಬರವನ್ನೂ ಬಳಸಲಾಗುತ್ತಿದೆ. ವಿಜಯಕ್ಕನ ಒತ್ತಾಯದಿಂದಾಗಿ ಅಂದು ನನಗೆ ಸುಂದರ ಊರೊಂದರ ಪರಿಚಯವಷ್ಟೇ ಅಲ್ಲ, ಸ್ವಾದಿಷ್ಟವಾದ ಕೆಂಪಕ್ಕಿ ಅನ್ನದ ಅಡಿಗೆಯೂ ಲಭಿಸುವಂತಾಯಿತು. ಸಂಕೋಚದಿಂದಲೇ ಬಡಿಸಿದ ವಿಜಯಕ್ಕ ಹಿಂದೊಮ್ಮೆ ಪೇಟೆಯ ನೆಂಟರೊಬ್ಬರಿಗೆ ಆ ಅಕ್ಕಿಯನ್ನು ಕಳಿಸಿ ಅವರ ಅವಹೇಳನವನ್ನು ಪಡೆದಿದ್ದನ್ನು ನೆನಪು ಮಾಡಿಕೊಂಡಳು. (ಇದೇ ಕಾರಣಕ್ಕಾಗಿ ಇಲ್ಲಿ ಆ ಹಳ್ಳಿಯ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ. ಪಾಲಿಶ್ ಮಾಡದ ಪೌಷ್ಟಿಕವಾದ ಕೆಂಪು ಅಕ್ಕಿಯ ಮಹತ್ವ 'ವಜ್ರದಂತೆ ಹೊಳಪು, ಹಾಲಿನಂತೆ ಬಿಳುಪು' ಇರುವ ಅಕ್ಕಿಯನ್ನು ಬಯಸುವ ಪಟ್ಟಣಿಗರಿಗೆ ಎಂದು ಅರ್ಥವಾದೀತು? ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ಪರಿಚಿತ ಬ್ಯಾಂಕ್ ಅಧಿಕಾರಿಯೊಬ್ಬರು ಕೆಂಪು ಅಕ್ಕಿಗಾಗಿ ದಿನಸಿ ಅಂಗಡಿಗಳಿಗೆ ಎಡತಾಕುತ್ತಿದ್ದರು, ಅವರ ಮಗನಿಗೆ ಮಲಬದ್ಧತೆಯ ಸಮಸ್ಯೆ ತೀವ್ರವಾಗಿದ್ದು ಡಾಕ್ಟರು ಕೆಂಪಕ್ಕಿಯ ಅನ್ನ ಬಳಸಿ ಎಂದಿದ್ರಂತೆ). ವಾಪಸ್ಸು ಬನವಾಸಿಗೆ ಬಂದಾಗ ಆಗಲೇ ಮೂರು ಘಂಟೆ. ಬೆಳಗಿನ ಔಪಚಾರಿಕವಾದ ಉದ್ಘಾಟನಾ ಕಾರ್ಯಕ್ರಮ ಮುಗಿದಿತ್ತು. ಹೊರಗೆ ವಿವಿಧ ಬಣ್ಣ, ಆಕಾರ ಗುಣಗಳನ್ನು ಹೊಂದಿದ ನೂರಾರು ನಾಟಿ ತಳಿಗಳ ಭತ್ತ, ಅಕ್ಕಿಗಳ ಪ್ರದರ್ಶನ, ಮಾರಾಟ. ಒಳಗಡೆ 'ಬಿಟಿ ಬದನೆ ನಮಗೆ ಬೇಡ', 'ಕುಲಾಂತರಿ ತಳಿಗಳಿಗೆ ನಮ್ಮ ವಿರೋಧ' ಎಂಬ ತೂಗುಫಲಕಗಳು ಗೋಡೆಯ ಮೇಲೆ. ವೇದಿಕೆಯ ಪಕ್ಕದಲ್ಲಿ ಸಿರಿವಂತೆ ಚಂದ್ರಶೇಖರ್ ಅವರ ೧೧೧೧ ಅಡಿ ಉದ್ದದ ಭತ್ತದ ತೋರಣ ಗೋಡೆಯ ಮೇಲೆ ಜಾಗ ಸಾಧ್ಯವಾಗದೇ ನೆಲದ ಮೇಲೆ ಪದರುಪದರಾಗಿ ಜೋಡಣೆಗೊಂಡಿತ್ತು. ಇಡೀ ಆವರಣವೇ ಚಂದ್ರಶೇಖರರ ಬಾಗಿಲು ತೋರಣ, ದೀಪಗುಚ್ಚ, ಬುಟ್ಟಿ, ಹಕ್ಕಿ, ಮನೆ ಇತ್ಯಾದಿಯಾಗಿ ಭತ್ತದ ವಿವಿಧ ಕಲಾತ್ಮಕ ಕೃತಿಗಳ ಸಿಂಗಾರಗೊಂಡಿತ್ತು. ಇಡೀ ರಾಜ್ಯದಾದ್ಯಂತ ರಸಗೊಬ್ಬರ ಪೂರೈಕೆಯಲ್ಲಿ ಅಸ್ತವ್ಯಸ್ತತೆ ಉಂಟಾಗಿ ರೊಚ್ಚಿಗೆದ್ದ ರೈತರ ಆಕ್ರೋಶದ ವರದಿ ಎಲ್ಲೆಡೆಯಿಂದ. ಅದೇ ವೇಳೆಗೆ ಬನವಾಸಿಯ ಭತ್ತ ಉತ್ಸವ, ಅದೂ ಸಾವಯವ, ಕುಲಾಂತರಿಯಲ್ಲದ ಮತ್ತು ನಾಟಿ ತಳಿಗಳ ಪ್ರದರ್ಶನ, ಮಾರಾಟ ಹಾಗೂ ತಳಿಸಂರಕ್ಷಕರ ಅನುಭವದ ನುಡಿಗಳು ಇತ್ಯಾದಿಗಳನ್ನೊಳಗೊಂಡ ಎರಡು ದಿನಗಳ ಕಾರ್ಯಕ್ರಮ. ಆಗಾಗ ಭರಭರನೆ ಸುರಿಯುತ್ತಿದ್ದ ಮಳೆ, ಸ್ಥಳ ಬದಲಾವಣೆಯಿಂದಾದ ಅನಾನುಕೂಲತೆಗಳ ನಡುವೆಯೂ ರಾಸಾಯನಿಕಮುಕ್ತ ಭತ್ತದ ಬೆಳೆ ಸಾಧ್ಯವೆಂದು ಸಾಧಿಸಿ ತೋರಿಸಿದ ಅನೇಕ ರೈತರ ಅನುಭವದ ನುಡಿಗಳು ನೆರೆದವರ ಮನಸ್ಸನ್ನು ತಟ್ಟಿದವು. ರಾಸಾಯನಿಕ ಕೃಷಿಯಿಂದ ಸಾವಯವ ಭತ್ತದ ಕೃಷಿಗೆ ಮರಳಿದ ಮಂಡ್ಯದ ಕೃಷಿಕ ಬೋರೇಗೌಡ ಇಂದು ೩೦ ಜಾತಿಯ ಭತ್ತವನ್ನು ಸಾವಯವ ರೀತಿಯಲ್ಲಿ ಬೆಳೆಯುತ್ತಿದ್ದಾರೆ. ಹೊಳೆನರಸೀಪುರದ ಹೊಯ್ಸಳ ಅಪ್ಪಾಜಿಯ ಒಡೆತನದಲ್ಲೀಗ ಮೈಸೂರು ಮಹಾರಾಜರಿಗೆ ಒಂದು ಕಾಲದಲ್ಲಿ ಪೂರೈಕೆಯಾಗುತ್ತಿದ್ದ ರಾಜಮುಡಿ ಭತ್ತ. ಸಾವಯವದ ಹೊಸಹೊಸ ಚಿಂತನೆಗಳನ್ನು ಕಾರ್ಯರೂಪಕ್ಕೆ ತಂದಿಳಿಸುವ ಶಿವಮೊಗ್ಗದ ನಂದೀಶ್, ಸಾವಯವ ಭತ್ತದ ಕೃಷಿಯೊಂದಿಗೆ ಎರೆಹುಳ ಸಾಕಣೆಯಲೂ ಹೆಸರು ಗಳಿಸಿದ ಶಿಕಾರಿಪುರದ ದುಮ್ಮಳ್ಳಿ ಶಿವಮ್ಮ, ಹಾವೇರಿಯ ಶ್ರೇಣಿಕರಾಜು, ಹರಿಹರದ ಆಂಜನೇಯ ಬನವಾಸಿಯಲ್ಲಿ ಅಂದು ಹಾಜರಿದ್ದ ಸಾವಯವ ಕೃಷಿಕರು ಇವರೆಲ್ಲ. ಬೆಂಗಳೂರು ಮೂಲದ 'ಸಹಜ ಸಮೃದ್ಧ' ಸಂಸ್ಥೆಯು ಆಯೋಜಿಸಿದ ಈ ಭತ್ತ ಉತ್ಸವದ ಮತ್ತೊಂದು ವಿಶೇಷವೆಂದರೆ ಕೃಷಿ ಬರಹಗಾರರ ಕಮ್ಮಟ. ಸುಮಾರು ಇಪ್ಪೈತ್ತೈದರಷ್ಟು ಬರಹಗಾರರು ಎರಡು ಹೊತ್ತು ಒಂದೆಡೆ ಕೂತು ಚರ್ಚಿಸಿ ಭತ್ತದ ಬೀಜಗಳ ಬಗ್ಗೆ ಮಂಥನ ನಡೆಸಿದಾಗ ಹೊರಬಿದ್ದ ಹೂರಣಗಳು ಹಲವಾರು. ಜಾಗತೀಕರಣ ಹಾಗೂ ಭೂಬಿಸಿಯ ಪ್ರಸ್ತಾವದಿಂದ ಆರಂಭಗೊಂಡ ಚರ್ಚೆ ಆ ಮೂಲಕ ಜಗತ್ತಿನ ಮೂರು ಕೋಟಿಯಷ್ಟು ಜನರ ಜೀವನಾಧಾರವಾದ ಭತ್ತಕ್ಕೆ ಬಂದೊದಗಿದ ಕುತ್ತುಗಳಿಗೆ ಬರಹಗಾರರು ಹೇಗೆ ಸ್ಪಂದಿಸಬೇಕು, ಹೇಗೆ ಬೆಳೆಗಾರ ಮತ್ತು ಗ್ರಾಹಕರ ನಡುವಿನ ಸಂಪರ್ಕಸೇತುವಾಗಿರಬೇಕು ಇತ್ಯಾದಿ ಹತ್ತು ಹಲವಾರು ವಿಷಯಗಳಾಗಿ ಮುಂದುವರೆಯಿತು. ಉತ್ತರದಿಂದ ಹರಿದುಬರುತ್ತಿರುವ ಮಾಹಿತಿ ಪ್ರವಾಹದಲ್ಲಿ ಜೊಳ್ಳೆಷ್ಟು, ಗಟ್ಟಿಕಾಳೆಷ್ಟು, ನಮ್ಮ ನೆಲಕ್ಕೆ ಪ್ರಸ್ತುತವಾಗುವುದೆಷ್ಟು ಇವೆಲ್ಲವುಗಳ ಕುರಿತು ಜನರಿಗೆ ಎಚ್ಚರಿಕೆ ನೀಡುವುದರ ಜೊತೆಗೆ ನಮ್ಮ ದೇಶೀಯ ಜ್ಞಾನಭಂಡಾರದ ಅರಿವನ್ನು ಜನರಿಗೆ ತಿಳಿಸುವ ಹೊಣೆಯೂ ಬರಹಗಾರರದ್ದು. ಜಿಎಮ್ ಅಥವಾ ಕುಲಾಂತರಿ ಬೀಜಾಣುಗಳೆಂದರೇನು? ಅವು ನಮಗೆ ಯಾಕೆ ಬೇಡ? ಅವುಗಳ ನಿಯಂತ್ರಣ ಯಾರ ಕೈಲಿದೆ? ಸಸ್ಯವೊಂದರ ತಳಿಗುಣಕ್ಕೆ ಇತರೇ ಸಸ್ಯಗಳ ಗುಣಾಣುಗಳನ್ನು ಸೇರಿಸಿದಾಗ ಅದರ ಮೂಲ ಗುಣಸ್ವರೂಪಗಳು ಮಾರ್ಪಟ್ಟು ಅದು ಕುಲಾಂತರಿಯಾಗುತ್ತದೆ. ಉದಾಹರಣೆಗೆ ಬಿಟಿ ಹತ್ತಿ. ಕಾಂಡಕೊರಕ ಹುಳುವಿನ ಬಾಧೆ ತಾಗದಂತೆ ಇದಕ್ಕೆ ಬಿಟಿ ಬ್ಯಾಕ್ಟಿರಿಯಾದ ದೇಹದಲ್ಲಿರುವ ಪ್ರೋಟೀನ್ ಗುಣಾಣುವೊಂದನ್ನು ಸೇರಿಸಲಾಗಿದೆ. ಎಲ್ಲೆಡೆ ಅಬ್ಬರದ ಪ್ರಚಾರ ಪಡೆದಿದ್ದಷ್ಟೇ ಅಲ್ಲ, ಇಳುವರಿ ಹೆಚ್ಚುವುದೆಂಬ ಕಾರಣಕ್ಕಾಗಿ ದೇಶದ ಒಟ್ಟೂ ಹತ್ತಿಯ ಶೇಕಡಾ ೮೦ರಷ್ಟು ಸ್ಥಾನವನ್ನು ಬಿಟಿ ಹತ್ತಿಯೇ ಆಕ್ರಮಿಸಿದೆ. ಹತ್ತಿಯೇನು ಆಹಾರ ಪದಾರ್ಥವಲ್ಲ ಹಾಗಾಗಿ ಕುಲಾಂತರಿ ಹತ್ತಿಯನ್ನು ಬೆಳೆಯುವುದರಲ್ಲಿ ಮಾನವರಿಗೆ ಯಾವುದೇ ತೊಂದರೆಯಿಲ್ಲ ಎಂಬ ವಾದವಿದೆ. ಆದರೆ ಹತ್ತಿಬೀಜಗಳನ್ನು ಹೈನುಗಳಿಗೆ ಆಹಾರವಾಗಿ ನೀಡುತ್ತಾರೆ. ಕೆಲವೆಡೆ ಹತ್ತಿಬೀಜದ ಎಣ್ಣೆಯನ್ನು ಅಡಿಗೆಯಲ್ಲಿ ಬಳಸುವುದಿದೆ. ಆ ಹೈನೋತ್ಪನ್ನಗಳನ್ನು, ಎಣ್ಣೆಯನ್ನು ಬಳಸುವ ಮನುಷ್ಯರ ಆರೋಗ್ಯದ ಮೇಲೆ ಬಿಟಿ ಹತ್ತಿಯ ಪರಿಣಾಮವೇನಾಗಬಹುದೆಂಬ ಅಧ್ಯಯನ ನಡೆದಿದೆಯೆ? ಭತ್ತದ ವಿಷಯವನ್ನು ತೆಗೆದುಕೊಂಡರೆ ಸ್ವಕೀಯ ಪರಾಗಸ್ಪರ್ಶದಿಂದ ಬೀಜೋತ್ಪಾದನೆಗೊಳ್ಳುವ ಭತ್ತದಲ್ಲಿ ಕುಲಾಂತರಿ ತಳಿಯನ್ನು ಬೆಳೆಸುವುದು ತುಂಬಾ ಕಷ್ಟ. ಆದರೂ ವಿಟಾಮಿನ್ ಎ ಕೊರತೆಯಿರುವ ಬಡದೇಶಗಳಿಗೆ ವರವಾಗಬಲ್ಲುದೆಂಬ ಆಶಯ ಹೊತ್ತ ಗೋಲ್ಡನ್ ರೈಸ್ ಜನ್ಮ ತಾಳಲಿಲ್ಲವೇ? (ಮನುಜ ದೇಹಕ್ಕೆ ಅವಶ್ಯವಿರುವ ಪ್ರಮಾಣದ ವಿಟಮಿನ್ ಎ ದೊರೆಯಬೇಕೆಂದರೆ ಕ್ವಿಂಟಾಲುಗಟ್ಟಲೆ ಈ ಅನ್ನವನ್ನು ಒಬ್ಬ ಉಣ್ಣಬೇಕಾದೀತು -ಇದಕ್ಕೇನನ್ನುತ್ತಾರೆ ವಿಜ್ಞಾನಿಗಳು?) ಪ್ರಯೋಗಾಲಯದಲ್ಲಿ ಜನ್ಮ ತಾಳಿದ ಕುಲಾಂತರಿಗಳನ್ನು ದೊಡ್ಡದೊಡ್ದ ಕಂಪೆನಿಗಳು ಮಾರುಕಟ್ಟೆಗೆ ತಂದಿಳಿಸುತ್ತವೆ. ಲಾಭದ ಮುಖವೊಂದನ್ನೇ ನೋಡುವ ಕಂಪೆನಿಗಳಿಗೆ ಮೂಲತಳಿಗಳ ಬಗ್ಗೆಯಾಗಲೀ, ಸಾಂಪ್ರದಾಯಿಕ ಕೃಷಿವಿಧಾನಗಳ ಬಗ್ಗೆಯಾಗಲೀ ಕಿಂಚಿತ್ತೂ ಕಾಳಜಿಯಿರುವುದಿಲ್ಲ. ನಮ್ಮ ಕೃಷಿ ವಿಶ್ವವಿದ್ಯಾಲಯಗಳು ಸಿದ್ಧಪಡಿಸುವ ಭತ್ತದ ತಳಿಗಳದ್ದು ಏನು ವಿಶೇಷ? ಬದಲಾವಣೆಗೊಳಲ್ಪಟ್ಟ ಅವೂ ಕುಲಾಂತರಿಯಲ್ಲವೆ? ಅಲ್ಲ, ಅವು ಹೈಬ್ರಿಡ್ ತಳಿಗಳು. ಅಂದರೆ ಒಂದೇ ತಳಿಯ ವಿವಿಧ ಗುಣಧರ್ಮಗಳನ್ನು ಸೇರಿಸಿದ ತಳಿಗಳವು. ಉದಾಹರಣೆಗೆ ಆರೋಗ್ಯಪೂರ್ಣವಾಗಿ ಬೆಳೆದ ಹಾಗೂ ಹೆಚ್ಚು ಇಳುವರಿ ಬಿಟ್ಟ ಗಿಡಗಳಿಗೆ ಕೃತಕವಾಗಿ ಪರಾಗಸ್ಪರ್ಶ ಮಾಡಿಸಿ ಹೊಸ ತಳಿಗಳನ್ನು ತಯಾರಿಸಿದಾಗ ಅವು ಹೈಬ್ರಿಡ್ ಅಥವಾ ಸಂಕರ ತಳಿಗಳೆನಿಸುತ್ತವೆ. ಇವು ಹೆಚ್ಚು ಪ್ರಸಿದ್ಧಿ ಪಡೆದಂತೆ ಮೂಲತಳಿಗಳು ನಾಶವಾಗುತ್ತವೆ. ರಾಸಾಯನಿಕಗಳನ್ನು ಬಳಸಿದರೆ ಅಧಿಕ ಇಳುವರಿ ನಿಜವೇ? ಕೃಷಿಯ ವಿವಿಧ ಹಂತಗಳಲ್ಲಿ ಗೊಬ್ಬರ, ಕೀಟನಾಶಕಗಳನ್ನು ಬಳಸುವುದರಿಂದ ರೈತನಿಗಾಗುವ ಖರ್ಚು ವಿಪರೀತ. ಈ ಅಧಿಕ ಖರ್ಚು, ಅಧಿಕ ಇಳುವರಿಗಿಂತ ಕಡಿಮೆ ಒಳಸುರಿ, ಕಡಿಮೆ ಇಳುವರಿ ಹಾಗೂ ಸುಸ್ಥಿರ ಕೃಷಿವಿಧಾನ ಇವು ಒಳ್ಳೆಯದಲ್ಲವೆ? ಕುಲಾಂತರಿ ಬೆಳೆಗಳು ಸಾವಯವ ಹೌದೋ ಅಲ್ಲವೋ? ಈ ಪ್ರಶ್ನೆ ಎದ್ದಾಗ ಎಲ್ಲರೂ ಒಮ್ಮೆ ಯೋಚಿಸುವಂತಾಯ್ತು. ಜಿಎಮ್ ತಳಿಗಳು ರಾಸಾಯನಿಕದೊಡನೆ ಅಂದರೆ ಸಮಗ್ರ ಪೀಡೆ ನಿವಾರಕ ಯೋಜನೆಯಡಿ ಚೆನ್ನಾಗಿ ಬೆಳೆಯುತ್ತವೆ ಎಂಬ ಮಾತಿದೆ. ಅಂದರೆ ಜನತೆಗೆ ಕುಲಾಂತರಿ, ಹೈಬ್ರಿಡ್ ಬೀಜಗಳು ಹಾಗೂ ರಾಸಾಯನಿಕಗೊಬ್ಬರ, ಕೀಟನಾಶಕಗಳ ಬಗ್ಗೆ ಅವುಗಳ ಮೂಲಕ ಬಡಜನರನ್ನು ದೋಚುವ ಬೃಹತ್ ಕಂಪನಿಗಳ ಬಗ್ಗೆ, ತಳಿಸಂರಕ್ಷಣೆಯ ಮಹತ್ವದ ಬಗ್ಗೆ ತಿಳುವಳಿಕೆ ನೀಡುವ ಜವಾಬ್ದಾರಿ ಬರಹಗಾರರದ್ದು. ಅರವತ್ತರ ದಶಕದ ಹಸಿರುಕ್ರಾಂತಿಯ ಹೆಸರಿನಲ್ಲಿ ಪ್ರಚಾರಗೊಂಡ ರಸಗೊಬ್ಬರಗಳು, ಬೀಜಗಳು ಇಂದಿನ ರೈತರನ್ನು ಸಂಪೂರ್ಣವಾಗಿ ಪರಾಧೀನ(ಕಂಪನಿಅಧೀನ)ರನ್ನಾಗಿ ಮಾಡಿವೆಯಲ್ಲ? ಇಂಥ ಸಮಯದಲ್ಲಿ ನಾಟಿ ಭತ್ತ, ಸಾವಯವ ಭತ್ತಗಳನ್ನು ಬೆಳೆದು ಯಶ ಪಡೆದ ರೈತರಿಗೆ ಮಣೆಹಾಕುವ, ಅವರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಇಂಥ ಕಾರ್ಯಕ್ರಮಗಳು ಅರ್ಥಪೂರ್ಣವೆನಿಸುತ್ತವೆ. ದೇಶದಲ್ಲಿಯೇ ಪ್ರಪ್ರಥಮವಾಗಿ ಸಾವಯವ ನೀತಿಯನ್ನು ಜಾರಿಗೊಳಿಸಿದ ರಾಜ್ಯ ನಮ್ಮದು. ಇಲ್ಲಿ ಸಾವಯವ ರೀತಿಯಲ್ಲಿ ಬೆಳೆದ ಬೆಳೆಗಳಿಗೆ ವಿಶೇಷ ಬೆಲೆಯಿದೆ, ಮರ್ಯಾದೆಯಿದೆ. ಆದರೆ ಅದನ್ನು ರೈತರಿಗೆ ಮನವರಿಕೆ ಮಾಡಿಸಬೇಕಾದ ಕಾರ್ಯಗಳು ಇನ್ನೂ ನಡೆಯಬೇಕಿದೆ. ಸಮಾರಂಭದಲ್ಲಿ ಸ್ಥಳೀಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದಿದ್ದುದು ಗಮನಕ್ಕೆ ಬಂದಿತ್ತು. ಬನವಾಸಿಯ ಉತ್ಸವಕ್ಕೆ ಸುತ್ತಮುತ್ತಲ ಹಳ್ಳಿಗಳಲ್ಲಿ ಹೆಚ್ಚು ಪ್ರಚಾರ ದೊರೆತಿರಲಿಲ್ಲವೆ? ಅಥವಾ ಒಮ್ಮೆಗೇ ಶುರುವಾದ ಮಳೆಯಿಂದಾಗಿ ಜನ ಸೇರಲು ಉತ್ಸಾಹ ತೋರದೆ ಹೋದರೆ? ಇರಲಿ, ಇಲ್ಲಿ ನಡೆದ ಚಿಂತನ-ಮಂಥನಗಳ ಸವಿವರಗಳನ್ನು ನುರಿತ ಬರಹಗಾರರು, ವಿವಿಧ ಮಾಧ್ಯಮಗಳು ಜನತೆಗೆ ಒದಗಿಸಬಹುದು, ಆದರೆ ಶಿವಮೊಗ್ಗದ ಚಿಂತಕ ಕುಮಾರಸ್ವಾಮಿಯವರು ಹೇಳಿದ ಹಾಗೆ ಆಳುವ ಸರಕಾರವೇ ರೈತವಿರೋಧೀ ಕಾನೂನು, ಕಾಯಿದೆಗಳನ್ನು ಹೇರುತ್ತಿರುವಾಗ ಜನ ಹೋಗಬೇಕಾದ್ದೆಲ್ಲಿಗೆ? ವಿವಿಧ ಜಿಲ್ಲೆಗಳ ರೈತರು ತಮ್ಮಲ್ಲಿ ಬೀಜಬ್ಯಾಂಕುಗಳನ್ನು ಸ್ಥಾಪಿಸಲು ಮುಂದೆ ಬಂದರು. ನಂತರ ಭತ್ತದ ತೋರಣವನ್ನು ಕೈಯಲ್ಲಿ ಹಿಡಿದು ವೃತ್ತಾಕಾರವಾಗಿ ನಿಂತು ಸಮಾರಂಭದಲ್ಲಿ ನೆರೆದ ಪ್ರತಿಯೊಬ್ಬರೂ 'ದೇಶೀಯ ಭತ್ತದ ಬೀಜ, ಕೃಷಿ, ಸಂಸ್ಕೃತಿಯನ್ನು ಉಳಿಸಬೇಕು' ಎಂಬರ್ಥದ ಘೋಷಣೆಗಳನ್ನು ಕೂಗುವದರೊಂದಿಗೆ ಸಮಾರಂಭ ಪೂರ್ಣಗೊಂಡಿತು. ಈ ಬಾರಿ ತಾರಸಿ ಮೇಲೆ ಭತ್ತ ಬೆಳೆಯಬೇಕೆನ್ನುವ ನನ್ನ ಹಂಬಲ ಗಟ್ಟಿಯಾಗುತ್ತಾ ಬಂದಿತ್ತು. ಹೊಯ್ಸಳ ಅಪ್ಪಾಜಿ ಅವರಿಂದ ಗಿಡ್ಡ ತಳಿಯ ಒಂದು ಮುಷ್ಟಿ 'ಸರ್ಜನ್' ಭತ್ತ ಖರೀದಿಸಿ ಅಲ್ಲಿಂದ ಹೊರಟೆ. ******************

ಲೇಖನ ವರ್ಗ (Category):