ತೈಲ ಕಂಪೆನಿಗಳಿಂದ ಎಲ್ ಪಿ ಜಿ ವಿವರ

0

ತೈಲ ಕಂಪೆನಿಗಳಿಂದ ಎಲ್ ಪಿ ಜಿ ವಿವರ
http://www.bharatpetroleum.com ತಾಣದಲ್ಲಿ,ಇಂಡೇನ್,ಹಿಂದೂಸ್ತಾನ್ ಪೆಟ್ರೋಲಿಯಮ್ ಮತ್ತು ಭಾರತ್ ಪೆಟ್ರೋಲಿಯಂ ಕಂಪೆನಿಗಳ ಗ್ರಾಹಕರು ತಾವು ಬಳಸಿದ ಸಿಲಿಂಡರುಗಳ ವಿವರಗಳನ್ನು ಪಡೆಯಬಹುದು.ಸರಬರಾಜು ಮಾಡಿದ ದಿನಾಂಕಗಳ ಸಮೇತ ಆ ವಿವರಗಳನ್ನು ದಾಖಲಿಸಲಾಗಿದೆ.ಗ್ರಾಹಕರು ತಮ್ಮ ತೈಲ ಕಂಪೆನಿಯ ಐಕಾನ್ ಮೇಲೆ ಕ್ಲಿಕ್ಕಿಸಿ,ತಮ್ಮ ವಿತರಕರ ಹೆಸರು,ಜಿಲ್ಲೆ,ರಾಜ್ಯದ ವಿವರವನ್ನು ನೀಡಿದರೆ ಸರಿ.ಅಲ್ಲದೆ,ಓರ್ವ ವಿತರಕನ ಎಲ್ಲಾ ಗ್ರಾಹಕರ ವಿವರಗಳನ್ನೂ ನೀಡಿ,ಪಾರದರ್ಶಕತೆಯನ್ನು ಮೆರೆಯಲಾಗಿದೆ.ಒಬ್ಬೊಬ್ಬನಿಗೆ ನೀಡಿದ ಸಬ್ಸಿಡಿ ಪ್ರಮಾಣದ ವಿವರಗಳೂ ಸಿಗುತ್ತವೆ.ವಿತರಕನ ರೇಟಿಂಗ್ ಕೂಡಾ ನೀಡಲಾಗಿದೆ.ವಿತರಕನಿಗೆ ನಿಮ್ಮ ರೇಟಿಂಗನ್ನು ಕೂಡಾ ನೀಡಬಹುದು. ಮುಖ್ಯವಾಗಿ,ಎಷ್ಟು ಸಬ್ಸಿಡಿಸಹಿತ ಸಿಲಿಂಡರುಗಳಿನ್ನು ಲಭ್ಯವಿದೆ ಎನ್ನುವುದನ್ನೂ ತಿಳಿದುಕೊಳ್ಳಬಹುದು.

ಮನೆಯಿಂದ ಕೆಲಸ ಸಾಕು,ಕಚೇರಿಗೆ ಬನ್ನಿ:ಯಾಹೂ ಸಿ ಇ ಓ‌ನಿಂದ ಕಟ್ಟಾಜ್ಞೆ
ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ, ಎನ್ನುವುದನ್ನು ಮನೆಯಿಂದಲೇ ಕಚೇರಿ ಕೆಲಸಕ್ಕೂ ಅನ್ವಯಿಸುವ ಕಾಲ ಬಂದಿದೆ.ಮನೆಯಿಂದಲೇ ಇಂಟರ್ನೆಟ್ ಮೂಲಕ ಕಚೇರಿಯೊಂದಿಗೆ ಸಂಪರ್ಕ ಸಾಧಿಸಿ,ತಮ್ಮ ಕೆಲಸ ಮಾಡಲು,ತಂತ್ರಾಂಶ ಅಭಿವೃದ್ಧಿಕಾರರಿಗೆ ಸಾಧ್ಯ.ಹೀಗೆ ಮಾಡಿದರೆ,ಪ್ರಯಾಣಕ್ಕಾಗಿ ಅವರು ಮಾಡುವ ಸಮಯದ ಉಳಿತಾಯ ಮಾಡಬಹುದು.ಈಗ ವಿಡಿಯೋ ಕಾನ್ಫರೆನ್ಸ್‌ನಂತಹ ಸವಲತ್ತಿನಿಂದ ತಮ್ಮ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವವರ ಜತೆ ವಿಚಾರ ವಿನಿಮಯವನ್ನೂ ನಡೆಸಬಹುದು. ಕಚೇರಿಯಲ್ಲಿ ಮನೆಯಿಂದ ಕೆಲಸ ಮಾಡುವವರಿಗೆ ಸ್ಥಳಾವಕಾಶವನ್ನು ಒದಗಿಸಬೇಕಿಲ್ಲದ್ದರಿಂದ ಕಂಪೆನಿಗೆ ಖರ್ಚೂ ಉಳಿಯುತ್ತದೆ.ಯಹೂವಿನ ಹೊಸ ಸಿ ಇ ಓ ಮರಿಸ್ಸಾ ಮೇಯರ್ ಬಾನ್ಸ್,ತಮ್ಮ ಕಂಪೆನಿಯ ಮನೆಯಿಂದ ಕೆಲಸ ಮಾಡುವ ನೌಕರರು,ಇನ್ನು ಕಚೇರಿಗೆ ಬರಬೇಕು ಎಂದು ವಿಧಿಸಿ,ಸಣ್ಣ ವಿವಾದವನ್ನು ಹುಟ್ಟು ಹಾಕಿದ್ದಾರೆ.ಅವರ ಪ್ರಕಾರ,ಯಾಹೂವಿನಂತಹ ಹೊಸ ಹೊಸ ಆವಿಷ್ಕಾರ ಮಾಡುವ ಕಂಪೆನಿಗಳಿಗೆ ಮನೆಯಿಂದಲೇ ಕಚೇರಿ ಕೆಲಸ ಹೊಂದದು.ಏನೋ ಕೋಡ್ ಬರೆದು ತಂತ್ರಾಂಶ ಅಭಿವೃದ್ಧಿ ಪಡಿಸಿದರೆ ಸಾಲದು,ಅದು ದಕ್ಷ ಮತ್ತು ವಿನೂತನ ಸವಲತ್ತುಗಳನ್ನು ನೀಡಬೇಕು.ಇಂತಹದ್ದಕ್ಕೆ ಒಂದು ತಂಡದವರು ಕೂಡಿ ಯೋಚಿಸಿ,ಯೋಜನೆ ತಯಾರಿಸಬೇಕು ಎನ್ನುವುದವರ ವಾದ.ಹೊಸ ಸ್ ಇ ಓ ಹಳೆಕಾಲದವರ ಹಾಗೆ ಮಾತನಾಡುವುದು ಕೆಲ ಉದ್ಯೋಗಿಗಳಿಗೆ ಪಥ್ಯವಾಗಿಲ್ಲ.

ತ್ರೀಡಿ ಸ್ಕ್ಯಾನರ್ ತಯಾರು
ತ್ರೀಡಿ ಮುದ್ರಕದ ಬಗ್ಗೆ ಸಾಕಷ್ಟು ಓದಿದ್ದೇವೆ.ಈಗ ಮೂರು ಆಯಾಮದ ಸಣ್ಣ ವಸ್ತುಗಳನ್ನು ಸ್ಕ್ಯಾನ್ ಮಾಡಿ,ಮುದ್ರಕದ ಮೂಲಕ,ಅದರ ಯಥಾಪ್ರತಿಯನ್ನು ಮಾಡುವುದು ಸಾಧ್ಯವಿದೆ.ಮೇಕರ್‌ಬೋಟ್ಸ್ ಎನ್ನುವ ಕಂಪೆನಿಯು ಎರಡೂ ಉತ್ಪನ್ನಗಳನ್ನು ತಯಾರಿಸಿದೆ.ಮುದ್ರಕವು ಬರೇ ಪ್ರತಿಕೃತಿಯನ್ನಲ್ಲದೆ,ಚಲಿಸುವ ಭಾಗಗಳನ್ನೂ ನಿರ್ಮಿಸಬಲ್ಲುದು.ಮೇಕರ್‌ಬೋಟ್ ಡಿಜಿಟೈಸರ್ ಎನ್ನುವ ಸ್ಕ್ಯಾನರ್ ಸುಮಾರು ಎಂಟಿಂಚು ಗಾತ್ರದ ವಸ್ತುಗಳನ್ನು ಸ್ಕ್ಯಾನ್ ಮಾಡಬಲ್ಲುದು.ಸ್ಕ್ಯಾನ್ ಮಾಡಲು ಲೇಸರ್ ಕಿರಣವನ್ನು ಮತ್ತು ವೆಬ್‌ಕ್ಯಾಮ್‌ಗಳನ್ನು ಬಳಸಲಾಗುವುದು.

ಪಾದಾಚಾರಿ ಮತ್ತು ಸೈಕಲಿಗರ ರಕ್ಷಣೆಗೆ ವೊಲ್ವೋ ಕಾರಿನಲ್ಲಿ ವ್ಯವಸ್ಥೆ
ಸೈಕಲ್ ಹೊಡೆಯುವವರು,ತಟ್ಟನೆ ಕಾರಿನ ಮುಂದೆ ಬಂದರೆ ಅದನ್ನು ಪತ್ತೆಹಚ್ಚಿ,ಒಡನೆಯೇ ಕಾರಿನ ಬ್ರೇಕುಗಳನ್ನು ಚಲಾಯಿಸುವ ಸ್ವಯಂಚಾಲಿತ ವ್ಯವಸ್ಥೆಯು ವೊಲ್ವೋ ಕಾರುಗಳಲ್ಲಿ ಬಂದಿದೆ.ಬೇಕಾದ ಗ್ರಾಹಕರಿಗೆ ಮಾತ್ರಾ,ಈ ಸೌಲಭ್ಯ ಅಳವಡಿಸಿದ ಕಾರು ಪೂರೈಸಲಾಗುವುದು.ಇಷ್ಟು ಮಾತ್ರವಲ್ಲದೆ,ಸೈಕ್ಲಿಸ್ಟ್ ಕಾರಿಗೆ ತಗಲುವ ಅಪಾಯ ಬಂದಾಗ,ವಿಂಡ್‌ಸ್ಕ್ರೀನ್ ಮೇಲೆ ಗಾಳಿಚೀಲವೊಂದು ಹರಡಿಕೊಂಡು,ಸೈಕ್ಲಿಸ್ಟ್ ಅದರ ಮೇಲೆ ಬಿದ್ದರೂ ಹೆಚ್ಚಿನ ಆಘಾತ ಅನುಭವಿಸದ ಹಾಗೆ ನೋಡಿಕೊಳ್ಳುತ್ತದೆ.

ಮುಡ್ರೋಕಿನಿಂದ ಮಕ್ಕಳಿಗೆ ಟ್ಯಾಬ್ಲೆಟ್
ಮುಡ್ರೋಕ್ ಗುಂಪು,ಅಮೆರಿಕಾದ ಶಾಲೆಗಳಲ್ಲಿ ಬಳಸಲು ಟ್ಯಾಬ್ಲೆಟ್ ಸಾಧನವನ್ನು ತಯಾರಿಸಿದೆ.ಇದು ಮುನ್ನೂರು ಡಾಲರು ಬೆಲೆಯಲ್ಲಿ ಲಭ್ಯ.ನಾಲ್ಕುಜಿ ಸೌಲಭ್ಯವಿದ್ದದ್ದಕ್ಕೆ ಐವತ್ತು ಡಾಲರು ಹೆಚ್ಚು ಬೆಲೆ ತೆರಬೇಕು.ಇದರಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅವಶ್ಯಕವಾದ ಕಲಿಕಾ ಸಂಪನ್ಮೂಲಗಳನ್ನು ಲಭ್ಯವಾಗಿಸಿದೆ.ಶಿಕ್ಷಕರು ವಿವಿಧ ವಿಷಯಗಳ ಬಗ್ಗೆ ವಿದ್ಯಾರ್ಥಿಗಳ ಜತೆ ಚರ್ಚಿಸಲಿದರಲ್ಲಿ ಅನುಕೂಲ ಕಲ್ಪಿಸಲಾಗಿದೆ.ಇನ್ನು ಹೆತ್ತವರೂ ತಮ್ಮ ಮಕ್ಕಳು ಶಾಲೆಯಲ್ಲಿ ಹೇಗೆ ಏಗುತ್ತಿದ್ದಾರೆ ಎನ್ನುವುದನ್ನು ತಿಳಿಯಲೂ ಸಾಧ್ಯ.

ಮೆಮೊಟೊ ಎನ್ನುವ ಕ್ಯಾಮರಾ
ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಚಿತ್ರಗಳನ್ನು ತಮ್ಮ ಗುಂಪಿನವರೊಂದಿಗೆ ಹಂಚಿಕೊಳ್ಳುವುದು ಒಂದು ಅಭ್ಯಾಸವಾಗಿ ಬೆಳೆದಿದೆ.ಈಗ ಮೊಮೆಟೋ ಎನ್ನುವ ಕ್ಯಾಮಾರಾವನ್ನು ತಯಾರಿಸಿರುವ,ಅದೇ ಹೆಸರಿನ ಕಂಪೆನಿಯು,ತನ್ನಷ್ಟಕ್ಕೆ ಸುತ್ತಲಿನ ಚಿತ್ರ ತೆಗೆಯುವ ಸಾಮರ್ಥ್ಯ ಪಡೆದಿದೆ.ಇದು ನಿಗದಿತ ಸಮಯದಂತೆ ಸುತ್ತಲಿನ ಚಿತ್ರ ಹಿಡಿಯುತ್ತದೆ.ಇದನ್ನು ಜ್ಯಾಕೆಟ್,ಕಾಲರ್ ಅಥವ ಕುತ್ತಿಗೆಗೆ ನೇತು ಹಾಕಬಹುದು.ವ್ಯಕ್ತಿಯು ತನ್ನ ಚಟುವಟಿಕೆಗಳನ್ನು ದಾಖಲಿಸಲು ಇಂತಹ ಕ್ಯಾಮಾರಾ ಸೂಕ್ತ.ಮುಂದೆ,ಹೀಗೆ ತೆಗೆದ ಚಿತ್ರಗಳೂ,ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವುದು ಇದ್ದೇ ಇದೆ ಅನ್ನಿ.ಅಂದಹಾಗೆ ಕ್ಯಾಮರಾ ಚೌಕಾಕಾರದ್ದು.

ವಿಂಡೋಸ್ 8 ಬೇಡವೇ? ಉಬುಂಟು ಇದೆಯಲ್ಲ..
ವಿಂಡೋಸ್ 8 ಆಪರೇಟಿಂಗ್ ವ್ಯವಸ್ಥೆಯೇನೂ ಬಂದಿದೆ.ಅದು ಕಂಪ್ಯೂಟರುಗಳಲ್ಲಿ ಅನುಸ್ಥಾಪಿತವಾಗಿಯೇ ಬರುವುದಿದೆ.ಅಲ್ಲವಾದರೆ,ನೀವದನ್ನು ಖರೀದಿಸಬೇಕು.ಬರೇ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಖರೀದಿಸಿದರೆ,ಅಗ್ಗವಾಗಿ ದೊರೆಯುತ್ತದೆ.ಹಾಗಾದರೆ,ಆಪರೇಟಿಂಗ್ ವ್ಯವಸ್ಥೆಗೇನು ಮಾಡೋಣ ಎಂದಿರಾ?ಉಬುಂಟು ಇದಕ್ಕೆ ಉತ್ತಮ ಪರಿಹಾರವಾಗುತ್ತದೆ.ಉಬುಂಟುವನ್ನು ಇಂಟರ್ನೆಟ್‌ನಿಂದ ಇಳಿಸಿಕೊಂಡು,ಡಿವಿಡಿ,ಸಿಡಿ ಅಥವಾ ಪೆನ್‌ಡ್ರೈವಿನಲ್ಲಿ ಹಾಕಿಕೊಳ್ಳಬಹುದು.ಬೂಟೇಬಲ್ ಮಾಧ್ಯಮವನ್ನು ಸಕ್ರಿಯಗೊಳಿಸಿ,ಕಂಪ್ಯೂಟರನ್ನು ಬೂಟ್ ಮಾಡಿದರೆ,ಉಬುಂಟುವಿನ ತೆರೆ ಕಾಣಿಸಿಕೊಳ್ಳುತ್ತದೆ.ಬೇಕನಿಸಿದರೆ,ಉಬುಂಟುವನ್ನು ಅನುಸ್ಥಾಪಿಸದೇ ಅದು ಹೇಗೆ ಕೆಲಸ ಮಾಡುತ್ತದೆ ಎಂದು ಪರೀಕ್ಷಿಸಬಹುದು.ಇಷ್ಟವಾದರೆ,ಹಾರ್ಡ್‌ಡಿಸ್ಕಿನ ಭಾಗವೊಂದರಲ್ಲಿ ಅನುಸ್ಥಾಪಿಸಬಹುದು.ಹಳೆಯ ವಿಂಡೋಸ್ ಇದ್ದರೆ,ಅದರ ಭಾಗದಿಂದ ಪ್ರತ್ಯೇಕವಾದ ಭಾಗದಲ್ಲಿ ಅಳವಡಿಸಿ,ಅದನ್ನೂ ಬಳಸಬಹುದು.ಬೂಟ್ ಆದಾಗ,ಯಾವ ಆಪರೇಟಿಂಗ್ ವ್ಯವಸ್ಥೆ ಬೇಕು ಎನ್ನುವುದನ್ನು ಆಯ್ದು ಕೊಳ್ಳಲು ಸಾಧ್ಯ.ಉಬುಂಟುವಿನಲ್ಲಿ ವಿವಿಧ ಉದ್ದೇಶಗಳಿಗೆ ಮುಕ್ತ ಮತ್ತು ಉಚಿತ ತಂತ್ರಾಂಶಗಳ  ಕಣಜವೇ ಸಿಗುತ್ತದೆ.ಸಾಫ್ಟ್‌ವೇರ್ ಸೆಂಟರ್ ಮೂಲಕ ಬೇಕಾದ ತಂತ್ರಾಂಶವನ್ನು ಅಳವಡಿಸಲು ವ್ಯವಸ್ಥೆಯಿದೆ.ಗೂಗಲ್ ಸರ್ಚ್ ಮಾಡಬೇಕಿಲ್ಲ.ಯುನಿಟಿ ಎನ್ನುವ ಡೆಸ್ಕ್‌ಟಾಪ್ ಇದರಲ್ಲಿ ಜನಪ್ರಿಯ.ವುಬಿ ಎನ್ನುವ ವಿಂಡೋಸ್ ತಂತ್ರಾಂಶ ಬಳಸಿ,ವಿಂಡೋಸ್ ಒಳಗಡೆಯೇ ತಂತ್ರಾಂಶದ ಹಾಗೆ ಉಬುಂಟುವನ್ನು ಹಾಕಿಕೊಳ್ಳಬಹುದು.

ಸ್ಮಾರ್ಟ್‌ಫೋನ್ ಬ್ಯಾಟರಿಗೆ ಸೌರವಿದ್ಯುತ್ ಸಾಥ್
ಸ್ಮಾರ್ಟ್‌ಪೋನ್ ಬಹಳ ಅನುಕೂಲಿಯಾಗಿದ್ದರೂ,ಅದರ ಬ್ಯಾಟರಿ ಬಾಳಿಕೆಯದ್ದೇ ಸಮಸ್ಯೆ.ವಾಹನ ಚಲಾಯಿಸಲು,ಜಿಪಿಎಸ್ ಚಾಲೂ ಇಟ್ಟುಕೊಂಡು ಬಳಸಿದಾಗಲಂತೂ ಇದು ಬಹಳ ಬೇಗ ಖಾಲಿಯಾಗುತ್ತದೆ.ಇದಕ್ಕೆ ಸೌರವಿದ್ಯುತ್ ಬಳಸಿ ಸ್ಮಾರ್ಟ್‌ಫೋನಿನ ಬ್ಯಾಟರಿ ಖರ್ಚನ್ನು ಕಡಿಮೆ ಮಾಡಲು ಕೆಲವು ಅಡ್ಡಿಗಳಿವೆ.ಅಂತಹ ಘಟಕವು ಹಾಳೆಯ ರೂಪದಲ್ಲಿರಬೇಕು.ಗ್ಯಾಲಿಯಂ ಆರ್ಸೆನೈಡ್‌ನಿಂದ ಇಂತಹ ಹಾಳೆ ತಯಾರಿಸಲು ಕಂಪೆನಿಯೊಂದು ಮುಂದಾಗಿದೆ.ಸಮಸ್ಯೆಯೆಂದರೆ,ಈ ಗ್ಯಾಲಿಯಂ ಆರ್ಸೆನೈಡ್ ಬಹಳ ಬೇಗ ಬಿರಿಯುತ್ತದೆ.ಇದರಿಂದ ಹಾಳೆ ಮಾಡುವುದು ಸುಲಭವಲ್ಲ.ಆದರೂ ಈ ತೊಂದರೆಯನ್ನು ನಿವಾರಿಸುವತ್ತ ಕಂಪೆನಿ ಹೆಜ್ಜೆ ಹಾಕಿದೆ.
ಇಂಟ‌ರ್ನೆಟ್‌ನಲ್ಲಿ ಅಂಕಣ ಬರಹಗಳು: http://ashok567.blogspot.comನಲ್ಲಿ ಲಭ್ಯ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.