ಸ್ವರಾಧಿರಾಜ, ಭಾರತ ರತ್ನ ಪಂ. ಭೀಮಸೇನ್ ಜೋಷಿ ಆರೋಗ್ಯ ಸ್ಥಿತಿ ಗಂಭೀರ.

0

ಬಾಲಕ ಭೀಮಸೇನ್ ಜೋಷಿ.

 

೧೯೩೩, ಆಗಸ್ಟ್ ೧೫ ರಿಂದ ೨೦, ಕೇವಲ ಹನ್ನೆರಡು ವರ್ಷದ ಬಾಲಕ ಗದುಗಿನ ಹೊಂಬಳದಿಂದ ಮನೆ ಬಿಟ್ಟು ಓಡಿಹೋದ.

 

ಮೈಸೂರಿನಲ್ಲಿ ಎಂ.ಎ. ಪದವಿ ಕಲೀಲಿಕ್ಕಿದ್ದ ತಂದೆ ಗುರುರಾಜರಿಗೆ ತಾರು ಹೋಯಿತು. ಅವರ ಸಹೋದರ ಗೋವಿಂದ ಈ ಟೆಲಿಗ್ರಾಂ ಕೊಟ್ಟಿದ್ದರು. ಇದೆ ಟೆಲಿಗ್ರಾಂ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜೇಕಬ್ ಅವರಿಗೆ ತೋರಿಸಿ ರಜೆ ಪಡೆದು ಊರಿಗೆ ಓಡಿದರು ತಂದೆ.

 

ಇವರನ್ನು ನೋಡುತ್ತಲೇ ದು:ಖದ ಕಟ್ಟೆ ಒಡೆಯಿತು ತಾಯಿಗೆ. ‘ಊಟ, ತಿನಿಸಿನ ಮ್ಯಾಲೆ ಸಿಟ್ಟು ಮಾಡಿಕೊಂಡು, ಅನ್ನಕ್ಕ ತುಪ್ಪ ಬಡಿಸಲಿಲ್ಲ ಅನ್ನೋದನ್ನ ನೆವಾ ಮಾಡಿಕೊಂಡು ಊರು ಬಿಟ್ಟು ಹೋಗ್ಯಾನ’ ಗಳಗಳನೇ ಅಳುತ್ತ ತಾಯಿ ಅಲವತ್ತುಕೊಂಡರು. ಒಳ್ಳೆಯ ಪೌಷ್ಠಿಕ ಆಹಾರದ ರೂಢಿಯಿದ್ದ ಹುಡುಗನಿಗೆ ಮೊದಲ ಪಲಾಯನ ಬಹಳ ತೊಂದರೆದಾಯಕ ಆಗಿತ್ತು. ಮುಂಬೈ ತಲುಪಿದಾಗ ಅವನ ಕಿಸೆಯಲ್ಲಿ ಒಂದು ದುಡ್ಡು ಇರಲಿಲ್ಲ! ಕನ್ನಡ ಭಾಷೆ ಬಿಟ್ಟರೆ ಬೇರೆ ಭಾಷೆ ಬರುತ್ತಿರಲಿಲ್ಲ. ಮುಂಬೈ ಅಂತಹ ಮಹಾನಗರಿಯಲ್ಲಿ ರಸ್ತೆಯ ಬದಿಗೆ ನಿಂತು ಅವನ ಹಾಡು ಕೇಳುವಷ್ಟು ಪುರುಸೊತ್ತು ಅಂದು ಕೂಡ ಯಾರಿಗೂ ಇರಲಿಲ್ಲ. ಅಕ್ಷರಶ: ಕೂಲಿನಾಲಿ ಮಾಡಿ, ಫುಟ್ ಪಾತ್ ಮೇಲೆ ಮಲಗಿ ದಿನ ಕಳೆದಿದ್ದ. ಆ ಹಸಿವೆ, ನೀರಡಿಕೆ ಮತ್ತೆ ತನ್ನೂರಿಗೆ ಅನಿವಾರ್ಯವಾಗಿ ಹಿಂತಿರುಗುವಂತೆ ಮಾಡಿತು. ಎರಡು ದಿನಗಳ ವರೆಗೆ ಕೇವಲ ನೀರು ಮಾತ್ರ ಸೇವಿಸುತ್ತ ಬಿಜಾಪುರದ ವರೆಗೆ ಬಂದು ಇಳಿದಿದ್ದ. ಅಸಾರಮಹಲ್ ಸಮೀಪದ ಮಸೀದೆಯ ಬಳಿ ಮೂರ್ಛೆ ಬಂದು ಬಿದ್ದಿದ್ದ.

 

ಜನರ ಅಡ್ಡಾಟ, ಮಾತಿನಿಂದ ಆ ಹುಡುಗ ಕಣ್ಣು ತೆರೆದಿದ್ದ. ಬಿಜಾಪುರದ ಪ್ರತಿಷ್ಠಿತ ಜನ ಸಂಜೆಯ ವಾಯು ವಿಹಾರಕ್ಕೆ ಹೋಗುವುದು ವಾಡಿಕೆ. ಅವರೆಲ್ಲ ಹತ್ತಿರ ಬರುತ್ತಿದ್ದಂತೆ ಹುಡುಗನ ಸುಪ್ತ ಚೇತನ ಜಾಗೃತ ಗೊಂಡಿತು. ಅವನು ತನ್ಮಯನಾಗಿ ಹಾಡಲು ಅನುವಾದ. ಜನರೆಲ್ಲ ಆ ಕಂಚಿನ ಕಂಠಕ್ಕೆ ಮಾರು ಹೋಗಿ ಒಂದು ಕ್ಷಣ ಸ್ಥಂಭೀಭೂತರಾದರು. ಅವರಲ್ಲಿ ಸಂಗೀತ ರಸಿಕ, ಹಿರಿಯ ನ್ಯಾಯವಾದಿ ಅಜರೇಕರ್ ಸಹ ಇದ್ದರು. ಅವರ ಬಂಗಲೆ ಎಂದರೆ ವಿಜಾಪುರದ ಸರಸ್ವತಿ ಭಕ್ತರಿಗೆ ತವರು ಮನೆ. ಈ ಬಾಲಕನ್ನು ಮನೆಗೆ ಕರೆದೊಯ್ದರು.

 

 

ಸ್ವರಾಧಿರಾಜ್ ಪಂಡಿತ ಭೀಮಸೇನ್ ಜೋಷಿ.

 

ಇದಾದ ನಾಲ್ಕು ದಿನಗಳಲ್ಲಿ ‘ನಿಮ್ಮ ಹುಡುಗ ನಮ್ಮ ಹತ್ರ ಇದ್ದಾನ; ಬಂದು ಕರದಕೊಂಡು ಹೋಗ್ರಿ’ ಅಂತ ವಿಜಾಪುರದಿಂದ ಅಜರೇಕರ ತಾರ್ ಕಳಿಸಿದರು. ಗುರುರಾಜರು ಅತ್ಯಂತ ಆರ್ಥಿಕ ಸಂಕಷ್ಟದಲ್ಲಿದ್ರೂ, ಸಾಲ ಕೈಗಡ ತುಗೊಂಡು ಬಿಜಾಪುರಕ್ಕ ಹೋದ್ರು. ಈ ಪುಣ್ಯಾತ್ಮ ಬಹಾದ್ದೂರ್ ಗಾಡಿಯೊಳಗ ಹಾಡಗಳನ್ನ ಹಾಡಿ ರೊಕ್ಕ ಕೂಡಿಸಿಕೊಂಡು ಅಧೆಂಗೋ ಉಪವಾಸ ವನವಾಸ ಮುಂಬೈಯಿಂದ ವಿಜಾಪುರಕ್ಕ ಬಂದಿದ್ದ! ಗುರುರಾಜರ ಬಳಗ ಅಜರೇಕರ ಹುಡುಗನ್ನ ಗುರುತು ಹಿಡಿದು ತಾರು ಕಳಿಸಿದ್ರು.

 

ಎರಡನೇ ಬಾರಿ ಅಪ್ಪ ಮೈಸೂರಿಗೆ ಗಾಡಿ ಹತ್ತುತ್ತಿದ್ದಂತೆಯೇ ಈ ಬಾಲಕ ಮತ್ತೆ ಸಂಗೀತ ಕಲಿಯುವ ಹುಚ್ಚಿನಲ್ಲಿ ಗ್ವಾಲ್ಹೇರ್ ಹೋಗುವ ಸಿದ್ಧತೆ ಮಾಡಿದ. ಮತ್ತೆ ಹೇಳದೇ ಕೇಳದೇ ರೈಲು ಏರಿಯೇ ಬಿಟ್ಟ. ಗ್ವಾಲ್ಹೇರ್ ಬರುವ ವರೆಗೆ ಎಲ್ಲಿಯೂ ತಂಗುವ ಹಾಗಿಲ್ಲ. ತೀಕೀಟು ಇಲ್ಲದೇ ಪ್ರಯಾಣಿಸುವುದು ಹಾಗು ಹಾಡು ಹೇಳಿ ದುಡ್ಡು ಗಳಿಸುವುದು! ಹೀಗೆ ಮೂರು ಕಾರ್ಯಕ್ರಮ ಹಾಕಿಕೊಂಡು ಹುಡುಗ ಹೊರಟಿದ್ದ!

 

ಮೊದಲು ಪುಣೆ. ಮಾಸ್ಟ್ರರ್ ಕೃಷ್ಣರಾವ್ ಫುಲಂಬ್ರೀಕರ್ ಎನ್ನುವ ಸವ್ಯಸಾಚಿ ಗಾಯಕರ ಬಗೆಗೆ ಅವನು ಕೇಳಿದ್ದ. ಅವರ ವಿಳಾಸ ಪತ್ತೆ ಹಚ್ಚಿ, ಮನೆ ಹುಡುಕಿಕೊಂಡು ಮಾಸ್ತರ ಎದುರು ಬಂದು ನಿಂತ. ಹಾಡು ಕಲಿಸಿ ಎಂದು ದುಂಬಾಲು ಬಿದ್ದ. ಅವರು ಈ ಬಾಲಕನಿಗೆ ಹಾಡಲು ಹೇಳಿದರು. ಅವರಿಗೆ ಈ ಗಾಯಕನ ಕಂಠ ಇಷ್ಠವಾಯಿತು. ಕಲಿಸಲು ಒಪ್ಪಿದರು. ಆದರೆ ಫೀ ಒಂದು ನೂರು ರುಪಾಯಿ! ಬಾಲಕನ ತಂದೆ ಗುರುರಾಜರ ಒಂದು ತಿಂಗಳ ಒಟ್ಟು ಸಂಬಳ!!

 

ಬಾಲಕ ಎದ್ದ. ಮುಂಬೈ ಗಾಡಿ ಹಿಡಿದ. ಮೈ ಮ್ಯಾಲೆ ಒಂದು ಅಂಗಿ-ಚೆಡ್ಡಿ. ಗಾಡಿ ಗ್ವಾಲ್ಹೇರ್ ಕಡೆಗೆ ಹೊರಟಿತು. ಹುಡುಗ ಹಾಡು ಅಂತಿದ್ದ. ರೈಲು ಪ್ರಯಾಣ ಮಾಡುತ್ತಿದ್ದ ಕೆಲವರು ಊಟ ಕೊಟ್ರು. ಕೆಲವರು ಆ ಕಂಚಿನ ಕಂಠಕ್ಕೆ ಮಾರು ಹೋಗಿ ಹಣ ನೀಡಿ ಹರಸಿದರು. ತಿಕೀಟು ಇಲ್ಲದೇ ಪ್ರಯಾಣ ಮಾಡಿ ಸಾಕಷ್ಟೂ ಸರತಿ ಸೆರೆ ಸಿಕ್ಕ. ಹಾಡು ಹಾಡಿದ್ದನ್ನ ಕೇಳಿ ಆ ಟಿಕೀಟು ಕಲೆಕ್ಟರ್ ಮತ್ತ ಬಿಟ್ಟು ಬಿಡತಿದ್ರು. ಆ ಹುಡುಗನ ಮುಂದ ಸಂಗೀತ ಕಲಿಯೋ ಅಷ್ಟ ಮಹತ್ವದ ಪ್ರಶ್ನೆ ಹೊಟ್ಟಿ ಹೊರೆಯೂದು ಆಗಿತ್ತು! ಕೆಲವೊಮ್ಮೆ ಆ ತಿಕೀಟ್ ಕಲೆಕ್ಟರ್ ಹಿಡದು ಜೈಲಿಗೆ ಹಾಕಿದ್ರ ಒಂದೊತ್ತು ಊಟ ಆದ್ರು ಸಿಗತದ ಅಂತ ಸಹ ಪ್ರಯತ್ನಿಸಿ ಇವ ನಪಾಸಾಗಿದ್ದ! ಹೆಂಗೋ ಗ್ವಾಲ್ಹೇರ್ ಬಂದ ಇಳಿದ.

 

 

ಸ್ವರಾಧಿರಾಜ್ ಪಂಡಿತ ಭೀಮಸೇನ್ ಜೋಷಿ ತಾಲೀಮಿನ ತನ್ಮಯತೆ..

 

ಅಲ್ಲಿನ ಪ್ರಸಿದ್ಧ ಗಾಯಕ ಭಗತ್ ಜಿ ಮುಂದ ಹೋಗಿ ನಿಂತ. ಅವರು ‘ನಿನ್ನ ಹೆಸರೇನು?’ ಅಂದ್ರು.

‘ಭೀಮಸೇನ್ ಗುರುರಾಜ್ ಜೋಶಿ’ ಅಂದ ಹುಡುಗ.

ಹೆಸರು ಕೇಳಿದ ವ್ಯಕ್ತಿಗೆ ಆಶ್ಚರ್ಯ, ಅದ್ಭುತ ಎರಡೂ ಏಕ ಕಾಲಕ್ಕೆ ಅನುಭವಕ್ಕೆ ಬಂದವು! ಉತ್ತರಿಸಿದ ಹುಡುಗನ ಮೈ, ಮುಖದ ಮೇಲೆ ಕೈಯಾಡಿಸಿದರು. ಎಳೆಯ ಆದರೆ ಗಟ್ಟಿ ಮೈಯ ಹುಡುಗ ಅನ್ನಿಸಿತು.

‘ನಿನ್ನ ವಯಸ್ಸೆಷ್ಟು? ಹನ್ನೆರಡು.‘

‘ಎಲ್ಲಿಂದ ಬಂದಿ? ಗದುಗಿನಿಂದ’.

‘ಗದಗ? ಎಲ್ಲಿದ ಅದು?’

‘ಮುಂಬೈ ಪ್ರಾಂತದ ಕರ್ನಾಟಕದಾಗ’.

‘ಕರ್ನಾಟಕದಿಂದ ಜಲಂಧರ ತನಕ? ಇಷ್ಟು ಹಾಡಿನ ಹುಚ್ಚ ಅದ ನಿನಗ? ನಿನ್ನ ತಂದಿ ತಾಯಿ ಅಧೆಂಗ ಇಷ್ಟು ದೂರ ಕಳಿಸಿದ್ರು ನಿನಗ?’

‘ಓಡಿ ಬಂದೀನಿ!’ ಒಂದು ವಾಕ್ಯದ ಉತ್ತರ?

ಪ್ರಶ್ನೆ ಕೇಳುತ್ತಿದ್ದ ಮನುಷ್ಯ ಒಂದು ಕ್ಷಣ ಸ್ಥಬ್ಧನಾದ. ಪಂಜಾಬಿನಲ್ಲಿ ಏಕೆ ಇಷ್ಟೊಂದು ಸಂಗೀತದ ಹುಚ್ಚಿಲ್ಲ ಎಂದು, ಕೆಡುಕೆನಿಸಿರಬೇಕು! ಯಾರಿಗೆ ಗೊತ್ತು?

‘ನಿನ್ನ ಮಾತೃ ಭಾಷೆ ಯಾವುದು?’

‘ಕನ್ನಡ’.

‘ಹಿಂದಿ ಎಲ್ಲಿ ಕಲಿತಿ?’

‘ಪ್ರವಾಸದೊಳಗ’.

‘ಊರಿನೊಳಗ ಇದ್ದಾಗ ಸಾಲಿಗೆ ಹೋಗಿದ್ದಿ?’

‘ಹೂಂ! ಇಂಗ್ಲೀಷ್ ಒನ್ನೆತ್ತ’.

‘ಇಂಗ್ಲೀಷ್ ಬರ್ತದ?’

‘ಸ್ವಲ್ಪ..ಸ್ವಲ್ಪ.’

‘ಮನೆ ಯಾವಾಗ ಬಿಟ್ಟಿ?’

‘ಒಂದು ವರ್ಷ ಆಗಿರಬೇಕು!’

‘ಪ್ರವಾಸ ಹೆಂಗ ಮಾಡಿದೀ?’

‘ರೇಲ್ವೆದಿಂದ..ಫುಕ್ಕಟ’.

‘ಹುಚ್ಚಪ್ಪ..ಊಟ ತಿನಿಸು?’

‘ಊಟ..ಭಿಕ್ಷಾ ಬೇಡಿ, ಗಾಡಿಯೊಳಗ ಹಾಡು ಹಾಡ್ತಿದ್ದೆ..ಮಂದಿ ರೊಕ್ಕ ಕೊಡತಿದ್ರು!’

‘ನಮಗ ಹಾಡು ಅಂದ ತೋರಸ್ತಿ?’

 

‘ಹೂಂ..’ಅಲ್ಲಿಯ ತನಕ ನಿಂತು ಮಾತನಾಡುತ್ತಿದ್ದ ಹುಡುಗ ಕುಳಿತುಕೊಂಡು ಹಾಡಲು ತೊಡಗಿದ. ಕಾಣದ ಕೈಯೊಂದು ಅದೃಷ್ಯ ಗುಂಡಿ ಒತ್ತಿದಂತೆ ಸ್ವರದ ಯಂತ್ರ ಹಾಡಲಾರಂಭಿಸಿತು. ‘ಪಿಯಾ ಬಿನ ನಾಹಿ ಆವತ ಚೈನ್’..ಈ ಮುಖಡಾ ಕೇಳಿ ಹಾಡಲು ಕೇಳಿದ ವ್ಯಕ್ತಿಗೆ ಒಂದು ಕ್ಷಣ ರೋಮಾಂಚನ! ಉಸ್ತಾದ್ ಅಬ್ದುಲ್ ಕರೀಂ ಖಾನ್ ಅವರ ಝಿಂಝೋಟಿ ರಾಗದ ಈ ಠುಮರಿಯ ಗ್ರಾಮೋಫೊನ್ ಪ್ಲೇಟ್ ಭಾರತದ ತುಂಬೆಲ್ಲ ಪ್ರಸಿದ್ಧವಾಗಿತ್ತು.

 

‘ಬಹೂತ್ ಖೂಬ್! ಆದ್ರ..ಕಿರಾಣ ಘರಾಣಾದ ಗಾಯನ ನನ್ನದಲ್ಲ. ನಾ ಬರೆ ಧ್ರುಪದ ಹಾಡತೇನಿ’.

 

‘ನಾ ಧ್ರುಪದ ಕಲೀತೀನಿ..ಗುರೂಜಿ’..‘ಗುರೂಜಿ’ ಶಬ್ದ ಕೇಳುತ್ತಲೇ ಭಗತ್ ಜಿ ಭೀಮಸೇನ್ ನಿಗೆ ಊಟ, ಬಟ್ಟೆ, ತಂಗಲು ವ್ಯವಸ್ಥೆ ಮಾಡಿ, ಕಲಿಸಲು ಸಿದ್ಧರಾದರು. ಹೀಗೆಯೇ ಆರಂಭಗೊಂಡ ಅಸಾಧಾರಣ, ಅಸದೃಷ ಪ್ರಯಾಣವೊಂದು ಪದ್ಮ ವಿಭೂಷಣ, ಪದ್ಮಭೂಷಣ ಹಾಗು ಪದ್ಮಶ್ರೀ..ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರ..ಭಾರತ ರತ್ನದ ಗೌರವಕ್ಕೆ ಪಾತ್ರವಾಯಿತು.

 

ಸ್ವರಾಧಿರಾಜ್ ಪಂಡಿತ ಭೀಮಸೇನ್ ಜೋಷಿ ಕಾರ್ಯಕ್ರಮವೊಂದರಲ್ಲಿ.

 

ಸ್ವರಾಧಿರಾಜ್ ಪಂ.ಭೀಮಸೇನ್ ಗುರುರಾಜ್ ಜೋಶಿ..‘ಪಂಡಿತ್ ಜಿ’ ಆ ಪ್ರತಿಭೆ. ‘ಮಿಲೆ ಸುರ್ ಮೇರಾ ತುಮ್ಹಾರಾ..’, ‘ಭಾಗ್ಯದಾ ಲಕ್ಶ್ಮೀ ಬಾರಮ್ಮ’, ಪೂರ್ವಿ ಕಲ್ಯಾಣಿ ರಾಗದ ‘ನಂಬಿದೆ ನಿನ್ನ ನಾದ ದೇವತೆಯೇ..’ ಒಂದೆ ಎರಡೇ? ಭಾರತ ಮಾತೆಯ ಹೆಮ್ಮೆಯ ಪುತ್ರ..ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸುಮೇರು ಪರ್ವತಕ್ಕೆ ತಡವಾಗಿ ಸಂದ ಗೌರವ. ತನ್ಮೂಲಕ ಭಾರತ ತನ್ನ ಸಂಗೀತ ಪರಂಪರೆಯನ್ನು, ಆ ಸಾಂಸ್ಕೃತಿಕ ರಾಯಭಾರಿಯನ್ನು ಗೌರವಿಸಿಕೊಂಡಿದೆ ಎಂದರೆ ಅತಿಶಯೋಕ್ತಿ ಏನಲ್ಲ.

 

ಈ ಸುದ್ದಿ ತಿಳಿಯುತ್ತಲೇ..ಧಾರವಾಡದ ಗಾಂಧಿ ಚೌಕದ ದತ್ತಾತ್ರೇಯ ಗುಡಿಯ ಬಳಿ ಟೇಲರ್ ಅಂಗಡಿ ಇಟ್ಟಿರುವ ೭೬ ವರ್ಷದ ವಯೋವೃದ್ಧ ಲಾತೂರಕರ್ ಕಾಕಾ ನನಗೆ ದೂರವಾಣಿ ಕರೆ ಮಾಡಿದರು. ‘ಹರ್ಷ..ಪಂಡಿತ್ ಜೀ ಅವರ ಕುರ್ತಾ..ಪೈಜಾಮಾ ಹೊಲಿದವ ನಾನು..ನನ್ನ ಜೀವನ ಇವತ್ತ ಸಾರ್ಥಕ ಆತೋ..’ ಅಷ್ಟರಲ್ಲಿಯೇ ಅವರ ಗಂಟಲು ಉಬ್ಬಿ ಬಂತು. ಮೌನವೇ ಭಾಷೆಯಾಯಿತು. ಧಾರವಾಡ ಸಿಟಿ ಕೇಬಲ್ ಸುದ್ದಿ ವಿಭಾಗಕ್ಕೆ ಸುದ್ದಿ ಸಂಪಾದಕನಾಗಿದ್ದ ಎರಡು ಬಾರಿ ಪಂಡಿತಜೀ ಅವರ ಸಂದರ್ಶನ ಮಾಡಿದ್ದೆ. ಆ ಕಂತುಗಳಲ್ಲಿ ಲಾತೂರಕರ್ ಕಾಕಾ ತಮ್ಮ ಅನುಭವ ಹಂಚಿಕೊಂಡಿದ್ದರು. ಎಲ್ಲ ಒಂದು ಕ್ಷಣ ನೆನಪಾಗಿ ಧನ್ಯತೆಯ ಭಾವ ಸೃಷ್ಠಿಯಾಗಿತ್ತು!

 

 

ಸ್ವರಾಧಿರಾಜ್ ಪಂಡಿತ ಭೀಮಸೇನ್ ಜೋಷಿ ತಾಲೀಮಿನ ತನ್ಮಯತೆ..

 

ಪಂಡಿತ್ ಜೀ ಅವರಿಗೆ ಈಗ ೮೮ ವರ್ಷ. ಕಳೆದ ನಾಲ್ಕು ವರ್ಷಗಳಿಂದ ಡಯಾಬಿಟಿಸ್ ಸ್ವರ ಸಾಮ್ರಾಟ್ ನನ್ನು ಹಿಂಡಿ ಹಿಪ್ಪೆ ಮಾಡಿದೆ.  ಸದ್ಯ ಉಸಿರಾಟದ ತೊಂದರೆ ಹಾಗೂ ಡಯಾಲಿಸಿಸ್ ಚಿಕಿತ್ಸೆಗಾಗಿ ಪುಣೆಯ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ದಶಕಗಳಿಂದ ಅವರನ್ನು ನೋಡಿಕೊಳ್ಳುತ್ತಿರುವ ಡಾ. ಅತುಲ್ ಜೋಷಿ ಅವರ ಪ್ರಕಾರ "ಪಂಡಿತ್ ಜೀ ಕೃತಕ ಉಸಿರಾಟದ ಮೇಲಿದ್ದಾರೆ. ಅವರಿಗೆ ಸಮಯಕ್ಕೆ ಸರಿಯಾಗಿ ಡಯಾಲಿಸಿಸ್ ಮಾಡುವ ಅಗತ್ಯವಿದೆ. ಅವರ ದೇಹಸ್ಥಿತಿ ಗಂಭೀರವಾಗಿದೆ. ಕಳೆದ ೧೨ ಗಂಟೆಗಳಿಂದ ಹದಗೆಟ್ಟಿರುವ ಅವರ ಆರೋಗ್ಯದ ಯಥಾ ಸ್ಥಿತಿ ಮುಂದುವರೆದಿದೆ. ಕಳೆದ ಡಿಸೆಂಬರ್ ೩೧, ೨೦೧೦ ರಿಂದ ಅವರು ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತ ಬಂದಿದ್ದಾರೆ" ಎಂದಿದ್ದಾರೆ.

ನಾಡಿನಾದ್ಯಂತ ಇರುವ ಪಂಡಿತ್ ಜೀ ಶಿಷ್ಯರು, ಅಭಿಮಾನಿಗಳು ಅವರ ಆರೋಗ್ಯದ ಸ್ಥಿತಿ ಬಗ್ಗೆ ತೀವ್ರ ಕಳವಳಗೊಂಡಿದ್ದಾರೆ. ಧಾರವಾಡ- ಕುಂದಗೋಳ, ಗದಗ-ಹೊಂಬಳದ ಜನತೆ ಇನ್ನಿಲ್ಲದ ದುಗುಡದಲ್ಲಿದ್ದಾರೆ. ದೇವರು ಅವರನ್ನು ನೂರ್ಕಾಲ ಬಾಳುವಂತೆ ಹರಸುವನೇ? ವಿಧಿ ಉತ್ತರಿಸಲಿದೆ. ನಾಡಿನ ಸಾಂಸ್ಕೃತಿಕ ರಾಯಭಾರಿ, ಭಾರತ ರತ್ನ ನೂರ್ಕಾಲ ಬಾಳಲಿ ಎಂಬ ಹಾರೈಕೆ, ಪಂಡಿತ್ ಜೀ ಆತ್ಮಬಲ ಸಾಥ್ ನೀಡಲಿ ಎಂಬ ಪ್ರಾರ್ಥನೆ ಆ ಈಶ್ವರನಲ್ಲಿ..

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಭೀಮಸೇನ ಜೋಶಿ ಅವರ ಬಗೆಗಿನ ಈ ಮಾಹಿತಿಗೆ ತುಂಬಾ ಧನ್ಯವಾದಗಳು, ನಮ್ಮಜ್ಜಿ ಹೆಳ್ತಾ ಇರ್ತಾರೆ... ಭೀಮಸೇನ ಜೋಶಿಯವರು ನಮ್ಮ ತಾತನವರ ಅತ್ಯಂತ ಆಪ್ತ ಮಿತ್ರರು ಅಂತ.... ನಮ್ಮ ತಾತ ಈವಾಗ ಇದ್ದಿದ್ರೆ ನಾವೂ ಕೂಡ ಭೀಮಸೇನ ಜೋಶಿ ಅವರನ್ನ ಕಾಣಬಹುದಿತ್ತೇನೋ... ಹಿಂದೆ ಅವರು ನಮ್ಮ ಮನೆಯಲ್ಲಿಯೇ ಮೂರು ತಿಂಗಳುಗಳ ಕಾಲ ಇದ್ರು ಅಂತ ಅಜ್ಜಿ ಹೆಳ್ತಾರೆ...ನಮ್ಮ ಅಪ್ಪ ಆಗ ಚಿಕ್ಕವರು.... ಜೋಶಿ ಅವರೊಂದಿಗೆ ಕುಳಿತು ಗಾಯನಾ ಮಾಡ್ತಿದ್ರಂತೆ...ಅವರ ಕೈಲಾಸ ವಾಸ ಗೌರೀಶ ಈಶ... ಅಂತೂ ನನಗೆ ತುಂಬಾ ತುಂಬಾ ಇಷ್ಟ...ಅದ್ಭುತ ಕಂಠಸಿರಿ... ಇನ್ನೂ ತುಂಬಾ ಚೆನ್ನಾಗಿ ಆಗಿನ ದಿನಗಳನ್ನೆಲ್ಲ ಅಜ್ಜಿ ಅವಾಗಾವಾಗ ಮೆಲಕು ಹಾಕ್ತಾ ಇರ್ತಾರೆ....ಅಂಥಾ ಶ್ರೇಷ್ಟ ಗಾಯಕರು ನಮ್ಮನೇಲಿದ್ರು ಅಂತ ಹೇಳ್ಕೊಳೋಕೆ ನನಗೆ ತುಂಬಾ ಹೆಮ್ಮೆ ಅನ್ನಿಸುತ್ತೆ.... ದೇವರು ಅವರನ್ನು ಚಿರಾಯುವಾಗಿಸಲಿ.... ಪ್ರತಿ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅವರು ಸಂಗೀತ ಕಲಿಯಲು ತುಂಬಾ ಪ್ರಯಾಸಪಟ್ಟಿದ್ದನ್ನ ಕೇಳಿದ್ದೆ. ಆದರೆ ಇಷ್ಟು ವಿವರವಾಗಿ ಗೊತ್ತಿರಲಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಸಂತೋಷ, ಅವರು ಬದುಕಿದ ರೀತಿ ನಿಜಕ್ಕೂ ಅಭಿಮಾನ ಪಡುವಂಥದ್ದು. ಸಾಧ್ಯವಾದರೆ ಧಾರವಾಡದ ಮನೋಹರ ಗ್ರಂಥ ಮಾಲೆ ಪ್ರಕಟಿಸಿದ, ಶ್ರೀಮತಿ ಶುಭದಾ ಅಮ್ಮಿನಭಾವಿ ಅವರು ಮರಾಠಿಯಿಂದ ಕನ್ನಡಕ್ಕೆ ಭಾಷಾಂತರಿಸಿದ ‘ಸ್ವರಾಧಿರಾಜ ಭೀಮಸೇನ’ ಕೃತಿ ಓದಿ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಹಾರೈಕೆ, ಹರಕೆಯಂತೆಯೇ ಆಗಲಿ. ಸ್ವರಗಳೇ ಈಶ್ವರ ಎಂದು ಶೃದ್ಧೆಯ ಸಂಗೀತ ಸೇವೆ ಮಾಡಿದ ಪಂಡಿತ್ ಜೀ ಅವರನ್ನು ಆತನೇ ಕಾಯುತ್ತಾನೆ ಎಂಬ ನಂಬಿಕೆ ನನ್ನದು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮ್ಮ ನೆಚ್ಚಿನ ಗಾಯಕ ಭೀಮಸೇನ್ ಜೋಷಿಯವರ ಬಗ್ಗೆ ಉತ್ತಮ ಮಾಹಿತಿ ಒದಗಿಸಿ ಕೊಟ್ಟಿದ್ದಕ್ಕೆ ಅನಂತ ಧನ್ಯವಾದಗಳು ಗಾಯಕರ ಆರೋಗ್ಯ ಸುಧಾರಿಸಿಲಿ ಎಂದು ಪ್ರಾರ್ಥಿಸೋಣ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅದ್ಭುತ ಸ್ವರಸಿರಿಯ ಒಡೆಯನ ಬಗ್ಗೆ ಉತ್ತಮ ಮಾಹಿತಿ,ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರೀತಿಯ ರಘು, ಪ್ರತಿಕ್ರಿಯೆಗೆ ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಉತ್ತಮವಾದ ಪರಿಚಯ ಲೇಖನ. ನಮಗೆ ಗೊತ್ತಿಲ್ಲದ ಹತ್ತು ಹಲವು ವಿಚಾರಗಳು ತಿಳಿದವು. ಆದರೆ ಅವರೀಗ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಅನ್ನುವ ಸುದ್ದಿಯೂ ಇದೆ. ದೇವರಿಗೆ ಮೊರೆಹೋಗುವುದೊಂದೇ ನನ್ನಿಂದಾಗಬಹುದಾದ ಕಾರ್ಯ. -ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಅಸು ಹೆಗ್ಡೆ ಸರ್, ಹೌದು, ಡಯಾಬಿಟಿಸ್ ನಿಂದ ತೀವ್ರವಾಗಿ ನಿತ್ರಾಣಗೊಂಡಿರುವ ದೇಹ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಜೀವ ರಕ್ಷಕ ಸಾಧನಗಳ ಮೇಲೆ ಪಂಡಿತ್ ಜೀ ಭೌತಿಕ ಶರೀರವಿದೆ. ಸ್ವರಾಧೀಶ ಈಶ್ವರ ನಮ್ಮ ಕೋರಿಕೆ ಆಲಿಸಬೇಕಷ್ಟೇ. ತಾವು ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಉತ್ತಮ ಮಾಹಿತಿಗೆ ಧನ್ಯವಾದಗಳು ,ಬೇಗನೆ ಆರೋಗ್ಯ ಸುಧಾರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಗೋಪಾಲ್, ತಮ್ಮ ಪ್ರಾರ್ಥನೆ ಫಲಿಸಲಿ ಎಂದು ನಾನು ಹಾರೈಸುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಡಿನ ಹೆಮ್ಮೆಯಾದ "ಪ೦ಡಿತ್ ಜಿ"ಯವರ ಆರೋಗ್ಯ ಸುಧಾರಿಸಲಿ, ಅವರು ಇನ್ನಷ್ಟು ಕಾಲ ಬಾಳಲಿ, ಅವರ ಸ೦ಗೀತ ಸೇವೆ ಮು೦ದುವರೆಯಲಿ ಎ೦ದು ಮನಃಪೂರ್ವಕ ಹಾರೈಸುತ್ತೇನೆ. ಉತ್ತಮ ಮಾಹಿತಿಪೂರ್ಣ ಲೇಖನ ನೀಡಿದ್ದಕ್ಕಾಗಿ ಅಭಿನ೦ದನೆಗಳು ಹರ್ಷವರ್ಧನರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಮಂಜು ಸರ್, ತಮ್ಮ ಮನದಿಚ್ಛೆಯೇ ನಮ್ಮದು. ಸ್ವರಾಧೀಶ ಈಶ್ವರ ನಮ್ಮ ಕೋರಿಕೆ ಮನ್ನಿಸಲಿ ಎಂಬ ಪ್ರಾರ್ಥನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯರೆ, ತಮ್ಮ ಪ್ರೀತಿಯ ಹಾರೈಕೆ ಕೈಗೂಡಲಿ. ಪ್ರತಿಕ್ರಿಯೆಗೆ ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.