ಹಂಬಲ ಹಣತೆ. (2) ಬಾಳುವೆಯ ಮಠದಲ್ಲಿ

0

 
 
                  ನೀಲ ಗಗನದೊಳು ತಾರೆಗಳ
     ತೇಲಿಸಿದಾತ, ರವಿಶಶಿಗಳನು
     ಕಾಲಪಥದೊಳು ಬಾಲರಂದದಿ
     ಗಾಲಿಯಾಡಿಸುವಾತ!
 
                    ತಿರೆಯ ತಿರುಗಿಸಿ, ತಿಗುರಿಯಂದದಿ
        ಇರುಳ ಸೆರಗನು ಸರಿಸಿ, ಪಗಲನು
       ಮೆರಸಿ, ಸರಸದಿ ಗಿರಿಯ ಸಿರದಲಿ
       ತೊರೆಯನುರುಳಿಸುವಾತ!
 
                      ಮುಗಿಲೊಳಗೆ ಮಳೆಯಿರಿಸಿ, ಬಾನ
     ಬೊಗಸೆಯಲಿ ಧರೆಗೆರೆವದಾತನು,
     ಜಗದ ಕಣಜವ ನಣುವಲಿ ಹುಗಿಸಿ,
     ನಗುತಿಹನುಣಲರಿಯದರ !
 
                     ಅರಿವೊಡರಿದೀ ಬಾಳುವೆಯ ಮಠ
      ದರಿವು, ಅರಿಯದಿರೆ ಬಾಳ್ ಬರಿದು!
      ಬರುವ, ತೊಡಕದು_ತುಡುಕು ಹುಡುಗಿಯ
      ನೆರವು_ ಇರುಳೊಳಿಹ ಬೆಳಕು!
 
                       ಅಬ್ಧ ದಬ್ಧ ದೊಳಿರುವದ್ಭುತದ
       ಶಬ್ಧವೀಯೆಡೆಯೊಳಗೆ ಸ್ತಬ್ಧ
       ಲಬ್ಧವಿದು, ಗುಣಗಣಿತ ವಿದಿತ
       ಶಬ್ದರಹಿತ ವಿದ್ಯೆಯೊಳು!
 
                      ಬಿಚ್ಚಿರಿಸಿ ಕಲಿಸುವನು ಕೆಲವ,
      ಬಚ್ಚಿರಿಸಿ ಬಿತ್ತರಿಸುವ ಹಲವ,
      ನೆಚ್ಚಿದೊಡೆ ಮೆಚ್ಚಿ ಕಲಿಸುವನು
      ಎಚ್ಚರಿಸುವ ನಡಿಗಡಿಗೆ!
 
                       ಭರದಿ ಏರಿಸಿ, ಸಿರಿಯ ಕರುಣಿಸಿ,
        ಮೆರೆಸಿ, ಜಾರಿಸಿ, ಕೊರಗ ಕೆರಳಿಸಿ,
        ಅರಿತು ನಡೆವೊಡೆ, ಹರುಷದೊಳಿರಿಸಿ,
        ಪೊರೆವ ಸಮತೆಯನು ಕಲಿಸಿ.
 
                      ಮಡುವೊಳಗೆ ಮುಳಿಗಿಸುವ, ಕೆಸರ
         ಅಡಿಯೊಳಗೆ ಹುದುಗಿಸುವ, ಬಳ್ಳಿಗ
         ಳೊಡನೆ ಬಂಧಿಸುವ, ಮತ್ತೆ ಎತ್ತುವ,
         ಬಿಡಿಸಿ ತಾವರೆಯ ಸೆರೆಯ!
 
                        ಕರಮುಗಿದ ಮುಗುಳ ನರಳಿಸುವ,
          ಬೆರೆಸಿ ಪರಿಮಳವ, ರವಿಯೊಡನೆ,
          ಸರಸವಾಡಿಪ, ಬಾಳುವೆಯ ಮಠ
          ದರಿವಿನಾಳವನು ತೋರಿ.
 
                           ಹಯಗಳೈದರ-ದೇಹರಥವಾ
         ಘೆಯನು, ದೃಢದಿ ಹಿಡಿಯೆ ಕಲಿಯಲು-
         ನಯದಿ ಪರಿಕಿಸಿ, ಒಲಿದು ಕರುಣಿಸಿ,
         ಜಯವ ನೀವನನವರತ!
 
ನನ್ನ ತಂದೆಯವರಾದ ದಿವಂಗತ ಶ್ರೀ ಜಿ. ನೀಲಕಂಠಂ [09.07.1903 – 21.12.1996] ಅವರ ಕವಿತಾ ಸಾಮಥ್ರ್ಯ ವಿಶಿಷ್ಠ ರೀತಿಯದು! ಯಾವುದೇ ಉನ್ನತ ಪದವಿಯನ್ನು ಹೊಂದದ ಜಿ. ನೀಲಕಂಠಂ, ಕನ್ನಡ ಭಾಷಾ ಜ್ಞಾನ ಮತ್ತು ಕವಿತಾ ರಚನೆಯನ್ನು ಸ್ವಪ್ರಯತ್ನದಿಂದಲೇ ಕರಗತ ಮಾಡಿಕೊಂಡವರು. ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿ, ನಿವೃತ್ತಿಯ ನಂತರ ಮಹಿಳಾ ಸೇವಾ ಸಮಾಜ, ಬಸವನಗುಡಿ, ಬೆಂಗಳೂರು- ಇಲ್ಲಿ ಉಪಾಧ್ಯಾಯರಾಗಿ ಮತ್ತು ಬೆಂಗಳೂರಿನ ಯುನೈಟೆಡ್ ಥಿಯಲೋಜಿಕಲ್ ಕಾಲೇಜಿನಲ್ಲಿ ಆಂಗ್ಲೇಯರಿಗೆ ಕನ್ನಡ ಬೋಧಿಸುವ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಅವರ "ಹಂಬಲ ಹಣತೆ" ಕವನ ಸಂಕಲನದ ಒಂದೊಂದೇ ಕವನಗಳನ್ನು ಸಂಪದದಲ್ಲಿ ಪ್ರಕಟಿಸಲಿದ್ದೇವೆ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.