ಹಂಸ ಹಾಡುವ ಹೊತ್ತು - ೧

0

ಅಂದು ಸಂಜೆ, ಪುರಭವನದ ವಿಶಾಲ ಸಭಾಂಗಣ ಕಿಕ್ಕಿರಿದು ತುಂಬಿದ್ದರೂ, ಆ ಕ್ಷಣ, ಸೂಜಿ ಕೆಳಗೆ ಬಿದ್ದರೂ ರಿಂಗಣಿಸುವಷ್ಟು ನಿಶ್ಶ್ಯಬ್ದವಾಗಿತ್ತು. ಡಾ|| ಮೂರ್ತಿಯವರು ಕೇಳಿದ ಪ್ರಶ್ನೆಗೆ ಚಕಿತರಾದ ಸಭಿಕರು ಕುತೂಹಲದಿಂದ ಅವರು ಮುಂದೆ ಹೇಳುವುದನ್ನು ಕೇಳಲು ಕಾತುರದಿಂದ ಕಾಯುತ್ತಿದ್ದರು. ಸಾಮಾನ್ಯವಾಗಿಯೇ, ಡಾ|| ಮೂರ್ತಿಯವರ ಭಾಷಣಗಳಿಗೆ ಆ ಮಹಾ ಸಭಾಂಗಣ ಉಕ್ಕಿ ಹರಿಯುವಷ್ಟು ಸಭಿಕರು ಸೇರುತ್ತಿದ್ದರು. ಅಂತಹುದರಲ್ಲಿ, ಈ ದಿನ ಡಾ|| ಮೂರ್ತಿಯವರು ಒಂದು ವಿಶೇಷ ವಿಷಯದ ಬಗ್ಗೆ ಭಾಷಣ ಮಾಡಲಿದ್ದಾರೆ ಎಂದು ಪ್ರಾಯೋಜಕರು ಮುಂಚಿತವಾಗಿಯೇ ಭಾರೀ ಪ್ರಚಾರ ಮಾಡಿದ್ದರಿಂದ, ಸಹಜವಾಗಿಯೇ ಈ ದಿನ ಸಭಿಕರ ಸಂಖ್ಯೆ ದಾಖಲೆಯಾಗುವಷ್ಟು ಮಟ್ಟಿಗೆ ಹೆಚ್ಚಾಗಿತ್ತು. 

"ಡಬಲ್ ಡಾಕ್ಟರ್" ಎಂದೇ ಅಭಿಮಾನಿಗಳಿಗೆ ಪರಿಚಿತರಾದ ಡಾ|| ಮೂರ್ತಿಯವರು ವೈಜ್ಞಾನಿಕ ವಿಷಯಗಳ ಮೇಲೆ, ಅದರಲ್ಲಿಯೂ ವೈದ್ಯಕೀಯ ವಿಜ್ಞಾನಕ್ಕೆ ಸಂಬಂಧಿಸಿದಂತಹ ವಿಷಯಗಳ ಮೇಲೆ, ನಗರದ ಪ್ರತಿಷ್ಠಿತ "ಪ್ರಜ್ಞಾವಂತ ಪೌರರು" ಸಂಘದ ಆಶ್ರಯದಲ್ಲಿ ಭಾಷಣ ಮಾಡುವುದು ಒಂದು ಜನಪ್ರಿಯ ಕಾರ್ಯಕ್ರಮವಾಗಿತ್ತು. ಅವರು ಎಮ್.ಬಿ.ಬಿ.ಎಸ್ ಪದವಿ ಪಡೆದಿದ್ದರಲ್ಲದೆ, ಜೀವರಸಾಯನ ಶಾಸ್ತ್ರದಲ್ಲಿಯೂ (Biochemistry) ಪಿ.ಎಚ್.ಡಿ ಪಡೆದಿದ್ದರಿಂದ ಅವರ ಆಪ್ತರು ಅವರನ್ನು "ಡಬಲ್ ಡಾಕ್ಟರ್" ಎಂದು ಕರೆಯುತ್ತಿದ್ದರು. ಹೀಗೆ ಎರಡು ಪದವಿಗಳನ್ನು ಪಡೆದವರು ಅಪರೂಪವಲ್ಲದಿದ್ದರೂ ಡಾ|| ಮೂರ್ತಿಯವರಂತೆ ಎರಡೂ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರು ಮಾತ್ರ ಬಹಳ ವಿರಳವೇ. ಸುಮಾರು ತಿಂಗಳಿಗೊಮ್ಮೆ ಜರುಗುತ್ತಿದ್ದ ಅವರ ಭಾಷಣಗಳಲ್ಲಿ, ಅವರು ತಮ್ಮದೇ ಆದ ಶೈಲಿಯಲ್ಲಿ, ವಿಜ್ಞಾನದ ಅತಿ ಕ್ಲಿಷ್ಟ ವಿಷಯಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಸ್ವಾರಸ್ಯಕರವಾಗಿ ವಿವರಿಸುತ್ತಿದ್ದರು.

 

ಸುಮಾರು ನಲವತ್ತೈದು ನಿಮಿಷಗಳ ಅವಧಿಯ ಅವರ ಭಾಷಣದ ನಂತರ ಮುಂದಿನ ಹದಿನೈದು ನಿಮಿಷಗಳ ಕಾಲ ಸಭಿಕರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದರು. ಒಮ್ಮೊಮ್ಮೆ, ಭಾಷಣದ ಮಧ್ಯದಲ್ಲಿಯೇ , ಯಾವುದಾದರೂ ಪ್ರಶ್ನೆ ಕೇಳಿ ಸಭಿಕರನ್ನು ತಮ್ಮ ಲಹರಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅದೇ ರೀತಿ ಈ ದಿನವೂ ತಮ್ಮ ಭಾಷಣದ ಮಧ್ಯ ಅಂತಹುದೊಂದು ಪ್ರಶ್ನೆ ಕೇಳಿದ್ದರು.

 

"ಮಾನವ ಶಿಶುವೊಂದು ಜನಿಸುವುದನ್ನು ನಿಮ್ಮಲ್ಲಿ ಬಹಳಷ್ಟು ಜನ ಕಂಡಿರಲಿಕ್ಕಿಲ್ಲ. ಆದರೂ, ಯಾವುದಾದರೂ ಹಸುವಿನಂತಹ ಸಾಕುಪ್ರಾಣಿ ಹೆರುವುದನ್ನು ನೋಡಿರಬಹುದು. ಮಾನವ ಶಿಶು ಜನಿಸುವ ಕ್ರಿಯೆಗೂ, ಹಸುವಿನ ಕರು ಜನಿಸುವ ಕ್ರಿಯೆಗೂ ಹೆಚ್ಚು ವ್ಯತ್ಯಾಸವೇನಿಲ್ಲ. ತಾಯಿಯ ಗರ್ಭದಲ್ಲಿ ನಲವತ್ತು ವಾರಗಳ ಕಾಲ ಬೆಳೆದು, ಗರ್ಭದಿಂದ ಹೊರಗೆ ಬರುವುದನ್ನು ನೋಡಿದಾಗ, ಕಾರ್ಖಾನೆಯಲ್ಲಿ ತಯಾರಾದ ವಸ್ತುವೊಂದು ಅಸೆಂಬ್ಲಿ ಲೈನ್ ನಿಂದ ಹೊರಬರುತ್ತಿರುವಂತೆ ಕಾಣುತ್ತದೆ.

ಕಾರ್ಖಾನೆಯಲ್ಲಿ ತಯಾರಾದ ವಸ್ತುವಿನ ಮೇಲೆ ಅದು ತಯಾರಾದ ದಿನ ಅಚ್ಚಾಗಿರುತ್ತದೆ. ಔಷಧಿಯಂತಹ ಕೆಲವು ವಸ್ತುಗಳ ಮೇಲೆ ಈ ಮಾಹಿತಿಯ ಜೊತೆಗೆ ಇನ್ನೊಂದು ಮಾಹಿತಿಯೂ ಇರುತ್ತದೆ. ಅದೆಂದರೆ ಡೇಟ್ ಆಫ್ ಎಕ್ಸ್ಪೈರಿ ಅರ್ಥಾತ್ ಆ ವಸ್ತು ತನ್ನ ಉಪಯುಕ್ತತೆ ಕಳೆದುಕೊಳ್ಳುವ ದಿನಾಂಕ. ಮಾನವನ ಜನ್ಮ ದಿನ ಅವನ ಡೇಟ್ ಆಫ್ ಮ್ಯಾನುಫ್ಯಾಕ್ಚರ್ ಎಂದು ಪರಿಗಣಿಸಬಹುದು. ಆದರೆ, ನಮಗೆ ಡೇಟ್ ಆಫ್ ಎಕ್ಸ್ಪೈರಿ ಇದೆಯೇ ? ಜಾತಸ್ಯ ಮರಣಂ ಧ್ರುವಂ ಎಂಬುದು ಸರ್ವರಿಗೂ ತಿಳಿದ ಸಂಗತಿ. ಹಾಗಾಗಿ, ನಮಗೂ ಖಂಡಿತ ಡೇಟ್ ಆಫ್ ಎಕ್ಸ್ಪೈರಿ ಇದೆ. ಆದರೆ ಅದು ನಮಗೆ ತಿಳಿದಿದೆಯೇ ? ನಾವು ಅದನ್ನು ತಿಳಿಯಲು ಸಾಧ್ಯವೇ ?.........." ಎಂದು ಕೇಳಿದ ಮೂರ್ತಿಯವರ ಈ ಪ್ರಶ್ನೆ ಸಭಿಕರನ್ನು ಉತ್ತೇಜಿಸಿತ್ತು.

 

ಅವರು ಮತ್ತೂ ಮುಂದುವರೆದು, " ಒಂದು ವೇಳೆ ನಮಗೆ ಅದನ್ನು ತಿಳಿಯಲು ಸಾಧ್ಯವಿರುವುದಾದರೆ, ಅದು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆಯೇ ? " ಎಂದು ಕೇಳಿದ್ದರು ಮೂರ್ತಿ.

 

ಸ್ಪೀಕರ್ಸ್ ಡೆಸ್ಕ್ ಗಿಂತ ಸುಮಾರು ಒಂದು ಅಡಿ ಎತ್ತರವಾಗಿದ್ದ, ನೀಳ ದೇಹದ , ಕನ್ನಡಕಧಾರಿ ಮೂರ್ತಿಯವರ ನಿಲುವು ಗುಂಪಿನೊಳಗೆ ಎದ್ದು ಕಾಣುವಂತಿತ್ತು. ಅಲ್ಲಲ್ಲಿ ಬೆಳ್ಳಿ ಬಣ್ಣಕ್ಕೆ ತಿರುಗಿದ್ದ ತಲೆಗೂದಲು, ಸ್ಫುರದ್ರೂಪಿ ಎನ್ನಲಾಗದಿದ್ದರೂ ನಸುಗೆಂಪು ಬಣ್ಣದ ಆಕರ್ಷಕ ಮುಖಚಹರೆ. ಬಂಗಾರದ ಬಣ್ಣದ ಫ್ರೇಮಿನ ಕನ್ನಡಕದ ಹಿಂದೆ ಕಾಂತಿಯುತ ಕಣ್ಣುಗಳು ಎದುರಿಗಿದ್ದವರ ಮನವನ್ನು ಸೆಳೆಯುವಂತೆ ತೋರುತ್ತಿದ್ದವು. ತೆಳುಹಳದಿ ಬಣ್ಣದ ಅರ್ಧತೋಳಿನ ಬುಶ್ ಶರ್ಟ್, ಕಡುನೀಲಿ ಬಣ್ಣದ ಪ್ಯಾಂಟು,ಸುಂದರ ಚಿತ್ತಾರವಿದ್ದ ನೆಕ್ ಟೈನಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರು. ಮುಖದ ಮೇಲೆ ಸದಾ ಪ್ರಸನ್ನ ಭಾವ ಮತ್ತು ಆಗೊಮ್ಮೆ ಈಗೊಮ್ಮೆ ಸೂಸುತ್ತಿದ್ದ ಮುಗುಳ್ನಗೆ ಯಾರ ಗಮನವನ್ನೂ ಸೆಳೆಯುವಂತಿತ್ತು.ಐವತ್ತೆಂಟು ವರ್ಷ ವಯಸ್ಸಾಗಿದ್ದರೂ, ಸದಾ ಲವಲವಿಕೆಯಿಂದಿರುತ್ತಿದ್ದ ಅವರ ವಯಸ್ಸು ನಲವತ್ತಕ್ಕೆ ಮೀರಿದಂತೆ ಕಾಣುತ್ತಿರಲಿಲ್ಲ.

 

ಅದುವರೆಗೂ ಸಭಾಭವನದಲ್ಲಿ ಆವರಿಸಿದ್ದ ಮೌನವನ್ನು ಮುರಿಯುತ್ತಾ, ಮುಂದಿನ ಸಾಲಿನಲ್ಲಿ ಕುಳಿತಿದ್ದ ಒಬ್ಬ ಯುವ ಪತ್ರಕರ್ತ ನುಡಿದ,

" ಖಂಡಿತಾ ಸರ್, ಖಂಡಿತವಾಗಿಯೂ ಅಂತಹುದೊಂದು ಮಾಹಿತಿ ನಮ್ಮ ಜೀವನದಲ್ಲಿ ಮಹತ್ತರ ಪ್ರಭಾವವನ್ನುಂಟು ಮಾಡಬಹುದು"

"ಹೌದೇ, ಯಾವ ಬಗೆಯ ಪರಿಣಾಮವುಂಟಾಗಬಹುದು?" ಆ ಪತ್ರಕರ್ತನ ಕಡೆಗೆ ತಿರುಗಿ, ಮೂರ್ತಿ ಕೇಳಿದರು. "ನಮ್ಮ ಅಂತ್ಯದ ಬಗ್ಗೆ ಇರುವ ಅನಿಶ್ಚತತೆಯನ್ನು ಅಂತ್ಯಗೊಳಿಸಬಹುದು ಮತ್ತು ನಮ್ಮ ಜೀವನವನ್ನು ಹೆಚ್ಚು ಕರಾರುವಾಕ್ಕಾಗಿ ರೂಪಿಸಿಕೊಂಡು, ಜೀವಿಸಿರುವಷ್ಟು ಕಾಲವನ್ನು ಸಾರ್ಥಕವಾಗಿ ಕಳೆಯಬಹುದು"

"ನಿಮ್ಮ ಮಾತನ್ನು ಒಪ್ಪಬಹುದು" ಎಂದು ಅವನನ್ನು ಪ್ರೋತ್ಸಾಹಿಸುವಂತೆ ನುಡಿದು, ಮೂರ್ತಿ ಮುಂದುವರೆದು, "ನನ್ನ ವೃತ್ತಿ ಜೀವನದಲ್ಲಿ ನಾನು ಕಂಡ ಪ್ರಸಂಗವೊಂದನ್ನು ನಿಮಗೆ ತಿಳಿಸಲಪೇಕ್ಷಿಸುತ್ತೇನೆ. ಆಗ ನಾನು ವೈದ್ಯನಾಗಿ ವೃತ್ತಿ ಆರಂಭಿಸಿ ಕೆಲವು ವರ್ಷಗಳಾಗಿತ್ತು. ನನ್ನ ಕ್ಲಿನಿಕ್ ಗೆ ಹತ್ತಿರದಲ್ಲಿಯೇ ಒಂದು ವೃದ್ಧಾಶ್ರಮವಿತ್ತು.ಒಂದು ರಾತ್ರಿ ನಾನು ನನ್ನ ಕ್ಲಿನಿಕ್ಕನ್ನು ಮುಚ್ಚಿ ಮನೆಗೆ ಹೊರಡಬೇಕೆನ್ನುವಷ್ಟರಲ್ಲಿ, ಕುಲಕರ್ಣಿಯವರು-ಆ ವೃದ್ಧಾಶ್ರಮದ ಮೇಲ್ವಿಚಾರಕರು- ಆತುರಾತುರವಾಗಿ ನನ್ನೆಡೆಗೆ ಬರುತ್ತಿರುವುದು ಕಾಣಿಸಿತು. "ಡಾಕ್ಟರ್, ಮನೆಗೆ ಹೊರಟಿದ್ದೀರಿ ಎಂದು ಕಾಣುತ್ತದೆ. ತಮಗೆ ತೊಂದರೆ ಕೊಡುತ್ತಿರುವುದಕ್ಕೆ ಕ್ಷಮೆ ಇರಲಿ. ನಮ್ಮ ಆಶ್ರಮವಾಸಿಗಳಲ್ಲೊಬ್ಬರು ತುಂಬಾ ಎದೆ ನೋವು ಎಂದು ನರಳುತ್ತಿದ್ದಾರೆ. ಒಂದು ಸಲ ನೋಡಿಕೊಂಡು ಹೋಗಲು ಸಾಧ್ಯವೇ ?" ಎಂದು ತುಂಬಾ ಅನುನಯದಿಂದ ಕೇಳಿದರು. ತುಂಬಾ ನಿಸ್ವಾರ್ಥತೆಯಿಂದ, ಸ್ವತಃ ವೃದ್ಧಾಪ್ಯವನ್ನು ಸಮೀಪಿಸಿದ್ದರೂ,ಗೌರವ ಮೇಲ್ವಿಚಾರಕರಾಗಿ ಸದಾ ಚಟುವಟಿಕೆಯಿಂದ ಆಶ್ರಮದ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದ ಅವರಲ್ಲಿ ನನಗೆ ತುಂಬಾ ಗೌರವವಿತ್ತು.

"ಸರಿ, ಬನ್ನಿ ನೋಡೋಣ" ಎಂದು ಒಪ್ಪಿಕೊಂಡು, ಅವರೊಡನೆ ಹೊರಟೆ. ಆಶ್ರಮವನ್ನು ಪ್ರವೇಶಿಸಿ, ಬಲಬದಿಯ ಕೋಣೆಗಳ ಸಾಲಿನಲ್ಲಿದ್ದ ಒಂದು ಕೋಣೆಗೆ ಹೋದೆವು. ಅಲ್ಲಿ ಒಂದು ಮಂಚವೊಂದರ ಮೇಲೆ ಮಲಗಿದ್ದ ಆ ವೃದ್ಧ ಆಶ್ರಮವಾಸಿ, ನಮ್ಮನ್ನು ಕಂಡು, ಎದೆನೋವಿನಿಂದ ನರಳುತ್ತಿದ್ದರೂ, ಬಲವಂತವಾಗಿ ಮುಖದಲ್ಲಿ ಮಂದಹಾಸ ತಂದುಕೊಂಡು, "ನಮಸ್ಕಾರ, ಡಾಕ್ಟ್ರೇ" ಎಂದರು.ಅವರನ್ನು ಕಾಡುತ್ತಿದ್ದ ಎದೆನೋವಿನ ಬಗ್ಗೆ ಒಂದೆರಡು ಪ್ರಶ್ನೆಗಳನ್ನು ಕೇಳಿ, ಅವರ ತಪಾಸಣೆ ಮಾಡಿದೆ. ಆವರಿಗೆ ತೀವ್ರ ಹೃದಯಾಘಾತವಾಗಿದೆ ಎಂದು ತಿಳಿದುಕೊಳ್ಳಲು ಹೆಚ್ಚು ಸಮಯ ಬೇಕಾಗಲಿಲ್ಲ.

"ಏನೂ ಯೋಚನೆ ಮಾಡಬೇಡಿ, ಹೆದರುವಂತಹುದೇನೂ ಇಲ್ಲ..." ಎಂದು ಹಸಿಸುಳ್ಳೊಂದನ್ನು ಹೇಳಿ,

"ಆದರೆ, ನಿಮ್ಮ ಬ್ಲಡ್ ಪ್ರೆಷರ್ ತುಂಬಾ ಕಡಿಮೆಯಾಗಿರುವುದರಿಂದ, ಡ್ರಿಪ್ ಕೊಡಬೇಕಾಗುತ್ತದೆ. ಆದ್ದರಿಂದ, ಈಗಲೇ ನಿಮ್ಮನ್ನು ಆಸ್ಪತ್ರೆಗೆ ಕರೆದೊಯ್ಯುತ್ತೇವೆ " ಎಂದೆ. ಅವರನ್ನು ಆಸ್ಪತ್ರಗೆ ಕರೆದೊಯ್ಯಲು ತಕ್ಷಣವೇ ಏರ್ಪಾಡು ಮಾಡಲು ಕುಲಕರ್ಣಿಯವರಿಗೆ ಸೂಚಿಸಿದೆ.

"ಡಾಕ್ಟರ್, ಒಬ್ಬ ಚಿಕ್ಕ ಮಗುವನ್ನು ಸಮಾಧಾನ ಮಾಡುವ ತರಹ ನನ್ನಲ್ಲಿ ಹೇಳುತ್ತಿದ್ದೀರಲ್ಲಾ . ನಿಮ್ಮ ಎರಡರಷ್ಟು ವಯಸ್ಸು ನನಗಾಗಿದೆ. ನನಗೇನಾಗಿದೆಯೆಂಬುದನ್ನು ನಿಸ್ಸಂಕೋಚವಾಗಿ ಹೇಳಿ. ಪರವಾಗಿಲ್ಲ. ಅದನ್ನು ತಾಳಿಕೊಳ್ಳುವಷ್ಟು ಶಕ್ತಿ ನನ್ನಲ್ಲಿದೆ" ಎಂದು ಆ ವೃದ್ಧರು ಹೇಳಿದಾಗ, ನಾನು ಕುಲಕರ್ಣಿಯವರತ್ತ ನೋಡಿದೆ.

"ಪರವಾಗಿಲ್ಲ, ಹೇಳಿ" ಎನ್ನುವಂತೆ ಅವರು ನನ್ನೆಡೆಗೆ ನೋಡಿದರು. "ಸರಿ ಹಾಗಾದರೆ. ನಿಮಗೆ ಹಾರ್ಟ್ ಅಟ್ಯಾಕ್ ಆಗಿದೆ. ನಿಮ್ಮ ಸ್ಥಿತಿ ಸ್ವಲ್ಪ ಗಂಭೀರವಾಗಿಯೇ ಇದೆ. ಅದ್ದರಿಂದ ಆಸ್ಪತ್ರೆಗೆ ಹೋಗುವುದು ಒಳ್ಳೆಯದು" ಎಂದೆ.

"ನನಗೂ ಅದೇ ಅನುಮಾನವಿತ್ತು. ಆದರೆ, ಡಾಕ್ಟರ್, ದಯವಿಟ್ಟು ಕ್ಷಮಿಸಿ, ನನಗೆ ಇದಕ್ಕೆ ಚಿಕಿತ್ಸೆ ಮಾಡಿಕೊಳ್ಳುವುದರಲ್ಲಿ ಆಸಕ್ತಿ ಇಲ್ಲ. ಬೇಕಿದ್ದರೆ ನೋವು ಕಡಿಮೆ ಮಾಡಲು ಒಂದು ಇಂಜೆಕ್ಷನ್ ಕೊಡಿ. ಆದರೆ, ಆಸ್ಪತ್ರೆಗೆ ಮಾತ್ರ ಬೇಡ.." ಎಂದರು ತುಂಬಾ ವಿನಯದಿಂದ. ಅವರು ಬಯಸಿದಂತೆಯೇ, ಅವರ ನೋವಿನ ಉಪಶಮನಕ್ಕೆ ಒಂದು ಇಂಜೆಕ್ಷನ್ ಕೊಟ್ಟು ಆ ಕೋಣೆಯ ಒಂದು ಮೂಲೆಯಲ್ಲಿದ್ದ ಕುರ್ಚಿಯ ಮೇಲೆ ಕುಳಿತೆ, ಸ್ವಲ್ಪ ಹೊತ್ತು ರೋಗಿಯನ್ನು ಗಮನಿಸುವ ಉದ್ದೇಶದಿಂದ. ಆ ವೃದ್ಧರು, ಆ ಆಶ್ರಮದಲ್ಲಿದ್ದ ಎಲ್ಲಾ ಆಶ್ರಮವಾಸಿಗಳನ್ನು ತಮ್ಮ ಬಳಿಬರಲು ಸೂಚಿಸಿ, ಹಾಗೆ ತಮ್ಮ ಬಳಿಬಂದ ಪ್ರತಿಯೊಬ್ಬರ ಕೈಹಿಡಿದು, ಅವರಿಂದ ಈ ಹಿಂದೆ ಪಡೆದುಕೊಂಡ ಒಂದು ಚಿಕ್ಕ ಸಹಾಯಕ್ಕೂ ಕೃತಜ್ಞತೆ ಸೂಚಿಸಿದರು. ಕಾರ್ಯಕ್ರಮದ ಅಂತ್ಯವೊಂದರಲ್ಲಿ, ವಂದನಾರ್ಪಣೆ ಜರುಗುವ ಹಾಗೆ ಕಾಣುತ್ತಿತ್ತು. ಅದೇ ಆಶ್ರಮದ ಹಿರಿಯರೊಬ್ಬರಲ್ಲಿ ಧರ್ಮಗ್ರಂಥವೊಂದರ ಪಾರಾಯಣ ಮಾಡುವಂತೆ ಸೂಚಿಸಿದರು.ಆ ಪಾರಾಯಣ ನಡೆಯುತ್ತಿದ್ದಾಗ, ನಾನು ಆ ವೃದ್ಧರೆಡೆಗೇ ನೋಡುತ್ತಿದ್ದೆ. ಒಂದೆರಡು ಪುಟಗಳ ಪಾರಾಯಣವಾಗಿರಬಹುದು. ಆಗ, ನನಗೆ ಅವರ ಎದೆಯ ಏರಿಳಿತ ಕ್ರಮೇಣ ಕಡಿಮೆಯಾಗುತ್ತಿದ್ದಂತೆ ಕಂಡಿತು. ಅವರ ಬಳಿ ಹೋಗಿ, ಅವರ ನಾಡಿ ಹಿಡಿದು ನೋಡಿದಾಗ, ನಾಡಿಯೂ ತುಂಬಾ ಕ್ಷೀಣವಾಗಿತ್ತು. ಮುಂದೆರಡು ನಿಮಿಷಗಳಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಇದುವರೆಗೂ ನಾನು ಆ ದೃಶ್ಯವನ್ನು ಮರೆತಿಲ್ಲ. ಪ್ರತಿಯೊಂದು ಬಾರಿ ನೆನೆದಾಗಲೂ ನನಗೆ ಆ ವೃದ್ಧರ ಬಗ್ಗೆ ಅಸೂಯೆಯುಂಟಾಗುತ್ತದೆ. ಒಂದು ಚಿಕ್ಕಪುಟ್ಟ ಕಾರ್ಯಕ್ರಮದ ನಂತರವೂ, ವಂದನಾರ್ಪಣೆ ಅರ್ಪಿಸುವ ನಮಗೆ, ನಮ್ಮ ಜೀವನದ ಅತಿ ಮುಖ್ಯ ಕಾರ್ಯಕ್ರಮ ಮುಗಿಯುವ ಸಮಯದಲ್ಲಿ ವಂದನಾರ್ಪಣೆ ನೀಡುವ ಅವಕಾಶವಿದೆಯೇ ? ನಮ್ಮ ಅಂತ್ಯ ಬರುವುದೇ ಅನೀರೀಕ್ಷಿತವಾಗಿ. ಹಾಗೆ ಬರುವುದರ ಸೂಚನೆ ದೊರೆತಾಗಲಾದರೂ ಈ ವಂದನಾರ್ಪಣೆ ಮಾಡುವಂತಹ ಯೋಚನೆ ಅದೆಷ್ಟು ಜನರಿಗೆ ಬರುತ್ತದೆ ? ಇಂತಹ ಒಂದು ಭಾಗ್ಯವನ್ನು ಪಡೆದ ಆ ವೃದ್ಧರನ್ನು ಕಂಡು ನನಗೆ ಅಸೂಯೆಯಾಗುತ್ತದೆ. ನಮ್ಮ ಅಂತಿಮ ದಿನವನ್ನು ತಿಳಿಯಬಲ್ಲೆವಾದರೆ, ನಮ್ಮ ಇಂತಹ ವಂದನಾರ್ಪಣೆಯ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ವ್ಯವಸ್ಥೆಮಾಡಿಕೊಳ್ಳುವುದರಿಂದ ಹಿಡಿದು ಇನ್ನೂ ಅನೇಕ ಉಪಯೋಗಗಳಿವೆ" ಎಂದರು ಮೂರ್ತಿ.

 

"ಆದರೆ ಸರ್, ನಮ್ಮ ಚರಮ ದಿನವನ್ನು ತಿಳಿಯಬಹುದೇ ? ತಿಳಿಯಲು ಸಾಧ್ಯವಿದೆಯೇ ??" ಆ ಯುವ ಪತ್ರಕರ್ತ ಪ್ರಶ್ನಿಸಿದ. " "ಸದ್ಯಕ್ಕೆ ಆ ಸಾಧ್ಯತೆ ಇಲ್ಲ ಎನಿಸಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾಂಡ ಪಂಡಿತರೂ ಅದನ್ನು ಹೇಳುವುದಿಲ್ಲ. ಅವರಿಗೆ ನಿಜಕ್ಕೂ ಅದನ್ನು ಹೇಳಲು ಸಾಧ್ಯವಿಲ್ಲವೋ ಅಥವಾ ತಮ್ಮ ವೃತ್ತಿಯ ಧರ್ಮಸಂಹಿತೆಗನುಸಾರವಾಗಿ ಅದನ್ನು ತಿಳಿಸುವುದಿಲ್ಲವೋ ನನಗೆ ಗೊತ್ತಿಲ್ಲ. ವೈದ್ಯಕೀಯ ಸಂಶೋಧನೆಯ ಪ್ರಸ್ತುತ ಪರಿಸ್ಥಿತಿಯಲ್ಲಿ ನನಗೆ ಸಿಕ್ಕಿರುವ ಒಂದು ಸುಳಿವಿನ ಪ್ರಕಾರ ಅನತಿ ಕಾಲದಲ್ಲಿಯೇ ಅದನ್ನು ತಿಳಿಯಲು ಸಾಧ್ಯವಿದೆ ಎನಿಸುತ್ತದೆ " ಎಂದರು ಮೂರ್ತಿ.

"ಒಂದು ವಿವಾಹ ಸಂಬಂಧವನ್ನು ನಿಶ್ಚಯಿಸುವಾಗ ಈ ಮಾಹಿತಿ ತುಂಬಾ ಉಪಯುಕ್ತವಾಗಬಹುದು" ಸಭೆಯ ಮಧ್ಯದಲ್ಲಿದ್ದ ಹಿರಿಯ ವ್ಯಕ್ತಿಯೊಬ್ಬರು ಸೂಚಿಸಿದರು.

"ಖಂಡಿತಾ. ಅಂತಹ ಸಂದರ್ಭದಲ್ಲಿ, ಎಲ್ಲಕ್ಕೂ ಮೊದಲಾಗಿ, ಭಾವೀ ವಧುವರರ ಚರಮದಿನವನ್ನು ಪರಿಗಣಿಸುವ ಕ್ರಮ ಜಾರಿಗೆ ಬರಬಹುದು" ಎಂದು ಮೂರ್ತಿ ಅವರ ಅಭಿಪ್ರಾಯವನ್ನು ಅನುಮೋದಿಸಿದರು.

"ಡಾಕ್ಟರ್, ದ ಪ್ರೂಫ್ ಒಫ್ ಪುಡ್ಡಿಂಗ್ ಈಸ್ ಇನ್ ಈಟಿಂಗ್ ಇಟ್ ಎನ್ನುತ್ತಾರೆ. ಅಂತೆಯೇ, ಈ ಸಂಶೋಧನೆಯ ಸಂದರ್ಭದಲ್ಲಿ ಈ ಮಾಹಿತಿಯ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು, ಯಾರ ಅಂತ್ಯವನ್ನಾದರೂ ಮೊದಲೇ ನಿರ್ಧರಿಸಿ, ಅದು ನಿಜವಾದ ಪ್ರಸಂಗಗಳಿವೆಯೇ ?" ಮುಂದಿನ ಸಾಲಿನಲ್ಲಿಯೇ ಕುಳಿತಿದ್ದ ಮಧ್ಯಮ ವಯಸ್ಸಿನ ವ್ಯಕ್ತಿಯೊಬ್ಬರ ಪ್ರಶ್ನೆ.

ಸಾಮಾನ್ಯವಾಗಿ, ಸಭಿಕರ ಪ್ರಶ್ನೆಗಳಿಗೆ ಥಟ್ ಎಂದು ಉತ್ತರಿಸುತ್ತಿದ್ದ ಮೂರ್ತಿಯವರು, ಈ ಪ್ರಶ್ನೆಗೆ ತಕ್ಷಣವೇ ಉತ್ತರಿಸಲಿಲ್ಲ. ಸ್ವಲ್ಪ ಹೊತ್ತು ಅಳೆದೂ ತೂಗಿ ನಂತರ ಹೇಳಿದರು,

"ಹೌದು......ನನಗೆ ತಿಳಿದಂತೆ, ಆ ರೀತಿಯೂ ಖಚಿತಪಡಿಸಿಕೊಳ್ಳಲಾಗಿದೆ" ಎಂದರು.

 

"ಕೇವಲ ಮಾನವರಿಗೆ ಮಾತ್ರ ಈ ಸಂಶೋಧನೆ ಅನ್ವಯವಾಗುತ್ತದೆಯೇ ?"

"ತಾತ್ವಿಕವಾಗಿ ಎಲ್ಲಾ ಜೀವಿಗಳಿಗೂ ಇದು ಅನ್ವಯವಾಗುತ್ತದೆ. ಈ ಸಂಶೋಧನೆಗೆ ಪ್ರೇರಕವಾದ ಸುಳಿವು ಸಿಕ್ಕಿದ್ದೇ ವಿವಿಧ ಪ್ರಾಣಿಗಳ ಅಯುರ್ಮಾನದಲ್ಲಿರುವ ಅಜಗಜಾಂತರ ವ್ಯತ್ಯಾಸದಿಂದ. ದುಂಬಿಯ ಗರಿಷ್ಠ ಜೀವಮಾನ ಕೇವಲ ಒಂದು ವರ್ಷವಾದರೆ, ಒಂದು ಜಾತಿಯ ಆಮೆಯ ಗರಿಷ್ಠ ಜೀವಮಾನ ಸುಮಾರು ಎರಡು ನೂರು ವರ್ಷಗಳು. ಒಂದು ಕುತೂಹಲದ ಸಂಗತಿಯೆಂದರೆ ಪ್ರಾಣಿಯ ಗಾತ್ರಕ್ಕೂ ಅದರ ಜೀವಮಾನಕ್ಕೂ ನೇರ ಸಂಬಂಧವಿಲ್ಲ. ಆಮೆಗಿಂತಲೂ ಬಹಳಷ್ಟು ದೊಡ್ಡ ಗಾತ್ರದ ಆನೆಯ ಗರಿಷ್ಠ ಜೀವಮಾನ ಎಪ್ಪತ್ತು ವರ್ಷಗಳು ಮಾತ್ರ.."

"ಈ ಮಾಹಿತಿ ತಿಳಿಯಲು ತುಂಬಾ ಖರ್ಚಾಗುತ್ತದೆಯೇ ?" ಎಂದು ಸಭಿಕರಲ್ಲೊಬ್ಬರು ಕೇಳಿದರು.

"ಸದ್ಯದ ಪರಿಸ್ಥಿತಿಯಲ್ಲಿ ಹೌದು. ಇದು ತುಂಬಾ ದುಬಾರಿ ಪರೀಕ್ಷೆಯಾಗಿರುತ್ತದೆ. ಮುಂಬರುವ ದಿನಗಳಲ್ಲಿ, ಕ್ರಮೇಣ ಇದು ಎಲ್ಲರ ಕೈಗೆಟಕುವ ಕ್ರಯಕ್ಕೆ ದೊರೆಯಬಹುದು"

"ಸರ್, ನಾನು ಬ್ಯುಸಿನೆಸ್ ಇಂಡಿಯಾದ ಕರೆಸ್ಪಾಂಡೆಂಟ್. ನೀವು ಹೇಳಿದಂತೆ, ಒಬ್ಬ ವ್ಯಕ್ತಿಯ ಡೇಟ್ ಆಫ್ ಎಕ್ಸ್ಪರಿಯನ್ನು ನಿರ್ಧರಿಸಲು ಸಾಧ್ಯವಾಗುವುದಾದರೆ, ಇದು ಕಂಪೆನಿಗಳ ವಹಿವಾಟಿನ ಮೇಲೆ ಏನಾದರೂ ಪರಿಣಾಮ ಬೀರಬಹುದೇ ? " ಮುಂದಿನ ಎರಡನೇ ಸಾಲಿನಲ್ಲಿ ಕುಳಿತಿದ್ದ ಯುವತಿಯೊಬ್ಬಳು ಪ್ರಶ್ನಿಸಿದಳು.

"ಖಂಡಿತಾ ಸಾಧ್ಯವಿದೆ. ಉದಾಹರಣೆಗೆ , ಆರೋಗ್ಯ ವಿಮಾ ವ್ಯವಹಾರವನ್ನು ತೆಗೆದುಕೊಳ್ಳೋಣ. ಒಂದು ವೇಳೆ, ಆರೋಗ್ಯ ವಿಮಾ ಕಂಪೆನಿಗಳು ತಮ್ಮ ಗ್ರಾಹಕರನ್ನು ನೋಂದಾಯಿಸಿಕೊಳ್ಳುವ ಮುನ್ನ ಅವರ ಡೇಟ್ ಆಫ್ ಎಕ್ಸ್ಪೈರಿಯ ಮಾಹಿತಿಯನ್ನು ಕೇಳುವುದು ಸಾಧುವಾದುದು ಎಂದು ಕಾನೂನಾದರೆ, ಆಗ ಏನಾಗಬಹುದೆಂಬುದನ್ನು ನೀವು ಊಹಿಸಬಲ್ಲಿರಿ ತಾನೇ ?"

"ಸರ್, ತಾವು ತಪ್ಪು ತಿಳಿಯದಿದ್ದರೆ ನನ್ನದೊಂದು ಪ್ರಶ್ನೆ ......." ಜೀನ್ಸ್ ಧಾರಿ ಯುವಕನೊಬ್ಬ ಅನುಮಾನಿಸುತ್ತಾ ಕೇಳಿದ "Anything under the sun, my son. ಯಾವ ಸಂಕೋಚವೂ ಇಲ್ಲದೇ ಕೇಳಿ" ಎಂದರು ಮೂರ್ತಿ ನಸುನಗುತ್ತಾ. " ಸರ್,ಈ ಸಂಶೋಧನೆಯಲ್ಲಿ ತಾವೂ ಭಾಗಿಯಾಗಿದ್ದೀರಿ ಎಂದು ನನ್ನ ಊಹೆ.ತಮ್ಮ ಚರಮ ದಿನವನ್ನೂ ತಿಳಿದುಕೊಂಡಿದ್ದೀರಾ ?" ತುಂಟನಗೆ ಸೂಸುತ್ತಾ ಕೇಳಿದ ಆ ಯುವಕ. ಸಭೆಯಲ್ಲಿ ಅಲ್ಲಲ್ಲಿ ನಗು ಕೇಳಿಬಂತು. ಮೂರ್ತಿಯವರ ಉತ್ತರಕ್ಕೆ ಸಭೆ ಕುತೂಹಲದಿಂದ ಕಾಯುತ್ತಿತ್ತು. ಮೂರ್ತಿಯವರ ಮುಖ ತುಸು ಗಂಭೀರವಾಯಿತು. ಒಂದೆರಡು ಕ್ಷಣ ತಡೆದು, ಯಾವುದೋ ಸಂದಿಗ್ಧದಲ್ಲಿರುವವರಂತೆ ನಿಧಾನಿಸಿ ಉತ್ತರಿಸಿದರು.

"ಈ ಪ್ರಶ್ನೆಗೆ ಉತ್ತರ ಕೊಡುವುದು ಸ್ವಲ್ಪ ಕಷ್ಟದ ಕೆಲಸ. ಇದಕ್ಕೆ ಉತ್ತರ ಹೌದು ಮತ್ತು ಇಲ್ಲ. ಅದು ನನಗೆ ತಿಳಿದಿದೆ ಎಂಬುದಕ್ಕೆ ಹೌದು. ಆದರೆ ಕೆಲವು ಕಾರಣಾಂತರಗಳಿಂದ ಅದನ್ನು ನಿಮಗಾರಿಗೂ ತಿಳಿಸಲಾರೆ ಎಂಬುದಕ್ಕೆ ,ಇಲ್ಲ" ಇಷ್ಟು ಹೇಳಿದ ಅವರು, ವಿಷಯಾಂತರ ಮಾಡುವ ರೀತಿಯಲ್ಲಿ ಮುಂದುವರೆದರು,

"ಇದೀಗ ನನ್ನ ಇಂದಿನ ಭಾಷಣದ ಶೀರ್ಷಿಕೆ ಬಗ್ಗೆ ಒಂದೆರಡು ಮಾತು ಹೇಳಲೇಬೇಕು. "ಹಂಸ ಹಾಡುವ ಹೊತ್ತು". ಹಂಸ, ಹಾಡು ಹಕ್ಕಿ ಅಲ್ಲವೆಂಬುದು ನಿಮಗೆಲ್ಲರಿಗೆ ತಿಳಿದೇ ಇದೆ. ಆದರೆ, ಹಂಸ ತನ್ನ ಅಂತ್ಯಕಾಲದಲ್ಲಿ ಮಧುರವಾಗಿ ಹಾಡುತ್ತದೆ ಎಂಬ ಪ್ರತೀತಿ ಇದೆ. ಕ್ರಿಸ್ತಪೂರ್ವ ಕಾಲದಿಂದಲೂ ಈ ನಂಬುಗೆಯನ್ನು ಪೋಷಿಸಿಕೊಂಡು ಬರಲಾಗಿದೆ. ಸ್ವಾರಸ್ಯದ ವಿಷಯವೆಂದರೆ ಸರಿಸುಮಾಗು ಕ್ರಿಸ್ತನ ಸಮಯದಲ್ಲಿಯೆ ರೋಮನ್ ಪ್ರಕೃತಿಶಾಸ್ತ್ರಜ್ಞ ಹಿರಿಯ ಪ್ಲೀನಿ ಇದು ಮಿಥ್ಯವೆಂದು ಸಾರಿದ್ದ. ಅದೇನೇ ಇರಲಿ, ಹಂಸ ಹಾಡುವ ಹೊತ್ತು ಎಂದರೆ, ಒಂದು ಜೀವಿಯ ಮರಣದ ಸಮಯ. ಆ ಹೊತ್ತು ಯಾರಿಗೆ ಯಾವಾಗ ಬರುತ್ತದೆ ಎಂಬುದನ್ನು ತಿಳಿದವರು ಯಾರೂ ಇಲ್ಲ. ಇಂದಿನ ನನ್ನ ಭಾಷಣದ ವಿಷಯ, ಆ ಒಂದು ಕ್ಷಣದ ಕುರಿತಾಗಿಯೇ ಇದ್ದುದರಿಂದ ಈ ಶೀರ್ಷಿಕೆ ಇರಲೆಂದು ನಿರ್ಧರಿಸಿದೆ. ನನಗೆ ಕೊಟ್ಟ ಭಾಷಣದ ಅವಧಿ ಮುಗಿದಿದೆ. ಇಲ್ಲಿಗೆ ನಿಮಗೆಲ್ಲರಿಗೂ ನನ್ನ ವಂದನೆಗಳನ್ನು ತಿಳಿಸಿ ನನ್ನ ಭಾಷಣವನ್ನು ಮುಗಿಸುತ್ತೇನೆ" ಎಂದು ಹೇಳಿ, ವೇದಿಕೆಯ ಇನ್ನೊಂದು ಬದಿಯಲ್ಲಿದ್ದ ತಮ್ಮ ಆಸನದ ಕಡೆ ನಡೆದರು.

 

ಸಭಿಕರ ಮೆಚ್ಚುಗೆಯ ಕರತಾಡನ ಕ್ಷೀಣಿಸಿದ ಮೇಲೆ, "ಪ್ರಜ್ಞಾವಂತ ಪೌರರು" ಸಂಘದ ಕಾರ್ಯದರ್ಶಿ ಗೋಪೀನಾಥರವರು ವಂದನಾರ್ಪಣೆ ಸಲ್ಲಿಸಿದರು. ಸಭಾಂಗಣದಿಂದ ಹೊರಬರುತ್ತಿದ್ದ ಮೂರ್ತಿಯವರನ್ನು ಎಂದಿನಂತೆ ಅವರ ಅಭಿಮಾನಿಗಳು ಮುತ್ತಿಕೊಂಡು ಅವರನ್ನು ಅಭಿನಂದಿಸಿ ತಮ್ಮ ವೈಯುಕ್ತಿಕ ಸಂದೇಹಗಳಿಗೂ ಪರಿಹಾರ ಕೇಳಲಾರಂಭಿಸಿದರು.ಮೂರ್ತಿಯವರು ಭಾಷಣಗಳನ್ನು ಆರಂಭಿಸಿದ ದಿನಗಳಲ್ಲಿ ಅನೇಕ ಪತ್ರಕರ್ತರೂ ಹಾಜರಿರುತ್ತಿದ್ದರು. ಅವರ ಭಾಷಣಗಳಲ್ಲಿ ಓದುಗರಿಗೆ ಬೇಕಾದ ರೋಚಕತೆ ಇಲ್ಲದುದರಿಂದ ಕ್ರಮೇಣ ಅವರ ಭಾಷಣಗಳಿಗೆ ಪತ್ರಕರ್ತರ ಹಾಜರಿ ಕಡಿಮೆಯಾಗತೊಡಗಿತು.ಸುದ್ದಿಯ ದೃಷ್ಟಿಯಿಂದ ಬಹು ಮಹತ್ವದ ಇಂದಿನ ಭಾಷಣವನ್ನು ಆಲಿಸಲು ಕೇವಲ ಎರಡು ಮೂರು ಪತ್ರಕರ್ತರಿದ್ದರು. ಆದರೂ ಸುದ್ದಿಯ ಪ್ರಾಮುಖ್ಯತೆಯನ್ನು ಅರಿತ ಅವರು ಮೂರ್ತಿಯವರ ಮೇಲೆ ಪ್ರಶ್ನೆಗಳ ಮಳೆ ಕರೆಯತೊಡಗಿದರು. ಅವರೆಲ್ಲರಿಗೂ ಬಲು ತಾಳ್ಮೆಯಿಂದ ಉತ್ತರಿಸಿ ತಮ್ಮ ಕಾರಿನೆಡೆಗೆ ಸಾಗುತ್ತಿರುವಾಗ, ಅವರ ಆಪ್ತ ಸ್ನೇಹಿತರಾದ ಲಾಯರ್ ಮುರಳೀಧರ ರಾವ್ ಎದುರಾದರು. ಅವರ ಜೊತೆಯಲ್ಲಿ ಒಬ್ಬ ಯುವಕನಿದ್ದ.

"ಮುರಳೀ, ಏನು ಇವತ್ತು ನೀನು ಕಾಣಲೇ ಇಲ್ವಲ್ಲಾ ?" ಎಂದು ಸಲುಗೆಯಿಂದ ತಮ್ಮ ಸ್ನೇಹಿತನನ್ನು ವಿಚಾರಿಸಿದರು.

"ಇವತ್ತು ನಾನು ಬರೋದು ಐದು ನಿಮಿಷ ತಡವಾಯ್ತು ನೋಡು. ಅಷ್ಟರಲ್ಲೇ, ಮುಂದಿನ ಸಾಲುಗಳೆಲ್ಲಾ ಭರ್ತಿ ಆಗ್ಬಿಟ್ಟಿದ್ದವು. ಹಾಗಾಗಿ, ಹಿಂದಿನ ಸಾಲಿನಲ್ಲಿ ಕೂತ್ಕೋ ಬೇಕಾಯ್ತು" ಎಂದರು ಮುರಳೀಧರ ರಾವ್ ಬೇಸರದಿಂದ.

"ಇವತ್ತಿನ ಭಾಷಣ ನಿನಗೇನೆನೆಸಿತು?" ಎಂದು ಕೇಳಿದರು ಮೂರ್ತಿ. ಮುರಳೀಧರರ ಅಭಿಪ್ರಾಯಕ್ಕೆ ಅವರು ಬಹಳ ಬೆಲೆ ಕೊಡುತ್ತಿದ್ದರು. ಅವರ ಒಂದು ಅಭಿಪ್ರಾಯ ಇಡೀ ಸಭೆಯ ಅಭಿಪ್ರಾಯಕ್ಕೆ ಸಮನಾಗಿತ್ತು, ಮೂರ್ತಿಯವರ ಪಾಲಿಗೆ. "ಚೆನ್ನಾಗಿತ್ತು. ಆದರೂ ಇವತ್ತಿನ ನಿನ್ನ ಭಾಷಣದಲ್ಲಿ ನೀನು ಪೂರ್ತಿಯಾಗಿ ಇನ್ವಾಲ್ವ್ ಆಗಿರಲಿಲ್ಲ ಎನಿಸಿತು ನನಗೆ." ಎಂದರು ಮುರಳೀಧರ ರಾವ್. ಅದಕ್ಕೆ ಏನೂ ಪ್ರತಿಕ್ರಿಯಸದೆ, ಹುಸಿನಗೆ ಬೀರಿದರು ಮೂರ್ತಿ

"ಅಂದಹಾಗೆ, ಇವನು ಮಿಲಿಂದ್" ಎಂದು ತಮ್ಮೊಡನಿದ್ದ ಯುವಕನನ್ನು ಪರಿಚಯಿಸಿದರು

" ನನ್ನ ಕಸಿನ್ ಉಮಾಳ ಎರಡನೇ ಮಗ. ಇವನೂ ಕೂಡ ಬಯೋಕೆಮಿಸ್ಟ್ರಿ ನಲ್ಲಿ ಡಾಕ್ಟರೇಟ್ ತೆಗೆದುಕೊಂಡಿದ್ದಾನೆ. ಇವನಿಗೂ ನಿನ್ನ ಭಾಷಣ ಕೇಳಿಸೋಣ ಅಂತ ಕರೆದುಕೊಂಡು ಬಂದೆ. ಭಾಷಣ ಮುಗಿದಮೇಲೆ, ನಿನ್ನ ಪರಿಚಯ ಮಾಡಿಸಿಕೊಡು ಅಂತ ಕೇಳಿದ. ಅದಕ್ಕೇ ನಿನ್ನ ಹತ್ರ ಕರೆದುಕೊಂಡು ಬಂದೆ" ಎಂದರು

"ಸಂತೋಷ. ನೀವೂ ಕೂಡಾ, ಡಬಲ್ ಡಾಕ್ಟರಾ ?" ಎಂದು ಮೂರ್ತಿ ಕೇಳಿದರು, ನಸುನಗೆಯಿಂದ ಮಿಲಿಂದನ ಕೈಕುಲುಕುತ್ತಾ. "ಇಲ್ಲ ಸರ್. ನಾನು ಸಿಂಗಲ್ ಡಾಕ್ಟರ್" ಎಂದು ಮಿಲಿಂದ್ ಹೇಳುತ್ತಿದ್ದಂತೆ,

"ಹೌದೌದು. ಇವನು ಸಿಂಗಲ್ , ಎರಡರ್ಥದಲ್ಲಿ, ಅಂದರೆ, ಅವನು ಬಯೋಕೆಮಿಸ್ಟ್ರಿ ನಲ್ಲಿ ಮಾತ್ರ ಡಾಕ್ಟರ್ ಹಾಗೂ ಇನ್ನೂ ಸಿಂಗಲ್ ಅರ್ಥಾತ್ ಮೋಸ್ಟ್ ಎಲಿಜಿಬಲ್ ಬ್ಯಾಚಲರ್" ಎಂದು ನಕ್ಕರು ಮುರಳೀಧರ ರಾವ್. "ತಮ್ಮಂತೆ ನನಗೆ ವೈದ್ಯ ಪದವಿಯಿಲ್ಲ ಸರ್ " ಎಂದು ವಿನಯದಿಂದ ಹೇಳಿದ ಮಿಲಿಂದ್.

"ಈಗ ಜ್ಞಾಪಕಕ್ಕೆ ಬರುತ್ತಿದೆ. ಬಹಳ ಹಿಂದೆ ಇವರ ಬಗ್ಗೆ ನೀನು ನನ್ನಲ್ಲಿ ಏತಕ್ಕೋ ಪ್ರಸ್ತಾಪ ಮಾಡಿದ ನೆನಪು.." "ಎಲ್ಲಾ ಸರಿಯಾಗಿ ಆಗಿದ್ದರೆ, ಇವನು ನಿನ್ನ ಸ್ಟೂಡೆಂಟ್ ಆಗಬೇಕಿತ್ತು. ನಿಮ್ಮ ಇನ್ಸ್ಟಿಟ್ಯೂಟ್ ನಲ್ಲಿ ಪಿ. ಎಚ್. ಡಿ ಗಾಗಿ ಅರ್ಜಿ ಹಾಕಿದ್ದ. ಆಗ ಇವನ ಬಗ್ಗೆ ನಿನಗೆ ತಿಳಿಸಿದ್ದೆ.ಆದರೆ, ಅವನ ಇಂಟರ್ ವ್ಯೂ ಸಮಯಕ್ಕೆ ಅವನ ಎಮ್.ಎಸ್.ಸಿ ಸರ್ಟಿಫೀಕೇಟ್ ಗಳು ದೊರೆಯದೆ, ಸೀಟು ಕಳೆದುಕೊಂಡ "

"ಹೌದೇ ? ಇರಲಿ, ಮತ್ತೆಲ್ಲಿ ಮಾಡಿದಿರಿ ನಿಮ್ಮ ಪಿ.ಎಚ್.ಡಿ ನ ?"

"ಇವನಿಗ್ಯಾಕೆ ನೀವು ತಾವು ಎನ್ನುತ್ತೀಯೋ, ನೀನು ಇವನನ್ನು ಮೊದಲ ಬಾರಿ ನೋಡಿದಾಗ ಚಡ್ಡೀನೂ ಹಾಕ್ಕೊಳ್ತಿರಲಿಲ್ಲ. ಉಮಾ ಇವನ ಜೊತೆ ನಮ್ಮ ಮನೆಗೆ ಬಂದಾಗ ನೀನು ಇವನನ್ನು ನೋಡಿದ್ದೆ" ಎಂದ ಮುರಳೀಧರರ ಮಾತಿಗೆ, ನಾಚಿಕೊಂಡ ಮಿಲಿಂದ್.

"ನಿನ್ನ ಜೊತೆ ತುಂಬಾ ಮಾತನಾಡಬೇಕಂತೆ ಇವನಿಗೆ. ನೀನು ಬಿಡುವಿದ್ದಾಗ ನಿಮ್ಮ ಮನೆಗೆ ಕರೆದುಕೊಂಡು ಬರುತ್ತೀನಿ. ಯಾವಾಗ ಬರೋಣ ಹೇಳು ?"

"ಅದಕ್ಕೇಕೆ ಮುಹೂರ್ತ ? ಈಗ ಇನ್ನೂ ಎಂಟೂವರೆ ಗಂಟೆ. ಹತ್ತು ಗಂಟೆಗೆ ನನ್ನ ಊಟದ ಸಮಯ. ಅಲ್ಲಿಯ ತನಕ ನಾನು ಫ್ರೀ. ನನ್ನ ಜೊತೆಗೇ ಬಂದರೆ ನಮ್ಮ ಮನೆಯಲ್ಲೇ ಊಟ ಮಾಡಿಕೊಂಡು ಹೋಗಬಹುದು" ಎಂದು ಆಹ್ವಾನಿಸಿದರು ಮೂರ್ತಿ. ಯುವಜನರೊಡನೆ ಚರ್ಚೆಯಲ್ಲಿ ಸಮಯ ಕಳೆಯುವುದು ಅವರಿಗೆ ಬಹಳ ಪ್ರಿಯವಾದ ಹವ್ಯಾಸವಾಗಿತ್ತು.

"ಈಗ್ಲೇನಾ ? ಈಗ್ಲೇ ಆದ್ರೆ ನನಗೆ ಬರೋಕೆ ಆಗಲ್ಲ. ಇವನನ್ನ ಮಾತ್ರ ಕರೆದುಕೊಂಡು ಹೋಗು. ಊಟದ ಆಹ್ವಾನಕ್ಕೆ ಮಾತ್ರ ರೇನ್ ಚೆಕ್ ತೆಗೆದುಕೊಳ್ತೇನೆ" ಎಂದು,

"ನೋಡಪ್ಪಾ, ನನ್ನ ಕೆಲಸ ಆಯ್ತು. ಮೂರ್ತಿ ಜೊತೆ ನಿನ್ನ ಚರ್ಚೆ ಮುಗಿಸ್ಕೊಂಡು ಮನೆಗೆ ಬಾ" ಎಂದು ಮಿಲಿಂದನ ಬೆನ್ನು ತಟ್ಟಿ, ಮೂರ್ತಿಯವರಿಗೆ "ಬೈ" ಎಂದು ಕೈಬೀಸಿ ಮುರಳೀಧರ ರಾವ್ ಹೊರಟುಹೋದರು. ...............ಮುಂದುವರಿಯುವುದು

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಸ೦ಪದಕ್ಕೆ ಸಶಕ್ತ ಮರುಪ್ರವೇಶ ತಮ್ಮದು!! ಮೊದಲು ಆಕರ್ಷಕ ಶೀರ್ಷಿಕೆಗಾಗಿ ಅಭಿನ೦ದನೆಗಳು. ನನಗೂ ಹ೦ಸ ಹಾಡುವ ಹೊತ್ತು ಪದ ಬಳಕೆಯ ಔಚಿತ್ಯ ಗೊತ್ತಿರಲಿಲ್ಲ. ಇ೦ದು ತಿಳಿದುಕೊ೦ಡೆ! ಎರಡನೆಯದಾಗಿ ಆಕರ್ಷಕ ಚಿತ್ರಕ್ಕಾಗಿ ಅಭಿನ೦ದನೆಗಳು. ಆದರೆ ಈ ಲೇಖನಕ್ಕೆ ಈ ಚಿತ್ರದ ಬಳಕೆಯ ಸೂಕ್ತತೆ ನನಗರಿವಾಗಲಿಲ್ಲ.. ಮೂರನೆಯದಾಗಿ ಬಹಳ ಚಿ೦ತನೆಗೆ ದೂಡುವ ಲೇಖನ... ಒಮ್ಮೆ ಮನಪಠಲದಲ್ಲಿ ಹಲವಾರು ಭಾವನೆಗಳು ಹಾದು ಹೋದವು. ಸಾಕಷ್ಟು ಸಾಲುಗಳು ಬದುಕನ್ನು ಬದುಕುವ ಬಗ್ಗೆ ಚಿ೦ತನೆಗೆ ದೂಡುವಲ್ಲಿ ಯಶಸ್ವಿಯಾಗಿವೆ. >>ಮಾನವ ಶಿಶುವೊಂದು ಜನಿಸುವುದನ್ನು ನಿಮ್ಮಲ್ಲಿ ಬಹಳಷ್ಟು ಜನ ಕಂಡಿರಲಿಕ್ಕಿಲ್ಲ. ಆದರೂ, ಯಾವುದಾದರೂ ಹಸುವಿನಂತಹ ಸಾಕುಪ್ರಾಣಿ ಹೆರುವುದನ್ನು ನೋಡಿರಬಹುದು. ಮಾನವ ಶಿಶು ಜನಿಸುವ ಕ್ರಿಯೆಗೂ, ಹಸುವಿನ ಕರು ಜನಿಸುವ ಕ್ರಿಯೆಗೂ ಹೆಚ್ಚು ವ್ಯತ್ಯಾಸವೇನಿಲ್ಲ. ತಾಯಿಯ ಗರ್ಭದಲ್ಲಿ ನಲವತ್ತು ವಾರಗಳ ಕಾಲ ಬೆಳೆದು, ಗರ್ಭದಿಂದ ಹೊರಗೆ ಬರುವುದನ್ನು ನೋಡಿದಾಗ, ಕಾರ್ಖಾನೆಯಲ್ಲಿ ತಯಾರಾದ ವಸ್ತುವೊಂದು ಅಸೆಂಬ್ಲಿ ಲೈನ್ ನಿಂದ ಹೊರಬರುತ್ತಿರುವಂತೆ ಕಾಣುತ್ತದೆ.>> ತಮಾಷೆಯೆನ್ನಿಸಿದರೂ ಈ ಸಾಲು ಆಧ್ಯಾತ್ಮಿಕತೆಯತ್ತ ಮನಸ್ಸನ್ನು ದಬ್ಬುವ.. ಜನನ..ಬದುಕು... ಮರಣ ಮು೦ತಾದವುಗಳ ಬಗ್ಗೆ ಮನಸ್ಸಿನಲ್ಲಿ ಸಶಕ್ತ ಚಿ೦ತನೆಗಳನ್ನು ಹುಟ್ಟು ಹಾಕುವ ಸಾಮರ್ಥ್ಯವನ್ನು ಪಡೆದಿದೆ. ವೃಧ್ಧರ ವ೦ದನಾರ್ಪಣೆಯ ಸನ್ನಿವೇಶ.. ಅದಕ್ಕೆ ಪೂರಕವಾದ ಸ೦ಭಾಷಣೆ.. ಅ೦ತ್ಯದ ಸಾಲುಗಳು ನಿಜಕ್ಕೂ ಮನಸ್ಸನ್ನು ಭಾವಪರವಶತೆಗೆ ಈಡಾಗಿಸಿತು. “ಬದುಕಲು ಕಲಿ“ ಎ೦ಬುದನ್ನು ಸೂಚ್ಯವಾಗಿ ಹೇಳಿದ೦ತಿದೆ!! ಅ೦ತ್ಯದಲ್ಲಿ ಡಾ ಮೂರ್ತಿಯವರ ದಿನದ ಭಾಷಣವೂ “ಹ೦ಸ ಹಾಡುವ ಹೊತ್ತು“ ಶೀರ್ಷಿಕೆಗೆ ಪೂರಕವೇನೋ ಎ೦ಬ ಅನುಮಾನದ ಎಳೆ ಕಾಡತೊಡಗಿದೆ. ಅ೦ದರೆ ಮೂರ್ತಿಯವರೂ ತಮ್ಮ ಬದುಕಿನ ಎಕ್ಸೈರಿ ದಿನಾ೦ಕದ ಬಗ್ಗೆ ಬಹಳವಾಗಿ ಚಿ೦ತಿಸುತ್ತಿದ್ದಿರಬಹುದು. ಸೂಚ್ಯವಾಗಿ ತಮ್ಮ ಕೊನೆಯ ದಿನಗಳನ್ನು ಎಣಿಸುತ್ತಿದ್ದಾರೇನೋ!! ಒಟ್ಟಾರೆ ಲೇಖನ ಸಶಕ್ತವಾಗಿ ಹೊರಹೊಮ್ಮಿಸಿದೆ. ಒಮ್ಮೆಯೂ ನಿಲ್ಲಿಸದೇ ಕೊನೆಯವರೆಗೂ ಓದಿದೆ. ಎರಡನೇ ಭಾಗದ ಶೀಘ್ರ ಪ್ರಕಟಣೆಗೆ ಕಾಯುತ್ತಿದ್ದೇನೆ. ಕೊನೆಯದಾಗಿ ಪ್ಯಾರಾಗಳ ನಡುವಿನ ಅ೦ತರವನ್ನು ಕಡಿಮೆ ಮಾಡಬೇಕೆ೦ದು ನನ್ನ ವಿನಮ್ರ ಕೋರಿಕೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀ ನಾವಡಾರವರೆ, ತಮ್ಮ ವಿಮರ್ಶಾಪೂರಿತ ಮೆಚ್ಚುಗೆಗೆ ನಾನು ಎಷ್ಟು ಕೃತಜ್ಞತೆಗಳನ್ನು ತಿಳಿಸಿದರೂ ಕಡಿಮೆಯೇ. ನಾನು ಈ ಲೇಖನವನ್ನು ಈ ಅಂಕಣದಲ್ಲಿ ಸೇರಿಸುವಾಗ ಅದ್ಯಾವುದೋ ತಾಂತ್ರಿಕ ದೋಷದಿಂದಾಗಿ ಲೇಖನದ ಫಾರ್ಮಾಟಿಂಗ್ ಸಂಪೂರ್ಣ ಅಸ್ತವ್ಯಸ್ತವಾಯಿತು. ಆ ಚಿತ್ರದ ಅಸಮರ್ಪಕತೆಯ ಬಗ್ಗೆ ಸರಿಯಾಗಿ ತಿಳಿಸಿದ್ದೀರಿ. ಅಚಾತುರ್ಯದಿಂದ ಅನುದ್ದೇಶಿತವಾಗಿ ಆ ಚಿತ್ರ ಸೇರಿಹೋಗಿದೆ. ಅಸ್ತಂಗತ ಸೂರ್ಯನ ಇಲ್ಲವೇ ಹಂಸವೊಂದರ ನೆರಳು ಚಿತ್ರ (ಸಿಲ್ಹೂಟ್) ಹಾಕಬೇಕೆಂದು ಪ್ರಯತ್ನಿಸುತ್ತಿದ್ದೆ. ಅವೆರಡೂ ಆಗದೆ, ನನ್ನ ಸಂಗ್ರಹದಲ್ಲಿದ್ದ ಈ ಚಿತ್ರ ಅಡಕವಾಯಿತು.ಮುಂದಿನ ಸಲ ಹೀಗಾಗದಂತೆ ಎಚ್ಚರ ವಹಿಸುತ್ತೇನೆ. ನಿಮ್ಮ ಪ್ರೋತ್ಸಾಹಕರ ನುಡಿಗಳಿಗೆ ಮತ್ತೊಮ್ಮೆ ನನ್ನ ಕೃತಜ್ಞತೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ರಮೇಶ್ ಬಾಬುರವರೆ ಹಂಸಹಾಡುವ ಹೊತ್ತು , ನೀವು ತೆಗೆದುಕೊಂಡಿರುವ ವಿಷಯ ಅತ್ಯಂತ ಆಸಕ್ತಿದಾಯಕ, ಹಾಗೆ ನೀವು ಲೇಖನವನ್ನು ನಿರೂಪಿಸುತ್ತಿರುವ ರೀತಿ ಅತಿ ಸುಂದರ. ಮುಂದಿನ ಬಾಗಗಳಿಗಾಗಿ ಕಾಯಲೇ ಬೇಕಾಗುವಷ್ಟು ಕುತೂಹಲ ಮೂಡಿಸಿದ್ದೀರಿ, ಬೇಗ ಮುಂದುವರೆಸಿ..... -ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀ ಪಾರ್ಥರವರೆ, ತಮ್ಮ ಪ್ರೋತ್ಸಾಹಕರ ನುಡಿಗಳಿಗೆ ನನ್ನ ಸವಿನಯ ಕೃತಜ್ಞತೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ರಮೇಶ್ ಬಾಬು ಅವರೇ ಉತ್ತಮ ಬರಹ. ವೃದ್ಧರ ವಂದನಾರ್ಪಣೆ ಪ್ರಸಂಗ ಮನ ಕಲಕಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕೃತಜ್ಞತೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕೃತಜ್ಞತೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ರಮೇಶ್ ರವರೇ ನಿರೂಪಣಾ ಶೈಲಿ ತುಂಬಾಚೆನ್ನಾಗಿದೆ, ಮುಂದಿನ ಭಾಗದ ನೆರೀಕ್ಷೆಯಲ್ಲಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕೃತಜ್ಞತೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ತುಂಬಾ ಚೆನ್ನಾಗಿ ಮುಡಿ ಬಂದಿದೆ , ಅರ್ಥ ಪೂರ್ಣ ಲೇಖನ . ನಿಜಕ್ಕೂ ಹಂಸವು ಹಾಡಲಿಕ್ಕೆ ಯಾಕೆ ಧ್ವನಿಯನ್ನು ಹೊರಡಿಸಲು ಬರುವುದಿಲ್ಲವಂತೆ ( ಬಂದರೂ ಕರ್ಕಶವಾಗಿ!). ಆದಾರು ಎಷ್ಟೊಂದು ಬಾರಿ ಹಂಸಗೀತೆ ಅಂದರೆ ಕೋಗಿಲೆ ಕಂಠ ಥರ ಅಂತ ಕಥೆ , ಸಿನಿಮಾಗಳು ಬಂದಿದೆ ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕೃತಜ್ಞತೆಗಳು. ಹಂಸ ಹಾಡುಹಕ್ಕಿ ಅಲ್ಲವೆಂಬುದು ಎಲ್ಲರಿಗೂ ತಿಳಿದ ವಿಷಯವೇ. ಅದರ ಮರಣದ ಸಮಯದಲ್ಲಿ ಮಾತ್ರ ಹಾಡಬಲ್ಲದೆಂಬುದು ಮಾತ್ರ ಸಾಹಿತ್ಯದಲ್ಲಿ ಆಳವಾಗಿ ಬೇರೂರಿರುವ ಮಿಥ್ಯೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕತೆ ಚೆನ್ನಾಗಿದೆ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವೈದ್ಯಕೀಯ ಕ್ಷೇತ್ರದಲ್ಲಿನ ಅಸಾಧಾರಣ ಸೇವೆಯೊಂದಿಗೆ ತಮ್ಮ ಸಾಹಿತ್ಯ ಕ್ಷೇತ್ರದಲ್ಲಿನ ಅಭಿರುಚಿ ಪ್ರಶಂಸನೀಯವಾದದ್ದು. ಉತ್ತಮ ಭಾಷಾಮಾಧುರ್ಯವನ್ನು ಹೊಂದಿದ, ವಿಚಾರಪೂರ್ಣವಾದ,ಆಸಕ್ತಿದಾಯಕ ಚಿತ್ರಣ. ಬಹಳದಿನಗಳ ಮೇಲೆ ಇಂತಹ ಉತ್ಕೃಷ್ಟ ಲೇಖನವನ್ನು ಉಣಬಡಿಸಿದ್ದಕ್ಕೆ ಧನ್ಯವಾದಗಳು ಮುಂದಿನ ಭಾಗದ ನಿರೀಕ್ಷೆಯಲ್ಲಿ... ಅಭಿನಂದನೆಗಳೊಂದಿಗೆ-ನಾಗರತ್ನಾ ಜೋಶಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಮತಿ ನಾಗರತ್ನರವರೆ, ನನ್ನ ಪ್ರಥಮ ಪ್ರಯತ್ನಕ್ಕೆ ಪ್ರಥಮವಾಗಿ ಪ್ರೋತ್ಸಾಹದ ನುಡಿಗಳನ್ನಾಡಿದ ನೀವು ಈ ಪ್ರಯತ್ನಕ್ಕೂ ಮೆಚ್ಚುಗೆಯ ಪ್ರೋತ್ಸಾಹಕರ ನುಡಿಗಳನ್ನಾಡಿರುವುದಕ್ಕೆ ಮತ್ತೊಮ್ಮೆ ವಿನಯಪೂರ್ವಕ ಧನ್ಯವಾದಗಳು ಮತ್ತು ಕೃತಜ್ಞತೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸರ್, ಸಂಪದದಲ್ಲಿ ನಿಮ್ಮನ್ನು ನೋಡಿ ಬಹಳ ಖುಷಿಯಾಯಿತು. ಕಥೆಯ ಶೈಲಿ, ಓಟ ಎಲ್ಲವೂ ತುಂಬ ಚೆನ್ನಾಗಿವೆ, ಮಾನವೀಯತೆ ತುಂಬಿತುಳುಕುತ್ತಿದೆ. ಮುಂದಿನ ಕಂತುಗಳಿಗಾಗಿ ಕಾಯುವಂತೆಯೂ ಮಾಡಿದೆ. ಹೀಗೇ ಬರೆಯುತ್ತಾ ಇರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀನಿವಾಸ್ ಮತ್ತು ಶ್ರೀಕಾಂತ್, ಸಂಪದದಲ್ಲಿ ನಿಮ್ಮಿಬ್ಬರನ್ನೂ ನೋಡಿ ನನಗೂ ಅಷ್ಟೇ ಸಂತೋಷವಾಯಿತು. ನಿಮ್ಮ ಮೆಚ್ಚುಗೆಯ ನುಡಿಗಳಿಂದ ಸಂತೋಷವಾದರೂ, ನಿಮ್ಮಿಬ್ಬರ ಅಭಿಪ್ರಾಯಗಳಿಗೆ ಎಳ್ಳಷ್ಟೂ ಮಹತ್ವ ಕೊಡುವುದಿಲ್ಲ. ಕಿರಿಯ ಮಿತ್ರರಿಬ್ಬರು ತಮ್ಮ ಹಿರಿಯ ಮಿತ್ರರ ಬಗ್ಗೆ ಇನ್ನೇನು ತಾನೇ ಹೇಳಲು ಸಾಧ್ಯ ? : )
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸುಂದರ ಲೇಖನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸರ್, ನಿಮ್ಮ ನೀಳ್ಗತೆ ಚೆನ್ನಾಗಿ ಮೂಡಿ ಬಂದಿದೆ. ಕತೆ ಕುತೂಹಲ ಮೂಡಿಸುತ್ತಾ ಮುಂದಿನ ಭಾಗದ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ. ಕತೆಯ ಜೊತೆಗೆ ಗಂಭೀರವಾದ ವಿಷಯವೊಂದರ ಚಿಂತನೆಯನ್ನು ಕೂಡ ಹಚ್ಚುತ್ತಿದ್ದೀರಿ. ಕತೆ ಮತ್ತು ವಿಷಯ ನಿರೂಪಣೆಗೆ ಧನ್ಯವಾದಗಳು. ಮೊಂದಿನ ಭಾಗದ ನಿರೀಕ್ಷೆಯಲ್ಲಿ....... ಶ್ರೀಕಾಂತ ಹೆಗಡೆ ಶಿವಮೊಗ್ಗ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಲೇಖನದ ಪ್ರಥಮಾರ್ಧದ ಚಿ೦ತನೆಗಳು ಯಾವುದೋ ಲೋಕಕ್ಕೆ ಕರೆದೊಯ್ದಿತು.ಬಹಳ ಚೆನ್ನಾಗಿದೆ,ಬರಹ.ತಡವಾಗಿ ಓದಲು ತೊಡಗಿದ ನಾನೇ ಮು೦ದುವರಿದ ಭಾಗವನ್ನು ಹುಡುಕುತ್ತೇನೆ. ಅಭಿನ೦ದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀ ರಘು ಮುಳಿಯರವರೆ, ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಈಗಾಗಲೇ ಒಟ್ಟು ನಾಲ್ಕು ಕಂತುಗಳನ್ನು ಪ್ರಕಟಿಸಿದ್ದೇನೆ. ಇದೇ ಪುಟದಲ್ಲಿಯೇ ಅವುಗಳಿಗೆ ಲಿಂಕ್ ಲಭ್ಯವಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.