ತೇಜಸ್ವಿ

To prevent automated spam submissions leave this field empty.

ನನ್ನ ನೆಚ್ಚಿನ ಸಾಹಿತಿ ಪೂ.ಚಂ.ತೇಜಸ್ವಿ

ಸುಚೇತಾ ಕುಲಕರ್ಣಿ(ತಾಳಿಕೋಟಿ)
moonsu808@gmail.com
'`ಸಾಹಿತಿಗಳು ಜಗತ್ತಿನ ಅನಭಿಷಕ್ತ ಸಾಮ್ರಾಟರು ' -- ಈ ಪ್ರಸಿದ್ಧ ಮಾತು ಸಾಹಿತಿಗಳ ಮಹೋನ್ನತ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಹೋಮರ್, ವ್ಯಾಸ, ವಾಲ್ಮೀಕಿ ಮುಂತಾದ ವ್ಯಕ್ತಿಗಳು ಮಹಾನ್ ಸಾಹಿತಿಗಳಾಗಿ ಸಾರ್ವಕಾಲಿಕ ಕೀರ್ತಿಗೆ ಪಾತ್ರರಾಗಿದ್ದಾರೆ.
.
ಭಾರತದ ಸಾಹಿತ್ಯ ಕ್ಷೇತ್ರದಲ್ಲಿ ಅಜರಾಮರವಾಗಿರುವಂಥ ಎಷ್ಟೋ ಹೆಸರುಗಳಿವೆ. ಆ ಹೆಸರುಗಳಲ್ಲಿ ಕನ್ನಡ ಸಾಹಿತಿಗಳ ಪಾಲು ಸಾಕಷ್ಟಿದೆ. ಪಂಪ,ರನ್ನ, ಹರಿಹರ, ಕುಮಾರವ್ಯಾಸ ಹಳೆಗನ್ನಡ ಕವಿಗಳಿಂದ ಹಿಡಿದು ಕುಂವೆಪು, ಬೇಂದ್ರೆ, ಕಾರಂತ, ಮಾಸ್ತಿಯಂತಹ ದಿಗ್ಗಜರು ಇಲ್ಲಿ ಆಗಿ ಹೋಗಿದ್ದಾರೆ. ಭಾರತೀಯ ಯಾವ ಭಾಷೆಗೂ ಸಲ್ಲದ ಏಳು ಜ್ಞಾನಪೀಠ ಪ್ರಶಸ್ತಿಗಳ ಗೌರವ ಕನ್ನಡ ಭಾಷೆಗೆ ಸಂದಿರುವುದನ್ನು ಹಮ್ಮೆಯಿಂದ ಇಲ್ಲಿ ಉಲ್ಲೇಖಿಸಬಹುದು.

ಆಧುನಿಕ ಕನ್ನಡ ಸಹಿತ್ಯದಲ್ಲಿ ಹಳೆಯ ತಲೆಮಾರಿನ ಸಾಹಿತಿಗಳು ಒಂದು ತೂಕವಾದರೆ, ಹೊಸ ಸಂವೇದನೆಯ ಪ್ರಜ್ಞೆಯ ಸಾಹಿತಿಗಳು ಇನ್ನೊಂದು ತೂಕವಾಗಿದ್ದಾರೆ. ಇಂತಹ ಅಪರೂಪದ ಹೊಸ ಸಂವೇದನೆಯ ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರು ನನ್ನ ನೆಚ್ಚಿನ ಸಾಹಿತಿಯಾಗಿದ್ದಾರೆ. ರಾಷ್ಟ್ರಕವಿ ಕುವೆಂಪುರವರು ಒಂದೆಡೆ ಮಹಾಕಾವ್ಯ, ಕಾದಂಬರಿ, ನಾಟಕಗಳ ಕೊಡುಗೆ ನೀಡಿದರೆ, ಇನ್ನೊಂದೆಡೆ ತೇಜಸ್ವಿಯಂಥ ಚಿಂತಕನನ್ನು ಕೊಡುಗೆಯಾಗಿ ನೀಡಿದ್ದಾರೆ. ೧೯೩೮ ರಂದು ಜನಿಸಿದ ತೇಜಸ್ವಿ ಬಾಲ್ಯದಿಂದಲೇ ಮಲೆನಾಡಿನ ಸಮೃದ್ಧ ಪರಿಸರದಲ್ಲಿ ಬೆಳೆದವರು. ಶಿವರಾಮ್ ಕಾರಂತ, ಲೋಹಿಯ ಮತ್ತು ಕುವೆಂಪುರವರ ದಟ್ಟ ಪ್ರಭಾವಕ್ಕೆ ಒಳಗಾದ ಇವರು ಸಮಾಜವಾದಿ ಗೋಪಾಲಗೌಡರ ಗರಡಿಯಲ್ಲಿ ಪಳಗಿದವರು. ಯು.ಆರ್. ಅನಂತಮೂರ್ತಿ, ಪಿ.ಲಂಕೇಶ ರಾಮದಾಸ್ ಮುಂತಾದವರ ಸಮಕಾಲಿನವರಾಗಿ ಬೆಳೆದು ಬಂದವರು.

ಸೋಮುವಿನ ಸ್ವಗತ ಲಹರಿ ಎಂಬ ಕಾವ್ಯ ಕ್ರುತಿಯ ಮೂಲಕ ಸಾಹಿತ್ಯಕ್ಶೇತ್ರ ಪ್ರವೇಶಿಸಿದ ತೇಜಸ್ವಿ ಯಮಳ ಪ್ರಶ್ನೆ ಎಂಬ ನಾಟಕದಿಂದ ಬದುಕಿನ ಒಗಟನ್ನು ಬಿಡಿಸ ಹೊರಟರು. ಹುಲಿಯೂರಿನ ಸರಹದ್ದು, ಅಬಚೂರಿನ ಪೋಸ್ಟ ಆಫೀಸ್, ಕಿರಿಯೂರಿನ ಗಯ್ಯಾಳಿಗಳು ಕಥಾಸಂಕಲನಗಳಲ್ಲಿ ಈವರೆಗೂ ಕನ್ನಡ ಸಾಹಿತ್ಯದಲ್ಲಿ ಕಾಣದ ಹೊಸತನವನ್ನು ತುಂಬಿದವರು.

ಕರ್ವಾಲೋ ಕಾದಂಬರಿಯಂತೂ ಪ್ರಕೃತಿ ಪರಿಸರ ಮತ್ತು ಮಾನವ ಜೀವನದ ರಹಸ್ಯವನ್ನೇ ಭೇದಿಸುವ ವಿಶಿಷ್ಟ ಕೃತಿ. ಚಿದಂಬರ ರಹಸ್ಯ ಮತ್ತು ಜುಗಾರಿ ಕ್ರಾಸ ವಿಶಿಷ್ಟ ರೀತಿಯ ಬರವಣಿಗೆಯಿಂದಾಗಿ ಓದುಗರ ಮನಗೆದ್ದಿವೆ. ಸ್ವರೂಪ ಮತ್ತು ನಿಗೂಢ ಮನುಷ್ಯರ ಕಾದಂಬರಿಗಳಲ್ಲಿಯೂ ಸಹ ಬದುಕನ್ನು ಬಿಡಿಸಿ ನೋಡುವ ಪ್ರಯತ್ನವಿದೆ.

ಪರಿಸರದ ಕತೆ ಮತ್ತು ಏರೋಪ್ಲೇನ್ ಚಿಟ್ಟೆ ಕೃತಿಗಳಲ್ಲಿ ಪರಿಸರದ ಜೀವಂತ ಚಿತ್ರಣವನ್ನೇ ಅಭಿವ್ಯಕ್ತಿಸಿದ್ದಾರೆ. ಪ್ರಕೃತಿಯಲ್ಲಿಯ ಮಾನವ, ಪ್ರಾಣಿ, ಪಕ್ಶಿ, ಕೀಟಗಳ ಅನ್ಯೋನ್ಯ ಸಂಬಂಧದ ಸಂಕೀರ್ಣ ಎಳೆಗಳನ್ನು ಬೆರಗಾಗುವಂತೆ ಚಿತ್ರಿಸಿದ್ದಾರೆ.

ಅದ್ಭುತ ಜಗತ್ತು ಸರಣಿಯಲ್ಲಿ ಮೂಡಿಬಂದ ವಿಸ್ಮಯ ೧ ೨ ಮತ್ತು ೩ ಮತ್ತು ಪ್ಲೈಯಿಂಗ ಸಾಸರ್ಸ ೧ ೨ ಕೃತಿಗಳು ಕನ್ನಡದಲ್ಲಿ ವಿಜ್ಞಾನದ ಸಂಗತಿಗಳನ್ನು ಹೇಗೆ ಬರೆಯಬಹುದು ಎಂಬುದಕ್ಕೆ ಮಾದರಿಗಳಾಗಿವೆ. ಹಕ್ಕಿ-ಪುಕ್ಕ ಪಕ್ಷಿ ಲೋಕದ ಒಂದು ಅದ್ಭುತ ಕೃತಿ. ಕನ್ನಡದಲ್ಲಿ ವಿಜ್ಞಾನದ ಸಂಗತಿಗಳನ್ನು ಹೇಗೆ ಬರೆಯಬಹುದು ಎಂಬುದಕ್ಕೆ ಮಾದರಿಗಳಾಗಿವೆ. ಹಕ್ಕಿ ಪುಕ್ಕ ಕನ್ನಡದ ವರ್ಣಚಿತ್ರಗಳುಳ್ಳ ಏಕೈಕ ಪಕ್ಷಿ ವಿಜ್ಞಾನದ ಪುಸ್ತಕ.
ಬ್ರಹ್ಮಾಂಡದ ಹುಟ್ಟು ಹೇಗಾಯಿತು ? ನೈಲ್ ನದಿಯ ಮೂಲವೆಲ್ಲಿದೆ ? ಅಜೇಯ ನದಿ ಅಮೇಜಾನ್ ಮುಂತಾದ ಜಾಗತಿಕ ಅದ್ಭುತ ಸಂಗತಿಗಳನ್ನು ಆಕರ್ಷಕ ರೀತಿಯಲ್ಲಿ ಚಿತ್ರಿಸಿದ್ದಾರೆ.

ಅಲೆಮಾರಿ ಅಂಡಮಾನ್ ಒಂದು ವಿಲಕ್ಷಣ ಪ್ರವಾಸ ಕಥನ. ಮುಂದುವರೆದ ಪ್ರಗತಿಶೀಲ ಶ್ರೀಮಂತ ರಾಷ್ಟ್ರಗಳೀಗೆ ಇಲ್ಲವೇ ಐತಿಹಾಸಿಕ ವಾಸ್ತುಶಿಲ್ಪದ ಅದ್ಭುತಗಳಿದ್ದ ದೇಶಗಳಿಗೆ ಪ್ರವಾಸ ಕೈಕೊಳ್ಳವವರು ಬಹಳ ಜನ. ಆದರೆ ಅಂಡಮಾನಂಥ ಸಮುದ್ರ ಮಧ್ಯದ ರುದ್ರಭೀಕರ ಕಾಡಿನ ಲೋಕಕ್ಕೆ ಪ್ರವಾಸ ಕೈಗೊಳ್ಳುವವರು ತೇಜಸ್ವಿಯಂಥ ಅಲೆಮಾರಿಗಳು ಮಾತ್ರ.

ಕಾಡಿನಲ್ಲಿ ಅಲೆಮಾರಿಯಾಗಿ ಅಲೆಯುವ ಹುಚ್ಚತನ ಇದ್ದುದ್ದರಿಂದಲೇ ಏನೋ ಇವರು ಜಿಮ್ ಕಾರ್ಬೇಟ್ ಮತ್ತು ಕೆನೆತ್ ಅಂಡರ್ಸನ್‌ರವರ ಶಿಕಾರಿ ಕಥೆಗಳನ್ನು/ ಭೇಟೆಯ ಅನುಭವಗಳನ್ನು ಕನ್ನಡಕ್ಕೆ ರೂಪಾಂತರಿಸಿದ್ದರೆ. ಅಣ್ಣನ ನೆನಪು ಕುವೆಂಪು ಮತ್ತು ತೇಜಸ್ವಿಯವರ ವಿಶಿಷ್ಟ ಸಂಬಂಧವನ್ನು ಚಿತ್ರಿಸುವ ಒಂದು ಜೀವನ ಚರಿತ್ರೆಯಾಗಿದೆ.

ಜಗತ್ತಿನ ಅದ್ಭುತಗಳನ್ನು, ಐತಿಹಾಸಿಕ ಮಹತ್ವದ ಘಟನೆಗಳನ್ನು, ವಿಸ್ಮಯಕಾರಕ ಒಗಟಿನ ಸಂಗತಿಗಳನ್ನು ,ವಿಜ್ಞಾನದ ಅದ್ಭುತ ಪ್ರಗತಿಯನ್ನು ಸಾರುವ ಮಿಲನಿಯಮ್ ಸರಣಿ ತೇಜಸ್ವಿಯವರ ಮಹತ್ವಾಕಾಂಕ್ಷೆಯ ಬರವಣಿಗೆ.

ಹುಡುಕಾಟ, ಜೀವನ ಸಂಗ್ರಾಮ, ಮಹಾಯುದ್ಧ ೧ ೨ ೩,ದೇಶ ವಿದೇಶ ೧ ೨ ೩ ೪, ನೆರೆಹೊರೆಯ ಗೆಳೆಯರು, ಚಂದ್ರನ ಚೂರು, ಮಹಾ ಪಲಾಯನ ವಿಸ್ಮಯ ವಿಶ್ವ, ಅಡ್ವೆಂಚರ್ ಮುಂತಾದ ೧೬ ಕೃತಿಗಳು ಕನ್ನಡದ ಪುಸ್ತಕ ಲೋಕಕ್ಕೆ ಅಮೂಲ್ಯ ಕೊಡುಗೆಗಳಾಗಿವೆ. ಎರಡು ಸಾವಿರ ವರ್ಷಗಳ ಮಾನವನ ಸಾಧನೆ ಪ್ರಗತಿ ಮತ್ತು ವಿಕೃತಿಗಳನ್ನು ಮಕ್ಕಳಿಗೂ ತಿಳಿಯುವಂತಹ ಭಾಷೆಯಲ್ಲಿ ಬರೆದಿದ್ದಾರೆ. ಇಡೀ ಒಂದು ಜೀವಮಾನದುದ್ದಕ್ಕೂ ಓದಿ ಅರ್ಗಿಸಿಕೊಳ್ಳಬೇಕಾದ ಬೃಹತ್ ಸ್ವರೂಪದ ಸಂಗತಿಗಳನ್ನು ಈ ೧೬ ಪುಸ್ತಕಗಳಲ್ಲಿ ಸಂಕ್ಷಿಪ್ತವಾಗಿ ಅಡಕಗೊಳಿಸಿದ್ದಾರೆ. ನೌರು ದ್ವೀಪದ ದುರಂತ, ಹರಪ್ಪಾ,ಮಹಂಜೋದಾರೋ, ಸಹರಾ ಮರಭೂಮಿ, ಟೈಟಾನಿಕ್, ಚಂದ್ರಲೋಕಯಾನ, ಎವರೆಸ್ಟ್ ಶಿಖರ ಆರೋಹಣ, ಮಹಾಪಲಾಯನ ಮುಂತಾದ ಸಂಗತಿಗಳನ್ನು ಓದಿಯೇ ಅನುಭವಿಸಬೇಕು. ಮಾನವ ಶಾಸ್ತ್ರದ `ಮಿಸ್ಸಿಂಗ್ ಲಿಂಕ್` ಮನುಷ್ಯನ ಚರಿತ್ರೆಯನ್ನು ಚಿತ್ರಿಸುವ ಅದ್ಭುತ ಕೃತಿಯಾಗಿದೆ.
ಕವಿ,ನಾಟಕಕಾರ,ಕಾದಂಬರಿಕಾರ,ಪರಿಸರ ಪ್ರೇಮಿ,ಪಕ್ಷಿ ತಜ್ಞ,ಕೀಟ ವಿಜ್ಜಾನಿ,ಸಮಾಜವಾದಿ ಚಿಂತಕ,ಚಿತ್ರ ಕಲಾವಿದ, ಛಾಯಾಚಿತ್ರಗ್ರಾಹಕರಾದ
ಪೂರ್ಣಚಂದ್ರ ತೇಜಸ್ವಿಯವರು ಆಧುನಿಕ ಕೃಷಿ ವಿಜ್ಜಾನಿಯೂ , ಸ್ವತ: ಕೃಷಿಕರೂ ಹೌದು. ಜಪಾನಿನ ಕೃಷಿ ಋಷಿಯಾದ ಪುಕೋಕಾರವರ ಸಹಜ ಕೃಷಿ ಕುರಿತು ವಿಶಿಷ್ಟ ಕೃತಿ ರಚಿಸಿದ್ದಾರೆ. ಮಲೆನಾಡಿನ ಮೂಡಿಗೆರೆಯಲ್ಲಿ ಕಾಫಿತೋಟ ಮಾಡಿಕೊಂಡಿರುವ ಇವರು ಜೇನುಸಾಕಾಣಿಕೆ, ಮೀನುಸಾಕಣಿಕೆಯಲ್ಲೂ ಅನುಭವ ಗಳಿಸಿಕೊಂಡವರು.
ಪ್ರೌಢ ಸಾಹಿತ್ಯದಲ್ಲಿ ಎಷ್ಟು ಹೆಸರುವಾಸಿಯಾಗಿರುವರೋ ಅಷ್ಟೇ ಮಕ್ಕಳ ಸಾಹಿತ್ಯದಲ್ಲಿ ಹೆಸರುವಾಸಿಯಾಗಿರುವ ಇವರು ಎಂತಹ ಓದುಗರನ್ನೂ ಆಕರ್ಷಿಸಬಲ್ಲ ಸಾಮರ್ಥ್ಯವುಳ್ಳವರು. ಕುವೆಂಪುರವರಂಥ ಮಹಾಕವಿಯ ಪ್ರಭಾವ ಕವಚವನ್ನು ಹರಿದೊಗಿದು ಸ್ವತಂತ್ರ ವ್ಯಕ್ತಿತ್ವ ಬೆಳೆಸಿಕೊಂಡವರು.
`ತಬರನ ಕತೆ`, ಅಬಚೂರಿನ ಪೋಸ್ಟ ಆಫೀಸು, ಕುಬಿ ಮತ್ತು ಇಯಾಲ, ಇವು ಚಲನಚಿತ್ರಗಳಾಗಿ ತೇಜಸ್ವಿಯವರಿಗೆ ರಾಜ್ಯ ರಾಷ್ಟ್ರ ಪ್ರಶಸ್ತಿಗಳನ್ನು ತಂದುಕೊಟ್ಟಿವೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದು ಗೌರವ ಪಡೆದ ಶ್ರೇಷ್ಠ ಲೇಖಕರು ಇವರು.
ಕಾಡಿನಲ್ಲಿ ಕುಳಿತು ತನ್ನಷ್ಟಕ್ಕೆ ತಾನು ಕೃತಿ ರಚಿಸುತ್ತ. ಚಿತ್ರ ಬರೆಯುತ್ತಾ. ಬೇಟೆಯಾಡುತ್ತಾ, ಪಕ್ಷಿಗಳ ಚಿತ್ರವನ್ನು ಸೆರೆಹಿಡಿಯುತ್ತಾ ಸೃಜನಶೀಲರಾಗಿ ಕಾಲಕಳೆಯುವ ಇವರನ್ನು ಅರಸಿಕೊಂಡು ಪ್ರಶಸ್ತಿಗಳು ಬಂದಿವೆ. ಕರ್ವಾಲೋ. ಅಲೆಮಾರಿ ಅಂಡಮಾನ್. ಪರಿಸರದ ಕಥೆ. ಕಿರಿಯೂರಿನ ಗಯ್ಯಾಳಿಗಳು ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭ್ಯವಾಗಿದೆ. ಚಿದಂಬರ ರಹಸ್ಯ ಕೇಂದ್ರ ಸಾಹಿತ್ಯ ಅಕಾಡೆಮಿ ಪಶಸ್ತಿ ಪಡೆದಿದೆ. ಅಲ್ಲದೇ ಕರ್ನಾಟಕ ಸರ್ಕಾರದ ಪರಿಸರ ವಿಜ್ಞಾನದ ಪ್ರಶಸ್ತಿ ದೊರಕಿದೆ. ಕಳೆದೆರಡು ವರ್ಷಗಳ ಹಿಂದೆ ಕರ್ನಾಟಕದ ಶ್ರೇಷ್ಠ ಪುರಸ್ಕಾರವಾದ ಪಂಪ ಪ್ರಶಸ್ತಿ ಲಭ್ಯವಾಗಿದೆ.

ಮಕ್ಕಳಾದ ಈಶಾನ್ಯೆ ಮತ್ತು ಸುಶ್ಮಿತಾರವರಿಗೆ ಪಕ್ಷಿ ಮತ್ತು ಕೀಟಗಳನ್ನು ಕುರಿತು ಕಥೆ ಹೇಳುವಾಗ ಏರೋಪ್ಲೇನ್ ಚಿಟ್ಟೆ ಯಂತಹ ವಿಶಿಷ್ಟ ಕೃತಿ ಸಿಕ್ಕಂತಾಗಿದೆ. ತಾವೇ ತೆಗೆದ ಪಕ್ಷಿ ಚಿತ್ರಗಳನ್ನು ಇತ್ತೀಚೆಗೆ ಕಲಾತ್ಮಕ ಶುಭಾಶಯ ಪತ್ರಗಳನ್ನಾಗಿ ಮುದ್ರಿಸಿದ್ದಾರೆ. ಚಿತ್ರಕ್ಕೆ ಸೂಕ್ತವಾದ ಕುವೆಂಪುರವರ ಪದ್ಯಗಳನ್ನು ಬಳಸಿಕೊಂಡಿದ್ದಾರೆ. ಕನ್ನಡದ ಮಕ್ಕಳಿಗೆ ಇದೊಂದು ಅಪೂರ್ವ ಕೊಡುಗೆಯಾಗಿದೆ !
ಹೀಗೆ ತಮ್ಮ ಬದುಕಿನ ರೀತಿಯಿಂದ, ಬರವಣಿಗೆಯಿಂದ, ಚಿಂತನೆಯಿಂದ, ಚಿತ್ರಕಲೆಯಿಂದ, ಫೋಟೋಗ್ರಾಫಿಯಿಂದ, ಪಕ್ಷಿ, ಕೀಟ, ಪರಿಸರ ವಿಜ್ಜಾನದ ಆಸಕ್ತಿಯಿಂದ ಎಲ್ಲ ಓದುಗರ, ಸಮಗ್ರ ಕನ್ನಡಿಗರ ಗಮನ ಸೆಳೆದ ಈ ಸಾಹಿತಿ ನನಗೆ ಅತ್ಯಂತ ಮೆಚ್ಚುಗೆಯಾಗಿದ್ದಾರೆ. ನನ್ನ ಬದುಕಿನ ದಾರಿ ದೀಪವಾಗಿದ್ದಾರೆ !

*****

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಮ್ಮ ಲೇಖನ ತೇಜಸ್ವಿ ಅವರ ಕೃತಿಗಳ ಪೂರ್ಣ ಪರುಚಯ ಮತ್ತು ಅವುಗಳ ವಿಮರ್ಶೆಯನ್ನು ಚೆನ್ನಾಗಿ ಬರೆದಿದ್ದೀರಿ. ಆದರೆ .................. ಪ್ಯಾಪಿಲಾನ್ ಮತ್ತು ಪಾಕಕ್ರಾಂತಿ ಬಗ್ಗೆ ? ? ? ? ?