ಹಿಜ್ರಾ ಒಬ್ಬಳ ಆತ್ಮಕತೆ-ಬದುಕು ಬಯಲು

5

                ಕನ್ನಡದಲ್ಲೀಗ ಅನುವಾದಿತ ಉತ್ತಮ ಆತ್ಮಕತೆಗಳು ಬಿಡುಗಡೆಯಾಗುತ್ತಿವೆ. ನಳಿನಿ ಜಮೀಲಾ ಅವರ ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥನ ನಂತರ ಇದೀಗ ಲಂಕೇಶ್ ಪ್ರಕಾಶನದಡಿಯಲ್ಲಿ ಎ.ರೇವತಿಯವರ ಬದುಕು ಬಯಲು ಎಂಬ ಹಿಜ್ರಾ ಒಬ್ಬಳ ಆತ್ಮಕತೆ ಕನ್ನಡದಲ್ಲಿ ಬಿಡುಗಡೆಯಾಗಿದೆ. ಮೂಲತ: ಇಂಗ್ಲೀಷ್‌ನ ಟ್ರುತ್ ಅಬೌಟ್ ಮಿ-ಎ ಹಿಜ್ರಾ ಲೈಫ್ ಸ್ಟೋರಿ ಎಂಬ ಕೃತಿಯನ್ನು ಲೇಖಕಿ ದು.ಸರಸ್ವತಿಯವರು ಕನ್ನಡಕ್ಕೆ ಸುಂದರವಾಗಿ ಅನುವಾದಿಸಿದ್ದಾರೆ.

          ದೇಹದ ಅಂಗಾಂಗಳ ಮೂಲಕ ಗಂಡು, ಹೆಣ್ಣು ಎಂದು ಗುರುತಿಸಲಾಗುತ್ತದೆ. ಆದರೆ ಗಂಡಿನೊಳಗಿರುವ ಹೆಣ್ಣಿನ ಭಾವನೆ, ನಡವಳಿಕೆಯನ್ನು ಏನಂತ ಗುರುತಿಸುವುದು? ನಡುವೆ ಸುಳಿವಾತ್ಮನು ಗಂಡೂ ಅಲ್ಲ ಹೆಣ್ಣೂ ಅಲ್ಲ ಎಂದು ವಚನಕಾರರು ೧೨ನೇ ಶತಮಾನದಲ್ಲಿಯೇ ಹೇಳಿದ್ದಾರೆ. ಆತ್ಮವನ್ನು ಗಂಡು, ಹೆಣ್ಣು ಎಂದು ಗುರುತಿಸಲಾಗದು. ಗಂಡಾಗಿದ್ದೂ ಭಾವನಾತ್ಮಕವಾಗಿ ಹೆಣ್ಣಾಗಿರುವವರು, ಹೆಣ್ಣಾಗಿ ಲಿಂಗ ಬದಲಾವಣೆಗೊಂಡು ಹಿಜ್ರಾ, ನಂಬರ್ ೯, ಚಕ್ಕಾ, ಹೆಣ್ಣಿಗ ಎಂದು ವಿಧವಿಧವಾಗಿ ಸಮಾಜದಲ್ಲಿ ಕೀಳಾಗಿ ಕರೆಯಲ್ಪಡುವ ಹಿಜ್ರಾಗಳ ಬದುಕು ಎಷ್ಟು ಅಸಹನೀಯ, ಬದುಕು ಎಷ್ಟು ದುರ್ಭರ ಎಂಬುದನ್ನು ತಿಳಿಯಬೇಕಾದರೆ ಖಂಡಿತ ಬದುಕು ಬಯಲು ಕೃತಿಯನ್ನು ಓದಲೇಬೇಕು. ಸಮಾಜದಲ್ಲಿ ಗಂಡಿಗೆ, ಹೆಣ್ಣಿಗೆ, ಅಂಗವಿಕಲರಿಗೆ, ರೋಗಿಗಳಿಗೆ, ತಲೆಹಿಡುಕರಿಗೆ, ಭ್ರಷ್ಟರಿಗೆ, ದುಷ್ಟರಿಗೆ ಎಲ್ಲರಿಗೂ ತಮ್ಮದೇ ಆದ ಸ್ಥಾನವಿದೆ. ಆದರೆ ಹಿಜ್ರಾಗಳಿಗೆ ಯಾವುದೇ ಸ್ಥಾನವಿಲ್ಲ ಎಂದು ಹೆಣ್ಣಾಗಿ ಬದಲಾವಣೆಗೊಂಡ ರೇವತಿ ನೊಂದು ನುಡಿಯುತ್ತಾರೆ. 

           ತಮಿಳುನಾಡಿನ ಸೇಲಂ ಜಿಲ್ಲೆಯ ನಮಕ್ಕಲ್ ತಾಲೂಕಿನ ಪುಟ್ಟ ಹಳ್ಳಿಯ ರೇವತಿಯಾಗಿ ಬದಲಾಗುವ ದೊರೆಸ್ವಾಮಿಗೆ ಬಾಲ್ಯದಿಂದಲೇ ರಂಗೋಲಿ ಹಾಕುವ, ಕಸ ಗುಡಿಸುವ, ಪಾತ್ರೆ ತೊಳೆಯುವ ಕೆಲಸಗಳು ಇಷ್ಟವಾಗುತ್ತಿದ್ದವು ಎಂದು ಆರಂಭಗೊಳ್ಳುವ ಆತ್ಮಕತೆ, ಮುಂದೆ ಹೆಣ್ಣಿನ ವೇಷಭೂಷಣಗಳನ್ನು ತೊಟ್ಟುಕೊಳ್ಳುವುದರಲ್ಲೇ ಆನಂದವನ್ನು ಹುಡುಕುವ ಪ್ರಯತ್ನ ನಡೆಯುತ್ತದೆ. ಹಾಗೆ ನಡವಳಿಕೆ ಬದಲಾದಾಗ ಸಮಾಜ ನೋಡುವ ಕ್ರೂರ ನೋಟ, ವ್ಯಂಗ್ಯ, ಹಾಸ್ಯ, ಅಸಹನೀಯತೆಗಳನ್ನು ರೇವತಿ ಕಣ್ಮುಂದೆ ಕಟ್ಟುವಂತೆ ಚಿತ್ರಿಸುತ್ತಾರೆ. ಮೊದಲು ದೊರೈಸ್ವಾಮಿಯಾಗಿದ್ದ ಬಾಲಕನಲ್ಲಿ ಹೆಣ್ಣಿನ ನಡವಳಿಕೆಗಳು ಬೆಳೆಯತೊಡಗಿದಾಗ, ಆತ ಇಬ್ಬಂದಿತನದಲ್ಲಿ ಸಿಲುಕಿ ಕೊನೆಗೆ ಹೆಣ್ಣಾಗುವುದರಲ್ಲಿಯೇ ತನಗೆ ಸುಖವಿದೆ ಎಂದು ತಿಳಿಯುತ್ತಾನೆ. ಅಂತಹವರೊಂದಿಗೇ ಬೆರೆಯಲು ಆತ ಹಾತೊರೆಯುತ್ತಾನೆ. ಮನೆ, ಸಮಾಜದಲ್ಲಿ ಹೆಣ್ಣಿಗ ಎಂದು ಹೀಯಾಳಿಸಿಕೊಂಡ ದೊರೆಸ್ವಾಮಿ, ಸಂಪೂರ್ಣವಾಗಿ ಹೆಣ್ಣೇ ಆಗಲು ಹಾತೊರೆಯುತ್ತಾನೆ. ಈ ಭಾವನೆ ಎಷ್ಟು ಬೆಳೆಯುತ್ತದೆಂದರೆ ಏನೇ ಆಗಲಿ ಹೆಣ್ಣಾಗಲೇಬೇಕು ಎಂಬ ಹಟ ಬಲಿಯುತ್ತದೆ. ಅದಕ್ಕಾಗಿ ತನ್ನಂತೆಯೇ ಇರುವ ತನ್ನ ಭಾವನೆಗಳನ್ನು ಅರಿತುಕೊಳ್ಳುವ ವ್ಯಕ್ತಿತ್ವವಿರುವವರನ್ನು ಹುಡುಕುತ್ತ ಹೋಗುತ್ತಾನೆ. ತಾಯಿಗಿಂತಲೂ ಹಿಜ್ರಾಗಳೇ ದೊರೆಸ್ವಾಮಿಗೆ ಇಷ್ಟವಾಗುವುದು ಇದೇ ಕಾರಣದಿಂದ. ಶಸ್ತ್ರಚಿಕಿತ್ಸೆಯಿಂದ ಲಿಂಗ ಬದಲಾವಣೆ ಮಾಡಿಸಿಕೊಳ್ಳುವ ದೊರೆಸ್ವಾಮಿ ರೇವತಿಯಾಗುತ್ತಾಳೆ. ದೆಹಲಿ, ಮುಂಬೈಗಳಂತಹ ಮಹಾನಗರಗಳಲ್ಲಿ ಹಳ್ಳಿಯಿಂದ ಹೋದ ಏನೂ ಅರಿಯದ ದೊರೆಸ್ವಾಮಿ, ರೇವತಿಯಾಗಿ, ಹಿಜ್ರಾ ಆಗಿ, ಹಿಜ್ರಾಗಳ ಸಂಪ್ರದಾಯ, ಪದ್ಧತಿಗಳನ್ನೇ ಅನುಸರಿಸಿಕೊಂಡು ಬೆಳೆಯುತ್ತಾಳೆ. ದೆಹಲಿ, ಮುಂಬೈಗಳ ಕಾಮಾಟಿಪುರದಂತಹ ಪ್ರದೇಶಗಳಲ್ಲಿ ಸೆಕ್ಸ್ ವರ್ಕರ್ ಆಗಿ ಅನುಭವಿಸುವ ಯಾತನೆ, ಬೆಂಗಳೂರು ನಗರದಲ್ಲಿ ಅನುಭವಿಸುವ ನೋವು ಎಲ್ಲವೂ ಓದುಗರಿಗೆ ಹಿಜ್ರಾರ ಬದುಕಿನ ದಾರುಣ ಕತೆಯನ್ನು ಬಿಂಬಿಸುತ್ತವೆ. ಪೊಲೀಸ್, ರೌಡಿಗಳ ಕೈಯಲ್ಲಿ ನಲುಗುವ ಅವರ ಬದುಕು ಹೋರಾಟದಾಯಕವಾದುದು. ಕೆಲವರಿಗೆ ಬದುಕೆಂಬುದು ಹೋರಾಟವಾಗಿರುತ್ತದೆ ಆದರೆ ನಮ್ಮಂಥವರಿಗೆ ಹೋರಾಟವೇ ಬದುಕು ಎಂದು ರೇವತಿ ಆತ್ಮಕಥನದಲ್ಲಿ ಹೇಳುತ್ತಾರೆ. ಎಲ್ಲೋ ಒಂದು ಹಿಡಿ ಪ್ರೀತಿ, ಒಂದು ಹಿಡಿ ವಾತ್ಸಲ್ಯ, ಒಂದು ಹಿಡಿ ಸಾಮಾನ್ಯ ಬದುಕಿಗಾಗಿ ಹಂಬಲಿಸುವ ರೇವತಿ ಹೆಣ್ಣಿನಂತೆಯೇ, ಪ್ರೀತಿಸಿದವನೊಬ್ಬನನ್ನು ಮದುವೆಯಾಗಿ ಇನ್ನು ನನ್ನ ಬದುಕೆಲ್ಲ ಸುಖಮಯ ಎನ್ನುವಾಗಲೇ ದುರಂತ ಕಾಣುತ್ತದೆ. ಪ್ರೀತಿಸಿದವ ತಿರಸ್ಕರಿಸಿ ಹೊರಟು ಹೋದಾಗ ಮತ್ತೆ ಹೀನ ಬದುಕಿಗೇ ವಾಪಸಾಗುವಾಗ ರೇವತಿಯ ಅಳಲನ್ನು ಕೇಳುವ ಒಂದು ಜೀವವೂ ನಾಗರಿಕ ಸಮಾಜದಲ್ಲಿರುವುದಿಲ್ಲ. ಕೇವಲ ಹೆಣ್ಣಾಗಬೇಕೆಂಬ ಬಯಕೆಯೇ ವ್ಯಕ್ತಿಯೊಬ್ಬನ ಬದುಕನ್ನು ದುರ್ಭರಗೊಳಿಸುವ ಕಥನ ನಾಗರಿಕ ಸಮಾಜಕ್ಕೆ ಪ್ರಶ್ನೆ ಹಾಕುವಂತಿದೆ. ಹಿಜ್ರಾ, ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಕಾರ್ಯನಿರ್ವಹಿಸುವ ಸಂಗಮ ಎನ್ನುವ ಸಂಸ್ಥೆಯಲ್ಲಿ ಕೆಲಸದಲ್ಲಿ ತೊಡಗುವ ರೇವತಿಯ ಬದುಕಿನಲ್ಲಿ ಕೆಲವು ಮಾರ್ಪಾಟುಗಳಾದರೂ ಸಮಾಜ ಹಿಜ್ರಾಗಳನ್ನು ನೋಡುವ ದೃಷ್ಟಿ ಮಾತ್ರ ಬದಲಾಗುತ್ತಿಲ್ಲ ಎಂಬ ನೋವು ಕಾಡುತ್ತದೆ. ಕಚೇರಿಗಳಲ್ಲಿ ಗಂಡೋ, ಹೆಣ್ಣೋ ಎಂಬ ದಾಖಲೆಯನ್ನು ಒದಗಿಸಲು ಒದ್ದಾಡುವ ಅಧಿಕಾರಿಗಳೆದುರು ದಿಟ್ಟವಾಗಿ ಹೆಣ್ಣೆಂದು ಹೋರಾಡಿ ದಾಖಲೆ ಪಡೆದವರು ರೇವತಿ. ಬೆಂಗಳೂರು ನಗರದಲ್ಲಿ ೨೦೦೩ರಲ್ಲಿ ಮೊಟ್ಟಮೊದಲ ಬಾರಿ ಹಿಜ್ರಾ ಒಬ್ಬಳಿಗೆ ಆಸ್ಪತ್ರೆಯಲ್ಲಿ ಹೆಣ್ಣೆಂದು ಅಧಿಕೃತ ಪ್ರಮಾಣ ಪತ್ರ ಪಡೆದವರೂ ರೇವತಿ ಎಂದರೆ ಅಚ್ಚರಿಯಾಗುವುದು. ನಂತರ ವಿವಿಧ ಸಮಾವೇಶಗಳಲ್ಲಿ ಪಾಲ್ಗೊಂಡು ಹಿಜ್ರಾರ ದುರಂತ ಕತೆಯನ್ನು ಪ್ರಸ್ತಾಪಿಸುತ್ತಾರೆ. 
 
         ಇಡೀ ಆತ್ಮಕತೆಯಲ್ಲಿ ರೇವತಿ ಪ್ರೀತಿಗಾಗಿ ಅಂಗಲಾಚುವ ಸ್ಥಿತಿ ಕರುಣಾಜನಕವಾದುದು. ಹಾಗೆ ಪ್ರೀತಿಗೆ ಹಂಬಲಿಸುತ್ತಲೇ, ಸುತ್ತಲ ಸಮಾಜವನ್ನು ಎದುರಿಸುವ ಛಲವನ್ನೂ ಬೆಳೆಸಿಕೊಳ್ಳುತ್ತಾರೆ. ಹೀನಾತಿಹೀನ ಸುಳಿಯೊಳಗೆ ಸಿಲುಕಿಯೂ ಅದರಿಂದ ಮೇಲೆ ಬರಲು ಯತ್ನಿಸುವ ಭಾವನೆಗಳ ತಾಕಲಾಟ, ಕತ್ತಲ ಲೋಕದ ದಾರುಣ ಸ್ಥಿತಿ, ಪೊಲೀಸ್, ರೌಡಿಗಳ ಮತ್ತೊಂದು ಮುಖ, ಎಲ್ಲವೂ ಆತ್ಮಕತೆಯಲ್ಲಿ ಅನಾವರಣಗೊಂಡಿವೆ. ಕೆಲವೊಮ್ಮೆ ಹಿಜ್ರಾಗಳ ಬದುಕು ಇಷ್ಟೊಂದು ಯಾತನೆಯಿಂದ ಕೂಡಿದೆಯಾ? ಎಂದು ಬೆಚ್ಚಿಬೀಳುತ್ತೇವೆ. ನಾಗರಿಕ ಸಮಾಜದ ನಗ್ನಸತ್ಯವೊಂದನ್ನು ರೇವತಿ ಹೊರಹಾಕಿದ್ದರೆ. ಇಡೀ ಆತ್ಮಕಥನದಲ್ಲಿ ಹೆಣ್ಣಾಗಿ ಪರಿವರ್ತನೆಯಾಗಿರುವುದು ತನ್ನ ತಪ್ಪು ಎಂದು ರೇವತಿ ಎಲ್ಲೂ ಹೇಳುವುದಿಲ್ಲ. ನನ್ನಲ್ಲಿ ಅಂತಹ ಭಾವನೆ, ಪರಿವರ್ತನೆಗಳು ಮೂಡಿದರೆ ಅದು ನನ್ನ ತಪ್ಪೇ? ಎಂದು ಅವರು ಸಮಾಜವನ್ನು ಪ್ರಶ್ನಿಸುತ್ತಾರೆ. ಕೃತಿ ಎಲ್ಲೂ ಅಸಹನೀಯವೆನಿಸುವುದಿಲ್ಲ. ಅಲ್ಲಲ್ಲಿ ಮಡಿವಂತ ಓದುಗರನ್ನು ಮುಜುಗರಕ್ಕೀಡುಮಾಡುವ ಭಾಷೆಯಿದೆಯಾದರೂ ಹಿಜ್ರಾಗಳ ಬದುಕಿನ ಬಗ್ಗೆ ಬರೆದುಕೊಳ್ಳುವಾಗ ರೇವತಿಗೆ ಅದು ಅನಿವಾರ್ಯವೂ ಆಗಿದೆ. ರೇವತಿಯ ಆತ್ಮಕತೆಯೊಂದಿಗೆ ನಮಗೆಂದೂ ಗೊತ್ತಿರದ ಹಿಜ್ರಾಗಳ ಬದುಕೂ ಇಲ್ಲಿ ತೆರೆದುಕೊಂಡಿದೆ. ಉತ್ತಮ ಕೃತಿಯೊಂದನ್ನು ಕನ್ನಡಕ್ಕೆ ತಂದಿರುವ ಲೇಖಕಿ ದು.ಸರಸ್ವತಿಯವರಿಗೆ ಧನ್ಯವಾದಗಳನ್ನು ಹೇಳಲೇಬೇಕು. ಹಾಗೆಯೇ ಲಂಕೇಶ್ ಪ್ರಕಾಶನಕ್ಕೂ ಕೂಡ.
 
               ಕೊನೆಯಲ್ಲಿ ಕೃತಿಯ ಕೆಲ ಭಾಗಗಳು, ನನ್ನ ವರ್ತನೆ ಹುಡುಗಿಯಂತಿದೆ ಎಂದು ನನಗೆ ಗೊತ್ತಿತ್ತು. ಹಾಗಿರುವುದೇ ನನಗೆ ಸಮಾಧಾನವೆನಿಸುತ್ತಿತ್ತು. ಹೇಗೆ ಹುಡುಗನಂತಿರಬೇಕೆಂದು ನನಗೆ ಗೊತ್ತಿರಲಿಲ್ಲ. ಹುಡುಗಿಯಂತಿರುವುದು ಊಟ ಮಾಡಿದಷ್ಟೆ ಸಹಜವಾಗಿತ್ತು. ಯಾರಾದರೂ ಊಟ ಮಾಡಬೇಡ ಎಂದರೆ ಮಾಡದೇ ಇರುವುದಕ್ಕೆ ಸಾಧ್ಯವಾ? ಹಾಗೇನೇ ಬೇರೆಯವರು ನೀನು ಹುಡುಗಿ ತರ ಇರಬೇಡ ಅಂದಾಕ್ಷಣ ಹಾಗೆ ಇರದಿರುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ನಾನು ಹಾಗೂ ನನ್ನ ತರಹದವರು ಎಲ್ಲಿ ನಿಂತೀದೀವೋ ಅಲ್ಲಿಗೆ ನಮ್ಮನ್ನ ತಂದು ನಿಲ್ಲಿಸಿರೋದು ಈ ಸಮಾಜ ಮತ್ತು ಕಾನೂನು. ಇವೆರಡೂ ನಮ್ಮನ್ನು ತಿರಸ್ಕಾರದಿಂದ ನೋಡುತ್ತವೆ. ದುಡ್ಡಿನ ಸಲುವಾಗಿ ನನ್ನ ಗೌರವವನ್ನು ಪಕ್ಕಕ್ಕಿಟ್ಟು ಬೀದಿಗಿಳಿದೆ. ನನ್ನನ್ನ ಬೀದಿಸೂಳೆ ಅಂತ ಕರೀತಾರೆ, ಆದರೆ ನಮ್ಮನ್ನ ಬಳಸಿಕೊಂಡು ನಮ್ಮಿಂದ ದುಡ್ಡು ಕೀಳೋ ಪೊಲೀಸರನ್ನ ಏನಂತ ಕರೆಯಬೇಕು?, ಲೋಕ ನನ್ನನ್ನು ಓರೆಯಾಗೇ ನೋಡುತ್ತೆ. ಗಂಡಸಾಗಿ ಹುಟ್ಟಿ ಹೆಂಗಸಾದದ್ದು ತಪ್ಪು ಅನ್ನುತ್ತೆ. ದೇವರೇ ನನಗೆ ಈ ಭಾವನೆಗಳನ್ನು ಕೊಟ್ಟಿರೋದು. ಆದ್ರೆ ಈ ಭಾವನೆಗಳನ್ನು ಗೌರವಿಸದಿರೋ ಜಗತ್ತಲ್ಲಿ ನಾನು ಬದುಕಬೇಕು. ಭಿಕ್ಷೆ ಬೇಡೋದನ್ನ, ಮದುವೆ ಮಾಡ್ಕೊಳೋದನ್ನ ತಪ್ಪು ಎಂದು ಜಗತ್ತು ಪರಿಗಣಿಸುತ್ತೆ. ನಾನು ಕೊಲೆ ಮಾಡಿಲ್ಲ, ಮೋಸ ಮಾಡಿಲ್ಲ, ಅಥವಾ ಕಳ್ಳತನ ಮಾಡಿಲ್ಲ ಆದರೂ ಅಪರಾಧಿ ತರಹ ಜಗತ್ತು ನನ್ನನ್ನು ಕಾಣುತ್ತೆ. ನನ್ನ ಯೌವನ, ಸೌಂದರ್ಯವನ್ನು ಶೋಷಣೆ ಮಾಡೋ ಈ ಜಗತ್ತಿಗೆ ನನ್ನೊಳಗಿನ ಪ್ರತಿಭೆಯನ್ನು ಈಚೆ ತೆಗೆಯೋಕೆ ಗೊತ್ತಿಲ್ಲ. ಈ ಜಗತ್ತಲ್ಲಿ ಬದುಕಬೇಕೆಂದರೆ ಅದರ ಬೇಡಿಕೆಗಳೊಂದಿಗೆ ನಾನು ಹೊಂದಾಣಿಕೆ ಮಾಡ್ಕೊಳ್ಳಲೇಬೇಕು.
                                                                                                  
                                                                                                                                         -ಸಿದ್ಧರಾಮ ಹಿರೇಮಠ.
 
ಕೃತಿ : ಬದುಕು ಬಯಲು ಹಿಜ್ರಾ ಒಬ್ಬಳ ಆತ್ಮಕತೆ
ಮೂಲ ಲೇಖಕಿ: ಎ.ರೇವತಿ
ಅನುವಾದ: ದು.ಸರಸ್ವತಿ
ಪ್ರಕಾಶನ: ಲಂಕೇಶ್ ಪ್ರಕಾಶನ, ಬೆಂಗಳೂರು
ಬೆಲೆ: ರೂ.೨೦೦
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸಿದ್ದರಾಮಯ್ಯನವರೇ, ಹಿಜ್ರಾಗಳ ಬದುಕು ಮತ್ತು ಬವಣೆಯ ಬಗ್ಗೆ ಪ್ರಕಟಗೊಂಡಿರುವ ಕೃತಿ : ಬದುಕು ಬಯಲು ಹಿಜ್ರಾ ಒಬ್ಬಳ ಆತ್ಮಕತೆ; ಮೂಲ ಲೇಖಕಿ: ಎ.ರೇವತಿ ಇದರ ಬಗ್ಗೆ ಬಹಳ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರ. ಇಂದಿನ ಆದುನೀಕರು ಹಿಜ್ರಾಗಳನ್ನು ಕೀಳಾಗಿ ಕಾಣುತ್ತಿರಬಹುದು ಆದರೆ ನಿಮಗೇ ತಿಳಿದಂತೆ ಉತ್ತರ ಕರ್ನಾಟಕದಲ್ಲಿ ಇವರಿಗೆ ಜೋಗಮ್ಮ (ದೇವರ) ಪಟ್ಟ ಕೊಟ್ಟು ಪೂಜ್ಯ ಭಾವನೆಯಿಂದ ನೋಡುತ್ತಾರೆ. ಮತ್ತು ಅವರಿಗೂ ಕೂಡ ಬ್ರಾಹ್ಮಣರಿಗೆ ಅಥವಾ ಜಂಗಮರಿಗೆ ಕೊಡುವ ಆದ್ಯತೆಯನ್ನೇ ಕೊಡುತ್ತಾರೆ. ಇದನ್ನು ದೇಶದ ಎಲ್ಲಾ ಪ್ರದೇಶಗಳವರು ಅಳವಡಿಸಿಕೊಂಡರೆ ಅವರ ಬದುಕು ಕೂಡ ಹಸನಾಗುವುದರಲ್ಲಿ ಸಂದೇಹವಿಲ್ಲ. ಮತ್ತು ದಕ್ಷಿಣ ಭಾಗದ ಕರ್ನಾಟಕದಲ್ಲಿ ಅವರನ್ನು ಮಂಗಳಮುಖಿಯರೆಂದು ಕರೆಯುತ್ತಾರೆ ಮತ್ತು ಇಲ್ಲಿಯವರು ಜನರ ಹತ್ತಿರ "ಖಂಡಿತದ ವಸೂಲಿ"ಗೆ ನಿಂತು ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತಾರೆ. ಇಂತಹ ಕಡೆ ಇವರು ಕೂಡ ಸಮಾಜಮುಖಿಗಳಾದರೆ ಎಲ್ಲರಿಗೂ ಒಳಿತೆನಿಸುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಧರ್ ಅವರೆ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇವರಿಗೆ ದೇವರ ಪಟ್ಟವನ್ನೇ ಕೊಡಲಿ, ಆದ್ಯತೆಯನ್ನೇ ಕೊಡಲಿ ಇವರ ಬದುಕು ಅಸಹನೀಯವಾಗಿದೆ ಎಂಬುದೇ ಮೂಲ ಲೇಖಕಿಯ ಉದ್ದೇಶ. ಇನ್ನು ನೀವೆಂದಂತೆ ಇವರು ಸಮಾಜಮುಖಿಗಳಾಗಲು ಬಯಸುತ್ತಾರಾದರೂ ಸಮಾಜಮುಖಿಗಳಾಗಲು ಬಿಡುವವರಾದರೂ ಯಾರು? ಅವರನ್ನು ಮತ್ತೆ ಛೀಮಾರಿ ಹಾಕಿ ಕಳಿಸುವವರು ನಾವೇ ಅಲ್ಲವೆ? ಮೊದಲು ನಮ್ಮ ಸಮಾಜ ಅವರನ್ನು ನೋಡುವ ದೃಷ್ಟಿಕೋನ ಬದಲಾಗಬೇಕೆಂಬುದು ಲೇಖಕಿಯ ಉದ್ದೇಶವಾಗಿದೆ. ಕೃತಿಯನ್ನು ಓದಿದರೆ ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆಯುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಿದ್ದರಾಮಯ್ಯನವರೇ, ನಿಮ್ಮ ಸಲಹೆಯ0ತೆ ಮೂಲ ಪ್ರತಿಯನ್ನು ಓದಲು ಪ್ರಯತ್ನಿಸುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.