ಹಗಲು...

4

 ತೇಲಿತು ದೋಣಿ ನೀಲಾಗಸದಲ್ಲಿ, ಏರಿದೆ ಮೋಡದ ಅಲೆಯ...

ದಾಟಿದೆ ಲೋಕದ ಬೇಲಿಯನು, ಅರಸುತ ಹರುಷದ ಸೆಲೆಯ...

 

ಭಾರ ಮನಸ್ಸನ್ನು ಜಾರಿ ಬಿಟ್ಟಿದೆ ಮಳೆಯಲ್ಲಿ, ದೋಣಿಯ ಒಡಲದು ಆಗಿದೆ ಹಗುರ...

ನು೦ಗುವ ಕಡಲನು ಕೆಳಗಿಟ್ಟು, ಮೇಲೇರಿದೆ ದೋಣಿ ಹಾರಿ, ನೋಟವೆಲ್ಲಾ ಇಲ್ಲಿ ಮಧುರ...

 

ಕುದಿವ ಸೂರ್ಯನಿಲ್ಲದ ಆಗಸದಲ್ಲಿ, ಬಿಗಿದಪ್ಪಿದ ಚಳಿಗಾಳಿಯು ಇರಿಸಿದೆ ಎನ್ನ ಬೆಚ್ಹಗೆ...

ಜಾರಿ ಹೋದ ನಿನ್ನನ್ನು, ಹುಡುಕಲು ಹೊರಟ ನಾವಿಕ, ಈಗ ಅಲೆಮಾರಿಯಾಗಿ ತನ್ನ ತಪ್ಪಿಗೆ...

 

ಸುಳಿವಿರಬಹುದು ಹಕ್ಕಿ ಹಾಡಲ್ಲಿ, ಒಲವಿರಬಹುದು ಅವಳ ಒಡಲಲ್ಲಿ, ಊಹೆಗಳ ಸುಳಿಗೆ ಸಿಲುಕಿಹೆನು...

ದಡವಿರಬಹುದು ಈ ಆಗಸದಲ್ಲಿ, ಇರಬಹುದು ಅಲ್ಲಿ ಅವಳ ಊರು, ನ೦ಬಿಕೆಯಲ್ಲೇ ಹೊರಟಿಹೆನು...

 

ಇರಬಹುದು ಅಲ್ಲೊ೦ದು ಲೋಕ, ಅಡಗಿರಬಹುದು ಕಾಣದ೦ತೆ, ಗೀಚಿ ಎಸೆದ೦ತೆ ಪ್ರೇಮಪತ್ರ...

ಹರಡಿರಬಹುದು ಅಲ್ಲಿ ನಮ್ಮ ಕೈಗೆಟಕುವ೦ತೆ, ಒ೦ದು ಮುಗಿಲು, ಒ೦ದು ಚ೦ದ್ರ, ನಾಲ್ಕು ನಕ್ಶತ್ರ...

 

ಮೆತ್ತನೆಯ ಧರೆಯಲ್ಲಿ, ಹೂಗಳ ಸುಪ್ಪತ್ತಿಗೆಯಲ್ಲಿ, ನನ್ನ ಬರವ ಕಾದಿರಬಹುದು ಅವಳು...

ಹಣತೆಯ೦ತೆ ಕತ್ತಲಲ್ಲಿ, ನಾ ಜೊತೆಯಿರದೆ ದಿಗಿಲಲ್ಲಿ, ಕಾದಿರಬಹುದು ಅವಳು...

 

ತಡವಿನ್ನೇಕೆ...?, ನಾ ದಾರಿ ಮರೆತೆನು ಏಕೆ...?

ಓಗೊಡು ಒಮ್ಮೆಯಾದರೂ, ನಾ ಒತ್ತಿಟ್ಟಿಹೆ ಕಿವಿ ಎನ್ನ ಹೃದಯಕ್ಕೆ...

ಬರಿ ನೆನಪಾಗಿಹೆ ಏಕೆ...?, ಹೀಗೆ ದೂರಾಗಿಹೆ ಏಕೆ...?,

ಜೊತೆಯಾಗು, ಮುರಿಯದೆ ಕನಸ್ಸನ್ನು, ಬಾ ಸನಿಹಕೆ...

 

ಸಿಡಿವ ಚುಕ್ಕಿಗಳೂ ಕೂಡ, ಬೆ೦ಕಿಯಲ್ಲಿ ಬೇಯುವ ಒಡಲ ಮರೆತು, ಆಗಿದೆಯೇ ದಾರಿದೀಪ...

ಒಮ್ಮೆಯಾದರೂ ಆಗಸದಲ್ಲಿ, ಮರೆಯಾಗದೆ ನಿಲ್ಲು, ನಿನ್ನ ಚೆಲುವು ತ೦ಪೆರೆಯಲ್ಲಿ, ತಣ್ಣಗಾಗಲಿ ತಾಪ...

 

ಬೆಳದಿ೦ಗಳು ಕೊಲೆಯಾಗಿದೆ, ಚ೦ದಿರನು ಹೋಳಾಗಿದೆ, ಜಾರಿ ಬೀಳುತ್ತಿದೆ ದೋಣಿ, ಸೇರದೆ ದಡ...

ಪಯಣವಿದು ಮತ್ತೆ ಮುಗಿದಿದೆ, ನೆನಪೆಲ್ಲವೂ ಗೂಡು ಸೇರಿದೆ, ಮನೆ ಮಾಡಿದೆ ಮನಸ್ಸಿನಲ್ಲಿ ದುಗುಡ...

 

ಕನಸ ದೋಣಿಯಿ೦ದ ನಾ ಬಿದ್ದೆ, ನೀನಿರದೇ ನಾನೆದ್ದೆ, ಅರ್ಥವಿಲ್ಲದೇ ಮೆರೆದಿದೆ ಇಲ್ಲಿ ಎಲ್ಲ ಸೊಗಸು...

ನನ್ನ ಪ್ರತಿ ಸೋಲಲ್ಲೂ ನೀ ಗೆದ್ದೆ, ನಿರ೦ತರವಾಗದೇ ಈ ನಿದ್ರೆ...?, ಮುರಿದಿದೆ ಮತ್ತೊ೦ದು ಕನಸು...

 

ಕಾ೦ತಿ ಹರಡಿದೆ ಇಳೆಯಲ್ಲಿ, ಇರುಳ ನೆನೆಪ ಅಡಗಿಸಿದೆ ಈ ಹಗಲು, ಒಬ್ಬ ಭಗ್ನಪ್ರೇಮಿ...

ಕನಸು ಕ೦ಡ ಕ೦ಗಳನು ಚುಚ್ಚಿ ನೋಯಿಸಿದೆ ಸೂಜಿಯಾಗಿ, ಕಾ೦ತಿ ಹರಡಬೇಕಾದ ಸೂರ್ಯರಶ್ಮಿ...

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.